ಅಥವಾ

ಒಟ್ಟು 197 ಕಡೆಗಳಲ್ಲಿ , 55 ವಚನಕಾರರು , 170 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುಲಿಂಗಜಂಗಮವೆಂದು ನುಡಿವ ಬಹುವಾಕ್ಯರು ನೀವು ಕೇಳಿರೊ. ಗುರುವಾವುದು? ಲಿಂಗವಾವುದು? ಜಂಗಮವಾವುದು? ಲಿಂಗವೆಂದವರ ಕರಸ್ಥಲದಲ್ಲಿ ಜಂಗಮವೊಂದೆಂದರಿಯದಿರದೆ ಚರಿಸಿದ ಗುರುಸ್ಥಲದ ಹೊಲಬನರಿಯದೆ ಗುರುಭಕ್ತರೆನ್ನಿಸುವ ಗುರುದ್ರೋಹಿಗಳ ಮಾತ ಕೇಳಲಾಗದಯ್ಯ ಗೊಹೇಶ್ವರಪ್ರಿಯ ನಿರಾಳಲಿಂಗಾ.
--------------
ಗುಹೇಶ್ವರಯ್ಯ
ತನ್ನ ಪುತ್ರಂಗೆ ತಾನೆ ಗುರುವಾದೆನೆಂಬ ಗುರುದ್ರೋಹಿಯ ಮಾತ ಕೇಳಲಾಗದು. ಅವರಿಬ್ಬರನು ಹೊತ್ತಿಸಿ ನಂದಿಸಿ ಸುಡುವ ಕೂಡಲಚೆನ್ನಸಂಗಯ್ಯನವರ ಗುರುಶಿಷ್ಯತನವ.
--------------
ಚನ್ನಬಸವಣ್ಣ
ಈರೇಳುಭುವನವನು ಒಡಲೊ?ಗೆ ಇಂಬಿಟ್ಟುಕೊಂಡು ಲಿಂಗರೂಪನಾಗಿ ಭಕ್ತನ ಕರಸ್ಥಲಕ್ಕೆ ಬಂದು ಪೂಜೆಗೊಂಡಿತ್ತು ನೋಡಾ ! ಅಂತಹ ಅಗಮ್ಯ ಅಗೋಚರ ಲಿಂಗವೆಂದರಿದು ಭಕ್ತನು ತಾನು ಹಿಂದೆ ನಡೆದ ಜೂಜು ಬೇಂಟೆ ಚದುರಂಗ ಲೆತ್ತ ಪಗಡೆಯಾಟಂಗಳಂ ಪರಿಹಾಸಕರ ಕೂಡಿಕೊಂಡು ಕೆಲೆದಾಡುವದಂ ಬಿಟ್ಟು ಬಂಧುವ ತೊರೆದು ಮುಂದೆ ಶಿವಪಥದಲ್ಲಿ ನಡೆಯಬಲ್ಲಾತನೇ ಸದ್ಭಕ್ತನಲ್ಲದೆ, ಹಣದಾಸೆಗೆ ಹಂಗಿಗನಾಗಿ ಗುಣದಾಸೆಗೆ ಅಮೇಧ್ಯವ ತಿಂದು ಬಂಧುಗಳ ಬಿಟ್ಟು ಭಕ್ತಿಯಿಲ್ಲವೇ ಉಂಟೇ ಎಂಬ ಪಂಚಮಹಾಪಾತಕರ ಮುಖವ ನೋಡಲಾಗದು ಅವರ ಮಾತ ಕೇಳಲಾಗದು, ಅದೆಂತೆಂದಡೆ; ಕತ್ತೆ ಭಕ್ತನಾದರೆ ಕಿಸುಕುಳವ ತಿಂಬುದ ಮಾಂಬುದೆ ? ಬೆಕ್ಕು ಭಕ್ತನಾದರೆ ಇಲಿಯ ತಿಂಬುದ ಮಾಂಬುದೆ ? ಹಂದಿ ಭಕ್ತನಾದರೆ ಹಡಿಕೆಯ ತಿಂಬುದ ಮಾಂಬುದೆ ? ಶುನಕ ಭಕ್ತನಾದರೆ ಮೂಳೆ ಮಾಂಸವ ತಿಂಬುದ ಮಾಂಬುದೆ ? ಕೋಳಿಯ ತಂದು ಪಂಜರವ ಕೂಡಿ ಅಮೃತಾನ್ನವನಿಕ್ಕಿ ಸಲಹಿದರೆ ಅದು ತಾನೆ ಮತ್ತೆ ತಿಂಬ ಹಡುವಿಂಗೆ ಚಿತ್ತವನಿಕ್ಕುದುಂ ಮಾಂಬುದೆ ? ಇಂತೀ ಭವಿತನಕ್ಕೆ ಹೇಸಿ ಭಕ್ತನಾದ ಬಳಿಕ ಅನಾಚಾರವ ಬಿಟ್ಟು ಸದಾಚಾರದಲ್ಲಿ ನಡೆಯಬೇಕು. ಗುರುವಾದಡೂ ಆಗಲಿ ಭಕ್ತನಾದಡೂ ಆಗಲಿ ತಾನು ಹಿಂದೆ ಭವಿಯಾಗಿದ್ದಾಗ ಭುಂಜಿಸುತ್ತಿದ್ದ ಸುರೆ ಮಾಂಸ ಭಂಗಿ ಭವಿಸಂಗ ಭವಿಪಾಕ ಇಂತಿವ ಬಿಡದಿರ್ದವರುಗಳು ಆ ಕತ್ತೆ ಬೆಕ್ಕು ಸೂಕರ ಸೊಣಗ ಕೋಳಿಗಿಂದತ್ತತ್ತ ಕಡೆ ನೋಡಿರೇ. ಚಿನ್ನದ ಬೆಟ್ಟವನೇರಿದವನು ಕಣ್ಣುಕಾಣದಿಪ್ಪಂತೆ ಗಣೆಯನೇರಿದ ಡೊಂಬ ಮೈ ಮರೆದಿಪ್ಪಂತೆ ನಡುನೀರಿಗೆ ಹೋದ ಹರಿಗೋಲು ತಲೆ ಕೆಳಗಾದಂತೆ ಕಾಣಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಶ್ರೀಮತ್ಸಜ್ಜನ ಶುದ್ಧಶಿವಾಚಾರರಾಗಿ ಅಷ್ಟಾವರಣವೆ ಅಂಗವಾಗಿ, ಪಂಚಾಚಾರವೆ ಪ್ರಾಣವಾಗಿ, ಬಸವೇಶ್ವರದೇವರ ಸಾಂಪ್ರದಾಯಕರೆಂದು ನುಡಿದು ನಡೆದರೆ ಭಕ್ತರೆಂಬೆ, ಪುರಾತನರೆಂಬೆ. ಅಂತಪ್ಪ ಭಕ್ತಂಗೆ ಈ ಮೂಜಗವೆಲ್ಲ ಸರಿಯಲ್ಲವೆಂಬೆ. ಆ ಭಕ್ತಂಗೆ ಶಿವನ ಗದ್ದುಗೆಯೆ ಕೈಲಾಸವಾಗಿಪ್ಪುದು ನೋಡಾ. ಈ ಶಿವಾಚಾರದ ಪಥವನರಿಯದೆ ಇರುಳು ಹಗಲು ಅನಂತ ಸೂತಕಪಾತಕಂಗಳೊಳಗೆ ಮುಳುಗಾಡಿ ಮತಿಗೆಟ್ಟು ಪಂಚಾಂಗವ ಬೊಗಳುವ ಭ್ರಷ್ಟ ಮಾದಿಗರ ಮಾತು ಅಂತಿರಲಿ. ಪಂಚಾಂಗ ಕೇಳಿದ ದಕ್ಷಬ್ರಹ್ಮನ ತಲೆಯೇಕೆ ಹೋಯಿತು ? ಪಂಚಾಂಗ ಕೇಳಿದ ಪಂಚಪಾಂಡವರು ದೇಶಭ್ರಷ್ಟರಾದರೇಕೆ ? ಪಂಚಾಂಗ ಕೇಳಿದ ಶ್ರೀರಾಮನ ಹೆಂಡತಿ ರಾವಣಗೆ ಸೆರೆಯಾದಳೇಕೆ ? ಪಂಚಾಂಗ ಕೇಳಿದ ಇಂದ್ರನ ಶರೀರವೆಲ್ಲ ಯೋನಿಮಂಡಲವೇಕಾಯಿತು ? ಪಂಚಾಂಗ ಕೇಳಿದ ದ್ವಾರಾವತಿ ಪಟ್ಟಣದ ನಾರಾಯಣನ ಹೆಂಡಿರು ಹೊಲೆಮಾದಿಗರನ್ನು ಕೂಡಿದರೇಕೆ ? ಪಂಚಾಂಗ ಕೇಳಿದ ಸರಸ್ವತಿಯ ಮೂಗು ಹೋಯಿತೇಕೆ ? ಪಂಚಾಂಗ ಕೇಳಿದ ಕಾಮ ಸುಟ್ಟು ಭಸ್ಮವಾದನೇಕೆ ? ಪಂಚಾಂಗ ಕೇಳಿದ ಬ್ರಹ್ಮ ವಿಷ್ಣು ಇಂದ್ರ ಮೊದಲಾದ ಮೂವತ್ತುಮೂರುಕೋಟಿ ದೇವರ್ಕಳು ತಾರಕಾಸುರನಿಂದ ಬಾಧೆಯಾಗಿ ಕಂಗೆಟ್ಟು ಶಿವನ ಮೊರೆಯ ಹೊಕ್ಕರೇಕೆ ? ಕುರುಡ ಕುಂಟ ಹಲ್ಲುಮುರುಕ ಗುರುತಲ್ಪಕನ ಬಲವ ಕೇಳಲಾಗದು. ಶುಭದಿನ ಶುಭಲಗ್ನ ಶುಭವೇಳೆ ಶುಭಮುಹೂರ್ತ ವ್ಯತಿಪಾತ ದಗ್ಧವಾರವೆಂದು ಸಂಕಲ್ಪಿಸಿ ಬೊಗಳುವರ ಮಾತ ಕೇಳಲಾಗದು. ಗುರುವಿನಾಜ್ಞೆಯ ಮೀರಿ, ಸತ್ತರೆ ಹೊಲೆ, ಹಡೆದರೆ ಹೊಲೆ, ಮುಟ್ಟಾದರೆ ಹೊಲೆ ಎಂದು ಸಂಕಲ್ಪಿಸಿಕೊಂಬುವಿರಿ. ನಿಮ್ಮ ಮನೆ ಹೊಲೆಯಾದರೆ ನಿಮ್ಮ ಗುರುಕೊಟ್ಟ ಲಿಂಗವೇನಾಯಿತು ? ವಿಭೂತಿ ಏನಾಯಿತು ? ರುದ್ರಾಕ್ಷಿ ಏನಾಯಿತು ? ಮಂತ್ರವೇನಾಯಿತು ? ಪಾದೋದಕ ಪ್ರಸಾದವೇನಾಯಿತು ? ನಿಮ್ಮ ಶಿವಾಚಾರವೇನಾಯಿತು ? ನೀವೇನಾದಿರಿ ಹೇಳಿರಣ್ಣಾ ? ಅರಿಯದಿದ್ದರೆ ಕೇಳಿರಣ್ಣಾ. ನಿಮ್ಮ ಲಿಂಗ ಪೀತಲಿಂಗ; ನೀವು ಭೂತಪ್ರಾಣಿಗಳು. ನಿಮ್ಮ ಮನೆಯೊಳಗಾದ ಪದಾರ್ಥವೆಲ್ಲ ಹೆಂಡಕಂಡ ಅಶುದ್ಧ ಕಿಲ್ಬಿಷವೆನಿಸಿತ್ತು. ಇದ ಕಂಡು ನಾಚದೆ, ಮತ್ತೆ ಮತ್ತೆ ಶುಭಲಗ್ನವ ಕೇಳಿ, ಮದುವೆಯಾದ ಅನಂತ ಜನರ ಹೆಂಡಿರು ಮುಂಡೆಯರಾಗಿ ಹೋದ ದೃಷ್ಟವ ಕಂಡು ಪಂಚಾಂಗವ ಕೇಳಿದವರಿಗೆ ನಾಯಿ ಮಲವ ಹಂದಿ ಕಿತ್ತುಕೊಂಡು ತಿಂದಂತಾಯಿತ್ತು ಕಾಣಾ ನಿಸ್ಸಂಗ ನಿರಾಳ ನಿಜಲಿಂಗಪ್ರಭುವೆ.
--------------
ನಿರಾಲಂಬ ಪ್ರಭುದೇವ
ಮಿಂದು ದೇವರ ಪೂಜಿಸಿಹೆನೆಂಬ ಸಂದೇಹಿ ಮಾನವಾ ನೀ ಕೇಳಾ, ಮೀಯದೆ ಮೀನು ? ಮೀಯದೆ ಮೊಸಳೆ ? ತಾ ಮಿಂದು, ತನ್ನ ಮೀಯದನ್ನಕ್ಕರ ಈ ಬೆಡಗಿನ ಮಾತ ಮೆಚ್ಚುವನೆ ನಮ್ಮ ಗುಹೇಶ್ವರ ?
--------------
ಅಲ್ಲಮಪ್ರಭುದೇವರು
`ಶಂಕರ ಶಂಕರ' ಎಂದು ಸಹಜವರಿಯದೆ ನುಡಿವ ಶ್ವಾನನ ಮಾತ ಕೇಳಲಾಗದು, ಶಂಕರವಾವುದೆಂದರಿಯರಾಗಿ. ಲಿಂಗ ಶಂಕರವೊ ? ಜಂಗಮ ಶಂಕರವೊ ? ಪ್ರಸಾದ ಶಂಕರವೊ ? ತ್ರಿವಿಧದಲ್ಲಿ ಹೊರಗಿಲ್ಲ. ಆವ ಶಂಕರದಲ್ಲಿ ಆವುದು ಚೇಗೆ ? ಬಲ್ಲಡೆ ಹೇಳಿರಿ. ಬರುಮಾತಿನ ಬಳಕೆಯ ಬಳಸಿ ಹಿರಿಯರಾದೆವೆಂಬ ಮೂಕೊರೆಯರನೇನೆಂಬೆ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಶಿವತಂತ್ರದಿಂದ ಸುಖದುಃಖಗಳು ಬರುತಿಹವೆಂದರಿಯದೆ ನರಗುರಿಗಳಿಗೆ, ರೋಗ ದಾರಿದ್ರ್ಯ ಅಪಜಯಂಗಳು ಬರುತ್ತಿರಲು ವಿಪ್ರಗೆ ಕೈಮುಗಿದು ಕಾಣಿಕೆಯನಿಕ್ಕಿ ತನ್ನ ಹೆಸರ ಹೇಳಿ ಸೂರ್ಯಬಲ ಚಂದ್ರಬಲ ಬೃಹಸ್ಪತಿಬಲ ನವಗ್ರಹಬಲವ ಕೇಳುವವರಿಗೆ ಎಲ್ಲಿಯದೋ ಶಿವಭಕ್ತಿ ? ಸೂರ್ಯನು ಜ್ಞಾನವುಳ್ಳ್ಳವನಾದಡೆ ಗೌತಮಮುನೀಶ್ವರನ ಹೆಂಡತಿ ಅಹಲ್ಯಾದೇವಿಗೆ ಮೋಹಿಸಿ ಮುನಿಯ ಶಾಪದಿಂದ ಕುಷ್ಟದೊಳಗಿಹನೆ ? ಳ ಅಲ್ಲದೆ ದಕ್ಷನ ಯಾಗದಲ್ಲಿ ಹಲ್ಲ ಹೋಗಲಾಡಿಸಿಕೊಂಬನೆ ? ಚಂದ್ರನು ಜ್ಞಾನವುಳ್ಳವನಾದಡೆ ಗುರುವಿನ ಹೆಂಡತಿಗೆ ಅಳುಪಿ ಕೊಂಡೊಯ್ದು ಜಾತಜ್ವರದಲ್ಲಿ ಅಳಲುತಿಹನೆ ? ಬೃಹಸ್ಪತಿ ಜ್ಞಾನವುಳ್ಳವನಾದಡೆ ಸಕಲ ಜ್ಯೋತಿಷ್ಯಗಳ ನೋಡಿ ವಿವಾಹವಾದ ಹೆಂಡತಿ ರೋಹಿಣೀದೇವಿಯ ಚಂದ್ರನೆತ್ತಿಕೊಂಡು ಹೋಹಾಗ ಸುಮ್ಮನಿದ್ದುದು ಏನು ಜ್ಞಾನ ? ಶನಿ ಜ್ಞಾನವಳ್ಳವನಾದಡೆ ಕುಂಟನಾಗಿ ಸಂಕೋಲೆ ಬೀಳ್ವನೆ ? ಅದು ಕಾರಣ_ ತಮಗೆ ಮುಂಬಹ ಸುಖದುಃಖಂಗಳನರಿಯದವರು ಮತ್ತೊಬ್ಬರ ಸುಖದುಃಖಂಗಳ ಮೊದಲೆ ಅರಿಯರು. ಬೃಹಸ್ಪತಿಯ ಮತದಿಂದೆ ದಕ್ಷ, ಯಾಗವನಿಕ್ಕೆ ಕುರಿದಲೆಯಾಯಿತ್ತು. ಬೃಹಸ್ಪತಿಯ ಮತದಿಂದೆ ದ್ವಾರಾವತ ನೀರಲ್ಲಿ ನೆರೆದು ಕೃಷ್ಣನ ಹದಿನಾರುಸಾವಿರ ಸ್ತ್ರೀಯರ ಹೊಲೆಬೇಡರು ಸೆರೆಯನೊಯ್ದರು, ಶ್ರೀರಾಮನ ಹೆಂಡತಿ ಸೀತಾಂಗನೆ ಸೆರೆಯಾದಳು. ಇಂತೀ ತಮತಮಗೆ ಮುಂದೆ ಬಹ ಅಪಜಯಂಗಳನರಿಯದ ಕಾರಣ, ಆ ಬೃಹಸ್ಪತಿ ಜ್ಞಾನಿಯ ಮತದಿಂದೆ, ಅಭಾಷ ಜೋಯಿಸರ ಮಾತ ಕೇಳಿ ಹುಣ್ಣಿಮೆ ಅಮವಾಸೆಯಲ್ಲಿ ಉಪವಾಸವಿದ್ದು, ಗ್ರಹಬಲವುಳ್ಳ ಶುಭಮುಹೂರ್ತದಲ್ಲಿ, ಅರಳಿಯ ಮರಕ್ಕೆ ನೀರ ಹೊಯ್ದು ನೂಲ ಸುತ್ತಿ ವಿಪ್ರಜೋಯಿಸರ್ಗೆ ಹೊನ್ನು ಹಣವ ಕೊಟ್ಟಡೆ, ಹೋದೀತೆಂಬ ಅನಾಚಾರಿಯ ಮಾತ ಕೇಳಲಾಗದು. `ವಸಿಷ್ಠೇನ ಕೃತೇ ಲಗ್ನೇ ವನೇ ರಾಮೇಣ ವಾಸಿತೇ ಕರ್ಮಮೂಲೇ ಪ್ರಧಾನೇ ತು ಕಿಂ ಕರೋತಿ ಶುಭಗ್ರಹಃ ' ಇಂತೆಂದುದಾಗಿ ಬಹ ಕಂಟಕವ ಹೊನ್ನು ಹೆಣ್ಣು ಶುಭ ಲಗ್ನದಿಂದೆ ಪರಿಹರಿಸೇನೆಂದಡೆ ಹೋಗಲರಿಯದು. ಹಸಿವಿಲ್ಲದ ಮದ್ದು ಕೊಟ್ಟೇನು, ಅಶನವ ನೀಡೆಂಬಂತೆ, ಖೇಚರದ ಮದ್ದು ಕೊಟ್ಟೇನು ತೊರೆಯ ದಾಂಟಿಸೆಂಬಂತೆ, ಕುರುಡನ ಕೈಯ ಕುರುಡ ಹಿಡಿದು ಹಾದಿಯ ತೋರುವಂತೆ, ಲಜ್ಜೆ ನಾಚಿಕೆ ಇಲ್ಲದೆ ವಿಪ್ರರ ಕೈಯೆ ಲಗ್ನವ ಕೇಳಲಾಗದು. ಸದ್ಭಕ್ತರಾದವರಿಗೆ ನಿಮ್ಮ ಬಲವೇ ಬಲವಯ್ಯಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಆದಿ ಅನಾದಿ ಎಂದು ಗಾದೆಯ ಮಾತು ನುಡಿದಾಡುವರೆಲ್ಲ ಇವೆರಡರ ಮಧ್ಯದಲ್ಲಿಪ್ಪ ಮಾಯಾಪ್ರಪಂಚನೆ ಅಳೆವುತ್ತ ಸುರಿವುತಿಪ್ಪರಲ್ಲದೆ, ಆದಿಯಿಂದಲತ್ತತ್ತಲಾರು ಬಲ್ಲರು? ಅನಾದಿಯಿಂದತ್ತತ್ತಲಾರು ಬಲ್ಲರು? ಇದರ ಭೇದಾದಿ ಭೇದವ ಮುನ್ನಿನ ಆದ್ಯರು ಬಲ್ಲರಲ್ಲದೆ, ಸಾಧಕರಿಗಳವಲ್ಲ. ವೇದಶಾಸ್ತ್ರಾಗಮ ಪುರಾತರ ವಚನ ಬಹುಶ್ರುತಿ ಇದಿರಿಟ್ಟುಕೊಂಡು, ಕೂಗಿಯಾಡಿ, ಗೋಡೆ ಹಾಯಿಸುವ ಜಡವಾದಿಗಳ ಮಾತ ಮೆಚ್ಚರು ನಮ್ಮ ಶರಣರು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಗುರುಕರಜಾತರೆಂದು ಬರಿಯ ಬೊಮ್ಮದ ಮಾತ ನುಡಿದು ಮನಬಲ್ಲಂತೆ ಹರಿದಾಡಿ, ಹಿರಿಯರನರಿಯದೆ ಹಳಿದು ಮರೆಯಿಂದೆ ದುರ್ಬುದ್ಧಿಯ ಮಡುಗಿ ಹೆಮ್ಮೆ ಮುಮ್ಮೊಗನಾಗಿ ಮೆರೆದು ಹೋಗುವ ಬರಿವೇಷಭಾರಕರಿಗೆ ಪರಮಕ್ರಿಯಾ ನಿಜಜ್ಞಾನದ ನಿಲುವೆಂತು ಸಾಧ್ಯವಪ್ಪುದಯ್ಯಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಭಕ್ತರೆಲ್ಲರೂ ಕೂಡಿ ಗುರೂಪದೇಶ ಸಹಿತವಾಗಿ ಕೊಟ್ಟ ಇಷ್ಟಲಿಂಗವ ಪ್ರಾಣಲಿಂಗವೆಂದು ಅಪ್ಪವಿಸಿದ ಮಾತ ಮರೆವರಲ್ಲಾ. ಸ್ಥಾವರಕ್ಕೆ ಹೋಗಿ ದಂಡಪ್ರಣಾಮವ ಮಾಡುವರು, ಆವುದಾಚಾರವಯ್ಯಾ ? ತನ್ನ ಲಿಂಗವಿದ್ದಂತೆ ಅನ್ಯಲಿಂಗವ ಮುಟ್ಟಿ ದರುಶನ ಮಾಡುವ ಪಾತಕರನಚ್ಚಶರಣರೆಂತೆಂಬೆನಯ್ಯಾ, ಕೂಡಲಚೆನ್ನಸಂಗಮದೇವಾ?
--------------
ಚನ್ನಬಸವಣ್ಣ
ಮಾತ ಹೇಳುವ ಹಿರಿಯರೆಲ್ಲರೂ ನೀತಿಗೊಡಲಾದರು. ನಿರ್ಜಾತನ ಮರೆದು, ಭ್ರಾಂತಿಗೆ ಸಿಕ್ಕಿದ ಮತ್ತೆ ಇನ್ನೇತರ ಮಾತು ? ಸೂತ್ರದ ಬೊಂಬೆಯ ನೂಕುವ ಪಾಶದಂತೆ, ಇವರೇತರ ಹಿರಿಯರು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ತನುವರ್ಪಿತವೆಂದಡೆ ಗುರುದ್ರೋಹ. ಮನವರ್ಪಿತವೆಂದಡೆ ಲಿಂಗದ್ರೋಹ. ಧನವರ್ಪಿತವೆಂದಡೆ ಜಂಗಮದ್ರೋಹ_ ಇಂತೀ ತನುಮನಧನಗಳೆಂಬ ಅನಿತ್ಯವನು ನಿತ್ಯಕ್ಕರ್ಪಿಸಿ ಭಕ್ತನಾದೆನೆಂದಡೆ, ಅದು ಅಜ್ಞಾನ ನೋಡಾ. ಒಡೆಯರಿಗೆ ಉಂಡೆಯ ಮುರಿದಿಕ್ಕಿ ನಾ ಭಕ್ತನೆಂಬ ಮಾತ ಸಮ್ಯಕ್ ಶರಣರು ಮೆಚ್ಚುವರೆ ? ನಮ್ಮ ಗುಹೇಶ್ವರಲಿಂಗಕ್ಕೆ, ನೀನು ಆವುದರಲ್ಲಿ ಏನನರ್ಪಿಸಿ ಭಕ್ತನಾದೆ ಹೇಳಾ ಸಂಗನಬಸವಣ್ಣಾ ?
--------------
ಅಲ್ಲಮಪ್ರಭುದೇವರು
ಭವಿಯ ತಂದು ಪೂವಾಶ್ರಯವ ಕಳೆದು ಭಕ್ತನ ಮಾಡಿದ ಬಳಿಕ, ಪೂರ್ವವನ್ನೆತ್ತಿ ನುಡಿವ ಶಿವದ್ರೋಹಿಯ ಮಾತ ಕೇಳಲಾಗದು. ಲಿಂಗವೆ ಗುರು, ಗುರುವೇ ಲಿಂಗವೆಂದು, ಹೆಸರಿಟ್ಟು ಕರೆವ ಗುರುದ್ರೋಹಿಯ ಮಾತ ಕೇಳಲಾಗದು. ಹೆಸರಿಲ್ಲದ ಅಪ್ರಮಾಣ ಮಹಿಮನನು ಹೆಸರಿಟ್ಟು ಕರೆವ ಲಿಂಗದ್ರೋಹಿಯ ಮಾತ ಕೇಳಲಾಗದು. ಪೂರ್ವವಿಲ್ಲದ ಶಿಷ್ಯ, ನೇಮವಿಲ್ಲದ ಗುರು, ಹೆಸರಿಲ್ಲದ ಲಿಂಗ ಈ ತ್ರಿವಿಧವನರಿಯದೆ ಕೆಟ್ಟು ಹೋದರು, ಕೂಡಲಚೆನ್ನಸಂಗಯ್ಯಾ.
--------------
ಚನ್ನಬಸವಣ್ಣ
ಸತ್ವಕ್ಕೆ ತಕ್ಕ ಹೊರೆಯಲ್ಲದೆ, ಮತ್ತುಳಿದ ಮಾತಂಗವ ಹೊರಬಹುದೆ ? ಸತ್ವಕ್ಕೆ ತಕ್ಕ ನುಡಿಯಲ್ಲದಿರ್ದಡೆ, ಆತನ ಒಚ್ಚತಗೊಂಬರೆ ಹರಶರಣರು? ನಡೆ ನುಡಿ ಸಿದ್ಧಾಂತವಲ್ಲದೆ, ಹುಡಿಗರ ಮಾತ ಸುಡು. ಎನ್ನೊಡೆಯ ಕರೆಯಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಬೋಧೆನೆಯ ಬೋದ್ಥಿಸಿ ಉಂಬವರೆಲ್ಲರೂ ಸಾಧಾರಣಕ್ಕೆ ಈಡಾದರು. ನಿರ್ಬೋಧೆಯ ಹೇಳುವ ಹಿರಿಯಲ್ಲರೂ ಬಾಗಿಲ ಕಾಯ್ವುದಕ್ಕೊಳಗಾದರು. ಈಜಲರಿಯದವನೊಂದಾಗಿ ಹೊಳೆಯ ಹಾಯ್ದು, ಪ್ರಾಣಕ್ಕೆ ಆಸೆ ಮಾಡುವನಂತೆ, ಇಷ್ಟವನರಿಯದವರ ಮಾತ ಕೇಳಿ, ತಾ ಮುಕ್ತನಾದೆಹೆನೆಂಬ ಧೂರ್ತರ ನೋಡಾ, ನಿಃಕಳಂಕ ಮಲ್ಲಿಕಾರ್ಜುನಾ. || 549 ||
--------------
ಮೋಳಿಗೆ ಮಾರಯ್ಯ
ಇನ್ನಷ್ಟು ... -->