ಅಥವಾ

ಒಟ್ಟು 21 ಕಡೆಗಳಲ್ಲಿ , 4 ವಚನಕಾರರು , 21 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಮುಕಗೆ ದುರ್ಜನಗೆ ಕಪಟಿಗೆ ಹೇಮಚೋರಗೆ ಕಾರುಕ ಸಮ್ಮಗಾರಗೆ ಆವ ಭಾವದ ವ್ರತವ ಮಾಡಲಿಕ್ಕೆ, ಅವ ಭಾವಿಸಿ ನಡೆಯಬಲ್ಲನೆ? ಕಾಗೆಗೆ ರಸಾನ್ನ ಮುಂದಿರಲಿಕೆ, ಹರಿವ ಕೀಟಕಂಗೆ ಸರಿವುದಲ್ಲದೆ ಮತ್ತೆ ಅದು ಸವಿಯಸಾರವ ಬಲ್ಲುದೆ? ಇಂತೀ ಇವು ತಮ್ಮ ಜಾತಿಯ ಲಕ್ಷಣವ ಕೊಂದಡೂ ಬಿಡವಾಗಿ, ವ್ರತಾಚಾರವ ಸಂಬಂದ್ಥಿಸುವಲ್ಲಿ ಶರಣರೆಲ್ಲರ ಕೂಡಿ, ಈ ಗುಣ ಅಹುದು ಅಲ್ಲ ಎಂದು ಹೇಳಿ, ಜಾತಿವರ್ಗದ ಗುಣವ ನೀಕರಿಸಿ ಬಿಡಿಸಿ, ಸುಜಾತಿಯ ಅರಸಿನ ಪಟ್ಟವಂ ಕಟ್ಟಿ ಶರಣರೆಲ್ಲರು ನಿಹಿತಾಚಾರದಲ್ಲಿ ಸಹಭೋಜನವಂ ಮಾಡಿ ಇಂತೀ ಗುಣನಿಹಿತವ್ರತ ಅಜಾತನ ಒಲುಮೆ, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ನಿಹಿತದ ಶೀಲದ ನೇಮ.
--------------
ಅಕ್ಕಮ್ಮ
ಧೂಳುಪಾವಡವಾದಲ್ಲಿ ಆವ ನೀರನು ಹಾಯಬಹುದು. ಕಂಠಪಾವಡದಲ್ಲಿ ಉರದಿಂದ ಮೀರಿ ಹಾಯಲಾಗದು. ಸರ್ವಾಂಗಪಾವಡದಲ್ಲಿ ಹೊಳೆ ತಟಾಕ ಮಿಕ್ಕಾದ ಬಹುಜಲಂಗಳ ಮೆಟ್ಟಲಾಗದು. ಅದೆಂತೆಂದಡೆ ಆ ಲಿಂಗವೆಲ್ಲವು ವ್ರತಾಚಾರ ಲಿಂಗವಾದ ಕಾರಣ. ತಮ್ಮ ಲಿಂಗದ ಮಜ್ಜನದ ಅಗ್ಗಣಿಯಲ್ಲದೆ ತಮ್ಮಂಗವ ಮುಟ್ಟಲಾಗದು. ಇಂತೀ ಇವು ತಾವು ಕೊಂಡ ವ್ರತದಂಗದ ಭೇದವಲ್ಲದೆ ನಾನೊಂದು ನುಡಿದುದಿಲ್ಲ. ಇದಕ್ಕೆ ನಿಮ್ಮ ಭಾವವೆ ಸಾಕ್ಷಿ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ವ್ರತದಂಗದ ಭೇದ.
--------------
ಅಕ್ಕಮ್ಮ
ಕೂಪಚಿಲುಮೆ ಬಹುಜಲಂಗಳಲ್ಲಿ ಸ್ವೀಕರಿಸಿಕೊಂಬುದು ಅದೇತರ ಶೀಲ ತನು ಕರಗದೆ, ಮನ ಮುಟ್ಟದೆ, ಆಗಿಗೆ ಮುಯ್ಯಾಂತು ಚೇಗಿಗೆ ಹಲುಬುತ್ತ, ಸುಖದುಃಖವೆಂಬ ಉಭಯವರಿಗಾಣದೆ, ಅಂದಂದಿಗೆ ಆಯು ಸಂದಿತ್ತೆಂದಿರಬೇಕು. ಆ ಗುಣ ಶಿವಲಿಂಗ ಖಂಡಿತನೇಮ, ಈ ಸಂಗವೆ ಎನಗೆ ಸುಖ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ಕೂಟ.
--------------
ಅಕ್ಕಮ್ಮ
ಉಂಬೆಡೆಯಲ್ಲಿ ಭರಿತಾರ್ಪಣವೆಂದು ಮಿಕ್ಕಾದ ವಿಷಯೇಂದ್ರಿಯಂಗಳಲ್ಲಿ ಭರಿತಾರ್ಪಣದ ಸಂದನಳಿದು ಅರ್ಪಿಸಬಲ್ಲಡೆ, ಆ ಗುಣ ಉಭಯಭರಿತಾರ್ಪಣಭೇದ. ಇದನರಿಯದೆ ಲಿಂಗಕ್ಕೆ ಸಂದಲ್ಲದೆ, ತಾನೊಂದು ದ್ರವ್ಯವ ಮುಟ್ಟೆನೆಂಬ ಸಂದೇಹದ ಸಂಕಲ್ಪವಲ್ಲದೆ, ಭರಿತಾರ್ಪಣಾಂಗಿಯ ಲಿಂಗಾಂಗಿಯ ಮುಟ್ಟಲ್ಲ. ಭರಿತಾರ್ಪಣವಾವುದೆಂದಡೆ : ತಾ ಕಂಡುದ ಮುಟ್ಟದೆ, ತಾ ಮುಟ್ಟಿದುದನರ್ಪಿಸದೆ, ತಾ ಕಾಣದುದ ಮುನ್ನವೆ, ತಾ ಕಂಡುದ ಮುಟ್ಟದ ಮುನ್ನವೆ ಅರ್ಪಿತವಾದುದ ದೃಷ್ಟಾಂತವನರಿದು, ಭರಿತಾರ್ಪಣವೆಂಬ ಪರಿಪೂರ್ಣತ್ವವಂ ಕಂಡು, ಅಂಗಸಹಿತವಾಗಿ ಮುಟ್ಟದೆ, ಮನಸಹಿತವಾಗಿ ನೆನೆಯದೆ, ಇಂದ್ರಿಯಂಗಳು ಸಹಿತವಾಗಿ ಒಂದನೂ ಅನುಭವಿಸದೆ ಲಿಂಗವೆ ಅಂಗವಾಗಿ, ಅಂಗವೆ ಲಿಂಗವಾಗಿ ಅಂದಂದಿಗೆ ಕಾಯ ಹಿಂಗಬೇಕೆಂಬುದನರಿದಾಗವೆ ಭರಿತಾರ್ಪಣ, ಚೆನ್ನ ಚೆನ್ನ ಕೂಡಲ ರಾಮೇಶ್ವರಲಿಂಗದ ಸಂಗ.
--------------
ಭರಿತಾರ್ಪಣದ ಚೆನ್ನಬಸವಣ್ಣ
ಲವಣವ ಕೊಂಬುದೆಲ್ಲವು ಒಂದೆ ಶೀಲ. ಸರ್ವ ಸಪ್ಪೆ ಎಂಬುದು ಒಂದೆ ಶೀಲ. ಇವೆಲ್ಲವ ವಿಚಾರಿಸಿ, ತಟ್ಟುಮುಟ್ಟಿಗೆ ಬಾರದೆ ತೊಟ್ಟುಬಿಟ್ಟ ಹಣ್ಣಿನಂತೆ ನೆಟ್ಟನೆ ವ್ರತವ ಕೂಡುವುದು ಮೂರನೆಯ ಶೀಲ. ಮೂರು ಕೂಡಿ ಒಂದಾಗಿ ನಿಂದುದು, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ಶೀಲ.
--------------
ಅಕ್ಕಮ್ಮ
ವ್ರತಾಚಾರವೆಂದು ಹೆಸರಿಟ್ಟುಕೊಂಡಿಪ್ಪರಯ್ಯಾ ! ವ್ರತವೆಂದೇನು ಆಚಾರವೆಂದೇನು? ಅನ್ಯರು ಮಾಡಿದ ದ್ರವ್ಯವನೊಲ್ಲದಿಪ್ಪುದು ವ್ರತವೆ? ಆರನು ಕರೆಯದಿಪ್ಪುದು ಆಚಾರವೆ? ಪರಸ್ತ್ರೀ ಪರಧನಂಗಳಲ್ಲಿ ನಿಂದೆಗೆ ಒಡಲಾಗದಿದ್ದುದೆ ವ್ರತ. ಸರ್ವಭೂತಹಿತನಾಗಿ ದಯವಿದ್ದುದೆ ಆಚಾರ. ಇಂತೀ ಕ್ರೀಯನರಿತು, ಕ್ರೀಯ ಶುದ್ಧತೆಯಾಗಿ ನಿಂದುದೆ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ನೇಮ.
--------------
ಅಕ್ಕಮ್ಮ
ತನ್ನ ಸ್ವಕಾರ್ಯದಿಂದ ಮಾಡುವ ಭಕ್ತನ ವ್ರತವೆ ವ್ರತ; ಆತನಾಚಾರವೆ ಸತ್ಯ; ಆತನಾಶ್ರಯದ ಶೇಷವೆ ಸಂಜೀವನಪ್ರಸಾದ. ಆತನ ರೂಪೆ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ನಷ್ಟರೂಪು.
--------------
ಅಕ್ಕಮ್ಮ
ತಾನರಿಯದುದನರಿದಾಗವೆ ಭರಿತಾರ್ಪಣ. ತಾ ಕೆಡಿಸಿದುದ ಕಂಡಲ್ಲಿಯೆ ಭರಿತಾರ್ಪಣ. ತ್ರಿವಿಧಮಲದಿಂದ ಕಟ್ಟೊತ್ತರ ಬಂದಲ್ಲಿ ತೊಟ್ಟು ಬಿಟ್ಟ ಹಣ್ಣಿನಂತಿದ್ದಾಗವೆ ಭರಿತಾರ್ಪಣ. ತಾ ಹೇಳಿದ ವ್ರತ ನೇಮ ನಿತ್ಯ ಕೃತ್ಯಂಗಳಲ್ಲಿ ಅನುಸರಣೆಯಿಂದ ತನು ಸೋಂಕಿದಾಗವೆ ಭರಿತಾರ್ಪಣ. ಪಡಿಪುಚ್ಚವಿಲ್ಲದ ನುಡಿಗೆಡೆಯಾಗದೆ ಲಿಂಗದಲ್ಲಿ ಒಡಗೂಡೂದೆ ಭರಿತಾರ್ಪಣ. ಇದು ಕ್ಷುತ್ತಿನ ಆಗಲ್ಲ, ಸಂಸಾರಘಟವ ಮೆತ್ತುವ ಬುತ್ತಿಯಲ್ಲ. ನಿತ್ಯಾನಿತ್ಯವ ತಿಳಿದು, ನಿಶ್ಚಯವನರಿದಲ್ಲಿ ಭರಿತಾರ್ಪಣ. ಇದು ಸತ್ಯವಂತರ ಹೊಲ, ಮುಕ್ತಿವಂತರ ಬೆಳೆ. ಚೆನ್ನ ಚೆನ್ನ ಕೂಡಲ ರಾಮೇಶ್ವರಲಿಂಗದ ಸಂಗ.
--------------
ಭರಿತಾರ್ಪಣದ ಚೆನ್ನಬಸವಣ್ಣ
ಧನಶೀಲ ಮನಶೀಲ ತನುಶೀಲ ಸರ್ವಮಯ ದೃಕ್ಕಿಂಗೆ ಕಾಂಬುದೆಲ್ಲವು ಶೀಲ. ಇಂತೀ ವ್ರತಸಂಪದವೆಲ್ಲವು ಅದಾರ ಕುರಿತು ಮಾಡುವ ನೇಮ ಎಂಬುದ ತಾನರಿಯಬೇಕು. ಗುರುವಿಂಗೆ ತನುವನರ್ಪಿಸಿ, ಲಿಂಗಕ್ಕೆ ಮನವನರ್ಪಿಸಿ, ಜಂಗಮಕ್ಕೆ ಧನವನರ್ಪಿಸಿ, ತ್ರಿವಿಧಕ್ಕೆ ತ್ರಿವಿಧವ ಕೊಟ್ಟು, ತನ್ನ ವ್ರತಕ್ಕೆ ಭಿನ್ನಭಾವವಿಲ್ಲದೆ ನಿಂದುದೆ ವ್ರತ. ಹೀಗಲ್ಲದೆ, ಇದಿರ ಮಾತಿಂಗಂಜಿ ಕೊಡುವ ಕೊಂಬುವರ ನಿಹಿತಕ್ಕಂಜಿ ನಡೆವನ ವ್ರತ ಜಂಬುಕ ಶೀಲವಹಿಡಿದು ನಾಲಗೆಮುಟ್ಟದೆ ನುಂಗುವ ತೆರದಂತೆ ಸರ್ವವ ತಾ ಮುಟ್ಟುವಲ್ಲಿ ಜಂಗಮಮುಟ್ಟದೆ ತಾ ಮುಟ್ಟಿದನಾದಡೆ ಸಜ್ಜನಸ್ತ್ರೀ ಕೆಟ್ಟುನಡೆದಂತೆ. ಬಾಯಿಯಿದ್ದು ಬಯ್ಯಲಾರೆ, ಕಯ್ಯಿದ್ದು ಪೊಯ್ಯಲಾರೆ, ಕಾಂಬುದಕ್ಕೆ ಮೊದಲೆ ಕಣ್ಣ ಮುಚ್ಚುವೆನು. ಈ ಗುಣ ತಪ್ಪದು ನಿಮ್ಮಾಣೆ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ಆಣತಿ.
--------------
ಅಕ್ಕಮ್ಮ
ರೇತ ರಕ್ತವು ಕೂಡಿದ ಒಡಲು ಭೂತವಿಕಾರದಿಂದ ಚಲಿಸುತ್ತಿಹುದು, ಕೀಳುದೊತ್ತಿನ ಕೈಯಲಳಿವುದು. ಇದರ ತೂಳವ ಬಿಟ್ಟಡೆ ಆನಂದಸಿಂಧು ರಾಮೇಶ್ವರಲಿಂಗದ ನಿಜಪದವಪ್ಪುದು ಕಾಣಿರೇ.
--------------
ನಾಚೇಶ್ವರ
ಕುರುಹೆ ಘಟವಾಗಿ, ಅರಿವೆ ಆತ್ಮನಾಗಿ. ಉಭಯವನರಿವುದು ಆಚಾರದಂಗವಾಗಿ. ಇವು ನಿಂದು ಉಳಿಯೆ, ಐಘಟದೂರ ರಾಮೇಶ್ವರಲಿಂಗದ ಇರವು, ಬಚ್ಚಬಯಲಾಯಿತ್ತು.
--------------
ಮೆರೆಮಿಂಡಯ್ಯ
ತನುವ್ರತ ಮನವ್ರತ ಮಹಾಜ್ಞಾನವ್ರತ - ತ್ರಿಕರಣದಲ್ಲಿ ಶುದ್ಧವಾಗಿಯಲ್ಲದೆ ಕ್ರೀ ಶುದ್ಧವಿಲ್ಲ. ಕ್ರೀ ಶುದ್ಧವಾಗಿಯಲ್ಲದೆ ತನು ಶುದ್ಧವಿಲ್ಲ. ತನು ಶುದ್ಧವಾಗಿಯಲ್ಲದೆ ಮನ ಶುದ್ಧವಿಲ್ಲ. ಮನ ಶುದ್ಧವಾಗಿಯಲ್ಲದೆ ಜ್ಞಾನ ಶುದ್ಧವಿಲ್ಲ. ಜ್ಞಾನ ಶುದ್ಧವಾಗಿ ನಿಂದು ಮಾಡಿಕೊಂಡ ನೇಮ ತಪ್ಪದೆ, ಶರಣರಿಗೆ ದೂರಿಲ್ಲದೆ, ಮನಕ್ಕೆ ಮರವೆ ಇಲ್ಲದೆ, ಮಹಾಜ್ಞಾನವೆ ವ್ರತ ನೇಮ ಲಿಂಗವಾಗಿ, ಶ್ರುತ ದೃಷ್ಟ ಅನುಮಾನಕ್ಕೆ ಅಗೋಚರವಾಗಿ ನಿಂದ ಶೀಲವಂತನಂಗವೆ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ಅಂಗ.
--------------
ಅಕ್ಕಮ್ಮ
ಕೀಟಕ ವಿಹಂಗ ಮೊದಲಾದ ಆವ ಜೀವವು ಮುಟ್ಟಿದ ಫಲಕುಸುಮ ದ್ರವ್ಯಂಗಳ ಮುಟ್ಟದೆ, ಸಂದೇಹವಿದ್ದಲ್ಲಿ ಒಪ್ಪದೆ, ತಾ ಮಾಡಿಕೊಂಡ ಕೃತ್ಯಕ್ಕೆ ಆರನು ಆರೈಕೆಗೊಳ್ಳದೆ, ತಾ ತಪ್ಪಿದಲ್ಲಿ, ತಪ್ಪನೊಳಗಿಟ್ಟುಕೊಳಬೇಕೆಂದು, ಭಕ್ತರು ಜಂಗಮದ ಬಾಗಿಲಕಾಯದೆ ತಪ್ಪಿದಲ್ಲಿಯೆ ನಿಶ್ಚೈಸಿಕೊಂಡು ಮರ್ತ್ಯದ ಕಟ್ಟಳೆ ತಾನೆ ಎಂಬುದು ಕಟ್ಟಾಚಾರಿಯ ನೇಮ. ಇದು ನಿಷ್ಠೆವಂತರಿಗಿಕ್ಕಿದ ಗೊತ್ತು. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ನೇಮ.
--------------
ಅಕ್ಕಮ್ಮ
ಭಕ್ತರ ಮನೆಗೆ ಸತ್ಯಶರಣರು ಬಂದಲ್ಲಿಯೆ ಮದುವೆಯ ಉತ್ಸಾಹಕ್ಕಿಂದ ವೆಗ್ಗಳವೆಂದು ಕಂಡು, ತನುಕರಗಿ, ಮನಬೆರಸಿ, ಕಂಗಳುತುಂಬಿ ಪುಳಕಿತವಾಗಿ ವಂಚನೆ ಸಂಕಲ್ಪವೆಂಬ ಶಂಕೆದೋರದೆ, ನಿಶ್ಶಂಕನಾಗಿ ಮಾಡುವ ಭಕ್ತನ ವಂಕದ ಬಾಗಿಲೆ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ಮಸ್ತಕ.
--------------
ಅಕ್ಕಮ್ಮ
ಕಂಗಳ ಮುಂದೆ ಕಂಡಂತೆ ಕಾಣಬಹುದೆ? ಮನ ನೆನೆದಂತೆ ಆಡಬಹುದೆ? ಕಂಡಕಂಡವರಲ್ಲಿ ಸಂಗವ ಮಾಡಬಹುದೆ? ಅದು ಸ್ವಾನುಭಾವರಿಗೆ ಸಲ್ಲದ ಮತ. ಶಿವಪೂಜಕರಲ್ಲಿ ಶಿವಧ್ಯಾನಮೂರ್ತಿಗಳಲ್ಲಿ, ಶಿವಕಥಾಪ್ರಸಂಗಿಗಳಲ್ಲಿ, ಶಿವಾಧಿಕ್ಯವಲ್ಲದೆ ಪೆರತೊಂದನರಿಯದವರಲ್ಲಿ ತನು ಕರಗಿ, ಮನ ಸಲೆಸಂದು, ತ್ರಿವಿಧಪ್ರಸಾದದಲ್ಲಿ ಮಹಾಪ್ರಸಾದಿಯಾಗಿ ನಿಂದು ವ್ರತಾಂಗಕ್ಕೆ ಅಭಂಗ ಅವಿರಳನಾಗಿಪ್ಪ ಸದ್ಭಕ್ತನಂಗವೆ, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ಸುಖ.
--------------
ಅಕ್ಕಮ್ಮ
ಇನ್ನಷ್ಟು ... -->