ಅಥವಾ

ಒಟ್ಟು 222 ಕಡೆಗಳಲ್ಲಿ , 6 ವಚನಕಾರರು , 222 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹಳ್ಳಿಯ ಹೊಲೆಯನ ಕೈಯಲ್ಲಿ ಡಿಳ್ಳಿಯದ್ಥಿಪತಿ ಸತ್ತ. ಆಳುವ ಗಂಡ ಹೆಂಡತಿಗೆ ಕೀಳಾಳಾದ. ಒಡೆದು ಬಂಟನಿಗೆ ಬಡಿಹೋರಿಯಾದ. ಹೊಡೆಯ ಹುಲ್ಲು ಕರವಾಳ ಹಿಡಿಯ ಕೊಯ್ಯಿತ್ತು. ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಕಾಬುದಕ್ಕೆ ಮೊದಲೆ ಬಯಕೆ ಅರತು, ಕೂಡುವುದಕ್ಕೆ ಮುನ್ನವೆ ಸುಖವರತು, ಉಭಯ ನಾಮಧೇಯ ನಷ್ಟವಾದಲ್ಲಿ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಭಲ್ಲೂಕನ ನೋಟ, ವ್ಯಾಘ್ರನ ಸಂಚ, ವಿಕ್ರಮನ ನಾಸಿಕ, ಸಿಕ್ಕಿಸುವಾತನ ಬುದ್ಧಿ, ಗುರುವೆನಲಿಲ್ಲ, ಪ್ರಮಾಣಿಸಲಿಲ್ಲ, ವರ್ಮಿಸಲಿಲ್ಲ, ಹರವರಿಯಲ್ಲಿ ಹರಿಸಲಿಲ್ಲ. ಅವನಿರವಿನಲ್ಲಿ ನುಡಿದ ನುಡಿ ಕೆಡಬಾರದೆಂದು ಅವುಡಕಚ್ಚಿರು ತೂತಿನ ಭ್ರಾಂತ, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಅಪ್ಪು ಅಪ್ಪುವ ನುಂಗಿದಂತೆ, ವಿಚಿತ್ರ ಚಿತ್ರದೊಳಡಗಿದಂತೆ, ಮನ ಮಹವ ಕೂಡಿ ಬೆಳಗು ಬೆಳಗನೊಳಕೊಂಡಂತೆ, ತಾನೆಂಬುದೇನೂ ಕುರುಹುದೋರದೆ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಎನ್ನ ಕೈಯಲ್ಲಿ ಕೊಟ್ಟುದ ದೇವರೆಂದಿದ್ದೆ. ಇದು ಮೆಲ್ಲಮೆಲ್ಲನೆ ಕಲ್ಲಾಗಿ ಬರುತ್ತಿದೆ; ಇದ ನಾನೊಲ್ಲೆ. ಬಲ್ಲವರು ಹೇಳಿ; ಉಂಬಡೆ ಬಾಯಿಲ್ಲ, ನೋಡುವಡೆ ಕಣ್ಣಿಲ್ಲ. ಎನ್ನ ಬಡತನಕ್ಕ ಬೇಡುವಡೆ ಏನೂ ಇಲ್ಲ, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಭಕ್ತನಾಗಿ ಹುಟ್ಟಿ ಮತ್ತೊಬ್ಬರಲ್ಲಿ ಬೇಡುವುದೆ ಕಷ್ಟ. ಹೊತ್ತು ಹೋರಿ ಭೂಮಿಯ ಅಗೆವಲ್ಲಿ ಮೊತ್ತದ ಜೀವಂಗಳು ಸತ್ತುದ ದೃಷ್ಟವ ಕಂಡಲ್ಲಿಯೆ ಮಾಡುವ ಮಾಟ ನಷ್ಟ. ಇದನರಿತು ವಿರಕ್ತರಾಗಿ ಹೋದಲ್ಲಿ, ಮತ್ತೊಬ್ಬರ ಅಪ್ಪಾ ಅಣ್ಣಾ ಎಂದು ಚಿತ್ತ ಕಲಕುವದು ಕಷ್ಟ. ಈ ಹೊತ್ತ ದೇಹಕ್ಕೆ ನಗೆಯ ಚಿತ್ತದ ಕಾಯಕ, ಇದನೊಪ್ಪುಗೊ, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಗುರಿಯನೆಚ್ಚಲ್ಲಿ ತಾಗಿದವೊಲು, ತಪ್ಪಿದ ಭೇದವ ನಿಶ್ಚೈಸಿ ಕೈ ಅರಿವಂತೆ, ಕಾಯ ಜೀವದ ಸಂದಣಿಯಲ್ಲಿ, ಅರಿವೆಂಬ ವಸ್ತು ತಿರುಗಾಡುತ್ತಿರಲಾಗಿ, ಆ ಗುಣವ ಕರಿಗೊಂಡು, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಅರಿದೆಹೆನೆಂದು ಕುರುಹಿಟ್ಟು ಇದಿರಿಂಗೆ ಹೇಳುವಾಗ, ಆ ಗುಣ ಅರಿವೋ, ಮರವೆಯೋ ? ಹೋಗಲಂಜಿ, ಹಗೆಯ ಕೈಯಲ್ಲಿ ಹಾದಿಯ ತೋರಿಸಿಕೊಂಬಂತೆ, ತನ್ನನರಿಯದ ಯುಕ್ತಿ, ಇದಿರಿಂಗೆ ಅನ್ಯಬೋಧೆಯುಂಟೆ ? ಈ ಅನ್ಯಬ್ಥಿನ್ನಕ್ಕೆ ಮೊದಲೆ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಕಾಯವ ಬಿಟ್ಟು ಪ್ರಾಣಹೋದ ಮತ್ತೆ, ಆ ಕಾಯಕ್ಕೆ ಆ ಪ್ರಾಣ ಪುನರಪಿಯಾಗಿ ಒಪ್ಪುದೆ ? ಅಂಗವ ಬಿಟ್ಟು ಲಿಂಗ ಬಿದ್ದ ಮತ್ತೆ, ಮತ್ತಾ ಅಂಗಕ್ಕೆ ಲಿಂಗವುಂಟೆ ? ಲಯವೆಂದಿದ್ದಡೂ ತಪ್ಪದು. ಪ್ರಾಯಶ್ಚಿತವೆಂದು ಪ್ರಕಾರವ ಮಾಡಿ, ಶ್ವಾನನ ಕಾಲಿನಲ್ಲಿ ಸೋಮಪಾನವನೆರೆದು, ಪಾಯಸ ಶುದ್ಧವಾಯಿತ್ತೆಂದು ಕೊಂಬವನಂತೆ, ಈ ಗುಣವ ಕಾಬುದಕ್ಕೆ ಮೊದಲೆ ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ದಿವಾರಾತ್ರಿಯೆಂಬ ಉಭಯ ಕೂಡೆ, ದಿನಲೆಕ್ಕ ಹಾಯಿದು ಕಲ್ಪಿತವನಳಿದಂತೆ, ಲೆಕ್ಕ ಮುಂಚು, ದಿನ ಹಿಂಚಾಗಿ ತನ್ನ ತಪ್ಪನರಿವುದಕ್ಕೆ ಮೊದಲೆ ತಪ್ಪಿರಬೇಕು. ಇದು ನಿಶ್ಚಯ ಬುದ್ಧಿ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಉಕ್ಕುವ ಬೆಣ್ಣೆಯ ಒಲೆಯ ಮೇಲಿರಿಸಿ, ಅಳಲುತ್ತ ಬಳಲುತ್ತಲಿರ್ದಾರಯ್ಯ. ಅಲ್ಲದ ಚೇಳಿನೊಳು ಚಲ್ಲವಾಡಿ, ಎಲ್ಲರೂ ನಾಣುಗೆಟ್ಟರಲ್ಲಯ್ಯಾ. ಎಲ್ಲರ ಅರಿವು, ಇಲ್ಲಿಯೆ ಉಳಿಯಿತ್ತು. ಇದ ಬಲ್ಲವರಾರೊ, ಮಾರೇಶ್ವರಾ ?
--------------
ಮಾರೇಶ್ವರೊಡೆಯರು
ಮೊದಲಿಗೆ ಮರ ನೀರನೆರೆದಡೆ ಎಳಕುವುದಲ್ಲದೆ, ಕಡೆ ಕಿಗ್ಗೊಂಬಿಗೆರೆದವರುಂಟೆ ? ಅರಿದು ಪೂಜಿಸುವಲ್ಲಿ ಹರಿವುದು ಮನಪಾಶ. ಅರಿದು ಅರ್ಪಿಸುವಲ್ಲಿ ಲಿಂಗದ ಒಡಲೆಲ್ಲ ತೃಪ್ತಿ. ತನ್ನನರಿದಲ್ಲಿ ಸಕಲಜೀವವೆಲ್ಲ ಮುಕ್ತಿ. ತನ್ನ ಸುಖದುಃಖ ಇದಿರಿಗೂ ಸರಿಯೆಂದಲ್ಲಿ, ಅನ್ನಬ್ಥಿನ್ನವಿಲ್ಲ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಹಿಂದೆ ಬಂದವರೆಲ್ಲರೂ ಯೋನಿಯ ಹಂಗು. ಸಕಲ ಶಾಸ್ತ್ರಜ್ಞರೆಲ್ಲಾ, ವೇದ ವೇದಾಂತರೆಲ್ಲಾ, ಹಿಂದೆ ಬಂದ ಯೋನಿಯ ಮರೆದು, ಮುಂದಕ್ಕೆ ಯೋನಿಗಾಗಿ ಲಂದಳಗಿತ್ತಿಯಂತೆ ಬಂದ ನಿಂದ ಭಕ್ತರಲ್ಲಿ ಹೊಸತನದಂದವ ಹೇಳಿ, ಎಡಗಾಲಸಂದಿಯ ಮಚ್ಚಿ, ಅನಂಗನ ಬಲೆಯೊಳಗಾದವರಿಗೆ ಘನಲಿಂಗನ ಸುದ್ಧಿಯೇಕೆ, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಕಲ್ಲು ರತಿಯಿಂದ ರತ್ನವಾದಂತೆ, ಉದಕ ಸಾರವರತು ಲವಣವಾದಂತೆ, ವಾರಿ ವಾಯುವ ಸಂಗದಿಂದ ಬಲಿದಂತೆ, ಪೂರ್ವವನಳಿದು ಪುನರ್ಜಾತನಾದ ಮತ್ತೆ, ಎನ್ನವರೆಂದು ಬೆರಸಿದಲ್ಲಿ, ಆ ಗುಣ ಆಚಾರಕ್ಕೆ ಹೊರಗಾಯಿತ್ತು. ಮಾತೆ ಪಿತ ಸಹೋದರ ಬಂಧುಗಳೆಂದು ಮನ ಕೂರ್ತು ಬೆರಸಿದಲ್ಲಿ, ಆಚಾರಕ್ಕೆ ಭ್ರಷ್ಟ, ವಿಚಾರಕ್ಕೆ ದೂರ, ಪರಮಾರ್ಥಕ್ಕೆ ಸಲ್ಲ. ಇವನೆಲ್ಲವ ಕಳೆದುಳಿದು ನಿಂದಲ್ಲಿ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ವೇದ ಹುಟ್ಟುವುದಕ್ಕೆ ಮುನ್ನವೆ ಓದಿದವರಾರು ? ಶಾಸ್ತ್ರ ಹುಟ್ಟುವುದಕ್ಕೆ ಮುನ್ನವೆ ಕಲಿತವರಾರು ? ಪುರಾಣ ಹುಟ್ಟುವುದಕ್ಕೆ ಮುನ್ನವೆ ಕೇಳಿದವರಾರು ? ಉತ್ಪತ್ತಿ ಸ್ಥಿತಿ ಲಯಕ್ಕೆ ಮುನ್ನವೆ ನಾನೆಂಬವರಾರು. ಮನಸಂದ ಮಾರೇಶ್ವರಾ ?
--------------
ಮನಸಂದ ಮಾರಿತಂದೆ
ಇನ್ನಷ್ಟು ... -->