ಅಥವಾ

ಒಟ್ಟು 63 ಕಡೆಗಳಲ್ಲಿ , 14 ವಚನಕಾರರು , 55 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಂದಾದುದು ಎರಡಪ್ಪುದೆ ? ಎರಡಾದುದು ಒಂದಪ್ಪುದೆ_[ಎಂದ]À ಪರಿಣಾಮದ ವೇಳೆಯಲ್ಲಿ ಸಂದೇಹ ಹುಟ್ಟಲುಂಟೆ ? ಬಂದ ಜಂಗಮದ ನಿಲವನರಿಯದೆ, ಹಿಂದನೆಣಿಸಿ ಹಲವ ಹಂಬಲಿಸುವರೆ ? ಈ ಒಂದು ನಿಲವಿಂಗೆ ಪರಿಣಾಮವ ಮಾಡಬಲ್ಲಡೆ ನಿನ್ನ ಲಕ್ಷದ ಮೇಲೆ ತೊಂಬತ್ತಾರುಸಾವಿರ ಜಂಗಮಕ್ಕೆ ಪರಿಣಾಮವಹುದು ನೋಡಾ. ಗುಹೇಶ್ವರನೆಂಬ ಲಿಂಗದ ನಿಲವನರಿಯದೆ ಮರುಳಾದೆಯಲ್ಲಾ ಸಂಗನಬಸವಣ್ಣಾ
--------------
ಅಲ್ಲಮಪ್ರಭುದೇವರು
ಅಂಥ ಬ್ರಹ್ಮಾಂಡವ ತೊಂಬತ್ತೊಂದು ಲಕ್ಷದ ಮೇಲೆ ಸಾವಿರದ ಒಂಬಯಿನೂರಾಯೆಂಟು ಬ್ರಹ್ಮಾಂಡವನೊಳಕೊಂಡುದೊಂದು ಧರ್ಮಪರೇಣವೆಂಬ ಭುವನ. ಆ ಭುವನದೊಳು ಧರ್ಮಾಧರ್ಮರಹಿತನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಒಂಬತ್ತುನೂರಾ ಐವತ್ತುಕೋಟಿ ಇಂದ್ರಚಂದ್ರಾದಿತ್ಯರು ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ. ಒಂಬತ್ತುನೂರಾ ಐವತ್ತುಕೋಟಿ ರುದ್ರ ಬ್ರಹ್ಮ ನಾರಾಯಣರಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಅಂಥ ಬ್ರಹ್ಮಾಂಡವ ಲಕ್ಷದ ಮೇಲೆ ಒಂಬೈನೂರಾ ತೊಂಬತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ವಿಧುವೇಶ್ವರವೆಂಬ ಭುವನ. ಆ ಭುವನದೊಳು ವಿಶ್ವೇಶ್ವರನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಐನೂರುಕೋಟಿ ರುದ್ರ-ಬ್ರಹ್ಮ-ನಾರಾಯಣರಿಹರು. ಐನೂರುಕೋಟಿ ಇಂದ್ರ-ಚಂದ್ರಾದಿತ್ಯರು ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಅಂಥ ಬ್ರಹ್ಮಾಂಡವ ಅರುವತ್ತು ಲಕ್ಷದ ಮೇಲೆ ಸಾವಿರದಾ ಐನೂರಾತೊಂಬತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ಮೇಘವಾಹನವೆಂಬ ಭುವನ. ಆ ಭುವನದೊಳು ಚಂಡಮಾರುತನೆಂಬ ಮಹಾರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಏಳುನೂರಾತೊಂಬತ್ತೈದು ಕೋಟಿ ನಾರಾಯಣ-ರುದ್ರ-ಬ್ರಹ್ಮ-ಇಂದ್ರಾದಿಗಳಿಹರು ನೋಡಾ. ಏಳುನೂರಾ ತೊಂಬತ್ತೈದು ಕೋಟಿ ವೇದಪುರುಷರು ಮುನೀಂದ್ರರು ಚಂದ್ರಾದಿತ್ಯರು ದೇವರ್ಕಳಿಹರು ನೋಡಾ. ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಭಕ್ತಿಯುಕ್ತಿಯ ಹೊಲಬ ಬಲ್ಲವರ, ಮೂರುಲೋಕದೊಳಗಾರನೂ ಕಾಣೆ. ಲಿಂಗದಲ್ಲಿ ಭಕ್ತಿಯ ಮಾಡಿದಡೆ ಭವ ಹರಿಯದೆಂದು ಜಂಗಮಮುಖ ಲಿಂಗವೆಂದರಿದು ಅರ್ಚಿಸಿ ಪೂಜಿಸಿ ದಾಸೋಹವ ಮಾಡಿ ಪ್ರಸನ್ನತೆಯ ಹಡೆದ ಬಸವಣ್ಣನು. ಆ ಪ್ರಸನ್ನತೆಯ ರುಚಿಯನುಪಮಿಸಬಾರದು. ಆ ಬಸವಣ್ಣನ ಪ್ರಸಾದವ ಕೊಂಡು ನಾನು ಬದುಕಿದೆನು. ಆ ಬಸವಣ್ಣನ ಭಕ್ತಿಪ್ರಸಾದವ ಕೊಂಡು ಅಲ್ಲಮಪ್ರಭು ತೃಪ್ತನಾದನು. ಅಲ್ಲಮಪ್ರಭು ಕೊಂಡ ಪ್ರಸಾದದ ತೃಪ್ತಿ ಲಕ್ಷದಮೇಲೆ ತೊಂಬತ್ತಾರುಸಾವಿರ ಜಂಗಮ ತೃಪ್ತಿಯಾಯಿತು; ಆ ಲಕ್ಷದ ಮೇಲೆ ತೊಂಬತ್ತಾರುಸಾವಿರ ಜಂಗಮ ತೃಪ್ತಿಯಾದಲ್ಲಿ ಸಚರಾಚರವೆಲ್ಲ ಕೂಡೆ ತೃಪ್ತಿಯಾಯಿತ್ತೆಂದಡೆ, ಇಲ್ಲವೆಂದು ಬಿಜ್ಜರಿ ತರ್ಕಿಸಲು, ಕಪ್ಪೆಯ ಒಡಲೊಳಗೆ ಪ್ರಭುವಿನ ಪ್ರಸಾದವ ತೋರನೆ ಬಸವಣ್ಣನು ? ಇದು ಕಾರಣ ಕೂಡಲಚೆನ್ನಸಂಗಮದೇವರಲ್ಲಿ ಬಸವಣ್ಣ ಪ್ರಭುದೇವರ ಪ್ರಸಾದದ ಘನವು ತ್ರೈಲೋಕ್ಯದೊಳಗೆ ಬೆಳವಿಗೆಯಾಯಿತ್ತು !
--------------
ಚನ್ನಬಸವಣ್ಣ
ಅಂಥ ಬ್ರಹ್ಮಾಂಡವ ತೊಂಬತ್ತು ಲಕ್ಷದ ಮೇಲೆ ಸಾವಿರದ ಎಂಟುನೂರಾ ತೊಂಬತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ಧರ್ಮವೆಂಬ ಭುವನ. ಆ ಭುವನದೊಳು ಧರ್ಮಸ್ವರೂಪನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಒಂಬತ್ತು ನೂರಾ ನಾಲ್ವತ್ತೈದು ಕೋಟಿ ದೇವರ್ಕಳು ವೇದಪುರುಷರು ಇಂದ್ರಚದ್ರಾದಿತ್ಯರು ಇಹರು ನೋಡಾ. ಒಂಬತ್ತು ನೂರಾ ನಾಲ್ವತ್ತೈದು ಕೋಟಿ ರುದ್ರ ಬ್ರಹ್ಮ ನಾರಾಯಣರಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಎಂಟುಲಕ್ಷದ ಮೇಲೆ ಐನೂರು ದೇವರಿಗೆ ಮಾಡಿದ ಬೋನವ ಒಬ್ಬ ಜಂಗಮನಾರೋಗಣೆಯ ಮಾಡುವನಲ್ಲದೆ, ಹದಿನಾರು ಲಕ್ಷದ ಮೇಲೆ ಐನೂರು ದೇವರು ಕೂಡಿಕೊಂಡು ಒಬ್ಬ ಜಂಗಮಕ್ಕೆ ಮಾಡಿದ ಬೋನವನಾರೋಗಿಸಲರಿಯವು. ಅಂತಪ್ಪ ದೇವರಿಗಿಂತಲೂ ಜಂಗಮವೆ ಘನ. ಕೃತಯುಗದಲ್ಲಿ ಸುವರ್ಣದ ಲಿಂಗಾವಾದಲ್ಲಿ ನಿನ್ನ ಹೆಸರೇನು ? ತ್ರೇತಾಯುಗದಲ್ಲಿ ಬೆಳ್ಳಿಯ ಲಿಂಗವಾದಲ್ಲಿ ನಿನ್ನ ತಾಯಿ-ತಂದೆ ಯಾರು ? ದ್ವಾಪರದಲ್ಲಿ ತಾಮ್ರದಲಿಂಗವಾದಲ್ಲಿ ಹದಿನೆಂಟು ಜಾತಿಯ ಕೈಯ ಕಿಲುಬು ಹೋಯಿತ್ತು. ಕಲಿಯುಗದಲ್ಲಿ ಕಲ್ಲ ದೇವರಾದರೆ ಇಕ್ಕಿದೋಗರವನುಣ್ಣದೇಕೊ ? ಹಿಂದೊಮ್ಮೆ ನಾಲ್ಕುಯುಗದಲ್ಲಿ ಅಳಿದು ಹೋದುದನರಿಯಾ ? ಇನ್ನೇಕೆ ದೇವತನಕ್ಕೆ ಬೆರತಹೆ ? ``ಸ್ಥಾವರಂ ಜಂಗಮಶ್ಚೈವ ದ್ವಿವಿಧಂ ಲಿಂಗಮುಚ್ಯತೇ ಜಂಗಮಸ್ಯಾವಮಾನೇನ ಸ್ಥಾವರಂ ನಿಷ್ಫಲಂ ಭವೇತ್ _ಇದು ಕಾರಣ ಕೂಡಲಚೆನ್ನಸಂಗಯ್ಯಾ, ತಪ್ಪದೆ ನಾಲ್ಕುಯುಗದಲ್ಲಿ ಜಂಗಮವೆ ಪ್ರಾಣಲಿಂಗವಾದ ಕಾರಣ ಸ್ಥಾವರವೆ ಜಂಗಮಪ್ರಸಾದಕ್ಕೆ ಯೋಗ್ಯವಾಯಿತ್ತು.
--------------
ಚನ್ನಬಸವಣ್ಣ
ಅಂಥ ಬ್ರಹ್ಮಾಂಡವ ನಾಲವತ್ತೇಳು ಲಕ್ಷದ ಮೇಲೆ ಸಾವಿರದಾ ನಾನೂರಾ ಅರವತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ವೇದಪಾಠಕವೆಂಬ ಭುವನ. ಆ ಭುವನದೊಳು ವೇದನಾಥನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಏಳುನೂರ ಮೂವತ್ತುಕೋಟಿ ಚಂದ್ರಾದಿತ್ಯರು ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ. ಏಳುನೂರ ಮೂವತ್ತುಕೋಟಿ ಇಂದ್ರ-ಬ್ರಹ್ಮ-ನಾರಾಯಣ-ರುದ್ರರಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ವಿದ್ಯೆ ಅವಿದ್ಯೆಯಾದಲ್ಲಿ, ಆ ಅರಿವ ಹೊದ್ದುವ ಬಂಧವಾವುದು ? ಕ್ಷುದ್ರ ಇಂದ್ರಿಯಂಗಳೆಂಬ ಸಂದುಸಂಶಯವಾವುದು ? ಅದು ಒಡೆದ ಕುಂಭದ ನೀರಿನ ನೆಳಲಿನಂತೆ, ಅದು ಕುಂಭವ ಹಿಂಗಲಿಕೆ, ಆ ಬಿಂಬ ಅಲ್ಲಿಯೆ ಅಡಗಿತ್ತು, ಮತ್ತೆ ಕುಂಭವ ನೋಡಲಿಕ್ಕೆ ಒಂದೂ ಇಲ್ಲ. ಆ ಅಂಗ ಲಕ್ಷದ ಕುಂಭದಲ್ಲಿ, ಇಂಗಿಹೋದ ಆತ್ಮಂಗೆ ಬಂಧಮೋಕ್ಷಕರ್ಮಂಗಳು, ಒಂದೂ ಇಲ್ಲ, ಕಾಮಧೂಮ ಧೂಳೇಶ್ವರನೆಂಬ ಭಾವಸಂದೇಹ ನಂದಿತ್ತಾಗಿ.
--------------
ಮಾದಾರ ಧೂಳಯ್ಯ
ಅಂಥ ಬ್ರಹ್ಮಾಂಡವ ಎಂಬತ್ತೆರಡು ಲಕ್ಷದ ಮೇಲೆ ಸಾವಿರದಾಯೆಂಟುನೂರಹದಿನೆಂಟು ಬ್ರಹ್ಮಾಂಡವನೊಳಕೊಂಡುದೊಂದು ಲೋಹಿತವೆಂಬ ಭುವನ. ಆ ಭುವನದೊಳು ವ್ಯಾಘ್ರಪಾದನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಒಂಬತ್ತುನೂರಾ ಐದುಕೋಟಿ ರುದ್ರ ಬ್ರಹ್ಮ ನಾರಾಯಣರಿಹರು. ಒಂಬತ್ತುನೂರಾ ಐದುಕೋಟಿ ವೇದಪುರುಷರು ಮುನೀಂದ್ರರು ಇಂದ್ರಚಂದ್ರಾದಿತ್ಯರು ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಅಯ್ಯಾ, ಹಿಂದೆಯಾನು ಮಾಡಿದ ಮರಹಿಂದ ಬಂದೆನೀ ಭವದಲ್ಲಿ. ನಿಮ್ಮ ಲೀಲೆ ನಿಮ್ಮ ವಿನೋದ ಸೂತ್ರದಿಂದ, ಲಕ್ಷದ ಮೇಲೆ ತೊಂಬತ್ತಾರು ಸಾವಿರ ಗೀತಂಗಳ ಆಡಿ ಹಾಡಿ, ಆ ದಾಸೋಹವೆಂಬ ಮಹಾಗಣಸಂಕುಳದೊಳೆನ್ನನಿರಿಸಿ, ನಿಮ್ಮ ಭಕ್ತಿಯ ಘನವ ನೀವೆ ಮೆರೆಯಲೆಂದು ಪರವಾದಿ ಬಿಜ್ಜಳನ ತಂದೊಡ್ಡಿ, ಎನ್ನನು ಅವನೊಡನೆ ಹೋರಿಸಿ, ಮುನ್ನೂರ ಅರವತ್ತು ಸತ್ತ ಪ್ರಾಣವನೆತ್ತಿಸಿ, ಮೂವತ್ತಾರು ಕೊಂಡೆಯವ ಗೆಲಿಸಿ, ಎಂಬತ್ತೆಂಟು ಪವಾಡಂಗಳಂ ಕೊಂಡಾಡಿ, ಮತ್ರ್ಯಲೋಕದ ಮಹಾಗಣಂಗಳ ಒಕ್ಕುದನಿಕ್ಕಿ ಎನ್ನ ಸಲಹಿದಿರಿ. ನಿಮ್ಮ ಮಹಾಗಣಂಗಳು ಮೆಚ್ಚೆ, ಎನ್ನ ಸೂತಕವ ತೊಡೆದೆ ಪ್ರಭುದೇವರ ಕರುಣದಿಂದ ಪ್ರಾಣಲಿಂಗಸಂಬಂಧ ಸಯವಾಯಿತ್ತು. ನೀವು ಕಳುಹಿದ ಬೆಸನು ಸಂದಿತ್ತು, ಉಘೇ, ಇನ್ನು ಕೂಡಿಕೊಳ್ಳಾ ಕೂಡಲಸಂಗಮದೇವಾ.
--------------
ಬಸವಣ್ಣ
ಕೃತಯುಕ ತ್ರೇತಾಯುಗ ದ್ವಾಪರಯುಗ ಕಲಿಯುಗಂಗಳಲ್ಲಿ ಬಸವನೆ ಭಕ್ತ, ಪ್ರಭುವೆ ಜಂಗಮವೆಂಬುದಕ್ಕೆ ಭಾವಭೇದವಿಲ್ಲವೆಂಬುದು ತಪ್ಪದು ನೋಡಯ್ಯಾ. ಕಲಿಯುಗದಲ್ಲಿ ಶಿವಭಕ್ತಿಯನು ಪ್ರಬಲವ ಮಾಡಬೇಕೆಂದು ಮತ್ರ್ಯಲೋಕಕ್ಕೆ ಇಳಿದು, ಶೈವಾಗಮಾಚಾರ್ಯ ಮಂಡಗೆಯ ಮಾದಿರಾಜನ ಸತಿ ಮಾದಾಂಬಿಕೆಯ ಗರ್ಭದಿಂದವತರಿಸಿದ. ಬಸವಣ್ಣನೆಂಬ ನಾಮಕರಣವಂ ಧರಿಸಿ, ಕೂಡಲಸಂಗಮದೇವರ ದಿವ್ಯ ಶ್ರೀಪಾದಪದ್ಮಾರಾಧಕನಾಗಿ, ಮತ್ರ್ಯಕ್ಕೆ ಪ್ರತಿಕೈಲಾಸವೆಂಬ ಕಲ್ಯಾಣಮಂ ಮಾಡಿ, ತನ್ನ ಪರೀಕ್ಷೆಗೆ ಬಿಜ್ಜಳನೆಂಬ ಒರೆಗಲ್ಲ ಮಾಡಿ, ಆ ಸದ್ಭಕ್ತಿ ಬಿನ್ನ[ಹ]ವನು ಒರೆದೊರೆದು ನೋಡುವ ಕೊಂಡೆಯ ಮಂಚಣ್ಣಗಳ ಪುಟ್ಟಿಸಿದ ಬಸವಣ್ಣ. ಕಪ್ಪಡಿಯ ಸಂಗಯ್ಯದೇವರ ಸ್ವಹಸ್ತದಿಂದಲುಪದೇಶಮಂ ಪಡೆದು ಸರ್ವಾಚಾರಸಂಪನ್ನನಾಗಿ ಇರುತ್ತಿರೆ, ಶಿವನಟ್ಟಿದ ನಿರೂಪಮಂ ಓದಿ, ಅರವತ್ತುಕೋಟಿ ವಸ್ತುವಂ ತೆಗೆಸಿ, ಬಿಜ್ಜಳಂಗೆ ದೃಷ್ಟಮಂ ತೋರಿ, ಶಿರಪ್ರಧಾನನಾಗಿ, ಶಿವಾಚಾರ ಶಿರೋಮಣಿಯಾಗಿ, ಏಳುನೂರಯೆಪ್ಪತ್ತು ಅಮರಗಣಂಗಳಿಗೆ ಪ್ರಥಮದಂಡನಾಯಕನಾಗಿ, ಗುರುಲಿಂಗಜಂಗಮಕ್ಕೆ ತನುಮನಧನವಂ ನಿವೇದಿಸಿ, ಅನವರತ ಶಿವಗಣ ತಿಂಥಿಣಿಯೊಳು ಓಡಾಡುತ್ತಿಪ್ಪ ಆ ಬಸವಣ್ಣ, ಲಕ್ಷದ ಮೇಲೆ ತೊಂಬತ್ತಾರು ಸಾವಿರ ಜಂಗಮದ ಪಾದೋದಕ ಪ್ರಸಾದದಲ್ಲಿ ನಿಯತನಾಗಿ, ಅವರವರ ನೇಮದಿಚ್ಫೆಗಳು ಸಲಿಸಿ, ಒಲಿದು ಮಾಡುವ ದಾಸೋಹದ ಪರಿಯೆಂತೆಂದಡೆ : ಹಾಲನೇಮದವರು ಹನ್ನೆರಡುಸಾವಿರ. ಘಟ್ಟಿವಾಲ ನೇಮದವರು ಹನ್ನೆರಡುಸಾವಿರ. ಪಂಚಾಮೃತಗಳ ಒಲಿದು ಲಿಂಗಕ್ಕೆ ಸಲಿಸುವ ನೇಮದವರು ಹನ್ನೆರಡುಸಾವಿರ. ಕಟ್ಟುಮೊಸರ ನೇಮದವರು ಹನ್ನೆರಡುಸಾವಿರ. ಘಟ್ಟಿದುಪ್ಪದ ನೇಮದವರು ಆರುಸಾವಿರ. ತಿಳಿದುಪ್ಪದ ನೇಮದವರು ಆರುಸಾವಿರ. ಚಿಲುಮೆಯಗ್ಘವಣಿಯ ನೇಮದವರು ಹನ್ನೆರಡುಸಾವಿರ. ಪರಡಿ ಸಜ್ಜಿಗೆಯ ನೇಮದವರು ಹನ್ನೆರಡುಸಾವಿರ ಕಟ್ಟುಮಂಡಗೆಯ ನೇಮದವರು ಹನ್ನೆರಡುಸಾವಿರ. ಎಣ್ಣೆಹೂರಿಗೆಯ ನೇಮದವರು ಹನ್ನೆರಡುಸಾವಿರ. ವಡೆ ಘಾರಿಗೆಯ ನೇಮದವರು ಹನ್ನೆರಡುಸಾವಿರ. ಹಾಲುಂಡೆ ಲಡ್ಡುಗೆಯ ನೇಮದವರು ಹನ್ನೆರಡುಸಾವಿರ. ತವರಾಜ ಸಕ್ಕರೆಯ ನೇಮದವರು ಹನ್ನೆರಡುಸಾವಿರ. ಷಡುರಸಾಯನದ ನೇಮದವರು ಹನ್ನೆರಡುಸಾವಿರ. ದ್ರಾಕ್ಷೆ ಮಾವು, ಖರ್ಜೂರ, ಹಲಸು, ದಾಳಿಂಬ ಇಕ್ಷುದಂಡ ಕದಳಿ ಮೊದಲಾದ ಫಲದ್ರವ್ಯಂಗಳ ನೇಮದವರು ಹನ್ನೆರಡುಸಾವಿರ. ಸಪ್ಪೆಯ ನೇಮದವರು ಹನ್ನೆರಡುಸಾವಿರ. ಸರ್ವದ್ರವ್ಯಂಗಳ ನೇಮದವರು ಹನ್ನೆರಡುಸಾವಿರ. ಸಮಯಾಚಾರ ಸಹಿತ ಲಿಂಗಾರ್ಚನೆ ಮಾಡುವ ನಿತ್ಯನೇಮಿಗಳು ಹದಿನಾರುಸಾವಿರ. ಇಂತು ಎಡೆಬಿಡುವಿಲ್ಲದೆ ಲಿಂಗಾರ್ಚನೆಯ ಮಾಡುವ ಜಂಗಮ ಲಕ್ಷದ ಮೇಲೆ ತೊಂಬತ್ತಾರು ಸಾವಿರ. ಆ ಬಸವಣ್ಣನ ಸಮಯಾಚಾರದಲ್ಲಿ ಕುಳ್ಳಿರ್ದು, ಲಿಂಗಾರ್ಚನೆಯ ಮಾಡುವ ಸಮಯಾಚಾರಿಗಳು ಮೂವತ್ತಾರು ಸಾವಿರ. ಅಂತು ಎರಡುಲಕ್ಷ ಮೂವತ್ತೆರಡು ಸಾವಿರ ಶಿವಗಣತಿಂಥಿಣಿಗೆ ಒಲಿದು ದಾಸೋಹಮಂ ಮಾಡುತ್ತ, ಪ್ರಸಾದ ಪಾದೋದಕದೊಳೋಲಾಡುತ್ತ, ಸುಖಸಂಕಧಾವಿನೋದದಿಂದ ಭಕ್ತಿಸಾಮ್ರಾಜ್ಯಂಗೆಯ್ವುತ್ತಿರಲು, ಶಿವಭಕ್ತಿಕುಲಕತಿಲಕ ಶಿವಭಕ್ತಿ ಶಿರೋಮಣಿಯೆಂಬ ಚೆನ್ನಬಸವಣ್ಣನವತರಿಸಿ ಶೈವಮಾರ್ಗಮಂ ಬಿಡಿಸಿ, ಪ್ರಾಣಲಿಂಗ ಸಂಬಂಧಮಂ ತೋರಿಸಿ, ಸರ್ವಾಂಗ ಶಿವಲಿಂಗ ಪ್ರಾಣಪ್ರಸಾದ ಭೋಗೋಪಭೋಗದ ಭೇದಮಂ ತೋರಿಸಿ, ದಾಸೋಹದ ನಿರ್ಣಯಮಂ ಬಣ್ಣವಿಟ್ಟು ಬೆಳಗಿ ತೋರಿ, ಪಾದೋದಕ ಪ್ರಸಾದಮಂ ಕೊಳ ಕಲಿಸಿ, ಗುರುಲಿಂಗಜಂಗಮದ ಘನಮಂ ತೋರಿಸಿ, ಶರಣಸತಿ ಲಿಂಗಪತಿಯೆಂಬುದಂ ಸಂಬಂಧಿಸಿ ತೋರಿ, ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣೈಕ್ಯನೆಂಬ ಷಡುಸ್ಥಲಮಂ ಸರ್ವಾಂಗದೊಳು ಪ್ರತಿಷಿ*ಸಿ ತೋರಿ ಸಲಹಿದ ಚೆನ್ನಬಸವಣ್ಣನ ತನ್ನಲ್ಲಿ ಇಂಬಿಟ್ಟುಕೊಂಡು, ಅಚ್ಚಪ್ರಸಾದಿಯಾಗಿ ಸತ್ಯಪ್ರಸಾದಿಯಾಗಿ ಸಮಯಪ್ರಸಾದಿಯಾಗಿ, ಸಂತೋಷಪ್ರಸಾದಿಯಾಗಿ ಸರ್ವಾಂಗಪ್ರಸಾದಿಯಾಗಿ, ಸಮರಪ್ರಸಾದಿಯಾಗಿ, ನಿರ್ಣಯದಲ್ಲಿ ನಿಷ್ಪನ್ನನಾಗಿ, ನಿಜದಲ್ಲಿ ನಿವಾಸಿಯಾಗಿ, ನಿರಾಳಕ್ಕೆ ನಿರಾಳನಾಗಿ, ಘನದಲ್ಲಿ ಅಗಮ್ಯನಾಗಿ, ಅಖಂಡ ಪರಿಪೂರ್ಣನಾಗಿ, ಉಪಮೆಗೆ ಅನುಪಮನಾಗಿ, ವಾಙ್ಮನಕ್ಕಗೋಚರನಾಗಿ, ಭಾವ ನಿರ್ಭಾವವೆಂಬ ಬಗೆಯ ಬಣ್ಣಕ್ಕೆ ಅತ್ತತ್ತಲೆಂದೆನಿಸಿ ನಿಃಶೂನ್ಯನೆಂದೆನಿಸಿಪ್ಪ ಸಂಗನಬಸವಣ್ಣನ ತೊತ್ತಿನ ತೊತ್ತಿನ ಮರುದೊತ್ತಿನ ಮಗ ನಾನು ಕಾಣಾ ಪ್ರಭುವೆ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಶಾಂತಿಯ ಮಾಡಹೋದಡೆ ಬೇತಾಳವಾಯಿತ್ತಯ್ಯಾ. ಸೀತಾಳದಾಪ್ಯಾಯನವಾಯಿತೆಂದಡೆ ಪರಹಿತಾರ್ಥವೆಂದು ತೋರಿದೆನೆನ್ನ ಪ್ರಾಣಲಿಂಗವನು ನೇಮವ ಮಾಡಲೆಂದು ಕೊಟ್ಟಡೆ ಕೊಂಡೋಡಿ ಹೋದನು ಅನಿಮಿಷನು. ಅಭವನ ಮಹಾಮನೆಯ ಹೊಕ್ಕಡೆ ಎನಗೆ ಹೇಯವನೊಡ್ಡಿ ಅರಸೆಂದು ಕಳುಹಿದನು. ಅಳಲಿ ಬಳಲಿ ತೊಳಲಿ ಆಡಿಹಾಡಿ ಹಂಬಲಿಸಿ, ಅನಂತ ಅವಸ್ಥೆಯಿಂದ ಲಕ್ಷದ ಮೇಲೆ ತೊಂಬತ್ತಾರುಸಾವಿರ ವಚನವ ಹಾಡಿ ಆಚಾರ ವಿಚಾರದಿಂದ ವಿಚಿತ್ರನಭೆಯವ ಕೊಟ್ಟು ಕಳುಹಿಸಿದನಯ್ಯಾ. ಗೊಹೇಶ್ವರನ ಶರಣ ತೋರಿದಡರಿದನು ಕೂಡಲಸಂಗಮದೇವರ.
--------------
ಬಸವಣ್ಣ
ಉರಿದು ಸತ್ತುದು, ಮತ್ತುರಿದು, ನಾನಾ ಭೇದಂಗಳ ಘಟಮಟಂಗಳ ಆಶ್ರಯಕ್ಕೊಡಲಾಗಿ, ಮತ್ತೆ ಭಸ್ಮವಾಗಿ, ಒಡಲಗಿಡದ ತೆರದಂತೆ. ಇಂತೀ ತ್ರಿವಿಧದ ಕುರುಹಿನ ಲಕ್ಷದ ಭೇದ ಒಪ್ಪಿರಬೇಕು, ನಿಃಕಳಂಕ ಮಲ್ಲಿಕಾರ್ಜುನಲಿಂಗದಲ್ಲಿ.
--------------
ಮೋಳಿಗೆ ಮಾರಯ್ಯ
ಅಂಥ ಬ್ರಹ್ಮಾಂಡವ ಅರುವತ್ತೇಳು ಲಕ್ಷದ ಮೇಲೆ ಸಾವಿರದಾ ಆರುನೂರಾ ಅರುವತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ವಾಯುವೇಗವೆಂಬ ಭುವನ. ಆ ಭುವನದೊಳು ಭೂತನಾಥನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಎಂಟುನೂರಾ ಮೂವತ್ತುಕೋಟಿ ರುದ್ರ-ಬ್ರಹ್ಮ-ನಾರಾಯಣರಿಹರು. ಎಂಟುನೂರಾ ಮೂವತ್ತುಕೋಟಿ ಇಂದ್ರಚಂದ್ರಾದಿತ್ಯರು, ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಇನ್ನಷ್ಟು ... -->