ಅಥವಾ

ಒಟ್ಟು 225 ಕಡೆಗಳಲ್ಲಿ , 36 ವಚನಕಾರರು , 135 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪರಿಯಾಣವೆ ಭಾಜನವೆಂಬರು; ಪರಿಯಾಣ ಭಾಜನವಲ್ಲ, ಲಿಂಗಕ್ಕೆ ತನ್ನ ಮನವೆ ಭಾಜನ. ಪ್ರಾಣವನು ಬೀಸರವೋಗಲೀಯದೆ ಮೀಸಲಾಗರ್ಪಿಸಬಲ್ಲಡೆ ಕೂಡಿಕೊಂಡಿಪ್ಪ, ನಮ್ಮ ಕೂಡಲಸಂಗಮದೇವ.
--------------
ಬಸವಣ್ಣ
ಭಕ್ತಿಯಾಚಾರದ ಪಥವಿಡಿದು ನಲಿನಲಿದುಲಿದಡೂ ಲಿಂಗಸಾಹಿತ್ಯವಿಲ್ಲ. ಮನವೆ ಲಿಂಗದಲ್ಲಿ ನೆಲೆಗೊಳಿಸುವೆನೆಂದು ಧ್ಯಾನಮೌನದಲ್ಲಿ ನಿಂತಡೂ ಲಿಂಗಸಾಹಿತ್ಯವಿಲ್ಲ. ಸರ್ವಪ್ರಪಂಚುಗಳು ವಾಯುವಿಂದ ತೋರುತ್ತಿರಲು ಆ ಪ್ರಪಂಚನಳಿದು ಲಿಂಗವನೊಡೆವೆರಸುವೆನೆಂದು ಶ್ವಾಸ ನಿಃಶ್ವಾಸಂಗಳ ಪಿಡಿದು ನಿಲಿಸಿದರೂ ಲಿಂಗಸಾಹಿತ್ಯವಿಲ್ಲ. ಸದ್ಭಕ್ತಿವೆತ್ತು ಭಾವಪ್ರಸಂಗದಿಂ ಕಂಗಳಂ ಕಳೆದು ಜಿಹ್ವೆಯಂ ಕೊಯಿದು ಶಿರವನರಿದು, ಹಸ್ತವನುತ್ತರಿಸಿತ್ತಡೂ ಲಿಂಗಸಾಹಿತ್ಯವಿಲ್ಲ. ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣ, ಸಮಾಧಿ ಎಂಬ ಅಷ್ಟಾಂಗಯೋಗ ಘಟ್ಟಿಗೊಂಡು, ಪ್ರಾಣ ಮನ ಪವನ ಹುರಿಗೂಡಿ, ಆಧಾರ ಸ್ವಾಧಿಷ್ಠಾನ ಮಣಿಪೂರಕ ಅನಾಹತ ವಿಶುದ್ಧಿ ಆಜ್ಞೇಯವೆಂಬ ಷಡಾಧಾರದ ಬಳಿವಿಡಿದು, ನೆತ್ತಿಯಿಂದುತ್ತರಕ್ಕೆ ಉಚ್ಚಳಿಸಿ ಹಾಯಿದು, ನಡುನೆತ್ತಿ ತೂತಾದಡೂ ಲಿಂಗಸಾಹಿತ್ಯವಿಲ್ಲ. ಸತ್ಯ, ಸಮತೆ, ಸಮಾಧಾನ, ಸದ್ಭಾವ, ಸವಿರಕ್ತಿಯಿಂದತ್ಯಾನಂದ ತೋರುತ್ತಿರಲು ಅದು ನೆಲೆಗೊಂಡು ನಿಲ್ಲದಾಗಿ ಹೇಳದೆ ಬಂದು ಕೇಳದೆ ಹೋಯಿತ್ತು. ಸೌರಾಷ್ಟ್ರ ಸೋಮೇಶ್ವರನ ನಿಜವನರಿಯದೆ ಅನುಭವವ ಮಾಡಿ ಫಲವೇನಯ್ಯಾ ?
--------------
ಆದಯ್ಯ
ನಿರ್ಣಯವನರಿಯದ ಮನವೆ, ದುಗುಡವನಾಹಾರಗೊಂಡೆಯಲ್ಲಾ ಮಾಯಾ ಸೂತ್ರವಿದೇನೊ! ಕಂಗಳೊಳ[Àಗಣ]sÀ ಕತ್ತಲೆ ತಿಳಿಯದಲ್ಲಾ ! ಬೆಳಗಿನೊಳಗಣ ಶೃಂಗಾರ ಬಳಲುತ್ತಿದ್ದುದು, ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಅಂಗೈಯಲ್ಲಿ ಪೂಜಿಸಿದ ಫಲ ಲಿಂಗಯ್ಯ ಕೊಡನೆಂದು ಮರುಗರಾ ಮನವೆ. ಅಂಗೈಯಲ್ಲಿ ಫಲ ಅಂಗ ಲಿಂಗ ನೋಡಿದಂತೆ ನೋಡಾ ಮನವೆ. ಅಂಗೈಯ ಫಲ ಲಿಂಗಯ್ಯನಾಗರೆ ಪೂಜಿಸುವರೆ ಪ್ರಮಥರು? ನೋಡಾ ಮನವೆ. ಕಪಿಲಸಿದ್ಧಮಲ್ಲಿಕಾರ್ಜುನನ ಪೂಜಿಸಿ ಪೂಜಿಸಿ ಬದುಕು ಮನವೆ.
--------------
ಸಿದ್ಧರಾಮೇಶ್ವರ
`ಸರ್ವಂ ಶಿವಮಯಂ ಜಗತ್' ಎಂಬುದ ತಿಳಿಯದೆ ನುಡಿದವರ ನುಡಿಯಂತೆ ನಡೆಯದಿರಾ ಮನವೆ. `ಸರ್ವಂ ಶಿವಮಯಂ ಜಗತ್' ಎಂದು ತಿಳಿದು ತಿಳಿದು ಸುಖಿಯಾಗು ಮನವೆ. ಪಿಂಡ ಬ್ರಹ್ಮಾಂಡಕ್ಕೆ `ತಿಲಷೋಡಶಭಾಗೇನ ಭೇದೋ ನಾಸ್ತಿ ವರಾನನೇ' ಎಂಬುದು ಪುಸಿಯಲ್ಲ ನೋಡಾ ಮನವೆ. ಈಶ್ವರನ ಪಂಚಮುಖಂದ ಪಂಚತತ್ವಗಳುದಯಿಸಿದವು. ಈ ತತ್ವಂಗಳೊಂದೊಂದು ಕೂಡಿ ತನ್ನ ಚೈತನ್ಯ ಬೆರಸಿದಲ್ಲಿ, ಪಿಂಡ ಬ್ರಹ್ಮಾಂಡವೆನಿಸಿತ್ತು ನೋಡಾ ಮನವೆ. ತನ್ನ ತಾನರಿದು ನೋಡಿದಡೆ, `ಸರ್ವಂ ಶಿವಕಪಿಲಸಿದ್ಧಮಲ್ಲಿಕಾರ್ಜುನಮಯಂ ಜಗತ್' ಎಂದರಿದು ಬಂದಿತ್ತು ನೋಡಾ ಮನವೆ.
--------------
ಸಿದ್ಧರಾಮೇಶ್ವರ
ಗುರುವ ನೆನೆದೆಹೆನೆಂದು ನೆನೆಯುತ್ತಿದ್ದಡೆ ನೆನೆವ ಮನವು ತಾನು ಗುರುವಾಯಿತು ನೋಡಾ. ಆಹಾ ! ಮಹಾದೇವ, ಇನ್ನಾವುದರಿಂದ ? ಆವುದನು ? ಏನೆಂದು ನೆನೆವೆ ? ಮನವೆ ಗುರುವಾದ ಕಾರಣ,_ ಮನವೆ ಗುರುವಾಗಿ ನೆನಹನಿಂಬುಗೊಂಡನು ಗುಹೇಶ್ವರಲಿಂಗ ಚೋದ್ಯಚರಿತ್ರನು !
--------------
ಅಲ್ಲಮಪ್ರಭುದೇವರು
ಆಡಿ ಅಳುಪದಿರಾ, ಲೇಸಮಾಡಿ ಮರುಗದಿರಾ, ಎಲೆ ಮನವೆ. ಕೂಡಿ ತಪ್ಪದಿರಾ, ಬೇಡಿದವರಿಗಿಲ್ಲೆನ್ನದಿರು ಕಂಡಾ. ನಾಡ ಮಾತು ಬೇಡ, ಸೆರಗೊಡ್ಡಿ ಬೇಡು ಕೂಡಲಸಂಗನ ಶರಣರ. 279
--------------
ಬಸವಣ್ಣ
ರಾಜಂಗೆ ಮಂತ್ರಿ ಮುಖ್ಯವಾದಂತೆ ಬಾಹ್ಯಪ್ರಾಣಕ್ಕೆ ಮನವೆ ಮುಖ್ಯ ನೋಡಾ. ಮನ ಮುಖ್ಯವಾಗಿ ಸರ್ವಪಾಪ ಅನ್ಯಾಯವ ಗಳಿಸಿ, ಕಾಲಂಗೆ ಗುರಿಮಾಡಿ, ಜನನ ಮರಣಕ್ಕೆ ತರಿಸಿ, ಮುನ್ನ ಕಾಡುತ್ತಿದೆ. ಮನವ ನಿರಸನವ ಮಾಡುವರೆನ್ನಳವೆ ? ನಿನ್ನಳವ ಎನ್ನೊಳಿತ್ತು ಮನ್ನಿಸಿ ಕಾಯಯ್ಯ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಆರೇನು ಮಾಡಿದುದನಂತಿರೆ, ಅಂತಕ್ಕು ಇಂತಕ್ಕುಯೆಂತಕ್ಕುಯೆನಬೇಡ. ಚಿಂತಿಸರು ಎಲೆ ಮನವೆ, ಅಂತಕಹರ ಕಪಿಲಸಿದ್ಧಮಲ್ಲಿನಾಥಯ್ಯ ಮಾಡಿದಂತಲ್ಲದೆ ತಾನು ಅಪ್ಪುಲ್ಲ.
--------------
ಸಿದ್ಧರಾಮೇಶ್ವರ
ಪಡೆವುದರಿದು ನರಜನ್ಮವ, ಪಡೆವುದರಿದು ಹರಭಕ್ತಿಯ, ಪಡೆವುದರಿದು ಗುರುಕಾರುಣ್ಯವ, ಪಡೆವುದರಿದು ಲಿಂಗಜಂಗಮಸೇವೆಯ, ಪಡೆವುದರಿದು ಸತ್ಯಶರಣರನುಭಾವವ. ಇಂತಾಗಿ ಚೆನ್ನಮಲ್ಲಿಕಾರ್ಜುನಯ್ಯನ ಶರಣರ ಅನುಭಾವದಲ್ಲಿ ನಲಿನಲಿದಾಡು ಕಂಡೆಯಾ ಎಲೆ ಮನವೆ.
--------------
ಅಕ್ಕಮಹಾದೇವಿ
ಜಂಗಮಪ್ರಸಾದ ಮುಂತಾಗಿಯಲ್ಲದೆ ಒಲ್ಲೆನೆಂಬ ಭಕ್ತನ ಕಟ್ಟಳೆಯ ವಿವರ: ಶಿಶು, ಬಂಧುಗಳು, ಚೇಟಿ, ಬೆವಸಾಯವ ಮಾಡುವವರು ಮುಂತಾದ ಇವರಿಗೆಲ್ಲಕ್ಕೂ ಒಡೆಯರಿಗೆ ಸಲುವುದಕ್ಕೆ ಮುನ್ನವೆ ಸೀತಾಳ ಶಿವದಾನವೆಂದು ಇಕ್ಕಬಹುದೆ? ಒಡೆಯರ ಕಟ್ಟಳೆಯಠಾವಿನಲ್ಲಿ ನಿಮ್ಮ ಕೃತ್ಯಕ್ಕೆ ನಿಮ್ಮ ಮನವೆ ಸಾಕ್ಷಿ. ಇದು ದಂಡವಲ್ಲ, ನೀವು ಕೊಂಡ ಅಂಗದ ನೇಮ. ಇದಕ್ಕೆ ನಿಮ್ಮ ಏಲೇಶ್ವರಲಿಂಗವೆ ಸಾಕ್ಷಿ.
--------------
ಏಲೇಶ್ವರ ಕೇತಯ್ಯ
ಮನದ ಮನವನು ಕಳೆಯಾ ಅಯ್ಯಾ, ಮನವೇ ಶುದ್ಧನಾಗು, ಮನವೇ ಸಿದ್ಧನಾಗು, ಮನವೆ ಪ್ರಸಿದ್ಧನಾಗಯ್ಯಾ, ಮನದೊಡೆಯ ಮಹಾದೇವ ಕಪಿಲಸಿದ್ಧಮಲ್ಲಿನಾಥಾ ಮನದ ಸರ್ವಾಂಗ ನೀನಾಗಯ್ಯಾ.
--------------
ಸಿದ್ಧರಾಮೇಶ್ವರ
ಹಡಗನೇರಿದವರ ಮುಂದೆ ಕಳುಹಿ ಮರಳಿ ಹೋದೆಹೆನೆಂದರೆ ಹಡಗುಂಟೆ? ಮಚ್ಚಿದಲ್ಲಿ ಮಹೋತ್ಸವವನೆಯ್ದು ಮನವೆ ಬಳಿಕ ಅರಸಿದರುಂಟೆ? ಅಯ್ಯನ ಸಂಗ ಅನಾದಿ ಸಂಸಿದ್ಧ ಯೋಗಮೂರ್ತಿ ಗುರು ಸಿಕ್ಕಿದಲ್ಲಿ ಕೂಡು ಮನವೆ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಮನವೆ ಮಹ, ತನುವೆ ಪೃಥ್ವಿ, ಇನಿತಾವ ಎಡೆಯಲ್ಲಿ ಆತ್ಮನಿಹುದೋ ? ಸಾಗರದ ಹಾಗಲ್ಲ ಮೇಘದ ಪರ್ಯಾಯವಲ್ಲ ನೀನರಿಯದ ತೆರನಲ್ಲ ಆದ ಹಿರಿದುಮಾಡಿ ಒರೆಯಲೇಕಯ್ಯಾ ? ನಿಃಕಳಂಕಶಾಂತಮಲ್ಲಿಕಾರ್ಜುನ ದೇವರಿಲ್ಲವೆಂಬವಂಗೆ ಆತ್ಮನಿಂದೇನು ? ಸೌರಾಷ್ಟ್ರ ಸೋಮೇಶ್ವರಾ, ಮಾತಿಂಗೆ ಮರುಳಾದವರುಂಟೆ ?
--------------
ಆದಯ್ಯ
ವಿರಳವಿಲ್ಲದ ಮಣಿಗೆ ದಾರದ ಹಂಗೇಕೆ ? ನಿರವಯಾಂಗಗೆ ಪರಿಭ್ರಮಣವೇತಕ್ಕೆ ? ನಿರಾಳದಲ್ಲಿ ನಿಂದ ಸುಖಿಗೆ ವಿರಾಳದಲ್ಲಿ ಸುತ್ತಿ ತಿರುಹಲೇಕೆ ? ಸಂಸಾರದ ಸುಖದುಃಖಮಂ ಮರೆದು, ಅಂಗ ಮೊದಲು, ಮನವೆ ಕಡೆಯಾಗಿ ಮನುಜರ ಹಂಗ ಬಿಟ್ಟವಂಗೆ ಮನೆಮನೆಯ ಹೊಗಲೇಕೆ ? ತಲೆಹುಳಿತ ದನವಿನಂತೆ ಗಳುವಿನಾಸೆಗಾಗಿ ಇವರಿಗೆ ಲಿಂಗದ ಅನುವಿನ ಆಸೆಯೇಕೆ ? ಘನಮಹಿಮಾ, ಅಲಸಿದೆ ಅಂಜಿದೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಇನ್ನಷ್ಟು ... -->