ಅಥವಾ

ಒಟ್ಟು 82 ಕಡೆಗಳಲ್ಲಿ , 31 ವಚನಕಾರರು , 73 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಲಿಂಗ ಸಹಿತವಾಗಿ ಸರ್ವಗುಣಂಗಳ ಭೋಗಿಸಬೇಕೆಂಬಲ್ಲಿ ಲಿಂಗಕ್ಕೆ ಕೊಟ್ಟು ತಾ ಕೊಂಬ ತೆರನಾವುದು? ಹೆಣ್ಣ ಕೊಡುವಲ್ಲಿ ತನ್ನಯ ವಿಕಾರವೊ ಲಿಂಗದ ಸುಖವೊ? ಹೊನ್ನ ಹಿಡಿವಲ್ಲಿ ತನ್ನಯ ಬಯಕೆಯೊ ಲಿಂಗದ ಭೋಗವೊ? ಮಣ್ಣ ಹಿಡಿವಲ್ಲಿ ತನ್ನಯ ಬೆಳೆಯೊ ಲಿಂಗದ ಇರವೊ? ಇಂತೀ ತ್ರಿವಿಧದ ಬಿಡುಮುಡಿಯನರಿತು, ಹೆಣ್ಣ ಬೆರಸಿದಲ್ಲಿ ಹೆಣ್ಣಿಗೆ ವಿಷಯಸುಖ ತೋರಿ ತನಗೆ ಆ ವ್ಯಾಪಾರ ಹಿಂಗಿ ನಿಂದ ನಿಜದುಳುಮೆ ಲಿಂಗಸುಖಿ. ಹೊನ್ನು ತನ್ನ ತಾ ಬಂದಲ್ಲಿ ಮುಟ್ಟಿ ಕೊಟ್ಟೆನೆಂಬುದನರಿಯದೆ ಅದು ದೃಷ್ಟದಿಂದ ಬಂದುದ, ತನ್ನಷ್ಟವೆಂಬುದನರಿದಿಪ್ಪಾತನೆ ನಿಸ್ಪ ೃಹ. ಮಣ್ಣ ಅಡಿವಿಡಿದು ಹಿಡಿದಲ್ಲಿ ಕರ್ಮರುಗಳಂತೆ ಕಾದರೆ ಅವು ಮುನ್ನಿನಂತೆ ಇರಲಿ ಎಂಬುದು ಪರಮ ನಿರ್ವಾಣ. ಇಂತೀ ತ್ರಿವಿಧ ಮಲಂಗಳಲ್ಲಿ ಅಮಲನಾಗಿ ಸರ್ವಗುಣ ಸಂಪನ್ನನಾದುದು ಲಿಂಗ ಭೋಗೋಪಭೋಗಿಯ ಅಂಗನಿರತ, ಸ್ವಯಾನುಭಾವಿಯ ಲಿಂಗಾಂಗ ಯೋಗ ಸಂಬಂಧ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 81 ||
--------------
ದಾಸೋಹದ ಸಂಗಣ್ಣ
ಅಪ್ಪಿನಲಾದ ಘಟವು ಅರ್ಪಿ[ತದ]ಲೆ ಲೀಯ, ಇಪ್ಪತ್ತೈದೆಂದು ಕುರುಹಿಡುವೆ ಏಕೆಲೆ ಮನುಜಾ. ತಾ ಹುಟ್ಟಿ ತಮ್ಮವ್ವೆ ಬಂಜೆಯೆಂಬ ನ್ಯಾಯದಲ್ಲಿ ಬೇರೆ ವಿವರಿಸಿ ತೋರಬಲ್ಲಡದು ಯೋಗ. ಅಭ್ಯಾಸಸಮಾದ್ಥಿಯಿಂ ಅನುಭವಿಗಳೆಲ್ಲರಿಗೆ ಬಯಲ ಸಮಾದ್ಥಿಯಾಗದಯ್ಯಾ ಕಪಿಲಸಿದ್ಧಮಲ್ಲಿಕಾರ್ಜುನ
--------------
ಸಿದ್ಧರಾಮೇಶ್ವರ
ಕೋಣೆಯ ಕೋಹಿನಲ್ಲಿ ಮೂರು ಬಾಗಿಲುಂಟೆಂಬರು ಯೋಗಿಗಳು. ಅವು ದ್ವಾರಗಳಲ್ಲದೆ ಬಾಗಿಲ ನಾವರಿಯೆವು. ಪ್ರದಕ್ಷಿಣದ ಒಳಗಾದ ಬಾಗಿಲು ಮುಚ್ಚಿದಲ್ಲಿ ಸಿಕ್ಕಿದ ದ್ವಾರಂಗಳಿಗೆ ಕುರುಹಿಲ್ಲ. ಊಧ್ರ್ವನಾಮ ಯೋಗ ಸಂಬಂಧವಾದ ಒಂದು ಬಾಗಿಲು ಕಟ್ಟಿ ಒಂಬತ್ತು ಮುಚ್ಚಿದ ಸಂದಿಗಳೆಲ್ಲವು ಅದರೊಳಗೆ ಸಲೆಸಂದ ಮತ್ತೆ ಹೋಹುದೊಂದೆ ಬಾಗಿಲು ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಯೋಗಾಭ್ಯಾಸ ಯೋಗಾಭ್ಯಾಸವೆಂದೆಂಬಿರಿ ಯೋಗವು ಅಭ್ಯಾಸವೆ ? ಅಭ್ಯಾಸವು ಯೋಗವೆ ಅಯ್ಯಾ ? ಯೋಗಾಭ್ಯಾಸವೆಂಬನ್ನಕ್ಕ ತಾನಾ ಯೋಗಿಯೆ ಅಯ್ಯಾ ? ಯೋಗವ ನುಡಿವರೆ ಅಯ್ಯಾ ? ಗುರುಮತದಿಂ ಭಾವಿಸಲು ಸರ್ವವೂ ಪರಬ್ರಹ್ಮ, ಶ್ರೀಗುರುವಿನ ಶ್ರೀಪಾದಧ್ಯಾನವೇ ಯೋಗ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಕಾಪಾಲಿಕವೆ ನರಕಪಾಲ ಬ್ಥಿಕ್ಷಾಟನಾದಿಗಳಂ ವಿವರಿಸೂದು. ಮಹಾವ್ರತವೆ ಅಸ್ಥಿಧಾರಣಾದಿಗಳಂ ವಿವರಿಸುತ್ತಿರ್ಕುಂ. ಬಳಿಕ ಪರಶಿವಪ್ರಣೀತಮಾದ ಶಾಸ್ತ್ರ ಮಂತ್ರವೆ ಮೋಕ್ಷಾಂಗಮಾದ ಕ್ರಿಯೆ ಚರ್ಯೆ ಯೋಗ ಜ್ಞಾನಾದಿಗಳಂ ಪ್ರಮಾಣಿಸುತ್ತಿರ್ಕುಂ, ಮತ್ತಮಾ ಸಮಸ್ತಮತಾಂತರಂಗಳಲ್ಲಿ ಪೇಳುವಾತ್ಮಸ್ವರೂಪವೆಂತೆನೆ:ದೇಹವೆ ಆತ್ಮನೆಂಬರು ಚಾರ್ವಾಕರು, ಇಂದ್ರಿಯಂಗಳೆ ಆತ್ಮನೆಂಬರು ಚಾರ್ವಾಕೈಕ ದೇಶಿಗಳು, ಪ್ರಾಣವೆ ಆತ್ಮನೆಂಬರು ಹಿರಣ್ಯಗರ್ಭರೆಂಬ ಚಾರ್ವಾಕೈಕ ದೇಶಿಗಳು. ಬಳಿಕ ದೇಹಾದಿ ವಿಲಕ್ಷಣನಾದೊರ್ವಾತ್ಮನು ದೇಹಪರಿಮಿತವಾಗಿ ಮಧ್ಯಪರಿಮಾಣತ್ವದಿಂ ಸಂಕೋಚ ವಿಕಾಸ ಧರ್ಮಯುಕ್ತನೆಂಬರು ಜೈನರು, ಬುದ್ಧಿಯೆ ಆತ್ಮನೆಂಬರು ಬೌದ್ಧರು, ಆನಂದವೆ ಆತ್ಮನೆಂಬರು ಕೋಳಯಾಮಳ ಶಾಕ್ತೇಯರುಗಳು, ಆತ್ಮನು ನಾಡಿಮಧ್ಯಗತನಾಗಿ ಅಣುಪರಿಮಾಣನೆಂಬರು ಪಾಂಚರಾತ್ರರು, ಆತ್ಮನು ದೇಹ ಪುತ್ರಾದಿ ರೂಪನೆಂಬರು ಲೌಕಿಕರು, ಆತ್ಮನು ಸ್ವತಃ ಪ್ರಮಾಣಜ್ಞಾನ ಸಮೇತನೆಂಬರು ವಿೂಮಾಂಸಕ ಭೇದಮಾದ ಭಾಟ್ಟ ಪ್ರಭಾಕರರುಗಳು, ಆತ್ಮನು ಗಗನದಂತೆ ಮಹತ್ವರಿಮಾಣನಾಗಿ ಪಾಷಾಣದಂತೆ ಜಡಸ್ವರೂಪನಾದೊಡಂ ಮನಃಸಂಯೋಗದಿಂ ಚಿದ್ಧರ್ಮಯುಕ್ತನೆಂಬರು ನೈಯಾಯಿಕ ವೈಶೇಷಿಕರುಗಳು, ಆತ್ಮನು ಅಸಚ್ಚಿನ್ಮಾತ್ರನೆಂಬರು ಸಾಂಖ್ಯ ಪಾತಂಜಲರುಗಳು, ಆತ್ಮನು ಜ್ಞಾಪ್ತಿಮಾತ್ರನೆಂಬರು ವೇದಾಂತಿಗಳು, ಆತ್ಮನು ನಿತ್ಯವ್ಯಾಪಕನೆಂಬರು ಪಾಶುಪತ ಕಾಪಾಲಿಕ ಮಹಾವ್ರತರುಗಳು, ಆತ್ಮನು ನಿತ್ಯವಾಪಕ ಜ್ಞಾನಕ್ರಿಯಾರೂಪನೆಂಬರು ಮಾಂತ್ರ ಸಂಜ್ಞಿತ ಸಿದ್ಧಾಂತಿಗಳೆಂದು ಪೃಥಕ್ಕರಿಸಲ್ವೇಳ್ಕುಂ ಶಾಂತವೀರೇಶ್ವರಾ. ಇಂತೀ ಮತಾಂತರಂಗಳ ಬ್ಥಿನ್ನಾಚರಣೆವಿಡಿವನಲ್ಲಯ್ಯ ಶರಣ ಶಿವಾದ್ವೈ [ತಿ] ಯಾಗಿ, ಮಹಾಗುರುಶಾಂತ ವೀರಪ್ರಭುವೆ.
--------------
ಶಾಂತವೀರೇಶ್ವರ
ಉಪನಿಷದ್ವಾಕ್ಯವೆನಬಹುದಲ್ಲದೆ, ಆ ಪರಬ್ರಹ್ಮವೆನಬಾರದು ಸಮತೆ ಸಮಾಧಾನವೆಂಬುದು ಯೋಗದಾಗು ನೋಡಾ. ಸಮತೆ ಸಮಾಧಾನ ನೆಲೆಗೊಳ್ಳದಿರ್ದಡೆ, ಆ ಯೋಗ ಅಜ್ಞಾನದಾಗು. ಅಷ್ಟಶಿಲೆ ಸಹಸ್ರ ಋಷಿಯರು ಸಮತೆ ಸಮಾಧಾನ ನೆಲೆಗೊಳ್ಳದೆ, ನಾನಾ ಯೋÀನಿಯಲ್ಲಿ ಬಂದರು. ಮಹಾಲಿಂಗ ಕಲ್ಲೇಶ್ವರದೇವಾ, ಸಮತೆ ನೆಲೆಗೊಂಡು, ಸಮಾಧಾನ ಸಹಜವಾದುದೆ ಮುಕ್ತಿ ಕ್ಷೇತ್ರ.
--------------
ಹಾವಿನಹಾಳ ಕಲ್ಲಯ್ಯ
ಪುಷ್ಪಗಂಧದಂತೆ ಪ್ರಾಣಲಿಂಗಭಾವ. ನೀರು ಗಂಧದಂತೆ ಇಷ್ಟಲಿಂಗಭಾವ. ಇಂತೀ ನಾಲ್ಕರ ಯೋಗ ಕೂಡಿದಲ್ಲಿ ಶರಣಸ್ಥಲಭಾವ. ಇಂತೀ ಐದರ ಭಾವವ ಅವಗವಿಸಿ ನಿಂದುದು, ಐಕ್ಯಸ್ಥಲಂಗೆ ಅವದ್ಥಿಗೊಡಲಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಮಿತಭೋಜನ ಮಿತವಾಕು ಮಿತನಿದ್ರೆಯ ಮಾಡಿರಣ್ಣಾ. ಯೋಗಸಿದ್ಧಿ ಬೇಕಪ್ಪಡೆ ಅತ್ಯಾಹಾರ ಇಂದ್ರಿಯ ವ್ಯವಹಾರ ರೇಕಣ್ಣಪ್ರಿಯ ನಾಗಿನಾಥಿನಲ್ಲಿ ಅಳಿಯದಂತೆ ಉಳಿಹಿಕೊಳ್ಳಿರಣ್ಣ, ಯೋಗ ಸಾಧ್ಯವಪ್ಪನ್ನಕ್ಕ.
--------------
ಬಹುರೂಪಿ ಚೌಡಯ್ಯ
ಮಂಜರಿ ನುಂಗಿದ ಚೂಡ ತನ್ನ ಕಾಲವೇಳೆಗೆ ನಿಂದು ಕೂಗಿದುದುಂಟೆ? ಲಿಂಗವನರಿದ ಚಿತ್ತ ಸಂಸಾರದ ಸಂದಣಿಯಲ್ಲಿ ಮುಳುಗುವುದೆ? ಈ ದ್ವಂದ್ವವನರಿದು ಯೋಗ ಸಂಬಂದ್ಥಿಯಾಗಿರಬೇಕು. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 71 ||
--------------
ದಾಸೋಹದ ಸಂಗಣ್ಣ
ಅಲರೊಳಡಗಿದ ಪರಿಮಳದಂತೆ, ಪತಂಗದೊಳಡಗಿದ ಅನಲನಂತೆ, ಶಶಿಯೊಳಡಗಿದ ಷೋಡಶಕಳೆಯಂತೆ, ಉಲುಹಡಗಿದ ವಾಯುವಿನಂತೆ, ಸಿಡಿಲೊಳಡಗಿದ ಗಾತ್ರದ ತೇಜದಂತೆ ಇರಬೇಕಯ್ಯಾ ಯೋಗ, ಎನ್ನ ಅಜಗಣ್ಣತಂದೆಯಂತೆ.
--------------
ಮುಕ್ತಾಯಕ್ಕ
ಆದಿ ಅನಾದಿಯಿಲ್ಲದಂದು, ನಾದ ಬಿಂದು ಕಳೆ ಮೊಳೆದೋರದಂದು, ಶ್ರುತಿ ಸ್ಮøತಿಗಳು ತಲೆದೋರದಂದು, ಚತುರ್ದಶಭುವನಂಗಳ ರಚನೆ ರಚಿಸದಂದು, ಲಯಭೋಗಾದಿ ಕರಣಂಗಳಲ್ಲಿಯ ತತ್ವಪ್ರಭಾವ ಮೂರ್ತಿಗಳೆಂಬ ಅರಿವು ಕುರುಹಿಗೆ ಬಾರದಂದು, ತಿಥಿ, ವಾರ, ನಕ್ಷತ್ರ, ಯೋಗ, ಕರಣಂಗಳೆಂಬ ಪಂಚಾಂಗ ಲಗ್ನವಿಲ್ಲದಂದು, ಅನುಪಮ ಅಸಾಧ್ಯ ಅಭೇದ್ಯ ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ನಿಜವನಾರು ಬಲ್ಲರಯ್ಯಾ.
--------------
ಆದಯ್ಯ
ಪ್ರಾಣ ಅಪಾನ ವ್ಯಾನ ಉದಾನ ಸಮಾನ ನಾಗ ಕೂರ್ಮ ಕ್ರಕರ ದೇವದತ್ತ ಧನಂಜಯ - ಇಂತೀ ದಶವಾಯುಗಳು. ಅಲ್ಲಿ ಪ್ರಾಣವಾಯು ಇಂದ್ರನೀಲವರ್ಣ ಕಂಡದ ಅಧೋ ಭಾಗೆಯಲ್ಲಿರ್ದ ಹೃದಯ ಪಾದ ನಾಬ್ಥಿ ನಾಶಿಕವಧರಂಗಳಲ್ಲಿ ಉಚ್ಛಾ ್ವಸ ನಿಶ್ವಾಸಂಗಳಿಂದ ಚರಿಸುತ್ತಿಹುದು. ಅಪಾನವಾಯು ಇಂದ್ರಗೋಪವರ್ಣ, ವಾಯು ಶಿಶ್ನ ಉರ ಜಾನು ಪಾದ ಜಂಘೆ ನಾಬ್ಥಿಮೂಲ ಜಠರದಲ್ಲಿರ್ದು ಮಲ ಮೂತ್ರಂಗಳ ಪೊರಮಡಿಸುತ್ತಿಹುದು. ವ್ಯಾನವಾಯು ಗೋಕ್ಷೀರವರ್ಣ, ಕರ್ಣ ಅಕ್ಷಿ ಘ್ರಾಣ ಗಂಡಾಗ್ರ ಗುಲ್ಫಂಗಳಲ್ಲಿ ವರ್ತಿಸುತ್ತ ಹಿಡಿವುದು ಬಿಡುವುದು ಇವು ಮೊದಲಾದ ವ್ಯಾಪಾರಂಗಳ ಮಾಡುತ್ತಿಹುದು. ಉದಾನವಾಯು ಎಳೆಮಿಂಚಿನವರ್ಣ, ಹಸ್ತಪಾದಾ ಸರ್ವಸಂದುಗಳಲ್ಲಿರ್ದು ಸಂದು ಸಂದುಗಳಿಗೆ ಪಟುತ್ವಮಂ ಪುಟ್ಟಿಸುತ್ತಿಹುದು. ಸಮಾನವಾಯು ಶುದ್ಧ ಸ್ಫಟಿಕವರ್ಣ, ದೇಹ ಮಧ್ಯದಲ್ಲಿರ್ದು ಸರ್ವ ಸಂದುಗಳಲ್ಲಿ ವ್ಯಾಪಿಸಿಕೊಂಡು, ಕೊಂಡಂತಹ ಅನ್ನರಸವ ಸರ್ವಾಂಗಕ್ಕೆ ಸಮಾನವಂ ಮಾಡಿ ಅಷ್ಟಕೋಟಿ ರೋಮನಾಳಂಗಳಿಗೂ ಹಂಚಿಕ್ಕಿ ಅಂಗವಂ ಪೋಷಿಸುತ್ತಿಹುದು. ನಾಗವಾಯು ಬಾಲಸೂರ್ಯನ ವರ್ಣ, ಕಂಠಸ್ಥಾನದ್ಲರ್ದು ವದ್ರ್ಥಿ ನಿರೋಧಂಗಳಿಂದುದ್ಗಾರಮಂ ಮಾಡಿಸುತ್ತಿಹುದು. ಕೂರ್ಮವಾಯು ಕುಂದೇಂದುವಿನ ವರ್ಣ, ನೇತ್ರಮೂಲದಲ್ಲಿರ್ದು ಉನ್ಮೀಲನ ನಿಮೀಲನಾಡಿಗಳನು ಮಾಡುತ್ತಿಹುದು. ಕೃಕರವಾಯು ನೀಲವರ್ಣ ಕಾಯದಲ್ಲಿರ್ದು ಕ್ಷುಧಾ ಧರ್ಮಂಗಳಂ ಮಾಡುತ್ತಿಹುದು. ದೇವದತ್ತವಾಯು ಸ್ಫಟಿಕವರ್ಣ, ತಾಳಮೂಲದಲ್ಲಿರ್ದು ಅಗುಳಿಕೆಯಾರಡಿಗಳಂ ಪುಟ್ಟಿಸ್ಕ್ತುಹುದು. ಧನಂಜಯವಾಯು ಸಪ್ತ ಜಾಂಬೂನದ ವರ್ಣ, ಶೋಕರಾಗಂಗಳ ಪುಟ್ಟಿಸಿ ಹಾಡಿಸ್ಕ್ತುಹುದು. ಇಂತೀ ದಶವಾಯುಗಳ ದೇಹವನುದ್ಧರಿಸುತ್ತಿಹವು. ಈ ವಾಯುವನೇರಿ ಜೀವನು ಈಡಾಪಿಂಗಳ ಮಾರ್ಗದಲ್ಲಿ ವ್ಯವಹರಿಸುತ್ತಿಹನು. ಈ ವಾಯುಗ್ಕಯನರಿದು ಯೋಗಿಸುವುದೇ ಯೋಗ. ಕಪಿಲಸಿದ್ಧಮಲ್ಲಿಕಾರ್ಜುನನೆಂಬ ನಿಜವನೈದುವದೇ ಮಾರ್ಗವು
--------------
ಸಿದ್ಧರಾಮೇಶ್ವರ
ಯೋಗದ ಹೊಲಬ ನಾನೆತ್ತ ಬಲ್ಲೆನಯ್ಯಾ? ಯೋಗ ಶಿವಶಕ್ತಿ ಸಂಪುಟವಾಗಿಪ್ಪುದಲ್ಲದೆ, ಶಿವಶಕ್ತಿವಿಯೋಗವಪ್ಪ ಯೋಗವಿಲ್ಲವಯ್ಯಾ. ಹೃದಯಕಮಲದಲಿ ಇಪ್ಪಾತ ನೀನೆಯಲ್ಲದೆ, ಎನಗೆ ಬೇರೆ ಸ್ವತಂತ್ರವಿಲ್ಲ ಕೇಳಾ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಅಯ್ಯ, ಮನದ ಜಡ ಮಣ್ಣ ಕಳೆದುದಯ್ಯಾ. ಶಾಂತ ಉದಕದೊಳಗಿಕ್ಕಿ ತೊಳೆವೆ ನೋಡಯ್ಯಾ. ಅದರುದಕವನೆ ಮಾಡಿ ಯೋಗ ಕಂಪನಿಕ್ಕಿ ಮೊರವೆ ನೋಡಯ್ಯ. ಅದನೊಂದೆಡೆ ತೆಗೆದು ಬಂದು ಬರುಗಾಣದಕ್ಕಿ ಹಿಳೆವ ನೋಡಯ್ಯ. ಹಿಳಿದ ರಸದ ಕಂಪ ತೊಡೆವೆಡೆಯನೊಬ್ಬನೆ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಮಿಂಚಿನ ಸಂಚಾರದಂತೆ ಬಹುವರ್ಣದ ಬಣ್ಣದ ಗನ್ನದಂತೆ, ರಂಜನೆಯಲ್ಲಿ ರಂಜಿಸಿ ತೋರಿ ಅಡಗುವ ಪ್ರತಿಬಿಂಬದಂತೆ, ಅಂಗವಿದ್ದಳಿದು ತೋರುವ ಜಲಮಣಿಯೊಳಗಿನಂತೆ ನಿರಂಗದ ಸಂಗಕ್ಕೆ ಹೊರಗು ನಿಜಗುಣಯೋಗಿಯ ಯೋಗ.
--------------
ನಿಜಗುಣಯೋಗಿ
ಇನ್ನಷ್ಟು ... -->