ಅಥವಾ

ಒಟ್ಟು 860 ಕಡೆಗಳಲ್ಲಿ , 84 ವಚನಕಾರರು , 670 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾ ಹುಟ್ಟಿದ ದ್ವಾದಶವರ್ಷಕ್ಕೆ ಎನ್ನ ತಂದೆ ದ್ವಾದಶಮಂತ್ರವ ಕಲಿಸಿದ. ಒಂದು ಮಂತ್ರದಿಂದ ಮತ್ರ್ಯಲೋಕವ ಸುಟ್ಟೆ. ಒಂದು ಮಂತ್ರದಿಂದ ಪಾತಾಳಲೋಕವ ಸುಟ್ಟೆ. ಒಂದು ಮಂತ್ರದಿಂದ ಸ್ವರ್ಗಲೋಕವ ಸುಟ್ಟೆ. ಮೂರು ಮಂತ್ರದಿಂದ ಮುಪ್ಪುರದರಸುಗಳ ಕೊಂದೆ. ಆರು ಮಂತ್ರದಿಂದ ಆರು ವರ್ಣವ ಸುಟ್ಟೆ. ಇಂತೀ ಮಂತ್ರವ ಮಂತ್ರಿಸುವ ವೇಳೆಯಲ್ಲಿ ನಾ ಸತ್ತು ಕಾಯಕವ ಮಾಡುತಿರ್ದೆನಯ್ಯ ಕಾಡನೊಳಗಾದ ಶಂಕÀರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಹಿಂದು ಮುಂದು ಸಂದಳಿದ ಬಳಿಕ ಆನು ನೀನೆಂಬ ಭೇದವೇತಕಯ್ಯ? ಆನಂದ ಅಪರಸ್ಥಾನದಲ್ಲಿ ಶುದ್ಧ ಸಂಯೋಗವಾದ ಬಳಿಕ ದಳ ಪ್ರತಿಷ್ಠೆಯ ಮಾಡಿನೆಂದು ಏನೆಂಬೆನಯ್ಯ? ಪೂರ್ವದಳದಲ್ಲಿ ಲಕ್ಷವು ಇಪ್ಪತ್ನಾಲ್ಕುಸಾವಿರ ಎಸಳು, ಅಪರದಳದಲ್ಲಿ ಹದಿನಾಲ್ಕುಸಾವಿರ ಎಸಳು, ನಾನಾ ವರ್ಣ ಆನಂದನೆಂಬ ಅದ್ಥಿದೇವತೆ ಮಧ್ಯಮಸ್ಥಾನದಲ್ಲಿ, ಸಿದ್ಧ ಸಂಯೋಗವೆಂಬ ಸರೋವರದಲ್ಲಿ, ವೈನೈಯೆಂಬ ಕೊಳಂಗಳು ಹನಾರೆಸಳಿನ ಕಮಳ ಬೀಜಾಕ್ಷರಂಗಳೆಂಟು, ಅದ್ಥಿದೇವತೆ ಸಚ್ಚಿದಾನಂದನೆಂಬ ಗಣೇಶ್ವರ ಆನಂದ ಬ್ರಹ್ಮಲೋಕದಲ್ಲಿ ಗುರುವೆಂಬ ಸರೋವರದಲ್ಲಿ ನಿತ್ಯವೆಂಬ ಕೊಳ. ಶುದ್ಥಶ್ವೇತನೆಂಬ ಅಮೃತ ಪ್ರವಾಹ, ದಳವೊಂದು, ಮೂಲ ಮೂರು, ಫಲವಾರು ಕಪಿಲಸಿದ್ಧಮಲ್ಲಿಕಾರ್ಜುನನೆಂಬ ಅದ್ಥಿದೇವತೆ.
--------------
ಸಿದ್ಧರಾಮೇಶ್ವರ
ಆರು ಕೇರಿಗಳಲ್ಲಿ ಆರು ಮೂರ್ತಿಗಳಿಪ್ಪರು ನೋಡಾ. ಆರು ಮೂರ್ತಿಗಳಲ್ಲಿ ಆರು ಶಕ್ತಿಗಳಿಪ್ಪರು ನೋಡಾ. ಆರು ಶಕ್ತಿಗಳು ಆರಾರು ಲಿಂಗಾರ್ಚನೆಯ ಮಾಡಿ ಮೂರು ಬಾಗಿಲ ದಾಂಟಿ ಮಹಾಘನಲಿಂಗವನಾಚರಿಸುತಿರ್ಪರು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಇನ್ನು ತಾರಕಯೋಗದ ಲಕ್ಷಣಮಂ ಪೇಳ್ವೆನೆಂತೆನೆ : ಮಂತ್ರಯೋಗ ಲಯಯೋಗ ಹಠಯೋಗಕ್ಕೆ ಉತ್ತರೋತ್ತರ ವಿಶಿಷ್ಟವಾದ ರಾಜಯೋಗವೇ ಸಾಂಖ್ಯಯೋಗವೆಂದು ತಾರಕಯೋಗವೆಂದು ಅಮನಸ್ಕಯೋಗವೆಂದು ಮೂರು ಪ್ರಕಾರವಾಗಿರ್ಪುದು. ಆ ಮೂರರೊಳಗೆ ಮೊದಲು ಸಾಂಖ್ಯಯೋಗವೇ ತತ್ವಜಾÕನರೂಪವಪ್ಪುದರಿಂದೆ, ಆ ತತ್ವಂಗಳೆಂತೆನೆ : ಪೃಥ್ವಿ ಅಪ್ಪು ತೇಜ ವಾಯು ಆಕಾಶವೆಂಬ ಪಂಚತತ್ವಂಗಳಿಂದೆ ಜನಿತಮಾದ ವಾಗಾದಿ ಕರ್ಮೇಂದ್ರಿಯಂಗಳೈದು, ಶಬ್ದಾದಿ ವಿಷಯಂಗಳೈದು, ಶ್ರೋತ್ರಾದಿ ಜಾÕನೇಂದ್ರಿಯಂಗಳೈದು, ಪ್ರಾಣಾದಿ ವಾಯುಗಳೈದು, ಜೀವನಗೂಡಿ ಮಾನಸಾದಿ ಅಂತಃಕರಣಂಗಳೈದು, ಇಂತೀ ಪಂಚವಿಂಶತಿ ತತ್ವಂಗಳು ನಾನಲ್ಲ, ಅವು ನನ್ನವಲ್ಲವೆಂದು ವಿಭಾಗಿಸಿ ಕಳೆದು, ಪರಾತ್ಪರವಾದ ಪರಶಿವಬ್ರಹ್ಮವೆ ನಾನೆಂದು ತಿಳಿವುದೇ ಸಾಂಖ್ಯಯೋಗ ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಕನ್ನವ ಸವೆವ ಕನ್ನಗತ್ತಿಗೆ ಕನ್ನ ಸವೆಯಿತ್ತೆ ಕೈ ತಟ್ಟಿತೆಂಬಂತೆ, ಹೊನ್ನೆನ್ನದು ಹೆಣ್ಣೆನ್ನದು ಮಣ್ಣೆನ್ನದು ಎಂದು, ಬಳಲುವಣ್ಣಗಳ ಬಾಯ ಟೊಣೆದು, ಇವು ಮೂರು ತನ್ನಿಂದ ಬಲ್ಲಿದರಲ್ಲಿಗೆ ಹೋಗದೆ ಮಾಣವು. ಇವರಲ್ಲಿ ಬನ್ನಬಟ್ಟು ಬಳಲುವ ಕರ್ಮಿಗಳಿಗಿನ್ನೆಲ್ಲಿಯ ಮುಕ್ತಿಯಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಮನವೆಂಬ ಮಂಟಪದ ನೆಳಲಲ್ಲಿ ನೆನೆಹೆಂಬ ಜಾÕನಜ್ಯೋತಿಯ ಬೆಳಗನಿಟ್ಟು ಘನಪುರುಷ ಪವಡಿಸೈದಾನೆ, ಎಲೆ ಅವ್ವಾ. ಅದನೊಂದೆರಡೆನ್ನದೆ ಮೂರು ಬಾಗಿಲ ಮುಚ್ಚಿ ನಾಲ್ಕ ಮುಟ್ಟದೆ ಐದ ತಟ್ಟದೆ ಇರು ಕಂಡಾ, ಎಲೆ ಅವ್ವಾ. ಆರೇಳೆಂಟೆಂಬ ವಿಹಂಗಸಂಕುಳದ ಉಲುಹು ಪ್ರಬಲವಾದಡೆ, ಕಪಿಲಸಿದ್ಧಮಲ್ಲಿಕಾರ್ಜುನನು ನಿದ್ರೆಗೆಟ್ಟಲ್ಲಿರನು.
--------------
ಸಿದ್ಧರಾಮೇಶ್ವರ
ಕಾಲು ಮೂರು, ಬಸುರು ನಾಲ್ಕು, ಕೈ ಐದು, ತಲೆ ಎಂಟು, ಬಾಯಿ ಒಂಬತ್ತು, ಕಿವಿ ಆರು, ಕಣ್ಣು ಮೂವತ್ತೆರಡು. ಇಂತೀ ಪಿಂಡಕ್ಕೆ ಐವತ್ತೊಂದು ಕಳೆ. ಆ ಜೀವಕ್ಕೆ ಪರಮನೊಂದೆ ಕಳೆ. ಈ ಗುಣ ಜಾÕನಪಿಂಡದ ಭೇದ. ಶಂಭುವಿನಿಂದಿತ್ತ ಸ್ವಯಂಭವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
--------------
ದಾಸೋಹದ ಸಂಗಣ್ಣ
ಆರರಿಂದತ್ತತ್ತ ಮೀರಿದ ಮಹಾಮಹಿಮನ ಸಂಗದಿಂದ ಸಕಲನಿಃಕಲವ ನೋಡಿ, ಮೂರು ಮಂದಿರವ ದಾಂಟಿ, ಮಹಾಮಹಿಮನ ಕೂಡಿ, ನಿಃಪ್ರಿಯವಾದ ಶರಣನ ಎನಗೊಮ್ಮೆ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ವೀರಶೈವಸಂಪನ್ನರಾದ ಸದ್ಭಕ್ತ ಶರಣಗಣಂಗಳಾದಡೆಯೂ ವೀರಮಾಹೇಶ್ವರರಾದಡೆಯೂ ಕ್ರಿಯಾಪಾದೋದಕ ಮಾಡಬೇಕಾದಡೆ, ತನ್ನ ಎರಡು ಅಂಗುಲಗಳಿಂದ, ಆ ಮಾಹೇಶ್ವರರ ಅಂಗುಷ್ಠ ಎಂಟು ಅಂಗುಲಗಳಲ್ಲಿ ತರ್ಜನಿ ಬೆರಳಿನಿಂದ ಬಲದ ಪಾದಾಂಗುಷ್ಠದ ಮೇಲೆ ಮೂರು ವೇಳೆ ಸ್ಪರ್ಶನವ ಮಾಡಿ, ನಾಲ್ಕನೆಯ ವೇಳೆಗೆ ಅದೇ ಬಲಪಾದದ ನಾಲ್ಕು ಬೆರಳುಗಳನ್ನು ಒಂದು ವೇಳೆ ಸ್ಪರ್ಶನ ಮಾಡಿದಡೆ ಗುರುಪಾದೋದಕವೆನಿಸುವುದು. ಇದೇ ರೀತಿಯಲ್ಲಿ ಎಡದ ಪಾದವ ಮಾಡಿದಡೆ ಲಿಂಗೋದಕವೆನಿಸುವುದು. ಈ ಎರಡರ ಕೂಟವೆ ಜಂಗಮಪಾದೋದಕವೆನಿಸುವುದು. ತನ್ನ ಹಸ್ತದಿಂದ ಪಾದವ ಮುಟ್ಟಿ ಮಾಡಿದಂತಹದೆ ಸ್ಪರ್ಶನೋದಕವೆನಿಸುವುದು. ಆ ಪಾದದ ಮೇಲಣ ದ್ರವವ ತೆಗೆದಂತಹದೆ ಅವಧಾನೋದಕವೆನಿಸುವುದು. ಅದರ ಮೇಲಣ ಅಪೇಕ್ಷೆ ಮುಂದುಗೊಂಡು ತಾನು ಮಾಡಿಕೊಂಡಂತಹದೆ ಅಪ್ಯಾಯನೋದಕವೆನಿಸುವುದು. ಹಸ್ತದಿಂದ ಮುಟ್ಟಿ ಮಾಡಿದಂತಹದೆ ಹಸ್ತೋದಕವೆನಿಸುವುದು. ಆ ಭಾಜನವ ತನ್ನ ಕೈಯಲ್ಲಿ ತೆಗೆದುಕೊಂಡು ಆ ಜಂಗಮಕ್ಕೆ ನಮಸ್ಕರಿಸುವಂತಹದೆ ನಿರ್ಣಾಮೋದಕವೆನಿಸುವುದು. ಆ ಜಂಗಮಕ್ಕೆ ನಮಸ್ಕರಿಸಿ ಆ ಭಾಜನವನ್ನು ತನ್ನ ಕ್ರಿಯೆಗೆ ಇಟ್ಟುಕೊಂಡಂತಹುದೆ ಸತ್ಯೋದಕವೆನಿಸುವುದು_ ಈ ಪ್ರಕಾರದಲ್ಲಿ ಹತ್ತು ಪಾದೋದಕವು, ಶಿಕ್ಷಾಪಾದೋದಕದಲ್ಲಿ ಆಗುವುದೆಂದು ಅರಿದು ಆಚರಿಸುವುದು. ಆಚರಿಸಲಾಗದೆಂಬ ಹಚ್ಚಮಾನವರನೇನೆಂಬೆನಯ್ಯಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ದೀಕ್ಷೋಪದೇಶವ ಮಾಡಿ ಗುರುವಿನ ಕಣ್ಣ ಕಳೆದು ತಲೆ ಹೊಡೆದು ಮೂರು ಹಣವ ಕೊಂಡೆ. ದೀಕ್ಷೋಪದೇಶವ ಹಡೆದ ಭಕ್ತರ ನಾಲಗೆಯ ಕೊಯ್ದು ಕೈ ಮುರಿದು ಮೂರು ಹಣವ ಕೊಂಡೆ. ಈ ಗುರುಶಿಷ್ಯರುಭಯರ ಸಂಯೋಗಕಾಲದಲ್ಲಿರುವ ಸಾಕ್ಷಿಗಣಂಗಳ ಮನೆಯ ಸುಟ್ಟು ಮೂರು ರತ್ನವ ಕೊಂಡೆ. ಇಂತೀ ಮೂವರ ಹಣವ ತಂದು ಗುರುವಿಗೆ ಕೊಟ್ಟು ಕಾಯಕವ ಮಾಡುತ್ತಿರ್ದೆನಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಮಾಡುವ ಸದಾಚಾರಕ್ಕೆ ಮೊದಲನೆಯ ಲಿಂಗಪೂಜೆಯೆ ಗುರುಪೂಜೆ. ಮಾಡುವ ಸದಾಚಾರಕ್ಕೆ ಎರಡನೆಯ ಲಿಂಗಪೂಜೆಯೆ ಲಿಂಗಪೂಜೆ. ಮಾಡುವ ಸದಾಚಾರಕ್ಕೆ ಮೂರನೆಯ ಲಿಂಗಪೂಜೆಯೆ ಜಂಗಮಪೂಜೆ. ಮಾಡುವ ಸದಾಚಾರಕ್ಕೆ ಮೂರು ಪೂಜೆ. ಈ ಪೂಜೆ ಅನಂತಜನ್ಮದುರಿತಧ್ವಂಸಿ ನೋಡಾ, ಕೂಡಲಚೆನ್ನಸಂಗಮದೇವ ಸಾಕ್ಷಿಯಾಗಿ
--------------
ಚನ್ನಬಸವಣ್ಣ
ಮೂರು ಲೋಕದವರ ನಿದ್ರಾಂಗನೆ ಹೀರಿ ಹಿಂಡಿ ಪ್ರಾಣಕಾರ್ಪಣ್ಯವ ಮಾಡಿ ತಟ್ಟುಗೆಡಹಿದಳು. ಇವಳ ಗೆಲುವವರ ಆರನೂ ಕಾಣೆ, ಇವಳ ಬಾಣಕ್ಕೆ ಗುರಿಯಾಗಿ ಏಳುತ್ತ ಬೀಳುತ್ತ ಐದಾರೆ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಶ್ರೀಗುರುವಾದಾತನು ಸಕಲಾಗಮಂಗಳ ಹೃದಯವನರಿತು ತನ್ನ ತಾನರಿದು ಸರ್ವಾಚಾರ ತನ್ನಲ್ಲಿ ನೆಲೆಗೊಂಡು ಉಪದೇಶವ ಮಾಡುವ ಕ್ರಮವೆಂತೆಂದಡೆ: ಬ್ರಾಹ್ಮಣನ ಮೂರು ವರುಷ ನೋಡಬೇಕು, ಕ್ಷತ್ರಿಯನ ಆರು ವರುಷ ನೋಡಬೇಕು, ವೈಶ್ಯನ ಒಂಬತ್ತು ವರುಷ ನೋಡಬೇಕು, ಶೂದ್ರನ ಹನ್ನೆರಡು ವರುಷ ನೋಡಬೇಕು, ನೋಡಿದಲ್ಲದೆ ದೀಕ್ಷೆ ಕೊಡಬಾರದು _ ವೀರಾಗಮೇ. ``ಬ್ರಾಹ್ಮಣಂ ತ್ರೀಣಿ ವರ್ಷಾಣಿ ಷಡಬ್ದಂ ಕ್ಷತ್ರಿಯಂ ತಥಾ ವೈಶ್ಯಂ ನವಾಬ್ದಮಾಖ್ಯಾತಂ ಶೂದ್ರಂ ದ್ವಾದಶವರ್ಷಕಂ ಈ ಕ್ರಮವನರಿಯದೆ, ಉಪಾಧಿವಿಡಿದು ಉಪದೇಶವ ಮಾಡುವಾತ ಗುರುವಲ್ಲ, ಉಪಾಧಿವಿಡಿದು ಉಪದೇಶವ ಮಾಡಿಸಿಕೊಂಬಾತ ಶಿಷ್ಯನಲ್ಲ. ಇವರಿಬ್ಬರ ನಿಲವು ಒಂದೆ ಠಕ್ಕನ ಮನೆಗೆ ಠಕ್ಕ ಬಿದ್ದಿನ ಬಂದಂತೆ ಈ ಗುರುಶಿಷ್ಯರಿಬ್ಬರನು ರೌರವನರಕದಲ್ಲಿಕ್ಕುವ ಕೂಡಲಚೆನ್ನಸಂಗಯ್ಯ.
--------------
ಚನ್ನಬಸವಣ್ಣ
ಐದುಮುಖದಂಗನೆಗೆ ತನು ಮೂರು, ತದಂಗವೆರಡು, ಜೀವವೊಂದು, ಗುಣ ಇಪ್ಪತ್ತೈದು. [ವಂಶದ]ವರು ಇಪ್ಪತ್ತೈದುಮಂದಿಯ ಕೈವಿಡಿದು ಅಷ್ಟದಿಕ್ಕು ನವಖಂಡ ಜಂಬೂದ್ವೀಪವ ಮೇಲುಹೊದಿಕೆಯ ಮಾಡಿ, ಹೊದ್ದುಕೊಂಡು, ದೃಷ್ಟಜಗಕ್ಕೆ ಬಂದು ಕಷ್ಟಬಡುತಿದ್ದ ಭೇದವ ನೀನೆ ಬಲ್ಲೆ, ಉಳಿದರಿಗಸಾಧ್ಯ, ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಸತ್ಯ ಸದಾಚಾರ ಸಮ್ಯಜ್ಞಾನವೆಂಬುವು ಮೂರು. ನಾಮವೊಂದೇ ರೂಪವೊಂದೇ ಕ್ರೀವೊಂದೇ ಕಾಯವೊಂದೇ ಕರಣವೊಂದೇ ಆತ್ಮವೊಂದೇ ಪರಮಾತ್ಮವೊಂದೇ ನೀರು ಗಟ್ಟಿಗೊಂಡ ಆಣೆಕಲ್ಲು ನೀರೇ ಆಯಿತಲ್ಲದೇ ಕಲ್ಲಾಗಲಿಲ್ಲಾ. ಇದರಂತೆ ಶರಣ ಒಳಹೊರಗೆಂಬ ಸಂಶಯ ಅಳಿದು ಸರ್ವವೂ ತಾನೆಂಬ ಸತ್ಯವೇ ಸತ್ಯವಾಗಿಹನು. ಇದೇ ಸತ್ಯ ಸತ್ಯವೆಂದು ಮಹತ್ವ ತೋರಿದರೆ ಸತ್ಯವೇ ಅಲ್ಲಾ, ಆ ಮಹತ್ವವು ತನಗನ್ಯವೇ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ ?
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಇನ್ನಷ್ಟು ... -->