ಅಥವಾ

ಒಟ್ಟು 466 ಕಡೆಗಳಲ್ಲಿ , 70 ವಚನಕಾರರು , 410 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾತಾಳದಗ್ವಣಿಯ ನೇಣಿಲ್ಲದೆ ತೆಗೆಯಬಹುದೆ, ಸೋಪಾನದ ಬಲದಿಂದಲ್ಲದೆ ? ಶಬ್ದಸೋಪಾನವ ಕಟ್ಟಿ ನಡೆಯಿಸಿದರು ಪುರಾತರು, ದೇವಲೋಕಕ್ಕೆ ಬಟ್ಟೆ ಕಾಣಿರೋ. ಮತ್ರ್ಯರ ಮನದ ಮೈಲಿಗೆಯ ಕಳೆಯಲೆಂದು ಗೀತಮಾತೆಂಬ ಜ್ಯೋತಿಯ ಬೆಳಗಿ ಕೊಟ್ಟರು, ಕೂಡಲಚೆನ್ನಸಂಗನ ಶರಣರು.
--------------
ಚನ್ನಬಸವಣ್ಣ
ಇಂದ್ರಿಯದ ಬಾಗಿಲಲ್ಲಿ ಮನವಿಪ್ಪುದು. ಮನದ ಮುಂಬಾಗಿಲಲ್ಲೇ ಭೋಗಲಿಂಗವಿದ್ದು, ಅದ್ಥಿಕಾರ ಲಯಹೊದ್ದದೆ ಸಕಲಭೋಗಂಗಳ ಭೋಗಿಸಿ ಪ್ರಸಾದವ ಕರಣಂಗಳಿಗೆ ಕೊಟ್ಟು ಅರುಹಿ ಎನ್ನ ಮನವ ತನ್ನತ್ತ ಸೆಳೆದು ಮರಹ ಮಾಣಿಸಿ ಕುರುಹಳಿದು ತೆರಹುಗೊಡದ ಸೌರಾಷ್ಟ್ರ ಸೋಮೇಶ್ವರಲಿಂಗವ ಕಂಡೆ.
--------------
ಆದಯ್ಯ
ಬಟ್ಟ ಬಯಲಲ್ಲಿ ಒಂದು ಶರಧಿ ಹುಟ್ಟಿತ್ತು. ಆ ಶರಧಿಯ ನಡುವೆ ಒಂದು ಕಮಲ ಹುಟ್ಟಿತ್ತು. ಆ ಕಮಲದ ನೆಲೆಯ ಕಾಣಲರಿಯದೆ ತೊಳಲಿ ಬಳಲಿ, ಜಗದೊಳಗೆ ನಚ್ಚುಮಚ್ಚಿಗೊಳಗಾಗಿ, ಚುಚ್ಚಳ ಪೂಜೆಗೆ ಸಿಲ್ಕಿ, ಕುಲಕೆ ಛಲಕೆ ಕೊಂದಾಡಿ, ಭವಕ್ಕೆ ಗುರಿಯಾಗುವ ಮನುಜರ ಕಂಡು ನಾಚಿತ್ತೆನ್ನ ಮನವು. ಆ ಮನದ ಬೆಂಬಳಿಗೊಂಡು ಹೋದವರೆಲ್ಲ ಮರುಳಾಗಿ ಹೋದರು. ಇದ ನೋಡಿ ನಾನು ಬಟ್ಟಬಯಲಲ್ಲಿ ನಿಂದು ನೋಡಿದಡೆ, ಶರಧಿ ಬತ್ತಿತ್ತು ಕಮಲ ಕಾಣಬಂದಿತ್ತು. ಆ ಕಮಲ ವಿಕಾಸವಾಯಿತ್ತು ಪರಿಮಳವೆಂಬ ವಾಸನೆ ತೀಡಿತ್ತು. ಆ ವಾಸನೆವಿಡಿದು ಜಗದಾಸೆಯ ಹಿಂಗಿ ಮಾತು ಮಥನವ ಕೆಡಿಸಿ, ಮಹಾಜ್ಯೋತಿಯ ಬೆಳಗಿನಲಿ ಓಲಾಡುವ ಶರಣರ ಆಸೆ ರೋಷ ಪಾಶಕ್ಕೊಳಗಾದ ಈ ಜಗದ ಹೇಸಿಗಳೆತ್ತಬಲ್ಲರು, ಈ ಮಹಾಶರಣರ ನೆಲೆಯ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ ?
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಅಯ್ಯಾ, ಕಾಲತೊಳೆದುಕೊಂಡು ಬಂದರೆ ಕಣ್ಣಮುಂದೆ ನಿಂದೆ. ಕೈಯ ತೊಳೆದುಕೊಂಡು ಬಂದರೆ ಮನದ ಮುಂದೆ ನಿಂದೆ. ತಲೆಯ ತೊಳೆದುಕೊಂಡು ಬಂದರೆ ಭಾವದ ಮುಂದೆ ನಿಂದೆ. ಸಂದು ಸಂಶಯ ಕುಂದು ಕಲೆಯ ಕಳೆದುಳಿದು ಬಂದರೆ ಸರ್ವಾಂಗಸನ್ನಿಹಿತನಾಗಿ ನಿಂದೆ. ಬಂದ ಬರವು ಚಂದವಾಗಿ ನಿಂದರೆ ಅಂದಂದಿಗೆ ಅವಧರಿಸು ಮುಂದುವರಿವೆನು ಮುದದಿಂದೆ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಮನದ ಕತ್ತಲೆಯೊಳಗಣ ಜ್ಯೋತಿಯ ಕೊನೆಯ[ಮೊನೆಯ]ಮೇಲೆ ಘನವನರಿದೆವೆಂಬರ ಅನುಮಾನಕ್ಕೆ ದೂರ. ತಮತಮಗೆ ಅರಿದೆವೆಂಬರು,_ಕನಸಿನಲಿಂಗ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಘನಗಂಬ್ಥೀರಲಿಂಗವೆನ್ನ ಕಾಯದನುವರಿಯಬಂದಬಳಿಕ ಎನ್ನ ಕಾಯದ ರತಿಯ ಕಡೆಗಿಡಲೆನಗೆ ಸೊಗಸದು ಕಾಣಮ್ಮ. ಎನ್ನ ಮನದನುವರಿಯಬಂದಬಳಿಕ ಮನದ ಮಮಕಾರ ಸರಿದರಿಯಲೆನಗೆ ಸೊಗಸದು ಕಾಣಮ್ಮ. ಎನ್ನ ಪ್ರಾಣದನುವರಿಯಬಂದಬಳಿಕ ಪ್ರಾಣದ ಮೋಹವಿತರವೆರಸಲೆನಗೆ ಸೊಗಸದು ಕಾಣಮ್ಮ. ಎನ್ನ ಭಾವದನುವರಿಯಬಂದಬಳಿಕ ಭಾವದ ಭ್ರಾಂತಿ ಪರಿದಾವರಿಸಲೆನಗೆ ಸೊಗಸದು ಕಾಣಮ್ಮ. ಎನ್ನ ಕಾಯ ಮನ ಪ್ರಾಣ ಭಾವವೆಂಬ ಚತುರ್ವಿಧಸಾರಾಯ ಸುಖಲೋಲನಾಗಿರ್ದಬಳಿಕ ಗುರುನಿರಂಜನ ಚನ್ನಬಸವಲಿಂಗವನಗಲಲೆಡೆಗಾಣದೆ ಪರವಶವಾಗಿರ್ದೆ ಕಾಣಮ್ಮ.
--------------
ದೇಶಿಕೇಂದ್ರ ಸಂಗನಬಸವಯ್ಯ
ಕಾಣದಠಾವಿನಲಿ ಜರೆದರೆಂದಡೆ ಕೇಳಿ ಪರಿಣಾಮಿಸಬೇಕು. ಅದೇನು ಕಾರಣ ಕೊಳ್ಳದೆ ಕೊಡದೆ ಅವರಿಗೆ ಸಂತೋಷವಹುದಾಗಿ ! ಎನ್ನ ಮನದ ತದ್‍ದ್ವೇಷವಳಿದು ನಿಮ್ಮ ಶರಣರಿಗೆ ಶರಣೆಂಬುದ ಕರುಣಿಸು, ಕೂಡಲಸಂಗಮದೇವಾ. 250
--------------
ಬಸವಣ್ಣ
ಶಿವಶಿವಾ, ಎನ್ನ ಮನವು ನಿಮ್ಮ ನೆನೆಯಲೊಲ್ಲದೆ ಅನ್ಯಕ್ಕೆ ಹರಿವುತಿರ್ಪುದು ನೋಡಾ. ಗುರು ಚರ ಲಿಂಗದ ಸೇವೆಯೆಂದೊಡೆ ಹಿಂದುಳಿವುತಿರ್ಪುದು ನೋಡಾ. ಅನ್ಯರ ಒಡವೆಯಾದ ಹೊನ್ನು ಹೆಣ್ಣು ಮಣ್ಣೆಂದೊಡೆ ಮುಂದುವರಿದು ಓಡುತಿರ್ಪುದು ನೋಡಾ. ಈ ಮನದ ಉಪಟಳವು ಘನವಾಯಿತ್ತು. ಇನ್ನೇನು ಗತಿಯಯ್ಯ ಎನಗೆ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಅಂಗದ ಗುಣವಳಿಯದೆ, ಪ್ರಾಣದ ಪ್ರಪಂಚು ಹಿಂಗದೆ, ಭಾವದ ಭ್ರಮೆಯುಡುಗದೆ, ಮನದ ಮಾಯವಡಗದೆ, ಆತ್ಮನ ಅಹಂಮಮತೆ ಕೆಡದೆ, ಲಿಂಗಕ್ಕೆ ತಮಗೆ ಏಕಭಾಜನವೆಂದು ನುಡಿವ ಕಾಕುಮಾನವರನೇನೆಂಬೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಕಾಯದ ಕೈಯಲ್ಲಿಪ್ಪುದು ರೂಪುವಿಡಿದ ಲಿಂಗ. ಮನದ ಕೊನೆಯಲ್ಲಿಪ್ಪುದು ಸಾಕಾರವಿರಹಿತಲಿಂಗ. ಅರಿವಿನ ಭೇದಂಗಳ ತಿಳಿದು ನೋಡಿ, ಕಂಡೆಹೆನೆಂಬ ಸನ್ಮತ ಸದ್ಭಾವಿಗಳು ಕೇಳಿರೊ. ಅದು ಚಿದ್ಘನ ಚಿದಾದಿತ್ಯ ಚಿತ್ಸ್ವರೂಪ ಸದಮಲಾನಂದ ಗೂಡಿನ ಗುಮ್ಮಟನಾಥನೊಡೆಯ ಅಗಮ್ಯೇಶ್ವರಲಿಂಗ. ಇದಾರಿಗೂ ಅಪ್ರಮಾಣಮೂರ್ತಿ.
--------------
ಮನುಮುನಿ ಗುಮ್ಮಟದೇವ
ಶಮೆ ದಮೆ ತಿತಿಕ್ಷೆ ಉಪರತಿ ಶ್ರದ್ಧೆ ಸಮಾಧಿ ಸಾಧನಸಂಪನ್ನನಾಗಿ ಸದ್ಗುರುವನರಸುತ್ತ ಬಪ್ಪ ಶಿಷ್ಯನ ಸ್ಥೂಲತನುವಿನ ಕಂಗಳ ಕೊನೆಯಲ್ಲಿ ಇಷ್ಟಲಿಂಗವ ಧರಿಸಿ; ಸೂಕ್ಷ್ಮತನುವಿನ ಮನದ ಕೊನೆಯಲ್ಲಿ ಪ್ರಾಣಲಿಂಗವ ಧರಿಸಿ; ಕಾರಣ ತನುವಿನ ಭಾವದ ಕೊನೆಯಲ್ಲಿ ತೃಪ್ತಿಲಿಂಗವ ಧರಿಸಿ, `ಸರ್ವೇಂದ್ರಿಯಾಣಾಂ ನಯನಂ ಪ್ರಧಾನಂ, ಎಂಬ ಕಂಗಳ ಇಷ್ಟಲಿಂಗಕ್ಕೆ ಸಮರ್ಪಿಸಿ, `ಇಂದ್ರಿಯಾಣಾಂ ಮನೋನಾಥಃ? ಎಂಬ ಮನವನು ಪ್ರಾಣಲಿಂಗಕ್ಕೆ ಸಮರ್ಪಿಸಿ; ಪ್ರಾಣ ಭಾವವ ತೃಪ್ತಿಲಿಂಗಕ್ಕೆ ಸಮರ್ಪಿಸಿ `ಮನೋದೃಷ್ಟ್ಯಾ ಮರುನ್ನಾಶಾದ್ರಾಜಯೋಗಫಲಂ ಭವೇತ್, ಎಂಬ ರಾಜಯೋಗ ಸಮರಸವಾದಲ್ಲಿ_ ಅಂಗ ಲಿಂಗ, ಲಿಂಗವಂಗವಾಗಿ ಶಿಖಿ ಕರ್ಪೂರಯೋಗದಂತೆ ಪೂರ್ಣಾಪೂರ್ಣ ದ್ವೈತಾದ್ವೈತ ಉಭಯ ವಿನಿರ್ಮುಕ್ತವಾಗಿ `ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ, ಎಂಬ ನಿಜದಲ್ಲಿ ನಿವಾಸಿಯಾದರು, ಕೂಡಲಚೆನ್ನಸಂಗಾ ನಿಮ್ಮ ಶರಣರು.
--------------
ಚನ್ನಬಸವಣ್ಣ
ತನುವಿನ ವಿಕಾರದ ಕತ್ತಲೆಯಲ್ಲಿ ಸಿಲ್ಕಿ, ಕಂಗೆಟ್ಟು ಕಳವಳಿಸಿ ತೊಳಲಿ ಬಳಲಿದೆನಯ್ಯ. ಮನದ ವಿಕಾರದ ಮರವೆಯಲ್ಲಿ ಸಿಲ್ಕಿ, ಮಣ್ಣುಮಸಿಯಾಗಿ ಬಣ್ಣಗೆಟ್ಟೆನಯ್ಯ. ಈ ತನುಮನದ ವಿಕಾರವ ಮಾಣಿಸಿ, ನಿಮ್ಮ ಭಕ್ತಿಯ ವಿಕಾರದಲ್ಲಿರಿಸಿ ಸಲಹಯ್ಯ ಎನ್ನ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಅಯ್ಯಾ, ಎನ್ನ ಸ್ಥೂಲತತ್ವದಲ್ಲಿ ದ್ವಾದಶಕಳೆಯೊಳು ನಿಂದು ಅನಂತಕೋಟಿಪ್ರಕಾಶವಾಗಿ ತೋರುವ ಪ್ರಾಣಲಿಂಗವನು ಸತ್ಕ್ರಿಯಾನುಭಾವದಿಂದೆ ಕಾಯದ ಕರಸ್ಥಲದಲ್ಲಿಟ್ಟು ಅಷ್ಟವಿಧಾರ್ಚನೆಯ ಮಾಡಿ, ಕಂಗಳಾರತಿಯನೆತ್ತಿ ಮಂಗಳ ಜಯ ಜಯವೆನುತಿರ್ದೆನಯ್ಯಾ. ಅಯ್ಯಾ, ಎನ್ನ ಸೂಕ್ಷ್ಮ ತತ್ವದಲ್ಲಿ ಷೋಡಶಕಳೆಯೊಳು ನಿಂದು ಅನಂತಕೋಟಿಪ್ರಕಾಶವಾಗಿ ತೋರುವ ಪ್ರಾಣಲಿಂಗವನು ಸಮ್ಯಕ್ ಜ್ಞಾನಾನುಭಾವದಿಂದೆ ಮನದ ಕರಸ್ಥಲದಲ್ಲಿಟ್ಟು ಅಷ್ಟವಿಧಾರ್ಚನೆಯ ಮಾಡಿ ಮನದಾರತಿಯನೆತ್ತಿ ಮಂಗಳ ಜಯ ಜಯವೆನುತಿರ್ದೆನಯ್ಯಾ. ಅಯ್ಯಾ, ಎನ್ನ ಕಾರಣತತ್ವದಲ್ಲಿ ದಶಕಳೆಯೊಳು ನಿಂದು ಅನಂತಕೋಟಿ ಪ್ರಕಾಶವಾಗಿ ತೋರುವ ಪ್ರಾಣಲಿಂಗವನು ಮಹಾಜ್ಞಾನಾನುಭಾವದಿಂದೆ ಭಾವದ ಕರಸ್ಥಲದಲ್ಲಿಟ್ಟು ಅಷ್ಟವಿಧಾರ್ಚನೆಯ ಮಾಡಿ ಭಾವದಾರತಿಯನೆತ್ತಿ ಮಂಗಳ ಜಯ ಜಯವೆನುತಿರ್ದೆನಯ್ಯಾ. ಅಯ್ಯಾ. ಎನ್ನ ಸರ್ವಾಂಗದಲ್ಲಿ ಮೂವತ್ತೆಂಟು ಕಳಾತೀತನಾಗಿ ಅಗಣಿತಕೋಟಿಪ್ರಕಾಶಮಯದಿಂದೊಪ್ಪುವ ಗುರುನಿರಂಜನ ಚನ್ನಬಸವಲಿಂಗವೆಂಬ ಪ್ರಾಣಲಿಂಗವನು ಮಹದರುವಿನ ಕರಸ್ಥಲದಲ್ಲಿಟ್ಟು ಅಷ್ಟವಿಧಾರ್ಚನೆಯ ಮಾಡಿ ಜ್ಞಾನದಾರತಿಯನೆತ್ತಿ ಮಂಗಳ ಜಯ ಜಯವೆನುತಿರ್ದೆನಯ್ಯಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಂತರಂಗದಲ್ಲಿ ಆವರಿಸಿ, ಬಹಿರಂಗದಲ್ಲಿ ತೋರುವೆ. ಕಂಗಳ ಕೊನೆಯಲ್ಲಿ ಮೂರುತಿಯಾಗಿ, ಮನದ ಕೊನೆಯಲ್ಲಿ ತೋರುವೆ. ಎನ್ನ ಬ್ರಹ್ಮರಂಧ್ರದಲ್ಲಿ ತೋರುವ ಪರಂಜ್ಯೋತಿ ಉರಿಲಿಂಗದೇವ ನೀನಯ್ಯಾ.
--------------
ಉರಿಲಿಂಗದೇವ
ಅಯ್ಯಾ, ಮನದ ರಜದ ಮಣ್ಣ ಕಳೆದು ದಯಾ ಶಾಂತಿಯುದಕವ ತೆಗೆವೆನಯ್ಯಾ, ಜಳಕವ ಮಾಡಿ ಯೋಗಕಂಪನಿಕ್ಕಿ ಹೊದೆವೆನಯ್ಯಾ, ಅದನೊಂದೆಡೆಗೆ ತಂದು ಬಟ್ಟಗಾಣದಲ್ಲಿಕ್ಕಿ ಹಿಳಿವೆನಯ್ಯಾ. ಹಿಳಿದ ರಸದ ಕಂಪ ಕೊಡುವ ಒಡೆಯ ನೀನೆ, ಕಪಿಲಸಿದ್ಧಮ್ಲನಾಥಯ್ಯಾ.
--------------
ಸಿದ್ಧರಾಮೇಶ್ವರ
ಇನ್ನಷ್ಟು ... -->