ಅಥವಾ

ಒಟ್ಟು 33 ಕಡೆಗಳಲ್ಲಿ , 4 ವಚನಕಾರರು , 33 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸರ್ವಮಯ ಲಿಂಗಾಂಕಿತಸೀಮೆಯಾಗಬೇಕೆಂಬಲ್ಲಿ ಆ ಘನವ ತಿಳಿದು ತನ್ನ ತಾನೆ ವಿಚಾರಿಸಿಕೊಂಬಲ್ಲಿ ಸ್ಥೂಲತನುವಿನಲ್ಲಿ ಕಾಬ ಕಾಣಿಕೆ ದೃಷ್ಟವಾಗಿ ಲಿಂಗಾಂಕಿತ. ಸೂಕ್ಷ್ಮತನುವಿನಲ್ಲಿ ಕಾಬ ಕಾಣಿಕೆ ಎಚ್ಚತ್ತಲ್ಲಿ ಬಯಲಾಯಿತ್ತು ಲಿಂಗಾಂಕಿತ. ಕಾರಣದಲ್ಲಿ ಪ್ರಮಾಣಿಸುವುದಕ್ಕೆ ಲಿಂಗಾಂಕಿತಕ್ಕೆ ಒಡಲಾವುದು ? ಇದ ನಾನರಿಯೆ, ನೀವೆ ಬಲ್ಲಿರಿ. ಜಾಗ್ರ, ಸ್ವಪ್ನ, ಸುಷುಪ್ತಿಗಳಲ್ಲಿ ಕಾಬ ಲಿಂಗಾಂಕಿತದ ಭೇದ ನೇಮವಾವುದು ? ಜಾಗ್ರದಲ್ಲಿ ತೋರುವ ನಿಜ ಸ್ವಪ್ನಕ್ಕೊಡಲಾಗಿ, ಸ್ವಪ್ನದಲ್ಲಿ ತೋರುವ ನಿಜ ಸುಷುಪ್ತಿಗೊಡಲಾಗಿ, ಉಭಯದಲ್ಲಿ ಕೂಡಿದ ಕೂಟ ತನ್ಮಯಲಿಂಗಾಂಕಿತವಾಯಿತ್ತು. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ಲೇಪವಾಗಿ.
--------------
ಅಕ್ಕಮ್ಮ
ಕಾಯಶೂನ್ಯ, ಜೀವಶೂನ್ಯ, ಪ್ರಾಣಶೂನ್ಯವೆಂದೆಂಬರು, ಅದೆಂತಯ್ಯ ? ಮನ ಮನನ ಮನನೀಯಂಗಳಲ್ಲಿ ಮಂತ್ರಲೀಯವಾದುದೆ ಕಾಯಶೂನ್ಯ. ಆ ಮಂತ್ರ ಪಿಂಡಾಂಡದಲ್ಲಿ, ಪರಿಪೂರ್ಣಭೇದ ತೋರಿದಾಗಲೆ ಜೀವಶೂನ್ಯ. ಆ ಪ್ರಭೆಯ ಪರಿಣಾಮದಲ್ಲಿ ಜೀವನ ಉಪಾದ್ಥಿ ನಷ್ಟವಾಗಿ, ಜೀವ ಪರಮ ಸಂಯೋಗವೆಂಬ ಸಂದೇಹವಳಿದಾಗಲೇ ಪ್ರಾಣಶೂನ್ಯ, ಇದು ತ್ರಿವಿಧಶೂನ್ಯ, ಐಘಟದೂರ ರಾಮೇಶ್ವರಲಿಂಗದಲ್ಲಿ ನಿಲುಕಡೆ.
--------------
ಮೆರೆಮಿಂಡಯ್ಯ
ಸರ್ವ ಇಂದ್ರಿಯಗಳ ಒಂದು ಮುಖವ ಮಾಡಿ ಸರ್ವ ಮೋಹಂಗಳಲ್ಲಿ ನಿರ್ಮೋಹಿತನಾಗಿ, ಅಂಗದಿಚ್ಫೆಯ ಮರೆದು ವ್ರತವೆಂಬ ಆಚಾರಲಿಂಗವ ಧರಿಸಬೇಕಲ್ಲದೆ ತನುವಿಗೆ ಬಂದಂತೆ ಮುಟ್ಟಿ, ಮನಕ್ಕೆ ಬಂದಂತೆ ಹರಿದು, ನಾನಿಲ್ಲಿ ಒಬ್ಬ ಶೀಲವಂತನಿದ್ದೇನೆ ಎಂದು ಕಲಹಟ್ಟಿಯಂತೆ ಕೂಗುತ್ತ ಕೊರಚುತ್ತ ಅಲ್ಲಿ ಬೊಬ್ಬಿಡುತ್ತ ಶೂಲವನೇರುವ ಕಳ್ಳನಂತೆ ಬಾಹ್ಯದಲ್ಲಿ ಬಾಯಾಲುವ, ಮನದಲ್ಲಿ ಸತ್ತೆಹೆನೆಂಬ ಸಂದೇಹದವನಂತೆ ಸಾಯದೆ, ಹೊರಗಣ ಕ್ರೀ ಶುದ್ಭವಾಗಿ, ಒಳಗಳ ಆತ್ಮ ಶುದ್ಧವಾಗಿ, ಉಭಯ ಶುದ್ಧವಾಗಿಪ್ಪುದು ಪಂಚಾಚಾರ ನಿರುತ, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ಸರ್ವಾಂಗಭರಿತನು
--------------
ಅಕ್ಕಮ್ಮ
ಎಂಬತ್ತುನಾಲ್ಕುಲಕ್ಷ ಜೀವವ್ರತ. ಐವತ್ತಾರು ನೇಮವ್ರತ. ಅರುವತ್ತನಾಲ್ಕು ಶೀಲವ್ರತ. ಮೂವತ್ತಾರು ಆಚಾರವ್ರತ. ತ್ರಿವಿಧ ಕ್ರೀಭಾವ ನೇಮವ್ರತ. ಇಂತಿವರಲ್ಲಿ ಶುದ್ಧಾತ್ಮನಾಗಿ ಅರಿದುದೇ ಜೀವನ್ಮುಕ್ತವ್ರತ. ಐಘಟದೂರ ರಾಮೇಶ್ವರಲಿಂಗದಲ್ಲಿ ಸರ್ವ ಅವಧಾನಿಯ ಕ್ರೀ ಶುದ್ಧತೆ.
--------------
ಮೆರೆಮಿಂಡಯ್ಯ
ವ್ರತಾಚಾರವೆಂಬುದು ತನಗೊ, ತನ್ನ ಸತಿಗೊ, ಇದಿರ ಭೂತಹಿತಕೊ ? ತಾನರಿಯದೆ ತನಗೆ ವ್ರತ ಉಂಟೆ ? ವ್ರತಾಚಾರಿಗಳ ಗರ್ಭದಿಂದ ಬಂದ ಶಿಶುವ ಅನ್ಯರಿಗೆ ಕೊಡಬಹುದೆ ? ವ್ರತಾಚಾರವಿಲ್ಲದವರಲ್ಲಿ ತಂದು ವ್ರತವ ಮಾಡಬಹುದೆ ? ಇಂತೀ ತಮ್ಮ ಕ್ರೀವಂತರಲ್ಲಿಯೆ ತಂದು ಕ್ರೀವಂತರಲ್ಲಿಯೆ ಕೊಟ್ಟು ಉಭಯ ಬ್ಥಿನ್ನವಿಲ್ಲದೆ ಇಪ್ಪುದೆ ಸಜ್ಜನವ್ರತ, ಸದಾತ್ಮ ಯುಕ್ತಿ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ಮುಕ್ತಿ.
--------------
ಅಕ್ಕಮ್ಮ
ಸರ್ವವೆಲ್ಲವೂ ವಸ್ತುವಿನ ಅದ್ಥೀನವಾದಲ್ಲಿ, ಬೇರೊಂದು ತಟ್ಟುವ ಮುಟ್ಟುವ ಠಾವುಂಟೆ ? ಸರ್ವಭಾವಜ್ಞಗೆ ಬ್ಥಿನ್ನಭಾವವಿಲ್ಲ, ಐಘಟದೂರ ರಾಮೇಶ್ವರಲಿಂಗದಲ್ಲಿ.
--------------
ಮೆರೆಮಿಂಡಯ್ಯ
ಎನ್ನ ವ್ರತದ ನೇಮ ಅಡಿ ಆಕಾಶದೊಳಗಾದ ವ್ರತಸ್ಥರು ಕೇಳಿರೆ. ನಮ್ಮ ನಿಮ್ಮ ವ್ರತಕ್ಕೆ ಸಂಬಂಧವೇನು ? ಲೆಕ್ಕವಿಲ್ಲದ ವ್ರತ, ಕಟ್ಟಳೆಯಿಲ್ಲದ ನೇಮ, ಇವನೆಷ್ಟು ಮಾಡಿದಡೆ ಏನು ? ತನ್ನ ಮನೆಗೆ ಕಟ್ಟಳೆ ಇರಬೇಕು. ಎನ್ನ ಲಿಂಗವಂತೆಗೆ ಸೂತಕಮಾಸ ತಡೆದಲ್ಲಿ, ಗರ್ಭವೆಂಬುದು ತಲೆದೋರಿದಲ್ಲಿಯೆ ಆತ್ಮ ಚೇತನಿಸುವನ್ನಕ್ಕ ಆಕೆಯ ಉದರದ ಮೇಲೆ ನಿಹಿತ ಲಿಂಗವಿರಬೇಕು. ನವಮಾಸ ತುಂಬಿ ಆಕೆಯ ಗರ್ಭದಿಂದ ಉಭಯಜಾತತ್ವವಾಗಲಾಗಿ ಚೇತನ ಬೇರಾದಲ್ಲಿ ಗುರುಕರಜಾತನಮಾಡಬೇಕು. ಇಂತೀ ಇಷ್ಟರ ಕ್ರೀಯಲ್ಲಿ ಸಂತತ ವ್ರತ ಇರಬೇಕು. ಕಂಥೆಯ ಬಿಡುವನ್ನಕ್ಕ ಶರಣರ ಕೈಯಲ್ಲಿ ಅಂತಿಂತೆಂಬ ಶಂಕೆಯ ಹೊರಲಿಲ್ಲ. ಇಂತೀ ವ್ರತದಲ್ಲಿ ನಿಶ್ಶಂಕನಾಗಬಲ್ಲಡೆ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ಸಮಶೀಲವಂತನೆಂಬೆ.
--------------
ಅಕ್ಕಮ್ಮ
ಭಾಜನಕ್ಕೆ ಸರ್ವಾಂಗವ ಬಾಸಣಿಸುವಾಗ ಅದು ಆ ಕುಂಭಕ್ಕೊ, ತನ್ನಂಗಕ್ಕೊ ಎಂಬುದನರಿತು, ಸರ್ವಾಂಗ ಪಾವಡವ ಕಟ್ಟುವ ವಿವರ ; ಮನ, ಬುದ್ಧಿ, ಚಿತ್ತ, ಅಹಂಕಾರ ಎಂಬ ಚತುರ್ಭಾವದ ಸೆರಗಿನಲ್ಲಿ ಗುಹ್ಯೇಂದ್ರಿಯವಂ ಕಳೆದು, ಜಿಹ್ವೇಂದ್ರಿಯವೆಂಬ ಅಂಗ ಭಾಜನಕ್ಕೆ ಸರ್ವಾಂಗ ಪಾವಡವಂ ಕಟ್ಟಿ, ಮಣ್ಣೆಂಬ ಆಸೆಯ ಬಿಟ್ಟು, ಹೊನ್ನೆಂಬ ಆಸೆಯ ಬಿಟ್ಟು, ಹೆಣ್ಣೆಂಬ ಮೋಹದಲ್ಲಿ ಮಗ್ನವಾಗದೆ, ಮಣ್ಣೆಂಬ ಆಸೆಯ ಗುರುವಿನಲ್ಲಿ, ಹೊನ್ನೆಂಬ ಆಸೆಯ ಲಿಂಗದಲ್ಲಿ, ಹೆಣ್ಣೆಂಬ ಮೋಹವ ಜಂಗಮದಲ್ಲಿ, ಕೊಡುವ ವ್ರತವನರಿಯದೆ ಆಚಾರ ಅಂಗದಲ್ಲಿ ಇಂತೀ ವ್ರತನೇಮವಲ್ಲದ ಮಣ್ಣ ಮಡಕೆಯ ಗನ್ನದಲ್ಲಿ ಕಟ್ಟಿದಡೆ ಪ್ರಸನ್ನನ ವ್ರತದಣ್ಣಗಳೆಲ್ಲರು ಇದ ಚೆನ್ನಾಗಿ ತಿಳಿದು ನೋಡಲಾಗಿ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ವ್ರತ ನೇಮ ಹರಿತವಾಯಿತ್ತು.
--------------
ಅಕ್ಕಮ್ಮ
ಆಲಿಕಲ್ಲ, ನೀರೊಳಗೆ ಬೆರಸಿದಂತೆ, ಉಪ್ಪಿನ ಹರಳ, ಉದಕದೊಳಗೆ ಹಾಕಿದಂತೆ, ಕರ್ಪುರದ ಹಣತೆಯಲ್ಲಿ, ಜ್ಯೋತಿಯ ಬೆಳಗ ಬೆರಸಿದಂತೆ, ಮಹಾಲಿಂಗ ಚೆನ್ನ ರಾಮೇಶ್ವರಲಿಂಗದಲ್ಲಿ ಬೆರಸಿ, ಎರಡಳಿದಡಗಿದ ನಿಜಲಿಂಗೈಕ್ಯನು.
--------------
ಮೈದುನ ರಾಮಯ್ಯ
ಕಾಯ ಕಾಯವ ನಂಗಿ, ಮನ ಮನವ ನುಂಗಿ, ಘನ ಘನವ ನುಂಗಿ, ತನ್ಮಯ ತದ್ರೂಪಾಗಿ ನಿಂದಲ್ಲಿ, ವಿರಳವ ಅವಿರಳ ನುಂಗಿ, ಸೆರಗುದೋರದ ಕುರುಹು ಅವತಾರ ಸಾಧನ ಸಾಧ್ಯ ಗುಪ್ತನ ಭಕ್ತಿ, ಮತ್ರ್ಯದ ಮಣಿಹ ಸಂದಿತ್ತು. ವೃಷಭೇಶ್ವರ ಮಂದಿರಕ್ಕೆ ಬಂದು ಎನ್ನ ಸಂದೇಹ ಸಂಕಲ್ಪವಂ ಬಿಡಿಸಿ ಪ್ರಕಟವೆ ಕಡೆಯೆಂದು ಅಂದು ಎಂದು ಬಂದುದು ಸಂದಿತ್ತು ಅಂಗಪೂಜೆ ಲಿಂಗವೆ ಎಂಬುದಕ್ಕೆ ಮುನ್ನವೆ ಐಕ್ಯ, ಅವಸಾನ ರಾಮೇಶ್ವರಲಿಂಗದಲ್ಲಿ.
--------------
ಗುಪ್ತ ಮಂಚಣ್ಣ
ಬೆಳ್ಳೆ, ಭಂಗಿ, ನುಗ್ಗಿ, ಉಳ್ಳೆ ಮೊದಲಾದವನೆಲ್ಲವ ಬಿಡಬೇಕು. ಬೆಳ್ಳೆಯಲ್ಲಿ ದೋಷ, ಭಂಗಿ ನುಗ್ಗಿಯಲ್ಲಿ ಲಹರಿ, ಉಳ್ಳೆಯಲ್ಲಿ ದುರ್ಗುಣ, ವ್ರತ ಲಿಂಗಕ್ಕೆ ಸಲ್ಲವಾಗಿ ಈ ನಾಲ್ಕು ಬಂದ ಬಂದಲ್ಲಿ ದೋಷವುಂಟು. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ವ್ರತಕ್ಕೆ ಅಹುದಲ್ಲ ಅಂಬುದನರಿಯಬೇಕು.
--------------
ಅಕ್ಕಮ್ಮ
ಬಂದುದ ಸಾಕೆನ್ನದೆ, ಬಾರದುದ ತಾ ಎನ್ನದೆ, ಗಡಿಗೆ ಬಟ್ಟಲು ನಮ್ಮೆಡೆಯಲ್ಲಿ ಒಡಗೂಡಿ ಸುರಿಯೆನ್ನದೆ, ಮಂತ್ರ ಭಿನ್ನವಾಗಿ, ಮತ್ತಾರಿಗು ಸಂಚರಿಸದೆ, ಕೆಲಬಲದಿಂದ ಅವರಿಗೆ ಅದು ನೇಮವೆಂದೆನಿಸದೆ ಲಿಂಗಕ್ಕೆ ಬಂದು ಸಂದುದ ಆನಂದದಿಂದ ಸ್ವೀಕರಿಸಿ ನಿಂದುದೆ ಭರಿತಾರ್ಪಣ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ.
--------------
ಅಕ್ಕಮ್ಮ
ಸಮಶೀಲಸಂಪಾದಕರು ಬಂದಿದ್ದಲ್ಲಿ ತಮ್ಮ ತಮ್ಮನೆಯಲ್ಲಿ ವಿಶೇಷ ದ್ರವ್ಯವ ಸಂಚವಿರಿಸಿ ಇದ್ದುದನಿದ್ದಂತೆ ಎಡೆಮಾಡೆಂದಡೆ ಬದ್ಧಕತನವಲ್ಲದೆ ಆ ವ್ರತ ನಿರ್ಧರವೆ ? ಆ ಹರಶರಣರು ಮನೆಯಲ್ಲಿ ಬಂದಿರೆ ಅವರ ಮಲಗಿಸಿ, ತಾ ತನ್ನ ಸತಿಯ ನೆರೆದಡೆ, ಅವರ ನಿಲಿಸಿ ತಾ ಮತ್ತೊಂದಕ್ಕೆ ಹೋದಡೆ, ಶರಣಸಂಕುಳಕ್ಕೆ ಹೊರಗು, ಅವರಲ್ಲಿ ಮುಯ್ಯಾಂತು ಬೀಳ್ಕೊಂಡು ತನ್ನ ಸಂದೇಹ ಒಂದೂ ಇಲ್ಲದಂತೆ ಉಭಯವ ತಿಳಿದು ಮಾಡುವ ಮಾಟಕ್ಕೆ ಹಿಡಿದ ವ್ರತಕ್ಕೆ ಭಾವಶುದ್ಧವಾಗಿ ಇಪ್ಪುದು ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ವ್ರತಸಂಪಾದನೆ.
--------------
ಅಕ್ಕಮ್ಮ
ಭಕ್ತರ ಮನೆಯಲ್ಲಿ ಭಕ್ತರು ಬಂದು ಕಳವು ಪಾರದ್ವಾರವ ಮಾಡಿದರೆಂದು ಹೊರಹಾಯ್ಕಿ ಎಂದು ನುಡಿಯಬಹುದೆ ? ಒಡೆಯರು ಭಕ್ತರ ನಿಂದೆಯ ಕೇಳೆನೆಂದು ತನ್ನೊಡವೆ ಒಡೆಯರು ಭಕ್ತರ ದ್ರವ್ಯವೆಂದು ಭಾವಿಸಿದಲ್ಲಿ ಮತ್ತೊಬ್ಬ ಅರಿಯದ ತುಡುಗುಣಿ ಮುಟ್ಟಿದಡೆ ಅವ ಕೆಡುವ. ಆಚಾರಕ್ಕೆ ಹೊರಗು, ತಾನರಿಯದಂತಿರಬೇಕು ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ವ್ರತಸ್ಥನ ನೇಮ.
--------------
ಅಕ್ಕಮ್ಮ
ಹೆಣ್ಣು ಹೊನ್ನು ಮಣ್ಣಿಗಾಗಿ ವ್ರತವೆಂಬ ನೇಮವ ಮಾಡಿಕೊಳ್ಳಬಹುದೆ ? ಕೂಲಿಗೆ ಬಳಿನೀರ ಕುಡಿದಡೆ ಅದಾರ ಮುಟ್ಟುವುದು ? ವಾಸಿಗೆ ಮೂಗನರಿದುಕೊಂಡಡೆ ನಾಚಿಕೆ ಯಾರಿಗೆಂಬುದನರಿದ ಮತ್ತೆ ಇಂತಿವ ಹೇಸಿ ಶೀಲವಂತನಾಗಬೇಕು. ಇಂತೀ ಗುಣಕ್ಕೆ ನಾಚಿ ನೇಮವ ಮಾಡಿಕೊಳ್ಳಬೇಕು. ಇಂತೀ ವ್ರತದ ಆಗುಚೇಗೆಯನರಿದ ಮತ್ತೆ ಇದಿರ ಬಯಕೆಯ ಬಿಟ್ಟು ತನ್ನ ತಾನರಿಯಬೇಕು ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ.
--------------
ಅಕ್ಕಮ್ಮ
ಇನ್ನಷ್ಟು ... -->