ಅಥವಾ

ಒಟ್ಟು 65 ಕಡೆಗಳಲ್ಲಿ , 26 ವಚನಕಾರರು , 58 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸ್ತ್ರೀಯರ ಮೂವರ ಮುಂದುಗೆಡಿಸಿತ್ತು ಮೋಹ, ಅರಿಯರವ್ವಾ, ತಾವೊಂದು ದೇಹವುಂಟೆಂದೆಂಬುದ. ಅರಿಯರವ್ವಾ ತಾವೊಂದು ರೂಪುಂಟೆಂದೆಂಬುದ. ತ್ರಿಗುಣಾತ್ಮಕವೇ ರೂಪಾಗಿ, ರೂಪು ಅರೂಪಾದಡೆ, ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ನೆರೆವ ನೆನಹಿನಲ್ಲಿಲೀಯವಾದರು.
--------------
ಸಿದ್ಧರಾಮೇಶ್ವರ
ಧರೆ ಆಕಾಶವಿಲ್ಲದಿರೆ, ಆಡುವ ಘಟಪಟ, ಚರಸ್ಥಾವರ, ಆಡುವ ಚೇತನಾದಿಗಳಿರಬಲ್ಲವೆ ? ವಸ್ತುವಿನ ಸಾಕಾರವೆ ಭೂಮಿಯಾಗಿ, ಆ ವಸ್ತುವಿನ ಆಕಾಶವೆ ಶಲಾಕೆ ರೂಪಾಗಿ, ಸಂಘಟಿಸಲಾಗಿ ಜೀವಕಾಯವಾಯಿತ್ತು. ಇಂತೀ ರೂಪಿಂಗೆ ರೂಪುಪೂಜೆ, ಅರಿವಿಂಗೆ ಜ್ಞಾನಪೂಜೆ. ಉಭಯವು ನಿಂದಲ್ಲಿ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗ, ಏನೂ ಎನಲಿಲ್ಲ.
--------------
ಶಿವಲೆಂಕ ಮಂಚಣ್ಣ
ಅರಿಕೆ ಉಳ್ಳನ್ನಕ್ಕ ಅರಿವು, ಅರಿವು ಉಳ್ಳನ್ನಕ್ಕ ಕುರುಹು, ಕುರುಹು ಉಳ್ಳನಕ್ಕ ಸತ್ಕಿೃೀ ಮಾರ್ಗಂಗಳು. ಆ ದೆಸೆಯಿಂದ ತ್ರಿವಿಧಸ್ಥಲ ರೂಪಾದವು. ಇಂತೀ ತ್ರಿವಿಧ ತ್ರಿವಿಧದಿಂದ ಷಡುಸ್ಥಲ ರೂಪಾಗಿ ಮೂಲ ಮೊಳೆಯೊಂದರಲ್ಲಿ ಹಲವು ಶಾಖೆ ಹೊಲಬಾದಂತೆ, ಇದು ನಿಜವಸ್ತುವಿನ ವಸ್ತುಕ. ಈ ಗುಣ ನಿರ್ಭಾವ ಭಾವವಾದ ಸಂಬಂಧ. ಇದು ವರ್ತಕ ಭಕ್ತಿಯ ಬ್ಥಿತ್ತಿ. ಉತ್ತರ ಪೂರ್ವದಲ್ಲಿ ಬೆರಸಿ ನಿರುತ್ತರವಾದ ಸಂಬಂಧ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
--------------
ದಾಸೋಹದ ಸಂಗಣ್ಣ
ಶ್ವೇತ ಪೀತ ಕಪೋತ ಹರಿತ ಕೃಷ್ಣ ಮಾಣಿಕವೆಂಬ ಆರು ವರ್ಣ. ಅದಕ್ಕೆ ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವ ಶ್ರೀಗುರು_ಎಂಬ ಆದು ಅಧಿದೇವತೆ, ಈ ಭೇದವನೆಲ್ಲ ತಿಳಿದು ನೋಡಿ, ಉನ್ಮನಿಯ ಜ್ಯೋತಿಯ ಬ್ರಹ್ಮರಂಧ್ರದ ಸಹಸ್ರದಳ ಪದ್ಮದ ಅಮೃತಬಿಂದುವಿನೊಳಗಣ ಪ್ರಾಣವೆ ರೂಪಾಗಿ, ಪ್ರಾಣಲಿಂಗದಲ್ಲಿ ಒಡಗೂಡಬಲ್ಲ ಗುಹೇಶ್ವರಾ ನಿಮ್ಮ ಶರಣ.
--------------
ಅಲ್ಲಮಪ್ರಭುದೇವರು
ಕಂಡು ತವಕ ಸಂಗದಿಂದಳಿವಂತೆ, ನಿನ್ನ ನೋಡುವ ನೋಟ, ಎನ್ನಯ ಮನದ ಕೂಟದಿಂದ ಹರಿಯಿತ್ತು. ಮತ್ತೆ ನಿಮ್ಮಾಸೆ ಮುಟ್ಟುವ ಭೇದ ಬಿಡದು. ನೀವು ರೂಪಾಗಿ, ನಾ ಸಾಕಾರವಾಗಿ ಉಭಯವುಳ್ಳನ್ನಕ್ಕ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ವಾಸ ರೂಪಾದೆ.
--------------
ಶಿವಲೆಂಕ ಮಂಚಣ್ಣ
ವಿಷ ಉಂಡು ದಣಿಯಲಾರದೆ, ವಿಷ ನೈವೇದ್ಯವ ಮಾಡಿಕೊಂಡ ನೋಡಾ, ಈ ದೇವಾ. ತ್ರಿಪುರಾಂತಕ ಕೆರೆಯಗುಳಿ ದಣಿಯಲಾರದೆ, ಹಲವು ಗುಡ್ಡ ರೂಪಾಗಿ ಕೆರೆಯಗುಳಿಸಿಕೊಂಡ ನೋಡಾ [ಈ ದೇವ] ಇದ್ದ ದೇವಾಲಯವಲ್ಲದೆ ಮತ್ತೆ ದೇವಾಲಯವ ಮಾಡಿಸಿಕೊಂಡ ನೋಡಾ, ಈ ದೇವ, ತಾನಾಖಂಡಮೂರ್ತಿಯ ರೂಪು ಧರಿಸದೆ, ಲಕ್ಷ ತೊಂಬತ್ತಾರು ಸಾಸಿ[ವಾಗಿ]ನೆಲಸಿಪ್ಪ ನೋಡಾ ಈ ದೇವ, ಕಪಿಲಸಿದ್ಧಮಲ್ಲಿಕಾರ್ಜುನದೇವ.
--------------
ಸಿದ್ಧರಾಮೇಶ್ವರ
ದೀಕ್ಷಾಗುರುವಾಗಿ ಬಂದು ಬ್ರಹ್ಮನ ಉತ್ಪತ್ಯವ ತೊಡೆದೆ, ಶಿಕ್ಷಾಗುರುವಾಗಿ ಬಂದು ಆತ್ಮನ ಪ್ರಕೃತಿಯ ಕೆಡಿಸಿದೆ; ಮೋಕ್ಷಗುರುವಾಗಿ ಬಂದು ತ್ರಿವಿಧ ಮಲದ ಕೆಡಿಸಿ ಮುಕ್ತನಮಾಡಿದೆ. ಎನ್ನ ಲೀಲೆಗೆ ಗುರು ರೂಪಾಗಿ, ಸುಲೀಲೆಗೆ ಲಿಂಗರೂಪಾಗಿ, ನಿಜಲೀಲೆಗೆ ಜಂಗಮರೂಪಾಗಿ, ಇಂತೀ ತ್ರಿವಿಧ ರೂಪಾಗಿ ಬ್ಥಿನ್ನನಾದೆಯಲ್ಲಾ ಭಕ್ತಿ ಕಾರಣನಾಗಿ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
--------------
ತುರುಗಾಹಿ ರಾಮಣ್ಣ
ಅಂಗಸ್ಥಲ ಮೂರು, ಲಿಂಗಸ್ಥಲ ಮೂರು, ಜ್ಞಾನಸ್ಥಲ ಮೂರೆಂಬಲ್ಲಿ, ಆತ್ಮ ಹಲವು ರೂಪಾಗಿ ತೊಳಲುತ್ತಿದೆ ನೋಡಾ. ಅಂಗಸ್ಥಲದ ಲಿಂಗ, ಲಿಂಗಸ್ಥಲದ ಜ್ಞಾನ, ಜ್ಞಾನಸ್ಥಲದ ಸರ್ವಚೇತನಾದಿಗಳೆಲ್ಲ ಎಯ್ದುವ ಪರಿಯೆಂತು? ಎಯ್ದಿಸಿಕೊಂಬುವನಾರೆಂದು ನಾನರಿಯೆ. ಹಿನ್ನಿಗೆ ದಯವಾದಡೆ ಹರಿವುದಲ್ಲದೆ ಮುಮ್ಮೊನೆಗುಂಟೆ ಉಭಯ? ಪೂರ್ವಕ್ಕೆರಡು, ಉತ್ತರಕ್ಕೆ ಒಂದೆಂದಲ್ಲಿ, ನಿಶ್ಚಯವ ತಿಳಿಯಬೇಕು, ನಿ:ಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಸಕಲ ವ್ಯಾಪಾರದಲ್ಲಿ ವ್ಯವಹರಣೆಯ ಮಾಡಿ ಬಂದು ನಿಂದ ಧರೆಯ ಮೇಲೆ ಅಯಿದು ರೂಪಾಗಿ ರೂಪಿಂಗೈದು ಕುರುಹಿನ ಭೇದದಲ್ಲಿ ಆರೋಪಿಸಿ ರೂಪು ರೂಪಿನಿಂದ ಅಳಿದು ದೃಷ್ಟವ ದೃಷ್ಟದಿಂದ ಕಾಬಂತೆ ಅರಿವ ಅರಿವಿಂದ ಭಾವವ ಭಾವದಿಂದ ತನ್ನ ತಾ ಕುರುಹಿಟ್ಟುಕೊಂಡು ತತ್ವ ನಿಶ್ಚಯವಾಗಿ ನಿಜವ ನಿನ್ನ ನೀನರಿ, ಪುಣ್ಯಾರಣ್ಯದಹನ ಬ್ಥೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಎಲೆ ದೇವಾ, ನೀನೊಬ್ಬನೆ ಹಲವು ರೂಪಾಗಿ ಬಂದೆಯಯ್ಯಾ ; ಭಕ್ತಿಯಲ್ಲಿ ಬಸವಣ್ಣನಾಗಿ ಬಂದಿರಿ ; ಮನದ ಮೈಲಿಗೆಯ ತೊಳೆಯುವಲ್ಲಿ ಮಡಿವಾಳನಾಗಿ ಬಂದಿರಿ; ಎನ್ನ ಭಕ್ತಿಗೆ ಸೊನ್ನಲಿಗೆಯಲ್ಲಿ ಕಪಿಲಸಿದ್ಧಮಲ್ಲನಾಗಿ ಬಂದಿರಿ.
--------------
ಸಿದ್ಧರಾಮೇಶ್ವರ
ಶಿವನೆ, ನಿಮ್ಮ ನಾ ಬಲ್ಲೆನು. `ಗುರುದೇವೋ ಮಹಾದೇವೋ' ಎಂದುದಾಗಿ ಶ್ರೀಗುರು ರೂಪಾಗಿ ಬಂದು ದೀಕ್ಷೆಯಂ ಮಾಡಿ ಶಿವಲಿಂಗವ ಬಿಜಯಂಗೈಸಿ ಕೊಟ್ಟಿರಿ, ಜಂಗಮವ ತೋರಿದಿರಿ. ಇದು ಕಾರಣ, ನಿಮ್ಮ ನಾ ಬಲ್ಲೆನು, ಎನ್ನನೂ ನೀವು ಬಲ್ಲಿರಿ. ನಿಮ್ಮ ಶಿಶುವೆಂದು ಕರುಣಿಸಿ ಪ್ರಸಾದವನಿಕ್ಕಿ ರಕ್ಷಸಿದಿರಿ. ಇದು ಕಾರಣದಿಂದವೂ, ನಿಮ್ಮ ನಾ ಬಲ್ಲೆನು, ಎನ್ನನೂ ನೀವು ಬಲ್ಲಿರಿ. ಮತ್ತೆ ಮರೆಮಾಡಿ, ಜ್ಞಾನವನೂ ಅಜ್ಞಾನವನೂ, ಭಕ್ತಿಯನೂ ಅಭಕ್ತಿಯನೂ ಸುಖವನೂ ದುಃಖವನೂ ಒಡ್ಡಿ ಕಾಡಿದಿರಯ್ಯಾ . ಇವೆಲ್ಲವಕ್ಕೆಯೂ ನೀವೆ ಕಾರಣ. ಇದು ಕಾರಣ, ನಿಮ್ಮ ಬೇರಬಲ್ಲವರಿಗೆ ಎಲೆಯ ತೋರಿ ಆಳವಾಡಿ ಕಾಡುವರೆ ? ಕಾಡದಿರಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ದೀಕ್ಷಾಗುರುವಾಗಿ ಬಂದು ಬ್ರಹ್ಮನ ಉತ್ಪತ್ಯವ ತೊಡೆದೆ, ಶಿಕ್ಷಾಗುರುವಾಗಿ ಬಂದು ಆತ್ಮನ ಪ್ರಕೃತಿಯ ಕೆಡಿಸಿದೆ; ಮೋಕ್ಷಗುರುವಾಗಿ ಬಂದು ತ್ರಿವಿಧ ಮಲದ ಕೆಡಿಸಿ ಮುಕ್ತನಮಾಡಿದೆ. ಎನ್ನ ಲೀಲೆಗೆ ಗುರು ರೂಪಾಗಿ, ಸುಲೀಲೆಗೆ ಲಿಂಗರೂಪಾಗಿ, ನಿಜಲೀಲೆಗೆ ಜಂಗಮರೂಪಾಗಿ, ಇಂತೀ ತ್ರಿವಿಧ ರೂಪಾಗಿ ಭಿನ್ನನಾದೆಯಲ್ಲಾ ಭಕ್ತಿ ಕಾರಣನಾಗಿ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 48 ||
--------------
ದಾಸೋಹದ ಸಂಗಣ್ಣ
ಒಬ್ಬ ಮೂರ್ತಿ ಹಲವು ರೂಪಾಗಿ ಪೂಜಿಸಿಕೊಂಡ ನೋಡಾ, ಮನವೆ: ಆಂಗವಾಗಿ ತುಪ್ಪದ ಅಭಿಷೇಕ ಕೈಕೊಂಡ; ಅಮೃತಲಿಂಗವಾಗಿ ಅಮೃತದಭಿಷೇಕ ಕೈಕೊಂಡ; ಕಪಿಲಸಿದ್ಧಮಲ್ಲಿಕಾರ್ಜುನ ಲಿಂಗವಾಗಿ ಸರ್ವಾಭಿಷೇಕ ಕೈಕೊಂಡ ನೋಡಾ ಮನವೆ.
--------------
ಸಿದ್ಧರಾಮೇಶ್ವರ
ಇಲ್ಲದ ಶಂಕೆಯನು ಉಂಟೆಂದು ಭಾವಿಸಿದಡೆ ಅದು ಕಣ್ಣ ಮುಂದೆ ರೂಪಾಗಿ ಕಾಡುತ್ತಿಪ್ಪುದು. ಇಲ್ಲದ ತನುವ ಉಂಟೆಂಬನ್ನಕ್ಕರ, ಅದೇ ಮಾಯೆಯಾಗಿ ಕಾಡುತ್ತಿಪ್ಪುದು. ನಿಃಕ್ರಿಯಾಲಿಂಗಕ್ಕೆ ಕ್ರಿಯಾಂತಲ್ಲದೆ ಆಗದೆಂಬವರ ಸಂದು ಸಂಶಯ ಮುಂದುಗೆಡಿಸುತ್ತಿಪ್ಪುದು ಕೇಳಾ. ಮನವ ಮನೆಯ ಮಾಡಿಕೊಂಡಿಪ್ಪ ಲಿಂಗದ ಅನುವನರಿಯಬಲ್ಲಡೆ, ಗುಹೇಶ್ವರಲಿಂಗ ದೂರವಿಲ್ಲ ಕೇಳಾ ಮರುಳೆ.
--------------
ಅಲ್ಲಮಪ್ರಭುದೇವರು
ಕಾಳರಾತ್ರಿಯಲ್ಲಿ ಅಂಧಕಾರದ ಕೊಟ್ಟಿಗೆಯಲ್ಲಿ ಕಾಳೆಮ್ಮೆಯ ಕರು ಹಾಳವಾಗಿ ಹಾಳಿದ್ದ ದನಿಗಂಜೆ ಕೊಟ್ಟಿಗೆ ಹಾಳಾದುದಿಲ್ಲ. ಎತ್ತ ಕಟ್ಟುವುದಿಲ್ಲ ಎಮ್ಮೆಯಕರು ಸತ್ತಲ್ಲದೆ. ಕೊಟ್ಟಿಗೆ ಹಾಳಾಗದಯ್ಯಾ. ಕರುವಿನ ಕೊರಳೂ ಅಡಗದು. ಇನ್ನೇವೆನಿನ್ನೇವೆನಯ್ಯಾ, ನಾರಾಯಣಪ್ರಿಯ ರಾಮನಾಥಾ, ನೀನೇ ಗುರು ರೂಪಾಗಿ ಬಂದೆನ್ನ ಕರಸ್ಥಲವನಿಂಬು ಗೊಳ್ಳಯ್ಯಾ.
--------------
ಗುಪ್ತ ಮಂಚಣ್ಣ
ಇನ್ನಷ್ಟು ... -->