ಅಥವಾ

ಒಟ್ಟು 53 ಕಡೆಗಳಲ್ಲಿ , 20 ವಚನಕಾರರು , 44 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೀಕ್ಷೋಪದೇಶವ ಮಾಡಿ ಗುರುವಿನ ಕಣ್ಣ ಕಳೆದು ತಲೆ ಹೊಡೆದು ಮೂರು ಹಣವ ಕೊಂಡೆ. ದೀಕ್ಷೋಪದೇಶವ ಹಡೆದ ಭಕ್ತರ ನಾಲಗೆಯ ಕೊಯ್ದು ಕೈ ಮುರಿದು ಮೂರು ಹಣವ ಕೊಂಡೆ. ಈ ಗುರುಶಿಷ್ಯರುಭಯರ ಸಂಯೋಗಕಾಲದಲ್ಲಿರುವ ಸಾಕ್ಷಿಗಣಂಗಳ ಮನೆಯ ಸುಟ್ಟು ಮೂರು ರತ್ನವ ಕೊಂಡೆ. ಇಂತೀ ಮೂವರ ಹಣವ ತಂದು ಗುರುವಿಗೆ ಕೊಟ್ಟು ಕಾಯಕವ ಮಾಡುತ್ತಿರ್ದೆನಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಆಕಾಶದ ಮೇಲೆ ಏಕಾಂತ ಸೂಳೆಯ ಕಂಡೆನಯ್ಯ. ಆ ಸೂಳೆಯ ಗೃಹದಲ್ಲಿ ಸಾಸಿರದಳ ಕಮಲಮಂಟಪವ ಕಂಡೆನಯ್ಯ. ಆದಿಯಲ್ಲಿ ಒಬ್ಬ ವಿಟನು, ಮೂವರು ಗೆಳೆಯರ ಕೂಡಿಕೊಂಡು, ಹೃದಯದಲ್ಲಿರ್ದ ರತ್ನವ ತೆಗೆದು, ಆ ಸೂಳೆಗೆ ಒತ್ತೆಯಂ ಕೊಟ್ಟು, ಸಂಗಸಂಯೋಗಮಂ ಮಾಡುವುದ ಮೂವರು ಗೆಳೆಯರು ಕಂಡು ನಿರ್ವಯಲಾದುದ ಕಂಡೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಯ್ಯಾ, ನಿಮ್ಮಾದ್ಯರ ವಚನವ ಕೇಳಿ, ಎನ್ನ ಅಂಗಭಂಗ ಹಿಂಗಿದವಯ್ಯಾ. ಅಯ್ಯಾ, ನಿಮ್ಮಾದ್ಯರ ವಚನ ಕೇಳಿ, ಪ್ರಸಾದದ ಪರುಷವ ಕಂಡೆನಯ್ಯಾ. ಆ ಪರುಷದ ಮೇಲೆ ಮೂರುಜ್ಯೋತಿಯ ಕಂಡೆನಯ್ಯಾ. ಒಂದು ಜ್ಯೋತಿ ಕೆಂಪು ವರ್ಣ, ಒಂದು ಜ್ಯೋತಿ ಹಳದಿ ವರ್ಣ, ಒಂದು ಜ್ಯೋತಿ ಬಿಳಿಯ ವರ್ಣ. ಈ ಮೂರು ಜ್ಯೋತಿಯ ಬೆಳಗಿನಲ್ಲಿ, ಒಂಬತ್ತು ರತ್ನವ ಕಂಡೆನಯ್ಯಾ. ಆ ಒಂಬತ್ತು ರತ್ನದ ಮೇಲೊಂದು ವಜ್ರವ ಕಂಡೆನಯ್ಯಾ. ಆ ವಜ್ರದ ಮೇಲೊಂದು ಅಮೃತದ ಕೊಡನ ಕಂಡೆನಯ್ಯಾ. ಆ ಕೊಡನ ಕಂಡವನೆ ಉಂಡ, ಉಂಡವನೆ ಉರಿದ, ಉರಿದವನೆ ಕರಿದ, ಕರಿದವನೆ ನೆರೆದ, ನೆರೆದವನೆ ಕುರುಹನರಿದಾತ, ನಿಮ್ಮನರಿದಾತ ಕಾಣಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಕುಂಡಲಿಯೆಂಬ ಆಧಾರದಲ್ಲಿ ಜಲ ತೇಜ ವಾಯುವೆಂಬ ತ್ರಿವಿಧ ಕೂಡಿ ಕಮಂಡಲ ಹುಟ್ಟಿತ್ತು. ಅದಕ್ಕೆ ಬಾಯಿ ಮೂರು ಹೆಡೆಯಾರು. ಜೂಳಿಯೊಂದರಲ್ಲಿ ಉದಕವ ಕೊಳುತಿರಲಾಗಿ ಆ ಹಸುವಿನ ತೃಷೆಯಡಗಿ ಬಯಕೆ ಸಲೆ ಬತ್ತಿದಲ್ಲಿ ಮಹಾಗಣನಾಥನ ಐವತ್ತೆರಡು ಸರ ಹರಿದವು. ಮೂವತ್ತಾರು ಮಣಿ ಕೆಟ್ಟವು; ಇಪ್ಪತ್ತೈದು ಮಣಿ ಪುಂಜವಾಯಿತ್ತು. ಆರು ನಾಯಕರತ್ನ ಎಲ್ಲಿ ಅಡಗಿತ್ತೆಂದರಿಯೆ. ಮೂರು ರತ್ನವ ಕಂಡೆ: ಒಂದು ಉಲಿವುದು, ಒಂದು ಉರಿವುದು, ಒಂದು ಬೆಳಗು ನಂದಿಹುದು. ಇಂತೀ ತ್ರಿವಿಧಂಗವ ಕಂಡು ಈ ಅಂಗದ ಮಣಿಯ ಒಂದೊಂದ ಪೋಣಿಸಲಾರದೆ ಈ ದಿನಮಣಿಯ ವಿರಳವ ತೋರಿಸಾ ಗೋರಕ್ಷಪಾಲಕ ಮಹಾಪ್ರಭು ಸಿದ್ಧಸೋಮನಾಥಲಿಂಗವೆ.
--------------
ಗೋರಕ್ಷ / ಗೋರಖನಾಥ
ತೊಗಲಬೊಕ್ಕಣದಲ್ಲಿ ಪಾಷಾಣವ ಕಟ್ಟುವರಲ್ಲದೆ ಪರುಷವ ಕಟ್ಟುವರೆ ? ಮಣ್ಣಹರವಿನಲ್ಲಿ ಸುರೆಯ ತುಂಬುವರಲ್ಲದೆ ರತ್ನವ ತುಂಬುವರೆ ? ಆದ್ಯರ ವಚನಂಗಳಿರ್ದುದ ಕಾಣಲರಿಯದೆ ನಾ ಘನ ತಾ ಘನವೆಂದು ಅಗಮ್ಯವ ಬೀರುವ ಅಜ್ಞಾನಿಗಳ ವಿರಕ್ತರೆಂಬೆನೆ ? ಅನುಭಾವಿಗಳೆಂಬೆನೆ ? ನಿಜವನರಿದ ಲಿಂಗೈಕ್ಯರೆಂಬೆನೆ ? ಅಮುಗೇಶ್ವರಲಿಂಗವನರಿಯದಜ್ಞಾನಿಗಳ ಆರೂಢರೆಂಬೆನೆ ?
--------------
ಅಮುಗೆ ರಾಯಮ್ಮ
ಎಂಬತ್ತು ನಾಲ್ಕು ಲಕ್ಷ ರತ್ನದ ವ್ಯವಹಾರಿಗಳು ರತ್ನವ ಕೆಡಿಸಿ ಅರಸುತ್ತೆ ೈದಾರೆ ನೋಡಾ! ರತ್ನ ಮಂಜಿನ ರಂಜನೆ, ಆಗರಕ್ಕೆ ಸಲ್ಲದು. ಹುಟ್ಟಿ ಕೆಟ್ಟ ರತ್ನ ಕೆಟ್ಟ ಕೇಡಿಂಗಿನ್ನೆಂತೊ! ಅಗುಹೋಗಿನ ನಿರ್ಣಯವನು ಸಾಗರ ನುಂಗಿತ್ತು. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲವೆಂದೆ.
--------------
ಘಟ್ಟಿವಾಳಯ್ಯ
ಒಂದೊಂದರ ಸಂಬಂಧ ಮತ್ತೊಂದಕ್ಕಳವಡದು. ಕಂದನೊಳಗಣ ಸ್ವಪ್ನ ಮುಂದುದೋರುವುದೇ ? ಚಂದ್ರಕಾಂತಶಿಲೆಯಲ್ಲಿ ರತ್ನವ ಕಂಡೆನೆಂಬ ಅಹಂಕಾರ ನಿನಗೇಕೆ ಶರಣಾ? ಕೈಯ ಕುರುಹಳಿಯದು, ಬಾಯ ಮೊರೆ ಮಿಗೆವರಿಯುತ್ತಿದೆ, ಕೂಡಲಚೆನ್ನಸಂಗಯ್ಯನಲ್ಲಿ ಬಸವನೂ ಪ್ರಭುವೂ ಇಬ್ಬರೂ ಮರುಳಾದರು.
--------------
ಚನ್ನಬಸವಣ್ಣ
ಊರೊಳಗೆ ಒಬ್ಬ ಮಾನವನ ಕಂಡೆನಯ್ಯ, ಆ ಮಾನವನ ಕೈಯೊಳಗೆ ಒಂದು ರತ್ನವಿಪ್ಪುದ ಕಂಡೆನಯ್ಯ. ಮೇಲಿಂದ ಸತಿಯಳು ಕಂಡು, ಆ ರತ್ನವ ತಕ್ಕೊಂಡು, ಊರ ಮುಂದಳ ಗುಡಿಯಲ್ಲಿ ಆ ಮಾನವನ ಬಯಲುನುಂಗಿ, ಆ ರತ್ನವ ನಿರ್ವಯಲು ನುಂಗಿ ಆ ಸತಿಯಳು ಅಡಗಿದುದ ಕಂಡೆ ನೋಡಾ ಝೇಂಕಾರ ನಿಜಲಿಂಗಪ್ರಭವೆ.
--------------
ಜಕ್ಕಣಯ್ಯ
ಶುದ್ಧಾತ್ಮ ಪರಮಾತ್ಮರಿಬ್ಬರೂ ಒಂದು ರತ್ನಕ್ಕೆ ಹೆಣಗಾಟವನಾಡಿಹರು. ಅವರ ಹೆಣಗಾಟವ ನೋಡಿ ಆ ರತ್ನವ ಸೆಳೆದುಕೊಂಡಡೆ ಕೂಡಲಸಂಗಮದೇವಂಗಾರೋಗಣೆಯಾಯಿತ್ತು.
--------------
ಬಸವಣ್ಣ
ಹದಿನಾಲ್ಕು ರತ್ನವೆಂಬುದ ಸುರಾಸುರರೆಲ್ಲರು ಬಲ್ಲರು ಮೂರಾರು ರತ್ನವನಾರು ಅರಿಯರಯ್ಯಾ; ಮೂರಾರು ರತ್ನವೆಂಬುದ ಬಲ್ಲರು ದಿವ್ಯಮುನಿಗಳು. ಮೂರೆರಡು ರತ್ನವನರಿಯರು ತ್ರಿಲೋಕದವರು; ಮೂರೆರಡು ರತ್ನವ ಬಲ್ಲರು ಮಹಾಪ್ರಮಥರು. ಒಂದು ರತ್ನವನಾರು ಅರಿಯರು; ಒಂದು ರತ್ನವ ಬಲ್ಲವ ನಿಮ್ಮ ಶರಣ ಮಹಾಂಗಮೂರ್ತಿ ಚೆನ್ನಬಸವಣ್ಣ ನೋಡಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಗುದ್ದಾ[ಡಿ] ರತ್ನವ ಕದ್ದು ಒಯ್ಯಬಲ್ಲಡೆ ಭಕ್ತನೆಂಬೆ. ಮುದ್ದುಳ್ಳನ್ನವ ಮೆದ್ದಬಲ್ಲಡೆ ಮಹೇಶನೆಂಬೆ. ಜಿದದಿನ ಭಕ್ತಿಯ ಗೆದ್ದು ಒಯ್ದಡೆ, ಕಪಿಲಸಿದ್ಧಮಲ್ಲನ ಮನೆಯ ಮುದ್ದುಕುಮಾರನೆಂಬೆ ನೋಡಾ, ಮಡಿವಾಳ ಮಾಚಣ್ಣನೆ.
--------------
ಸಿದ್ಧರಾಮೇಶ್ವರ
ಕಾಯವೆಂಬ ಹುತ್ತಿನಲ್ಲಿ ಮಾಯವೆಂಬ ಸರ್ಪನು ಮನೆಯ ಮಾಡಿಕೊಂಡು ತ್ರಿಜಗವನೆಲ್ಲ ನುಂಗಿಕೊಂಡಿರ್ಪುದು ನೋಡಾ. ಕಡೆಯ ಬಾಗಿಲಲ್ಲಿ ಗಾರುಡಿಗ ನಿಂದು ನಾಗಸ್ವರದ ನಾದವ ಮಾಡಲು ಆ ನಾಗಸ್ವರದ ನಾದವ ಕೇಳಿ ತ್ರಿಲೋಕದಿಂದ ಎದ್ದ ಸರ್ಪನ ತಲೆಯ ಮೇಲೆ ರತ್ನವಿಪ್ಪುದು ನೋಡಾ. ಆ ರತ್ನವ ಕಣ್ಣು ಇಲ್ಲದವ ಕಂಡು, ಕೈಯಿಲ್ಲದವ ತಕ್ಕೊಂಡು ಮಣ್ಣು ಇಲ್ಲದ ಹಾಳಿನಲ್ಲಿ ಇಟ್ಟು, ಆ ರತ್ನವು ಮಹಾಲಿಂಗಕ್ಕೆ ಸಂದಿತ್ತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಮೇಲೆ ಭಾಮಿನಿಯೊಳಗೆ ಮೂರು ರತ್ನವ ಕಂಡೆನು. ಆವಾವಲ್ಲಿ ಕಂಡೆನೆಂದರೆ: ಒಂದು ರತ್ನ ನಾದದಲ್ಲಿ ಕಂಡೆನು. ಒಂದು ರತ್ನ ಬಿಂದುವಿನಲ್ಲಿ ಕಂಡೆನು. ಒಂದು ರತ್ನ ಕಳೆಯಲ್ಲಿ ಕಂಡೆನು. ಆ ಭಾಮಿನಿಯ ನಿರ್ವಯಲಲ್ಲಿ ಕಂಡೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಊರ ಮುಂದೆ ಶ್ವಾನನ ಕಾಣಬಹುದಲ್ಲದೆ ಸಿಂಹವ ಕಾಣಬಾರದು. ನದಿಯ ಮುಂದೆ ಬಕನ ಕಾಣಬಹುದಲ್ಲದೆ ಹಂಸನ ಕಾಣಬಾರದು. ಪಸರದೊಳಗೆ ಗಾಜಿನ ಮಣಿಯ ಕಾಣಬಹುದಲ್ಲದೆ ರತ್ನವ ಕಾಣಬಾರದು. ಧರೆಯ ಮೇಲೆ ವೇಷಧಾರಿಗಳ ಕಾಣಬಹುದಲ್ಲದೆ (ಶಿವ)ಜ್ಞಾನಿಗಳ ಕಾಣಬಾರದು, ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಮೂರುಲೋಕದ ಮೇಲೆ ಒಂದು ಕೋಡಗ ಕುಳಿತಿರುವುದ ಕಂಡೆನಯ್ಯ. ಆ ಕೋಡಗದ ತಲೆಯ ಮೇಲೆ ಒಂದು ರತ್ನವಿಪ್ಪುದು ನೋಡಾ. ಆ ಕೋಡಗನ ಕೊಂದು ಆ ರತ್ನವ ನುಂಗಿದಲ್ಲದೆ ತಾನಾರು ಎಂಬ ಭೇದವು ಕಾಣಿಸದು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಇನ್ನಷ್ಟು ... -->