ಅಥವಾ

ಒಟ್ಟು 58 ಕಡೆಗಳಲ್ಲಿ , 20 ವಚನಕಾರರು , 47 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಖಂಡ ಪರಿಪೂರ್ಣ ನಿತ್ಯನಿರಂಜನ ನಿರವಯ ಲಿಂಗದೊಳು ಸಮರಸೈಕ್ಯವನೈದಿ, ಘನಕ್ಕೆ ಘನ ವೇದ್ಯವಾದ ಬಳಿಕ ಅರಿವೆಂಬುದಿಲ್ಲ, ಮರವೆಂಬುದಿಲ್ಲ, ಕೂಡಿದೆನೆಂಬುದಿಲ್ಲ, ಅಗಲಿದೆನೆಂಬುದಿಲ್ಲ, ಕಾಣೆನೆಂಬುದಿಲ್ಲ, ಕಂಡೆನೆಂಬುದಿಲ್ಲ, ಸಂಗ ನಿಸ್ಸಂಗವೆಂಬುದಿಲ್ಲ, ಶೂನ್ಯ ನಿಶ್ಯೂನ್ಯವೆಂಬ ಭಾವದ ಭ್ರಮೆ ಮುನ್ನಿಲ್ಲ. ಇಂತಿವೇನುವೇನುವಿಲ್ಲದೆ ಶಬ್ದಮುಗ್ಧನಾಗಿ, ಭ್ರಮರದೊಳಡಗಿದ ಕೀಟದಂತೆ ಉರಿಯೊಳಡಗಿದ ಕರ್ಪುರದಂತೆ ಕ್ಷೀರದೊಳು ಬೆರೆದ ಪಯದಂತೆ ಅಂಬುದ್ಥಿಯೊಳಡಗಿದ ವಾರಿಕಲ್ಲಿನಂತೆ ನಾ ನೀ ಎಂಬೆರಡಳಿದು, ತಾನೆ ತಾನಾದ ಸುಖವ ಮಹಾಜ್ಞಾನಿಗಳು ಬಲ್ಲರಲ್ಲದೆ ಅಜ್ಞಾನಿಗಳೆತ್ತ ಬಲ್ಲರಯ್ಯಾ, ಪರಮಪಂಚಾಕ್ಷರಮೂರ್ತಿ ಶಾಂತಮಲ್ಲಿಕಾರ್ಜುನಯ್ಯಾ ?
--------------
ಮಡಿವಾಳ ಮಾಚಿದೇವರ ಸಮಯಾಚಾರದ ಮಲ್ಲಿಕಾರ್ಜುನ
ಅನುಭವವೆಂಬುದದು ಅನುಭಾವಿಕಗಲ್ಲದೆ ಹೊತ್ತಗೆಯ್ಲಲ್ಲ ನೋಡಾ ಮಾನವಾ. ರತ್ನಂಗಳು ಸಮುದ್ರದಲ್ಲಲ್ಲದೆ ಕೀಳು ಕುಲ್ಯಾಗಳ್ಲಲ್ಲ ನೋಡಾ, ಮಾನವಾ. ನವಮಂತ್ರಂಗಳ ಮರ್ಮವದು ಗುರುಮುಖದಲ್ಲಲ್ಲದೆ, ಬರಿಯ ಪುರಾಣಂಗಳ್ಲಲ್ಲ ನೋಡಾ, ಮಾನವಾ. ಇಂನ ಪ್ರಮಥರು ಮುಂದೆ ಬಂದಹರೆಂಬ ಭ್ರಮೆ ಬೇಡ ನೋಡಾ, ಮಾನವಾ. ನೀನಂಂಗೆನ್ನದೆ ಕಪಿಲಸಿದ್ಧಮಲ್ಲಿಕಾರ್ಜುನನ ನಂಬು ನೋಡಾ, ಮಾನವಾ.
--------------
ಸಿದ್ಧರಾಮೇಶ್ವರ
ಹೃದಯಕಮಲ ಮಧ್ಯದ ಶುದ್ಧಾತ್ಮನನು ಸಿದ್ಧ ವಿದ್ಯಾಧರ ನಿರ್ದೇಹಿಗಳು ಬಲ್ಲರೆ ? ಕಾಯದ ಕೈಯಲಿ ಕೊಟ್ಟುದು ಮಾಯಾಮುಖದರ್ಪಿತ. ಇದಾವ ಮುಖವೆಂದರಿಯದೆ ಭ್ರಮೆ [ಗೊಂಡು]ಹೋದರು. ಕೊಂಬ ಕೊಡುವ ಎಡೆಯನಿಂಬಿನ ಗ್ರಾಹಕ ಬಲ್ಲ. ಕೂಡಲಚೆನ್ನಸಂಗನಲ್ಲಿ ಬಸವಣ್ಣಪ್ರಭು ಬಲ್ಲ.
--------------
ಚನ್ನಬಸವಣ್ಣ
ಭಕ್ತಂಗೆ ಸ್ಪರ್ಶನ ವಿಷಯವಳಿದು ಮಾಹೇಶ್ವರಂಗೆ ಅಪ್ಪು ವಿಷಯವಳಿದು ಪ್ರಸಾದಿಗೆ ರುಚಿ ವಿಷಯವಳಿದು ಪ್ರಾಣಲಿಂಗಿಗೆ ಉಭಯದ ಭೇದ ವಿಷಯವಳಿದು ಶರಣಂಗೆ ಸುಖದುಃಖ ವಂದನೆ ನಿಂದೆ ಅಹಂಕಾರ ಭ್ರಮೆ ವಿಷಯವಳಿದು ಐಕ್ಯಂಗೆ ಇಂತೀ ಐದರ ಭೇದದಲ್ಲಿ ಹಿಂದಣ ಮುಟ್ಟು ಮುಂದಕ್ಕೆ ತಲೆದೋರದೆ ಮುಂದಣ ಹಿಂದಣ ಸಂದೇಹದ ವಿಷಯ ನಿಂದು ಕರ್ಪುರವುಳ್ಳನ್ನಕ್ಕ ಉರಿಯ ಭೇದ ಉರಿವುಳ್ಳನ್ನಕ್ಕ ಕರ್ಪುರದಂಗ. ಉಭಯ ನಿರಿಯಾಣವಾದಲ್ಲಿ ಐಕ್ಯಸ್ಥಲ ನಾಮನಿರ್ಲೇಪ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.
--------------
ಪ್ರಸಾದಿ ಭೋಗಣ್ಣ
ಎರವಿನ ಬದುಕು ಸ್ಥಿರವಲ್ಲ. ಅಭ್ರಛಾಯದಂತೆ ನಿಮುಷದಲ್ಲಿ ತೋರಿಯಡಗಲು, ಈ ಸಂಸಾರದಲ್ಲೇನು ಲೇಸು ಕಂಡು ನಚ್ಚುವೆ? ನಚ್ಚದಿರು. ನಚ್ಚಿದವರ ಕೆಟ್ಟ ಕೇಡಿಂಗೆ ಕಡೆಯಿಲ್ಲ. ಬರಿಯ ಬಯಲ ಭ್ರಮೆ ಸಟೆಯ ಸಂಸಾರ. ಇದರಲ್ಲೇನೂ ಲೇಸಿಲ್ಲವೆಂದರಿದು ದೃಢವಿಡಿ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶ್ರೀಚರಣವನು.
--------------
ಸ್ವತಂತ್ರ ಸಿದ್ಧಲಿಂಗ
ಕಾಯದ ಒಲವರದಲ್ಲಿ ನಿಲುವ ಚಿತ್ತ, ಕಂಗಳ ಗೊತ್ತಿನಲ್ಲಿ ಕಟ್ಟುವಡೆದು ದೃಷ್ಟದ ಇಷ್ಟದಲ್ಲಿ ಕಂಗಳ ಸೂತಕ ಹಿಂಗಿ ಮನದ ಸೂತಕ ಹರಿದು ಗುಹೇಶ್ವರನೆಂಬ ಭಾವದ ಭ್ರಮೆ ಅಡಗಬೇಕು.
--------------
ಅಲ್ಲಮಪ್ರಭುದೇವರು
ಕ್ರಮವರಿದು ಭ್ರಮೆ ತಿಳಿದು ಅಮಳಸಂಯೋಗದಲ್ಲಿ ಸಮನಿಸೂದು, `ಏಕ ಏವ ನ ದ್ವಿತೀಯಃ' ಎಂಬುದನರಿದು ಸಮನಿಸೂದು, ಶಿವಾತ್ಮಕೋ ಲಿಂಗದೇಹೀ ಅಂಗಾಚಾರೇಣ ಲೌಕಿಕಃ ಸರ್ವಂ ಲಿಂಗಮಯಂ ಪ್ರೋಕ್ತಂ ಲಿಂಗೇನ ಸಹ ವರ್ತತೇ ಇದು ಕಾರಣ, ಕೂಡಲಚೆನ್ನಸಂಗನಲ್ಲಿ ಸಹಭೋಜನ ಸಮನಿಸೂದು.
--------------
ಚನ್ನಬಸವಣ್ಣ
ಒಪ್ಪದ ಕಪ್ಪೆ ಸರ್ಪನ ನುಂಗಿತ್ತ ಕಂಡೆ. ತುಪ್ಪುಳು ಬಾರದ ಮರಿ ಹೆತ್ತ ತಾಯ ನುಂಗಿತ್ತ ಕಂಡೆ. ಕೊಂಬಿನ ಮೇಲಣ ಕೋಡಗ ಕೊಂಬ ನುಂಗಿತ್ತ ನೋಡಾ. ಬೀಸಿದ ಬಲೆಯ ಮತ್ಸ್ಯ ಗ್ರಾಸವ ಕೊಂಡಿತ್ತು ನೋಡಾ. ಅರಿದೆಹೆನೆಂಬ ಅರಿವ, ಮರೆದೆಹೆನೆಂಬ ಮರವೆಯ ಕಳೆದುಳಿದ ಪರಿಯಿನ್ನೆಂತೊ ? ಅರಿವುದೆ ಮರವೆ, ಮರೆವುದೆ ಅರಿವು. ಅರಿವು ಮರವೆ ಉಳ್ಳನ್ನಕ್ಕ ಕುರಿತು ಮಾಡುವುದೇನು ? ಕುರುಹಿಂಗೆ ನಷ್ಟ, ಆ ಕುರುಹಿನಲ್ಲಿ ಅರಿದೆಹೆನೆಂಬ ಅರಿವು ತಾನೆ ಭ್ರಮೆ. ಆರೆಂಬುದ ತಿಳಿದಲ್ಲಿ, ಕೂಡಿದ ಕೂಟಕ್ಕೆ ಒಳಗಲ್ಲ ಹೊರಗಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಆನು, ನೀನು, ಅರಿದೆ ಮರೆದೆ, ಅಳಿದೆನುಳಿದೆನೆಂಬ ಸಂಶಯ ಭ್ರಮೆ, ಅತತ್ವ ತತ್ವವಿವೇಕಭ್ರಮೆ, ಮೂಲ ಸ್ಥೂಲ ಸೂಕ್ಷ್ಮ ವಿಪರೀತ ಭ್ರಮೆ, ಪುಣ್ಯಪಾಪ ಸ್ವರ್ಗ ನರಕ ಬಂಧಮೋಕ್ಷ ಪ್ರವರ್ತಕ ನಿವರ್ತಕ ಆದಿಯಾದ ಸಪ್ತಕರ್ಮ ಬಂಧಭ್ರಮೆ, ಹುಸಿಜೀವ ಪರಮನೈಕ್ಯಸಂಧಾನ ಭ್ರಮೆ, ಯೋಗದಾಸೆ ಸಿಲುಕುಭ್ರಮೆ, ಅಂತರ್ಮುಖಭ್ರಮೆ ಬಹಿರ್ಮುಖಭ್ರಮೆ, ಅನೃತಭ್ರಮೆ ಸತ್ಯಭ್ರಮೆ ನಿತ್ಯಭ್ರಮೆ, ವಾಗದ್ವೈತಭ್ರಮೆ, ಅದ್ವೈತಭ್ರಮೆ, ಮಂತ್ರಭ್ರಮೆ ತಂತ್ರಭ್ರಮೆ, ನಾಹಂ ಭ್ರಮೆ, ಕೋಹಂ ಭ್ರಮೆ, ಸೋಹಂ ಭ್ರಮೆ. ತತ್ವ ಸಕರಣವೇಷ್ಟಿತ ಜಗತ್ರಯವೆಲ್ಲಾ ಮಾಯಾಮಯ. ಕೂಡಲಚೆನ್ನಸಂಗಾ ನಿಮ್ಮ ಶರಣಂಗಾವ ಭ್ರಮೆಯೂ ಇಲ್ಲ.
--------------
ಚನ್ನಬಸವಣ್ಣ
ಮಾನಾಪಮಾನವೆಂಬುದು ಮನದ ಭ್ರಮೆ ನೋಡಯ್ಯಾ. ಮೇಲಕ್ಕೆ ಕರೆದಡೆ ಮಾನವೆಂಬುದೀ ಲೋಕ; ಮೂಗುವಟ್ಟಡೆ ಅಪಮಾನವೆಂಬುದೀ ಲೋಕ. ತಿರುಗುವ ಭೂಮಿಯೆಲ್ಲ ನಕಾರ ಪ್ರಣವವಾಯಿತ್ತು. ಏಕೈಕವಾದ ಭೂಮಿಯಲ್ಲಿ ಪೀಠವ ಕೊಟ್ಟು ಮನ್ನಿಸುವ ಅಣ್ಣಗಳ ಬಾಯಲ್ಲಿ ಹುಡಿಮಣ್ಣ ಹೊಯ್ಯದೆ ಮಾಬನೆ ಕಪಿಲಸಿದ್ಧಮಲ್ಲಿಕಾರ್ಜುನಾ?
--------------
ಸಿದ್ಧರಾಮೇಶ್ವರ
ವಾದ್ಯಕ್ಕೆ ಬಂಧವಲ್ಲದೆ ನಾದಕ್ಕೆ ಬಂಧವುಂಟೆ? ಅರಿವಿಂಗೆ ಬಂಧವಲ್ಲದೆ ಅರುಹಿಸಿಕೊಂಬವಂಗೆ ಬಂಧುವುಂಟೆ? ಆರಿದೆಹೆನೆಂಬ ಭ್ರಮೆ ಅರುಹಿಸಿಕೊಂಡಹೆನೆಂಬ ಕುರುಹು ಉಭಯ ನಾಸ್ತಿಯಾದಲ್ಲಿ ಬಾವಶುದ್ಧವಿಲ್ಲ. (ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ), ಮಾತುಳಂಗ ಮಧುಕೇಶ್ವರನು. || 84 ||
--------------
ದಾಸೋಹದ ಸಂಗಣ್ಣ
ಇದು ಜಗವ್ಯವಹಾರಣೆಯ ಧರ್ಮ, ಮುಂದಕ್ಕೆ ಐಕ್ಯಾನುಭಾವ. ಕಾಯ ಅಕಾಯದಲ್ಲಿ ಅಡಗಿ, ಜೀವ ನಿರ್ಜೀವದಲ್ಲಿ ಅಡಗಿ, ಭ್ರಮೆ ಸಂಚಾರವಿಲ್ಲದೆ, ಮಹಾಘನದಲ್ಲಿ ಸಂದು, ಉಭಯದ ಸಂದಿಲ್ಲದೆ ಬಂಕೇಶ್ವರಲಿಂಗದಲ್ಲಿ ಸಲೆ ಸಂದವನ ಒಲುಮೆ.
--------------
ಸುಂಕದ ಬಂಕಣ್ಣ
ಶಿಶು ತಾಯ ಮೊಲೆವಾಲನೊಸೆದುಂಡು ತೃಪ್ತನಾಗಿ ಹೆಸರ ಬೆಸಗೊಂಬಡದು ಉಪಮೆಗೆ ಸಾಧ್ಯವಿಲ್ಲಯ್ಯಾ. ಕಣ್ಣಾಲಿ ಕಪ್ಪ ನುಂಗಿ ಸಣ್ಣ ಬಣ್ಣಗಳುಡಿಗೆನಯಫ ಬಣ್ಣದೊಳಗಣ ಭ್ರಮೆ ಇನ್ನಾರಿಗಳವಡದು. ಬಣ್ಣ ಸಮುಚ್ಚಯವಾಗಿ ಬಣ್ಣ ಬಗೆಯನೆ ನುಂಗಿ ಗುಹೇಶ್ವರನೆಂಬ ನಿಲವ ನಿಜದ ನಿಷ್ಪತ್ತಿ ನುಂಗಿತ್ತು.
--------------
ಅಲ್ಲಮಪ್ರಭುದೇವರು
ತನು ಉಂಟೆಂದಡೆ ಪಾಶಬದ್ಧ, ಮನ ಉಂಟೆಂದಡೆ ಭವಕ್ಕೆ ಬೀಜ. ಅರಿವ ನುಡಿದು ಕೆಟ್ಟೆನೆಂದರೆ ಅದೇ ಅಜ್ಞಾನ. ಭಾವದಲ್ಲಿ ಸಿಲುಕಿದೆನೆಂಬ ಮಾತು ಬಯಲ ಭ್ರಮೆ ನೋಡಾ. ಒಮ್ಮೆ ಕಂಡೆ, ಒಮ್ಮೆ ಕಾಣೆ, ಒಮ್ಮೆ ಕೂಡಿದೆ, ಒಮ್ಮೆ ಅಗಲಿದೆ ಎಂದಡೆ ಕರ್ಮ ಬೆಂಬತ್ತಿ ಬಿಡದು. ನಿನ್ನೊಳಗೆ ನೀ ತಿಳಿದುನೋಡಲು ಭಿನ್ನವುಂಟೆ ? ಗುಹೇಶ್ವರಲಿಂಗವನರಿವಡೆ ನೀನೆಂದೇ ತಿಳಿದು ನೋಡಾ ಮರುಳೆ ?
--------------
ಅಲ್ಲಮಪ್ರಭುದೇವರು
ಕ್ರೀ ಜ್ಞಾನವೆಂಬ ಉಭಯವ ತಾವರಿಯದೆ, ಕಾಯಜೀವವೆಂಬ ಹೆಚ್ಚು ಕುಂದನರಿಯದೆ, ನಾನೀನೆಂಬ ಭಾವದ ಭ್ರಮೆ ಆರಿಗೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಇನ್ನಷ್ಟು ... -->