ಅಥವಾ

ಒಟ್ಟು 29 ಕಡೆಗಳಲ್ಲಿ , 6 ವಚನಕಾರರು , 11 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹೊರವೇಷದ ವಿಭೂತಿ ರುದ್ರಾಕ್ಷಿಯನು ಧರಿಸಿಕೊಂಡು ವೇದ ಶಾಸ್ತ್ರ ಪುರಾಣ ಆಗಮದ ಬಹುಪಾಠಿಗಳು; ಅನ್ನ ಹೊನ್ನು ವಸ್ತ್ರವ ಕೊಡುವವನ ಬಾಗಿಲ ಕಾಯುವ ಮಣ್ಣ ಪುತ್ಥಳಿಯಂತಹ ನಿತ್ಯನಿಯಮದ ಹಿರಿಯರುಗಳು. ಅದೆಂತೆಂದಡೆ: ``ವೇದವೃದ್ಧಾ ಅಯೋವೃದ್ಧಾಃ ಶಾಸ್ತ್ರವೃದ್ಧಾ ಬಹುಶ್ರುತಾಃ ಇತ್ಯೇತೇ ಧನವೃದ್ಧಸ್ಯ ದ್ವಾರೇ ತಿಷ್ಠಂತಿ ಕಿಂಕರಾಃ _ಎಂದುದಾಗಿ ಎಲ್ಲ ಹಿರಿಯರು ಲಕ್ಷ್ಮಿಯ ದ್ವಾರಪಾಲಕರು_ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಭಸಿತ ರುದ್ರಾಕ್ಷಿಯನು ಧರಿಸಿ, ಸಂಪ್ರೀತಿಯಲ್ಲಿ ಬಸವಾಕ್ಷರತ್ರಯವ ನೆನೆಯುತ್ತಿಪ್ಪ ಶರಣರೇ ಇಹಲೋಕ ಪರಲೋಕ; ಭ್ರಮೆಗೆಟ್ಟು ಇರುತಿಪ್ಪ ಇಹಲೋಕವೇ ರುದ್ರಲೋಕ ತಾನು. ಕರುಣಾಕರ ಕಪಿಲಸಿದ್ಧಮಲ್ಲೇಶ್ವರನ ಶರಣರು ಇರುತಿಪ್ಪುದೇ ರುದ್ರಲೋಕ ತಾನು.
--------------
ಸಿದ್ಧರಾಮೇಶ್ವರ
ಸಹಸ್ರಮುಖ ರುದ್ರಾಕ್ಷಿಯನು ಬ್ರಹ್ಮನ ಸಂತತಿಗೆ ಕಟ್ಟಿದೆ. ಮೂರುಮುಖದ ರುದ್ರಾಕ್ಷಿಯನು ವಿಷ್ಣುವಿನ ಸಂತತಿಗೆ ಕಟ್ಟಿದೆ. ಏಕಮುಖದ ರುದ್ರಾಕ್ಷಿಯನು ರುದ್ರನ ಸಂತತಿಗೆ ಕಟ್ಟಿದೆ. ಐದು ಬಾಗಿಲಿಗೆ ಐದು ರುದ್ರಾಕ್ಷಿಯನು ಕಟ್ಟಿದೆ. ಒಂದು ರುದ್ರಾಕ್ಷಿಯನು ಒಳಹೊರಗೆ ಕಟ್ಟಿ ಕಾಯಕವ ಮಾಡುತಿರ್ದೆನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ವಿಭೂತಿ ರುದ್ರಾಕ್ಷಿಯ ಧರಿಸಿ ಷಡಕ್ಷರಿಯಂ ಜಪಿಸಿ ಗುರು ಲಿಂಗ ಜಂಗಮದ ಆದ್ಯಂತವನರಿಯದೆ ಏನೆಂದು ಪೂಜಿಸುವಿರಿ, ಆರಾಧಿಸುವಿರಿ? ಅದೆಂತೆಂದಡೆ: ನೆಲದ ಮೇಲಣ ಶಿಲೆಯ ಕಲ್ಲುಕುಟಿಕ ಕಡಿದು ಖಂಡಿಸಿ ಹರದನ ಕೈಯಲ್ಲಿ ಕೊಟ್ಟು ಮಾರಿಸಿಕೊಂಡುದು ಲಿಂಗವಾದ ಪರಿ ಹೇಂಗೆ? ಸಕಲ ವ್ಯಾಪಾರ ಅಳುವಿಂಗೆ ಒಳಗಾಗಿ ತೊಡಿಸಿ ಬರೆಸಿಕೊಂಡುದು ಮಂತ್ರವಾದ ಪರಿ ಹೇಂಗೆ? ಅಜ್ಞಾನಿ ಮೃಗ ಪಶುವಿನ ಸಗಣಿಯ ಸುಟ್ಟುದು ವಿಭೂತಿಯಾದ ಪರಿ ಹೇಂಗೆ? ಪಂಚಭೂತಿಕದಿಂದ ಜನಿಸಿದ ವೃಕ್ಷದ ಫಲ ರುದ್ರಾಕ್ಷಿಯಾದ ಪರಿ ಹೇಂಗೆ? ಸಕಲ ಜೀವವೆರಸಿ ಕರಗಿದ ಆಸಿಯ ಜಲ ತೀರ್ಥವಾದ ಪರಿ ಹೇಂಗೆ? ಸಕಲ ಪ್ರಾಣಿಗಳಾಹಾರ ಹದಿನೆಂಟು ಧಾನ್ಯ ಕ್ಷುಧಾಗ್ನಿಯಲ್ಲಿ ಜನಿಸಿ ಪಚನವಾದುದು ಪ್ರಸಾದವಾದ ಪರಿ ಹೇಂಗೆ? ಅದೆಂತೆಂಡೆ: ನಿಗಮ ಶಾಸ್ತ್ರಕ್ಕೆ ಅಗಣಿತವಾದ ನಾದಬಿಂದುವಿಗೆ ನಿಲುಕದ ನಿತ್ಯತೃಪ್ತ ಪರಂಜ್ಯೋತಿಲಿಂಗದ ವೈಭವಕ್ಕೆ ಅಂಗವಾದುದು ಈ ಗುರುವಲ್ಲಾ ಎಂದು ಅರಿದು ಆ ಲಿಂಗದ ಚೈತನ್ಯ ಈ ಲಿಂಗವಲ್ಲಾ ಎಂದು ಅರಿದು ಮಾಡೂದು ತನು ಮನ ಧನ ವಂಚನೆಯಳಿದು. ಗುರುಭಕ್ತಿ ಸನ್ನಿಹಿತವಾಗಿ ಆ ಲಿಂಗದ ವದನ ಈ ಜಂಗಮವಲಾ ಎಂದರಿದು ಮಾಡೂದು ಆ ತನು ಮನ ಧನ ವಂಚನೆಯಳಿದು. ಜಂಗಮಭಕ್ತಿ ಸನ್ನಿಹಿತವಾಗಿ ಆ ಲಿಂಗದ ಕಾಯಕಾಂತಿಯ ಬೆಳಗಿನ ಐಶ್ವರಿಯಲ್ಲ ಎಂದರಿದು ಧರಿಸೂದು ಶ್ರೀ ವಿಭೂತಿಯ. ಆ ಲಿಂಗದ ಶೃಂಗಾರದ ಹರಭರಣವಲಾ ಎಂದರಿದು ಅಳವಡಿಸೂದು ರುದ್ರಾಕ್ಷಿಯನು. ಆ ಲಿಂಗದ ಉತ್ತುಂಗ ಕಿರಣಚರಣಾಂಬುಜವಲಾ ಎಂದು ಧರಿಸೂದು, ಕೊಂಬುದು ಪಾದೋದಕವನು. ಆ ಲಿಂಗದ ನಿತ್ಯಪದ ಸಂಯೋಗ ಶೇಷವ ತಾ ಎಂದರಿದು ಕೊಂಬುದು ಪ್ರಸಾದವನು. ಇಂತಿವೆಲ್ಲವನರಿದುದಕ್ಕೆ ಸಂತೋಷವಾಗಿ ಚರಿಸುವಾತನೆ ಸದ್ಭಕ್ತ. ಆತನ ಕಾಯ ಕರಣ ಪ್ರಾಣ ಭಾವಾದಿಗಳು ಸೋಂಕಿದೆಲ್ಲವೂ ಲಿಂಗದ ಸೋಂಕು, ಲಿಂಗದ ಕ್ರೀ, ಲಿಂಗದ ದಾಸೋಹ. ಇಂತೀ ತ್ರಿವಿಧವ ಸವೆದು ಅಳಿದುಳಿದ ಸದ್ಭಕ್ತನ ಶ್ರೀಪಾದಕ್ಕೆ ನಮೋ ನಮೋ ಎಂಬೆನು ಕಾಣಾ, ಬಸವಣ್ಣಪ್ರಿಯ ನಿಃಕಳಂಕ ಸೋಮೇಶ್ವರನೆ.
--------------
ನಿಃಕಳಂಕ ಚೆನ್ನಸೋಮೇಶ್ವರ
ಆರೂ ಇಲ್ಲದ ಭೂಮಿಯಲ್ಲಿ ಬೇರಿಲ್ಲದ ರುದ್ರಾಕ್ಷಿಯ ಮರ ಪುಟ್ಟಿತ್ತು. ನೀರಿಲ್ಲದೆ ಆ ವೃಕ್ಷ ಪಲ್ಲವಿಸಿತ್ತು. ಆ ವೃಕ್ಷಕ್ಕೆ ರಕ್ತವರ್ಣದ ಒಂದು ಕುಸುಮ ಪುಟ್ಟಿತ್ತು. ಆ ಕುಸುಮದಲ್ಲಿ ಒಂದುಮುಖದ ಮೂರುಮುಖದ ಸಹಸ್ರಮುಖದ ದ್ವಿಮುಖದ ಷೋಡಶಮುಖದ ದ್ವಾದಶಮುಖದ ದಶಮುಖದ ಷಣ್ಮುಖದ ಚತುರ್ವಿಧಮುಖದ ಬ್ರಹ್ಮ ಮೊದಲಾಗಿ ರುದ್ರಾಕ್ಷಿಗಳು ಪುಟ್ಟಿದವು ನೋಡಾ. ಅಂತಪ್ಪ ರುದ್ರಾಕ್ಷಿಗಳನು ಗುರುಮುಖದಿಂದ ಪಡಕೊಂಡು ಒಂದುಮುಖದ ರುದ್ರಾಕ್ಷಿಯನು ಸ್ವರ್ಗಲೋಕದಲ್ಲಿಟ್ಟು, ಮೂರುಮುಖದ ರುದ್ರಾಕ್ಷಿಯನು ಪಾತಾಳದಲ್ಲಿಟ್ಟುಕೊಂಡು ಸಹಸ್ರಮುಖದ ರುದ್ರಾಕ್ಷಿಯನು ಮತ್ರ್ಯಲೋಕದಲ್ಲಿಟ್ಟು ದ್ವಿಮುಖದ ಉದ್ರಾಕ್ಷಿಯನು ಬೈಲಲ್ಲಿಟ್ಟು, ಷೋಡಶಮುಖದ ರುದ್ರಾಕ್ಷಿಯನು ಆಕಾಶದಲ್ಲಿಟ್ಟು ದ್ವಾದಶಮುಖದ ರುದ್ರಾಕ್ಷಿಯನು ವಾಯುವಿನಲ್ಲಿಟ್ಟು, ದಶಮುಖದ ರುದ್ರಾಕ್ಷಿಯನು ಅಗ್ನಿಯಲ್ಲಿಟ್ಟು, ಷಣ್ಮುಖದ ರುದ್ರಾಕ್ಷಿಯನು ನೀರಲ್ಲಿಟ್ಟು ಚತುರ್ಮುಖದ ರುದ್ರಾಕ್ಷಿಯನು ಭೂಮಿಯಲ್ಲಿಟ್ಟು, ಇದಲ್ಲದೆ ಕೆಲವು ರುದ್ರಾಕ್ಷಿಗಳನು ಬ್ರಹ್ಮಾಂಡದಲ್ಲಿಟ್ಟು ಇಂತೀ ಕ್ರಮದಲ್ಲಿ ರುದ್ರಾಕ್ಷಿಯನ್ನು ಧರಿಸಿ ಕಾಯಕವ ಮಾಡುತಿರ್ದೆನಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಇಂತಪ್ಪ ರುದ್ರಾಕ್ಷಿಯನು ಧರಿಸಿದ ಚೇರಮರಾಯಂಗೆ ಮೋಕ್ಷವಾಯಿತ್ತು. ಈ ರುದ್ರಾಕ್ಷಿಯಿಂದ ಮಹಾದೇವಿಯಕ್ಕಗಳಿಗೆ ಆರೂಢಪದವಾಯಿತ್ತು. ಈ ರುದ್ರಾಕ್ಷಿಯಿಂದ ಸೌಂದರನಂಬೆಣ್ಣಗಳಿಗೆ ನಿಜಲಿಂಗೈಕ್ಯಪದವಾಯಿತ್ತು. ಇಂತಿವರು ಮೊದಲಾಗಿ ಸಕಲಗಣಂಗಳಿಗೆ ರುದ್ರಾಕ್ಷಿಯಿಂದ ಶಿವಪದವಾಯಿತ್ತು. ಇಂತಿದರ ನಿರ್ಣಯವನು ಸ್ವಾನುಭಾವಗುರುಮುಖದಿಂ ತಿಳಿದು ವಿಚಾರಿಸಿಕೊಂಡು ಸರ್ವಾಂಗದಲ್ಲಿ ರುದ್ರಾಕ್ಷಿಯನು ಧರಿಸಿ ರುದ್ರಾಕ್ಷಿಮಯವಾಗಿ ಪರಶಿವಲಿಂಗದಲ್ಲಿ ಬೆರೆಯಬೇಕಲ್ಲದೆ ಇಂತಪ್ಪ ವಿಚಾರವನು ತಿಳಿಯದೆ ರುದ್ರಾಕ್ಷಿಧಾರಕರ ಕಂಡು ನೋಡಿ ಧರಿಸುವರೆಲ್ಲಾ ಹುಲಿಯ ಬಣ್ಣಕ್ಕೆ ನರಿಯು ಮೈಸುಟ್ಟುಕೊಂಡು ಸತ್ತಂತಾಯಿತ್ತು ನೋಡಾ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಮಹದಾನಂದ ಸದ್ಗುರುಮೂರ್ತಿಗೊಲಿದು ಒಂದುಮುಖದ ರುದ್ರಾಕ್ಷಿಯನಿತ್ತಡೆ, ಮುಂಗೈಯೊಳು ಧರಿಸಿ ಮಂಗಳಾಂಗನಾದೆ. ಮತ್ತೊಂದೆರಡುಮುಖದ ರುದ್ರಾಕ್ಷಿಯನು ತುನುಮನಭಾವದಲ್ಲಿ ಹೆಚ್ಚಿ ಧರಿಸಿ ಅನುನಯಾಚಾರಜ್ಞಾನಿಯಾದೆನು. ಮತ್ತೆ ನಾತ್ಕೈದುಮುಖದ ರುದ್ರಾಕ್ಷಿಯನು ನವನೀಯಸ್ಥಾನದಲ್ಲಿ ಧರಿಸಿ ಚರಿತೆಯುಳ್ಳವನಾದೆನು. ಆರುಮುಖದ ರುದ್ರಾಕ್ಷಿಯನು ಆರುಭಕ್ತಿಯಿಂದೆ ಧರಿಸಿ ಷಡಾಚಾರಸಂಪನ್ನನಾದೆನು. ಏಳೆಂಟೊಂಬತ್ತು ಹನ್ನೆರಡುಮುಖದ ರುದ್ರಾಕ್ಷಿಯನು ಮನಮೆಚ್ಚಿ ಧರಿಸಿ, ಮನ ಕರಣ ಮಹಾಪ್ರಕಾಶಮಯನಾದೆನು. ಮತ್ತೆರಡು ಹನ್ನೊಂದು ಹದಿನಾಲ್ಕು ಮುಖದ ರುದ್ರಾಕ್ಷಿಯನು ಎಂಟುಸರಗೊಳಿಸಿ ಭಾವಶುದ್ಧದಿಂದೆ ಧರಿಸಿ ಸರ್ವಾಚಾರಸಂಪತ್ತಿನೊಳಗಾದೆನು. ಮತ್ತೆ ಮೀರಿ ಉಳಿದ ರುದ್ರಾಕ್ಷಿಯನು ಸತ್ಯದಿಂದೆ ಸರ್ವಾಂಗದೊಳು ಧರಿಸಿ ನಿತ್ಯಮುಕ್ತನಾದೆನು ಚನ್ನಗುರು ನಿರಂಜನ ಚನ್ನಬಸವಲಿಂಗ ಸನ್ನಿಹಿತ.
--------------
ದೇಶಿಕೇಂದ್ರ ಸಂಗನಬಸವಯ್ಯ
ಭಸಿತ ರುದ್ರಾಕ್ಷಿಯನು, ಎಸೆವ ಪಂಚಾಕ್ಷರಿಯನು, ಅಸಮ ಶ್ರೀಗುರುಲಿಂಗಜಂಗಮದತಿಶಯದ ಪಾದೋದಕ ಪ್ರಸಾದವನು ಅರುಹಿ, ಎನ್ನ ಸರ್ವಾಂಗದಲ್ಲಿ ಸಂಬಂಧಿಸಿ ಸಲಹಿದಾತನು ಶ್ರೀಗುರು ಪ್ರಭುನ್ಮುನೀಶ್ವರ.
--------------
ಕೊಟಾರದ ಸೋಮಣ್ಣ
ಇಂತಪ್ಪ ರುದ್ರಾಕ್ಷಿಯನು ಅಂತರಂಗ ಬಹಿರಂಗದಲ್ಲಿ ಧರಿಸಿ ಆಚರಿಸಲರಿಯದೆ ಬಹಿರಂಗದಲ್ಲಿ ಕ್ರೀಯವಿಟ್ಟು ಹಸ್ತ, ತೋಳು, ಕಂಠ, ಕರ್ಣ, ಉತ್ತಮಾಂಗ, ಶಿಖೆ, ಕಕ್ಷೆಯಲ್ಲಿ ಧರಿಸಿದವರಿಗೆ ಪುಣ್ಯಫಲಪ್ರಾಪ್ತಿಯಾಗುವುದಲ್ಲದೆ ಭವ ಹಿಂಗದು ನೋಡಾ. ಇಂತಪ್ಪ ಮೂಢಾತ್ಮರು ರುದ್ರಾಕ್ಷಿಯನು ಧರಿಸಿದ ಆಚಾರವೆಂತೆಂದಡೆ: ಔಡಲಗಿಡಕ್ಕೆ ಔಡಲಗೊನಿ ಬಿಟ್ಟಂತಾಯಿತು ನೋಡಾ. ಇಂತಪ್ಪ ನಿರ್ಣಯವನು ಸುಜ್ಞಾನಿ ಶರಣನು ತನ್ನ ಪರಮಜ್ಞಾನದಿಂದ ವಿಸರ್ಜಿಸಿ, ಹಿಂದೆ ಹೇಳಿದ ವಚನದ ನಿರ್ಣಯವನು ತಿಳಿದು, ತನ್ನ ಸರ್ವಾಂಗದಲ್ಲಿ ರುದ್ರಾಕ್ಷಿಯ ಧರಿಸಿ ಚಿದ್ಘನಲಿಂಗದಲ್ಲಿ ನಿರ್ವಯಲಾದನು ನೋಡಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ತನ್ನಿಂದಾದ ಚನ್ನರುದ್ರಾಕ್ಷಿಯನು ಮುನ್ನ ಧರಿಸಿದ ಮುನಿಜನ ದೇವತಾದಿಗಳೆಲ್ಲ ಮನ್ನಣೆಯ ಫಲಪದವ ಪಡೆದು ಸುಖಿಯಾಗಿರ್ದರು. ಮತ್ತೆ ಸಕಲರೊಲಿದು ಧರಿಸಿ ಇಚ್ಫೈಸಿ ಪಡೆದರಗಣಿತ ಸೌಖ್ಯವನು. ಇಂತಪ್ಪ ಮಹಾಘನ ರುದ್ರಾಕ್ಷಿಯನು ಹಗಲಿರುಳು ಬಿಡದೆ ಧರಿಸಿ ಪರಮಸುಖಿಯಾಗಿರ್ದೆನು ನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಶ್ರೀವಿಭೂತಿ ರುದ್ರಾಕ್ಷಿಯನು ಧಾತಪ್ಪ ಬಸವಾಕ್ಷರತ್ರಯವನಾರಯ್ಯ ಅರಿದು ಉಚ್ಚರಿಸುವರು ಅವರಂಘ್ರಿಯಂಬುಜದಾಮೋದಭ್ರಮ ಆನಯ್ಯ. ಅವರು ಆ ನಾದಬ್ರಹ್ಮವು ತಾವಾಗಿಪ್ಪರಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
-->