ಅಥವಾ

ಒಟ್ಟು 160 ಕಡೆಗಳಲ್ಲಿ , 45 ವಚನಕಾರರು , 136 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮುತ್ತೈದೆ ಸತ್ಯಕ್ಕಗಳಿರಾ ! ನಿತ್ಯರೆನ್ನ ಮನೆಗೆ ಕರ್ತುವಾಗಿ ಬಂದರೆ ಅರ್ಥವನೀವೆ. ಅವರಿರತಕ್ಕ ಇಚ್ಫೆ ಬಾರದಮುನ್ನ ಎಚ್ಚರವನೀವುತ ಬನ್ನಿರೆ. ಪಂಚವರ್ಣದಾಭರಣವ ನಿಮ್ಮ ಕೈಯಿಂದೆ ಕೊಡಿಸುವೆ, ನಾನಚ್ಚತಗೊಂಬೆ ಎನ್ನ ಬಯಕೆಯನೊಯ್ದೊಪ್ಪಿಸಿ ಅವರ ಸಮರಸಾನಂದವೆನಗಿತ್ತಡೆ ನಿಮ್ಮ ಕೈಯಲ್ಲಿ ನಿರಂತರ ಗುರುನಿರಂಜನ ಚನ್ನಬಸವಲಿಂಗ.
--------------
ದೇಶಿಕೇಂದ್ರ ಸಂಗನಬಸವಯ್ಯ
ಧರೆಯಗಲದ ಹುಲ್ಲೆ ಹರಿದು ಮೇಯಿತ್ತ ಕಂಡೆ. ಬಲೆಯ ಬೀಸುವ ಗಂಡರಾರೂ ಇಲ್ಲ, ಹರಿದು ಹಿಡಿದಹೆನೆಂದಡೆ ತಲೆ ಕಾಣಬರುತ್ತಲಿದೆ. ಶಿರವ ಹಿಡಿದೆಹೆನೆಂಬವರಿನ್ನಾರೂ ಇಲ್ಲ. ಹರಿದಾಡುವ ಹುಲ್ಲೆಯ ಕಂಡು ಹಲವು ಬೇಳಾರ (ಬೆಳ್ಳಾರ?)ವ ಬಿಟ್ಟು, ಬೇಟೆಕಾರ ಬಲೆಯ ಬೀಸಿದಡೆ ಹುಲ್ಲೆಯಂಜಿ ಹೋಯಿತ್ತು. ಮರುಳುದಲೆಯಲ್ಲಿ ಹುಲ್ಲೆಯನೆಸೆದಯಬೇಕೆಂದು ಸರಳ ಬಿಟ್ಟು ಬಾಣವನೊಂದು ಕೈಯಲ್ಲಿ ಹಿಡಿದು (ಹಿಡಿವಡೆ?) ಹಳ್ಳಕೊಳ್ಳವ ದಾಂಟಿ ಗಟ್ಟಬೆಟ್ಟವ ಕಳೆದು ಅತ್ತ ಬಯಲ ಮರನ ತಾ ಮೊರೆಗೊಂಡಿತ್ತು. ಹತ್ತೆ ಸಾರಿದ ಮೃಗವ ತಾನೆಚ್ಚಡೆ ನಾರಿ ಹರಿದು ಬಿಲ್ಲು ಮುರಿದು ಹುಲ್ಲೆ ಸತ್ತಿತ್ತು. ಅದ ಕಿಚ್ಚಿಲ್ಲದ ನಾಡಿಗೊಯ್ದು ಸುಟ್ಟು ಬಾಣಸವ ಮಾಡಲು ಸತ್ತ ಹುಲ್ಲೆ ಕರಗಿ ಶಬ (ಸಬ?) ಉಳಿಯಿತ್ತು. ಗುಹೇಶ್ವರಾ ನಿಮ್ಮ ಶರಣ ಕಟ್ಟಿದಿರ ಬಾಣಸದ ಮನೆಗೆ ಬಂದನು.
--------------
ಅಲ್ಲಮಪ್ರಭುದೇವರು
ಇಂದೆನ್ನ ಮನೆಗೆ ಒಡೆಯರು ಬಂದಡೆ ತನುವೆಂಬ ಕಳಶದಲುದಕವ ತುಂಬಿ, ಕಂಗಳ ಸೋನೆಯೊಡನೆ ಪಾದಾರ್ಚನೆಯ ಮಾಡುವೆ. ನಿತ್ಯ ಶಾಂತಿಯೆಂಬ ಶೈತ್ಯದೊಡನೆ ಸುಗಂಧವ ಪೂಸುವೆ. ಅಕ್ಷಯ ಸಂಪದವೆಂದರಿದು ಅಕ್ಷತೆಯನೇರಿಸುವೆ. ಹೃದಯಕಮಲ ಪುಷ್ಪದೊಡನೆ ಪೂಜೆಯ ಮಾಡುವೆ. ಸದ್ಭಾವನೆಯೊಡನೆ ಧೂಪವ ಬೀಸುವೆ. ಶಿವಜ್ಞಾನ ಪ್ರಕಾಶದೊಡನೆ ಮಂಗಳಾರತಿಯನೆತ್ತುವೆ. ನಿತ್ಯತೃಪ್ತಿಯೊಡನೆ ನೈವೇದ್ಯವ ಕೈಕೊಳಿಸುವೆ. ಪರಿಣಾಮದೊಡನೆ ಕರ್ಪೂರ ವೀಳೆಯವ ಕೊಡುವೆ. ಪಂಚಬ್ರಹ್ಮದೊಡನೆ ಪಂಚಮಹಾವಾದ್ಯವ ಕೇಳಿಸುವೆ. ಹರುಷದೊಡನೆ ನೋಡುವೆ, ಆನಂದದೊಡನೆ ಕುಣಿಕುಣಿದಾಡುವೆ, ಪರವಶದೊಡನೆ ಹಾಡುವೆ, ಭಕ್ತಿಯೊಡನೆ ಎರಗುವೆ, ನಿತ್ಯದೊಡನೆ ಕೂಡಿ ಆಡುವೆ. ಚೆನ್ನಮಲ್ಲಿಕಾರ್ಜುನಾ, ನಿಮ್ಮ ನಿಲವ ತೋರಿದ ಗುರುವಿನಡಿಯಲ್ಲಿ ಅರನಾಗಿ ಕರಗುವೆ.
--------------
ಅಕ್ಕಮಹಾದೇವಿ
ಶ್ರೀಗುರುವಾದಾತನು ಸಕಲಾಗಮಂಗಳ ಹೃದಯವನರಿತು ತನ್ನ ತಾನರಿದು ಸರ್ವಾಚಾರ ತನ್ನಲ್ಲಿ ನೆಲೆಗೊಂಡು ಉಪದೇಶವ ಮಾಡುವ ಕ್ರಮವೆಂತೆಂದಡೆ: ಬ್ರಾಹ್ಮಣನ ಮೂರು ವರುಷ ನೋಡಬೇಕು, ಕ್ಷತ್ರಿಯನ ಆರು ವರುಷ ನೋಡಬೇಕು, ವೈಶ್ಯನ ಒಂಬತ್ತು ವರುಷ ನೋಡಬೇಕು, ಶೂದ್ರನ ಹನ್ನೆರಡು ವರುಷ ನೋಡಬೇಕು, ನೋಡಿದಲ್ಲದೆ ದೀಕ್ಷೆ ಕೊಡಬಾರದು _ ವೀರಾಗಮೇ. ``ಬ್ರಾಹ್ಮಣಂ ತ್ರೀಣಿ ವರ್ಷಾಣಿ ಷಡಬ್ದಂ ಕ್ಷತ್ರಿಯಂ ತಥಾ ವೈಶ್ಯಂ ನವಾಬ್ದಮಾಖ್ಯಾತಂ ಶೂದ್ರಂ ದ್ವಾದಶವರ್ಷಕಂ ಈ ಕ್ರಮವನರಿಯದೆ, ಉಪಾಧಿವಿಡಿದು ಉಪದೇಶವ ಮಾಡುವಾತ ಗುರುವಲ್ಲ, ಉಪಾಧಿವಿಡಿದು ಉಪದೇಶವ ಮಾಡಿಸಿಕೊಂಬಾತ ಶಿಷ್ಯನಲ್ಲ. ಇವರಿಬ್ಬರ ನಿಲವು ಒಂದೆ ಠಕ್ಕನ ಮನೆಗೆ ಠಕ್ಕ ಬಿದ್ದಿನ ಬಂದಂತೆ ಈ ಗುರುಶಿಷ್ಯರಿಬ್ಬರನು ರೌರವನರಕದಲ್ಲಿಕ್ಕುವ ಕೂಡಲಚೆನ್ನಸಂಗಯ್ಯ.
--------------
ಚನ್ನಬಸವಣ್ಣ
ದೇವಸಹಿತ ಭಕ್ತ ಮನೆಗೆ ಬಂದಡೆ ಕಾಯಕವಾವುದೆಂದು ಬೆಸಗೊಂಡೆನಾದಡೆ ನಿಮ್ಮಾಣೆ ! ನಿಮ್ಮ ಪುರಾತರಾಣೆ ! ತಲೆದಂಡ ! ತಲೆದಂಡ ! ಕೂಡಲಸಂಗಮದೇವಾ, ಭಕ್ತರಲ್ಲಿ ಕುಲವನರಸಿದಡೆ ನಿಮ್ಮ ರಾಣಿವಾಸದಾಣೆ. 453
--------------
ಬಸವಣ್ಣ
ಹರಗುರುವಾಕ್ಯ ಪ್ರಮಾಣವರಿಯದೆ ಅಜ್ಞಾನವಾವರಿಸಿ ವಾರ ತಿಥಿಯೆಂದು, ಸಂಕ್ರಾಂತಿ ಅಮವಾಸ್ಯೆಯೆಂದು ನೇಮಿಸಿ, ಮಾಡಿ ನೀಡಿ ಕರ್ಮ ಕಳೆದೆನೆಂಬ ವರ್ಮಗೇಡಿಗಳ ನೋಡಾ! ಮತ್ತೊಂದು ವೇಳೆ ಜಂಗಮ ಮನೆಗೆ ಬಂದರೆ ಅಡ್ಡಮೋರೆಯಿಕ್ಕುವ ಗೊಡ್ಡು ಮಾದಿಗರ ಶಿವಭಕ್ತರೆಂದರೆ ಅಘೋರ ನರಕವೈ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ದೊಡ್ಡವೆರಡು ಕಂಬದ ಮಧ್ಯದಲ್ಲಿ ಚಿಕ್ಕವೆರಡು ಕಂಬ. ಇಂತೀ ನಾಲ್ಕರ ಮಧ್ಯದ ಮನೆಗೆ ಅಸ್ಥಿಯ ಗಳು, ನರದ ಕಟ್ಟು, ಮಜ್ಜೆಯ ಸಾರ, ಮಾಂಸದ ಗೋಡೆ, ಚರ್ಮದ ಹೊದಿಕೆ, ಶ್ರೋಣಿತದ ಸಾರದ, ಕುಂಭದಿಂದಿಪ್ಪುದೊಂದು ಚಿತ್ರದ ಮನೆ ನೋಡಯ್ಯಾ. ಆ ಮನೆಗೊಂಬತ್ತು ಬಾಗಿಲು, ಇಡಾ ಪಿಂಗಳವೆಂಬ ಗಾಳಿಯ ಬಾದಳ, ಮೃದು ಕಠಿಣವೆಂಬವೆರಡು ಅಗುಳಿಯ ಭೇದ ನೋಡಾ, ಇತ್ತಲೆಯ ಮೇಲಿಪ್ಪ ಸುಷುಮ್ನಾನಾಳವ ಮುಚ್ಚಿ, ದಿವಾರಾತ್ರಿಯೆಂಬ ಅರುಹು ಮರಹಿನ ಉಭಯವ ಕದಕಿತ್ತು ನೋಡಯ್ಯಾ. ಮನೆ ನಷ್ಟವಾಗಿ ಹೋದಡೆಯೂ ಮನೆಯೊಡೆಯ ಮರಳಿ ಮತ್ತೊಂದು ಮನೆಗೆ ಒಪ್ಪುದು ತಪ್ಪದು ನೋಡಯ್ಯಾ ಇಂತಪ್ಪ ಮನೆಗೆನ್ನ ಮರಳಿ ಬಾರದಂತೆ ಮಾಡಯ್ಯಾ, ಕಾಮಬ್ಥೀಮ ಜೀವಧನದೊಡೆಯ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಒಕ್ಕಲಿಗ ಮುದ್ದಣ್ಣ
ಅಂತರಂಗದ ಅಷ್ಟಮದ ಅವಾವೆಂದರೆ ಹೇಳುವೆ ಕೇಳಿರಣ್ಣಾ : ಪೃಥ್ವಿಮದ ಸಲಿಲಮದ ಪಾವಕಮದ ಪವನಮದ ಅಂಬರಮದ ರವಿಮದ ಶಶಿಮದ ಆತ್ಮಮದವೆಂಬ ಅಷ್ಟಮೂರ್ತಿಯ ಮದಂಗಳು. ಇವರ ಗುಣಧರ್ಮಕರ್ಮವೆಂತೆಂದಡೆ, ಅದಕ್ಕೆ ವಿವರ ; ಪೃಥ್ವಿಮದವೆತ್ತಿದಲ್ಲಿ ತನುಗುಣಭರಿತನಾಗಿ, ಆಭರಣ ಅನುಲೇಪನ ತಾಂಬೂಲವಂ ಬಯಸುತ್ತಿಹನು. ಸಲಿಲಮದವೆತ್ತಿದಲ್ಲಿ ಸಂಸಾರಭರಿತನಾಗಿ, ಎನಗೆ ಬೇಕು, ಮನೆಗೆ ಬೇಕು, ಮಕ್ಕಳಿಗೆ ಬೇಕು ಎನುತಿಹನು. ಪಾವಕಮದವೆತ್ತಿದಲ್ಲಿ ಕಾಮರಸಭರಿತನಾಗಿ, ಕರಸಬೇಕು ನುಡಿಸಬೇಕು ಆಲಿಂಗಿಸಬೇಕು ಎನುತಿಹನು. ಪವನಮದವೆತ್ತಿದಲ್ಲಿ ಕೋಪಾಗ್ನಿಭರಿತನಾಗಿ, ಕೊಂದೇನು ತಿಂದೇನು ಸಾದ್ಥಿಸೇನು ಭೇದಿಸೇನು [ಎನುತಿಹನು]. ಶಶಿಮದವೆತ್ತಿದಲ್ಲಿ ಚಿಂತಾಭರಿತನಾಗಿ, ಆದೀತೊ ಆಗದೊ, ಇದ್ದೀತೊ ಇಲ್ಲವೊ ಎನುತಿಹನು. ಆತ್ಮಮದವೆತ್ತಿದಲ್ಲಿ ಅಹಂಕಾರಭರಿತನಾಗಿ, ಎನಗಿಂದು ಅದ್ಥಿಕರಿಲ್ಲ, ಎನಗಿಂದು ಇದಿರಿಲ್ಲವೆಂದು ಅಹಂಭಾವದಿಂದ ಅಹಂಕರಿಸುತ್ತಿಹನು. ಇಂತೀ ಅಷ್ಟಮೂರ್ತಿಮದಂಗಳ ಭ್ರಾಂತಿನ ಬಲೆಯೊಳಿಟ್ಟೆನ್ನನಗಲದಿರು ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಸಮಚಿತ್ತವೆಂಬ ನೇಮದ ಹಲಗೆಯ ಹಿಡಿದು, ಶಿವಚಿತ್ತವೆಂಬ ಕೂರಲಗ ಕೊಂಡು, ಶರಣಾರ್ಥಿಯೆಂಬ ಶ್ರವಗಲಿತಡೆ, ಆಳುತನಕ್ಕೆ ದೆಸೆಯಪ್ಪೆ ನೋಡಾ. ಮಾರಂಕ ಜಂಗಮ ಮನೆಗೆ ಬಂದಲ್ಲಿ ಇದಿರೆತ್ತಿ ನಡೆವುದು, ಕೂಡಲಸಂಗಮದೇವನನೊಲಿಸುವಡಿದು ಚಿಹ್ನ !
--------------
ಬಸವಣ್ಣ
ಉಪದೇಶವ ಮಾಡಿದ ಗುರುವೊಂದೆ ಲಿಂಗವೊಂದೆಯಲ್ಲದೆ, ಸತಿಗೊಂದು ಲಿಂಗ, ಸುತಗೊಂದು ಲಿಂಗ, ಸೋದರಗೊಂದು ಲಿಂಗ, ದಾಸಿಗೊಂದು ಲಿಂಗ, ಇಂತು ಒಂದು ಮನೆಗೆ ಗುರುಲಿಂಗವನೆರಡು ಮಾಡಿದರೆ ಮೆಚ್ಚರು, ನಮ್ಮ ಕೂಡಲಚೆನ್ನಸಂಗನ ಶರಣರು.
--------------
ಚನ್ನಬಸವಣ್ಣ
ಆ ಬೊಕ್ಕಸದ ಮನೆಯಿಪ್ಪ ಭೇದ : ಹೊರಗಣ ಹೊದಕೆ ನಾನಾ ಚಿತ್ರವಿಚಿತ್ರ. ಮಳೆಗೆ ನೆನವುದು, ಬೆಂಕಿಗೆ ಬೇವುದು, ಗಾಳಿಗೆ ಮುರಿಯುವುದು. ಆ ಮನೆಗೆ ವಿರೋಧವಾಹಲ್ಲಿ ಪಟ್ಟಿ ಕೆಡದು ದೇವಾಂಗ ಬೇಯದು, ರತ್ನ ಗಾಳಿಯ ತಪ್ಪಲಿಗೆ ಒಳಗಾಗದು. ಈ ಬೊಕ್ಕಸದ ಮನೆಯ ಹೊರಗಣ ಕೇಡು, ಒಳಗಣ ಲಾಭವ ನಿರೀಕ್ಷಿಸಿ ನೋಡಬೇಕು. ಬಸವಣ್ಣಪ್ರಿಯ ನಾಗರೇಶ್ವರಲಿಂಗವ ಕೇಳಬೇಕು.
--------------
ಆನಂದಯ್ಯ
ಮತಿಗೆಟ್ಟು ಧೃತಿಗುಂದಿ ಬೇಳಾದೆನಯ್ಯಾ, ಗತಿಗೆಟ್ಟು ವ್ರತಗೆಟ್ಟು ಧಾತುಗೆಟ್ಟ ಬಾಹಿರ ನಾನಯ್ಯಾ, ಕಹಿಸೋರೆ ಮುತ್ತಂತಾಯಿತ್ತೆನ್ನ ಭಕ್ತಿ. ನಡೆಲಿಂಗ ಜಂಗಮ ಮನೆಗೆ ಬರಲು ಇಂಬುಗೊಳಲರಿಯದೆ ಕೆಟ್ಟ ಕೇಡನೇನೆಂದುಪಮಿಸುವೆನಯ್ಯಾ, ನವರತ್ನವ ಕಿತ್ತು ಮಡುವಿನೊಳಗೆ ಹಾಯ್ಕಿದ ಕಪಿಯಂತಾಯಿತ್ತೆನ್ನ ಭಕ್ತಿ ಕೂಡಲಸಂಗಮದೇವರ ತಂದುಕೊಟ್ಟಡೆ ನಿಮ್ಮ ಚಮ್ಮಾವುಗೆಯ ಹೊತ್ತು ಕುಣಿದಾಡುವೆನು ಕಾಣಾ, ಚೆನ್ನಬಸವಣ್ಣಾ.
--------------
ಬಸವಣ್ಣ
ದೇವ ದೇವ ಮಹಾಪ್ರಸಾದ: ನಿಮ್ಮ ಶರಣರ ಮನೆಗೆ ಸಲುಗೆಯ ಬಂಟ ನಾನಲ್ಲಯ್ಯಾ. ತನುಮನಧನವ ಹಿಂದಿಕ್ಕಿಕೊಂಡಿಪ್ಪ ವಂಚಕ ನಾನಯ್ಯಾ. ನಿಮ್ಮ ಶರಣರು ಎನ್ನಿಚ್ಛೆಗೆ ಬಪ್ಪರೆ ? `ಚಕಿತಮಬ್ಥಿದತ್ತೇ ಶ್ರುತಿರಪಿ' ಎನಲು, ಎನ್ನ ನುಡಿ ನಿಮ್ಮ ಶರಣರ ತಾಗಬಲ್ಲುದೆ ? ಹಣೆಯ ಹೊಣೆಯ ತೋರಿ ಉದರವ ಹೊರೆವಂತೆ, ನಿಮ್ಮ ಮರೆಯಲಡಗಿರ್ಪ ಹಡಪಿಗ ನಾನಯ್ಯಾ. ಬಸವಪ್ರಿಯ ಕೂಡಲಚೆನ್ನಸಂಗನ ಶರಣರು ಎನ್ನ ಮಾತಿಗೆ ಬಾರರು, ನೀವೆ ಹೋಗಿ ಬಿಜಯಂಗೈಸಿಕೊಂಡು ಬಾರಾ, ಸಂಗನಬಸವಣ್ಣಾ .
--------------
ಸಂಗಮೇಶ್ವರದ ಅಪ್ಪಣ್ಣ
ತನಗೆ ಉಂಟಾಗಿ ಶಿಷ್ಯನ ಮನೆಗೆ ಹೋಗಿ ಕಟ್ಟಳೆಯ ವರುಷಕ್ಕೆ ತಪ್ಪದೆ ಅಂಗವಸ್ತ್ರವೆಂದು ಲಿಂಗವಸ್ತ್ರವೆಂದು ಕನಕ ಪರಿಮಳವೆಂದು ಅಂದಣ ಛತ್ರ ಚಾಮರ ಕರಿ ತುರಗಂಗಳೆಂದು ಇವು ಬಂದುದಿಲ್ಲ ಎಂದು ಸಂದಣಿ ಲಂದಣಗಾರರ ಕೈಯಲ್ಲಿಹೇಳಿಸಿ ಅವು ಬಾರದಿರೆ ತಾ ಸಂದ್ಥಿಸಿ ಸೂಚಿಸುವ ಲಿಂಗ ಲಿಂಗಮಾರಿಗೆ ಗುರುಸ್ಥಲ ಎಂದಿಗೂ ಇಲ್ಲ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 39 ||
--------------
ದಾಸೋಹದ ಸಂಗಣ್ಣ
ನೆನಹಿನ ನಲ್ಲನು ಮನೆಗೆ ಬಂದಡೆ ನೆನೆವುದಿನ್ನಾರನವ್ವಾ ? ನೆರೆವ ಕ್ರೀಯಲ್ಲಿ ನೆರೆದು, ಸುಖಿಸುವುದಲ್ಲದೆ ನೆನೆವುದಿನ್ನಾರನವ್ವಾ ? ನೆನಹಿನ ನಲ್ಲ ಉರಿಲಿಂಗದೇವನ ಕಂಡ ಬಳಿಕ ನೆನವುದಿನ್ನಾರ ಹೇಳವ್ವಾ ?
--------------
ಉರಿಲಿಂಗದೇವ
ಇನ್ನಷ್ಟು ... -->