ಅಥವಾ

ಒಟ್ಟು 107 ಕಡೆಗಳಲ್ಲಿ , 28 ವಚನಕಾರರು , 92 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆನೆ ಕುದುರೆ ಭಂಡಾರವಿರ್ದಡೇನೊ? ತಾನುಂಬುದು ಪಡಿಯಕ್ಕಿ, ಒಂದಾವಿನ ಹಾಲು, ಮಲಗುವುದರ್ಧ ಮಂಚ. ಈ ಹುರುಳಿಲ್ಲದ ಸಿರಿಯ ನೆಚ್ಚಿ ಕೆಡಬೇಡ ಮನುಜಾ. ಒಡಲು ಭೂಮಿಯ ಸಂಗ, ಒಡವೆ ತಾನೇನಪ್ಪುದೊ? ಕೈವಿಡಿದ ಮಡದಿ ಪರರ ಸಂಗ, ಪ್ರಾಣ ವಾಯುವಿನ ಸಂಗ. ಸಾವಿಂಗೆ ಸಂಗಡವಾರೂ ಇಲ್ಲ ಕಾಣಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಇಂತೆಂದ ಭೂಮಿಯ; ಇಂತೆಂದ ಗಗನವ. ಇಂತೆಂದ ಸಪ್ತಸಾಗರವ. ಇಂತೀ ಲೋಕದೊಳಗೆ ತಿಂಥಿಣಿಯಾಗಿಪ್ಪ ಅಚಿಂತನನವರಾರು ಬಲ್ಲರೈ ರಾಮನಾಥ.
--------------
ಜೇಡರ ದಾಸಿಮಯ್ಯ
ಭಕ್ತನಾಗಿ ಹುಟ್ಟಿ ಮತ್ತೊಬ್ಬರಲ್ಲಿ ಬೇಡುವುದೆ ಕಷ್ಟ. ಹೊತ್ತು ಹೋರಿ ಭೂಮಿಯ ಅಗೆವಲ್ಲಿ ಮೊತ್ತದ ಜೀವಂಗಳು ಸತ್ತುದ ದೃಷ್ಟವ ಕಂಡಲ್ಲಿಯೆ ಮಾಡುವ ಮಾಟ ನಷ್ಟ. ಇದನರಿತು ವಿರಕ್ತರಾಗಿ ಹೋದಲ್ಲಿ, ಮತ್ತೊಬ್ಬರ ಅಪ್ಪಾ ಅಣ್ಣಾ ಎಂದು ಚಿತ್ತ ಕಲಕುವದು ಕಷ್ಟ. ಈ ಹೊತ್ತ ದೇಹಕ್ಕೆ ನಗೆಯ ಚಿತ್ತದ ಕಾಯಕ, ಇದನೊಪ್ಪುಗೊ, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಶೀಲವಂತರು, ಶೀಲವಂತರು ಎಂದೇನೊ ? ಶೀಲವಂತಿಕೆಯನಾರು ಬಲ್ಲರು? ಶೀಲವಾದರೆ ಶಿವನೊಳು ಬೆರೆವುದೇ ಶೀಲ. ಶೀಲವಾದರೆ ಗುರುಲಿಂಗಜಂಗಮವ ತನ್ನೊಳಗರಿವುದೇ ಶೀಲ. ಅದಕ್ಕೆ ಮೀರಿದ ಶೀಲವಾದರೆ, ಹಸಿವು ತೃಷೆ ನಿದ್ರೆ ವಿಷಯವ ಕೆಡಿಸುವುದೇ ಶೀಲ. ಅದಕ್ಕೆ ತುರಿಯಾತೀತ ಶೀಲವಾದರೆ, ಬಾಲನಾಗಿ ತನ್ನ ಲೀಲಾವಿನೋದವ ಭೂಮಿಯ ಮೇಲೆ ನಟಿಸುವುದೇ ಶೀಲ. ಇದನರಿಯದೆ ಶೀಲಶೀಲವೆಂದು ಮನೆಮನೆಗೆ ಶೀಲವಲ್ಲದೆ, ತನ್ನ ತನಗೆ ಕಾಯಕೃತ್ಯವಲ್ಲದೆ, ಇದನರಿದು ಮೋಹ ಘನವನೆ ಮರೆದು, ಮನವನೆ ಬಳಲಿಸಿ, ಘನವ ಮಾಡಿ, ತನುವ ಹೊರೆದೆನೆಂಬ ಬಿನುಗರ ನುಡಿಯ ಮೆಚ್ಚುವನೆ, ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ ?
--------------
ಹಡಪದ ಅಪ್ಪಣ್ಣ
ನೀರುಕಲೆತ ಭೂಮಿಯ ಆಸೆಯ ಮರೆದಲ್ಲಿ ಪುಷ್ಪವರಳಿತ್ತು, ಪೂರ್ಣಿಮೆಯ ಚಂದ್ರ ಮೂಡಿಬರಲು ಸಣ್ಣಬಾವಿಯ ಶಿಲೆಯ ಜಲವುಕ್ಕಿ ಹಾದಿಯಮೇಲೆ ಸುರಿಯೆ ಎಡೆಯಾಡುವ ಸಕಲ ತಿಂಥಿಣಿ ಪ್ರಮಥಗಣವಾದುದು ಕಂಡು ಗುರುನಿರಂಜನ ಚನ್ನಬಸವಲಿಂಗವಾಗಿ ಮರೆದಿರ್ದನು.
--------------
ದೇಶಿಕೇಂದ್ರ ಸಂಗನಬಸವಯ್ಯ
ಬಾಲತ್ವದಲ್ಲಿ ತನ್ನ ಮಲಮೂತ್ರದೊಡನೆ ಹೊರಳಾಡಿ, ಯೌವನಪ್ರಾಯದಲ್ಲಿ ಮದಮತ್ಸರದಿಂದ ಹೋರಾಡಿ, ಕಾಮದಲ್ಲಿ ಕರಗಿ, ಕ್ರೋಧದಲ್ಲಿ ಕೊರದು, ಲೋಭ ಮೋಹದಿಂದ ಮಗ್ನರಾಗಿ, ಯೌವನಬಲಗುಂದಿ ಮುಪ್ಪುವರಿದು ಹಲ್ಲು ಬಿದ್ದು, ಕಣ್ಣು ಒಳನಟ್ಟು, ಬೆನ್ನು ಬಾಗಿ, ದಮ್ಮು ಹತ್ತಿ, ಗುರುಗೂರಿ ಗರಹತ್ತಿ, ಸಾಯುವ ಮನುಜರಿಗೆ, ವಿಭೂತಿ ವೀಳ್ಯೆ ಎಂದು ಮಾಡಿ, ಅವನ ಪಣೆಯಲ್ಲಿ ವಿಭೂತಿಯ ಧರಿಸಿ, ಸರ್ವಾಂಗದಲ್ಲಿ ವಿಭೂತಿ ಲೇಪನ ಮಾಡಿ, ಸ್ಥಾನಸ್ಥಾನಂಗಳಲ್ಲಿ ರುದ್ರಾಕ್ಷಿಯ ಧರಿಸಿ, ಅವನ ಮನೆಯಲ್ಲಿ ಶಿವಗಣಂಗಳು ಸಲಿಸಿ, ಅವನ ಮಸ್ತಕದ ಮೇಲೆ ಸಕಲ ಗಣಂಗಳು ತಮ್ಮ ಪಾದವನಿಟ್ಟು ಅವನ ಕೈಯಲ್ಲಿ ವಿಭೂತಿ ರುದ್ರಾಕ್ಷಿ ಬಿಲ್ವಪತ್ರಿ ಸುವರ್ಣ ಮೊದಲಾದ ಕಾಂಚನವ ಬ್ಥಿಕ್ಷವ ಕೊಂಡು ಅವನು ಸತ್ತುಹೋದ ಮೇಲೆ ಊರ ಹೊರಗಾಗಲಿ, ಊರೊಳಗಾಗಲಿ, ಲಿಂಗಸ್ಥಾಪನೆಯಿದ್ದ ಮಠಮಾನ್ಯದಲ್ಲಿ ಏಳುಪಾದ ನಿಡಿದು, ಏಳುಪಾದ ಉದ್ದ ಭೂಮಿಯ ಒಳಗೆ, ಐದುಪಾದ ಚೌಕು, ಮೂರುಪಾದ ಅಡ್ಡಗಲ, ಮೂರುಪಾದ ಒಳಯಕ್ಕೆ ತ್ರಿಕೋಣೆ. ಇಂತೀ ಕ್ರಮದಲ್ಲಿ ಕ್ರಿಯಾಸಮಾದ್ಥಿಯ ಮಾಡಿ, ಸುಣ್ಣ ಕೆಂಪುಮಣ್ಣಿನ ಸಾರಣೆಯ ಮಾಡಿ ರಂಗವಾಲಿಯ ತುಂಬಿ, ತಳಿರುತೋರಣವ ಕಟ್ಟಿ, ಕೋಣಿ ಕೋಣಿ ಸ್ಥಾನಕ್ಕೆ ಓಲೆಯ ಮೇಲೆ ಪ್ರಣಮವಂ ಬರೆದು ಆ ಸಮಾದ್ಥಿಯಲ್ಲಿ ಸಂಬಂದ್ಥಿಸಿ, ಮತ್ತಂ, ಅವನ ಶವಕ್ಕೆ ಹಾಗೆ ಪ್ರಣಮವಂ ಬರೆದು ಸಂಬಂದ್ಥಿಸಿ, ಸಂಚರಿಸಿ ಮೇಲೆ ಮೋಕ್ಷವಾಯಿತು ಎಂಬರಯ್ಯಾ; ಮೋಕ್ಷವಾಗಲರಿಯದು. ಅದೆಂತೆಂದಡೆ, ಇಂತಿವೆಲ್ಲವು ಹೊರಗಣ ಉಪಚಾರವು. ಈ ಉಪಚಾರದಿಂದ ಕರ್ಮದೋಷಗಳು ಹರಿದು ಪಿಶಾಚಿಯಾಗನು, ಭವ ಹಿಂಗದು. ಇಂತೀ ಕ್ರಮದಲ್ಲಿ, ಅಂತರಂಗದಲ್ಲಿ ಲಿಂಗಾಂಗಕ್ಕೆ ಸ್ವಾನುಭಾವಜ್ಞಾನಸೂತ್ರದಿಂ ಪ್ರಣವಸಂಬಂಧ ಮಾಡಿಕೊಂಡಡೆ ಅದೇ ಕ್ರಿಯಾಸಮಾದ್ಥಿ, ಗೋಮುಖಸಮಾದ್ಥಿ, ಮಹಾನಿಜ ಅಖಂಡ ಚಿದ್ಬಯಲಸಮಾದ್ಥಿ. ಇಂತಪ್ಪ ಸಮಾದ್ಥಿ ಉಳ್ಳವರಿಗೆ ಭವಬಂಧನ ಹಿಂಗಿ ಮುಂದೆ ಮೋಕ್ಷವಾಗುವದು ನೋಡೆಂದನಯ್ಯ ನಿಮ್ಮ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಭೂಮಿಯ ಮೇಲಣ ಅಗ್ನಿ, ಆಕಾಶವನಡರಿದಡೆ ಆಕಾಶದ ಜಲ ಉಕ್ಕಿ ಭೂಮಿಯೆಲ್ಲ ಜಲಮಯವಾಗಿತ್ತು. ಅಲ್ಲಿದ್ದವರೆಲ್ಲ ಅಮೃತಮಯವಾಗಿ ಮಹಾಲಿಂಗ ಸೇವೆಯ ಮಾಡಿ ಪ್ರಸಾದವ ಪಡೆದು ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೊಡನೆ ಲಿಂಗಲೀಯವಾದರು.
--------------
ಸ್ವತಂತ್ರ ಸಿದ್ಧಲಿಂಗ
ಪಲ್ಲ :ಬಂಧನ ಸಂಸಾರದಂದುಗದ ದಾಳಿಯಲ್ಲಿ ನೊಂದು ಬೆಂದೆನೊ ಎನ್ನ ಹುಯ್ಲು ತಂಬಿಸು ಗುರುವೆ ಭವಹರ ನಿತ್ಯನಿರ್ಮಳಾತ್ಮಕ ಶಂಭುವೆ. ಪದ :ಹಲವು ಜನ್ಮದಿ ಹುಟ್ಟಿ ಹಲವಾಹಾರವನುಂಡು ಹಲವು ಭೂಮಿಯ ಮೆಟ್ಟಿ ಹಲವು ಕರ್ಮವ ಕಂಡು ಹಲವು ಭವಕೀಡಾಗಿ ಹಲವು ಹಂಬಲಿಸುತಿರುವ ಹೊಲೆಜನ್ಮ ಸಂಸಾರ ಮಾಯಾರಕ್ಕಸಿ ತುಡುರೆ ನಿಲ್ಲಲಾರದಲಿ ನಿಮ್ಮ ಮರೆಹೊಕ್ಕೆ ಎನ್ನ ಕೊಡದೆ ಗೆಲಿದುಕೊ ದುರಿತಹರ ಕರುಣಾಳು ಪರಮಗುರುವೆ. | 1 | ಸಟೆ ಠಕ್ಕು ಠೌಳಿ ಅಟಮಟದ ಬಂಧನದ ಕುಟಿಲಸಂಸಾರಸಾಗರದ ತೊರೆನೆರೆಗಳೊಳು ಪುಟನೆಗೆದು ತಲೆ ಮುಣುಗುತಲಿರುವನ ಕಂಡು ನಿಟಿಲಾಕ್ಷ ಕೃಪೆಯೆಂಬ ಹಡಗವನು ತಂದೊಲಿ ತಟಕೆನ್ನನೆಳೆದು ತಗೆದೀಗ ಇನಿತಾತ್ಮ ಘಟದೊಳಗೆ ಜ್ಞಾನಜ್ಯೋತಿಯ ತೀವು ಪರಮಗುರುವೆ. | 2 | ರಸವಿಷಯ ಮೋಹನದ ಕೂಪಜಲದೊಳು ಮುಳುಗಿ ದೆಸೆದೆಸೆಗೆ ಚಾಲಿವರಿವನ ಕಂಡು ಬೇಗದಲಿ ವಿಷಕಂಠ ದುರಿತಸಂಹರ ಕರುಣಾಕರ ತೊಟ್ಟಿಲಿಗೆ ಎಸೆವ ಹಗ್ಗವ ಕಟ್ಟಿ ಎಳೆದು ತಗೆಯೆನ್ನ ರಂ ಬಿಸುತ ಸಂತೈಸಿ ದುಃಖದಲ್ಲಿ ಭೋರ್ಗರೆದಳುವ ಶಿಶುವ ಬೋಳೈಸುವಂದದಲೆನ್ನ ಬೋಳೈಸು ಅಸಮಾಕ್ಷ ಪರಮಗುರುವೆ.| 3 | ತೆರಣಿಯ ಹುಳು ನೂಲು ಸುತ್ತಿಕೊಂಡು ಎಸೆವ ತೆರದಿ ಈ ಸಂಸಾರ ಸುಖದುಃಖ ಎನ್ನನು ಸುತ್ತಿ ಪರಿಭವಕ್ಕೆ ಗುರಿಯಾಗಿ ಯೋನಿಯಂತ್ರದೆ ತಿರುಗಿಯೆ ಬರುತಲಿರ್ದೆನು ಘೋರ ಅರಣ್ಯದೊಳು ಸುತ್ತಿ ಹರಹರ ನಿಮ್ಮ ಸ್ಮರಣೆಯ ಮರೆದ ಕಾರಣದಿ ದುರಿತನ್ಯಾಯದ ಬಂಧನಕೆ ಗುರಿಯಾಗಿದ್ದೆನಯ್ಯಾ ಶಿವನೆ. | 4 | ಮಾಯಾಸಂಸಾರಸರ್ಪನ ವಿಷವು ತಲೆಗೇರಿ ನೋಯುತಿದ್ದೆನು ಹಲವುವಿಧದಾಸೆಪಾಶದಲಿ ಬೇಯುವವನ ಕಂಡು ನೀ ಬೇಗಲೊಯಿದ್ಯವ ಮಾಡಿಯೆ ಶವವನುಳುವಿಕೋ ಭವರೋಗವೈದ್ಯ ನಿತ್ಯ ಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭು ನೀವಲ್ಲದೆನಗನ್ಯವಿಲ್ಲ ಕಾಯೋ ಕಾಯೋ ದೇವಾ. | 5 |
--------------
ಹೇಮಗಲ್ಲ ಹಂಪ
ವಂದಿಸಿ ನಿಂದಿಸಿ ಮತ್ತೆ ಅದಾರಿಂಗೆ ಕೇಡೆಂಬುದನರಿತು ತಾ ನೋಯಲೇತಕೆ? ಕಟ್ಟಿದ ತಟಾಕವನೊಡೆಯ ಕುಕ್ಕಿದ ಮತ್ತೆ ಆರನುಭವದ ನಷ್ಟ ಅದಾರಿಗೆ ಹೇಳಾ? ಭೂಮಿಯ ಬಡತನಕ್ಕೆ ಬೀಜವಿಲ್ಲ ಪತ್ರಭಾಜನ ಹಸಿಯಿತ್ತೆಂದು ಓಗರವಿಲ್ಲ. ಮಾಟಕೂಟದಲ್ಲಿ ಇಕ್ಕಿ ಎರೆದು ಕೊಟ್ಟು ಕೊಂಡು ಚಿತ್ತ ಶುದ್ಧವಿಲ್ಲಾಯೆಂದು ನುಡಿಯಲೇತಕ್ಕೆ? ಬೆಳೆದ ಬೆಳಸ ಕಳದಲ್ಲಿ ಕಡೆಗಾಣಿಸಿದ ಮತ್ತೆ ಹೋದ ಹೊಲಬ ಬಳಸಲೇತಕ್ಕೆ ತನ್ನ ತಾನರಿದು? ಜಗ ತನಗನ್ಯವಿಲ್ಲೆಂದು ಅರಿದ ಮತ್ತೆ ಪ್ರತಿಮೂದಲೆಗೊಡಲಿಲ್ಲ. ಆತ ಉಭಯ ಶುದ್ಧಾತ್ಮನು. ತ್ರಿಗುಣರಹಿತನು, ತ್ರಿಗುಣಾತ್ಮಭರಿತನು. ಆತ ಕೂಗಿನ ದನಿಗೆ ಹೊರಗು ಮಹಾಮಹಿಮ ಮಾರೇಶ್ವರಾ.
--------------
ಕೂಗಿನ ಮಾರಯ್ಯ
ಕಾಮನ ಕಣ್ಣ ಮುಳ್ಳ ಕಳೆದು ಭೂಮಿಯ ತೈಲದ ಸೀಮೆಯ ಕೆಡಿಸಿ ಹೋಮವನುರುಹಿ ದಕ್ಷನ ತಲೆಯನರಿದು ನಿಸ್ಸೀಮನಾದ ಮಹಿಮನ ನಿಲವನರಿಯಬಹುದೆ ? ಅರಿವಿಂಗೆ ಅಸಾಧ್ಯ ಉಪಮೆಗೆ ಕಡೆಮುಟ್ಟದು ! ಗುಹೇಶ್ವರನ ಕರುಣಪ್ರಸಾದಿ ಮರುಳಶಂಕರದೇವರೆಂತಪ್ಪನೆಂಬುದ ತಿಳಿದು ನೋಡಾ ಸಂಗನಬಸವಣ.
--------------
ಅಲ್ಲಮಪ್ರಭುದೇವರು
ಮತ್ತಂ ತಮ್ಮ ತಮ್ಮ ಹಸ್ತದ ತೊಂಬತ್ತಾರಂಗುಲ ಪ್ರಮಾಣದ ದೇಹದ ಗುದದಿಂ ಮೇಲೆರಡಂಗುಲ ವೃಷಣದಿಂ ಕೆಳಗೆರಡಂಗುಲ- ಮುಭಯ ಮಧ್ಯದ ಚತುರಸ್ರದ ಭೂಮಿಯ ನಡುವಣ ತ್ರಿಕೋಣೆಯಂತರಾಳದ ಮಂಡಲತ್ರಯ ಧರಣಿಯ ಪೀತವರ್ಣದ ವಾದಿಸಾಂತಯುಕ್ತಮಾದ ಚೌದಳ ಕಮಲಕರ್ಣಿಕೆಯ ಸೂಕ್ಷ ್ಮರಂಧ್ರಗತ ಪ್ರಣವ ತಾರಕಾಕೃತಿಯ ನಕಾರಮೆ ಆಚಾರಲಿಂಗಮದು ನಿನ್ನ ಸದ್ಯೋಜಾತ ಸ್ವರೂಪಮಾದುದಯ್ಯಾ, ಪರಮ ಶಿವಲಿಂಗ ಪಟುತರ ಕೃಪಾರಸ ತರಂಗಾ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಪರಶಕ್ತಿ ಅದಿಯೈಯ್ದ ಬೆರೆಸಿ ಬೆರೆಯದೆ ಬ್ರಹ್ಮವನರಿದೆನೆಂಬ ಯೋಗಿ ಕೇಳಾ. ಅದು ಸಗುಣದಲ್ಲಿ ತಾತ್ಪರ್ಯ ಅದು ನಿಷ್ಕಳದಲ್ಲಿ ನಿತ್ಯ ಅರಿದೆನೆಂಬ ಯೋಗಿ ಕೇಳಾ. ಅದು ಅನಾಹತದಲ್ಲಿ ಆನಂದ, ಅದು ಭಕ್ತಿಜ್ಞಾನವೈರಾಗ್ಯವಂ ಕೂಡಿದ ಏಕಮತ ಅದು ಪದ ನಾಲ್ಕು ಮೀರಿದ ಮಹಾಮತ. ಅದು ಉಂಡುದನುಣ್ಣದು, ಅದು ಬಂದಲ್ಲಿ ಬಾರದು, ಅದು ಸಕಳದಲ್ಲಿಯೂ ತಾನೆ ನಿಷ್ಕಳದಲ್ಲಿಯೂ ತಾನೆ, ಅದು ಪ್ರಾಪಂಚಿಕದಲ್ಲಿಯೂ ತಾನೆ, ಅದು ತಾತ್ಪರ್ಯದಲ್ಲಿಯೂ ತಾನೆ. ಅದು ಸಕಲ ಸರ್ವದ ನಿಷ್ಕಳದ ನಿರ್ಮಳದ ಮದದ ಮಾತ್ಸರ್ಯದ ಬಣ್ಣ ಹಲವರಿದ ಅತಿಗಳೆದ ಪರಮಸೀಮೆಯ ಅರಿದೆನೆಂಬ ಯೋಗಿ. ಅದು ಒಂದರಲ್ಲಿ ನಿತ್ಯ, ಎರಡರಲ್ಲಿ ತಾತ್ಪರ್ಯ, ಮೂರರಲ್ಲಿ ಮುಕ್ತ, ನಾಲ್ಕರಲ್ಲಿ ಕ್ರೋದ್ಥಿ, ಐದರಲ್ಲಿ ಆನಂದ, ಆರರಲ್ಲಿ ತಾನೆ, ಇಪ್ಪತ್ತೈದು ಪಟ್ಟಣದ ತಾತ್ಪರ್ಯಂಗಳನ್ನರಿತು ಮೂವತ್ತಾರು ವೃಕ್ಷಂಗಳ ಮೇಲೆ ಹಣ್ಣೊಂದೆ ಆಯಿತ್ತು ಕಾಣಾ. ಆ ಹಣ್ಣು ಹಣಿತು, ತೊಟ್ಟುಬಿಟ್ಟು ನಿರ್ಮಳ ಜ್ಞಾನಾಮೃತಂ ತುಂಬಿ ಭೂಮಿಯ ಮೇಲೆ ಬಿದ್ದಿತು. ಆ ಬಿದ್ದ ಭೂಮಿ ಪರಲೋಕ. ಆ ಹಣ್ಣ ಗುರು ಕರುಣವುಳ್ಳವಂಗಲ್ಲದೆ ಮೆಲಲಿಲ್ಲ. ದೀಕ್ಷತ್ರಯದಲ್ಲಿ ಅನುಮಿಷನಾದಂಗಲ್ಲದೆ ಆ ಲೋಕದಲ್ಲಿರಲಿಲ್ಲ. ಆ ಲೋಕದಲ್ಲಿದ್ದವಂಗೆ ಅಜಲೋಕದ ಅಮೃತವನು ನಿತ್ಯವು ಸೇವಿಸಿ ಸತ್ಯಮುಕ್ತನಾಗಿ ಬೇಡಿದವಕ್ಕೆ ಬೇಡಿದ ಪರಿಯ ಕೇವಲವನಿತ್ತು ತಾನು ಕಾಂಕ್ಷೆಗೆ ಹೊರಗಾಗಿ ಕಾಲನ ಕಮ್ಮಟಕ್ಕೆ ಕಳವಣ್ಣವಾಗಿ ನಿತ್ಯಸಂಗಮಕ್ಕೆ ಸಂಯೋಗವಾಗಿ ಕಪಿಲಸಿದ್ಧ ಮ್ಲಕಾರ್ಜುನಯ್ಯನೆಂಬ ಅನಾಹತ ಮೂಲಗುರುವಾಗಿ, ಎನ್ನನಿಷ್ಟಕ್ಕೆ ಪ್ರಾಪ್ತಿಸಿದನಯ್ಯಾ.
--------------
ಸಿದ್ಧರಾಮೇಶ್ವರ
ನೆಲನಿಲ್ಲದ ಭೂಮಿಯ ಪಕ್ಷಿ ನೆಲದಲ್ಲಿ ಬಂದು ಚರಿಸಲು, ಆ ನೆಲದೊಡೆಯರು ಚರಿಸ್ಯಾಡುವ ಪಕ್ಷಿಗೆ ಬಲಿಯ ಬೀಸಿ ಕೊಂಡು ಎಲ್ಲರು ತಿಂದು, ತಿಂದ ಪಕ್ಷಿಯ ನಾ ಕೊಂದು ಪಾಕವ ಮಾಡಿ ಬಾಲದಂಡಂಗೆ ಕೊಟ್ಟು ಬೇಟೆಯನಾಡುವೆ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ನಾನು ಮೆಟ್ಟುವ ಭೂಮಿಯ ಭಕ್ತನ ಮಾಡಿದಲ್ಲದೆ ಮೆಟ್ಟೆನಯ್ಯಾ. ನಾ ನೋಡುತಿಹ ಆಕಾಶದ ಚಂದ್ರಸೂರ್ಯರ ಭಕ್ತರ ಮಾಡಿದಲ್ಲದೆ ನಾ ನೋಡೆನಯ್ಯಾ. ಜಲವ ಭಕ್ತನ ಮಾಡಿದಲ್ಲದೆ ನಾನು ಬಳಸೆನಯ್ಯಾ, ನಾನು ಕೊಂಬ ಹದಿನೆಂಟು ಧಾನ್ಯವ ಭಕ್ತನ ಮಾಡಿದಲ್ಲದೆ ಕೊಳ್ಳೆನು ಕೂಡಲಚೆನ್ನಸಂಗಾ ನಿಮ್ಮಾಣೆ.
--------------
ಚನ್ನಬಸವಣ್ಣ
ಕೊಂಡಡಗಿದನೊಬ್ಬ, ಕೊಟ್ಟರಸಿದನೊಬ್ಬನು. ಈರೇಳು ಭುವನವರಿಯಲು ವೃಷಭನು ವಿಸ್ಮಯಗೊಂಡನು ! ಭೂಮಿಯ ಜಲಗುಗರ್ಚಿ ಹೇಮರಸವನರಸುವಂತೆ ಅರಸುತ್ತಿದ್ದನಯ್ಯಾ ಜಂಗಮದೊಳಗೆ ಲಿಂಗವನು, ಏಕೋನಿಷೆ*ಯ ಕಂಡಡೆ ಎತ್ತಿಕೊಂಡನಯ್ಯಾ ಶಿವನು ! ಜಪಸಮಾಧಿಯೊಳಗೆ ಅಡಗಿದ್ದಡೆ, ಲಿಂಗವಾಗಿ ಬಂದರೀ ಪ್ರಭುದೇವರು. ನಿಮ್ಮಡಿಗಳು ಅಸಂಖ್ಯಾತರಿಗೆ ಮಾಡಿದ ಸಯಧಾನವ ನೀನೊಬ್ಬನೆ ಆರಿಸಿಕೊಟ್ಟಂದು ಕೂಡಲಚೆನ್ನಸಂಗಯ್ಯನಲ್ಲಿ ಲಿಂಗವೆಂದರಿದನಯ್ಯಾ ನಿಮ್ಮನು ನಮ್ಮ ಸಂಗನಬಸವಣ್ಣನು
--------------
ಚನ್ನಬಸವಣ್ಣ
ಇನ್ನಷ್ಟು ... -->