ಅಥವಾ

ಒಟ್ಟು 312 ಕಡೆಗಳಲ್ಲಿ , 60 ವಚನಕಾರರು , 235 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಯ್ಯಾ ಆರೂ ಇಲ್ಲದ ಅರಣ್ಯದಲ್ಲಿ, ನಾನಡಿಯಿಟ್ಟು ನಡವುತ್ತಿರ್ದೆನಯ್ಯಾ. ಮುಂದೆ ಬರೆಬರೆ ಮಹಾಸರೋವರವ ಕಂಡೆ. ಸರೋವರದೊಳಗೊಂದು ಹಿರಿಯ ಮೃಗವ ಕಂಡೆ. ಆ ಮೃಗಕ್ಕೆ ಕೊಂಬುಂಟು ತಲೆಯಿಲ್ಲ, ಬಾಯುಂಟು ಕಣ್ಣಿಲ್ಲ, ಕೈಯುಂಟು ಹಸ್ತವಿಲ್ಲ, ಕಾಲುಂಟು ಹೆಜ್ಜೆಯಿಲ್ಲ, ಒಡಲುಂಟು ಪ್ರಾಣವಿಲ್ಲ. ಇದ ಕಂಡು ನಾ ಹೆದರಿ, ಹವ್ವನೆ ಹಾರಿ, ಬೆದರಿ ಬಿದ್ದೆನಯ್ಯಾ. ಆಗೆನ್ನ ಹೆತ್ತತಾಯಿ ಬಂದು ಎತ್ತಿ ಕುಳ್ಳಿರಿಸಿ, ಚಿತ್ತಮೂಲಾಗ್ನಿಯ ಒತ್ತಿ ಉರುಹಿದರೆ, ಇವೆಲ್ಲವು ಸುಟ್ಟು ಬಟ್ಟಬಯಲಾದವು. ಆ ಬಟ್ಟಬಯಲೊಳಗೆ ಅಡಿಯಿಟ್ಟು ನಡೆವಾಗ, ಮುಂದೆ ಇಟ್ಟಡಿಯ ಬಾಗಿಲೊಳಗೆ ಮತ್ತೊಂದು ಮೃಗವ ಕಂಡೆ. ಆ ಮೃಗಕ್ಕೆ ತಲೆಯುಂಟು ಕೊಂಬಿಲ್ಲ, ಕಣ್ಣುಂಟು ಬಾಯಿಲ್ಲ, ಹಸ್ತವುಂಟು ಕೈಯಿಲ್ಲ, ಹೆಜ್ಜೆಯುಂಟು ಕಾಲಿಲ್ಲ, ಪ್ರಾಣವುಂಟು ಒಡಲಿಲ್ಲ. ಇದ ಕಂಡು ನಾ ಅಪ್ಪಿಕೊಳಹೋದಡೆ, ಮುಟ್ಟದ ಮುನ್ನವೆ ಎನ್ನನೆ ನುಂಗಿತ್ತು. ನುಂಗಿದ ಮೃಗ ಮಹಾಲಿಂಗದಲ್ಲಿಯೆ ಅಡಗಿತ್ತು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಕಾಬುದಕ್ಕೆ ಮೊದಲೆ ಬಯಕೆ ಅರತು, ಕೂಡುವುದಕ್ಕೆ ಮುನ್ನವೆ ಸುಖವರತು, ಉಭಯ ನಾಮಧೇಯ ನಷ್ಟವಾದಲ್ಲಿ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಸತ್ವಹೀನವಾದ ಮತ್ತೆ ಕಾಲೆರಡು ಕೋಲೊಂದಾಯಿತ್ತು. ಕೃತ್ಯದ ಹೊತ್ತು ಹೋದ ಮತ್ತೆ ವ್ಯಾಕುಲದ ಚಿತ್ತವದ ಲಕ್ಷರ, ಬಹುವ್ಯಾಪಾರ ಮೊತ್ತದ ಘಟ, ಪ್ರಕೃತಿ ಆಶ್ರಯಕ್ಕೆ ಬಂಧನ ಪ್ರಾಪ್ತಿ, ಅಡಗುವ ಕರಂಡ. ಇದರಂದವ ತಿಳಿದು, ಹಿಂಜಾವಕೆ ಮುನ್ನವೆ ಶಿವಲಿಂಗದರ್ಶನವಾಗಿ ಶುದ್ಧಸಿದ್ಧಪ್ರಸಿದ್ಧ ಪ್ರಸನ್ನ ಕುರುಂಗೇಶ್ವರಲಿಂಗವ ಕೂಡಬಲ್ಲದೆ
--------------
ಎಚ್ಚರಿಕೆ ಕಾಯಕದ ಮುಕ್ತನಾಥಯ್ಯ
ಅನ್ಯರು ಮಾಡಿದುದ ಮುಟ್ಟದೆ ತನ್ನ ತಾ ಮಾಡಿಕೊಂಡು ನಡೆವುದು ಸೌಕರಿಯವಲ್ಲದೆ, ವ್ರತಕ್ಕೆ ಸಂಬಂಧವಲ್ಲ. ಅದೆಂತೆಂದಡೆ ರಸ ಗಂಧ ರೂಪು ಶಬ್ದ ಸ್ಪರ್ಶವೆಂಬ ಪಂಚೇಂದ್ರಿಯವ ಶುದ್ಧತೆಯ ಮಾಡಿ ಪಂಚಾಚಾರವೆಂಬುದನರಿತು, ರಸವ ರುಚಿಸುವಲ್ಲಿ ಬಹುದಕ್ಕೆ ಮುನ್ನವೆ ಭೇದವನರಿತು, ನಾಸಿಕ ವಾಸನೆಯ ಕೊಂಬಲ್ಲಿ ಸೋಂಕುವುದಕ್ಕೆ ಮುನ್ನವೆ ಸುಗುಣ ದುರ್ಗುಣವನರಿತು, ಕಾಂಬುದಕ್ಕೆ ಮುನ್ನವೆ ರೂಪ ನಿರೂಪೆಂಬುದನರಿತು, ನುಡಿಯುವುದಕ್ಕೆ ಮುನ್ನವೆ ಮೃದು ಕoಣವೆಂಬುದನರಿತು, ಇಂತೀ ಭೇದಂಗಳಲ್ಲಿ ಅರ್ಪಿತದ ಲಕ್ಷಣವ ಕಂಡು, ದೃಷ್ಟದಿಂದ ಕಟ್ಟುಮಾಡುವುದೆ ವ್ರತ ; ಆ ಗುಣ ತಪ್ಪದೆ ನಡೆವುದೆ ಆಚಾರ. ಇಂತೀ ವ್ರತಾಚಾರಂಗಳಲ್ಲಿ ಸರ್ವಶೀಲಸನ್ನದ್ಧನಾಗಿ, ಸರ್ವಮುಖ ಲಿಂಗಾವಧಾನಿಯಾಗಿ ಇಪ್ಪ ಅಂಗವೆ, ಆಚಾರವೆ ಪ್ರಾಣವಾಗಿಪ್ಪ ರಾಮೇಶ್ವರಲಿಂಗವು ತಾನೆ.
--------------
ಅಕ್ಕಮ್ಮ
ಕ್ರೋಧ ಬಂದಲ್ಲಿ ಕೊಲ್ಲೆಂಬುದು, ದಯೆ ಬಂದಲ್ಲಿ ಬೇಡಾ ಎಂಬುದು, ಅದು ಅರಿವೊ? ಅಜ್ಞಾನವೊ? ಬೇರೊಂದು ಹೊಲಬೊ? ಮಾಡುವ ಕ್ರೀ ಜಡನೆಂಬುದು, ಕ್ರೀ ಹೊರಗಾದುದು ಅರಿವೆಂಬುದು, ಅದನರಿವುದು ಅದೇನು ಹೇಳಾ? ಆತ್ಮನರಿವೊ ಅದೇನು ಮರವೆಯೊ? ತೊಳೆದಡೆ ಮಡಿಯಾಗಿ ಮಾಸಿದಡೆ ಮೈಲಿಗೆಯಾಗಿ ಪುಸಿಯಹುದೊಂದೊ ಎರಡೊ? ಅರಿದಡೆ ತಾನೆಂಬ ಮರೆದಡೆ ಜಗವೆಂಬ ಉಭಯಕ್ಕೊಳಗಾಗದ ಮುನ್ನವೆ ಅರಿ, ಕಾಮಭೀಮ ಜೀವಧನದೊಡೆಯನ.
--------------
ಒಕ್ಕಲಿಗ ಮುದ್ದಣ್ಣ
ಅರ್ಪಿತವೆಂಬೆನೆ ದೇವರೊಂದಿಲ್ಲವಾಗಿ, ಅರ್ಪಿಸುವ ಭಕ್ತ ಮುನ್ನವೆ ಇಲ್ಲ. ಅರ್ಪಿತ ಅನರ್ಪಿತ ನೀನೆ ಎಂಬೆ, ಕೂಡಲಸಂಗಮದೇವಾ.
--------------
ಬಸವಣ್ಣ
ಲಿಂಗವೇ ಪ್ರಾಣವಾದ ಮತ್ತೆ ಬೇರೆ ನೆನೆಯಿಸಿಕೊಂಬುದು ಇನ್ನಾವುದಯ್ಯಾ ? ಇದಿರಿಟ್ಟು ಬಂದುದ ಮುನ್ನವೆ ಮುಟ್ಟಿ ಅರ್ಪಿತ ಅವಧಾನಂಗಳಲ್ಲಿ ಸೋಂಕಿದ ಮತ್ತೆ ಪುನರಪಿಯಾಗಿ ಸೋಂಕಿದಡೆ ನಿರ್ಮಾಲ್ಯ ಕಂಡಯ್ಯಾ. ಮೊನೆಗೂಡಿ ಹಾಯ್ವ ಕಣೆಯಂತೆ ಅರ್ಪಿತಾಂಗ ಸಂಗಭೇದ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವನರಿದಲ್ಲಿ.
--------------
ಪ್ರಸಾದಿ ಭೋಗಣ್ಣ
ಭಕ್ತಂಗೆ ತ್ರಿವಿಧಮಲ ನಾಸ್ತಿಯಾಗಿರಬೇಕು. ಮಾಹೇಶ್ವರಂಗೆ ಬಂಧ ಜಪ ನೇಮ ಕರ್ಮಂಗಳು ಹಿಂಗಿರಬೇಕು. ಪ್ರಸಾದಿಗೆ ಆಯತ ಸ್ವಾಯತ ಸನ್ನಹಿತವೆಂಬುದ ಸಂದೇಹಕ್ಕಿಕ್ಕದೆ ಸ್ವಯಸನ್ನದ್ಧವಾಗಿರಬೇಕು. ಪ್ರಾಣಲಿಂಗಿಯಾದಡೆ ಬಂದು ಸೋಂಕುವ ಸುಗುಣ ನಿಂದು ಸೋಂಕುವ ದುರ್ಗುಣ ಉಭಯ ಸೋಂಕುವುದಕ್ಕೆ ಮುನ್ನವೆ ಹಿಡಿವುದ ಹಿಡಿದು, ಬಿಡುವುದ ಬಿಟ್ಟು ಅರ್ಪಿಸಬೇಕು. ಶರಣನಾದಲ್ಲಿ ಆಗುಚೇಗೆಯೆಂಬುದನರಿಯದೆ ಸ್ತುತಿನಿಂದ್ಯಾದಿಗಳಿಗೆ ಮೈಗೊಡದೆ ರಾಗವಿರಾಗವೆಂಬುದಕ್ಕೆ ಮನವಿಕ್ಕದೆ ಜಿಹ್ವೆ ಗುಹ್ಯೇಂದ್ರಿಯಕ್ಕೆ ನಿಲುಕದೆ ಮದಗಜದಂತೆ ಇದಿರನರಿಯದಿಪ್ಪುದು. ಐಕ್ಯನಾದಲ್ಲಿ ಸುಗಂಧದ ಸುಳುಹಿನಂತೆ ಪಳುಕಿನ ರಾಜತೆಯಂತೆ, ಶುಕ್ತಿಯ ಅಪ್ಪುವಿನಂತೆ ಅಣೋರಣಿಯಲ್ಲಿ ಆವರಿಸಿ ತಿರುಗುವ ನಿಶ್ಚಯತನದಂತೆ ಬಿಂಬದೊಳಗಣ ತರಂಗದ ವಿಸ್ತರದಂಗದಂತೆ ಇಂತೀ ಷಟ್‍ಸ್ಥಲಕ್ಕೆ ನಿರ್ವಾಹಕವಾಗಿ ವಿಶ್ವಾಸದಿಂದ ಸಂಗನಬಸವಣ್ಣನ ಸಾಕ್ಷಿಯಾಗಿ ಬ್ರಹ್ಮೇಶ್ವರಲಿಂಗವನರಿದವರಿಗಲ್ಲದೆ ಸಾಧ್ಯವಲ್ಲ.
--------------
ಬಾಹೂರ ಬೊಮ್ಮಣ್ಣ
ಏನೆಂದೂ ಎನಲಿಲ್ಲ; ನುಡಿದು ಹೇಳಲಿಕ್ಕಿಲ್ಲ. ನಿಜದಲ್ಲಿ ನಿಂದ ಬೆರಗ ಕುರುಹ ಹರಿವುದೆ ಮರುಳೆ? ಹರಿದು ಹತ್ತುವುದೆ ಮರುಳೆ ಬಯಲು? ಅದು ತನ್ನಲ್ಲಿ ತಾನಾದ ಬಯಲು; ತಾನಾದ ಘನವು. ಇನ್ನೇನನರಸಲಿಲ್ಲ. ಅದು ಮುನ್ನವೆ ತಾನಿಲ್ಲ. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ.
--------------
ಘಟ್ಟಿವಾಳಯ್ಯ
ತೊಗಲ ಕೈಯಲ್ಲಿ ಶಿಲೆಯ ಲಿಂಗವ ಹಿಡಿದು, ಮಣ್ಣ ಪರಿಯಾಣದಲ್ಲಿ ಓಗರವನಿಕ್ಕಿ, ಲಿಂಗನೈವೇದ್ಯವ ತೋರಿದಡೆ, ಓಗರ ಸವೆದುದಿಲ್ಲ, ನೈವೇದ್ಯದ ರುಚಿಯನರಿದುದಿಲ್ಲ. ಒಳಗು ಶುದ್ಭವಿಲ್ಲದೆ ಮುಟ್ಟಿ ಅರ್ಪಿತವೆಂದಡೆ, ಮೆಚ್ಚುವರೆ ಪ್ರಾಣಲಿಂಗಿಸಂಬಂದ್ಥಿಗಳು. ಉಂಡವನು ಉಂಡಂತೆ ತೇಗುವ ಸಂದಳಿದು, ದ್ವಂದ್ವ ಹಿಂಗಿ ನಿಜವಾರೆಂಬುದ ವಿಚಾರಿಸಿ ಕೊಡುವುದಕ್ಕೆ ಮೊದಲೆ, ಕೊಂಡವರಾರು ಎಂಬುದ ಭಾವಿಸುವುದಕ್ಕೆ ಮೊದಲೆ, ಭಾವನೆಗೆ ಬಂದವರಾರೆಂದು ವಿಚಾರಿಸಿ, ಬೀಜ ನೆರೆ ಬಲಿದು ಪುನರಪಿ ಬಪ್ಪಂತೆ ಲಿಂಗ ತಾನಾಗಿ, ಸಂದೇಹವಿಲ್ಲದೆ ಸೋಂಕುವುದಕ್ಕೆ ಮುನ್ನವೆ ಅರ್ಪಿತ ನಿಂದಾಯಿತ್ತಾಗಿ, ನಿಃಕಳಂಕ ಮಲ್ಲಿಕಾರ್ಜುನನಲ್ಲಿ ಪ್ರಾಣಲಿಂಗ ಸಮರ್ಪಣ.
--------------
ಮೋಳಿಗೆ ಮಾರಯ್ಯ
ಜಂಗಮಪ್ರಸಾದ ಮುಂತಾಗಿಯಲ್ಲದೆ ಒಲ್ಲೆನೆಂಬ ಭಕ್ತನ ಕಟ್ಟಳೆಯ ವಿವರ: ಶಿಶು, ಬಂಧುಗಳು, ಚೇಟಿ, ಬೆವಸಾಯವ ಮಾಡುವವರು ಮುಂತಾದ ಇವರಿಗೆಲ್ಲಕ್ಕೂ ಒಡೆಯರಿಗೆ ಸಲುವುದಕ್ಕೆ ಮುನ್ನವೆ ಸೀತಾಳ ಶಿವದಾನವೆಂದು ಇಕ್ಕಬಹುದೆ? ಒಡೆಯರ ಕಟ್ಟಳೆಯಠಾವಿನಲ್ಲಿ ನಿಮ್ಮ ಕೃತ್ಯಕ್ಕೆ ನಿಮ್ಮ ಮನವೆ ಸಾಕ್ಷಿ. ಇದು ದಂಡವಲ್ಲ, ನೀವು ಕೊಂಡ ಅಂಗದ ನೇಮ. ಇದಕ್ಕೆ ನಿಮ್ಮ ಏಲೇಶ್ವರಲಿಂಗವೆ ಸಾಕ್ಷಿ.
--------------
ಏಲೇಶ್ವರ ಕೇತಯ್ಯ
ಅರಿದೆಹೆನೆಂಬನ್ನಬರ ಅಸಗೆ ನೀರಡಿಸಿ ಸತ್ತಂತಾಯಿತ್ತು. ಕಟ್ಟೋಗರವ ಹೊತ್ತು ಉಂಡೆಹೆ ಉಂಡೆಹೆನೆಂದು ಆಪ್ಯಾಯನವಡಸಿ ಸತ್ತಂತಾಯಿತ್ತು. ಅರಿದೆಹೆನೆಂದು ಕೇಳಿಹೇಳಿಹೆನೆಂಬನ್ನಬರ ಆತನು ಶಿಲೆಯ ರೇಖೆಯೆ ? ಬಯಲ ಬ್ರಹ್ಮವೆ ? ತಾನಳಿವುದಕ್ಕೆ ಮುನ್ನವೆ ಅರಿದು ಕೂಡಬೇಕೆಂದನಂಬಿಗ Zõ್ಞಡಯ್ಯ.
--------------
ಅಂಬಿಗರ ಚೌಡಯ್ಯ
ವೇದ ಹುಟ್ಟುವುದಕ್ಕೆ ಮುನ್ನವೆ ಓದಿದವರಾರು ? ಶಾಸ್ತ್ರ ಹುಟ್ಟುವುದಕ್ಕೆ ಮುನ್ನವೆ ಕಲಿತವರಾರು ? ಪುರಾಣ ಹುಟ್ಟುವುದಕ್ಕೆ ಮುನ್ನವೆ ಕೇಳಿದವರಾರು ? ಉತ್ಪತ್ತಿ ಸ್ಥಿತಿ ಲಯಕ್ಕೆ ಮುನ್ನವೆ ನಾನೆಂಬವರಾರು. ಮನಸಂದ ಮಾರೇಶ್ವರಾ ?
--------------
ಮನಸಂದ ಮಾರಿತಂದೆ
ಬ್ರಹ್ಮಂಗೆ ಸರಸ್ವತಿಯಾಗಿ ಬೆನ್ನಲ್ಲಿ ಬಂದಳು ಮಾಯೆ. ವಿಷ್ಣುವಿಂಗೆ ಲಕ್ಷಿ ್ಮಯಾಗಿ ಭವಕ್ಕೆ ತಿರುಗಿದಳು ಮಾಯೆ. ರುದ್ರಂಗೆ ಉಮಾದೇವಿಯಾಗಿ ಶಿರ ತೊಡೆಯಲ್ಲಿ ಕಾಡಿದಳುಮಾಯೆ. ಎಳ್ಳಿಗೆ ಎಣ್ಣೆ, ಮುಳ್ಳಿಗೆ ಮೊನೆಯಾಗಿ, ಹೂವಿಗೆ ಗಂಧವಾಗಿ, ಅವರವರಂಗದಲ್ಲಿ ಹಿಂಗದ ಪ್ರತಿರೂಪಾಗಿ ಸಂದಿಲ್ಲದೆ ಕಾಡುತ್ತಿದ್ದಾಳೆ ಮಾಯೆ. ಡಕ್ಕೆಯ ಉಲುಹಡಗುವುದಕ್ಕೆ ಮುನ್ನವೆ ನಿಶ್ಚೆ ೈಸಿಕೊಳ್ಳಿ, ಕಾಲಾಂತಕ ಬ್ಥೀಮೇಶ್ವರಲಿಂಗವನರಿಯಬಲ್ಲಡೆ.
--------------
ಡಕ್ಕೆಯ ಬೊಮ್ಮಣ್ಣ
ನಿಮ್ಮ ತನು, ನಿಮ್ಮ ಧನ, ನಿಮ್ಮ ಮನ ನಿಮ್ಮದಲ್ಲದೆ ಅನ್ಯವೆಂದಣುಮಾತ್ರವಿಲ್ಲ ನೋಡಯ್ಯಾ. ಭಕ್ತನ ಮಠವೆ ತನ್ನ ಮಠವೆಂದು ಮುನ್ನವೆ ಅರಿದರಿದು ಬಂದು, ಮತ್ತೊಂದ ಮತ್ತೊಂದ ನೆನೆವರೆ ? ಬಸವಪ್ರಿಯ ಕೂಡಲಚೆನ್ನಸಂಗನ ಶರಣ ಬಸವಣ್ಣಂಗೆ ಸ್ವತಂತ್ರಭಾವವುಳ್ಳಡೆ ನಿಮ್ಮ ಪಾದದಾಣೆ.
--------------
ಸಂಗಮೇಶ್ವರದ ಅಪ್ಪಣ್ಣ
ಇನ್ನಷ್ಟು ... -->