ಅಥವಾ

ಒಟ್ಟು 172 ಕಡೆಗಳಲ್ಲಿ , 49 ವಚನಕಾರರು , 158 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಣ್ಗೆ ಕಾಬಡೆ ರೂಪಲ್ಲ, ಕೈಗೆ ಸಿಲುಕವಡೆ ದೇಹಿಯಲ್ಲ. ನಡೆವಡೆ ಗಮನಿಯಲ್ಲ, ನುಡಿವಡೆ ವಾಚಾಳನಲ್ಲ. ನಿಂದಿಸಿದಡೆ ಹಗೆಯಲ್ಲ, ಹೊಗಳಿದವರಿಗೆ ಕೆಳೆಯಲ್ಲ. ಗುಹೇಶ್ವರನ ನಿಲುವು ಮಾತಿನ ಮಾಲೆಗೆ ಸಿಲುಕುವುದೆ ? ಸಿದ್ಧರಾಮಯ್ಯ ನೀನು ಮರುಳಾದೆಯಲ್ಲಾ
--------------
ಅಲ್ಲಮಪ್ರಭುದೇವರು
ಮನಕ್ಕೆ ನಾಚದ ವಚನ, ವಚನಕ್ಕೆ ನಾಚದ ಮನ ! ಕುಂದು-ಹೆಚ್ಚ ನುಡಿವೆ. ಒಂದು ಮಾತಿನ ಗೆಲ್ಲಕ್ಕೆ ಹಿಡಿದು ಹೋರುವೆ, ಕೂಡಲಸಂಗನ ಶರಣರ ಎನ್ನಾಳ್ದರೆಂಬೆ. 256
--------------
ಬಸವಣ್ಣ
ನೋಡುವಲ್ಲಿ ನೆರೆ ಶೃಂಗಾರವಲ್ಲದೆ, ಕೂಡುವಲ್ಲಿ ಉಂಟೆ ? ನುಡಿವಲ್ಲಿ ಮಾತಿನ ಬಲುಮೆಯಲ್ಲದೆ, ಸಂಸಾರವ ಸಾಧನವ ಮಾಡುವಲ್ಲಿ ಮುಟ್ಟದಿಪ್ಪುದುಂಟೆ ? ನಡೆ ನುಡಿ ಸಿದ್ಧಾಂತವಾದ ಶರಣಂಗೆ ಪಡಿಪುಚ್ಚವಿಲ್ಲ, ಗುಡಿಯೊಡೆಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗದಲ್ಲಿ ಐಕ್ಯವಾದ ಶರಣಂಗೆ.
--------------
ಮನುಮುನಿ ಗುಮ್ಮಟದೇವ
ವಚನದ ರಚನೆಯೆಂಬ ಮಾತಿನ ಬಣ್ಣದ ಪರಿಯಲ್ಲ ನೋಡಾ. ಹೊಲಳಿ ಕಂಡವರೆಲ್ಲರು ಮೂರ್ತಿಗೊಳಗಾದರು. ವೇದ ಶಾಸ್ತ್ರ ಮಾರ್ಗವೆಲ್ಲವೂ ಹೊಗಳಿ ಕಾಣವೆಂಬುದ, ಗುಹೇಶ್ವರ ಸಾಕ್ಷಿಯಾಗಿ ಮೂರುಲೋಕ ಬಲ್ಲುದು ಕಾಣಾ ಸಿದ್ಧರಾಮಯ್ಯಾ.
--------------
ಅಲ್ಲಮಪ್ರಭುದೇವರು
ಆತುರದ ಧ್ಯಾನದಿಂದ ಧಾವತಿಗೊಂಡೆ ; ಜ್ಯೋತಿರ್ಲಿಂಗವ ಕಾಣಿಸಬಾರದು. ಮಾತಿನ ಮಾಲೆಗೆ ಸಿಲುಕುವನಲ್ಲ ; ಧಾತುಗೆಡಿಸಿ ಮನವ ನೋಡಿ ಕಾಡುವನು. ಆತುಮನಂತರ ಪರವನರಿದಡೆ ಆತನೆ ಯೋಗಿ ; ಆತನ ಪಾದಕ್ಕೆ ಶರಣೆಂಬೆನಯ್ಯಾ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ನರಕುಲ ಹಲವಾದಲ್ಲಿ, ಯೋನಿಯ ಉತ್ಪತ್ಯ ಒಂದೇ ಭೇದ. ಮಾತಿನ ರಚನೆ ಎಷ್ಟಾದಡೇನು ? ನಿಹಿತವರಿವುದು ಒಂದು ಭೇದ. ವಸ್ತು ಜಾತಿ ಗೋತ್ರ ವಿಶೇಷವೆಂಬಲ್ಲಿ, ದಿನರಾತ್ರಿಯೆಂಬ ಉಭಯವನಳಿವುದಕ್ಕೆ ತಮ ಬೆಳಗೆರಡೆಂಬವಲ್ಲದಿಲ್ಲ. ಕುಲ ಉಭಯಶಕ್ತಿ ಪುರುಷತ್ವವಲ್ಲದಿಲ್ಲ. ಬೇರೆ ಹಲವು ತೆರನುಂಟೆಂದಡೆ, ಮೀರಿ ಕಾಬ ಶ್ರುತ ದೃಷ್ಟ ಇನ್ನಾವುದು ? ಎಲ್ಲಕ್ಕೂ ನೀರು ನೆಲ ಸೂರ್ಯ ಸೋಮ ಆರೈದು ನೋಡುವ ದೃಷ್ಟಿಯೊಂದೆ ಬೊಂಬೆ. ಬೊಂಬೆ ಹಲವ ನೋಡಿಹೆ, ಬೊಂಬೆ ಹಲವಂದ ಕಾಣ್ಬಂತೆ, ಅದರಂಗವ ತಿಳಿದು ನಿಂದಲ್ಲಿ, ಹಲವು ಕುಲದ ಹೊಲೆಯೆಂದೂ ಇಲ್ಲವೆಂದೆ. ಕೈಯುಳಿ ಕತ್ತಿ ಅಡಿಗೂಂಟಕ್ಕಡಿಯಾಗಬೇಡ, ಅರಿ ನಿಜಾ[ತ್ಮಾ] ರಾಮ ರಾಮನಾ
--------------
ವೀರ ಗೊಲ್ಲಾಳ/ಕಾಟಕೋಟ
ಮಾತಿನ ಗೂಢವ ನುಡಿದಡೆ, ನೀತಿವಂತರು ಅರಿಯರು. ಜ್ಞಾತೃಜ್ಞೇಯ ಭಾವವ ನುಡಿದಡೆ, ಪ್ರಖ್ಯಾತ ಆಗಮಯುಕ್ತಿ ಅವರರಿಯರು. ಇಂತಿವ ಹೇಳಿದಡೆ ಜಗದ ತೊಡಕು, ಉಳಿದಡೆ ಚಿತ್ತಕ್ಕೆ ವಿರೋಧ. ಇದರಚ್ಚುಗ ಬೇಡ, ಗುಡಿಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗವೆ.
--------------
ಮನುಮುನಿ ಗುಮ್ಮಟದೇವ
ಓ ಎಂದಲ್ಲಿ ವಸ್ತು, ಕಾ ಎಂದಲ್ಲಿ ಶಕ್ತಿ ಕೂಡಿ ಪ್ರಣವವಾಯಿತ್ತು. ಮಾತಿನ ಸೂತಕದಿಂದ ವೇದವಾಯಿತ್ತು, ನೀತಿಯ ಹೇಳುವಲ್ಲಿ ಶಾಸ್ತ್ರವಾಯಿತ್ತು. ಸರ್ವರ ಕೂಟದ ಕೂಗಿನಿಂದ ಪುರಾಣವಾಯಿತ್ತು. ಇಂತಿವರ ಗೋಷ್ಠಿಯ ಹುದುಗಿಗಾರದೆ, ಅಲೇಖನಾದ ಶೂನ್ಯ ಕಲ್ಲಿನೊಳಗಾದ.
--------------
ವಚನಭಂಡಾರಿ ಶಾಂತರಸ
ಜ್ಞಾನಿ ತಾನಾದಡೆ ಮಾನವರ ಗುಣವೇನಾದಡೂ ಆಗಲಿ. ಭಾನುತೇಜಕ್ಕೆ ನಾನಾಗುಣವೆಲ್ಲವೂ ಸರಿ. ಬೀಸುವ ವಾಯುವಿಂಗೆ ಸುಗುಣ ದುರ್ಗುಣವಿಲ್ಲ. ಇದು ಅಜಾತನ ಒಲುಮೆ. ಮಿಕ್ಕಿನ ಮಾತಿನ ಮಕ್ಕಳಿಗಿಲ್ಲಯೆಂದೆ, ಜಗದೀಶನ ಒಲುಮೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಜ್ಞಾನಸಂಪನ್ನರಾದವರಿಂಗೆ ಹೀನವೃತ್ತಿವುಂಟೇನಯ್ಯ? ಭಾವಬೆರಗಾದವರಿಂಗೆ ಲೋಕದ ಹಂಗುಂಟೇನಯ್ಯ? ಶಿವಜ್ಞಾನ ಉದಯವಾದ ಬಳಿಕ ಮಾತಿನ ಹಂಗುಂಟೇನಯ್ಯ? ತಾನುತಾನಾದ ಬಳಿಕ ಯಾರ ಹಂಗಿಲ್ಲವಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಜ್ಞಾನಿಯಾದವಂಗೆ ಅರಿವು ತಾನೆಲ್ಲಿಯದೊ ? ಸುಜ್ಞಾನಿಯಾದವಂಗೆ ಮರಹು ತಾನೆಲ್ಲಿಯದೊ ? ನಾನರಿದೆನೆಂಬಾತ ಇದಿರ ಕೇಳಲುಂಟೆ ? ಭ್ರಾಂತಿನ ಭ್ರಮೆಯೊಳಗೆ ಬಳಲುತ್ತಿರಲು ಮಾತಿನ ಮಾತಿನೊಳಗೆ ಅರಿವೆಂಬುದುಂಟೆ ? ಸೂತಕ ಹಿಂಗದೆ ಸಂದೇಹವಳಿಯದೆ, ಮುಂದಣ ಸೂಕ್ಷ್ಮವ ಕಾಬ ಪರಿಯೆಂತೊ? ಜ್ಯೋತಿಯ ಬಸಿರೊಳಗೆ ಜನಿಸಿದ ಕಾಂತಿಯೂಥ(ಯುತ?) ಬೆಳಗು ಗುಹೇಶ್ವರಾ ನಿಮ್ಮ ಶರಣ !
--------------
ಅಲ್ಲಮಪ್ರಭುದೇವರು
ಅಂಗದಲ್ಲಿ ಲಿಂಗ! ಆ ಲಿಂಗ ಧ್ಯಾನದಲ್ಲಿಪ್ಪ ಒಡಲೊಡವೆ ಒಡೆಯರಿಗೆಂಬ; ಮಾಡಿ ಮನದಲ್ಲಿ ಹೊಳೆಯದೆ ಬಾಳೆ ಫಲದಂತಿಪ್ಪ ಮಾತಿನ ಬಟ್ಟೆಗೆ ಹೋಗದ; ಸೂತಕಶ್ರುತವ ಕೇಳದ; ಸದ್ಭಕ್ತರ ನೆನವುದೆ ಮಂತ್ರವಯ್ಯ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಗುರುವಿನೊಡನೆ ಸಹಭೋಜನ ಮಾಡಬೇಕಾದಡೆ, ಚತುರ್ವಿಧಭಕ್ತಿಯಿಂದೆ ಗುರುವಿನೊಳಗೆ ತನುವಡಗಿರಬೇಕು. ಲಿಂಗದೊಡನೆ ಸಹಭೋಜನ ಮಾಡಬೇಕಾದಡೆ, ಸಂಕಲ್ಪ ವಿಕಲ್ಪ ಸೂತಕ ಪಾತಂಕಗಳಳಿದು ಲಿಂಗದೊಳಗೆ ಮನವಡಗಿರಬೇಕು. ಜಂಗಮದೊಡನೆ ಸಹಭೋಜನ ಮಾಡಬೇಕಾದಡೆ, ಮಜ್ಜನ ಭೋಜನ ಕುಸುಮ ಗಂಧಾನುಲೇಪನ ಅನ್ನ ವಸ್ತ್ರ ಮಣಿ ರತ್ನಾಭರಣ ಗೀತ ವಾದ್ಯ ನೃತ್ಯ ಹಾಸುಮಂಚ ಸ್ತ್ರೀಭೋಗ ಮೊದಲಾದ ಅನೇಕ ಭಕ್ತಿಯಿಂದೆ ಜಂಗಮಕ್ಕೆ ಧನವ ಸಮರ್ಪಿಸಬೇಕು. ಇಂತೀ ತ್ರಿವಿಧ ಭಕ್ತಿಯ ನಿರ್ಣಯವನರಿಯದೆ, ತನು ಮನ ಧನಂಗಳ ಹಿಂದಿಟ್ಟುಕೊಂಡು ಮಾತಿನ ಬಣಬೆಯ ಮುಂದಿಟ್ಟುಕೊಂಡು ನೀತಿಹೀನರು ಸಹಭೋಜನ ಕವಳ ಪ್ರಸಾದವ ಕೊಟ್ಟು ಕೊಂಡಡೆ ಹುಳುವಿನ ಕೊಂಡದಲ್ಲಿ ಮುಳುಗಿಸಿಬಿಡುವನು ನೋಡಾ ನಮ್ಮ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ವೇದದಂತುಟಲ್ಲ, ಶಾಸ್ತ್ರದಂತುಟಲ್ಲ. ಗೀತಮಾತಿನಂತುಟಲ್ಲ ಕೇಳಯ್ಯಾ. ಮಾತಿನ ಮಾತಿನ ಕವುಳುಗೋಲ ಶ್ರವದಲ್ಲಿ ಸತ್ತವರೊಳರೆ ಅಯ್ಯಾ ದಿಟದಲಗಿನ ಕಾಳೆಗವಿತ್ತಲಿದ್ದುದೆ ಕೂಡಲಸಂಗನ ಶರಣರು ಬಂದಲ್ಲಿ. 209
--------------
ಬಸವಣ್ಣ
ಆದಿ ಅನಾದಿ ಅಂತರಾದಿ ನಾದ ಬಿಂದು ಕಳೆ ಸ್ಥೂಲ ಸೂಕ್ಷ್ಮ ಕಾರಣ ಆದಿ ಮಧ್ಯಾವಸಾನಂಗಳಲ್ಲಿ ಜಗದಲ್ಲಿ ಸಾದ್ಥಿಸುತ್ತಿರ್ದ ಬೋಧರುಗಳು ನೀವು ಕೇಳಿರೊ. ಅಭ್ಯೇದ್ಯಲಿಂಗವ ಭೇದಿಸಿ ಸುಬುದ್ಧಿಯಿಂದ ಕಂಡ ಪರಿ ಇನ್ನೆಂತೊ? ಮಾತಿನ ಮಾಲೆಯ ಕಲಿತು ಸಂತೆಯ ಹೋತಿನಂತೆ ಹೋರುವ ತೂತಜ್ಞಾನಿಗಳಿಗಿನ್ನೇತರ ಭಕ್ತಿ ವಿರಕ್ತಿ, ನಿಃಕಳಂಕ ಮಲ್ಲಿಕಾರ್ಜುನಾ?
--------------
ಮೋಳಿಗೆ ಮಾರಯ್ಯ
ಇನ್ನಷ್ಟು ... -->