ಅಥವಾ

ಒಟ್ಟು 40 ಕಡೆಗಳಲ್ಲಿ , 18 ವಚನಕಾರರು , 31 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಯ್ಯ, ನಿರಾಲಂಬ ನಿಃಕಳಂಕ ನಿಃಪ್ರಪಂಚತ್ವದಿಂದ ನಾಲ್ವತ್ತೆಂಟು ಪ್ರಣಮಸ್ಮರಣೆಯಿಂದ ಏಕಾದಶಲಿಂಗಂಗಳಿಗೆ ಏಕಾದಶಪ್ರಸಾದವ ಸಮರ್ಪಿಸಿ, ತಾನಾ ಸಂತೃಪ್ತಿಮಹಾಪ್ರಸಾದದಲ್ಲಿ ಲೋಲುಪ್ತನಾದಡೆ ನಿಜಪ್ರಸಾದಿಯೆಂಬೆ ನೋಡ. ಅದರ ವಿಚಾರವೆಂತೆಂದಡೆ : ನಾಲ್ವತ್ತೆಂಟು ಪ್ರಣವದೊಳಗೆ ದ್ವಾದಶಪ್ರಣಮಸ್ಮರಣೆಯಿಂದ ಆಪ್ಯಾಯನಪ್ರಸಾದ, ಸಮಯಪ್ರಸಾದ, ಗುರುಪ್ರಸಾದವ ಆಚಾರಲಿಂಗ-ಗುರುಲಿಂಗ-ಇಷ್ಟಲಿಂಗದೇವಂಗೆ ಸುಚಿತ್ತ, ಸುಬುದ್ಧಿ, ನಿರುಪಾದ್ಥಿಕಹಸ್ತದಿಂದ ಸಮರ್ಪಿಸಿ, ಆ ತೃಪ್ತಿಯ ಲೋಲುಪ್ತಿಯಲ್ಲಿ ತಾನಾದಡೆ ಅನಾದಿನಿಃಕಳಂಕ ಗುರುಬಸವರಾಜನೆಂಬೆ ನೋಡ. ಛತ್ತೀಶಪ್ರಣಮದೊಳಗೆ ದ್ವಾದಶಪ್ರಣಮಸ್ಮರಣೆಯಿಂದ ಪಂಚೇಂದ್ರಿಯವಿರಹಿತಪ್ರಸಾದ, ಕರಣಚತುಷ್ಟಯವಿರಹಿತಪ್ರಸಾದ, ಲಿಂಗಪ್ರಸಾದವ ಶಿವಲಿಂಗ-ಜಂಗಮಲಿಂಗ-ಪ್ರಾಣಲಿಂಗದೇವಂಗೆ ನಿರಹಂಕಾರ, ಸುಮನ, ನಿರಾಲಂಬಹಸ್ತದಿಂದ ಸಮರ್ಪಿಸಿ, ಆ ತೃಪ್ತಿಯ ಲೋಲುಪ್ತಿಯಲ್ಲಿ ತಾನಾದಡೆ ಅನಾದಿ ನಿಃಕಾಮ ಶೂನ್ಯಲಿಂಗಸ್ವರೂಪ ಚೆನ್ನಬಸವರಾಜನೆಂಬೆ ನೋಡ ! ಇಪ್ಪತ್ತುನಾಲ್ಕು ಪ್ರಣಮದೊಳಗೆ ದ್ವಾದಶಪ್ರಣಮಸ್ಮರಣೆಯಿಂದ ಸಮತಾಪ್ರಸಾದ-ಪ್ರಸಾದಿಯಪ್ರಸಾದ-ಜಂಗಮಪ್ರಸಾದವ ಪ್ರಸಾದಲಿಂಗ-ಮಹಾಲಿಂಗ-ಭಾವಲಿಂಗದೇವಂಗೆ ಸುಜಾÕನ, ಸದ್ಭಾವ, ನಿಃಪ್ರಪಂಚಹಸ್ತದಿಂದ ಸಮರ್ಪಿಸಿ, ಆ ಪರಿಣಾಮಲೋಲುಪ್ತಿಯಲ್ಲಿ ತಾನಾದಡೆ ಅನಾದಿ ನಿರಂಜನ ಜಂಗಮ ಸ್ವರೂಪ ಪ್ರಭುದೇವರೆಂಬೆ ನೋಡ. ಇನ್ನು ಉಳಿದ ದ್ವಾದಶಪ್ರಣಮಸ್ಮರಣೆಯಿಂದ ಸದ್ಭಾವಪ್ರಸಾದ-ಜಾÕನಪ್ರಸಾದವ ಇಂತು ನವಲಿಂಗಪ್ರಸಾದ ಪಾದೋದಕಂಗಳ ಸಂತೃಪ್ತಿಯಲ್ಲಿ ಸಾಕಾರ ನಿರಾಕಾರನಾದ ಪರತತ್ವಜ್ಯೋತಿರ್ಮಯಲಿಂಗದೇವಂಗೆ ನಿಜಾನಂದಹಸ್ತದಿಂದ ಸಮರ್ಪಿಸಿ, ಮತ್ತಾ ಅನಾದಿಕುಳಸನ್ಮತನಾದ ದಶವಿಧಪಾದೋದಕ, ಏಕಾದಶಪ್ರಸಾದದಲ್ಲಿ ಕೂಡಿ, ಘನಸಾರದಂತಾದಡೆ ಅನಾದಿಪೂರ್ಣಮಯ ನಿಜವಸ್ತು ತಾನೆ ನೋಡ, ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಲಿಂಗಪ್ರಸಾದವ ಜಂಗಮಕ್ಕೆ ಕೊಡುವ ಕರ್ಮಿಗಳು ನೀವು ಕೇಳಿರೆ. ಜಂಗಮಪ್ರಸಾದವ ಲಿಂಗಕ್ಕೆ ಕೊಡುವ ಧರ್ಮಿಗಳು ನೀವು ಕೇಳಿರೆ. ಲಿಂಗಪ್ರಸಾದವ ಜಂಗಮಕ್ಕೆ ಕೊಡುವುದು ಅನಾಚಾರ. ಜಂಗಮಪ್ರಸಾದವ ಲಿಂಗಕ್ಕೆ ಕೊಡುವುದು ಸದಾಚಾರ. ಅದೆಂತೆದಡೆ- ಶಿವಧರ್ಮ ಪುರಾಣದಲ್ಲಿ : ಲಿಂಗಾರ್ಪಿತ ಪ್ರಸಾದಂ ಚ ನದದ್ಯಾಜ್ಜಂಗಮಾರ್ಪಿತಂ | ಜಂಗಮಾರ್ಪಿತ ಪ್ರಸಾದಂ ತದದ್ಯಾಲಿಂಗಮೂರ್ತಿಷು || ಎಂದುದಾಗಿ, ಇದು ಕಾರಣ, ಜಂಗಮಪ್ರಸಾದವ ಲಿಂಗಕ್ಕೆ ಕೊಟ್ಟು ಕೊಂಬೆನಾಗಿ, ಎನ್ನ ಭವಂ ನಾಸ್ತಿಯಾಯಿತ್ತಯ್ಯಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಲಿಂಗಪ್ರಸಾದವ ಜಂಗಮಕ್ಕೆ ಕೊಡುವ ಕರ್ಮಿ ನೀ ಕೇಳಾ ! ಜಂಗಮಪ್ರಸಾದವ ಲಿಂಗಕ್ಕೆ ಕೊಡುವ ಸುಧರ್ಮಿ ನೀ ಕೇಳಾ ! ಲಿಂಗಪ್ರಸಾದವ ಜಂಗಮಕ್ಕೆ ಕೊಡುವದು ಅನಾಚಾರ; ಜಂಗಮದ ಪ್ರಸಾದವ ಲಿಂಗಕ್ಕೆ ಕೊಡುವದು ಸದಾಚಾರ. ಅಅದೆಂತೆಂದಡೆ: ಲಿಂಗಾರ್ಪಿತಂ ಪ್ರಸಾದಂ ಚ ನ ದದ್ಯಾತ್ ಚರಮೂರ್ತಯೇ ಚರಾರ್ಪಿತಂ ಪ್ರಸಾದಂ ಚ ತದ್ದದ್ಯಾತ್ ಲಿಂಗಮೂರ್ತಯೇ ಎಂದುದಾಗಿ, ಇದು ಕಾರಣ, ಕೂಡಲಚೆನ್ನಸಂಗಯ್ಯಾ, ಜಂಗಮ ಮುಖದಲ್ಲಿ ಲಿಂಗ ನಿರಂತರ ಸುಖಿ
--------------
ಚನ್ನಬಸವಣ್ಣ
ಶ್ರೀ ವಿಭೂತಿಯ, ರುದ್ರಾಕ್ಷಿಯ ಧರಿಸಿ, ಲಿಂಗನಿಷ್ಠಾಪರನಾಗಿ ಲಿಂಗಾರ್ಚನೆಯ ಮಾಡಿ, ಸಕಲಪದಾರ್ಥವ ಲಿಂಗಕ್ಕೆ ಕೊಟ್ಟು, ಲಿಂಗಪ್ರಸಾದವ ಕೊಂಡು, ಲಿಂಗಸುಖ ಸಂಪನ್ನರಾದ ಲಿಂಗಭೋಗೋಪಭೋಗಿಗಳಲ್ಲಿ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು ಸದಾ ಸನ್ನಿಹಿತನು.
--------------
ಸ್ವತಂತ್ರ ಸಿದ್ಧಲಿಂಗ
ಗುರುಪ್ರಸಾದವ ಕೊಂಡು ಎನ್ನ ತನು ಶುದ್ಧಪ್ರಸಾದವಾಯಿತ್ತು. ಲಿಂಗಪ್ರಸಾದವ ಕೊಂಡು ಎನ್ನ ಮನ ಸಿದ್ಧಪ್ರಸಾದವಾಯಿತ್ತು. ಜಂಗಮಪ್ರಸಾದವ ಕೊಂಡು ಎನ್ನ ಪ್ರಾಣವು ಪ್ರಸಿದ್ಧಪ್ರಸಾದವಾಯಿತ್ತು. ಇಂತೀ ತ್ರಿವಿಧಪ್ರಸಾದವ ಕೊಂಡು ಎನ್ನ ಭವ ನಾಸ್ತಿಯಾಗಿತ್ತಾಗಿ, ಅಖಂಡೇಶ್ವರಾ, ಇನ್ನೆನಗೆ ಆವಾವ ಭಯವಿಲ್ಲವಯ್ಯ.
--------------
ಷಣ್ಮುಖಸ್ವಾಮಿ
ಜಂಗಮವೆ ತನ್ನ ಪ್ರಾಣಲಿಂಗವೆಂದರಿದ ಸದ್ಭಕ್ತಂಗೆ ಜಂಗಮದ ಪ್ರಸಾದವಿಲ್ಲದೆ ಲಿಂಗಪ್ರಸಾದವ ಕೊಳಲಾಗದು, ಜಂಗಮದ ಪ್ರಸಾದವು ಲಿಂಗಕ್ಕೆ ಸಲ್ಲದೆಂದು ಶಂಕಿಸಲಾಗದು. ಅದೆಂತೆಂದಡೆ, ವೀರಾಗಮದಲ್ಲಿ; ಜಂಗಮಾದಿಗುರೂಣಾಂ ಚ ಅನಾದಿ ಸ್ವಯಲಿಂಗವತ್ ಆದಿಪ್ರಸಾದವಿರೋಧೇ ಇಷ್ಟೋಚ್ಛಿಷ್ಟಂ ತು ಕಿಲ್ಬಿಷಂ± ಎಂದುದಾಗಿ ಪ್ರಾಣ ಭಾವದಲ್ಲಿ ಸಂಬಂಧವಾಗಿ ಇಷ್ಟಕ್ಕೂ ಸಂದಿತ್ತು. ಈ ಭೇದವನರಿದು ಜಂಗಮದ ಪ್ರಸಾದವಿಲ್ಲದೆ ಲಿಂಗದ ಪ್ರಸಾದವ ಕೊಳಲಾಗದು ವೀರಮಾಹೇಶ್ವರರು, ಕೂಡಲಸಂಗಮದೇವಾ.
--------------
ಬಸವಣ್ಣ
ಲಿಂಗವ ಹಿಡಿದ ಹಸ್ತವೆ ಲಿಂಗಕ್ಕೆ ಪೀಠ ಕಾಣಿರೊ. ಲಿಂಗವ ಪೂಜಿಸುವ ಹಸ್ತವೆ ಶಿವಹಸ್ತ ಕಾಣಿರೊ. ಲಿಂಗವ ಧರಿಸಿಪ್ಪ ಅಂಗವೆ ಲಿಂಗದಂಗ ತಾನೆ ನೋಡಾ. ಲಿಂಗಪ್ರಸಾದವ ಕೊಂಬ ಪ್ರಾಣಲಿಂಗ ತಾನೆ ನೋಡಾ. ಒಳಹೊರಗೆ ಲಿಂಗಭರಿತವಾಗಿಪ್ಪ ಲಿಂಗದೇಹಿ ಲಿಂಗಪ್ರಾಣಿಗೆ ಕರ್ಮವ ಕಲ್ಪಿಸಿ ನುಡಿವ ಅಬದ್ಧರನೇನೆಂಬೆನಯ್ಯಾ. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಗುರುವಿಂಗೆ ಗುರುವಾಗಿ ಗುರುಪ್ರಸಾದವ ಕೊಂಬುದು, ಲಿಂಗಕ್ಕೆ ಲಿಂಗವಾಗಿ ಲಿಂಗಪ್ರಸಾದವ ಕೊಂಬುದು, ಜಂಗಮಕ್ಕೆ ಜಂಗಮವಾಗಿ ಜಂಗಮಪ್ರಸಾದವ ಕೊಂಬುದು, ಪ್ರಸಾದಕ್ಕೆ ಪ್ರಸಾದವಾಗಿ ಪ್ರಸಾದವನೆ ಕೊಂಬುದು. ಈ ಚತುರ್ವಿಧಸ್ಥಲಕ್ಕೆ ಚತುರ್ವಿಧವಾಗಬಲ್ಲಡೆ, ಕೂಡಲಚೆನ್ನಸಂಗನಲ್ಲಿ ಲಿಂಗೈಕ್ಯವು.
--------------
ಚನ್ನಬಸವಣ್ಣ
ಸ್ವಯಪ್ರಸಾದಿ ಗುರುಪ್ರಸಾದವನೊಲ್ಲ, ಲಿಂಗಪ್ರಸಾದವ ಕೊಂಬ. ಜ್ಞಾನಪ್ರಸಾದಿ ಜಂಗಮಪ್ರಸಾದವ ಕೊಂಬ, ಲಿಂಗಪ್ರಸಾದವನೊಲ್ಲ. ಮಹಾಪ್ರಸಾದಿ ಪ್ರಸನ್ನಪ್ರಸಾದವ ಕೊಂಬ, ಜಂಗಮಪ್ರಸಾದವನೊಲ್ಲ. ಇಂತೀ ತ್ರಿವಿಧಪ್ರಸಾದದ ಭೇದವನರಿದು, ಒಂದನೊಡಗೂಡಿ ಒಂದನರ್ಪಿಸಬೇಕು. ಆ ಉಭಯಪ್ರಸನ್ನಪ್ರಸಾದವ ಲಿಂಗಕ್ಕೆ ಕೊಟ್ಟು ಕೊಳಬಲ್ಲ ಮಹಾಪ್ರಸಾದಿಗೆ ಕುಂಭೇಶ್ವರಲಿಂಗದಲ್ಲಿದ್ದ ಜಗನ್ನಾಥ[ಸಾಕ್ಷಿಯಾಗಿ] ನಮೋ ನಮೋ ಎನುತಿದ್ದೆನು.
--------------
ಹೊಡೆಹುಲ್ಲ ಬಂಕಣ್ಣ
ಲಿಂಗಪ್ರಸಾದವಂ ಚೆಲ್ಲಿ, ಜಂಗಮಪ್ರಸಾದದ ಸುಯಿಧಾನಿಯೆಂಬ ಅಂಗಹೀನ ಮೂಕೊರೆಯ ಹೊಲೆಯನ ಮುಖವ ನೋಡಲಾಗದು ! ಅದೇನು ಕಾರಣವೆಂದಡೆ : ಗುರುವಾವುದು ? ಲಿಂಗವಾವುದು ? ಜಂಗಮವಾವುದು ? ಇಂತೀ ತ್ರಿವಿಧವು ಒಂದಾದ ಕಾರಣ ಏಕಮೂರ್ತಿಸ್ತ್ರಯೋ ಭಾಗಃ ಗುರುಲಿಂಗಂತು ಜಂಗಮಃ ಜಂಗಮಶ್ಚ ಗುರುರ್ಲಿಂಗಂ ತ್ರಿವಿಧಂ ಲಿಂಗಮುಚ್ಯತೇ ಎಂದುದಾಗಿ, ಒಂದಬಿಟ್ಟೊಂದ ಹಿಡಿದ ಸಂದೇಹಿ ಹೊಲೆಯನ ಕಂಡರೆ ಹಂದಿ ನಾಯ ಬಸುರಲ್ಲಿ ಹಾಕದೆ ಬಿಡುವನೇ ? ನಮ್ಮ [ಉರಿಲಿಂಗಪೆದ್ದಿಪ್ರಿ]ಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಗುರುವಿರೆ ಲಿಂಗಪ್ರಸಾದವ ಕೊಳಲಾಗದು. ಲಿಂಗವಿರೆ ಜಂಗಮಪ್ರಸಾದವ ಕೊಳಲಾಗದು. ಜಂಗಮವಿರೆ ಉಭಯಪ್ರಸಾದವ ಕೊಳಲಾಗದು. ಇಂತೀ ಪ್ರಸಾದದ ವಿವರವನರಿತಲ್ಲಿ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ಪ್ರಸನ್ನ ಪ್ರಸಾದವಾದ.
--------------
ಶಿವಲೆಂಕ ಮಂಚಣ್ಣ
ಅಯ್ಯಾ, ಗುರುಪ್ರಸಾದವ ಕೈಯೊಡ್ಡಿ ಬೇಡುವರು ಶಿಷ್ಯರು. ಲಿಂಗಪ್ರಸಾದವ ಕೈಯೊಡ್ಡಿ ಬೇಡುವರು ಭಕ್ತರು. ಜಂಗಮಪ್ರಸಾದವ ಕೈಯೊಡ್ಡಿ ಬೇಡುವರು ಶರಣಸ್ಥಲವುಳ್ಳವರು. ಇದು ಕಾರಣ, ಗುರುನಿರಂಜನ ಚನ್ನಬಸವಲಿಂಗಕ್ಕಂಗವಾಗಿರ್ದ ಶರಣ ಗುರುಲಿಂಗಜಂಗಮಕ್ಕೆ ಕೈಯೊಡ್ಡಿ ಬೇಡಲಿಲ್ಲ ಕಾಣಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಗುರುಪ್ರಸಾದವನು ಪಡೆವೆನೆ ಎನಗಂಗವಿಲ್ಲ ಕಾಣಾ ! ಲಿಂಗಪ್ರಸಾದವ ಪಡೆವೆನೆ ಎನಗೆ ಮನವಿಲ್ಲ ಕಾಣಾ ! ಜಂಗಮಪ್ರಸಾದವ ಪಡೆವೆನೆ ಎನಗೆ ಪ್ರಾಣವಿಲ್ಲ ಕಾಣಾ ! ಗುರುನಿರಂಜನ ಚನ್ನಬಸವಲಿಂಗಾ ನೀವೆನ್ನಂಗ ಮನ ಪ್ರಾಣವಾಗಿ ತೆರಹಿಲ್ಲದಿರ್ಪ ಪರಮಸುಖಪ್ರಸಾದದೊಳೋಲಾಡುತಿರ್ದೆನು ಕಾಣಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಇಷ್ಟಲಿಂಗವಿಡಿದು ಗುರುಪ್ರಸಾದವ ಕಂಡೆನಯ್ಯ. ಪ್ರಾಣಲಿಂಗವಿಡಿದು ಲಿಂಗಪ್ರಸಾದವ ಕಂಡೆನಯ್ಯ. ಭಾವಲಿಂಗವಿಡಿದು ಜಂಗಮಪ್ರಸಾದವ ಕಂಡೆನಯ್ಯ. ಇಷ್ಟಲಿಂಗ ಪ್ರಾಣಲಿಂಗ ಭಾವಲಿಂಗವೆಂಬ ಲಿಂಗತ್ರಯಂಗಳಲ್ಲಿ ಒಳಹೊರಗೆ ಪರಿಪೂರ್ಣವಾಗಿರ್ದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಲಿಂಗಘ್ರಾಣದಲ್ಲಿ ಲಿಂಗಕ್ಕೆ ಲಿಂಗಗಂಧವನರ್ಪಿಸಿ, ಲಿಂಗಪ್ರಸಾದವ ಗ್ರಹಿಸುತಿರ್ಪನಯ್ಯಾ ನಿಮ್ಮ ಪ್ರಸಾದಿ. ಲಿಂಗಜಿಹ್ವೆಯಲ್ಲಿ ಲಿಂಗಕ್ಕೆ ಲಿಂಗರುಚಿಯನರ್ಪಿಸಿ ಲಿಂಗಪ್ರಸಾದವ ಗ್ರಹಿಸುತಿರ್ಪನಯ್ಯಾ ನಿಮ್ಮ ಪ್ರಸಾದಿ. ಲಿಂಗನೇತ್ರದಲ್ಲಿ ಲಿಂಗಕ್ಕೆ ಲಿಂಗರೂಪನರ್ಪಿಸಿ ಲಿಂಗಪ್ರಸಾದವ ಗ್ರಹಿಸುತಿರ್ಪನಯ್ಯಾ ನಿಮ್ಮ ಪ್ರಸಾದಿ. ಲಿಂಗತ್ವಕ್ಕಿನಲ್ಲಿ ಲಿಂಗಕ್ಕೆ ಲಿಂಗಸ್ಪರ್ಶವನರ್ಪಿಸಿ ಲಿಂಗಪ್ರಸಾದವ ಗ್ರಹಿಸುತಿರ್ಪನಯ್ಯಾ ನಿಮ್ಮ ಪ್ರಸಾದಿ. ಲಿಂಗಶ್ರೋತ್ರದಲ್ಲಿ ಲಿಂಗಕ್ಕೆ ಲಿಂಗಶಬ್ದವನರ್ಪಿಸಿ ಲಿಂಗಪ್ರಸಾದವ ಗ್ರಹಿಸುತಿರ್ಪನಯ್ಯಾ ನಿಮ್ಮ ಪ್ರಸಾದಿ. ಲಿಂಗಹೃದಯದಲ್ಲಿ ಲಿಂಗಕ್ಕೆ ಲಿಂಗತೃಪ್ತಿಯನರ್ಪಿಸಿ ಲಿಂಗಪ್ರಸಾದವ ಗ್ರಹಿಸುತಿರ್ಪನಯ್ಯಾ ನಿಮ್ಮ ಪ್ರಸಾದಿ. ಇಂತೀ ಒಳಹೊರಗೆ ತೆರಹಿಲ್ಲದೆ ಲಿಂಗಕ್ಕೆ ಲಿಂಗವನರ್ಪಿಸಿ, ಲಿಂಗಪ್ರಸಾದವ ಗ್ರಹಿಸಿ, ಘನಲಿಂಗವಾಗಿರ್ಪ ಮಹಾಪ್ರಸಾದಿಗಳ ಶ್ರೀಚರಣಕ್ಕೆ ನಮೋ ನಮೋ ಎಂಬೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಇನ್ನಷ್ಟು ... -->