ಅಥವಾ

ಒಟ್ಟು 155 ಕಡೆಗಳಲ್ಲಿ , 52 ವಚನಕಾರರು , 141 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬ್ರಹ್ಮಪಾಶ, ವಿಷ್ಣುಮಾಯೆ ಎಂಬ ಬಲೆಯ ಬೀಸಿ, ಹೊನ್ನು ಹೆಣ್ಣು ಮಣ್ಣು ತೋರಿ, ಮುಕ್ಕಣ್ಣನಾಡಿದ ಬೇಂಟೆಯ. ಆಸೆಯೆಂಬ ಕುಟುಕನಿಕ್ಕಿ, ಹೇಸದೆ ಕೊಂದೆಯಲ್ಲಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಚಿನ್ನ ವಿಶೇಷ ಮಣ್ಣು ಅಧಮವೆಂದಡೆ, ಅದು ನಿಂದು ಕರಗುವುದಕ್ಕೆ ಮಣ್ಣಿನ ಕೋವೆಯೆ ಮನೆಯಾಯಿತ್ತು. ಇಷ್ಟವನರಿವ ವಸ್ತುವ ನೆಮ್ಮುವುದಕ್ಕೆ ಇದೇ ದೃಷ್ಟ, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ನಿಂದಡೆ; ಹೊನ್ನು ಹೆಣ್ಣು ಮಣ್ಣು ಹಿಡಿದು ನೆಟ್ಟನೆ ಭಕ್ತನಾಗಿ ನಿಲ್ಲಬೇಕು. ಸುಳಿದಡೆ; ಹೊನ್ನು ಹೆಣ್ಣು ಮಣ್ಣು ಬಿಟ್ಟು ನೆಟ್ಟನೆ ಜಂಗಮವಾಗಿ ಸುಳಿಯಬೇಕು. ನಿಂದು ಭಕ್ತನಲ್ಲದ, ಸುಳಿದು ಜಂಗಮವಲ್ಲದ ಉಭಯಭ್ರಷ್ಟರನೇನೆಂಬೆ ಗುಹೇಶ್ವರಯ್ಯಾ ?
--------------
ಅಲ್ಲಮಪ್ರಭುದೇವರು
ಮಣ್ಣು ದೇಹ, ಹೊನ್ನು ಪ್ರಾಣ, ಹೆಣ್ಣು ಸಕಲಪ್ರಪಂಚು. ಈ ಮೂರರೊಳಗೆ ಒಂದ ಬಿಟ್ಟೊಂದ ಹಿಡಿದೆಹೆನೆಂದಡೆ, ಹಿಂಗಲಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಕಾಯವೆಂಬ ವನಿತೆಗೆ ಆತ್ಮನೆಂಬ ಪುರುಷನು ನೋಡಾ. ಈ ದೇಹದ ಆತ್ಮನ ಸಂಪರ್ಕದಿಂದ ಹುಟ್ಟಿದ ಸಕಲ ಕರಣೇಂದ್ರಿಯಂಗಳೆ ಮಕ್ಕಳು ನೋಡಾ. ಇದೇ ಸಂಸಾರವೆಂಬುದನರಿಯದೆ ಬಹಿರಂಗದಲ್ಲಿ, ನಾನು ಹೊನ್ನು ಹೆಣ್ಣು ಮಣ್ಣು ಬಿಟ್ಟು ವಿರಕ್ತನಾದೆನೆಂಬ ಅಜಾÕನಿಯ ಪರಿಯ ನೋಡಾ. ಇದು ವಿರಕ್ತಿಯೇ? ಅಲ್ಲ. ದೇಹೇಂದ್ರಿಯ ಮನಃಪ್ರಾಣಾದಿಗಳ ಮಹದಲ್ಲಿ ಒಡಗೂಡಿದಾತನೇ ಪರಮ ವಿರಕ್ತನು. ಆತಂಗೆ ನಮೋ ನಮೋಯೆಂಬೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಹೊನ್ನು ಪ್ರಾಣನಾಯಕ, ಹೆಣ್ಣು ಜೀವರತ್ನ, ಮಣ್ಣು ಮೈಸಿರಿಯ ಕೇಡು. ಈ ಮೂರು, ಮಹಾಲಿಂಗ ಚೆನ್ನರಾಮಯ್ಯಂಗೆ ಸಲ್ಲಲಿತವಲ್ಲ.
--------------
ಮೈದುನ ರಾಮಯ್ಯ
ಹೊನ್ನು ಸಂಸಾರವಲ್ಲ, ಹೆಣ್ಣು ಸಂಸಾರವಲ್ಲ, ಮಣ್ಣು ಸಂಸಾರವಲ್ಲ, ಈ ಮೂರರ ಮೇಲಣ ಮೋಹವೆರಸಿದ ಮನವು ಸಂಸಾರ ನೋಡಾ ! ಆ ಮನವನು ಸಂಸಾರ ಮೋಹವನು ಬೇರ್ಪಡಿಸಿ, ತನ್ನ ಕೂಡಿ ನಡೆವ ಗತಿಮತಿಗಳನಾರನು ಕಾಣೆನಯ್ಯಾ ನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಹಣ್ಣ ಹಿಡಿದ ಬಾಲಕಂಗೆ ಬೆಲ್ಲವ ಕೊಟ್ಟೇನು ಹಣ್ಣ ತಾ ಎಂಬಂತೆ, ಮಣ್ಣು ಮೂರನು ಹಿಡಿದ ಭಕ್ತಂಗೆ ಮುಕ್ಕಣ್ಣನ ಪದವಿ ಕೊಟ್ಟೇವೆಂಬ ತೆರನಂತೆ, ಗುರು-ಲಿಂಗ-ಜಂಗಮರು ಬೇಡುವರಲ್ಲದೆ, ತಮ್ಮಿಚ್ಛೆಗೆ ಕೈಯಾನುವರೆ ಕಪಿಲಸಿದ್ಧಮಲ್ಲಿಕಾರ್ಜುನಾ?
--------------
ಸಿದ್ಧರಾಮೇಶ್ವರ
ಮಣ್ಣು ಹಿಡಿದವರೆಲ್ಲರೂ ಬ್ರಹ್ಮನ ಸೃಷ್ಟಿಗೊಳಗಾದರು. ಹೊನ್ನ ಹಿಡಿದವರೆಲ್ಲರೂ ವಿಷ್ಣುವಿನ ಸ್ಥಿತಿಗೊಳಗಾದರು. ಹೆಣ್ಣು ಹಿಡಿದವರೆಲ್ಲರೂ ರುದ್ರನ ಸಂಹಾರಕ್ಕೊಳಗಾದರು. [ಮ]ಣ್ಣು ಹೊನ್ನು[ಹೆ]ಣ್ಣ ಬಿಟ್ಟು ಲಿಂಗಾಂಗ ಸಂಯೋಗವರಿಯದೆ ಸದಾಚಾರದಲ್ಲಿ ತಿರಿದುಂಡು ಆತ್ಮಸುಖಿಯಾದವರೆಲ್ಲರೂ ಫಲಭೋಗಕ್ಕೊಳಗಾದರು. ನಾನು ಮೂರ ಬಿಟ್ಟು ಆರ ಕಂಡು ಮೂದೇವರ ಗೆಲಿದೆ. ಆರ ಬಿಟ್ಟು ಮೂರ ಕಂಡು ಮನ ಮುಳುಗಿ ಮೂರೊಂದು ಪದವ ದಾಂಟಿ ಶಿವನೊಳಗಾದೆನಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಶಿವಶಿವಾ, ಈ ಮಾಯಾಸಂಸಾರಯುಕ್ತವಾದ ದೇಹದ ಸುಖ ಹೇಳಲಂಜುವೆ. ಬಲ್ಲರೆ ಹೇಳಿರಿ, ಅರಿಯದಿದ್ದರೆ ಕೇಳಿರಿ. ಈ ದೇಹದ ವಿಸ್ತಾರ ಪೇಳ್ವೆ, ಎಲೆ ಮರುಳ ಮಾನವರಿರಾ, ಲಾಲಿಸಿ ಕೇಳಿರಿ, ಎಲುವಿನ ಕಂಬ, ಎಲುವಿನ ತೊಲೆಗಳು, ಸಂದೆಲವುಗಳೆ ಬಿಗಿ ಮೊಳೆಗಳು, ಕರುಳಜಾಳಿಗೆ ಬಿಗಿಜಂತಿಗಳು, ಬರುಕಿ ಎಲವುಗಳೆ ಜಂತಿಗಳು, ಬೆರಳೆಲವುಗಳೆ ಚಿಲಿಕೆಗಳು. ಇಂತೀ ಗೃಹಕ್ಕೆ ಮಾಂಸದ ಮೇಲುಮುದ್ದೆಗಳು, ರಕ್ತದ ಸಾರಣೆಗಳು, ಮಜ್ಜದ ಮಡುಗಳು, ಕೀವಿನ ಕುಣಿಗಳು, ಪಿತ್ತದ ಕೊಂಡಗಳು, ಶೋಣಿತದ ಕಾವಲಿಗಳು, ಮೂತ್ರದ ಹಳ್ಳಗಳು, ಅಮೇಧ್ಯದ ಹುತ್ತಗಳು, ಹುಳುವಿನ ಡೋಣಿಗಳು, ಜಂತಿನ ಬಣವೆಗಳು-ಇಂತಪ್ಪ ಮನಗೆ ಎಂಟು ಗವಾಕ್ಷಗಳು. ಬಾಯಿ ಎಂಬುದೊಂದು ದೊಡ್ಡ ದರವಾಜು. ಇಂತೀ ದುರಾಚಾರಯುಕ್ತವಾದ ದೇಹವೆಂಬ ಗೃಹಕ್ಕೆ ಮೂವರು ಕರ್ತೃಗಳಾಗಿಹರು. ಅವರು ಆರಾರೆಂದಡೆ: ಹೊನ್ನೊಂದು ಭೂತ, ಹೆಣ್ಣೊಂದು ಭೂತ, ಮಣ್ಣೊಂದು ಭೂತ. ಇಂತೀ ತ್ರಿವಿಧ ಭೂತಸ್ವರೂಪರಾದ ಬ್ರಹ್ಮ ವಿಷ್ಣು ರುದ್ರರೆಂಬ ತ್ರಿವಿಧದೇವತೆಗಳು. ಅದೆಂತೆಂದಡೆ: ಹೊನ್ನು ರುದ್ರನಹಂಗು, ಹೆಣ್ಣು ವಿಷ್ಣುವಿನಹಂಗು, ಮಣ್ಣು ಬ್ರಹ್ಮನಹಂಗು, ಇಂತಪ್ಪ ತ್ರಿಮೂರ್ತಿಗಳ ಹಂಗಿನಿಂದಾದ ದೇಹವು ಮಿಥೆಯೆಂದು ತಿಳಿದು ವಿಸರ್ಜಿಸಲರಿಯದೆ, ಆ ಅನಿತ್ಯದೇಹದ ಸುಖವನು ಮೆಚ್ಚಿ ಮರುಳಾಗಿ, ಬಿಡಲಾರದೆ, ಈ ಹೇಸಿಕಿ ಹೊಲೆಸಂಸಾರದಲ್ಲಿ ಶಿಲ್ಕಿ ಮಲತ್ರಯದಾಶೆಗೆ ಹೊಡದಾಡಿ ಹೊತ್ತುಗಳೆದು ಸತ್ತುಹೋಗುವ ಕತ್ತೆಗಳಿಗಿನ್ನೆತ್ತಣ ಮುಕ್ತಿ ಹೇಳಾ ! ಮುಂದೆ ಹೊಲೆಮಾದಿಗರ ಮನೆಯಲ್ಲಿ ಶುನಿ ಶೂಕರ ಕುಕ್ಕುಟನ ಬಸುರಲ್ಲಿ ಹುಟ್ಟಿಸದೆ ಬಿಡನೆಂದಾತ ನಿಮ್ಮ ಶರಣ ವೀರಾದ್ಥಿವೀರ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಮಣ್ಣು ಹೊನ್ನು ಹೆಣ್ಣೆಂಬ ತ್ರಿಭಂಗಿಯಲ್ಲಿ ಭಂಗಿತರಾಗಿ, ಆಸೆಯೆಂಬ ಮಧುಪಾನದಿಂದ ಉಕ್ಕಲಿತವಿಲ್ಲದೆ, ವಸ್ತುವ ಮುಟ್ಟುವದಕ್ಕೆ ದೃಷ್ಟವಿಲ್ಲದೆ, ಕಷ್ಟದ ಮರವೆಯಲ್ಲಿ, ದೃಷ್ಟದ ಸರಾಪಾನವ ಕೊಂಡು ಮತ್ತರಾಗುತ್ತ, ಇಷ್ಟದ ದೃಷ್ಟದ ಚಿತ್ತ ಮತ್ತುಂಟೆ ? ಧರ್ಮೇಶ್ವರಲಿಂಗವ ಮುಟ್ಟದೆ ಇತ್ತಲೆ ಉಳಿಯಿತ್ತು.
--------------
ಹೆಂಡದ ಮಾರಯ್ಯ
ಹೊನ್ನು ಹೆಣ್ಣು ಮಣ್ಣೆಂಬ ತ್ರಿವಿಧವನಳಿದಲ್ಲದೆ ಭವ ಹಿಂಗದೆಂಬರು ಬ್ಥಿನ್ನ ಭಾವದಜ್ಞಾನಕಲಾತ್ಮರು. ಅವೇನು ತಮ್ಮ ಸಂಬಂಧವೆ? ಸಂಬಂಧವಲ್ಲ. ತಮ್ಮ ಸಂಬಂಧವಾದ ಮಲತ್ರಯವ ಪೇಳ್ವೆ. ತನುವೇ ಮಣ್ಣು, ಮನವೇ ಹೆಣ್ಣು, ಆತ್ಮವೇ ಹೊನ್ನು. ಇಂತೀ ಹೊನ್ನು ಹೆಣ್ಣು ಮಣ್ಣೆಂಬ ತ್ರಿವಿಧವನೊಳಗಿಟ್ಟುಕೊಂಡು ಬಾಹ್ಯದ ಮಲತ್ರಯಂಗಳ ವಿಸರ್ಜಿಸಿ ಭವಹಿಂಗಿಸಬೇಕೆಂದು ಗುಡ್ಡ ಗಂಹರವ ಸೇರುವರು. ಅವರಿಗೆ ಎಂದಿಗೂ ಭವಹಿಂಗದು. ಮತ್ತೆಂತೆಂದೊಡೆ: ಸುಜ್ಞಾನೋದಯವಾಗಿ ಶ್ರೀಗುರುಕಾರುಣ್ಯವ ಹಡದು ಅಂಗದ ಮೇಲೆ ಇಷ್ಟಲಿಂಗವ ಸ್ವಾಯತವ ಮಾಡಿಕೊಂಡು ಆ ಇಷ್ಟಬ್ರಹ್ಮವನು ತನುಮನಧನದಲ್ಲಿ ಸ್ವಾಯತವ ಮಾಡಿ, ಆ ತ್ರಿವಿಧ ಲಿಂಗದ ಸತ್ಕ್ರಿಯಾ ಸಮ್ಯಜ್ಞಾನ ಸ್ವಾನುಭಾವದಾಚರಣೆಯಿಂದ ಆ ತನುತ್ರಯದ ಪ್ರಕೃತಿಯನಳಿದು, ಆ ಮಾಯಾಮಲಸಂಬಂಧವೆಂಬ ಸತಿಸುತರು ಮಾತಾಪಿತೃಗಳ ಸಂಬಂಧವಿಡಿದು, ಆಚರಿಸಿದಡೆಯು ಅದಕ್ಕೇನು ಚಿಂತೆಯಿಲ್ಲ, ಇಷ್ಟುಳ್ಳವರಿಗೆ ಭವ ಹಿಂಗಿ ಮುಕ್ತಿಯಾಗುವದು. ಪ್ರಮಥಗಣಂಗಳ ಸಮ್ಮತ ಶಿವಜ್ಞಾನಿಗಳು ಮೆಚ್ಚುವರು. ಅದೇನು ಕಾರಣವೆಂದಡೆ: ಈ ಮಲಸಂಬಂಧ ಜೀವಾತ್ಮರೆಲ್ಲ ದೇಹ ಇರುವ ಪರ್ಯಂತರವಲ್ಲದೆ ಲಿಂಗಾಂಗಿಗೆ ಇದ್ದೂ ಇಲ್ಲದಂತೆ ನೋಡೆಂದನಯ್ಯಾ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಒಳಗಣ ಕಲ್ಲು, ಮೇಲಣ ಮರ, ನಡುವಣ ಮಣ್ಣು, ಹೊಡೆವವನಂಗ ಹದನರಿದಡೆ ಕುಂಭ. ಇಂತೀ ಮೂವರೆದೆಯನರಿ, ಆಮಳ ಸಂದಿಗೆ ಒಡಗೂಡದಿರು. ಸಾಕು ಬಿಡು, ತೂತಿನ ಹಾದಿಯ ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಜಲದಲ್ಲಿ ಕದಡಿ ಎಯ್ದುವ ಮಣ್ಣಿಂಗೆ ಜಲವೆ ಕಾಲಾದಂತೆ, ಆ ಜಲ ನಿಲೆ ಮಣ್ಣು ಮುನ್ನಿನ ಅಂಗವ ಬೆರಸಿದಂತೆ. ಆ ಕುರುಹಿಂಗೆ ಅರಿವೆ ಆಶ್ರಯವಾಗಿ, ಆ ಅರಿವಿಂಗೆ ಕರುಹಿನ ವಾಸ ಅವಗವಿಸಿದ ಮತ್ತೆ, ಬೇರೊಂದೆಡೆಯಿಲ್ಲ, ಕಾಲಾಂತಕ ಬ್ಥೀಮೇಶ್ವರಲಿಂಗವುತಾನೆ.
--------------
ಡಕ್ಕೆಯ ಬೊಮ್ಮಣ್ಣ
ಹೆಣ್ಣಿನೊಳಗೆ ಕಣ್ಣುಗೊಂಡು ಹುಟ್ಟಿ, ಮಣ್ಣು ಹೊಯ್ದುಕೊಂಬ ಅಣ್ಣಗಳು ನೀವು ಕೇಳಿರೆ. ಈ ಬಣ್ಣದ ಪರಿಯಾಯಕ್ಕೆ ಕಣ್ಣುಗೆಟ್ಟು ಬಿದ್ದಿರಲ್ಲಾ. ಈ ಹೆಣ್ಣಿನ ಸಂಗ ನಿಮಗೇತಕಣ್ಣಾ. ತನ್ನಲ್ಲಿ ಹೆಣ್ಣುಂಟು, ತನ್ನಲ್ಲಿ ಹೊನ್ನುಂಟು, ತನ್ನಲ್ಲಿ ಮಣ್ಣುಂಟು. ಇಂತಿವ ನಿಮ್ಮಲ್ಲಿ ನೀವು ತಿಳಿದು ನೋಡಲಿಕ್ಕೆ, ತನ್ನಲ್ಲಿ ತಾನೆ ಕಾಣಬಹುದು. ತನ್ನ ತಾನರಿಲ್ಲದೆ ಇದಿರನರಿಯಬಾರದು. ಇದಿರನರಿದಲ್ಲದೆ ಪರವನರಿಯಬಾರದು. ಪರವನರಿದಲ್ಲದೆ ಸ್ವಯವನರಿಯಬಾರದು. ಸ್ವಯವನರಿದಲ್ಲದೆ ಅರಿವು ತಲೆದೋರದು ಅರಿವು ತಲೆದೋರಿದಲ್ಲದೆ ಕುರುಹು ನಷ್ಟವಾಗದು. ಕುರುಹು ನಷ್ಟವಾದಲ್ಲದೆ ಮಾಯೆ ಹಿಂಗದು. ಮಾಯ ಹಿಂಗಿದಲ್ಲದೆ ಮದವಳಿಯದು. ಮದವಳಿದಲ್ಲದೆ ಮತ್ಸರ ಹೆರೆಸಾರದು. ಮತ್ಸರ ಹೆರೆಸಾರಿದಲ್ಲದೆ ಮಹಾಘನವಳವಡದು. ಮಹಾಘನವಳವಟ್ಟಲ್ಲದೆ ಮಹಾಲಿಂಗವ ಕಾಣಬಾರದು. ಮಹಾಲಿಂಗವ ಕಂಡಲ್ಲದೆ ಮಹಾಪ್ರಕಾಶವ ಕಾಣಬಾರದು. ಮಹಾಪ್ರಕಾಶವ ಕಂಡಲ್ಲದೆ ನಿತ್ಯವ ಕಾಣಬಾರದು. ನಿತ್ಯವ ಕಂಡಲ್ಲದೆ ನಿಜವ ಕಾಣಬಾರದು. ನಿಜವ ಕಂಡಲ್ಲದೆ ನಿರ್ಣಯವನರಿಯಬಾರದು. ನಿರ್ಣಯವನರಿದಲ್ಲದೆ ಗುರುಲಿಂಗಜಂಗಮವನರಿಯಬಾರದು. ಗುರುಲಿಂಗಜಂಗಮವನರಿದಲ್ಲದೆ ಪಾದತೀರ್ಥಪ್ರಸಾದವನರಿಯಬಾರದು. ಪಾದತೀರ್ಥಪ್ರಸಾದವನರಿದಲ್ಲದೆ ಸಹಜ ಶರಣರ ಸಂಗವನರಿಯಬಾರದು. ಇಂತಪ್ಪ ಶರಣರ ಸಂಗವನರಿದಲ್ಲದೆ ಸರ್ವನಿರ್ಣಯವನರಿಯಬಾರದು. ಸರ್ವನಿರ್ಣಯವನರಿದಲ್ಲದೆ ಸಹಜಸದ್ಭಕ್ತರು ಮೆಚ್ಚರು. ಸಹಜಸದ್ಭಕ್ತರು ಕೂಡಿ ನಡೆಯಬಲ್ಲಡೆ ಇದೇ ಸುಖವು. ಸಂಗದೊಳಗೆ ಶರಣರ ಸಂಗವೆ ಸಂಗವು ಕೇಳಿರಯ್ಯಾ. ಇಂತು ಸಾಯದೆ ನೋಯದೆ ಸ್ವಯವನರಿದು, ಸದ್ಭಕ್ತರ ಸಂಗವ ಮಾಡಬಲ್ಲಾತನೆ ಲಿಂಗೈಕ್ಯನು. ಅವ ತಾನೆ ಘನಲಿಂಗವು. ಹೀಂಗಲ್ಲದೆ ಹಿಂದೆ ಮೆಟ್ಟಿಹೋಹ ಸಂದೇಹಿ ಮಾನವರೆಲ್ಲರೂ ಜಗದ ಜಂಗುಳಿಗಳ ದಂದುಗದೊಳಗಾಗಿಪ್ಪರು. ಆ ಗುಣವ ಬಿಟ್ಟು, ಶರಣರ ಸಂಗ ಸಹಜವೆಂದರಿದು, ನಿಜವಾಗಿ ಬಂದಬಳಿಕ ಪೂರ್ವಭಾಗೆಗೆ ಬಾರೆನೆಂಬ ನಿಶ್ಚಯದಿಂ ಪರಮ ಪ್ರಸಾದವನರಿದು, ಜಗದ ಹಂಗ ಹರಿದ ಶರಣನು ಎನ್ನ ತಂದೆಯಾಗಿಪ್ಪನು ಕಾಣಾ, ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ. ಈ ಬಂದ ಪರಿಯಾಯವರಿದು, ತಾಮಸವ ಹಿಂಗಿ, ಸಹಜ ನಿಜನಿತ್ಯವನರಿದು ಹೋದ ಶರಣರ ನಿಲವಿನ ಪರಿಯ, ನೀವೆ ಬಲ್ಲಿರಲ್ಲದೆ ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ
--------------
ಮರುಳಶಂಕರದೇವ
ಇನ್ನಷ್ಟು ... -->