ವೇದ ಶಾಸ್ತ್ರ ಆಗಮ ವಿಜ್ಞಾನ ತರ್ಕ ವ್ಯಾಕರಣಾದಿಗಳ ಕಲಿತು ಬಲ್ಲವರೆನಿಸಿಕೊಂಡರೇನು? ಪ್ರಾಣಲಿಂಗದ ನೆಲೆಯನರಿದ ಯೋಗಿಯ ಮುಂದೆ ಇವರೆಲ್ಲ ಮೂಢರಲ್ಲದೆ ಬಲ್ಲವರಲ್ಲ. ಅದೇನು ಕಾರಣವೆಂದಡೆ: ಅವರು ಸ್ವಾನುಭಾವಜ್ಞಾನಾನುಭಾವಿಗಳಲ್ಲವಾದ ಕಾರಣ. ಇಂತಿವರು ಒಂದು ಕೋಟಿ ಶಾಸ್ತ್ರಜ್ಞರಾದರೂ ಸಮ್ಯಜ್ಞಾನಿಯಾದ ಒಬ್ಬ ಶರಣಂಗೆ ಸರಿಯಲ್ಲ. ಇದು ಕಾರಣ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣನೇ ಶಿವನೆನಬೇಕು.
ಅಂಗ ಲಿಂಗ ಸಂಗವರಿದ ಲಿಂಗದೇಹಿ, ತನ್ನಿಂದ ಹಿರಿದೊಂದೂ ಇಲ್ಲವೆಂದು ತಿಳಿದು ಆ ತಿಳಿವಿನೊಳಗಣ ತಿಳಿವು ತಾನೆ ವಿಶ್ವಾತ್ಮಪತಿಯಾದ ಶಿವನಜ್ಞಾನವೆಂದರಿದು ಆ ಸರ್ವಜ್ಞನಾದ ಶಿವನು ನಿರ್ಮಲದರ್ಪಣದೊಳಗಣ ಪ್ರತಿಬಿಂಬದಂತೆ ಯೋಗಿಯ ಮನವೆಂಬ ದರ್ಪಣದಲ್ಲಿ ತೋರುವ ಚಿದಾಕಾಶರೂಪ ಶಿವನ ಶರಣಜ್ಞಾನಲೋಚನದಿಂದ ಕಂಡು ಕೂಡಿ ಎರಡಳಿದು ನಿಂದನು ನಮ್ಮ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣನು.
ಊಧ್ರ್ವಮುಖಮೂಲ ಅಧೋಶಾಖೆಯಾದ ವೃಕ್ಷದ ಮೂಲದಲ್ಲಿ ಒಬ್ಬ ಯೋಗಿಯಿದಾನೆ. ಆ ಯೋಗಿಯ ಕೈಯಲ್ಲೊಂದು ಅಮೃತವ ಫಲವ ನೋಡಾ. ಆ ಫಲವ ಮೆದ್ದವರೆಲ್ಲ ಅಮರರಾದುದ ಕಂಡು ನಾನು ಬೆರಗಾದೆ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.