ಅಥವಾ

ಒಟ್ಟು 42 ಕಡೆಗಳಲ್ಲಿ , 4 ವಚನಕಾರರು , 42 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಕ್ಕಿ ಬೇಳೆ ಬೆಲ್ಲ ಉಪ್ಪು ಮೆಣಸು ಅಡಕೆ ಫಲ ರಸ ದ್ರವ್ಯ ಮುಂತಾದ ದ್ರವ್ಯಕ್ಕೆ ವ್ರತವೊ ? ಮುಟ್ಟುವ ತಟ್ಟುವ ಸೋಂಕುವ ಚಿತ್ತಕ್ಕೆ ವ್ರತವೊ ? ಇವು ಬಾಹ್ಯದಲ್ಲಿ ಮಾಡುವ ಸೌಕರಿಯವಲ್ಲದೆ ವ್ರತಕ್ಕೆ ಸಲ್ಲ. ವ್ರತವಾವುದೆಂದಡೆ ತನ್ನಯ ಸ್ವಪ್ನದಲ್ಲಿ ತನಗಲ್ಲದುದ ಕಂಡಡೆ, ತಾ ಮುಟ್ಟದುದ ಮುಟ್ಟಿದಡೆ, ತಾ ಕೊಳ್ಳದುದ ಕೊಂಡಡೆ, ಆ ಸೂಕ್ಷ್ಮತನುವಿನಲ್ಲಿ ಆ ತನುವಂ ಬಿಟ್ಟು ನಿಂದುದು ವ್ರತ. ಸ್ಥೂಲತನುವಿನಲ್ಲಿ ಸರ್ವರ ನಿಂದೆಗೊಡಲಾಗದೆ, ಮಾಡಿಕೊಂಡ ನೇಮಕ್ಕೆ ಕೇಡುಬಂದಲ್ಲಿ ಆ ಅಂಗಕ್ಕೆ ಓಸರಿಸದೆ ನಿಂದುದು ಆಚಾರ. ಇಂತೀ ಅಂತರಂಗದಲ್ಲಿ ವ್ರತ, ಬಹಿರಂಗದಲ್ಲಿ ಆಚಾರ, ಇಂತೀ ಉಭಯ ಸಿದ್ಭವಾಗಿ ನಡೆವುದೆ ವ್ರತ ಆಚಾರz ಇಂತಿವನರಿದು ಮರೆದಲ್ಲಿ, ತಾ ಮಾಡಿಕೊಂಡ ಕುತ್ತಕ್ಕೆ ಹಾಡಿ ಮದ್ದನರೆದಂತೆ, ಜಗಕ್ಕೆ ಭಕ್ತನಾಗಿ ಆತ್ಮಂಗೆ ಅನುಸರಣೆಯಾದಲ್ಲಿ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಸಲ್ಲದ ನೇಮ.
--------------
ಅಕ್ಕಮ್ಮ
ಅಂಗಲಿಂಗ ಸಹವಾಗಿ, ಆತ್ಮನರಿವು ಸಹವಾಗಿ, ಇಷ್ಟಪದಾರ್ಥವ ಇಷ್ಟ ಲಿಂಗಸಹವಾಗಿ, ರುಚಿಪದಾರ್ಥವ ಆತ್ಮಲಿಂಗಸಹವಾಗಿ, ರಸ ಗಂಧ ರೂಪ ಶಬ್ದ ಸ್ಪರ್ಶ ಪಂಚೇಂದ್ರಿಯಗಳಲ್ಲಿ ದೃಷ್ಟಪದಾರ್ಥವ ಇಷ್ಟಲಿಂಗಸಹವಾಗಿ, ಸ್ಥೂಲ ಸೂಕ್ಷ್ಮ ಕಾರಣದಲ್ಲಿ ಒಳಗು ಹೊರಗು ಸಹವಾಗಿ, ಅಳಿವು ಉಳಿವು ಸಹವಾಗಿ, ಕಾಬುದು ಕಾಣಿಸಿಕೊಂಬುದು ಸಹವಾಗಿ, ರಸವ ಕೊಂಡವನಂತೆ,ಅಸಿಯ ಮೊನೆ ಹರಿದಲ್ಲಿ ರಸ ಬಂದು ನಿಂತಂತೆ, ಎಲ್ಲಿ ಅರ್ಪಿತಕ್ಕೆ ಅಲ್ಲಿ ವಸ್ತು ಸಹವಾಗಿ ಎಲ್ಲಾ ಎಡೆಯಲ್ಲಿ ಪರಿಪೂರ್ಣ ಸಹವಾಗಿ, ಇಪ್ಪುದು ಸಹಭೋಜನಸ್ಥಲ. ಹೀಗಲ್ಲದೆ ಓಗರ ಮೇಲೋಗರವ ಲಾಗುಲಾಗಿಗೆ ತೋರುತ್ತ ಸಕಲಸಂಸಾರದ ಸಾಗರದಲ್ಲಿ ಮುಳುಗುತ್ತ, ಮರವೆ ಅಜ್ಞಾನದಲ್ಲಿ ಮರಳಿ ತಿರುಗುತ್ತ ನಾನಾವಿಕಾರತ್ರಯಗಳಿಂದ ಹುಟ್ಟುತ್ತ ಸಾವುತ್ತ, ಮತ್ತೆ ಸಾವಧಾನ ಸಹಭೋಜನವೆಂದಡೆ ನಾಚಿತ್ತು ಎನ್ನ ಮನ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಉಭಯವನಳಿದು ಏಕವಾದುದು ಸಹಭೋಜನಸ್ಥಲ.
--------------
ಅಕ್ಕಮ್ಮ
ಗುರುವಾಗಿ ಬಂದು ತನುವ ಕೊರೆದಡೂ ಕೇಳೆ, ಲಿಂಗವಾಗಿ ಬಂದು ಮನದಲ್ಲಿ ಕುಳ್ಳಿರ್ದು ನಿಜಾಂಗವ ತೋರಿದಡೂ ಕೇಳೆ, ಜಂಗಮವಾಗಿ ಬಂದು ಬಯಲ ಬೆಳಗಿನಲ್ಲಿ ಒಳಗಾಗೆಂದಡೂ ಒಲ್ಲೆ. ಅದೆಂತೆಂದಡೆ ; ಕುಟಿಲದಲ್ಲಿ ಬಂದು ವ್ರತವ ಕೆಡಿಸಿಹೆನೆಂದಡೆ, ಕುಟಿಲದ ದೇವರುಂಟೆ ವ್ರತ ಮೊದಲು ಘಟ ಕಡೆಯಾಗಿ ಘಟಿಸುವೆನಲ್ಲದೆ, ಮೂರು ಕಿಸುಕುಳಕಾಗಿ ಘಟವ ಹೊರೆದಡೆ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ದೂರ.
--------------
ಅಕ್ಕಮ್ಮ
ಅತೀಂದ್ರಿಯರೆಲ್ಲರೂ ಮದನನ ಮನೆಯ ಬೆಸಕುಡಿಕೆಯ ನೀರೆರೆವುದಕ್ಕೊಳಗಾದರು. ವ್ರತಿಗಳೆಲ್ಲರೂ ಹೊರಗೆ ಆಚಾರವನಿರಿಸಿ, ಒಳಗೆ ಭವಿಸಂಗದಲ್ಲಿ ಬಳಲುತ್ತೈದಾರೆ. ನಿರಾಶೆವಂತರು ಕೊಡುವರ ಬಾಗಿಲಲ್ಲಿ, ಇಕ್ಕುವರ ಮಂದಿರದಲ್ಲಿ ಸಿಕ್ಕಿ ಅಯಿದಾರೆ. ಇವಕ್ಕೆ ಹೊರಗಾಗು, ಐಘಟದೂರ ರಾಮೇಶ್ವರಲಿಂಗಕ್ಕೆ.
--------------
ಮೆರೆಮಿಂಡಯ್ಯ
ವಿಷದೇಹಿಗೆ ಆಹಾರ ಒದಗದೆ ? ನಸು ಸುಳುಹ ಭುಂಜಿಸುವಂತೆ, ಕ್ರೀ ಶುದ್ಧತೆಯಲ್ಲಿ ಒದಗಲರಿಯದಿರೆ, ಮಾಡುವ ಆಚರಣೆ ಮಾರ್ಗವಾಗಬೇಕು. ಎಯ್ದದಿರೆ ಮಾನ್ಯರ ಕಂಡು ಮನ್ನಣೆಯಾಗಿರಬೇಕು. ಈ ಭಾವವೇನೂ ಇಲ್ಲದಿರೆ, ಐಘಟದೂರ ರಾಮೇಶ್ವರಲಿಂಗಕ್ಕೆ ದೂರ.
--------------
ಮೆರೆಮಿಂಡಯ್ಯ
ಒಡೆಯರು ಭಕ್ತರಿಗೆ ಸಲುವ ಸಹಪ:ಕ್ತಿಯಲ್ಲಿ ಗುರುವೆಂದು, ಅರಸೆಂದು, ತನ್ನ ಪರಿಸ್ಪಂದದವರೆಂದು, ರಸದ್ರವ್ಯವನೆಸಕದಿಂದ ನೀಡಿದೊಡೆ, ಅದ ನಾನರಿದು ಕೈಕೊಂಡಡೆ ಕಿಸುಕುಳದ ಪಾಕುಳಕಿಚ್ಚೈಸಿದಂತೆ ; ಅಲ್ಪ ಜಿಹ್ವಾಲಂಪಟಕ್ಕೆ ಸಿಕ್ಕಿದ ಮತ್ಸ್ಯ ಬಂಧನದಿ ಸತ್ತಂತೆ. ಇದನರಿದು ಭಕ್ತನಾಗಲಿ, ಗುರುವಾಗಲಿ, ಜಂಗಮವಾಗಲಿ, ಶಿವಗಣಪ:ಕ್ತಿಯ ನಡುವೆ ತಾ ಕುಳ್ಳಿರ್ದು ಮಿಗಿಲಾಗಿ ಷಡುರಸಾನ್ನವಾದಿಯಾದ ಸುಪದಾರ್ಥಂಗಳನಿಕ್ಕಿಸಿಕೊಂಡು ತಿಂದನಾದಡೆ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ದೂರ.
--------------
ಅಕ್ಕಮ್ಮ
ಚಾಟಿ ಗುಂಡು ಬಂಧನ ಕಲಕೇತ ಯಾಚಕ ಪಗುಡಿ ಪರಿಹಾಸಕಂಗಳಿಂದ ಬೇಡಿ ತಂದು ಗುರುಲಿಂಗಜಂಗಮಕ್ಕೆ ಮಾಡಿಹೆನೆನಬಹುದೆ? ಮಾಡುವ ಠಾವಿನಲ್ಲಿ, ಮಾಡಿಸಿಕೊಂಬವರಾರೆಂದು ತಾನರಿದ ಮತ್ತೆ ಅಲ್ಲಿ ಬೇಡಬಹುದೆ ? ಭಕ್ತಿಯ ಮಾಡಿಹೆನೆಂದು ಕಾಡಬಹುದೆ ತಾ ? ತಾ ದಾಸೋಹಿಯಾದ ಮತ್ತೆ ಅಲ್ಲಿಗೆ ತಾ ದಾಸನಾಗಿ ಸಲ್ಲೀಲೆಯಿಂ ಪ್ರಸಾದವ ಕೊಂಡು ಅಲ್ಲಿ ಇಲ್ಲಿ ಎಲ್ಲಿಯೂ ತಾನಾಗಿ ಇರಬೇಕಲ್ಲದೆ, ಅಲ್ಲಿ ಮಾಡಿಹೆನೆಂದು ಎಲ್ಲರ ಬೇಡುವ ಕಲ್ಲೆದೆಯವನನೊಲ್ಲ, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಸಲ್ಲದ ನೇಮ.
--------------
ಅಕ್ಕಮ್ಮ
ಸರಸಕ್ಕೆ ಸತ್ತವರುಂಟೆ ? ವಿನೋದಕ್ಕೆ ಪಾರದ್ವಾರ ಉಂಟೆ ? ಅರ್ತಿಯೆಂದು ಕಣ್ಣ ಕುತ್ತಿದಡೆ ಆ ಕೆಟ್ಟ ಕೇಡು ಅದಾರಿಗೆ ಪೇಳಾ ? ಸತ್ಯನಾಗಿದ್ದು ಭಕ್ತರು ಜಂಗಮದಲ್ಲಿ ಚಚ್ಚಗೋಷ್ಠಿಯನಾಡುವ ಮಿಟ್ಟಿಯ ಭಂಡರಿಗೆ ಸತ್ಯಸದಾಚಾರ ಮುಕ್ತಿಭಾವ ಒಂದೂ ಇಲ್ಲ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಸಲ್ಲದ ನೇಮ.
--------------
ಅಕ್ಕಮ್ಮ
ವ್ರತವೆಂಬ ಸೀಮೆಯ ವಿವರವೆಂತುಟೆಂದಡೆ ಬೀಗಿ ಬೆಳೆದ ಹೊಲಕ್ಕೆ ಬೇಲಿಯ ಕಟ್ಟಿದಡೆ ಚೇಗೆಯುಂಟೆ? ಹಾವ ಪಶುವಿಂಗೆ ಮಾಣಿಸಿದಡೆ ದೋಷ ಉಂಟೆ ಗಾವಿಲಂಗೆ ಭಾವದ ಬುದ್ಧಿಯ ಹೇಳಿದವಂಗೆ ನೋವುಂಟೆ? ಬೇವ ನೋವ ಕಾಯಕ್ಕೆ ಜೀವವೆಂಬ ಬೆಳಗೇ ವ್ರತ. ಭಾವವೆಂಬ ಬೇಲಿಯ ಸಾಗಿಸಿಕೊಳ್ಳಿ. ಲೂಟಿಗೆ ಮೊದಲೆ ಬಸವ ಚೆನ್ನಬಸವಣ್ಣ ಪ್ರಭುದೇವ ಮೊದಲಾಗಿ ಶಂಕೆಗೆ ಮುನ್ನವೆ ಹೋದೆಹೆನೆಂಬ ಭಾವ ತೋರುತ್ತಿದೆ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಏಲೇಶ್ವರದ ಗೊತ್ತು ಕೆಟ್ಟಿತ್ತು.
--------------
ಅಕ್ಕಮ್ಮ
ತಮ್ಮ ಆಯತದ ಉಪ್ಪೆಂದು ಬಳಸುವನ್ನಕ್ಕ ತಾವು ತಂದು ಮಾಡಿಕೊಂಬ ಮೃತ್ತಿಕೆಯ ಸಾರವೆ ಲೇಸು. ಅದೆಂತೆಂದಡೆ ಮಹಾ ಅಂಬುಧಿಗಳಲ್ಲಿ ತಾಕುಸೋಂಕು, ತಟ್ಟುಮುಟ್ಟು ಬಹವಾದ ಕಾರಣ. ಇಂತೀ ಇವ ತಾನರಿದ ಮತ್ತೆ ಆಯತವೆಂಬುದೇನು ತನ್ನ ಕಾಯ ಮನ ಅರಿದು ಮಾಡಿಕೊಂಬುದೆ ವ್ರತ. ಇಂತಿವನರಿಯದೆ ಬಳಸುವ ಬಳಕೆಗಳೆಲ್ಲವು ಸೌಕರಿಯವಲ್ಲದೆ ವ್ರತಕ್ಕೆ ಸಲ್ಲದ ಆಚಾರವಲ್ಲ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಇದೆ ಆಣತಿ.
--------------
ಅಕ್ಕಮ್ಮ
ಚತುಷ್ಪಾದಿ ಮುಂತಾದ, ನರ ವಿಹಂಗ ಕೀಟಕ ಮುಂತಾದ ಜೀವಂಗಳೆಲ್ಲವು ತಮ್ಮ ತಮ್ಮ ಸ್ವಜಾತಿಯ ಕೂಡುವುದೆ ಶೀಲ. ತಮ್ಮ ತಮ್ಮ ವ್ಯವಹಾರಂಗಳಲ್ಲಿ ಕೊಡುವ ಕೊಂಬುದೆ ಶೀಲ. ಇಂತೀ ಜಾತಿವರ್ತಕದಲ್ಲಿ ನಡೆವ ಶೀಲವಂ ಬಿಟ್ಟು, ಲಿಂಗವಂತ ಲಿಂಗಮುಂತಾಗಿ ನಡೆವ ಶೀಲವೆಂತುಟೆಂದಡೆ ಅಸಿ, ಕೃಷಿ, ವಾಣಿಜ್ಯ, ವಾಚಕ ಮುಂತಾದ ಕಾಯಕಂಗಳ ವಿವರವನರಿತು ಪಾಪ ಪುಣ್ಯ ಬಹುಕಾಯಕಮಂ ಕಂಡು, ತನ್ನ ವಂಶದ ಸ್ವಜಾತಿಯಂ ಬಿಟ್ಟು, ಶಿವಭಕ್ತರೆ ಬಂಧುಗಳಾಗಿ ಶಿವಾಧಿಕ್ಯವೆ ದಿಕ್ಕಾಗಿ ಕೊಂಡು ಗಮನಕ್ಕೆ ಕಾಯಲಿಂಗ ಮನವರಿಕೆಯಾಗಿ, ತ್ರಿಕರಣ ಶುದ್ಧಾತ್ಮನಾಗಿ, ಅಂಗಕ್ಕೆ ಆಚಾರ, ಮನಕ್ಕೆ ಅರಿವು, ಅರಿವಿಂಗೆ ಜ್ಞಾನ ನಿರ್ಧಾರವಾಗಿ ಕರಿಗೊಂಡುದೆ ವ್ರತ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಎಡೆದೆರಪಿಲ್ಲದ ನೇಮ.
--------------
ಅಕ್ಕಮ್ಮ
ಆಡುವಾತ ಗಣಿಮಿಣಿಯಲ್ಲಿ ಕುಣಿದಡೆ, ಕೆಳಗೆ ನೋಡುವಾತನಿಗೆ ಆಶ್ಚರ್ಯವಾದಂತೆ, ವಸ್ತುಕೂಟ ಆಟ, ಮತ್ರ್ಯರ ಬೇಟ ನಿಶ್ಚಯವಾಗಿರಬೇಕು, ಐಘಟದೂರ ರಾಮೇಶ್ವರಲಿಂಗಕ್ಕೆ.
--------------
ಮೆರೆಮಿಂಡಯ್ಯ
ಗುರುವಿಗೆ ಲಿಂಗ ಸಾಕ್ಷಿ, ಲಿಂಗಕ್ಕೆ ಜಂಗಮ ಸಾಕ್ಷಿ, ಆ ಜಂಗಮಕ್ಕೆ ಅರಿವು ಸಾಕ್ಷಿ. ಇಂತೀ ಅರಿವ ಮರೆದು, ನರಗುರಿಗಳ ಬಾಗಿಲಲ್ಲಿ ನಿಂದು ತಡೆಯಿಸಿಕೊಂಬ ಅರಿಗುರಿಗೇಕೆ ಅರಿವಿನ ಮಾತು ? ಐಘಟದೂರ ರಾಮೇಶ್ವರಲಿಂಗಕ್ಕೆ ಅವರ ಇರವು ಹೊರಗಾಗಿಹುದು.
--------------
ಮೆರೆಮಿಂಡಯ್ಯ
ದುಷ್ಟರಿಗಂಜಿ ಕಟ್ಟಿಕೊಳ್ಳಬಹುದೆ ಕಡ್ಡಾಯದ ವ್ರತವ ! ಆ ವ್ರತದ ವಿಚಾರವೆಂತೆಂದಡೆ ; ಅಲಗಿನ ತುಪ್ಪದ ಸವಿಗೆ ಲಲ್ಲೆಯಿಂದ ನೆಕ್ಕಿದಡೆ ಅಲಗಿನ ಧಾರೆ ನಾಲಗೆಯ ತಾಗಿ, ಆ ಜೀವ ಹಲುಬುವ ತೆರದಂತೆ. ಒಲವರವಿಲ್ಲದ ಭಕ್ತಿ, ಛಲವಿಲ್ಲದ ನಿಷ್ಠೆ, ಎಲವದ ಮರನ ಕಾಯ್ದ ವಿಹಂಗನಂತೆ. ಇಂತೀ ಸಲೆನೆಲೆಯನರಿಯದವನ ವ್ರತಾಚಾರ ಕೊಲೆ ಹೊಲೆ ಸೂತಕಕ್ಕೊಡಲಾಯಿತ್ತು. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಹೊರಗಾದ ನೇಮ
--------------
ಅಕ್ಕಮ್ಮ
ಬೋಧೆಯ ಹೇಳಿ ಉಂಬವಂಗೆ ಆಗುಚೇಗೆಯ ಮಾತೇಕೆ ? ಅವ ಮಾತ ಕಲಿತ ಮಾತುಗನಂತೆ, ಆಟವ ಕಲಿತ ಕೋಲಾಟಿಕನಂತೆ. ಛೀ ಅದೇತರ ಅರಿವು ? ಐಘಟದೂರ ರಾಮೇಶ್ವರಲಿಂಗಕ್ಕೆ ಮುನ್ನವೆ ದೂರ.
--------------
ಮೆರೆಮಿಂಡಯ್ಯ
ಇನ್ನಷ್ಟು ... -->