ಅಥವಾ

ಒಟ್ಟು 9 ಕಡೆಗಳಲ್ಲಿ , 8 ವಚನಕಾರರು , 8 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮತಿಯೊಳಗೆ ದುರ್ಮತಿ ಹುಟ್ಟಿ, ಕಲಿ ಗಸಣಿಗೊಳಗಾದ ಪರಿಯ ನೋಡಾ ! ಜ್ಞಾನವನು ಅಜ್ಞಾನ ಬಂದು ನುಂಗಿದಡೆ, ಭಾನು ಗ್ರಹಣಕ್ಕೆ ಒಳಗಾದಂತೆ ಆದುದಲ್ಲಾ ! ಕ್ಷೀರವುಳ್ಳ ಪಶು ಕರುವನಗಲಿ ಅರಿಯದ ಮೋಹದಂತಿದ್ದುದಲ್ಲಾ. ಹೇಳುವಲ್ಲಿ ಯುಕ್ತ ಕೇಳುವಲ್ಲಿ ಮುಕ್ತನೆಂಬುದೆಲ್ಲವೂ, ಅಜ್ಞಾನಭಾವಕ್ಕೆ ಬಂದುದಲ್ಲಾ ! ನೀರ ಮೇಲಣ ಲಿಪಿಯ ಓದಬಲ್ಲವರುಂಟೆ ? ಸಾರಾಯ ವೇದ್ಯರಿಗಲ್ಲದೆ ? ಕನ್ನಡಿಯೊಳಗೆ ನೋಡೆ ಭಿನ್ನವಿದ್ದುದೆ ಅಯ್ಯಾ ? ತನ್ನಕಣ್ಣಿಂಗೆ ಕಾಣದಂತೆ ಇದ್ದಿತ್ತು ದರ್ಪಣದೊಳಗಣ ಬೆಳಗು. ಬೆಳಗಿನೊಳಗಣ ಬೆಳಗು, ಗುಹೇಶ್ವರನಿಪ್ಪೆಡೆಯ ತಿಳಿದು ನೋಡಿರೆ !
--------------
ಅಲ್ಲಮಪ್ರಭುದೇವರು
ಭಕ್ತಿಗೆ ಭಕ್ತ ಬಸವಣ್ಣನಯ್ಯಾ. ಮುಕ್ತಿಗೆ ಯುಕ್ತ ಬಸವಣ್ಣನಯ್ಯಾ. ಮುಕ್ತಿಗೆ ಮುಕ್ತ ಬಸವಣ್ಣನಯ್ಯಾ, ಕಪಿಲಸಿದ್ಧಮಲ್ಲಿನಾಥಯ್ಯಾ.
--------------
ಸಿದ್ಧರಾಮೇಶ್ವರ
ಲಿಂಗವೇ ಪತಿಯಾಗಿ, ತಾನು ಸತಿಯೆಂಬ ಭಾವದಲ್ಲಿ ಆಚರಿಸಿ, ಪಂಚೇಂದ್ರಿಯಸುಖಂಗಳ ಬಯಸದಿಹುದೀಗ ಶರಣಸ್ಥಲ ನೋಡಾ. ಇದಕ್ಕೆ ಶ್ರೀ ಮಹಾದೇವ್ದೋವಾಚ : ``ಪತಿರ್ಲಿಂಗಂ ಸತಿರ್ಭಾವಾಮಿತಿ ಯುಕ್ತಂ ಸದಾ ತಥಾ | ಪಂಚೇಂದ್ರಿಯಸುಖಂ ನಾಸ್ತಿ ಶರಣಸ್ಥಲಮುತ್ತಮಂ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಅಷ್ಟಾವರಣಗಳು ಯಾರಿಗೆ ಸಾಧ್ಯವಾಯಿತ್ತೆಂದಡೆ ಹೇಳಿಹೆ ಕೇಳಿರಣ್ಣ : ಗುರು ಸಾಧ್ಯವಾಯಿತ್ತು ಗುರುಭಕ್ತಂಗೆ ; ಲಿಂಗ ಸಾಧ್ಯವಾಯಿತ್ತು ನೀಲಲೋಚನೆತಾಯಿಗೆ ; ಜಂಗಮವು ಸಾಧ್ಯವಾಯಿತ್ತು ಬಸವೇಶ್ವರದೇವರಿಗೆ ; ಪಾದೋದಕ ಸಾಧ್ಯವಾಯಿತ್ತು ವೇಮನಾರಾಧ್ಯಂಗೆ ; ಪ್ರಸಾದ ಸಾಧ್ಯವಾಯಿತ್ತು ಬಿಬ್ಬಿಬಾಚಯ್ಯಂಗೆ ; ವಿಭೂತಿ ಸಾಧ್ಯವಾಯಿತ್ತು ಓಹಿಲಯ್ಯಗಳಿಗೆ ; ರುದ್ರಾಕ್ಷಿ ಸಾಧ್ಯವಾಯಿತ್ತು ಚೇರಮರಾಯಗೆ ; ಪಂಚಾಕ್ಷರಿ ಸಾಧ್ಯವಾಯಿತ್ತು ಅಜಗಣ್ಣಂಗೆ. ಇನ್ನು ಷಟ್‍ಸ್ಥಲದ ನಿರ್ಣಯವ ಕೇಳಿ : ಭಕ್ತಸ್ಥಲ ಬಸವಣ್ಣಂಗಾಯಿತ್ತು ; ಮಾಹೇಶ್ವರಸ್ಥಲ ಮಡಿವಾಳಯ್ಯಂಗಾಯಿತ್ತು ; ಪ್ರಸಾದಿಸ್ಥಲ ಚೆನ್ನಬಸವಣ್ಣಂಗಾಯಿತ್ತು ; ಪ್ರಾಣಲಿಂಗಿಸ್ಥಲ ಸಿದ್ಭರಾಮಯ್ಯಂಗಾಯಿತ್ತು ; ಶರಣಸ್ಥಲ ಪ್ರಭುದೇವರಿಗಾಯಿತ್ತು; ಐಕ್ಯಸ್ಥಲ ಅಜಗಣ್ಣಂಗಾಯಿತ್ತು. ಇನ್ನು ಷಡುಸ್ಥಲದ ವಿವರವಂ ಪೇಳ್ವೆನು.- ಭಕ್ತಸ್ಥಲದ ವಿವರವು : ಗುರುಲಿಂಗಜಂಗಮವು ಒಂದೆಯೆಂದು ಕಂಡು ಸದಾಚಾರದಲ್ಲಿ ನಡೆವನು, ತ್ರಿಕಾಲ ಮಜ್ಜನವ ನೀಡುವನು, ಲಾಂಛನಧಾರಿಗಳ ಕಂಡಡೆ ವಂದನೆಯ ಮಾಡುವನು, ಆಪ್ಯಾಯನಕ್ಕೆ ಅನ್ನವ ನೀಡುವನು, ಜಂಗಮಕ್ಕೆ ಪ್ರತಿ ಉತ್ತರವ ಕೊಡನು. ಪೃಥ್ವಿ ಅಂಗವಾಗಿಪ್ಪುದೆ ಭಕ್ತಿಸ್ಥಲವು. ಸಾಕ್ಷಿ : 'ಮಜ್ಜನಂ ತು ತ್ರಿಕಾಲೇಷು ಶುಚಿಪಾಕಸಮರ್ಪಿತಂ | ಭವಿಸಂಗಪರಿತ್ಯಾಗಂ ಇತ್ಯೇತೇ ಭಕ್ತಿಕಾರಣಂ || ಸದಾಚಾರೇ ಶಿವಭಕ್ತಿಃ ಲಿಂಗಜಂಗಮೇಕಾದ್ಥಿಕಂ | ಲಾಂಛನೇನ ಶರಣ್ಯಂ ಚ ಭಕ್ತಿಸ್ಥಲಂ ಮಹೋತ್ತಮಂ ||' ಇನ್ನು ಮಾಹೇಶ್ವರಸ್ಥಲದ ವಿವರವು : ಪರಸ್ತ್ರೀ ಪರನಿಂದೆ ಪರದ್ರವ್ಯ ಪರಹಿಂಸೆ ಅನೃತ ಇವು ಪಂಚಮಹಾಪಾತಕವು, ಇವ ಬಿಟ್ಟು ಲಿಂಗನಿಷ್ಠೆಯಲ್ಲಿ ಇರ್ದು ಜಲವೆ ಅಂಗವಾಗಿಪ್ಪುದೆ ಮಾಹೇಶ್ವರಸ್ಥಲವು. ಸಾಕ್ಷಿ : 'ಪರಸ್ತ್ರೀಯಂ ಪರಾರ್ಥಂ ಚ ವರ್ಜಿತೋ ಭಾವಶುದ್ಧಿಮಾನ್ | ಲಿಂಗನಿಸ್ಸಂಗಿಯುಕ್ತಾತ್ಮಾ ಮಹೇಶಸ್ಥಲಮುತ್ತಮಂ ||' ಇನ್ನು ಪ್ರಸಾದಿಸ್ಥಲದ ವಿವರ : ಲಿಂಗಕ್ಕೆ ಅರ್ಪಿಸಿದುದ ಲಿಂಗನೆನಹಿನಿಂದೆ ಸ್ವೀಕರಿಸುವುದು, ಅನರ್ಪಿತವ ವರ್ಜಿಸುವುದು, ಲಿಂಗದೊಡನೆ ಉಂಬುವುದು, ಅಗ್ನಿಯೆ ಅಂಗವಾಗಿಪ್ಪುದೆ ಪ್ರಸಾದಿಸ್ಥಲ. ಇನ್ನು ಪ್ರಾಣಲಿಂಗಿಸ್ಥಲದ ವಿವರವು : ಸುಗುಣ ದುರ್ಗುಣ ಉಭಯವನತಿಗಳೆದು ಸುಖ ದುಃಖ ಸ್ತುತಿ ನಿಂದೆ ಶತ್ರು ಮಿತ್ರಾದಿಗಳೆಲ್ಲರಂ ಸಮಾನಂಗಂಡು ವಾಯುವೆ ಅಂಗವಾಗಿಪ್ಪುದೆ ಪ್ರಾಣಲಿಂಗಿಸ್ಥಲ. ಇನ್ನು ಶರಣಸ್ಥಲದ ವಿವರವು : ಸತಿಪತಿಭಾವ ಅಂಗಲಿಂಗವಾಗಿಪ್ಪುದು, ಪಂಚೇಂದ್ರಿಯಸುಖ ನಾಸ್ತಿಯಾಗಿಪ್ಪುದು, ಆಕಾಶವೆ ಅಂಗವಾಗಿಪ್ಪುದು, ಇದು ಶರಣಸ್ಥಲವು. ಸಾಕ್ಷಿ : 'ಪತಿರ್ಲಿಂಗಂ ಸತೀ ಚಾsಹಂ ಇತಿ ಯುಕ್ತಂ ಸನಾತನಃ | ಪಂಚೇಂದ್ರಿಯಸುಖಂ ನಾಸ್ತಿ ಶರಣಸ್ಥಲಮುತ್ತಮಂ ||' ಇನ್ನು ಐಕ್ಯಸ್ಥಲದ ವಿವರವು : ಅರಿಷಡ್ವರ್ಗಂಗಳಿಲ್ಲದಿಹರು, ನಿರ್ಭಾವದಲ್ಲಿಹರು, ಷಡೂರ್ಮಿಗಳಿಲ್ಲದಿಹರು, ಅಷ್ಟವಿಧಾರ್ಚನೆ ಇಲ್ಲದಿಹರು, ಉರಿಯುಂಡ ಕರ್ಪುರದ ಹಾಗೆ ಇಹರು, ಆತ್ಮನೆ ಅಂಗವಾಗಿಪ್ಪುದು ಐಕ್ಯಸ್ಥಲವು. ಸಾಕ್ಷಿ : 'ಷಡೂರ್ಮಿಯೋಗಷಡ್ವರ್ಗಂ ನಾಸ್ತಿ ಚಾಷ್ಟವಿಧಾರ್ಚನಂ | ನಿರ್ಭಾವಂ ಶಿವಲಿಂಗೈಕ್ಯಂ ಶಿಖಿಕರ್ಪೂರಸಯೋಗವತ್||' ಹೀಗೆ ಗಣಂಗಳು ನಡೆದ ಮಾರ್ಗದಲ್ಲಿ ನಡೆದಡೆ ಅಂದೇನೊ ಇಂದೇನೊ ? ಇಂತೀ ಅಷ್ಟಾವರಣಗಳ, ಷಡುಸ್ಥಲದ ಮಾರ್ಗವನು ಎನ್ನೊಳು ಅರುಹಿದಾತ, ನಮ್ಮ ಶಾಂತಕೂಡಲಸಂಗಮದೇವ.
--------------
ಗಣದಾಸಿ ವೀರಣ್ಣ
ಶ್ರೀಗುರು ತನ್ನ ಲಿಂಗವನೆ ಅಂಗದ ಮೇಲೆ ಬಿಜಯಂಗೆಯ್ಸಿದನಾಗಿ, ಆ ಲಿಂಗಕ್ಕೆ ನಾನು ಅಷ್ಟವಿಧಾರ್ಚನೆ, ಷೋಡಶೋಪಚಾರಗಳ ಮಾಡಿ, ಚತುರ್ವಿಧಫಲಪದಪುರುಷಾರ್ಥವ ಪಡೆದು, ಆ ಪರಿಭವಕ್ಕೆ ಬರಲೊಲ್ಲದೆ, ನಾನು ನಿಷ್ಕಳವೆಂಬ ಹೊಲದಲ್ಲಿ ಒಂದು ನಿಧಾನವ ಕಂಡೆ. ಆ ನಿಧಾನದ ಹೆಸರಾವುದೆಂದಡೆ; ತ್ರೈಲಿಂಗದ ಆದಿಮೂಲಾಂಕುರವೊಂದಾದ ಚರಲಿಂಗವೆಂದು. ಆ ಚರಲಿಂಗದ ಪಾದಾಂಬುವ ತಂದೆನ್ನ ಇಷ್ಟಲಿಂಗದ ಚತುರ್ವಿಧಫಲಪದಪುರುಷಾರ್ಥವೆಂಬ ಕರಂಗಳಂ ತೊಳೆವೆ. ಅದೆಂತೆಂದೆಡೆ; ಸಾಲೋಕ್ಯಂ ಚ ತು ಸಾಮೀಪ್ಯಂ ಸಾರೂಪ್ಯಂ ಚ ಸಾಯುಜ್ಯತಾ ತದುಪೇಕ್ಷಕಭಕ್ತಶ್ಚ gõ್ಞರವಂ ನರಕಂ ವ್ರಜೇತ್ ಎಂದುದಾಗಿ, ಆ ಚರಲಿಂಗದ ಪ್ರಸಾದವ ತಂದೆನ್ನ ಇಷ್ಟಲಿಂಗದ ಜೀವಕಳೆಯ ಮಾಡುವೆ ಅದೆಂತೆಂದೆಡೆ; ಸ್ವಯಂಪ್ರಕಾಶರೂಪಶ್ಚ ಜಂಗಮೋ ಹಿ ನಿಗದ್ಯತೇ ಮತ್ತಂ, ಜಂಗಮಸ್ಯ ಪದೋದಂ ಚ ಯುಕ್ತಂ ಲಿಂಗಾಭಿಷೇಚನೇ ತತ್ಪ್ರಸಾದೋ ಮಹಾದೇವ ನೈವೇದ್ಯಂ ಮಂಗಲಂ ಪರಂ ಎಂದುದಾಗಿ, ಆ ಲಿಂಗವೆ ಅಂಗ, ಅಂಗವೆ ಲಿಂಗ, ಆ ಲಿಂಗವೆ ಪ್ರಾಣ, ಆ ಪ್ರಾಣ ಲಿಂಗವಾದುದು. ಇದು ಚತುರ್ವಿಧಫಲಪದಪುರುಷಾರ್ಥವ ಮೀರಿದ ಘನವು. ಕೂಡಲಸಂಗಮದೇವಯ್ಯಾ. ಈ ದ್ವಯದ ಪರಿಯ ನಿಮ್ಮ ಶರಣರನೆ ಬಲ್ಲ.
--------------
ಬಸವಣ್ಣ
ಕಂದ : ಬಣ್ಣಿಪರಳವೆ ಶ್ರೀ ಪಂಚಾಕ್ಷರಿ ಉನ್ನತ ಮಹಿಮೆಯ ತ್ರಿಜಗದೊಳಗಂ ಎನ್ನಯ ಬಡಮತಿಯುಳ್ಳಷ್ಟಂ ಇನ್ನಂ ಪೊಗಳ್ವೆ ಸಿದ್ಧಮಲ್ಲನ ಕೃಪೆಯಿಂ. ರಗಳೆ :ಗುರು ಮಹಿಮೆಯನೋಪ ಪಂಚಾಕ್ಷರಿಯು ನಾಗಭೂಷಣನರ್ತಿನಾಮ ಪಂಚಾಕ್ಷರಿಯು | 1 | ನಡೆವುತಂ ನುಡಿವುತಂ ಶಿವನೆ ಪಂಚಾಕ್ಷರಿಯು ಕುಡುತಲಿ ಕೊಂಬುತಲಿ ಹರನೆ ಪಂಚಾಕ್ಷರಿಯು ಉಡುತಲಿ ಉಂಬುತಲಿ ಸದ್ಗುರುವೇ ಪಂಚಾಕ್ಷರಿಯು ಬಿಡದೆ ಜಪಿಸಲು ಸದ್ಯೋನ್ಮುಕ್ತಿ ಪಂಚಾಕ್ಷರಿಯು. | 2 | ಸಟೆ ಠಕ್ಕು ಠೌಳಿಯಲ್ಲಿ ಬಿಡದೆ ಪಂಚಾಕ್ಷರಿಯು ದಿಟಪುಟದಲ್ಲಿ ಆವಾ ಪಂಚಾಕ್ಷರಿಯು ಕುಟಿಲ ವಿಷಯಂಗಳೊಲಿದು ಪಂಚಾಕ್ಷರಿಯು ನಟಿಸಿ ಜಪಿಸಲು ಮುಕ್ತಿ ಈವ ಪಂಚಾಕ್ಷರಿಯು. | 3 | ಮಂತ್ರಯೇಳ್ಕೋಟಿಗೆ ತಾಯಿ ಪಂಚಾಕ್ಷರಿಯು ಅಂತ್ಯಜಾಗ್ರಜ ವಿಪ್ರರೆಲ್ಲ ಪಂಚಾಕ್ಷರಿಯು ಸಂತತಂ ಬಿಡದೆ ಜಪಿಸುವದು ಪಂಚಾಕ್ಷರಿಯು ಎಂತು ಬಣ್ಣಿಪರಳವಲ್ಲ ಪಂಚಾಕ್ಷರಿಯು. | 4 | ಆದಿ ಪಂಚಾಕ್ಷರಿಯು ಅನಾದಿ ಪಂಚಾಕ್ಷರಿಯು ಭೇದ್ಯ ಪಂಚಾಕ್ಷರಿಯು [ಅಭೇದ್ಯ ಪಂಚಾಕ್ಷರಿಯು] ಸಾಧಿಸುವಗೆ ಸತ್ಯ ನಿತ್ಯ ಪಂಚಾಕ್ಷರಿಯು ಬೋಧೆ ಶೃತಿತತಿಗಳಿಗೆ ಮಿಗಿಲು ಪಂಚಾಕ್ಷರಿಯು. | 5 | ಪಂಚಾನನದುತ್ಪತ್ಯದಭವ ಪಂಚಾಕ್ಷರಿಯು ಪಂಚಮಯ ಬ್ರಹ್ಮಮಯಂ ಜಗತ್ ಪಂಚಾಕ್ಷರಿಯು ಪಂಚವಿಂಶತಿತತ್ವಕಾದಿ ಪಂಚಾಕ್ಷರಿಯು ಪಂಚಶತಕೋಟಿ ಭುವನೇಶ ಪಂಚಾಕ್ಷರಿಯು. | 6 | ಹರಿಯಜರ ಗರ್ವವ ಮುರಿವ ಪಂಚಾಕ್ಷರಿಯು ಉರಿಲಿಂಗವಾಗಿ ರಾಜಿಸುವ ಪಂಚಾಕ್ಷರಿಯು ಸ್ಮರಣೆಗೆ ಸರಿಯಿಲ್ಲ ಪ್ರಣಮಪಂಚಾಕ್ಷರಿಯು ಸ್ಮರಿಸುವಾತನೆ ನಿತ್ಯಮುಕ್ತ ಪಂಚಾಕ್ಷರಿಯು. | 7 | ಪರಮ ಮುನಿಗಳ ಕರ್ಣಾಭರಣ ಪಂಚಾಕ್ಷರಿಯು ಹರನ ಸಾಲೋಕ್ಯದ ಪದವನೀವ ಪಂಚಾಕ್ಷರಿಯು ಉರಗತೊಡೆಶಿವನನೊಲಿಸುವರೆ ಪಂಚಾಕ್ಷರಿಯು ಕರ್ಮಗಿರಿಗೊಜ್ರ ಸುಧರ್ಮ ಪಂಚಾಕ್ಷರಿಯು. | 8 | ನಾನಾ ಜನ್ಮದಲ್ಲಿ ಹೊಲೆಯ ಕಳೆವ ಪಂಚಾಕ್ಷರಿಯು ಮನಸ್ಮರಣೆಗೆ ಸರಿಯಿಲ್ಲ ಪಂಚಾಕ್ಷರಿಯು ಜ್ಞಾನವೇದಿಕೆ ಮುಖ್ಯ ಪಂಚಾಕ್ಷರಿಯು ಧ್ಯಾನಿಸುವ ನೆರೆವ ತಾನೆ ಪಂಚಾಕ್ಷರಿಯು. | 9 | ಏನ ಬೇಡಿದಡೀವ ದಾನಿ ಪಂಚಾಕ್ಷರಿಯು ಸ್ವಾನುಜ್ಞಾನದಲ್ಲು[ದಿ]ಸಿದಂಥ ಪಂಚಾಕ್ಷರಿಯು ಭಾನು ಅಘತಿಮಿರಕ್ಕೆ ತಾನೆ ಪಂಚಾಕ್ಷರಿಯು ಕ್ಷಿತಿಭುವನಗಳ ಬೇಡಲೀವ ಪಂಚಾಕ್ಷರಿಯು. | 10 | ಕಾನನ ಭವತರು ವಹ್ನಿ ಪಂಚಾಕ್ಷರಿಯು ಯತಿಗೆ ಯತಿತನವೀವ ಗತಿಯು ಪಂಚಾಕ್ಷರಿಯು ಉನ್ನತ ಸಿದ್ಧತ್ವವನೀವ ಸಿದ್ಧಿ ಪಂಚಾಕ್ಷರಿಯು ಭಾನು ಅಘತಿಮಿರಕ್ಕೆ ತಾನೆ ಪಂಚಾಕ್ಷರಿಯು ಗತಿ ಮೋಕ್ಷಗಳ ಬೇಡೆ ಕುಡುವ ಪಂಚಾಕ್ಷರಿಯು. | 11 | ಅವಲಂಬಿಗೆ ಅವಲಂಬ ಪಂಚಾಕ್ಷರಿಯು ನಿರಾವಲಂಬಿಗೆ ನಿರಾವಲಂಬ ಪಂಚಾಕ್ಷರಿಯು ಕಾವ ಸಂಹರ ಭಜಿಪರಿಗೆ ಪಂಚಾಕ್ಷರಿಯು ಮಾವದ್ಯುಮಣಿಧರನನೊಲಿಪ ಪಂಚಾಕ್ಷರಿಯು. | 12 | ಅರಿವರ್ಗಗಳ ಮುರಿವ ಶತೃ ಪಂಚಾಕ್ಷರಿಯು ಕರಿಗಳೆಂಟನು ಹೊಡೆವ ಸಿಂಹ ಪಂಚಾಕ್ಷರಿಯು ಹರಿವ ದಶವಾಯುಗಳನಳಿವ ಪಂಚಾಕ್ಷರಿಯು ನೆರೆ ಸಪ್ತವ್ಯಸನಗಳಿಗೊಹ್ನಿ ಪಂಚಾಕ್ಷರಿಯು. | 13 | ತ್ರಿಗುಣಗಳ ಕೆಡಿಪ ನಿರ್ಗುಣವು ಪಂಚಾಕ್ಷರಿಯು ಅಘವೈದೇಂದ್ರಿಯಕೆ ಲಿಂಗೇಂದ್ರಿಯ ಪಂಚಾಕ್ಷರಿಯು ಮಿಗೆ ಕರ್ಮೇಂದ್ರಿಗಳ ತೆರೆತೆಗೆವ ಪಂಚಾಕ್ಷರಿಯು ಝಗಝಗಿಸಿ ಸರ್ವಾಂಗಪೂರ್ಣ ಪಂಚಾಕ್ಷರಿಯು. | 14 | ಷಡೂರ್ಮಿಗಳ ಗಡವನಳಿವ ಪಂಚಾಕ್ಷರಿಯು ಷಡುಕರ್ಮಗಳ ಮೆಟ್ಟಿನಿಲುವ ಪಂಚಾಕ್ಷರಿಯು ಷಡುವೇಕದಂತಿಗೆ ನಾಥ ಪಂಚಾಕ್ಷರಿಯು ಬಿಡದೆ ಜಪಿಸಿದಡವ ಮುಕ್ತ ಪಂಚಾಕ್ಷರಿಯು. | 15 | ಸಂಸಾರಸಾಗರಕೆ ಹಡಗ ಪಂಚಾಕ್ಷರಿಯು ವಂಶಗಳನಳಿವ ನಿರ್ವಂಶ ಪಂಚಾಕ್ಷರಿಯು ಸಂಶಯವಿಲ್ಲದಲಿ ನಿಸ್ಸಂಶಯ ಪಂಚಾಕ್ಷರಿಯು ವಿಂಶಾರ್ಥ ಬಿಡದೆ ಜಪಿಸುವದು ಪಂಚಾಕ್ಷರಿಯು. | 16 | ಗುರುಕೃಪಕಧಿಕದಿ ಭವದಗ್ಧ ಪಂಚಾಕ್ಷರಿಯು ಕರದ ಲಿಂಗಬೆಳಗು ಪ್ರಣಮಪಂಚಾಕ್ಷರಿಯು ನೆರೆಶ್ರೋತ್ರಬೋಧೆ ನಿರ್ಬೋಧೆ ಪಂಚಾಕ್ಷರಿಯು ನಿರುತ ಜಪಿಸುವನೆ ನಿರಾಪೇಕ್ಷ ಪಂಚಾಕ್ಷರಿಯು. | 17 | ದೀಕ್ಷಾ ಪಂಚಾಕ್ಷರಿಯು ದೀಕ್ಷ ಪಂಚಾಕ್ಷರಿಯು ಮೋಕ್ಷಾ ಪಂಚಾಕ್ಷರಿಯು ಮೋಕ್ಷ ಪಂಚಾಕ್ಷರಿಯು ಶಿಕ್ಷಾ ಪಂಚಾಕ್ಷರಿಯು ಶಿಕ್ಷ ಪಂಚಾಕ್ಷರಿಯು ಭಿಕ್ಷಾ ಪಂಚಾಕ್ಷರಿಯು ಭಿಕ್ಷ ಪಂಚಾಕ್ಷರಿಯು | 18 | ಚಿದ್ಭಸ್ಮದೊಳುವಾಭರಣ ಪಂಚಾಕ್ಷರಿಯು ಚಿದ್ಮಣಿಗಳ ಸ್ಥಾನ ಸ್ಥಾನ ಪಂಚಾಕ್ಷರಿಯು ಚಿದಂಗ ಸರ್ವದೊಳು ಪೂರ್ಣ ಪಂಚಾಕ್ಷರಿಯು ಚಿದಂಗ ಲಿಂಗಸಂಗಸಂಯೋಗ ಪಂಚಾಕ್ಷರಿಯು. | 19 | ಪಾದಸಲಿಲಂ ಪ್ರಸಾದಾದಿ ಪಂಚಾಕ್ಷರಿಯು ಆದಿಕ್ಷೇತ್ರಕ್ಕೆ ವೀರಶೈವ ಪಂಚಾಕ್ಷರಿಯು ಸಾಧಿಸುವ ಸದ್ಭಕ್ತಿಯನೀವ ಪಂಚಾಕ್ಷರಿಯು ಓದುವಾತನ ವೇದವಿತ್ತು ಪಂಚಾಕ್ಷರಿಯು. | 20 | ಅಷ್ಟಾವರಣಕೆ ಮಹಾಶ್ರೇಷ* ಪಂಚಾಕ್ಷರಿಯು ದುಷ್ಟನಿಗ್ರಹ ಶಿಷ್ಟಪಾಲ ಪಂಚಾಕ್ಷರಿಯು ಮುಟ್ಟಿ ನೆನದರೆ ಮುಕ್ತಿಸಾರ ಪಂಚಾಕ್ಷರಿಯು ಇಷ್ಟಪ್ರಾಣಭಾವದೀಶ ಪಂಚಾಕ್ಷರಿಯು. | 21 | ಭಕ್ತಿಯುಕ್ತಿಯು ಮಹಾಬೆಳಗು ಪಂಚಾಕ್ಷರಿಯು ನಿತ್ಯನೆನೆವರಿಗೆ ತವರ್ಮನೆಯು ಪಂಚಾಕ್ಷರಿಯು ಸತ್ಯಸದ್ಗುಣಮಣಿಹಾರ ಪಂಚಾಕ್ಷರಿಯು ವಿತ್ತ ಸ್ತ್ರೀ ನಿರಾಸೆ ಮಹೇಶ ಪಂಚಾಕ್ಷರಿಯು. | 22 | ಪರಧನ ಪರಸ್ತ್ರೀಗೆಳಸ ಪಂಚಾಕ್ಷರಿಯು ನಿರುತ ಮಹೇಶ್ವರಾಚಾರ ಪಂಚಾಕ್ಷರಿಯು ಪರಮ ಪ್ರಸಾದಿಸ್ಥಲ ತಾನೆ ಪಂಚಾಕ್ಷರಿಯು | 23 | ಈ ಪರಿಯ ತೋರೆ ಮಹಾಮೂರುತಿ ಪಂಚಾಕ್ಷರಿಯು ತಾ ಪರಬ್ರಹ್ಮ ನಿನಾದ ಪಂಚಾಕ್ಷರಿಯು | 24 | ತಟ್ಟಿ ಮುಟ್ಟುವ ರುಚಿ ಶಿವಾರ್ಪಣ ಪಂಚಾಕ್ಷರಿಯು ಕೊಟ್ಟುಕೊಂಬುವ ಪ್ರಸಾದಾಂಗ ಪಂಚಾಕ್ಷರಿಯು ನಷ್ಟ ಶರೀರಕೆ ನೈಷೆ*ವೀವ ಪಂಚಾಕ್ಷರಿಯು ಭ್ರಷ್ಟ ಅದ್ವೈತಿಗತೀತ ಪಂಚಾಕ್ಷರಿಯು. | 25 | ಸ್ಥೂಲತನುವಿಗೆ ಇಷ್ಟಲಿಂಗ ಪಂಚಾಕ್ಷರಿಯು ಮೇಲೆ ಸೂಕ್ಷ್ಮಕೆ ಪ್ರಾಣಲಿಂಗ ಪಂಚಾಕ್ಷರಿಯು ಲೀಲೆ ಕಾರಣ ಭಾವಲಿಂಗ ಪಂಚಾಕ್ಷರಿಯು ಬಾಳ್ವ ತ್ರಿತನುವಿಗೆ ತ್ರಿಲಿಂಗ ಪಂಚಾಕ್ಷರಿಯು. | 26 | ಪ್ರಾಣಲಿಂಗದ ಹೊಲಬು ತಾನೆ ಪಂಚಾಕ್ಷರಿಯು ಕಾಣಿಸುವ ಇಷ್ಟರೊಳು ಭಾವ ಪಂಚಾಕ್ಷರಿಯು ಮಾಣದೊಳಹೊರಗೆ ಬೆಳಗು ಪಂಚಾಕ್ಷರಿಯು ಕ್ಷೋಣಿಯೊಳು ಮಿಗಿಲೆನಿಪ ಬಿರಿದು ಪಂಚಾಕ್ಷರಿಯು. | 27 | ಆರು ಚಕ್ರಕೆ ಆಧಾರ ಪಂಚಾಕ್ಷರಿಯು ಆರು ಅಧಿದೈವಗಳ ಮೀರ್ದ ಪಂಚಾಕ್ಷರಿಯು ಆರು ವರ್ಣಗಳ ಬಗೆದೋರ್ವ ಪಂಚಾಕ್ಷರಿಯು ಆರು ಚಾಳ್ವೀಸೈದಕ್ಷರಂಗ ಪಂಚಾಕ್ಷರಿಯು. | 28 | ಆರು ಶಕ್ತಿಗಳ ಆರಂಗ ಪಂಚಾಕ್ಷರಿಯು ಆರು ಭಕ್ತಿಗಳ ಚಿದ್ರೂಪ ಪಂಚಾಕ್ಷರಿಯು ಆರು ಲಿಂಗದ ಮೂಲ ಬೇರು ಪಂಚಾಕ್ಷರಿಯು ಆರು ತತ್ವವಿಚಾರ ಪಂಚಾಕ್ಷರಿಯು. | 29 | ಯೋಗಷ್ಟ ಶಿವಮುಖವ ಮಾಡ್ವ ಪಂಚಾಕ್ಷರಿಯು ನಾಗಕುಂಡಲ ಊಧ್ರ್ವವಕ್ತ್ರ ಪಂಚಾಕ್ಷರಿಯು ಜಾಗ್ರ ಸ್ವಪ್ನ ಸುಷುಪ್ತಿಯಲ್ಲಿ ಪಂಚಾಕ್ಷರಿಯು ಸಾಗಿಸಿ ಸುಜ್ಞಾನವೀವ ಪಂಚಾಕ್ಷರಿಯು. | 30 | ಇಷ್ಟ ಪ್ರಾಣಲಿಂಗ ಹೊಲಿಗೆ ಪಂಚಾಕ್ಷರಿಯು ಅಷ್ಟದಳಕಮಲದ ಪೀಠ ಪಂಚಾಕ್ಷರಿಯು ದೃಷ್ಟಿ ಅನುಮಿಷಭಾವ ಪಂಚಾಕ್ಷರಿಯು ಕೊಟ್ಟು ಸಲಹುವದಷ್ಟ ಪಂಚಾಕ್ಷರಿಯು. | 31 | ತನು ಸೆಜ್ಜೆ ಪ್ರಾಣವೆ ಲಿಂಗ ಪಂಚಾಕ್ಷರಿಯು ಮನ ಪೂಜಾರಿಯು ಭಾವ ಪುಷ್ಪ ಪಂಚಾಕ್ಷರಿಯು ಇನಿತು ಕೂಡುವುದು ಶಿವಶರಣ ಪಂಚಾಕ್ಷರಿಯು ಬಿನುಗಿಗಳವಡದ ಈ ಸತ್ಯ ಪಂಚಾಕ್ಷರಿಯು. | 32 | ಶರಣಸ್ಥಲದಂಗ ವೈರಾಗ್ಯ ಪಂಚಾಕ್ಷರಿಯು ಶರಣಸತಿ ಲಿಂಗಪತಿ ತಾನೆ ಪಂಚಾಕ್ಷರಿಯು ಶರಣುವೊಕ್ಕರ ಕಾವ ಬಿರಿದು ಪಂಚಾಕ್ಷರಿಯು ಶರಣಗಣರಿಗೆ ಮಾತೆಪಿತನು ಪಂಚಾಕ್ಷರಿಯು. | 33 | ಶರಣಂಗೆ ಸುಜ್ಞಾನದಿರವು ಪಂಚಾಕ್ಷರಿಯು ಶರಣಂಗೆ ಮುಕ್ತಿಯಾಗರವು ಪಂಚಾಕ್ಷರಿಯು ಶರಣಂಗೆ ಭಕ್ತಿಯ ಸೋಪಾನ ಪಂಚಾಕ್ಷರಿಯು ಶರಣಂಗೆ ಪರಮಜಲಕೂಪ ಪಂಚಾಕ್ಷರಿಯು. | 34 | ಶರಣಂಗೆ ಶೈವದ ಗೃಹವು ಪಂಚಾಕ್ಷರಿಯು ಶರಣರಿಗೆ ಸುರಧೇನು ಅಮೃತ ಪಂಚಾಕ್ಷರಿಯು ಶರಣರಿಗೆ ಕಲ್ಪತರು ಫಲವು ಪಂಚಾಕ್ಷರಿಯು ಶರಣರಿಗೆ ಚಿಂತಾಮಣಿ ತಾನೆ ಪಂಚಾಕ್ಷರಿಯು. | 35 | ಶರಣಪದ ಬೇಡುವರಿಗೀವ ಪಂಚಾಕ್ಷರಿಯು ಶರಣ ನಡೆನುಡಿ ಪೂರ್ಣಮಯವು ಪಂಚಾಕ್ಷರಿಯು ಶರಣರಿಗೆ ಶಿವನಚ್ಚು ಮೆಚ್ಚು ಪಂಚಾಕ್ಷರಿಯು ಶರಣರ್ದೂಷಣರೆದೆಗಿಚ್ಚು ಪಂಚಾಕ್ಷರಿಯು. | 36 | ಶರಣು ಶಿವಾನಂದ ಜಲಗಡಲು ಪಂಚಾಕ್ಷರಿಯು ಶರಣರ ಶರೀರ ಮೇಲೆ ಹೊದಿಕೆಯು ಪಂಚಾಕ್ಷರಿಯು ಶರಣು ಕೃತ್ಯಕೆ ವೈದ್ಯ ಕಾಣಾ ಪಂಚಾಕ್ಷರಿಯು ಶರಣು ಸುಜ್ಞಾನದರ್ಪಣವು ಪಂಚಾಕ್ಷರಿಯು. | 37 | ಶರಣ ಚಿದ್ರೂಪದ ಬಯಕೆಯಳಿದ ಪಂಚಾಕ್ಷರಿಯು ಶರಣಷ್ಟೈಶ್ವರ್ಯದೊಳಗಿಡದ ಪಂಚಾಕ್ಷರಿಯು ಶರಣಪೂಜಿಸಿ ಫಲವ ಬೇಡು[ವ] ಪಂಚಾಕ್ಷರಿಯು ಶರಣೊಜ್ರಪಂಜರದ ಬಿರಿದು ಪಂಚಾಕ್ಷರಿಯು. | 38 | ಶರಣಾಸೆ ರೋಷವನಳಿವ ಪಂಚಾಕ್ಷರಿಯು ಶರಣಾಸೆಯ ಮೋಹಲತೆ ಚಿವುಟುವ ಪಂಚಾಕ್ಷರಿಯು ಶರಣಜ್ಞಾನದತರು ಕುಠಾರ ಪಂಚಾಕ್ಷರಿಯು ಶರಣರುದಯಾಸ್ತಮಾನ ತಾನೆ ಪಂಚಾಕ್ಷರಿಯು. | 39 | ಶರಣರ ನಡೆನುಡಿ ಒಂದು ಮಾಡಿ[ದ] ಪಂಚಾಕ್ಷರಿಯು ಶರಣ ಸಂಸಾರಕಿಕ್ಕಿಡದ ಪಂಚಾಕ್ಷರಿಯು ಶರಣಗುಣ ಚಿಹ್ನಕೊರೆ ಶಿಲೆಯು ಪಂಚಾಕ್ಷರಿಯು ಶರಣರೊಡಗೂಡಿದಾನಂದ ಪಂಚಾಕ್ಷರಿಯು. | 40 | ಶರಣರ ಕರ್ಣದಾಭರಣ ಪಂಚಾಕ್ಷರಿಯು ಶರಣ ನುಡಿವ ಮಹಾವಸ್ತು ಪಂಚಾಕ್ಷರಿಯು ಶರಣ ಕೇಳುವ ಕೀರ್ತಿವಾರ್ತೆ ಪಂಚಾಕ್ಷರಿಯು ಶರಣಾಸರ ಬೇಸರಗಳ ಕಳೆವ ಪಂಚಾಕ್ಷರಿಯು. | 41 | ಶರಣರ ಚರಿತ್ರೆಯ ಬರೆವ ಲಿಖಿತ ಪಂಚಾಕ್ಷರಿಯು ಶರಣೀಶ ಲಾಂಛನಕಿಡದ ಪಂಚಾಕ್ಷರಿಯು ಶರಣ ತನು ಬಾಳಳಿದ ಬೋಧೆ ಪಂಚಾಕ್ಷರಿಯು ಶರಣನ ಮನ ಬೋಳಮಾಡಿರುವ ಪಂಚಾಕ್ಷರಿಯು. | 42 | ಶರಣಂಗೆ ಪರತತ್ವಬೋಧವೆ ಪಂಚಾಕ್ಷರಿಯು ಶರಣ ಪರವು ಶಾಂತಿ ಭಸ್ಮಧೂಳ ಪಂಚಾಕ್ಷರಿಯು ಶರಣ ಪರಬ್ರಹ್ಮಮಣಿ ಪಂಚಾಕ್ಷರಿಯು ಶರಣ ಪರಾತ್ಪರವು ಪಂಚಾಕ್ಷರಿಯು, | 43 | ಶರಣಂಗೆ ದೃಢವೆಂಬ ದಂಡ ಪಂಚಾಕ್ಷರಿಯು ಶರಣ ಕರ್ಮವ ಸುಟ್ಟಗ್ನಿ ಪಂಚಾಕ್ಷರಿಯು ಶರಣ ತೃಪ್ತಿಗೆ ನಿತ್ಯಾಮೃತ ಪಂಚಾಕ್ಷರಿಯು ಶರಣ ಹಿಡಿದ ವ್ರತವೈಕ್ಯ ಪಂಚಾಕ್ಷರಿಯು. | 44 | ಶರಣ ಪೂಜಿಪ ಪೂಜೆ ಐಕ್ಯ ಪಂಚಾಕ್ಷರಿಯು ಶರಣಂಗೆ ಐಕ್ಯಪದವೀವ ಪಂಚಾಕ್ಷರಿಯು ಶರಣ ಮಾಡುವ ಕ್ರಿಯಾದ್ವೈತ ಪಂಚಾಕ್ಷರಿಯು ಶರಣಂಗೆ ಇವು ನಾಸ್ತಿ ಪಂಚಾಕ್ಷರಿಯು. | 45 | ನೇಮ ನಿತ್ಯಂಗಳು ಲಿಂಗೈಕ್ಯ ಪಂಚಾಕ್ಷರಿಯು ಕಾಮ ಧರ್ಮ ಮೋಕ್ಷತ್ರಯಕ್ಕೆ ಪಂಚಾಕ್ಷರಿಯು ಕಾಮಿಸುವ ಬಾಹ್ಯಕ್ಕಿಲ್ಲದೈಕ್ಯ ಪಂಚಾಕ್ಷರಿಯು ನಾಮರೂಪಿಲ್ಲದ ನಿರ್ನಾಮ ಪಂಚಾಕ್ಷರಿಯು. | 46 | ಮಾನಸ್ವಾಚಕ ತ್ರಿಕರಣೈಕ್ಯ ಪಂಚಾಕ್ಷರಿಯು ಜ್ಞಾನ ಜ್ಞಾತೃಜ್ಞೇಯದೈಕ್ಯ ಪಂಚಾಕ್ಷರಿಯು ಸ್ವಾನುಭಾವವು ಲಿಂಗದೊಳೈಕ್ಯ ಪಂಚಾಕ್ಷರಿಯು ಮೋನಮುಗ್ಧಂ ತಾನಾದೈಕ್ಯ ಪಂಚಾಕ್ಷರಿಯು. | 47 | ನಡೆವ ಕಾಲ್ಗೆಟ್ಟ ಲಿಂಗೈಕ್ಯ ಪಂಚಾಕ್ಷರಿಯು ಷಡುರೂಪುಗೆಟ್ಟ ನೇತ್ರೈಕ್ಯ ಪಂಚಾಕ್ಷರಿಯು ಜಡ ಘ್ರಾಣೇಂದ್ರಿಲ್ಲದ ಲಿಂಗೈಕ್ಯ ಪಂಚಾಕ್ಷರಿಯು ಷಡುಯಿಂದ್ರಿಯಕೆ ಷಡುಲಿಂಗೈಕ್ಯ ಪಂಚಾಕ್ಷರಿಯು ಷಡುಸ್ಥಲವ ಮೀರಿರ್ದ ಲಿಂಗೈಕ್ಯ ಪಂಚಾಕ್ಷರಿಯು. | 48 | ಭಕ್ತಿ ಸ್ಥಲದಾಸೆಳಿದೈಕ್ಯ ಪಂಚಾಕ್ಷರಿಯು ವ್ಯಕ್ತ ಮಹೇಶ್ವರ ಭಜನೈಕ್ಯ ಪಂಚಾಕ್ಷರಿಯು ಮುಕ್ತಪ್ರಸಾದಿ ಸ್ಥಲದೈಕ್ಯ ಪಂಚಾಕ್ಷರಿಯು ಸತ್ಯ ಪ್ರಾಣಲಿಂಗವೆನ್ನದೈಕ್ಯ ಪಂಚಾಕ್ಷರಿಯು. | 49 | ಶರಣಸ್ಥಲದಾಸೆಳಿದೈಕ್ಯ ಪಂಚಾಕ್ಷರಿಯು ನಿರವಯಲ ಬೆರದ ಮಹಾಐಕ್ಯ ಪಂಚಾಕ್ಷರಿಯು ಉರಿವುಂಡ ಕರ್ಪುರದ ತೆರನು ಪಂಚಾಕ್ಷರಿಯು ಸರ[ವು] ಸರವು ಬೆರದಂತೆ ಮಾಡ್ವ ಪಂಚಾಕ್ಷರಿಯು. | 50 | ಪರಿಮಳ ವಾಯು ಸಂಗದಂತೆ ಪಂಚಾಕ್ಷರಿಯು ನಿರವಯಲಪ್ಪಿದಂತೆ ಪಂಚಾಕ್ಷರಿಯು ನೆರೆ ಮಾಡಿತೋರುವ ನಿತ್ಯ ಪಂಚಾಕ್ಷರಿಯು ಪರಮ ಬೋಧೆಯನೇನ ಹೇಳ್ವೆ ಪಂಚಾಕ್ಷರಿಯು. | 51 | ನಕಾರ ಮಕಾರ ಭಕ್ತ ಮಹೇಶ ಪಂಚಾಕ್ಷರಿಯು ಶಿಕಾರವೆ ಪ್ರಸಾದಿಸ್ಥಲದಂಗ ಪಂಚಾಕ್ಷರಿಯು ವಕಾರವೆ ಪ್ರಾಣಲಿಂಗಿ ತಾನೆ ಪಂಚಾಕ್ಷರಿಯು ಯಕಾರಂ ಓಂಕಾರಂ ಶರಣೈಕ್ಯ ಪಂಚಾಕ್ಷರಿಯು. | 52 | ಷಡಕ್ಷರ ಷಡುಸ್ಥಲದ ಬೀಜ ಪಂಚಾಕ್ಷರಿಯು ಷಡುಭಕ್ತಿಗಳ ಮುಖವು ಪಂಚಾಕ್ಷರಿಯು ಬಿಡದೆ ಸರ್ವತೋಮುಖವಾದ ಪಂಚಾಕ್ಷರಿಯು ಷಡುದರುಶನಕೆ ಮುಖ್ಯವಾದ ಪಂಚಾಕ್ಷರಿಯು. | 53 | ಪರಮ ಪಂಚಾಕ್ಷರಿಯು ಪ್ರಣಮ ಪಂಚಾಕ್ಷರಿಯು ಅರಿವು ಪಂಚಾಕ್ಷರಿಯು ಚರವು ಪಂಚಾಕ್ಷರಿಯು ಸಿರಿಯು ಪಂಚಾಕ್ಷರಿಯು ಕರುಣ ಪಂಚಾಕ್ಷರಿಯು ಹರುಷ ಪಂಚಾಕ್ಷರಿಯು ನಿಧಿಯು ಪಂಚಾಕ್ಷರಿಯು. | 54 | ನಿತ್ಯ ಪಂಚಾಕ್ಷರಿಯು ಮುಕ್ತ ಪಂಚಾಕ್ಷರಿಯು ಸತ್ಯ ಪಂಚಾಕ್ಷರಿಯು ವ್ಯಕ್ತ ಪಂಚಾಕ್ಷರಿಯು ಭಕ್ತ ಪಂಚಾಕ್ಷರಿಯು ಯುಕ್ತ ಪಂಚಾಕ್ಷರಿಯು ಮೌಕ್ತಿಕ ಮಾಣಿಕಹಾರ ಪಂಚಾಕ್ಷರಿಯು. | 55 | ಹರನೆ ಪಂಚಾಕ್ಷರಿಯು ಗುರುವೆ ಪಂಚಾಕ್ಷರಿಯು ಇರವೆ ಪಂಚಾಕ್ಷರಿಯು ಪರವೆ ಪಂಚಾಕ್ಷರಿಯು ಸರ್ವ ಪಂಚಾಕ್ಷರಿಯು ಹೊರೆವ ಪಂಚಾಕ್ಷರಿಯು ಸ್ಥಿರವೇ ಪಂಚಾಕ್ಷರಿಯು ಅರಿವು ಪಂಚಾಕ್ಷರಿಯು. | 56 | ಸ್ಥೂಲ ಪಂಚಾಕ್ಷರಿಯು ಸೂಕ್ಷ್ಮ ಪಂಚಾಕ್ಷರಿಯು ಲೀಲೆ ಪಂಚಾಕ್ಷರಿಯು ಕಾರಣ ಪಂಚಾಕ್ಷರಿಯು ಶೂಲಿ ಪಂಚಾಕ್ಷರಿಯು ಪೀಠ ಪಂಚಾಕ್ಷರಿಯು ಲೋಲ ಪಂಚಾಕ್ಷರಿಯು ಚರ್ಯ ಪಂಚಾಕ್ಷರಿಯು. | 57 | ಯಂತ್ರ ಪಂಚಾಕ್ಷರಿಯು ಮಂತ್ರ ಪಂಚಾಕ್ಷರಿಯು ಸಂತು ಪಂಚಾಕ್ಷರಿಯು ನಿಸ್ಸಂತು ಪಂಚಾಕ್ಷರಿಯು ಚಿಂತ ಪಂಚಾಕ್ಷರಿಯು ನಿಶ್ಚಿಂತ ಪಂಚಾಕ್ಷರಿಯು ಇಂತು ಪಂಚಾಕ್ಷರಿಯು ಜಪಿಸಿ ಪಂಚಾಕ್ಷರಿಯು. | 58 | ಕಂದ :ನಮಃ ಶಿವಾಯಯೆಂಬೀ ಅಮಲ ತೆರದ ನಾಮವ ನೋಡಿ ಜಪಿಸಲಿರುತಂ ಉಮೆಯರಸನನ್ನೊಲಿಸುವ ಕ್ರಮವಿದೆಂದು ಪೊಗಳ್ವೆ ಸಿದ್ಧಮಲ್ಲನ ಕೃಪೆಯಿಂ. | 1 | ಷಡುಸ್ಥಲ ಪಂಚಾಕ್ಷರಿಯನು ಬಿಡದೆ ಜಪಿಸಲು ಮುಕ್ತಿಯೆಂದು ಪೊಗಳ್ದ ಹೇಮಗಲ್ಲಂ ತನ್ನ ದೃಢಮೂರ್ತಿ ಶಂಭು ಗುರುರಾಯ ಪಡುವಿಡಿ ಸಿದ್ಧಮಲ್ಲಿನಾಥ ಕೃಪೆಯಿಂ. | 2 | ಷಡುಸ್ಥಲ ಪಂಚಾಕ್ಷರಿಯ ರಗಳೆ ಸಂಪೂರ್ಣಂ
--------------
ಹೇಮಗಲ್ಲ ಹಂಪ
ಭಕ್ತನೆಂದು ಯುಕ್ತನೆಂದು ವ್ಯಕ್ತನೆಂದು ಮುಕ್ತನೆಂದು ಹೇಳುವರಲ್ಲದೆ ಬಾಳುವರಿಲ್ಲ ನೋಡಾ. ಬಾಳುವೆ ಬರಿದಾಯಿತ್ತು ಮೂರು ಘಳಿಗೆಯೊಳಗೆ ಶರಣೆಂದು ನಿಂದಲ್ಲಿ. ಶರಣನು ಶರಣೆನ್ನಬಲ್ಲರೆ ಭಕ್ತ, ತಾರದಿರ್ದಡೆ ಯುಕ್ತ, ನೋಡದಿರ್ದಡೆ ವ್ಯಕ್ತ, ಹೀಗೆಂಬುದ ಮರೆದಡೆ ಮುಕ್ತ ನೋಡಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಭಕ್ತನ ಮೆಲಬಾರದು, ಭವಿಯ ತಿನಬಾರದು. ಭಕ್ತನ ಕೊಂದಡೆ ಪಂಚಮಹಾಪಾತಕ. ಅಂತು ವಿಚಾರಿಪಡೆ ಶೀಲವಂತರಿಲ್ಲಾಗಿ ಉಪಚಾರವೆಂತೂ ಇಲ್ಲ. ಅಂತು ಶೀಲವಂತರಲ್ಲಿ ಅಹಿಂಸಾ ಪರಮೋಧರ್ಮವೆಂದು ಕೊಲ್ಲದೆ ಮೆಲ್ಲದೆ ತಿಂಬ ಜೈನರಿನ್ನಾರೊ ? ಶಿವೋ ದಾತಾ ಶಿವೋ ಭೋಕ್ತಾ ಶಿವೋ ಜಗತ್ಸರ್ವಂ ಎಂದುದಾಗಿ, ಈ ಅನುವನರಿದಾತ ಭಕ್ತ. ಇಂತಪ್ಪ ಯುಕ್ತ, ಆತನೇ ಯುಕ್ತ. ಇಂತಪ್ಪ ಸುಯಿಧಾನಿಗಳ ತೋರಿ ಬದುಕಿಸಯ್ಯಾ, ನಿಜಗುರು ಭೋಗೇಶ್ವರಾ, ನಿಮ್ಮ ಧರ್ಮ, ಬೇಡಿಕೊಂಬೆನು.
--------------
ಭೋಗಣ್ಣ
-->