ಅಥವಾ

ಒಟ್ಟು 1725 ಕಡೆಗಳಲ್ಲಿ , 96 ವಚನಕಾರರು , 1279 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಂದಾದುದು ಎರಡಪ್ಪುದೆ ? ಎರಡಾದುದು ಒಂದಪ್ಪುದೆ_[ಎಂದ]À ಪರಿಣಾಮದ ವೇಳೆಯಲ್ಲಿ ಸಂದೇಹ ಹುಟ್ಟಲುಂಟೆ ? ಬಂದ ಜಂಗಮದ ನಿಲವನರಿಯದೆ, ಹಿಂದನೆಣಿಸಿ ಹಲವ ಹಂಬಲಿಸುವರೆ ? ಈ ಒಂದು ನಿಲವಿಂಗೆ ಪರಿಣಾಮವ ಮಾಡಬಲ್ಲಡೆ ನಿನ್ನ ಲಕ್ಷದ ಮೇಲೆ ತೊಂಬತ್ತಾರುಸಾವಿರ ಜಂಗಮಕ್ಕೆ ಪರಿಣಾಮವಹುದು ನೋಡಾ. ಗುಹೇಶ್ವರನೆಂಬ ಲಿಂಗದ ನಿಲವನರಿಯದೆ ಮರುಳಾದೆಯಲ್ಲಾ ಸಂಗನಬಸವಣ್ಣಾ
--------------
ಅಲ್ಲಮಪ್ರಭುದೇವರು
ಆವ ಜಾತಿಯಲ್ಲಿ ಹುಟ್ಟಿದವನಾದಡಾಗಲಿ, ಶ್ರೀಮಹಾದೇವನ ನೆನೆವಾತನದ್ಥಿಕ ನೋಡಾ. ಆತನಿಂದದ್ಥಿಕ ಕಂಗಳು ತುಂಬಿ ನೋಡುವಾತ. ಆತನಿಂದದ್ಥಿಕ ಕೈಮುಟ್ಟಿ ಪೂಜಿಸುವಾತ. ಅದೆಂತೆಂದಡೆ, ಶಿವಧರ್ಮೇ- ``ಲಿಂಗಸ್ಯ ದರ್ಶನಂ ಪುಣ್ಯಂ ದರ್ಶನಾತ್ ಸ್ಪರ್ಶನಂ ಶುಭಂ | ಶಿವಲಿಂಗಂ ಮಹಾಪುಣ್ಯಂ ಸರ್ವದೇವ ನಮಸ್ಕøತಂ | ಯಃ ಸ್ಪøಶೇದಪಿ ಪಾಣಿಭ್ಯಾಂ ನ ಸ ಪಾಪೈಃ ಪರಿಲಿಪ್ಯತೇ ||'' ಎಂದುದಾಗಿ, ಅಂತಪ್ಪ ಶಿವಲಿಂಗವನು ಹೆರೆಹಿಂಗದೆ ಅಂಗದ ಮೇಲೆ ನಿರಂತರ ಧರಿಸಿಕೊಂಡಿಪ್ಪಾತನೆ ಎಲ್ಲರಿಂದದ್ಥಿಕ ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಅಗ್ಘವಣಿ ಸುಯಿದಾನವಾದ ಶರಣಂಗೆ, ತನು ಸುಯಿದಾನವಾಗಬೇಕು. ತನು ಸುಯಿದಾನವಾದ ಶರಣಂಗೆ ಮನ ಸುಯಿದಾನವಾಗಬೇಕು. ಮನ ಸುಯಿದಾನವಾದ ಶರಣಂಗೆ ಪ್ರಾಣದ ಮೇಲೆ ಲಿಂಗ ಸಯವಾಗಬೇಕು. ಪ್ರಾಣದ ಮೇಲೆ ಲಿಂಗ ಸಯವಾಗದಿರ್ದಡೆ ಇದೆಲ್ಲ ವೃಥಾ ಎಂದಿತ್ತು ಕೂಡಲಚೆನ್ನಸಂಗಯ್ಯನ ವಚನ
--------------
ಚನ್ನಬಸವಣ್ಣ
ಬಹಳ ಬಹಳ ಕಂಡೆನೆಂದು ನುಡಿವ, ಬಿಸಿಲು ಮಧ್ಯಾಹ್ನದಲ್ಲಿ ಚಂದ್ರಬಿಂಬ ಉದಯವಾದ ಪ್ರತ್ಯಕ್ಷವಾಯಿತ್ತೆಂದು ಹೊರಗೆ ಕಂಡು ಒಳಗೆ ಕಂಡನಲ್ಲದೆ ಏನು ಅಪ್ಪುದು ಕಾಣಾ. ಎರಡೂ ಒಂದೇ. ಮುಂದೆ ಮೀರಿ ಮನಸಮಾದ್ಥಿ ಮಾಡಿದಡೆ ಮುಕ್ತಿಯೆಂದು ಹೇಳುವರು. ಮನ ಮುಳುಗಿದುದೆ ಲಿಂಗವೆಂದೆಂಬರು. ಆ ಲಿಂಗ ಮುಳುಗುವುದು ಸಮಾದ್ಥಿ ಕಾಣಾ, ತಾನಳಿದ ಮೇಲೆ ಮುಕ್ತಿ ಯಾರಿಗೆ ಹೇಳಾ ? ಲಿಂಗಕ್ಕೆ ಅಳಿವು ಬೆಳವುಂಟೆ ಕಾಣಾ ? ಚಿಂತಿಸಿ ಮುಳುಗಿದವರೆಲ್ಲ ಕಡೆಯಿಲ್ಲ ಮೊದಲಿಲ್ಲ ನೋಡಾ. ಇನ್ನು ಉಳಿದದ್ದು ಘನವು. ಉಳಿಯೆ ಹೇಳಾ ನಿಜಕೆಲ್ಲ. ಲಯವಿಲ್ಲ ಭಯವಿಲ್ಲದಾಡಿದ ವಿದೇಹ ತಾನಾದ ವರನಾಗನ ಗುರುವೀರನೆ ಪರಂಜ್ಯೋತಿ ಮಹಾವಿರಕ್ತಿ.
--------------
ಪರಂಜ್ಯೋತಿ
ಇನ್ನು ಆಧಾರ ಧಾರಣವೆಂತೆಂದಡೆ : ಪುಣ್ಯ-ಪಾಪ ಸ್ವರ್ಗ-ನರಕಾದಿಗಳಿಗೆ ಹೇತುಭೂತವಾಗಿಹ ಅನ್ನ ಪಾನಾದಿಗಳಂ ಬಿಟ್ಟು-ಸಿದ್ಧಾಸನದಲ್ಲಿ ಕುಳ್ಳಿರ್ದು, ಮೂಲಬಂಧ ಒಡ್ಡ್ಯಾಣಬಂಧ ಜಾಳಾಂದರಬಂಧಮಂ ಮಾಡಿ ಜಾಗ್ರ ಸ್ವಪ್ನ ಸುಷುಪ್ತಿ ತಲೆದೋರದೆ ಶಬ್ದ ಸ್ಪರ್ಶ ರೂಪ ರಸ ಗಂಧವೆಂಬ ಪಚೇಂದ್ರಿಯಂಗಳಲ್ಲಿ ಮನ ಪವನಮಂ ಸೂಸಲೀಯದೆ, ಏಕಾಗ್ರಚಿತ್ತನಾಗಿ ಮೂಲವಾಯುವಂ ಪಿಡಿದು ಆಕುಂಚನಂ ಮಾಡಿ, ಮೂಲಾಗ್ನಿಯನೆಬ್ಬಿಸಿ, ಆಧಾರಚಕ್ರ ಚತುರ್ದಳಪದ್ಮವ ಪೊಕ್ಕು ಸಾದ್ಥಿಸಿ, ಅಲ್ಲಿಹ ಮಂತ್ರ-ಪದ-ವರ್ಣ-ಭುವನ-ತತ್ವ-ಕಲೆಗಳಂ ಕಂಡು, ಅಲ್ಲಿ ಪಚ್ಚೆವರ್ಣವಾಗಿಹ ಜ್ಯೋತಿರ್ಮಯಲಿಂಗಮಂ ಬೆರಸಿ ಅಗ್ನಿಯಂ ಪಟುಮಾಡಿ, ಮನಮಂ ಏಕೀಕರಿಸಿ, ಅಲ್ಲಿಂದ ಮೇಲೆ ಸ್ವಾದ್ಥಿಷ್ಠಾನಚಕ್ರದ ಷಡುದಳಪದ್ಮವ ಪೊಕ್ಕನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಗುರುಶಿಷ್ಯರಿಬ್ಬರೂ ಸಹಪಂಕ್ತಿಯಲ್ಲಿ ಲಿಂಗಾರ್ಚನೆ ಮಾಡಿಹೆವೆಂಬರಯ್ಯಾ! ಹೋ! ಹೋ! ಬಾಲಭಾಷೆಯ ಕೇಳಲಾಗದು. ಅಲ್ಲಲ್ಲ, ಮಾಡಬಹುದು. ಅದೇನು ಕಾರಣ? ಗುರುವಿನ ಅರಿವಿನ ಹರಿವನರಿಯಬಲ್ಲಡೆ ಮಾಡಬಹುದು, ಮಾಡಬಹುದು. ಶಿಷ್ಯ ಪ್ರಸಾದವೆಂಬುಭಯಸಂದೇಹ ಹಿಂದುಳಿಯಬಲ್ಲಡೆ, ಮಾಡಬಹುದು, ಮಾಡಬಹುದು. ಇದಲ್ಲದೆ ಲಿಂಗಪ್ರಸಾದದ ಮೇಲೆ ಗುರುಪ್ರಸಾದವನಿಕ್ಕಿಹೆನೆಂಬ ಶಿವದ್ರೋಹಿಗಳನೇನೆಂಬೆ! ಕೊಂಡೆಹೆನೆಂಬ ಗುರುದ್ರೋಹಿಗಳನೇನೆಂಬೆ! ಇದು ಕಾರಣ, ಮಹಾಘನಸೋಮೇಶ್ವರಾ, ನಿಮ್ಮಲ್ಲಿ, ಇವರಿಬ್ಬರ ಗುರು ಶಿಷ್ಯರೆಂದೆನಾದಡೆ, ಎನ್ನನದ್ದಿ ನೀನೆದ್ದು ಹೋಗಯ್ಯಾ?
--------------
ಅಜಗಣ್ಣ ತಂದೆ
ಅಂಥ ಬ್ರಹ್ಮಾಂಡವ ಎಪ್ಪತ್ತೈದುಲಕ್ಷದ ಮೇಲೆ ಸಾವಿರದೇಳುನೂರಾ ನಲವತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ಭದ್ರವೆಂಬ ಭುವನ. ಆ ಭುವನದೊಳು ಭದ್ರಕರ್ಣನೆಂಬ ಮಹಾರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಎಂಟುನೂರಾ ಎಪ್ಪತ್ತುಕೋಟಿ ಚಂದ್ರಾದಿತ್ಯರು ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ. ಎಂಟುನೂರಾ ಎಪ್ಪತ್ತುಕೋಟಿ ರುದ್ರ-ಬ್ರಹ್ಮ-ನಾರಾಯಣ ಇಂದ್ರಾದಿ ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಬ್ರಹ್ಮನ ಡಾಗು ಬೆನ್ನಮೇಲೆ, ವಿಷ್ಣುವಿನ ಡಾಗು ಕೈಯ ಮೇಲೆ. ರುದ್ರನ ಡಾಗು ತಲೆಯ ಮೇಲೆ. ಇಂತೀ ಡಾಗಿನ ಪಶುಗಳಿಗೇಕೆ ಅನಾಗತನ ಸುದ್ದಿ ? ಇದು ನಿಮಗೆ ಸಾ[ದ್ಥಿ]ಸದೆಂದೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಇಷ್ಟಲಿಂಗದಲ್ಲಿ ವಿಶ್ವಾಸ ಬಲಿದರೆ ಆಯತಲಿಂಗ. ಆ ಇಷ್ಟಲಿಂಗದಲ್ಲಿ ಭಾವಮನೋವೇದ್ಯವಾದಲ್ಲಿ ಸ್ವಾಯತಲಿಂಗ. ಆ ಇಷ್ಟಲಿಂಗದ ಭಾವ ಮನೋವೇದ್ಯವಾದ ಸುಖವು ಭಿನ್ನವಾಗಿ ತೋರದೆ, ಅನುಪಮ ಪರಿಣಾಮ ಭರಿತವಾದಲ್ಲಿ ಸನ್ನಹಿತಲಿಂಗ. ಇಂತು, ಇಷ್ಟಲಿಂಗ ಪ್ರಾಣಲಿಂಗ ತೃಪ್ತಿಯ ಭಾವಲಿಂಗಂಗಳೆಂಬ ಲಿಂಗತ್ರಯಂಗಳು, ತನುತ್ರಯಂಗಳ ಮೇಲೆ ಆಯತ ಸ್ವಾಯತ ಸನ್ನಹಿತಂಗಳಾದ ಶರಣನ ಪಂಚಭೂತಂಗಳಳಿದು ಲಿಂಗ ತತ್ವಂಗಳಾಗಿ, ಆತನ ಜೀವ ಭಾವವಳಿದು ಪರಮಾತ್ಮನೆನಿಸಿದಲ್ಲಿ ಷಡಂಗಯೋಗವಾದುದು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಎದೆ ಬಿರಿವನ್ನಕ್ಕ, ಮನ ದಣಿವನ್ನಕ್ಕ, ನಾಲಗೆ ನಲಿನಲಿದೋಲಾಡುವನ್ನಕ್ಕ ನಿಮ್ಮ ನಾಮಾಮೃತವ ತಂದೆರೆಸು ಕಂಡಯ್ಯಾ, ಎನಗೆನ್ನ ತಂದೆ. ಬಿರಿಮುಗುಳಂದದಿ ಎನ್ನ ಹೃದಯ ನಿಮ್ಮ ಶ್ರೀಚರಣದ ಮೇಲೆ ಬಿದ್ದರಳುಗೆ, ಕೂಡಲಸಂಗಯ್ಯಾ. 486
--------------
ಬಸವಣ್ಣ
ಆಳುದ್ದಿಯದೊಂದು ಬಾವಿ ಆಕಾಶದ ಮೇಲೆ ಹುಟ್ಟಿತ್ತು ನೋಡಾ ! ಆ ಬಾವಿಯ ನೀರನೊಂದು ಮೃಗ ಬಂದು ಕುಡಿಯಿತ್ತು. ಕುಡಿಯ ಬಂದ ಮೃಗವು ಆ ನೀರೊಳಗೆ ಮುಳಿಗಿದಡೆ ಉರಿಯ ಬಾಣದಲೆಚ್ಚು ತೆಗೆದೆ ನೋಡಾ ! ಒಂದೆ ಬಾಣದಲ್ಲಿ ಸತ್ತ ಮೃಗವು, ಮುಂದಣ ಹೆಜ್ಜೆಯನಿಕ್ಕಿತ್ತ ಕಂಡೆ ! ಅಂಗೈಯೊಳಗೊಂದು ಕಂಗಳು ಮೂಡಿ, ಸಂಗದ ಸುಖವು ದಿಟವಾಯಿತ್ತು ! ಲಿಂಗಪ್ರಾಣವೆಂಬುದರ ನಿರ್ಣಯವನು ಇಂದು ಕಂಡೆನು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಅಷ್ಟದಳಕಮಲವ ಮೆಟ್ಟಿ ಚರಿಸುವ ಹಂಸನ ಭೇದವ ಹೇಳಿಹೆನು: ಪೂರ್ವದಳಕೇರಲು ಗುಣಿಯಾಗಿಹನು. ಅಗ್ನಿದಳಕೇರಲು ಕ್ಷುಧೆಯಾಗಿಹನು. ದಕ್ಷಿಣದಳಕೇರಲು ಕ್ರೋದ್ಥಿಯಾಗಿಹನು. ನೈಋತ್ಯದಳಕೇರಲು ಅಸತ್ಯನಾಗಿಹನು. ವರುಣದಳಕೇರಲು ನಿದ್ರೆಗೆಯ್ವುತಿಹನು. ವಾಯುದಳಕೇರಲು ಸಂಚಲನಾಗಿಹನು. ಉತ್ತರದಳಕೇರಲು ಧರ್ಮಿಯಾಗಿಹನು. ಈಶಾನ್ಯದಳಕೇರಲು ಕಾಮಾತುರನಾಗಿಹನು. ಈ ಅಷ್ಟದಳಮಂಟಪದ ಮೇಲೆ ಹರಿದಾಡುವ ಹಂಸನ ಕುಳನ ತೊಲಗಿಸುವ ಕ್ರಮವೆಂತುಟಯ್ಯಾಯೆಂದೊಡೆ: ಅಷ್ಟದಳಮಂಟಪದ ಅಷ್ಟಕೋಣೆಗಳೊಳಗೆ ಅಷ್ಟ ಲಿಂಗಕಳೆಯ ಪ್ರತಿಷ್ಠಿಸಿ ಹಂಸನ ನಟ್ಟ ನಡುಮಧ್ಯದಲ್ಲಿ ತಂದು ನಿಲಿಸಲು ಮುಕ್ತಿಮೋಕ್ಷವನೆಯ್ದಿ ಪರವಶನಾಗಿಪ್ಪನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಶಾಂಭವಲೋಕದ ಕುಂಬ್ಥಿನಿಯುದರದ ಮೇಲೆ ಅಂಗನೆ ಅರುದಿಂಗಳ ಹಡೆದಳು ನೋಡಾ. ಅರುದಿಂಗಳ ಅದಾರನೂ ಅರಿಯದೆ ನಿರ್ವಯಲನೆ ಅರಿವುತ್ತರಿವುತ್ತ ಬೆರಗಾಗಲು ಕುಂಬ್ಥಿನಿಯುದರದಂಗನೆ ಸತ್ತುದ ಕಂಡು ಇಹಲೋಕ ಪರಲೋಕ ಆವ ಲೋಕವ ಹೊಗದೆ ಲೋಕಶ್ರೇಷ್ಠವಲ್ಲವೆಂದು ದೇಹವಿಲ್ಲದ ದೇವನ ಉದರವ ಬಗೆದು ಹೊಕ್ಕು ಅಗಣಿತನಪ್ರಮಾಣನಾದ ಲಿಂಗೈಕ್ಯಂಗೆ ನಮೋ ನಮೋಯೆಂದು ಬದುಕಿದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಆರುಸ್ಥಲದಲ್ಲಿ ಅರಿತಿಹೆನೆಂದು ಸಹಭೋಜನದಲ್ಲಿ ಉಂಬ ಅಣ್ಣಗಳು ನೀವು ಕೇಳಿರೊ ! ಅಂಗದ ಮೇಲೆ ಲಿಂಗಸಂಬಂಧಿಯಾದಡೇನಯ್ಯ, ಆ ಲಿಂಗವ ತನ್ನ ಪ್ರಾಣಕ್ಕೆ ಅವಧರಿಸದನ್ನಕ್ಕ ! ಆ ಇಷ್ಟಲಿಂಗಕ್ಕೆ ಅಷ್ಟವಿಧಾರ್ಚನೆ ಷೋಡಶೋಪಚಾರ ಬಾಹ್ಯಕ್ರೀಯ ಮಾಡಿದಡೇನಯ್ಯ ನೈಷ್ಠೆಇಲ್ಲದನ್ನಕ್ಕ ಅಷ್ಟಮದಂಗಳ ನಷ್ಟವಮಾಡಿ ಪಂಚೇಂದ್ರಿಯಂಗಳ ಲಿಂಗಮುಖವ ಮಾಡಿ ದೇಹೇಂದ್ರಿಯ ಮನ ಪ್ರಾಣಾದಿಗಳ ಪ್ರಕೃತಿಯನಳಿದು ! ಇಷ್ಟ ಪ್ರಾಣ ಭಾವವೆಂಬ ತ್ರಿವಿಧ ಲಿಂಗಕ್ಕೆ ರೂಪು ರುಚಿ ತೃಪ್ತಿಯನೀವ ವರ್ಮಾದಿವರ್ಮಂಗಳ ಭೇದವನರಿಯದೆ ! ಕರಸ್ಥಲದಲ್ಲಿ ಲಿಂಗವಿಡಿದು ಸಹಭೋಜನವೆಂದು ಒಂದಾಗಿ ಉಂಡು ತಮ್ಮ ಒಡಲ ಹೊರೆವ ಲಿಂಗದ್ರೋಹಿಗಳ ನೋಡಿ ನಗುತ್ತಿರ್ದೆನಯ್ಯಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಅಂಥ ಬ್ರಹ್ಮಾಂಡವ ಹನ್ನೆರಡುಲಕ್ಷದ ಮೇಲೆ ಸಾವಿರದನೂರಾಹದಿನೆಂಟು ಬ್ರಹ್ಮಾಂಡವನೊಳಕೊಂಡುದೊಂದು ಹರಿಶ್ಚಂದ್ರವೆಂಬ ಭುವನ. ಆ ಭುವನದೊಳು ಹರಿಸಂಹಾರವೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಐನೂರೈವತ್ತೈದುಕೋಟಿ ರುದ್ರ-ಬ್ರಹ್ಮ-ನಾರಾಯಣರಿಹರು ನೋಡಾ. ಐನೂರೈವತ್ತೈದುಕೋಟಿ ಇಂದ್ರ-ಚಂದ್ರಾದಿತ್ಯರು ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಇನ್ನಷ್ಟು ... -->