ಅಥವಾ

ಒಟ್ಟು 115 ಕಡೆಗಳಲ್ಲಿ , 45 ವಚನಕಾರರು , 104 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಯಲೆ ಅಂಗವಾಗಿ, ನಿರ್ವಯಲೆ ಲಿಂಗವಾಗಿ, ಭಾವಕೆ ಸಂಬಂಧವಾಯಿತ್ತು ನೋಡಾ. ಬಯಲಿಂದ ಅಂಗವಿಲ್ಲದೆ, ನಿರ್ವಯಲೆಂಬ ಲಿಂಗವು ನಿಶ್ಶಬ್ದವಾಗಿ, ಭಾವಕ್ಕೆ ಬೆರಗಾಯಿತ್ತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ನಿನಗೆ ಮಜ್ಜನವ ಮಾಡುವಲ್ಲಿ, ನಾ ಮಲದೇಹಿ, ನೀ ನಿರ್ಮಲದೇಹಿ. ನಿನಗೆ ಪೂಜೆಯ ಮಾಡುವಲ್ಲಿ, ನಾ ಕರ್ಮಜೀವಿ, ನೀ ಪುಣ್ಯಜೀವಿ. ನಿನಗೆ ಗಂಧವ ಹೂಸುವಲ್ಲಿ, ನಾ ದುರ್ಗುಣ ಜೀವಿ, ನೀ ಸುಗಂಧ ಭಾವಿ. ನಿನಗೆ ಅಕ್ಷತೆಯನಿಕ್ಕುವಲ್ಲಿ, ನಾ ಲಕ್ಷಿತ, ನೀ ಅಲಕ್ಷಿತ. ನಿನಗೆ ಧೂಪವನಿಕ್ಕುವಲ್ಲಿ, ನಾ ಭಾವಿತ, ನೀ ನಿರ್ಭಾವಿತ. ನಿನಗೆ ದೀಪವನೆತ್ತುವಲ್ಲಿ, ನಾ ಜ್ಯೋತಿ, ನೀ ಬೆಳಗು. ಇಂತೀ ಭಾವಂಗಳಲ್ಲಿ ಭಾವಿಸಿ ಕಂಡೆಹೆನೆಂದಡೆ, ಭಾವಕ್ಕೆ ಅಗೋಚರನಾಗಿಪ್ಪೆ. ನಿನ್ನನರಿವುದಕ್ಕೆ ತೆರನಾವುದೆಂದಡೆ, ಗುರುವಿಂಗೆ ತನು, ನಿನಗೆ ಮನ, ಜಂಗಮಕ್ಕೆ ಧನ, ತ್ರಿವಿಧಕ್ಕೆ ತ್ರಿವಿಧವನಿತ್ತು, ದಗ್ಧಪಟದಂತೆ ರೂಪಿಗೆ ಹೊದ್ದಿಗೆಯಾಗಿ, ಕಲ್ಲಿಗೆ ಹೊದ್ದದಿಪ್ಪ ಲಿಂಗ ಸದ್ಭಕ್ತನ ಸ್ಥಲ. ಆ ಭಕ್ತನಲ್ಲಿ ತಪ್ಪದಿಪ್ಪೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಪುರುಷನಿಂದ ಸತಿ ಹಿರಿಯಳಾದರೂ ಆಗಲಿ, ಹಸೆಹಂದರವನಿಕ್ಕಿ ಮದುವೆಯ ಮಾಡಿದ ಮೇಲೆ ಪುರುಷನಿಂದ ಕಿರಿಯಳು ನೋಡಾ. ಗುರುವಿಗಿಂದ ಶಿಷ್ಯ ಅರುಹುಳ್ಳಾತನಾದರೂ ಆಗಲಿ, ಶಿಷ್ಯನ ಭಾವಕ್ಕೆ ಗುರು ಅದ್ಥಿಕ ನೋಡಾ. ನಾನರುಹುಳ್ಳಾತ, ಗುರುವಿಗರುಹುವಿಲ್ಲೆಂದು ಜರೆದು ನುಡಿವ ನುಡಿ ಅಂಗದೊಳು ಹೊಳೆದರೆ ಕುಂಬ್ಥಿನಿಯ ಪಾಪದೊಳಿಕ್ಕುವ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಧರೆ ಸಲಿಲ ಅನಲ ಅನಿಲ ಆಕಾಶ ಮುಂತಾದ ಭೇದಂಗಳ ಕಲ್ಪಿಸುವಲ್ಲಿ, ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವಮೂರ್ತಿಗಳು ಕುರುಹುಗೊಂಬಲ್ಲಿ, ನಾದಬಿಂದುಕಳೆ ಲಕ್ಷಿಸುವಲ್ಲಿ, ಆ ಪರಶಿವತತ್ವದ ಅಂಗ ಗುರುರೂಪಾಗಿ, ಆ ಪರತತ್ವದ ಅಂಗ ಲಿಂಗವಾಗಿ, ಆ ಪರತತ್ವದ ಅಂಗ ಜಂಗಮವಾಗಿ, ಆ ಜಂಗಮ ಲಿಂಗದಲ್ಲಿ ಲೀಯವಾಗಿ, ಆ ಲಿಂಗ ಗುರುವಿನಲ್ಲಿಲೀಯವಾಗಿ, ಆ ಗುರು ಉಭಯಸ್ಥಲವ ಗಬ್ರ್ಥೀಕರಿಸಿ, ಗುರುವೆಂಬ ಭಾವ ತನಗಿಲ್ಲದೆ ತರು ಫಲವ ಹೊತ್ತಂತೆ, ಫಲ ರಸವ ಇಂಬಿಟ್ಟುಕೊಂಡಂತೆ, ಅಂಗಕ್ಕೆ ಆತ್ಮತೇಜವರತು, ಭಾವಕ್ಕೆ ಬ್ಥೀಷ್ಮ ನಿಂದು, ಮನ ಮಹವನೊಡಗೂಡಿದಲ್ಲಿ, ಆತ ಸದ್ಗುರುಮೂರ್ತಿಯ ಕರದಲ್ಲಿ ಬಂದ ಲಿಂಗ, ಕರ್ಣದಲ್ಲಿ ಹೇಳಿದ ಮಂತ್ರ, ಕಪಾಲವ ಮುಟ್ಟಿದ ತಂತ್ರ. ಆದು ಸದ್ಗುರು ಕಾರುಣ್ಯ, ಆ ಶಿಷ್ಯಂಗೆ ಜೀವನ್ನುಕ್ತಿ. ಇದು ಆಚಾರ್ಯಮತ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ನೇಮಕ್ಕೆ ತಪ್ಪದ ಗುರು ಎನ್ನವ, ಶೀಲಕ್ಕೆ ತಪ್ಪದ ಲಿಂಗ ಎನ್ನದು, ವ್ರತಾಚಾರಕ್ಕೆ ತಪ್ಪದ ಜಂಗಮ ಎನ್ನ ಮನೋಮೂರ್ತಿ. ಹೀಗಲ್ಲದೆ, ಕ್ರೀಗೆ ನಿಲ್ಲದ ಗುರು ಆತ ಭವಭಾರಿ, ಆಚಾರಕ್ಕೆ ಸಲ್ಲದ ಲಿಂಗ ಅದು ಪಾಷಾಣ. ಆ ವ್ರತದ ಆಚಾರದ ದೆಸೆಯ ದೂಷಣೆ ಜಂಗಮವೇಷದ ಘಾತಕ. ಇಂತೀ ಎನ್ನ ವ್ರತಕ್ಕೆ, ಎನ್ನ ಆಚಾರಕ್ಕೆ, ಎನ್ನ ಭಾವಕ್ಕೆ, ಎನ್ನ ಸಮಕ್ರೀವಂತನಾಗಿ, ಸಮಶೀಲವಂತನಾಗಿ, ಸಮಭಾವವಂತನಾಗಿ, ಸಮಪಥ ಸತ್ಪಥನಾಗಿ, ಇಪ್ಪಾತನೆ ಎನ್ನ ತ್ರಿವಿಧಕ್ಕೆ ಒಡೆಯ, ಇತ್ತಳವ. ಈ ಗುಣಕ್ಕೆ ಒಪ್ಪದೆ ತ್ರಿವಿಧದ ಕಚ್ಚಾಟಕ್ಕೆ ಮಚ್ಚಿ ಹೋರುವವ, ತ್ರಿವಿಧದತ್ತಳವ. ಇದಕ್ಕೆ ಎನಗೆ ನಿಶ್ಚಯ. ಎನ್ನ ವ್ರತಾಚಾರಕ್ಕೆ ಅನುಕೂಲವಾಗದ ಏಲೇಶ್ವರಲಿಂಗವಾಯಿತ್ತಾದಡೂ ಇಹಪರಕ್ಕೆ ಹೊರಗೆಂದು ಡಂಗುರವಿಕ್ಕಿದೆ.
--------------
ಏಲೇಶ್ವರ ಕೇತಯ್ಯ
ಯೋನಿಯಲ್ಲಿ ಜನಿಸಿದ ಭಾವ ಸಂಸಾರದಲ್ಲಿ ತೊಳಲುವುದೇ ಸಾಕ್ಷಿ. ಸಂಸಾರದಲ್ಲಿ ತೊಳಲುವ ಭಾವ ಮುಂದೆ ಮರಣಬಾಧೆಯಲ್ಲಿ ಮುಳುಗುವುದೇ ಸಾಕ್ಷಿ. ಅದಲ್ಲದೆ ಗುರುವಿನಲ್ಲಿ ಜನಿಸಿದ ಭಾವ ಸರ್ವಾಚಾರ ಸಂಪತ್ತಿನೊಳಗೆ ಭೋಗೋಪಭೋಗಿಯಾಗಿಹುದೇ ಸಾಕ್ಷಿ. ಸರ್ವಾಚಾರಸಂಪತ್ತಿನೊಳಗೆ ಭೋಗೋಪಭೋಗಿಯಾಗಿರ್ದ ಭಾವ ಮಹಾಲಿಂಗೈಕ್ಯಪದಲೋಲವಾದುದೇ ಸಾಕ್ಷಿ. ಇದು ಕಾರಣ ಆ ಭಾವಕ್ಕೆ ಸಂದುಸಂಶಯದ ಗೊಂದಣವುಂಟಲ್ಲದೆ ಈ ಭಾವಕ್ಕೆ ಸಂದುಸಂಶಯದ ಗೊಂದಣವುಂಟೆ ? ಇದೇ ಗುರುನಿರಂಜನ ಚನ್ನಬಸವಲಿಂಗ ತಾನಾದ ಶರಣಸದ್ಭಾವ.
--------------
ದೇಶಿಕೇಂದ್ರ ಸಂಗನಬಸವಯ್ಯ
ಇಷ್ಟಲಿಂಗವ ಹಿಡಿದು ಪೂಜೆಯ ಮಾಡುವಲ್ಲಿ, ಕಷ್ಟಗುಣಕ್ಕೆ ಬಾರದಿರಬೇಕು. ಪ್ರಾಣಲಿಂಗವನರಿದು ಭಾವಿಸಿದಲ್ಲಿ, ಜಾಗ್ರ ಸ್ವಪ್ನ ಸುಷುಪ್ತಿ ವಿಪತ್ತಿ ಲಯಕ್ಕೊಳಗಾಗದಿರಬೇಕು. ಹೀಂಗೆ ಉಭಯವನರಿದು ದಗ್ಧವಾದಂಬರದಂತೆ, ವಾರಿಯ ಕೂಡಿದ ಕ್ಷೀರದಂತೆ, ಭಾವಕ್ಕೆ ಭ್ರಮೆಯಿಲ್ಲದೆ, ಸಾಕಾರವ ಮರೆದು, ಪರತ್ರಯದ ತುತ್ತಿಂಗೆ ತುಚ್ಛನಾಗದೆ, ನಿಶ್ಚಯನಾದ ಮಹಾತ್ಮಂಗೆ ನಮೋ ನಮೋ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಎನ್ನ ಸ್ಥೂಲತನುವಿಂಗೆ ಇಷ್ಟಲಿಂಗವಾದಾತ ಬಸವಣ್ಣ. ಎನ್ನ ಸೂಕ್ಷ್ಮತನುವಿಂಗೆ ಪ್ರಾಣಲಿಂಗವಾದಾತ ಬಸವಣ್ಣ. ಎನ್ನ ಕಾರಣತನುವಿಂಗೆ ಭಾವಲಿಂಗವಾದಾತ ಬಸವಣ್ಣ. ಎನ್ನ ದೃಕ್ಕಿಂಗೆ ಇಷ್ಟಲಿಂಗವಾದಾತ ಬಸವಣ್ಣ. ಎನ್ನ ಮನಕ್ಕೆ ಪ್ರಾಣಲಿಂಗವಾದಾತ ಬಸವಣ್ಣ. ಎನ್ನ ಭಾವಕ್ಕೆ ತೃಪ್ತಿಲಿಂಗವಾದಾತ ಬಸವಣ್ಣ. ಎನ್ನ ನಾಸಿಕಕ್ಕೆ ಆಚಾರಲಿಂಗವಾದಾತ ಬಸವಣ್ಣ. ಎನ್ನ ಜಿಹ್ವೆಗೆ ಗುರುಲಿಂಗವಾದಾತ ಬಸವಣ್ಣ. ಎನ್ನ ನೇತ್ರಕ್ಕೆ ಶಿವಲಿಂಗವಾದಾತ ಬಸವಣ್ಣ. ಎನ್ನ ತ್ವಕ್ಕಿಂಗೆ ಜಂಗುರುಲಿಂಗವಾದಾತ ಬಸವಣ್ಣ. ಎನ್ನ ಶ್ರೋತ್ರಕ್ಕೆ ಪ್ರಸಾದಲಿಂಗವಾದಾತ ಬಸವಣ್ಣ. ಎನ್ನ ಹೃದಯಕ್ಕೆ ಮಹಾಲಿಂಗವಾದಾತ ಬಸವಣ್ಣ. ಎನ್ನ ಸುಚಿತ್ತವೆಂಬ ಹಸ್ತಕ್ಕೆ ಆಚಾರಲಿಂಗವಾದಾತ ಬಸವಣ್ಣ. ಎನ್ನ ಸುಬುದ್ಧಿಯೆಂಬ ಹಸ್ತಕ್ಕೆ ಗುರುಲಿಂಗವಾದಾತ ಬಸವಣ್ಣ. ಎನ್ನ ನಿರಹಂಕಾರವೆಂಬ ಹಸ್ತಕ್ಕೆ ಶಿವಲಿಂಗವಾದಾತ ಬಸವಣ್ಣ. ಎನ್ನ ಸುಮನವೆಂಬ ಹಸ್ತಕ್ಕೆ ಜಂಗಮಲಿಂಗವಾದಾತ ಬಸವಣ್ಣ. ಎನ್ನ ಸುಜ್ಞಾನವೆಂಬ ಹಸ್ತಕ್ಕೆ ಪ್ರಸಾದಲಿಂಗವಾದಾತ ಬಸವಣ್ಣ. ಎನ್ನ ಸದ್ಭಾವವೆಂಬ ಹಸ್ತಕ್ಕೆ ಮಹಾಲಿಂಗವಾದಾತ ಬಸವಣ್ಣ. ಎನ್ನ ಆಧಾರಚಕ್ರದಲ್ಲಿ ಆಚಾರಲಿಂಗವಾಗಿ ಮೂರ್ತಿಗೊಂಡಾತ ಬಸವಣ್ಣ. ಎನ್ನ ಸ್ವಾದಿಷ್ಠಾನಚಕ್ರದಲ್ಲಿ ಗುರುಲಿಂಗವಾಗಿ ಮೂರ್ತಿಗೊಂಡಾತ ಬಸವಣ್ಣ. ಎನ್ನ ಮಣಿಪೂರಕಚಕ್ರದಲ್ಲಿ ಶಿವಲಿಂಗವಾಗಿ ಮೂರ್ತಿಗೊಂಡಾತ ಬಸವಣ್ಣ. ಎನ್ನ ಅನಾಹತಚಕ್ರದಲ್ಲಿ ಜಂಗಮಲಿಂಗವಾಗಿ ಮೂರ್ತಿಗೊಂಡಾತ ಬಸವಣ್ಣ. ಎನ್ನ ವಿಶುದ್ಧಿ ಚಕ್ರದಲ್ಲಿ ಪ್ರಸಾದಲಿಂಗವಾಗಿ ಮೂರ್ತಿಗೊಂಡಾತ ಬಸವಣ್ಣ. ಎನ್ನ ಆಜ್ಞಾಚಕ್ರದಲ್ಲಿ ಮಹಾಲಿಂಗವಾಗಿ ಮೂರ್ತಿಗೊಂಡಾತ ಬಸವಣ್ಣ. ಎನ್ನ ಬ್ರಹ್ಮರಂಧ್ರದಲ್ಲಿ ನಿಃಕಲಲಿಂಗವಾಗಿ ಮೂರ್ತಿಗೊಂಡಾತ ಬಸವಣ್ಣ. ಎನ್ನ ಶಿಖಾಚಕ್ರದಲ್ಲಿ ಶೂನ್ಯಲಿಂಗವಾಗಿ ಮೂರ್ತಿಗೊಂಡಾತ ಬಸವಣ್ಣ. ಎನ್ನ ಪಶ್ಚಿಮಚಕ್ರದಲ್ಲಿ ನಿರಂಜನಲಿಂಗವಾಗಿ ಮೂರ್ತಿಗೊಂಡಾತ ಬಸವಣ್ಣ. ಎನ್ನ ವದನಕ್ಕೆ ಓಂಕಾರವಾದಾತ ಬಸವಣ್ಣ. ಎನ್ನ ಬಲದ ಭುಜಕ್ಕೆ ನಕಾರವಾದಾತ ಬಸವಣ್ಣ. ಎನ್ನ ಎಡದ ಭುಜಕ್ಕೆ ಮಕಾರವಾದಾತ ಬಸವಣ್ಣ. ಎನ್ನ ಒಡಲಿಂಗೆ ಶಿಕಾರವಾದಾತ ಬಸವಣ್ಣ. ಎನ್ನ ಬಲದ ಪಾದಕ್ಕೆ ವಕಾರವಾದಾತ ಬಸವಣ್ಣ. ಎನ್ನ ಎಡದ ಪಾದಕ್ಕೆ ಯಕಾರವಾದಾತ ಬಸವಣ್ಣ. ಎನ್ನಾ ಆಪಾದಮಸ್ತಕ ಪರಿಯಂತರ ಮಂತ್ರರೂಪಕಸಂಬಂಧವಾದಾತ ಬಸವಣ್ಣ. ಎನ್ನ ನಾದಕ್ಕೆ ಆಕಾರವಾದಾತ ಬಸವಣ್ಣ. ಎನ್ನ ಬಿಂದುವಿಂಗೆ ಉಕಾರವಾದಾತ ಬಸವಣ್ಣ. ಎನ್ನ ಕಳೆಗೆ ಮಕಾರವಾದಾತ ಬಸವಣ್ಣ. ಎನ್ನ ರುದ್ಥಿರಕ್ಕೆ ನಕಾರವಾದಾತ ಬಸವಣ್ಣ. ಎನ್ನ ಮಾಂಸಕ್ಕೆ ಮಕಾರವಾದಾತ ಬಸವಣ್ಣ. ಎನ್ನ ಮೇಧಸ್ಸಿಂಗೆ ಶಿಕಾರವಾದಾತ ಬಸವಣ್ಣ. ಎನ್ನ ಅಸ್ಥಿಗೆ ವಕಾರವಾದಾತ ಬಸವಣ್ಣ. ಎನ್ನ ಮಜ್ಜೆಗೆ ಯಕಾರವಾದಾತ ಬಸವಣ್ಣ. ಎನ್ನ ಸರ್ವಾಂಗಕ್ಕೆ ಓಂಕಾರವಾದಾತ ಬಸವಣ್ಣ. ಇಂತು ಬಸವಣ್ಣನೆ ಪರಿಪೂರ್ಣನಾಗಿ, ಬಸವಣ್ಣನೆ ಪ್ರಾಣವಾಗಿ, ಬಸವಣ್ಣನೆ ಅಂಗವಾಗಿ, ಬಸವಣ್ಣನೆ ಲಿಂಗವಾದ ಕಾರಣ, ನಾನು ಬಸವಣ್ಣಾ ಬಸವಣ್ಣಾ ಬಸವಣ್ಣಾ ಎಂದು ಬಯಲಾದೆನು ಕಾಣಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಭಾವಕ್ಕೆ ಇಂಬಿಲ್ಲ ಶಬ್ದ ಮೀಸಲು ನೋಡಾ. ನುಡಿಗೆ ಎಡೆಯಿಲ್ಲ ಎಡೆಗೆ ಕಡೆಯಿಲ್ಲ, ಗುಹೇಶ್ವರನೆಂಬ ಶಬ್ದ ವೇದಿಸಲೊಡನೆ
--------------
ಅಲ್ಲಮಪ್ರಭುದೇವರು
ಕರಸ್ಥಲದ ಲಿಂಗವೆ ಕಾಯಕ್ಕೆ ವೇಧಿಸಿದಲ್ಲಿ, ಕಾಯ ಲಿಂಗವಾಯಿತ್ತು. ಅಂತಾದ ಮಹಾಘನಲಿಂಗವೆ ಪ್ರಾಣಕ್ಕೆ ವೇಧಿಸಿದಲ್ಲಿ ಪ್ರಾಣ ಲಿಂಗವಾಯಿತ್ತು, ಅಂತಾದ ಮಹಾಘನಲಿಂಗವೆ ಭಾವಕ್ಕೆ ವೇಧಿಸಿದಲ್ಲಿ ಭಾವ ಲಿಂಗವಾಯಿತ್ತು. ಅಂತಾದ ಮಹಾಘನಲಿಂಗವೆ ಜ್ಞಾನಕ್ಕೆ ವೇಧಿಸಿದಲ್ಲಿ ಜ್ಞಾನ ಲಿಂಗವಾಯಿತ್ತು. ಅಂತಾದ ಕಾರಣ_ನಮ್ಮ ಗುಹೇಶ್ವರನ ಶರಣಂಗೆ, ಅರಿವರತು ಕುರುಹು ನಿಷ್ಪತಿಯಾಗಿ, ತಾನೆಂಬ ಭಾವವು ಉರಿಯುಂಡ ಕರ್ಪುರದಂತಾಯಿತ್ತು
--------------
ಅಲ್ಲಮಪ್ರಭುದೇವರು
ವ್ರತಸ್ಥನಾಗಿದ್ದಾತ ಸಮೂಹಪ್ರಸಾದವ ಕೊಳಲಾಗದು. ಅದೆಂತೆಂದಡೆ: ಬಾಲರು ಭ್ರಾಮಕರು ಚೋರರು ಕಟುಕರು ಪಾರದ್ವಾರಿಗಳು ಜಾರರು ಪಗುಡಿ ಪರಿಹಾಸಕರು_ ಅವರಲ್ಲಿ ಪ್ರಸಾದದ ನಚ್ಚು ಮಚ್ಚುಂಟೆ? ಪ್ರಸಾದವ ಕೊಂಬಲ್ಲಿ ಸಮಶೀಲಸಂಪನ್ನರು, ಏಕಲಿಂಗನಿಷ್ಠವಂತರು. ಸರ್ವಾಂಗಲಿಂಗಪರಿಪೂರ್ಣರು, ಪರಮನಿರ್ವಾಣಪರಿಪೂರ್ಣರು. ಇಂತೀ ಇವರೊಳಗಾದ ಸರ್ವಗುಣಸಂಪನ್ನಂಗೆ ಗಣಪ್ರಸಾದವಲ್ಲದೆ ಕಾಗೆಯಂತೆ ಕರೆದು, ಕೋಳಿಯಂತೆ ಕೂಗಿ, ಡೊಂಬರಂತೆ ಕೂಡಿ ಆಡಿ, ಭಂಗ ಹಿಂಗದಿದ್ದಡೆ ಕೊಂಡಾಡುವ ಆ ಲಾಗ ನೋಡಿಕೊಳ್ಳಿ. ನಿಮ್ಮ ಭಾವಕ್ಕೆ ನಿಮ್ಮ ಭಾವವೆ ದೃಷ್ಟಸತ್ಯ, ಮರೆಯಿಲ್ಲ, ಭಕ್ತಿಗೆ ಇದಿರೆಡೆಯಿಲ್ಲ, ವ್ರತಗೆಟ್ಟವಂಗೆ ಆಚಾರಭ್ರಷ್ಟಂಗೆ ಕಟ್ಟು ಮೆಟ್ಟ ಮಾಡಲಿಲ್ಲ. ಇದು ಕಟ್ಟಾಚಾರಿಯ ದೃಷ್ಟ, ಏಲೇಶ್ವರಲಿಂಗವು ಸರ್ವಶೀಲವಂತನಾದ ಸಂಬಂಧಸಂಪದದಂಗ.
--------------
ಏಲೇಶ್ವರ ಕೇತಯ್ಯ
ನಾನೆಂದಡೆ ಸ್ವತಂತ್ರಿಯಲ್ಲ. ನೀನೆಂದು ಇದಿರಿಟ್ಟಲ್ಲಿ ಭಾವಕ್ಕೆ ಬ್ಥಿನ್ನ. ನಾನೆನಬಾರದು, ನೀನೆನಬಾರದು. ಅರ್ಕೇಶ್ವರಲಿಂಗವ ಏನೂ ಎನಬಾರದು.
--------------
ಮಧುವಯ್ಯ
ಸುರತರು ವೃಕ್ಷದೊಳಗಲ್ಲ; ಸುರಧೇನು ಪಶುವಿನೊಳಗಲ್ಲ; ಪರುಷ ಪಾಷಾಣದೊಳಗಲ್ಲ; ಶಿಷ್ಯನ ಭಾವಕ್ಕೆ ಗುರು ನರನಲ್ಲ; ಗುರುವೇ ಪರಮೇಶ್ವರನೆಂದು ಭಾವಿಸಬಲ್ಲಡೆ ಶಿಷ್ಯನೆಂಬೆನಯ್ಯಾ. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಚ್ಚಭಕ್ತನ ಭಾವಕ್ಕೆ ಗುರುಲಿಂಗಜಂಗಮವು ಬಂದ ಬರವು- ವೃದ್ಧಂಗೆ ಯೌವ್ವನ, ಮೂರ್ಖಂಗೆ ವಿದ್ಯೆ, ಸುಖಿಗೆ ಆಯುಷ್ಯ, ಯಾಚಕಂಗರ್ಥ, ಮರಣವನೈದುವಂಗೆ ಮರುಜೀವಣಿ ಬಂದಂತೆ. ಗುರುನಿರಂಜನ ಚನ್ನಬಸವಲಿಂಗದಲ್ಲಿ ಅಬ್ಥಿನ್ನವಾದ ಕಾರಣ.
--------------
ದೇಶಿಕೇಂದ್ರ ಸಂಗನಬಸವಯ್ಯ
ಸುಖದ ಸುಖಿಗಳ ಸಂಭಾಷಣೆಯಿಂದ ದುಃಖಕ್ಕೆ ವಿಶ್ರಾಮವಾಯಿತ್ತು. ಭಾವಕ್ಕೆ ತಾರ್ಕಣೆಯಾದಲ್ಲಿ, ನೆನಹಕ್ಕೆ ವಿಶ್ರಾಮವಾಯಿತ್ತು. ಬೆಚ್ಚು ಬೆರಸಲೊಡನೆ ಮಚ್ಚು ಒಳಕೊಂಡಿತ್ತಯ್ಯಾ, ಚೆನ್ನಮಲ್ಲಿಕಾರ್ಜುನಯ್ಯಾ ನಿಮ್ಮ ಶರಣರ ಸಂಗದಿಂದ.
--------------
ಅಕ್ಕಮಹಾದೇವಿ
ಇನ್ನಷ್ಟು ... -->