ಅಥವಾ

ಒಟ್ಟು 187 ಕಡೆಗಳಲ್ಲಿ , 39 ವಚನಕಾರರು , 159 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಟ್ಟ ಬಯಲಲ್ಲಿ ಒಂದು ಶರಧಿ ಹುಟ್ಟಿತ್ತು. ಆ ಶರಧಿಯ ನಡುವೆ ಒಂದು ಕಮಲ ಹುಟ್ಟಿತ್ತು. ಆ ಕಮಲದ ನೆಲೆಯ ಕಾಣಲರಿಯದೆ ತೊಳಲಿ ಬಳಲಿ, ಜಗದೊಳಗೆ ನಚ್ಚುಮಚ್ಚಿಗೊಳಗಾಗಿ, ಚುಚ್ಚಳ ಪೂಜೆಗೆ ಸಿಲ್ಕಿ, ಕುಲಕೆ ಛಲಕೆ ಕೊಂದಾಡಿ, ಭವಕ್ಕೆ ಗುರಿಯಾಗುವ ಮನುಜರ ಕಂಡು ನಾಚಿತ್ತೆನ್ನ ಮನವು. ಆ ಮನದ ಬೆಂಬಳಿಗೊಂಡು ಹೋದವರೆಲ್ಲ ಮರುಳಾಗಿ ಹೋದರು. ಇದ ನೋಡಿ ನಾನು ಬಟ್ಟಬಯಲಲ್ಲಿ ನಿಂದು ನೋಡಿದಡೆ, ಶರಧಿ ಬತ್ತಿತ್ತು ಕಮಲ ಕಾಣಬಂದಿತ್ತು. ಆ ಕಮಲ ವಿಕಾಸವಾಯಿತ್ತು ಪರಿಮಳವೆಂಬ ವಾಸನೆ ತೀಡಿತ್ತು. ಆ ವಾಸನೆವಿಡಿದು ಜಗದಾಸೆಯ ಹಿಂಗಿ ಮಾತು ಮಥನವ ಕೆಡಿಸಿ, ಮಹಾಜ್ಯೋತಿಯ ಬೆಳಗಿನಲಿ ಓಲಾಡುವ ಶರಣರ ಆಸೆ ರೋಷ ಪಾಶಕ್ಕೊಳಗಾದ ಈ ಜಗದ ಹೇಸಿಗಳೆತ್ತಬಲ್ಲರು, ಈ ಮಹಾಶರಣರ ನೆಲೆಯ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ ?
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಕೊಂಬೆಯ ಮೇಲಣ ಮರ್ಕಟನಂತೆ ಲಂಘಿಸುವುದೆನ್ನ ಮನವು, ನಿಂದಲ್ಲಿ ನಿಲಲೀಯದೆನ್ನ ಮನವು, ಹೊಂದಿದಲ್ಲಿ ಹೊಂದಲೀಯದೆನ್ನ ಮನವು ಕೂಡಲಸಂಗಮದೇವಾ ನಿಮ್ಮ ಚರಣಕಮಲದಲ್ಲಿ ಭ್ರಮರನಾಗಿರಿಸು, ನಿಮ್ಮ ಧರ್ಮ. 32
--------------
ಬಸವಣ್ಣ
ಭವಭವದಲ್ಲಿ ಎನ್ನ ಮನವು ಸಿಲುಕದೆ ಭವಭವದಲ್ಲಿ ಎನ್ನ ಮನವು ಕಟ್ಟದೆ ಭವಸಾಗರದಲ್ಲಿ ಮುಳುಗದೆ ಭವರಾಟಳದೊಳು ತುಂಬದೆ ಕೆಡಹದೆ ಭವವಿರಹಿತ ನೀನು, ಅವಧಾರು ಕರುಣಿಸು ಕೂಡಲಸಂಗಮದೇವಾ. 68
--------------
ಬಸವಣ್ಣ
ಕಾಮವಿಕಾರಕ್ಕೆ ಕಳವಳಿಸಿ ಮನವು ಹೇಮದಿಚ್ಛೆಗೆ ಹೆಚ್ಚಿ ಹೆಚ್ಚಿ ಕಾಮಾರಿ ನಿಮ್ಮುವ ನೆನೆಯದೀಮನವು ಓರಂತೆ ನರಕಕ್ಕಿಳಿದೆನೆಂಬುದು. ಕಾರುಣ್ಯಾಕರ ಎನ್ನುವನಾರೈದು ಓರಂತೆ ಮಾಡು, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಗುರುವ ನೆನೆದೆಹೆನೆಂದು ನೆನೆಯುತ್ತಿದ್ದಡೆ ನೆನೆವ ಮನವು ತಾನು ಗುರುವಾಯಿತು ನೋಡಾ. ಆಹಾ ! ಮಹಾದೇವ, ಇನ್ನಾವುದರಿಂದ ? ಆವುದನು ? ಏನೆಂದು ನೆನೆವೆ ? ಮನವೆ ಗುರುವಾದ ಕಾರಣ,_ ಮನವೆ ಗುರುವಾಗಿ ನೆನಹನಿಂಬುಗೊಂಡನು ಗುಹೇಶ್ವರಲಿಂಗ ಚೋದ್ಯಚರಿತ್ರನು !
--------------
ಅಲ್ಲಮಪ್ರಭುದೇವರು
ಹೊಸ ಮದುವೆ ಹಸೆಯುಡುಗದ ಮುನ್ನ, ಹೂಸಿದ ಅರಿಸಿನ ಬಿಸಿಲಿಂಗೆ ಹರಿಯದ ಮುನ್ನ, ತನು ಸಂಚಲವಡಗಿ ಮನವು ಗುರುಕಾರುಣ್ಯವ ಪಡೆದು ಹುಸಿಯಿಲ್ಲದಿರ್ದಡೆ ಭಕ್ತನೆಂಬೆ! ಹಿಡಿಹಿಂಗಿಲ್ಲದಿರ್ದಡೆ ಮಾಹೇಶ್ವರನೆಂಬೆ! ತನುವಿಲ್ಲದಿರ್ದಡೆ ಪ್ರಸಾದಿಯೆಂಬೆ! ಜೀವವಿಲ್ಲದಿರ್ದಡೆ ಪ್ರಾಣಲಿಂಗಿಯೆಂಬೆ! ಆಶೆಯಿಲ್ಲದಿರ್ದಡೆ ಶರಣನೆಂಬೆ! ಈ ಐದರ ಸಂಪರ್ಕ ನಿರ್ಭೋಗವಾದಡೆ ಐಕ್ಯನೆಂಬೆ! ಐಕ್ಯದ ಸಂತೋಷ ಹಿಂಗಿದಡೆ ಜ್ಯೋತಿರ್ಮಯನೆಂಬೆ! ಈ ಹೀಂಗಾದ ದೇಹವನಿರಿದಡರಿಯದು ತರಿದಡರಿಯದು. ಬೈದಡರಿಯದು; ಹೊಯ್ದಡರಿಯದು. ನಿಂದಿಸಿದಡರಿಯದು; ಸ್ತುತಿಸಿದಡರಿಯದು. ಸುಖವನರಿಯದು; ದುಃಖವನರಿಯದು. ಇಂತಿವರ ತಾಗು ನಿರೋಧವನರಿಯದಿರ್ದಡೆ ಅವರ ಮಹಾಲಿಂಗ ಗಜೇಶ್ವರನೆಂಬೆ.
--------------
ಗಜೇಶ ಮಸಣಯ್ಯ
ಶಿವಶಿವಾ, ಎನ್ನ ಮನವು ನಿಮ್ಮ ನೆನೆಯಲೊಲ್ಲದೆ ಅನ್ಯಕ್ಕೆ ಹರಿವುತಿರ್ಪುದು ನೋಡಾ. ಗುರು ಚರ ಲಿಂಗದ ಸೇವೆಯೆಂದೊಡೆ ಹಿಂದುಳಿವುತಿರ್ಪುದು ನೋಡಾ. ಅನ್ಯರ ಒಡವೆಯಾದ ಹೊನ್ನು ಹೆಣ್ಣು ಮಣ್ಣೆಂದೊಡೆ ಮುಂದುವರಿದು ಓಡುತಿರ್ಪುದು ನೋಡಾ. ಈ ಮನದ ಉಪಟಳವು ಘನವಾಯಿತ್ತು. ಇನ್ನೇನು ಗತಿಯಯ್ಯ ಎನಗೆ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಕರ್ಮೇಂದ್ರಿಯಂಗಳೈದರ ತಿರುಳನುರುಹಿ ತನ್ನನರಿಯಬಲ್ಲಾತನೇ ಶರಣ. ವಿಷಯಂಗಳೈದರ ತಿರುಳನುರುಹಿ ತನ್ನನರಿಯಬಲ್ಲಾತನೇ ಶರಣ. ಜ್ಞಾನೇಂದ್ರಿಯಗಳೈದರ ತಿರುಳನುರುಹಿ ತನ್ನನರಿಯಬಲ್ಲಾತನೇ ಶರಣ. ವಾಯುಪಂಚಕಂಗಳ ತಿರುಳನುರುಹಿ ತನ್ನನರಿಯಬಲ್ಲಾತನೇ ಶರಣ. ಕರಣ ನಾಲ್ಕೊಂದರ ತಿರುಳನುರುಹಿ ತನ್ನನರಿಯಬಲ್ಲಾತನೇ ಶರಣ. ಇಂತಲ್ಲದೆ ಇವರ ತಿರುಳಿನೊಳು ಮರುಳುಗೊಂಡುರುಳುವ ಮಾನವರು ತಾವು ಶರಣರೆಂದು ನುಡಿದು ನಡೆವ ಸಡಗರವ ಕಂಡು ನಾಚಿತ್ತೆನ್ನ ಮನವು ಗುರುನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಹೊನ್ನು ಸಂಸಾರವಲ್ಲ, ಹೆಣ್ಣು ಸಂಸಾರವಲ್ಲ, ಮಣ್ಣು ಸಂಸಾರವಲ್ಲ, ಈ ಮೂರರ ಮೇಲಣ ಮೋಹವೆರಸಿದ ಮನವು ಸಂಸಾರ ನೋಡಾ ! ಆ ಮನವನು ಸಂಸಾರ ಮೋಹವನು ಬೇರ್ಪಡಿಸಿ, ತನ್ನ ಕೂಡಿ ನಡೆವ ಗತಿಮತಿಗಳನಾರನು ಕಾಣೆನಯ್ಯಾ ನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ತನು ತರತರಂಬೋಗಿ, ಮನವು ನಿಮ್ಮಲ್ಲಿ ಸಿಲುಕಿತ್ತಯ್ಯಾ. ನೋಟವೇ ಪ್ರಾಣವಾಗಿ ಅಪ್ಯಾಯನ ನಿಮ್ಮಲ್ಲಿ ಆರತುದಯ್ಯಾ. ಸಿಲುಕಿತ್ತು ಶೂನ್ಯದೊಳಗೆ, ಗುಹೇಶ್ವರಾ ನಿರಾಳವಯ್ಯಾ !
--------------
ಅಲ್ಲಮಪ್ರಭುದೇವರು
ಮುಂಗೈಯ ಕಂಕಣಕ್ಕೆ ಕನ್ನಡಿಯ ತೋರುವಂತೆ ಎನ್ನ ಮನವು ನಿಧಾನವನೊಲ್ಲದೆ ಜಲಗ ಮಚ್ಚಿತ್ತು ನೋಡಾ. ನಾಯಿಗೆ ನಾರಿವಾಣವಕ್ಕುವುದೆ ಕೂಡಲಸಂಗಮದೇವಾ. 31
--------------
ಬಸವಣ್ಣ
ಪ್ರಾಣವು ಲಿಂಗವ ನುಂಗಿತ್ತೋ, ಲಿಂಗವು ಪ್ರಾಣವ ನುಂಗಿತ್ತೋ ಎಂದರಿಯೆನಯ್ಯ. ಭಾವವು ಲಿಂಗದಲ್ಲಿ ತುಂಬಿತ್ತೋ, ಲಿಂಗವು ಭಾವದಲ್ಲಿ ತುಂಬಿತ್ತೋ ಎಂದರಿಯೆನಯ್ಯ. ಮನವು ಲಿಂಗದಲ್ಲಿ ಮುಳುಗಿತ್ತೊ , ಲಿಂಗವು ಮನದಲ್ಲಿ ಮುಳುಗಿತ್ತೋ ಎಂದರಿಯೆನಯ್ಯ. ಅಖಂಡೇಶ್ವರಾ, ನಿಮ್ಮ ಕೂಡುವ ವಿಕಳಾವಸ್ಥೆಯಲ್ಲಿ ಏನೇನೂ ಅರಿಯದಿರ್ದೆನಯ್ಯ.
--------------
ಷಣ್ಮುಖಸ್ವಾಮಿ
ಎಂಬತ್ತು (ಎರಡೆಂಬತ್ತು?) ಕೋಟಿ ವಚನವ ಹಾಡಿ ಹಲವ ಹಂಬಲಿಸಿತ್ತೆನ್ನ ಮನವು, ಮನ ಘನವನರಿಯದು, ಘನ ಮನವನರಿಯದು. ಗುಹೇಶ್ವರನೆಂಬ ಲಿಂಗವನರಿದ ಬಳಿಕ ಗೀತವೆಲ್ಲ ಒಂದು ಮಾತಿನೊಳಗು !
--------------
ಅಲ್ಲಮಪ್ರಭುದೇವರು
ಆದಿಯಲ್ಲಿ ಪ್ರಣವಸ್ವರೂಪಮಾದ ಪರಮಾತ್ಮನು ಅಕಾರ ಉಕಾರ ಮಕಾರವೆಂಬ ಅಕ್ಷರತ್ರಯಸ್ವರೂಪಮಾಗಿ, ಅಕಾರವೇ ನಾದ, ಉಕಾರವೇ ಬಿಂದು, ಮಕಾರವೇ ಕಳೆ; ಬಿಂದುವೇ ಶರೀರಮಾಗಿ, ನಾದವೇ ಪ್ರಾಣಮಾಗಿ, ಕಳೆಯೇ ಮನಮಾಗಿ ; ಬಿಂದುಮಯವಾದ ಶರೀರದಲ್ಲಿ ರೂಪು ನಾದಮಯಮಾದ ಪ್ರಾಣದಲ್ಲಿ ನಾಮ ಕಳಾಮಯಮಾದ ಮನದಲ್ಲಿ ಕ್ರಿಯೆ ಇಂತು ನಾಮ-ರೂಪ-ಕ್ರಿಯಾಯುಕ್ತಮಾದ ಪುರುಷನ ಶರೀರದಲ್ಲಿ ಭಕ್ತಿ, ಪ್ರಾಣದಲ್ಲಿ ಜ್ಞಾನ, ಮನದಲ್ಲಿ ವೈರಾಗ್ಯ ನೆಲೆಗೊಂಡಲ್ಲಿ, ಬಿಂದುವಿನಲ್ಲಿ ಆಚಾರಲಿಂಗಸಂಬಂಧಮಾಯಿತ್ತು, ಕಳೆಯಲ್ಲಿ ಶಿವಲಿಂಗಸಂಬಂಧಮಾಯಿತ್ತು. ಆಚಾರದಿಂದ ಪೂತಮಾದ ಶರೀರವೇ ಜಂಗಮಲಿಂಗಮಾಯಿತ್ತು . ಗುರುಮಂತ್ರದಿಂದ ಪೂತಮಾದ ಪ್ರಾಣವೇ ಪ್ರಸಾದಲಿಂಗಮಾಯಿತ್ತು. ಶಿವಧ್ಯಾನದಿಂದ ಪೂತಮಾದ ಪ್ರಾಣವೇ ಪ್ರಸಾದಲಿಂಗಮಾಯಿತ್ತು . ಬಿಂದುವಿನಲ್ಲಿ ಕ್ರಿಯಾಶಕ್ತಿ ನೆಲೆಗೊಂಡಲ್ಲಿ, ಆ ಬಿಂದುವೇ ಆದಿಶಕ್ತಿಮಯಮಾಯಿತ್ತು. ನಾದದಲ್ಲಿ ಮಂತ್ರಶಕ್ತಿ ನೆಲೆಗೊಂಡಲ್ಲಿ, ಆ ನಾದವೇ ಪರಾಶಕ್ತಿಯಾಯಿತ್ತು. ಕಳೆಯಲ್ಲಿ ಇಚ್ಛಾಶಕ್ತಿ ನೆಲೆಗೊಂಡಲ್ಲಿ, ಆ ಕಳೆಯೇ ಜ್ಞಾನಶಕ್ತಿಯಾಯಿತ್ತು. ಇಂತು ಶರೀರಮೇ ಜಂಗಮದಿಂದ ಪವಿತ್ರಮಾಗಿ, ಪ್ರಾಣವು ಗುರುವಿನಿಂದ ಪವಿತ್ರಮಾಗಿ, ಮನವು ಲಿಂಗದಿಂದ ಪರಿಶುದ್ಧಮಾಗಿರ್ದ ಶಿವಶರಣನು ಇದ್ದುದೇ ಕೈಲಾಸ, ಅನುಭವಿಸಿದುದೆಲ್ಲಾ ಲಿಂಗಭೋಗ, ಐಕ್ಯವೇ ಲಿಂಗೈಕ್ಯ ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಕರ್ತನನರಿಯದವನು ವಿಪ್ರನಾದಡೇನು ! ಚತುರ್ವೇದಿಯಾದಡೇನು ಭುಕ್ತಿಕಾರಣ ಲೋಕದ ಇಚ್ಛೆಗೆ ನುಡಿದು ನಡೆವರಯ್ಯಾ ! ಭವಿಮಾಡಿದ ಪಾಕವ ತಂದು, ಲಿಂಗಕ್ಕರ್ಪಿಸುವ ಕಷ್ಟರ ಕಂಡು ನಾಚಿತ್ತೆನ್ನ ಮನವು, ಕೂಡಲಸಂಗನ ಶರಣರ ಒಕ್ಕುದ ಕೊಂಡು ಅನ್ಯವನಾಚರಿಸಿದಡೆ ತಪ್ಪದು ಸೂಕರ ಶುಚಿರ್ಭೂತತೆಯ ಪ್ರಾಣಿಯಂತೆ.
--------------
ಬಸವಣ್ಣ
ಇನ್ನಷ್ಟು ... -->