ಅಥವಾ

ಒಟ್ಟು 47 ಕಡೆಗಳಲ್ಲಿ , 20 ವಚನಕಾರರು , 41 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಯ್ಯ, ಶ್ರೀಗುರುಲಿಂಗಜಂಗಮ ಕರುಣ ಕಟಾಕ್ಷೆಯಿಂದ ಶ್ರುತಿ ಗುರು ಶ್ವಾನುಭಾವವಿಡಿದು ಹಿಡಿದಂಥ ಸನ್ಮಾರ್ಗಾಚಾರಕ್ರಿಯೆಗಳ ಅಪಮೃತ್ಯು ಬಂದು ತಟ್ಟಿ ಪ್ರಾಣತ್ಯಾಗವ ಮಾಡಿದಡು ಅಂಜಿ ಅಳುಕದೆ, ಪರಮ ಪತಿವ್ರತತ್ವದಿಂದ ಹಿಂದು ಮುಂದಣ ಪುಣ್ಯಪಾಪವನೆಣಿಸದೆ, ಇಂತು ಶ್ರೀಗುರುವಾಕ್ಯವ ನಿಜನೈಷ್ಠಯಿಂದರಿದು, ನಿಜವೀರಶೈವ ಸದ್ಭಕ್ತಾಚಾರಲಿಂಗಮುಖದಿಂದ ಬಂದ ಸ್ವಪಾಕವಾದಡು ಸರಿಯೆ, ಷಣ್ಮತದಿಂದ ಧನ-ಧಾನ್ಯರೂಪಿನಿಂದ ಬಂದ ಪದಾರ್ಥವಾದಡು ಸರಿಯೆ, ಭಕ್ತಾಶ್ರಯದಲ್ಲಿ ಸ್ವಪಾಕವ ಮಾಡಿ, ಸಂಬಂಧಾಚರಣೆಗಳಿಂದ ಪವಿತ್ರಸ್ವರೂಪ ಪಾದೋದಕ ಪ್ರಸಾದವೆನಿಸಿ, ನಿರ್ವಂಚಕತ್ವದಿಂದ ಸಂಚಲಚಿತ್ತವನಳಿದು, ಮಂತ್ರಸ್ಮರಣೆಯಿಂದ ಸರ್ವಾಚಾರ ಸಂಪತ್ತಿನಾಚರಣೆಯನೊಳಕೊಂಡು, ಸಮಸ್ತಲೋಕ ಪಾವನಮೂರ್ತಿ ನಿಷ್ಕಲ ಪರಶಿವಲಿಂಗಜಂಗಮಕ್ಕೆ ಕೊಟ್ಟುಕೊಂಬ ಸದ್ಭಕ್ತ ಜಂಗಮದ ಚರಣಕಮಲಧೂಳನವೆ ದ್ವಿತೀಯ ಕೈಲಾಸ ಶಿವಮಂದಿರವೆಂದು ಹಿಂದು-ಮುಂದಣ ಆಶೆ-ಆಮಿಷದ ಭ್ರಾಂತು-ಭ್ರಮೆಗಳನುಳಿದು, ಧ್ಯಾನ-ಮೌನ-ನೇಮ-ನಿತ್ಯ-ಸತ್ಯ-ಸದ್ಭಾವವೆಂಬ ಷಡ್ಗುಣೈಶ್ವರ ಸಂಪದವ ನಿಷ್ಕಲಪರತತ್ವಲಿಂಗದಿಂ ಪಡದು, ಆ ಲಿಂಗದೊಡನೆ ಭೋಗಿಸಿ, ನಿಷ್ಕಲ ಪರತತ್ವಮೂರ್ತಿ ತಾನಾದ ನಿಜಮೋಕ್ಷದಿರವೆ ಸದ್ಯೋನ್ಮುಕ್ತಿದೀಕ್ಷೆ. ಇಂತುಟೆಂದು ಶ್ರೀಗುರು ನಿಷ್ಕಳಂಕ ಚೆನ್ನಬಸವರಾಜೇಂದ್ರನು ನಿರ್ಲಜ್ಜ ಶಾಂತಲಿಂಗದೇಶಿಕೋತ್ತಮಂಗೆ ನಿರೂಪಮಂ ಕೊಡುತಿರ್ದರು ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಇಂದ್ರಿಯದ ಬಾಗಿಲಲ್ಲಿ ಮನವಿಪ್ಪುದು. ಮನದ ಮುಂಬಾಗಿಲಲ್ಲೇ ಭೋಗಲಿಂಗವಿದ್ದು, ಅದ್ಥಿಕಾರ ಲಯಹೊದ್ದದೆ ಸಕಲಭೋಗಂಗಳ ಭೋಗಿಸಿ ಪ್ರಸಾದವ ಕರಣಂಗಳಿಗೆ ಕೊಟ್ಟು ಅರುಹಿ ಎನ್ನ ಮನವ ತನ್ನತ್ತ ಸೆಳೆದು ಮರಹ ಮಾಣಿಸಿ ಕುರುಹಳಿದು ತೆರಹುಗೊಡದ ಸೌರಾಷ್ಟ್ರ ಸೋಮೇಶ್ವರಲಿಂಗವ ಕಂಡೆ.
--------------
ಆದಯ್ಯ
ರೂಪು ಕುರೂಪುಗಳನು, ಲಿಂಗ ನೋಡಿದಡೆ ನೋಡುವನು, ಲಿಂಗ ನೂಕಿದಡೆ ತಾ ನೂಕುವನು. ಶಬ್ದಾಪಶಬ್ದಂಗಳನು ಲಿಂಗ ಕೇಳಿದಡೆ ಕೇಳುವನು, ಲಿಂಗ ತಾ ನೂಕಿದಡೆ ನೂಕುವನು. ಸುರಸ ಕುರಸಂಗಳನು ಲಿಂಗ ಸವಿದಡೆ ಸವಿವನು, ಲಿಂಗ ನೂಕಿದಡೆ ತಾ ನೂಕುವನು. ಗಂಧ ದುರ್ಗಂಧಗಳನು ಲಿಂಗ ವಾಸಿಸಿದಡೆ ವಾಸಿಸುವ, ಲಿಂಗ ನೂಕಿದಡೆ ತಾ ನೂಕುವನು. ಮೃದು ಕಠಿಣ ಶೀತೋಷ್ಣಂಗಳನು ಲಿಂಗ ಸೋಂಕಿದಡೆ ಸೋಂಕುವನು. ಲಿಂಗ ನೂಕಿದಡೆ ತಾ ನೂಕುವನು. ಲಿಂಗಮಧ್ಯಪ್ರಸಾದಿಯಾದ ಕಾರಣ ಲಿಂಗದೊಡನೆ ಕೂಡಿ ಅರಿದು ಭೋಗಿಸಿ ಸುಖಿಸುವನು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ ನಿಮ್ಮ ಪ್ರಸಾದಿ.
--------------
ಸ್ವತಂತ್ರ ಸಿದ್ಧಲಿಂಗ
ಪ್ರಕಾಶದ್ವಾರ ಗಂಧದ್ವಾರ ಶಬ್ದದ್ವಾರವೆಂಬ ಅರುದ್ವಾರ ಕೂಡಿದ ಠಾವಿನಲ್ಲಿ, ನಾದ ಬಿಂದು ಕಲೆಯೆಂಬ ಸಿಂಹಾಸನದ ಮೇಲೆ ಮೂರ್ತಿಗೊಂಡು, ಶಬ್ದ ರೂಪು ಗಂಧಂಗಳ ಗ್ರಹಿಸುವಾತ ನೀನಲ್ಲದೆ ಮತ್ತಾರು ಹೇಳಾ? ಗಳದಲ್ಲಿ ನಿಂದು ಷಡುರಸ್ನಾನದ ರುಚಿಯ ಜಿಹ್ವೆಯಲ್ಲಿ ಸ್ವಾದಿಸುವಾತ ನೀನಲ್ಲದೆ ಮತ್ತಾರು ಹೇಳಾ? ಸರ್ವಾಂಗದಲ್ಲಿ ನಿಂದು, ತ್ವಗಿಂದ್ರಿಯ ಮುಖದಲ್ಲಿ ಸ್ಪರ್ಶನವ ತಳೆದುಕೊಂಬಾತ ನೀನಲ್ಲದೆ ಮತ್ತಾರು ಹೇಳಾ? ಮನವೆಂಬ ಮುಖದಲ್ಲಿ ನಿಂದು ಪರಿಣಾಮವನನುಭವಿಸುವಾತ ನೀನಲ್ಲದೆ ಮತ್ತಾರು ಹೇಳಾ? ಸರ್ವಾವಯವಂಗಳಲ್ಲಿ ಸರ್ವಮುಖವಾಗಿ ಭೋಗಿಸಿ ಪ್ರಸಾದವ ಕರುಣಿಸಿದ ಕೃಪಾಮೂರ್ತಿ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ ನೀನಲ್ಲದೆ ಮತ್ತಾರು ಹೇಳಾ?
--------------
ಸ್ವತಂತ್ರ ಸಿದ್ಧಲಿಂಗ
ಗುರುಲಿಂಗ ಪರಂಜ್ಯೋತಿರ್ಲಿಂಗವೆಂದರಿದವನು ಬಲ್ಲವನು, ಗುರುಲಿಂಗ ಪ್ರಾಣ ಏಕೀಭವಿಸಿದ ಲಿಂಗ, ಪರಂಜ್ಯೋತಿರ್ಲಿಂಗವೆಂದರಿದವನು ಬಲ್ಲವನು. ಈ ಮಹಾವಸ್ತುಗಳನರಿಯದವನು ಅರಿಯದವನು. ಈ ಮಹಾವಸ್ತುಗಳನರಿಯದವರನು ಅರಿದವನು ಅರಿಯದವನು, ಅರಿಯದವಂಗೆ ಪೂಜೆ ಎಂತಕ್ಕು ? ಪೂಜೆ ಇಲ್ಲದವಂಗೆ ಭಕ್ತಿಯಿಲ್ಲ, ಭಕ್ತಿ ಇಲ್ಲದವಂಗೆ ಗುರುಲಿಂಗಜಂಗಮಪ್ರಸನ್ನವೆಂತಪ್ಪುದು ? ಪ್ರಸನ್ನತೆಯ ಹಡೆಯದವಂಗೆ ಪ್ರಸಾದವಿಲ್ಲ, ಪ್ರಸಾದ ಪ್ರಸನ್ನತೆಯ ಹಡೆಯದವಂಗೆ ಮುಕ್ತಿ ಎಂತೂ ಇಲ್ಲ. ಇದನರಿದರಿವುದು, ಪ್ರಸನ್ನತೆಯಪ್ಪಂತೆ ನಡೆವುದು, ಪ್ರಸಾದವ ಹಡೆವುದು, ಭೋಗಿಸಿ ಮುಕ್ತರಪ್ಪುದಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಲಿಂಗಾರ್ಚನೆಯಂ ಮಾಡಿ, ಅಂಗಭಾಜನ, ಲಿಂಗಭಾಜನ, ಪತ್ರಭಾಜನದಲ್ಲಿ ಸಹಭೋಜನವ ಮಾಡುವ ಸಮಯದಲ್ಲಿ ಗುರು ಲಿಂಗ ಜಂಗಮ[ಪ್ರಸಾದ]ವೆಂದೆ ಪ್ರಸಾದವ ಪಡೆವುದು. ಪ್ರಸಾದವೆಂದು ಪಡೆದ ಬಳಿಕ ಪದಾರ್ಥವೆಂದು ಭೋಗಿಸಿದಡೆ, ಪ್ರಸಾದ ದ್ರೋಹ. ಪ್ರಸಾದವೆಂದು ಅರ್ಪಿತವ ಭೋಗಿಸಿ, ಉಳಿಯದ ಹಾಂಗೆ ತೆಗೆದುಕೊಂಬುದಯ್ಯಾ. ಮೀರಿದಂದು ಅನಿಲಬ್ರಹ್ಮವಂಗಸಂಬಂಧವಾದ ಉಳುಮೆಯಲಿ ಉಳಿದ ತಾರಕಬ್ರಹ್ಮವಯ್ಯಾ. [ಅದೇನು ಕಾರಣವೆಂದಡೆ:] ಶೈವಕ್ಕೂ ವೀರಶೈವಕ್ಕೂ ಭೇದವಿಲ್ಲ ! ಆದಿಗೂ ಅನಾದಿಗೂ ನೀನೆ ! ಪದಾರ್ಥಕ್ಕೂ ಪ್ರಸಾದಕ್ಕೂ ನೀನೆ, ಭೂ ಗಗನಕ್ಕೂ ನೀನೇ ! ಕ್ರೀ ನಿಃ [ಕ್ರೀ ಗೂ ನೀನೇ]. ಪ್ರಸಾದದ ಆದಿಕುಳವ ನಾನೆತ್ತ ಬಲ್ಲೆನಯ್ಯಾ ! ದೇವ, ಕ್ರೀ ಮೀರಿದುದಾಗಿ ಸಗುಣ ನಿರ್ಗುಣವಾದ, ಸಾಕಾರ ನಿರಾಕಾರವಾದ. ಏಕ ಬ್ರ[ಹ್ಮ ಸಂ]ಗನ ಬಸವಣ್ಣ ಬಿಬ್ಬಿ ಬಾಚಯ್ಯ ಮರುಳಶಂಕರದೇವರೆಂಬ ಪರಂಜ್ಯೋತಿ ಮಹಾಲಿಂಗದಲ್ಲಿ ಏಕತೆಯಾದೆನು ಕಾಣಾ, ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ನಿರಾಮಯ ಐಕ್ಯಂಗೆ ನಿರಾಮಯವೆ ಅಂಗ, ನಿರಾಮಯವೆ ಹಸ್ತ, ನಿರಾಮಯವೆ ಮಹಾಲಿಂಗ, ನಿರಾಮಯವೆಂಬ ಮುಖದಲ್ಲಿ ನಿರಾಮಯಾನಂದವೆಂಬ ಸುಖವನು ಸಮರ್ಪಣವ ಮಾಡಿ, ತೃಪ್ತಿಯನೆ ಭೋಗಿಸುವನು ನೋಡಾ. ಭೋಗಿಸಿ ನಿರಾಮಯಾತೀತವೆಂಬ ನಿರ್ವಯಲನೈದಿದನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಅರ್ಪಿತದ ಮಹಿಮೆಯ ಅನುವ, ಪ್ರಸಾದದ ಮಹಿಮೆಯ ಆವಂಗಾವಂಗರಿಯಬಾರದು. ವಿಷ್ಣ್ವಾದಿ ದೇವ ದಾನವ ಮಾನವ, ಋಷಿಜನಂಗಳಿಗೆಯೂ ಅರಿಯಬಾರದು. ಕಿಂಚಿತ್ತರಿದಡೆಯೂ ಅರ್ಪಿಸಬಾರದು. ಕಿಂಚಿತ್ ಅರ್ಪಿಸಿದಡೆಯೂ ಪ್ರಸಾದವ ಹಡೆಯಬಾರದು. ಕಿಂಚಿತ್ ಪ್ರಸಾದವ ಹಡೆದಡೆಯೂ, ಪ್ರಸಾದವ ಭೋಗಿಸಿ ಪರಿಣಾಮದಿಂ ಮುಕ್ತರಾಗಿರಲರಿಯರು. ಶಿವ ಶಿವಾ ! ಗುರು ಲಿಂಗ ಜಂಗಮಕ್ಕೆ ತನು ಮನ ಧನವನರ್ಪಿಸಲರಿಯರು. ಗುರು ಲಿಂಗ ಜಂಗಮವನೇಕೀಭವಿಸಿ ಮಹಾಲಿಂಗವನು ನೇತ್ರದಲ್ಲಿ ಧರಿಸಿ, ನೇತ್ರಲಿಂಗಕ್ಕೆ ನೇತ್ರದ ಕೈಯಲೂ ರೂಪವನರ್ಪಿಸಲರಿಯರು. ಆ ಮಹಾಲಿಂಗವನು ಶ್ರೋತ್ರದಲ್ಲಿ ಧರಿಸಿ ಶ್ರೋತ್ರಲಿಂಗಕ್ಕೆ ಶ್ರೋತ್ರದ ಕೈಯಲೂ ಮಹಾಶಬ್ದವನರ್ಪಿಸಲರಿಯರು. ಆ ಮಹಾಲಿಂಗವನು ಘ್ರಾಣದಲ್ಲಿ ಧರಿಸಿ ಘ್ರಾಣಲಿಂಗಕ್ಕೆ ಘ್ರಾಣದ ಕೈಯಲೂ ಸುಗಂಧವನರ್ಪಿಸಲರಿಯರು. ಆ ಮಹಾಲಿಂಗವನು ಜಿಹ್ವೆಯಲ್ಲಿ ಧರಿಸಿ ಜಿಹ್ವೆಯಲಿಂಗಕ್ಕೆ ಜಿಹ್ವೆಯ ಕೈಯಲೂ ಮಹಾರಸವನರ್ಪಿಸಲರಿಯರು. [ಆ ಮಹಾಲಿಂಗವನು ತ್ವಕ್ಕಿನಲ್ಲಿ ಧರಿಸಿ ತ್ವಕ್‍ಲಿಂಗಕ್ಕೆ ಘ್ರಾಣದ ಕೈಯಲ್ಲಿ ಮಹಾಸ್ಪರ್ಶವನರ್ಪಿಸಲರಿಯರು] ಆ ಮಹಾಲಿಂಗವನು ಭಾವದಲ್ಲಿ ಧರಿಸಿ ಭಾವಲಿಂಗಕ್ಕೆ ಭಾವದ ಕೈಯಲೂ ಸರ್ವಸುಖಪರಿಣಾಮ ಮೊದಲಾದ ಭಾವಾಭಾವ ನಿಷ್ಕಲವಸ್ತುವನರ್ಪಿಸಲರಿಯರು. ಆ ಮಹಾಲಿಂಗವನು ಮನದಲ್ಲಿ ಧರಿಸಿ ಮನೋಮಯಲಿಂಗಕ್ಕೆ ಮನದ ಕೈಯಲೂ ಸಕಲ ನಿಷ್ಕಲಾದಿ ರೂಪವನರ್ಪಿಸಲರಿಯರು. ಆ ಮಹಾಲಿಂಗವನು ವಾಕ್ಕಿನಲ್ಲಿ ಧರಿಸಿ ವಾಕ್‍ಲಿಂಗಕ್ಕೆ ವಾಕ್ಕಿನ ಕೈಯಲ್ಲೂ ಪಡಿಪದಾರ್ಥ ಮೊದಲಾದ ಸಕಲದ್ರವ್ಯಂಗಳ ರುಚಿ ಮೊದಲಾದ ಸುಖವನರ್ಪಿಸಲರಿಯರು. ಆ ಮಹಾಲಿಂಗವನು ಇಂತು ಮನೋವಾಕ್ಕಾಯವೆಂಬ ತ್ರಿವಿಧದಲ್ಲಿ ಏಕಾದಶ ಅರ್ಪಿತ ಸ್ಥಾನವನರಿದು ಅರ್ಪಿತವಾದ ಏಕಾದಶ ಪ್ರಸಾದವನರಿಯರು. ಮಹಾರ್ಪಿತವನು ಮಹಾಪ್ರಸಾದವನು ಎಂತೂ ಅರಿಯರು. ಪರಂಜ್ಯೋತಿಃ ಪರಂ ತತ್ತ್ವಂ ಪರಾತ್ಪರತರಂ ತಥಾ ಪರವಸ್ತು ಪ್ರಸಾದಃ ಸ್ಯಾದಪ್ರಮಾಣಂ ಪ್ರಸಾದಕಃ ಎಂಬುದನರಿಯರು. ಪೂಜಕಾ ಬಹವಸ್ಪಂತಿ ಭಕ್ತಾಶ್ಯತಸಹಸ್ರಶಃ ಮಹಾಪ್ರಸಾದಪಾತ್ರಂ ತು ದ್ವಿತ್ರಾ ವಾ ನೈವ ಪಂಚಷಃ ಪ್ರಸಾದಂ ಗಿರಿಜಾದೇವಿ ಸಿದ್ಧಕಿನ್ನರಗುಹ್ಯಕಾಃ ವಿಷ್ಣುಪ್ರಮುಖದೇವಾಶ್ಚ ನ ಜಾನಂತಿ ಶಿವಂಕರಂ ಎಂಬ ಪ್ರಸಾದ ಎಲ್ಲರಿಗೆಯೂ ಅಸಾಧ್ಯ. ಅರ್ಪಿತ ಮುನ್ನವೇ ಅಸಾಧ್ಯ. ಅರ್ಪಿತವೂ ಪ್ರಸಾದವೂ ಚನ್ನಬಸವಣ್ಣಂಗಾಯಿತ್ತು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಲಿಂಗವನರಿಯರು ಲಿಂಗದ ಮುಖವನರಿಯರು. ಪೂಜಿಸಲರಿಯರು ಅರ್ಚಿಸಲರಿಯರು ಅರ್ಪಿಸಲರಿಯರು. ನಾನೇ ಭಕ್ತನು ನಾನೇ ಮಾಹೇಶ್ವರನು ನಾನೇ ಪ್ರಸಾದಿಯೆಂಬರು. ಶಿವಾಚಾರಪರಾಙ್ಮುಖರು ನೋಡಾ. ಶಿವ ಶಿವಾ, ಪ್ರಾಣಲಿಂಗಿ ಐಕ್ಯನೆಂಬುದು ಮಹಾಕ್ರೀ. ಅದನೆಂತೂ ಅರಿಯರು. ಗುರು ಲಿಂಗ ಜಂಗಮ ಒಂದೆಂಬುದನೂ ವೇದ ಶಾಸ್ತ್ರ ಆಗಮ ಪುರಾಣ ಪುರಾತನರ ನಡೆ ನುಡಿಯಿಂದರಿದು ಕ್ರೀಯನರಿದು ಕಾಲವನರಿದು ಮನ ವಂಚನೆಯಿಲ್ಲದೆ ಶಿವಲಿಂಗವ ಪೂಜಿಸಬೇಕು, ಸದ್ಭಕ್ತಿಯಿಂ ಭಕ್ತನಾಗಿ. `ನ ಗುರೋರಧಿಕಂ ನ ಗುರೋರಧಿಕಂ ಎಂಬುದನರಿದು ಪರಧನ ಪರಸ್ತ್ರೀ ಪರದೈವವ ತ್ಯಜಿಸಿ ತನು ಮನ ಧನದಲ್ಲಿ ವಂಚನೆಯಿಲ್ಲದೆ ಮನೋವಾಕ್ಕಾಯಶುದ್ಧನಾಗಿ ಅಷ್ಟವಿಧಾರ್ಚನೆ ಷೋಡಶೋಪಚಾರದಿಂ ಅರ್ಚಿಸಬೇಕು ಶ್ರೀಗುರುಲಿಂಗಕ್ಕೆ ಮಾಹೇಶ್ವರನಾಗಿ. ಜಂಗಮ ಪರಶಿವನೆಂದರಿದು ಭೋಗಮೂರ್ತಿ ಎಂದರಿದು ಮನೋವಾಕ್ಯಾಯಶುದ್ಧನಾಗಿ ಧನವಂಚನೆಯಿಲ್ಲದೆ ಸರ್ವಪದಾರ್ಥ ಸರ್ವಭೋಗಂಗಳನರ್ಪಿಸಿ ಜಂಗಮಲಿಂಗಾರ್ಚನೆಯಂ ಮಾಡಿ ಜಂಗಮಪ್ರಸಾದವಂ ಪಡೆದು ಪ್ರಸಾದವ ಭೋಗಿಸಿ ಪ್ರಸಾದಿಯಾಗಿ ಜಂಗಮಲಿಂಗಾರ್ಚನೆಯಂ ಮಾಡುವುದಯ್ಯಾ ಪ್ರಸಾದಿಯಾಗಿ. ಇಂತು ಭಕ್ತ ಮಾಹೇಶ್ವರ ಪ್ರಸಾದಿ ತನುವಿಡಿದು `ಏಕ ಮೂರ್ತಿಸ್ತ್ರಧಾ ಭೇದಾಃ ಎಂಬುದನರಿದು ಕ್ರಿಯೆಯಲ್ಲಿ ಕ್ರಿಯೆಯನರಿದು ತನುವಿಡಿದು ಸಕಲನಾಗಿ ನಡೆವ ಸ್ಥಲ ಈ ಮೂರು ಪ್ರಾಣಲಿಂಗಿ ಶರಣನೈಕ್ಯನೆಂಬುದು ಇವು ಮೂರುಸ್ಥಲ. ಮನವಿಡಿದು ನಡೆವುದು ನಿಷ್ಕಲಸ್ಥಲವನೊಂದುಮಾಡಿ ಏಕೀಭವಿಸಿ ನಡೆವುದು. ಇವು ಮೂರುಸ್ಥಲಕ್ಕೆ ನಿಷ್ಕ್ರಿಯಾಸಂಬಂಧ. ಈ ಮಹಾವರ್ಮವನೂ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ ನಿಮ್ಮ ಶರಣರೇ ಬಲ್ಲರು, ವಾಙ್ಮನೋತೀತರು ಉಪಮಾತೀತರು, ಘನ ಮಹಾ[ಕ್ರೀಯ].
--------------
ಉರಿಲಿಂಗಪೆದ್ದಿ
ಪೂರ್ವವನಳಿದು ಪುನರ್ಜಾತನಾದೆನೆಂದು ಪೆಸರಿಟ್ಟುಕೊಂಡು ನುಡಿವ ಅಣ್ಣಗಳಿರಾ, ನಿಮ್ಮ ಅಂಗ, ಆ ಈಶ್ವರದೇವರು ಹುಟ್ಟಿಸಿದ ಮೂರೂವರೆ ಮೊಳದ ಸ್ಥೂಲಕಾಯವಾಗಿ ಜೀಕಿತ್ತು. ಬ್ರಹ್ಮಕಲ್ಪನೆಯ ಮಾನವನು ಜಾಜಿಯನಾಗಿಸಿ ಮರುವಾದೆ ಮನುಜರ ಕೈಯಲ್ಲಿ ಅನ್ನ ಉಣ್ಣದೆ, ಅಂಗಿಯ ಕೊಳ್ಳದೆ, ಸ್ವರ್ಗ-ಮತ್ರ್ಯ-ಪಾತಾಳ ಇವು ಮೂರು ಲೋಕವನು ಬಿಟ್ಟು, ಬೇರೊಂದು ಸ್ಥಳದಲ್ಲಿ ಇರಬಲ್ಲರೆ, ಆತನಿಗೆ ಪೂರ್ವವನಳಿದ ಮನುಜೋತ್ತಮನೆಂದೆನ್ನಬಹುದು ಕಾಣಿರೋ. ನಿಮ್ಮ ಅಂಗದ ಈಶ್ವರದೇವರು ಹುಟ್ಟಿಸಿದ ಮೂರುವರೆ ಮೊಳದ ಸ್ಥೂಲಕಾಯವನು ಮುಂದಿಟ್ಟುಕೊಂಡು ಹಲವು ಜಾತಿಗಳ ನೆಲೆಯನರಿಯದೆ, ಮನೆ ಮನೆಯಲ್ಲಿ ಕಾಡಿ ಬೇಡಿ ಉಂಬುವ ಪಾಷಂಡಿಗಳ ದೀಕ್ಷೆಯನು ಮಾಡಿಕೊಂಡು, ಕಾವಿಯರಿವೆಯನ್ಹೊದ್ದುಕೊಂಡು ನಾನು ಪೂರ್ವವನಳಿದು ಪುನರ್ಜಾತನಾದೆನೆಂದು ಪೂಜೆಗೊಂಬುವ ಜಾತಿಶ್ರೇಷ* ಅಜ್ಞಾನಿಗಳಿಗೆ ಜಾತಿಸೂತಕ ಉಳಿಯಿತೆ ? ಸುಜ್ಞಾನಿಗಳು ಹೋಗಿ ಅವರಿಗೆ ಶರಣಂ ಕೊಟ್ಟರೆ, ಅವರಾ ಮನೆಯಲ್ಲಿ ಅನ್ನವನುಂಡರೆ, ಅಗ್ನಿಯ ಕಂಡರೆ, ಮೊದಲೆ ತಾವೇ ಭೋಗಿಸಿ ಮೇಲೆ ಮಲಮೂತ್ರವ ಭುಂಜಿಸಿದಂತೆ ಆಯಿತ್ತು ಎಂದಾತ ಸಿದ್ಧಮಲ್ಲನದಾತ ಮೇಗಣಗವಿಯ ಗುರುಶಿವಸಿದ್ಧೇಶ್ವರಪ್ರಭುವೆ.
--------------
ಸಿದ್ಧಮಲ್ಲಪ್ಪ
ಲಿಂಗವಂತಂಗೆ ಲಿಂಗವು ಮಾಡಿದ ಪದವನು ಲಿಂಗವಂತರೆ ಬಲ್ಲರು. ಕೇವಲ ಸಾಕ್ಷಾತ್ಪರವಸ್ತುವನು ಕರಸ್ಥಲದಲ್ಲಿ ಮೂರ್ತಿಯಾಗಿ ಬಿಜಯಂಗೈಸಿ ಕೊಟ್ಟನಾಗಿ ಸಾಲೋಕ್ಯಪದ, ಅಂಗದ ಮೇಲೆ ನಿರಂತರ ಪೂಜೆಗೊಳ್ಳುತ್ತಿಹನಾಗಿ ಸಾಮೀಪ್ಯಪದ, ಸದ್ಭಕ್ತರೂಪ ಮಾಡಿದವನಾಗಿ ಸಾರೂಪ್ಯಪದ, ಪ್ರಾಣಲಿಂಗವ ಮಾಡಿ ಅವಿನಾಭಾವವ ಮಾಡಿದನಾಗಿ ಸಾಯುಜ್ಯಪದ, ಇಂತೀ ಚತುರ್ವಿಧ ಪದವಾಯಿತ್ತು. `ಲಿಂಗಮಧ್ಯೇ ಶರಣಂ ಶರಣಮಧ್ಯೇ ಲಿಂಗಂ' ಎಂಬುದಾಗಿ ಸರ್ವಭೋಗಂಗಳನೂ ಸಹವಾಗಿ ಭೋಗಿಸಿ ಪ್ರಸಾದವನಿಕ್ಕಿ ಸಲಹಿದನಾಗಿ ಸದ್ಯೋನ್ಮುಕ್ತನು, ಸರ್ವಾಂಗಲಿಂಗವು. ಈ ತಾತ್ಪರ್ಯದ ಮರ್ಮವನು ಲೋಕದ ಜಡಜೀವಿಗಳೆತ್ತ ಬಲ್ಲರಯ್ಯಾ ? ಬಲ್ಲಡೆ, ಲಿಂಗಾನುಭಾವಿಗಳೇ ಬಲ್ಲರಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಪ್ರಸಾದ ಪ್ರಸಾದವೆನುತಿಪ್ಪಿರಿ. ಪ್ರಸಾದವೆಂತಿಪ್ಪುದು ? ಪ್ರಸಾದಿಯೆಂತಿಪ್ಪ ? ಪ್ರಸಾದಗ್ರಾಹಕ ಎಂತಿರಬೇಕು ? ಎಂದರಿಯದೆ ಪ್ರಸಾದವೆಂದು ಇಕ್ಕಿಹೆವೆಂಬರು, ಕೊಂಡೆಹೆವೆಂಬರು. ಕೊಂಡು ನಗೆಗೆಡೆಯಾಗುತಿಪ್ಪರಯ್ಯಾ. ಪ್ರಸಾದ ಪರಾಪರವಾದುದು, ಶಾಂತನಾಗಿ, ಸತ್ಯನಾಗಿ, ಪ್ರಸನ್ನವಾಗಿಹುದು ಪ್ರಸಾದಿ. ಕರ್ಮಣಾ ಮನಸಾ ವಾಚಾ ಗುರುಭಕ್ತಿವಿಚಕ್ಷಣಃ ಶರೀರಂ ಪ್ರಾಣಮರ್ಥಂ ಚ ಸದ್ಗುರುಭ್ಯೋ ನಿವೇದಯೇತ್ ಎಂದು ದೀಕ್ಷಾಮೂರ್ತಿ ಪರಶಿವಗುರುಲಿಂಗಕ್ಕೆ ತನುಮನಧನವನರ್ಪಿಸುವುದು. ಪೂಜಾಕಾರಮೂರ್ತಿ ಪರಮಗುರುಮಹಾಲಿಂಗಕ್ಕೆ ತನುಮನಧನವರ್ಪಿಸಿ, ಶಿಕ್ಷಾಮೂರ್ತಿ ಪರಮಗುರುಜಂಗಮಲಿಂಗಕ್ಕೆ ತನು ಮನ ಧನವನರ್ಪಿಸಿ, ಪ್ರಸನ್ನಪ್ರಸಾದವ ಪಡೆದು ಭೋಗಿಸಿ, ಆ ಪ್ರಸಾದವ ಶುದ್ಧವ ಮಾಡಿ ನಿಲಿಸಿ, ಶಾಂತನಾಗಿ, ನಿತ್ಯನಾಗಿ, ಪ್ರಸನ್ನಮೂರ್ತಿಯಾಗಿಪ್ಪ ಆ ಪ್ರಸಾದಿಯೇ ಪ್ರಸಾದಗ್ರಾಹಕ. ಆ ಪ್ರಸಾದಿಯೇ ಗುರುವೆಂದು, ಆ ಪ್ರಸಾದಿಯೇ ಲಿಂಗವೆಂದು ಆ ಪ್ರಸಾದಿಯೇ ಜಂಗಮವೆಂದು ತನುಮನಧನದಲ್ಲಿ ವಂಚನೆ ಇಲ್ಲದೆ ಕೇವಲ ವಿಶ್ವಾಸದಿಂದ ನಂಬಿ ಪ್ರಸಾದವ ಗ್ರಹಿಸುವುದು. ಇದು ಕಾರಣ, ಪ್ರಸಾದಗ್ರಾಹಕನ ಪರಿಯೆಂಬ ಭಾವ ಹಿಂಗದೆ ಇಕ್ಕುವ ಪರಿಯ ನೋಡಾ. ಇದು ಕಾರಣ. ಮಹಾನುಭಾವರ ಸಂಗದಿಂದ ಅರಿಯಬಹುದಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಭಕ್ತಂಗೆ ಪೃಥ್ವಿಯೆ ಅಂಗ, ಆ ಅಂಗಕ್ಕೆ ಸುಚಿತ್ತವೆ ಹಸ್ತ, ಆ ಹಸ್ತಕ್ಕೆ ಕರ್ಮಸಾದಾಖ್ಯ, ಆ ಸಾದಾಖ್ಯಕ್ಕೆ ಕ್ರಿಯಾಶಕ್ತಿ, ಆ ಶಕ್ತಿಗೆ ಆಚಾರವೆ ಲಿಂಗ, ಆ ಲಿಂಗಕ್ಕೆ ನಿವೃತ್ತಿಯೆ ಕಲೆ, ಆ ಕಲೆಗೆ ಘ್ರಾಣೇಂದ್ರಿಯವೆ ಮುಖ, ಆ ಮುಖಕ್ಕೆ ಸುಪರಿಮಳದ್ರವ್ಯಂಗಳನು ರುಚಿತೃಪ್ತಿಯನರಿದು ಸದ್ಭಕ್ತಿಯಿಂದರ್ಪಿಸಿ ಸುಗಂಧಪ್ರಸಾದವ ಭೋಗಿಸಿ ಸುಖಿಸುತ್ತಿಹನು ಕೂಡಲಚೆನ್ನಸಂಗಾ ನಿಮ್ಮ ಭಕ್ತನು
--------------
ಚನ್ನಬಸವಣ್ಣ
ಲಿಂಗಕ್ಷೇತ್ರವೆಂಬ ಪವಿತ್ರಸ್ಥಲದಲ್ಲಿ, ಪ್ರಸಾದಿ ಭಕ್ತಿ ಬೀಜದ ಬಿತ್ತಿ ಶುದ್ಧ ಪದಾರ್ಥವ ಬೆಳೆದು, ಆ ಪದಾರ್ಥವ ಲಿಂಗಾರ್ಪಿತವ ಮಾಡಿ ಆ ಪ್ರಸಾದವ ತಾನಿಲ್ಲದೆ ಭೋಗಿಸಿ ನಿತ್ಯಸುಖಿಯಾದನು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ ನಿಮ್ಮ ಪ್ರಸಾದಿ.
--------------
ಸ್ವತಂತ್ರ ಸಿದ್ಧಲಿಂಗ
ಪ್ರಸಾದಿಗೆ ಅಗ್ನಿಯೆ ಅಂಗ, ಆ ಅಂಗಕ್ಕೆ ನಿರಹಂಕಾರವೆ ಹಸ್ತ, ಆ ಹಸ್ತಕ್ಕೆ ಮೂರ್ತಿಸಾದಾಖ್ಯ, ಆ ಸಾದಾಖ್ಯಕ್ಕೆ ಇಚ್ಛಾಶಕ್ತಿ, ಆ ಶಕ್ತಿಗೆ ಶಿವನೆ ಲಿಂಗ, ಆ ಲಿಂಗಕ್ಕೆ ವಿದ್ಯೆಯೆ ಕಳೆ, ಆ ಕಳೆಗೆ ನೇತ್ರೇಂದ್ರಿಯವೆ ಮುಖ, ಆ ಮುಖಕ್ಕೆ ಸುರೂಪುದ್ರವ್ಯಂಗಳನು ರೂಪು ರುಚಿ ತೃಪ್ತಿಯನರಿದು, ಅವಧಾನಭಕ್ತಿಯಿಂದರ್ಪಿಸಿ ಆ ಸುರೂಪಪ್ರಸಾದವನು ಭೋಗಿಸಿ ಸುಖಿಸುತಿಹನು ಕೂಡಲಚೆನ್ನಸಂಗಾ ನಿಮ್ಮ ಪ್ರಸಾದಿ
--------------
ಚನ್ನಬಸವಣ್ಣ
ಇನ್ನಷ್ಟು ... -->