ಅಥವಾ

ಒಟ್ಟು 66 ಕಡೆಗಳಲ್ಲಿ , 25 ವಚನಕಾರರು , 62 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುವೆಂಬ ಸೂತಕ, ಅರಿವಿನಿಂದ ಹರಿಯಬೇಕು. ಲಿಂಗವೆಂಬ ಸೂತಕ, ಅರಿವಿನಿಂದ ಹರಿಯಬೇಕು. ಅರಿವೆಂಬ ಸೂತಕಕ್ಕೆ ಮುಂದೆ ಒಂದ ಕಂಡೆಹೆನೆಂಬ ಒಡಲಸೂತಕ ಹರಿಯಬೇಕು. ಸೂತಕ ನಿಹಿತವಾದಲ್ಲಿ, ಕಾಮಧೂಮ ಧೂಳೇಶ್ವರ ಎಂದೂ ಏನೂ ಎನಲಿಲ್ಲ.
--------------
ಮಾದಾರ ಧೂಳಯ್ಯ
ಕಾಯಲಿಂಗಾರ್ಪಿತವಾಯಿತ್ತಾಗಿ ಕರ್ಮ ನಿರ್ಮೂಲ್ಯವಾಗಿ ನಿರ್ಮಲಾಂಗಿಯಾದೆನು ನೋಡಾ. ಜೀವ ಲಿಂಗಾರ್ಪಿತವಾಯಿತ್ತಾಗಿ ಜೀವ ಪರಮರೆಂಬ ಉಭಯವಳಿದು ಚಿತ್ಪರಮಲಿಂಗವಾದೆನು ನೋಡಾ. ಪ್ರಾಣಲಿಂಗಾರ್ಪಿತವಾಯಿತ್ತಾಗಿ ಇಹಪರವನರಿಯೆನು ನೋಡಾ. ಪರಿಣಾಮ ಲಿಂಗಾರ್ಪಿತವಾಯಿತ್ತಾಗಿ ಶರಣ ಲಿಂಗವೆಂಬ ಕುರುಹಿಲ್ಲ ನೋಡಾ. ನಾನೆಂಬುದು ಲಿಂಗಾರ್ಪಿತವಾಯಿತ್ತಾಗಿ ನಾನು ಇಲ್ಲ, ನೀನು ಇಲ್ಲ ಏನು ಏನೂ ಇಲ್ಲದ ಅಪ್ರತಿಮ ಪ್ರಸಾದಿಯಾದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ತನುವೆಂಬ ದೇವಸ್ಥಾನದೊಳಗೆ ಮಸ್ತಕಾಗ್ರವೆಂಬ ಸೆಜ್ಜಾಗೃಹದಲ್ಲಿ ಪ್ರಾಣಲಿಂಗಸ್ವಯಂಬ ಪ್ರತಿಷ್ಠೆಯಾಗಿರಲು, ಗುರುವೆಂಬ ಆರ್ಚಕನು ಮಂತ್ರವೆಂಬ ಆಗಮಿಕನು ಸಹ ಲಿಂಗವೆಂಬ ಉಚ್ಚಾಯ ವಿಗ್ರಹವನು ಕರಸ್ಥಲವೆಂಬ ರಥದಲ್ಲಿ ಮೂರ್ತಿಗೊಳಿಸಿ_ ಆ ಕರಸ್ಥಲವೆಂಬ ರಥಕ್ಕೆ ಜ್ಞಾನಕ್ರಿಯೆ ಎರಡು ಪಾದದ್ವಯ ಎರಡು ಕೂಡಿ ನಾಲ್ಕು ಗಾಲಿಗಳಂ ಹೂಡಿ, ಪಂಚೇಂದ್ರಿಯಗಳೆಂಬ ಪತಾಕೆಗಳಂ ಧರಿಸಿ ಏಕೋಭಾವವೆಂಬ ಕಳಸವನಿಟ್ಟು, ದಶವಾಯುಗಳೆಂಬ ಪಾಶವಂ ಬಂಧಿಸಿ ಷಡಂಗಗಳೆಂಬ ಮೊಳೆಗಳಂ ಬಲಿದು, ಸಪ್ತಧಾತುವೆಂಬ ಝಲ್ಲಿ ಪಟ್ಟೆಯನಲಂಕರಿಸಿ ಅಷ್ಟಮದ ಸಪ್ತವ್ಯಸನಂಗಳೆಂಬ ಆನೆ ಕುದುರೆಗಳು ಸಹ ಮಹಾನಾದವೆಂಬ ಭೇರಿ ವಾದ್ಯಂಗಳಿಂ ಷೋಡಶವಿಕಾರಂಗಳೆಂಬ ನರ್ತಕೀಮೇಳದಾರತಿಯಿಂ ಅಂತಃಕರಣ ಚತುಷ್ಟಯಗಳೆಂಬ ಚಾಮರಧಾರಕರಿಂ ಮನವೆಂಬ ಹೊರಜೆಯಿಂ ಕರಣಂಗಳೆಂಬ ಕಾಲಾಳ್ಗಳಿಂ_ಪಿಡಿಸಿ,_ ಸುಬುದ್ಧಿಯೆಂಬ ಭೂಮಿಯಲ್ಲಿ ಆನಂದವೆಂಬರಸು ರಥಮಂ ನಡೆಸಿ ನೆನಹು ನಿಷ್ಪತ್ತಿಯೆಂಬ ಸ್ಥಾನದಲ್ಲಿ ನಿಲಿಸಿ_ ಇಷ್ಟಲಿಂಗವೆಂಬ ಉಚ್ಚಾಯ ವಿಗ್ರಹವನ್ನು ಹೃದಯಕಮಲವೆಂಬ ಅಂತರಾಳದಲ್ಲಿ ಮೂರ್ತಿಗೊಳಿಸಿ ಆನಂದವೆಂಬ ಅರಸು ನಿರಾಳವೆಂಬ ಅಪರಿಮಿತ ಪಟ್ಟಣವ ಪ್ರವೇಶವಾದನು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಚಿತ್ತುವೆಂಬ ಬಿತ್ತು ಬಲಿದು ಎರಡಾದಲ್ಲಿ, ಲಿಂಗವೆಂಬ ಕಳೆ ಅಂಕುರಿಸಿ ಮೂರ್ತಿಯಾಯಿತ್ತು. ಆ ಮೂರ್ತಿಯ ಘನತೆಯ ಏನೆಂದೂ ಉಪಮಿಸಬಾರದು ! ನೋಡಿದಡೆ ಮೂರ್ತಿ ಹಿಡಿದಡೆ ಬಯಲು ! ಆ ಮೂರ್ತಿಯೊಳಗದೆ ಈರೇಳು ಲೋಕದ ಪ್ರಾಣಕಳೆ. ಆ ಕಳೆಯ ಬೆಳಗು ತಾನೆ ನಮ್ಮ ಗುಹೇಶ್ವರಲಿಂಗದಲ್ಲಿ ಲೀಲಾಮೂಲದ ಪ್ರಥಮ ಭಿತ್ತಿ.
--------------
ಅಲ್ಲಮಪ್ರಭುದೇವರು
ಲಿಂಗವೆಂಬ ಭಾವವಂಗದಲ್ಲರತು, ಅಂಗವೆಂಬ ಭಾವ ಲಿಂಗದಲ್ಲರತು, ಲಿಂಗ ಅಂಗವೆಂಬ ಭಾವ ನಿಜದಲ್ಲರತು, ನಿರ್ವಾಣಪದದಲ್ಲಿ ನಿವಾಸವಾದ ನಿರ್ಭೇದ್ಯಂಗೆ, ನಡೆದುದೇ ಸತ್ಕ್ರಿಯೆ, ನುಡಿದುದೇ ಶಿವಾನುಭಾವ, ಹಿಡಿದುದೇ ಮಹಾಜ್ಞಾನ. ಗುರುನಿರಂಜನ ಚನ್ನಬಸವಲಿಂಗಾ, ನಿಮ್ಮ ಶರಣ ಅಪೂರ್ವಚರಿತನು.
--------------
ದೇಶಿಕೇಂದ್ರ ಸಂಗನಬಸವಯ್ಯ
ಶುದ್ಧ ನಿರ್ಮಾಯ ನಿರ್ಮಲವೆಂಬ ಅಂಗತ್ರಯದಲ್ಲಿ ಸದ್ಗತಿ ಸತ್ಕ್ರಿಯೆ ಸದ್ಧರ್ಮವೆಂಬ ಪೀಠತ್ರಯದ ಮೇಲೆ ವಿಚಾರಗುರು ವಿನಯಗುರು ಕೃಪಾಗುರುವೆಂಬ ಗುರುತ್ರಯವ ಧರಿಸಿ ಘನಭಕ್ತಿಯ ಕುರುಹಬಲ್ಲರೆ ಆತ ಸತ್ಯಭಕ್ತನೆಂಬೆ. ಸುಬುದ್ಧಿ ನಿಃಕಾಮ ಅನುಕೂಲೆಯೆಂಬ ಮನತ್ರಯದ ವಿಶೇಷಗತಿ ಸುಜ್ಞಾನ ವಿಮಲಜ್ಞಾನವೆಂಬ ಪೀಠತ್ರಯದಮೇಲೆ ಸಗುಣಲಿಂಗ ನಿರ್ಗುಣಲಿಂಗ ನಿರ್ಭೇದ ಲಿಂಗವೆಂಬ ಲಿಂಗತ್ರಯವ ಧರಿಸಿ, ಚಿನ್ಮಯಭಕ್ತಿಯ ಕುರುಹ ಬಲ್ಲರೆ ಆತ ನಿತ್ಯಭಕ್ತನೆಂಬೆ. ಸಂವಿತ್‍ಕಳಾ ಸಂಧಾನಕಳಾ ಸಮರಸಕಳಾಯೆಂಬ ಭಾವತ್ರಯದಲ್ಲಿ, ಮತಿಗಮನ, ರತಿಗಮನ, ಮಹಾರತಿಗಮನವೆಂಬ ಭಾವತ್ರಯದ ಸತ್ಪ್ರೇಮ ಸುಖಮಯ ಆನಂದವೆಂಬ ಪೀಠತ್ರಯದ ಮೇಲೆ ಜ್ಞಾನಜಂಗಮ, ಮಹಾಜ್ಞಾನಜಂಗಮ, ಪರಮಜ್ಞಾನಜಂಗಮವೆಂಬ ಜಂಗಮತ್ರಯವ ಧರಿಸಿ, ಪರಿಪೂರ್ಣಭಕ್ತಿಯ ಕುರುಹ ಬಲ್ಲರೆ ಆತ ನಿಜಭಕ್ತನೆಂಬೆ. ಈ ಭೇದವನರಿಯದೆ ಬರಿಯ ಕಾಯ ಮನ ಭಾವದಲ್ಲಿ ಹುಸಿನೆರವಿಯ ತುಂಬಿ ಹುಸಿಯ ಡಂಬ್ಥಿನ ಭಕ್ತಿಯ ಕಿಸುಕುಳತ್ವಕ್ಕೆ ಬಿಸಿಯನಿಟ್ಟು, ತಪ್ಪಿಸಿ ತೋರುತಿರ್ದನು ಗಂಬ್ಥೀರ ಭಕ್ತಿಯ ನೆರೆದು ಚೆಲುವಂಗ ಪ್ರಾಣಾತ್ಮಪ್ರಿಯ ಸಿದ್ಧಲಿಂಗನು.
--------------
ದೇಶಿಕೇಂದ್ರ ಸಂಗನಬಸವಯ್ಯ
ಓದನಾದರಿಸಿ, ಗಿಳಿಯ ತಂದು ಸಲಹಿ ಓದಿಸಿದಳಯ್ಯಾ; ಆಲದ ಮರದ ಗಿಳಿ ಓಜೆಗೊಂಡಿತ್ತಯ್ಯಾ ! ಗಿಳಿ ಓದಿತ್ತು, ತನ್ನ ಪರಬ್ರಹ್ಮವ ಬೇಡಿತ್ತು; ತನ್ನ ಪೂರ್ವಾಶ್ರಯದ ಕೊರೆಯ ಕೂಳನುಂಡ ಗಿಳಿ, ಮರೆಯಿತ್ತು ತನ್ನ ತಾನು ! ಅರಿವೆಂಬ ಜ್ಞಾನ ಹುಟ್ಟಿತ್ತಯ್ಯಾ ; ಅರಿವೆಂಬ ಜ್ಞಾನ ಹುಟ್ಟಲಿಕೆ ಜಂಪಿನ ಕಡ್ಡಿಯ ಮೇಲೆ ಕುಳಿತಿರ್ದಿತ್ತಯ್ಯಾ ! ಜಂಪಿನ ಕಡ್ಡಿಯ ಮೇಲೆ ಕುಳಿತ ಗಿಳಿ, ಜಂಪಳಿಸುತ್ತಿರ್ದಿತ್ತು ತನ್ನ ತಾನು. `ಅಕ್ಕಟಾ ಅಕ್ಕಟಾ' ಎಂದು, ತನ್ನ ಪೂರ್ವಾಶ್ರಯದ ಅಕ್ಕನೆಂಬಾ ಅಕ್ಕನ ಕರೆಯಿತ್ತು. ಚಕ್ಕನೆ ಲಿಂಗವೆಂಬ ಗೊಂಚಲ ಹಿಡಿಯಲು ಮಿಕ್ಕು ಪಲ್ಲವಿಸಿತ್ತು, ಕೂಡಲಚೆನ್ನಸಂಗಯ್ಯನಲ್ಲಿ ಪ್ರಭುವೆಂಬ ಲಿಂಗವು.
--------------
ಚನ್ನಬಸವಣ್ಣ
ಗುರುವೆಂಬ ತಂದೆಗೆ ಶಿಷ್ಯನೆಂಬ ಮಗಳು ಹುಟ್ಟಿ, ಲಿಂಗವೆಂಬ ಗಂಡನ ತಂದು, ಮದುವೆಯ ಮಾಡಿದ ಬಳಿಕ ಇನ್ನಾರೊಡನೆ ಸರಸವನಾಡಲೇಕಯ್ಯಾ ನಾಚಬೇಕು ಲಿಂಗದೆಡೆಯಲ್ಲಿ ನಾಚಬೇಕು ಜಂಗಮದೆಡೆಯಲ್ಲಿ, ನಾಚಬೇಕು ಪ್ರಸಾದದೆಡೆಯಲ್ಲಿ, ನಾಚಿದಡೆ ಭಕ್ತನೆಂಬೆನು, ಯುಕ್ತನೆಂಬೆನು, ಶರಣನೆಂಬೆನು, ನಾಚದಿದ್ದರೆ ಮಿಟ್ಟೆಯ ಭಂಡರೆಂಬೆನು ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಗುರುವೆಂಬ ಗೂಳಿ ಮುಟ್ಟಲು, ಶಿಷ್ಯನೆಂಬ ಮಣಿಕ ತೆನೆಯಾಯಿತ್ತು. ಲಿಂಗವೆಂಬ ಕಿಳುಗರು, ತನುವೆ ಕೆಚ್ಚಲು, ಮನವೆ ಮೊಲೆವಾಲು. ಅರಿದಲ್ಲಿ ಐಕ್ಯ, ಮರೆದಲ್ಲಿ ಸಾಹಿತ್ಯ. ಇದು ಕಾರಣ ಕೂಡಲಚೆನ್ನಸಂಗಯ್ಯನಲ್ಲಿ ಅನಾಚಾರಿಗಲ್ಲದೆ ಪ್ರಸಾದವಿಲ
--------------
ಚನ್ನಬಸವಣ್ಣ
ಮಹಾಶ್ರೀಗುರುವೆ ತಂದೆ, ಮಹಾಜಂಗಮವೆ ತಾಯಿ. ಇವರಿಬ್ಬರ ಸಂಗಸಂಯೋಗದಿಂದ ನಾನು ಹುಟ್ಟಿದೆ ನೋಡಿರಯ್ಯಾ. ಸರ್ವಾಂಗಸಾಹಿತ್ಯ ನಾನು ಹುಟ್ಟಿದ ಬಳಿಕ. ತಂದೆ ತಾಯಿಗಳಿಬ್ಬರು ಲಿಂಗವೆಂಬ ಹೆಣ್ಣ ತಂದು, ಎನ್ನ ಕೊರಳಲ್ಲಿ ಕಟ್ಟಿ ಮದುವೆಯ ಮಾಡಿದರಯ್ಯಾ. ಆ ಹೆಣ್ಣಿನ ಕೈಹಿಡಿದು ನಾನು ಬದುಕಿದೆನು. ಆ ಹೆಣ್ಣಿನ ಸಂಯೋಗದಿಂದ ಮಗನೆಂಬ ಮಹಾಲಿಂಗ ಹುಟ್ಟಿದನಯ್ಯಾ. ಆ ಮಗ ಹುಟ್ಟಿದ ಮುನ್ನವೆ ಎನಗೆ ಮರಣವಾಯಿತ್ತು. ಲಿಂಗವೆಂಬ ಹೆಂಡತಿ ಮುಂಡೆಯಾದಳು. ತಂದೆ ತಾಯಿಗಳಿವರಿಬ್ಬರೂ ನನ್ನ ಒಂದಾಗಿ ಅಡಗಿ ಹೋದರು. ಇನ್ನು ಮುನ್ನಿನ ಪರಿ ಎಂತುಟಲ್ಲವಾಗಿ ನಾನು ಬದುಕಿದೆ ಕಾಣಾ, ಶುದ್ಭ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚನ್ನ ಮಲ್ಲಿಕಾರ್ಜುನದೇವಯ್ಯಾ. ನಿಮ್ಮ ಶರಣರ ಕರುಣದಿಂದ ಎನ್ನ ಕರ್ಮ ನಿರ್ಮಳವಾಯಿತ್ತಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಮರುಳಶಂಕರದೇವ
ರುಚಿಯಲ್ಲಿ ಸಂಹಾರ, ಸ್ಪರುಶನದಲ್ಲಿ ಸೃಷ್ಟಿ, ರೂಪಿನಲ್ಲಿ ಸ್ಥಿತಿ, ಇಂತು ಸಂಹಾರಕ್ಕೆ ನಾದವೇ ಮೂಲವು, ಸೃಷ್ಟಿಗೆ ಬಿಂದುವೇ ಮೂಲವು, ಸ್ಥಿತಿಗೆ ಕಳೆಯೇ ಮೂಲವು. ಸೃಷ್ಟಿಗೆ ಪೃಥ್ವಿಯೇ ಆಧಾರಮಾಯಿತ್ತು ; ಸ್ಥಿತಿಗೆ ಆತ್ಮನೇ ಆಧಾರಮಾಯಿತ್ತು. ಸೃಷ್ಟಿಮೂಲಮಪ್ಪ ಸ್ಪರುಶನದಲ್ಲಿ ಆನಂದವೂ ಸಂಹಾರಮೂಲಮಪ್ಪ ರುಚಿಯಲ್ಲಿ ಜ್ಞಾನವೂ ಸ್ಥಿತಿಮೂಲಮಪ್ಪ ರೂಪಿನಲ್ಲಿ ನಿಜವೂ ನೆಲೆಗೊಂಡು, ಸೃಷ್ಟಿಯೆ ಸ್ಥಿತಿಹೇತುವಾಗಿ, ಸ್ಥಿತಿಯೇ ಸಂಹಾರಹೇತುವಾಗಿ, ಸಂಹಾರವೇ ಸೃಷ್ಟಿಹೇತುವಾಗಿ, ರುಚಿಗೆ ಅಗ್ನಿಯೂ, ಸ್ಪರುಶನಕ್ಕೆ ಜಲವೂ, ರೂಪಿಗೆ ಪೃಥ್ವಿಯೂ ಕಾರಣಮಾಗಿ, ಇಂತು ಅವಸ್ತ್ರಮಾಗಿ ತಿರುಗುತ್ತಿರ್ಪ ಪರಶಿವನಾಜ್ಞಾಚಕ್ರವನ್ನು ಗುರುಮುಖದಿಂದ ವಿಚಾರಿಸಿ ತಿಳಿದ ಮಹಾಪುರುಷನು ಈ ಚಕ್ರಕ್ಕೆ ತಗಲಿರ್ಪ ಮನವೆಂಬ ಕೀಲನ್ನು ಗುರುವಿತ್ತ ಲಿಂಗವೆಂಬ ಪರಶುವಿನಿಂ ಭಾವವೆಂಬ ಹಸ್ತದಲ್ಲಿ ಪಿಡಿದು ಖಂಡಿಸಲು, ಆ ಚಕ್ರದ ಚಲನೆ ನಿಂದಿತ್ತು. ಸ್ಪರ್ಶನದಲ್ಲಿರ್ಪ ಆನಂದರಸಮಂಗದಲ್ಲಿ ಕೂಡಿ, ಸಂಹಾರಾಗ್ನಿಯಂ ನಂದಿಸಿತ್ತು. ಆ ಸಂಹಾರದೊಳಗಿರ್ಪ ಜ್ಞಾನಾಗ್ನಿಯು ಲಿಂಗದೊಳಗೆ ಬೆರದು, ಸೃಷ್ಟಿಸ್ಥಿತಿರೂಪಮಾದ ಪೃಥ್ವಿ ಅಪ್ಪುಗಳಂ ಸಂಹರಿಸಿತ್ತು. ಸ್ಥಿತಿಯಲ್ಲಿರ್ಪ ನಿಜಲಿಂಗದಲ್ಲಿ ನಿಜಮಾಯಿತ್ತು. ಇಂತು ಆ ಚಕ್ರವಳಿಯೆ, ಆತ್ಮಭ್ರಮೆಯಳಿದು, ಆತ್ಮವೇ ಲಿಂಗಮಾಗಿ, ಆಕಾಶವೇ ಅಂಗವಾಗಿ, ವಾಯುವೇ ಆ ಎರಡರ ಸಂಗದಲ್ಲಿ ಬೆರದು ಭೇದದೋರದಿರ್ಪುದೆ ಲಿಂಗೈಕ್ಯ ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಜ್ಯೋತಿ ಇದ್ದ ಗೃಹಕ್ಕೆ ತಮವುಂಟೇನಯ್ಯಾ ? ಪರಂಜ್ಯೋತಿಲಿಂಗದ ಸಂಗದ ಬೆಳಗಲಿಹ ಮಹಾತ್ಮನಿಗೆ ಮಾಯಾತಮಂಧದ ಭೀತಿಯುಂಟೇನಯ್ಯಾ ? ಕಂಠೀರWವಘೆನಿಹ ವನದೊಳು ಕರಿವುಂಟೇನಯ್ಯಾ ? ಲಿಂಗವೆಂಬ ಸಿಂಹದ ಮರೆಯಬಿದ್ದಾತಂಗೆ ಅಷ್ಟಮದವೆಂಬ ಕರಿಯ ಭಯವುಂಟೇನಯ್ಯಾ ? ಗರುಡನಿದ್ದ ಸ್ಥಾನದಲ್ಲಿಗೆ ಉರಗನ ಭಯವುಂಟೇನಯ್ಯಾ ? ಪರಮಾತ್ಮನೊಳುಬೆರೆದ ನಿಬ್ಬೆರಗಿ ಶರಣಂಗೆ ಕುಂಡಲಿಸರ್ಪನ ಭಯವುಂಟೇನಯ್ಯಾ ? ಆನೆಯ ಮೇಲೆ ಹೋಗುವ ಮಾನವನಿಗೆ ಶ್ವಾನನ ಭಯವುಂಟೇನಯ್ಯಾ ? ಲಿಂಗಾಂಗಸಮರಸವೆಂಬ ಮದ ತಲೆಗೇರಿ ಹೋಗುವ ಶಿವಶರಣಂಗೆ ಪಂಚೇಂದ್ರಿಯವೆಂಬ ಶ್ವಾನನ ಭಯವುಂಟೇನಯ್ಯಾ ? ಉರಿವುತಿಹ ಅಗ್ನಿಗೆ ಸೀತದ ಭಯವುಂಟೇನಯ್ಯಾ ? ಗುರುಕರುಣಾಗ್ನಿಯಲ್ಲಿ ಭವದಗ್ಧನಾದ ಶರಣಂಗೆ ಅನ್ಯಭಯಭೀತಿಯ ಚಳಿ ಉಂಟೇನಯ್ಯಾ ? ಉರಗಮುಟ್ಟಲು ಸರ್ವಾಂಗವನೆಲ್ಲ ವಿಷಕೊಂಡಂತೆ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆಂಬ ಲಿಂಗಸೋಂಕಿದವರೆಲ್ಲ ಸರ್ವಾಂಗಲಿಂಗಿಗಳಾದುದ ನೋಡಾ.
--------------
ಹೇಮಗಲ್ಲ ಹಂಪ
ನಿಮ್ಮ ಅಂಗದಲ್ಲಿರ್ದ ಅವಗುಣಂಗಳ ವಿಚಾರಿಸದೆ ಜಂಗಮದಲ್ಲಿ ಅವಗುಣವ ವಿಚಾರಿಸುವ ದುರಾಚಾರಿಗಳು ನೀವು ಕೇಳಿರೆ ಅದೆಂತು ಅಂಗದಲ್ಲಿ ಅನಾಚಾರವುಂಟೆಂಬುದ, ನಾನು ವಿಚಾರಿಸಿ ಪೇಳುವೆನು ಕೇಳಿರೆ: ನೀವು ಪರಸ್ತ್ರೀಯರ ನೋಡುವ ಕಣ್ಣುಗಳನೊಳಗಿಟ್ಟುಕೊಂಡಿರ್ಪುದು ನಿಮ್ಮದಾಚಾರವೆ ಹೇಳಿರಣ್ಣಾ ಅನಾಚಾರವಲ್ಲದೆ ? ತನ್ನ ಸ್ತ್ರೀಯಲ್ಲದೆ ಅನ್ಯಸ್ತ್ರೀಯಲ್ಲಿ ಆಚರಿಸುವುದು ನಿಮ್ಮದಾಚಾರವೆ ಹೇಳಿರಣ್ಣಾ ಅನಾಚಾರವಲ್ಲದೆ ? ಅಂಗದ ಮೇಲಣ ಲಿಂಗವ ಪೂಜಿಸಿ ಜಂಗಮವ ನಿಂದಿಸುವುದು ನಿಮ್ಮದಾಚಾರವೆ ಹೇಳಿರಣ್ಣಾ ಅನಾಚಾರವಲ್ಲದೆ ? ಇನ್ನು ಹೇಳುವಡೆ ಅವಕೇನು ಕಡೆಯಿಲ್ಲ. ಇದನರಿದು, ನಮ್ಮ ಜಂಗಮಲಿಂಗವ ಮಾಯೆಯೆನ್ನದಿರಿ ಅಥವಾ ಮಾಯೆಯೆಂದಿರಾದಡೆ, ಆ ದ್ರೋಹ ಲಿಂಗವ ಮುಟ್ಟುವುದು. ಅದೆಂತೆಂದಡೆ: ಬೀಜಕ್ಕೆ ಚೈತನ್ಯವ ಮಾಡಿದಡೆ, ವೃಕ್ಷಕ್ಕೆ ಚೈತನ್ಯವಪ್ಪುದು. ಆ ಅಂತಹ ಬೀಜಕ್ಕೆ ಚೈತನ್ಯವ ಮಾಡದಿರ್ದಡೆ ವೃಕ್ಷ ಫಲವಾಗದಾಗಿ, ಬೀಜಕ್ಕೆ ಕೇಡಿಲ್ಲ. ಅದು ನಿಮಿತ್ತವಾಗಿ, ಬೀಜವೆ ಜಂಗಮಲಿಂಗವು. ಆ ಜಂಗಮಲಿಂಗವೆಂಬ ಬೀಜವನು ಸುರಕ್ಷಿತವ ಮಾಡಿದಡೆ ಲಿಂಗವೆಂಬ ವೃಕ್ಷ ಫಲಿಸುವುದಯ್ಯಾ. ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಕೈಯಲ್ಲಿ ಡಾಣೆ ಮನದಲ್ಲಿ ಕ್ರೋಧ ವಚನದಲ್ಲಿ ಕಿಂಕಲ, ಲಿಂಗದ ವಾರ್ತೆ ನಿನಗೇಕೆ ಹೇಳಾ ಬಸವಾ ? ಜಂಗಮವೆ ಲಿಂಗವೆಂಬ ಶಬ್ದಸಂದೇಹಸೂತಕಿ ನೀನು, ಸಜ್ಜನ ಸದ್ಭಕ್ತಿಯ ಮಾತು ನಿನಗೇಕೆ ಹೇಳಾ ಬಸವಾ ? ಕಬ್ಬುನದ ರೂಪು ಪರುಷವ ಮುಟ್ಟಿದಡೆ ಹೊನ್ನಾಯಿತ್ತಲ್ಲದೆ ಪರುಷವಪ್ಪುದೆ ಹೇಳಾ ಬಸವಾ ? ಗುಹೇಶ್ವರನೆಂಬ ಪರುಷದ ಪುತ್ಥಳಿಯನರಿಯಬಲ್ಲಡೆ ನಿನ್ನ ನೀನೆ ತಿಳಿದು ನೋಡಾ ಸಂಗನಬಸವಣ್ಣಾ.
--------------
ಅಲ್ಲಮಪ್ರಭುದೇವರು
ಕಾಯವಿಲ್ಲದ ಹೆಂಗೂಸು ಬಸುರಿಲ್ಲದ ಮಗನ ಹಡೆದು ಅಂಗನೆಯರ ಆರು ಮಂದಿಯ ಕರೆದು ಲಿಂಗವೆಂಬ ತೊಟ್ಟಿಲೊಳಗೆ ಆ ಮಗನ ಮಲಗಿಸಿ ಜೋಗುಳಮಂ ಪಾಡುತಿರ್ಪಳು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಇನ್ನಷ್ಟು ... -->