ಅಥವಾ

ಒಟ್ಟು 131 ಕಡೆಗಳಲ್ಲಿ , 28 ವಚನಕಾರರು , 69 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಕ್ತನೊಂದು ಕುಲ, ಭವಿಯೊಂದು ಕುಲವೆಂಬರು. ಭಕ್ತನೆಂತಿಪ್ಪ ಭವಿಯೆಂತಿಪ್ಪನೆಂದರೆ, ಆರೂ ಅರಿಯರು. ಇದು ಬಲ್ಲವರು ತಿಳಿದು ನೋಡಿ. ಭಕ್ತನೆಂದರೆ ಅಂಗ, ಭವಿ ಎಂದರೆ ಲಿಂಗ, ಈ ಎರಡರ ಸಕೀಲಸಂಬಂಧವನರಿದರೆ, ಆತನೆ ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ.
--------------
ಹಡಪದ ಅಪ್ಪಣ್ಣ
ಭಕ್ತನೆದ್ದು ಭವಿಯ ಮುಖವ ಕಂಡರೆ, gõ್ಞರವ ನರಕವೆಂಬರು. ಭಕ್ತನಾವನು ? ಭವಿಯಾವನು ? ಬಲ್ಲರೆ ಹೇಳಿ, ಅರಿಯದಿದ್ದರೆ ಕೇಳಿ. ಕಾಮ ಒಂದನೆಯ ಭವಿ, ಕ್ರೋಧ ಎರಡನೆಯ ಭವಿ, ಲೋಭ ಮೂರನೆಯ ಭವಿ, ಮೋಹ ನಾಲ್ಕನೆಯ ಭವಿ, ಮದ ಐದನೆಯ ಭವಿ, ಮತ್ಸರ ಆರನೆಯ ಭವಿ. ಇಂತೀ ಷಡ್ವಿಧ ಭವಿಯ ತಮ್ಮೆದೆಯೊಳಗೆ ಇಂಬಿಟ್ಟುಕೊಂಡು, `ನಾನು ಭವಿಯ ಮೋರೆಯ ಕಾಣಬಾರದು, ಎಂದು ಮುಖದ ಮೇಲೆ ವಸ್ತ್ರವ ಬಾಸಣಿಸಿಕೊಂಡು ತಿರುಗುವ ಕುನ್ನಿಗಳ ಮೆಚ್ಚುವನೆ ಕೂಡಲಚೆನ್ನಸಂಗಮದೇವ ?
--------------
ಚನ್ನಬಸವಣ್ಣ
ಎಲೆ ಎಲೆ, ಭಕ್ತ ಭವಿ ಎಂಬೋ ನೀತಿಯಂ ಕೇಳು : ಭಕ್ತ ದಾರು ? ಭವಿ ದಾರು ? ಎಂದಡೆ, ಎಲಾ, ಯಾವ ಕುಲ[ದವ]ನಾದಡೆ ಸರಿಯೋ ? ಯಾವ ದೇವರು ಆದರೆ ಸರಿಯೋ ? ಎಲ್ಲಾ ದೇವರಿಗೂ ಆತ್ಮಲಿಂಗವಾಗಿಪ್ಪನೇ ಮಹಾದೇವನೆಂದು ಹೇಳುವುದು ಶ್ರುತಿವಾಕ್ಯ. ಇದರೊಳಗೆ ಏಕದೈವವನು ಪಿಡಿದು ಪೂಜಿಸಿ, ಧ್ಯಾನಿಸಿ, ನಮಸ್ಕರಿಸಿ, ಕ್ರಿಯಾಚಾರದಿಂ ನಡೆದು, ನೀತಿಗಳನೋದಿ, ನಿರ್ಮಳಚಿತ್ತನಾದಡೆ ಭಕ್ತ. ಇದಂ ಮರೆದು, ಹಲವು ಕಾಲ ಲಿಂಗಧ್ಯಾನ, ಹಲವು ಕಾಲ ಹರಿಧ್ಯಾನ, ಹಲವು ಕಾಲ ಬ್ರಹ್ಮಧ್ಯಾನ, ಹಲವು ಕಾಲ ಎಲ್ಲಮ್ಮ, ಎಕನಾತಿ, ಶಾಕಿನಿ, ಡಾಕಿನಿ ಕಲ್ಲು ಮರದೊಳಗಿಪ್ಪ ದೇವರ ಪೂಜಿಸಿದಡೆ, ಎಲ್ಲಾರ ಎಂಜಲ ತಿಂಬೋರ ಎಂಜಲ [ತಿಂದು], ಭಕ್ತನೆಂದರಿಯದೆ, ಪ್ರಸಾದದ ಮಹಾತ್ಮೆಯ ತಿಳಿವ ತಿಳಿಯದೆ, ಧನದ ಪಿಶಾಚಿ ಎಂದು ಧರ್ಮ ಪರಹಿತಾರ್ಥವನು ಮರೆದು, ನಿತ್ಯ ನಿತ್ಯ ಅನ್ನಕ್ಲೇಶದಲ್ಲಿ ಹೊರಳುವ[ವ] ಲಿಂಗದೇಹಿಕನಾದಡೆಯು ಬ್ರಾಹ್ಮಣನಾದೆಡೆಯು, ಇವನೇ ಭವಿ. ಇಂತಾ ಭಕ್ತ ಭವಿಗಳ ನೆಲೆಯ ತಿಳಿದು ನಮ್ಮ ಶರಣರು ನಿರ್ಲೇಪ ದೇಹಮಂ ಅಂಗೀಕರಿಸಿ ಪೋದರು ಕಾಣಾ ಕೂಡಲಾದಿ ಚನ್ನಸಂಗಮದೇವಾ.
--------------
ಕೂಡಲಸಂಗಮೇಶ್ವರ
ಸತ್ಯನಲ್ಲ, ಅಸತ್ಯನಲ್ಲ. ಕರ್ಮಿಯಲ್ಲ, ಧರ್ಮಿಯಲ್ಲ, ನಿಃಕರ್ಮಿಯಯ್ಯ ಭಕ್ತನು. ಆಚಾರನಲ್ಲ ಅನಾಚಾರನಲ್ಲ; ಪುಣ್ಯ ಪಾಪ ವಿರಹಿತನಾಗಿ ನಿಷ್ಪಾಪಿಯಯ್ಯ ಭಕ್ತನು. ವ್ರತ ನೇಮ ಮಂತ್ರ ತಂತ್ರ ಭವಿ ಭಕ್ತನೆಂಬುವುದಿಲ್ಲ ನೋಡಾ, ಲಿಂಗೈಕ್ಯಂಗೆ. ಸವಿಕಲ್ಪನಲ್ಲ. ನಿರ್ವಿಕಲ್ಪನಲ್ಲ. ಸೀಮನಲ್ಲ. ನಿಸ್ಸೀಮನಲ್ಲ. ಪರಮ ನಿರಂಜನನು ತಾನೆ ನೋಡಾ ಭಕ್ತನು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಹೊರಗಣ ಭವಿಯ ಕಳೆದೆವೆಂಬರು, ಒಳಗಣ ಭವಿಯ ಕಳೆಯಲರಿಯರು. ಕಾಮವೆಂಬುದೊಂದು ಭವಿ, ಕ್ರೋಧವೆಂಬುದೊಂದು ಭವಿ, ಲೋಭವೆಂಬುದೊಂದು ಭವಿ, ಮೋಹವೆಂಬುದೊಂದು ಭವಿ, ಮದವೆಂಬುದೊಂದು ಭವಿ, ಮಚ್ಚರವೆಂಬುದೊಂದು ಭವಿ, ಆಸೆಯೆಂಬುದೊಂದು ಭವಿ, ಆಮಿಷವೆಂಬುದೊಂದು ಭವಿ, ಹೊನ್ನೆಂಬುದೊಂದು ಭವಿ, ಹೆಣ್ಣೆಂಬುದೊಂದು ಭವಿ, ಮಣ್ಣೆಂಬುದೊಂದು ಭವಿ. ಇಂತೀ ಭವಿಯ ಕಳೆದುಳಿದ ಕೂಡಲಚೆನ್ನಸಂಗಾ ನಿಮ್ಮ ಶರಣ.
--------------
ಚನ್ನಬಸವಣ್ಣ
ಭವಿತನಕ್ಕೆ ಹೇಸಿ ಭಕ್ತನಾದ ಬಳಿಕ ಭವಿಯ ಸಂಗ ಮತ್ತೇಕಯ್ಯಾ ? ಕಾಮನು ಬಾಣವಕೊಂಡು, ತನು ತನುಮುಖಕ್ಕೆ ಎಚ್ಚರೆ ಭವಿ ಬಳಿಕವುಂಟು ನೋಡಾ ! ಕಾಮನ ಬಾಣವ ಮುರಿದು ಮಾಯದ ಸಂಚವ ಕೆಡಿಸಿ ಎನಗೆ ತನಗೆಂಬುದಳಿದ ಬಳಿಕ ಲಿಂಗಸಂಗಿ ಶರಣನಾಗಿಪ್ಪನು. ಭವ ಬಳಿಕೆಲ್ಲಿಯದೊ ? ಅಂತರಂಗದ ಅನುಭವವರಿದು ಮನದ ಆಗು ಹೋಗಬಲ್ಲರೆ, ಕೂಡಲಚೆನ್ನಸಂಗನಲ್ಲಿ ಲಿಂಗಸಂಗಿ ಶರಣನ್ಞಗಿಪ್ಪನು.
--------------
ಚನ್ನಬಸವಣ್ಣ
ಹೊರಗೆ ಚಿಲಮೆ, ಒಳಗೆ ಮೂತ್ರದ ಕುಳಿ. ಹೊರಗೆ ಸ್ವಯಂಪಾಕ, ಒಳಗೆ ಅಧರಪಾಕ. ಹೊರಗೆ ಭವಿ ನಿರಸನ, ಒಳಗೆ ಭವಿಸಂಗ ಕೂಟ. ಇಂತಿವೆಲ್ಲವು, ಆಡುವ ವಿಧಾಂತ, ನೇಮವ ಹಿಡಿದಂತಾಯಿತ್ತು. ಇಂತೀ ಗುಣವನೊಪ್ಪ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು.
--------------
ಶಿವಲೆಂಕ ಮಂಚಣ್ಣ
ಕುಲ ಎಷ್ಟು ಎಂದಡೆ, ಎರಡು ಕುಲ. ಅವಾವೆಂದಡೆ : ಭವಿ ಒಂದು ಕುಲ, ಭಕ್ತ ಒಂದು ಕುಲ. ಅಷ್ಟಾವರಣವೇ ಅಂಗವಾಗಿ, ಪಂಚಾಚಾರವೇ ಪ್ರಾಣವಾಗಿಪ್ಪ ಭಕ್ತರ ಕುಲವನರಸಿದಡೆ ಬಾರದ ಭವಂಗಳಲ್ಲಿ ಬಪ್ಪುದು ತಪ್ಪುದು. ನೀರಿಂದಾದ ಮುತ್ತು ಮರಳಿ ಉದಕವಪ್ಪುದೆ ? ಆಕಾಶಕ್ಕೆ ಹೋದ ಹೊಗೆ ಹಿಂದಕ್ಕೆ ಬಪ್ಪುದೆ ? ಮಣ್ಣಿಂದಾದ ಮಡಕೆ ಮತ್ತೆ ಮಣ್ಣಪ್ಪುದೆ ? ಮತ್ತೆ ವಾಮನಮುನಿ ಹಿರಿಯ ಭಕ್ತರ ಮನೆಯ ಬಿನ್ನಹವ ಕೈಕೊಂಡು ಕುಲಕಂಜಿ ಉಣಲೊಲ್ಲದೆ ಹೋದ ನಿಮಿತ್ತದಿಂದ, ಹಾವಿನಹಾಳ ಕಲ್ಲಯ್ಯಗಳ ಮನೆಯ ಶ್ವಾನನಾಗಿ ಹುಟ್ಟಲಿಲ್ಲವೆ ? ಅದು ಕಾರಣ, ಶಿವಭಕ್ತರ ಒಕ್ಕುಮಿಕ್ಕ ಪ್ರಸಾದವ ಕೊಳಬೇಕು ಎಂದಾತ ನಮ್ಮ ಶಾಂತಕೂಡಲಸಂಗಮದೇವ.
--------------
ಗಣದಾಸಿ ವೀರಣ್ಣ
ಅಚ್ಚಪ್ರಸಾದವೆಂದು ಮನದಿಚ್ಫೆಗೆ ಗಡಣಿಸಿಕೊಂಬ ದುರಾಚಾರಿಯ ಮಾತ ಕೇಳಲಾಗದು. ಭವಿ ಕೊಂಡುದು ಓಗರ, ಭಕ್ತ ಕೊಂಡುದು ಅನರ್ಪಿತ. ಇಂತೀ ಉಭಯವನರಿದು ಪ್ರಸಾದವ ಕೊಂಡೆನ್ನ ಭವಂ ನಾಸ್ತಿಯಾಯಿತ್ತು ಕಾಣಾ, ಕಲಿದೇವಯ್ಯಾ.
--------------
ಮಡಿವಾಳ ಮಾಚಿದೇವ
ಜಲ ನೆಲ ಶಿಲೆ ತಾನಾಡುವ ಹೊಲ ಮುಂತಾಗಿ ಸರ್ವವೆಲ್ಲವು ಲಿಂಗಾಯತಸಂಬಂಧವಾಗಿ, ಭವಿಸಂಗ, ಭವಿನಿರೀಕ್ಷಣೆ, ಭವಿ ಅಪೇಕ್ಷೆ, ಭವಿದ್ರವ್ಯಂಗಳನೊಲ್ಲದೆ, ಶಿವನನರಿವರಲ್ಲಿ, ಶಿವನ ಪೂಜೆಯ ಮಾಡುವರಲ್ಲಿ, ಶಿವಮೂರ್ತಿಧ್ಯಾನದಿಂದ ಶಿವಲಿಂಗಾರ್ಚನೆಯ ಮಾಡುವರಲ್ಲಿ, ಶಿವಪ್ರಸಾದವ ಕಾಡಿ ಬೇಡಿ ತಂದು ಒಡೆಯನಿಗಿತ್ತು ಆ ಪ್ರಸಾದವ ಏಲೇಶ್ವರಲಿಂಗಕ್ಕೆ ಕೊಟ್ಟ ಆ ವ್ರತಭಾವಿಗೆ ನಮೋ ನಮೋ ಎನುತಿದ್ದೆ.
--------------
ಏಲೇಶ್ವರ ಕೇತಯ್ಯ
ಭವಿಯ ಕಳೆದು ಭಕ್ತನಾದ ಬಳಿಕ ಭವಿ ನಂಟನೆಂದು ಹೊಗಿಸಲಾಗದು. ನಂಟುತನಕ್ಕೆ ಆತ್ಮನಿಚ್ಛೆಗೆ ಅಳುಪಿ ಭವಿಯೊಡನುಂಡಡೆ ಹಂದಿಯ ಬಾಯ ತುತ್ತ ನಾಯಿ ಸೆಳತಿಂದಂತೆ ಕಾಣಾ!ರಾಮನಾಥ.
--------------
ಜೇಡರ ದಾಸಿಮಯ್ಯ
ಭಕ್ತನೆ ಕುಲಜನೆಂಬರು, ಯುಕ್ತಿಯಲ್ಲಿ ವಿಚಾರಿಸರು ನೋಡಾ ! ವ್ಯಾಕುಳ ನಿರಾಕುಳವೆಂಬ ಎರಡು ಕುಳ ನೋಡಾ ! ವ್ಯಾಕುಳವೆ ಭವ, ನಿರಾಕುಳವೆ ನಿರ್ಭವ. ವ್ಯಾಕುಳವೆ ಪಾಪ, ನಿರಾಕುಳವೆ ಪುಣ್ಯ. ವ್ಯಾಕುಳವೆ ಭವಿ, ನಿರಾಕುಳವೆ ಭಕ್ತ. ಭವೇ ಬೀಜಂ ತಥಾ ಭಕ್ತಿರ್ಭಕ್ತಿಬೀಜಂ ತಥಾ ಶಿವಃ ಶಿವಬೀಜಂ ತಥಾ ಜ್ಞಾನಂ ಜ್ಞಾನಂ ತ್ರೈಲೋಕ್ಯ ದುರ್ಲಭಂ ಎಂಬುದಾಗಿ, ಜ್ಞಾನಿಗೆ ಕತ್ತಲೆಯಿಲ್ಲ, ಅಜಾತಂಗೆ ಹೊಲೆಯಿಲ್ಲ, ಕುಲಾಧೀಶ, ಕೂಡಲಚೆನ್ನಸಂಗಾ.
--------------
ಚನ್ನಬಸವಣ್ಣ
ಅಂಗದ ಮೇಲೆ ಲಿಂಗವಿಪ್ಪ ಶಿವಭಕ್ತನ ಕಂಡರೆ ಸಂಗಯ್ಯನ ಸಮವೆಂಬೆನಯ್ಯಾ. ಲಿಂಗವಿಲ್ಲದೆ ನಾಲ್ಕು ವೇದವನೋದುವ ವಿಪ್ರನಾದರೂ ಆಗಲಿ, ಹೊಲೆಮಾದಿಗರೇಳು ಜಾತಿಗಿಂತ ಕಡೆಯೆಂಬೆನಯ್ಯಾ. ತಾಯಿಲ್ಲದ ಮಕ್ಕಳಂತೆ, ಗಂಡನಿಲ್ಲದ ಮುಂಡೆಗೆ ಮುತ್ತೈದೆತನವುಂಟೇನಯ್ಯಾ ? ಲಿಂಗವಿಲ್ಲದ ಭವಿ ಏನನೋದಿ ಏನ ಹಾಡಿದರೂ ವ್ಯರ್ಥ. ಸಾಕ್ಷಿ :``ಮಾತಾ ನಾಸ್ತಿ ಯಥಾ ಸುತಂ ಪತಿರ್ನಾಸ್ತಿ ಯಥಾ ನಾರೀ | ಲಿಂಗಂ ನಾಸ್ತಿ ಯಥಾ ಪ್ರಾಣಂ ತಸ್ಯ ಜನ್ಮ ನಿರರ್ಥಕಂ ||'' ಇಂತೆಂಬುದನರಿಯದೆ ವಾಗದ್ವೈತದಿಂದ ತನುಲಿಂಗ ಮನಲಿಂಗ ಪ್ರಾಣಲಿಂಗವೆಂಬ ಹೊಲೆಯರ ಮುಖವನೆನಗೊಮ್ಮೆ ತೋರದಿರಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಶೀಲಶೀಲವೆಂಬ ಅಣ್ಣಗಳು ನೀವು ಕೇಳಿರೊ: ಕಾಮ ಒಂದನೆಯ ಭವಿ, ಕ್ರೋಧ ಎರಡನೆಯ ಭವಿ, ಲೋಭ ಮೂರನೆಯ ಭವಿ, ಮೋಹ ನಾಲ್ಕನೆಯ ಭವಿ, ಮದ ಐದನೆಯ ಭವಿ, ಮತ್ಸರ ಆರನೆಯ ಭವಿ. ಇಂತೀ ಷಡ್ವಿಧಭವಿಯ ತಮ್ಮ ಎದೆಯೊಳಗೆ ಇಂಬಿಟ್ಟುಕೊಂಡು ಅಂಗದ ಮೇಲೆ ಅವರಿಗೆ ಲಿಂಗವುಂಟೊ ? ಇಲ್ಲವೊ ? ಎಂಬ ಜಗಭಂಡರು ನೀವು ಕೇಳಿರೊ: ಅಚ್ಚಪ್ರಸಾದಿ ನಿಚ್ಚಪ್ರಸಾದಿ ! ಜಲವನೆ ಹೊಕ್ಕು ಕನ್ನವನಿಕ್ಕಿ ಅಗ್ಗಣಿಯ ತಂದು ಮಜ್ಜನಕ್ಕೆ ನೀಡುವ ಹಗಲುಗಳ್ಳರ ಮೆಚ್ಚುವನೆ ಕೂಡಲಚೆನ್ನಸಂಗಮದೇವ ?
--------------
ಚನ್ನಬಸವಣ್ಣ
ಹದ್ದ ನುಂಗಿದ ಕಾಗೆ ಬದ್ಧ ಭವಿ ನೋಡಾ. ಎದ್ದು ಹಾರಲು ಸಿದ್ಧರ ಗಾರುಡವೆಲ್ಲ ಬಿದ್ದೋಡಿವು ನೋಡಾ. ಬ್ರಹ್ಮಚರಿಯವೆಲ್ಲ ಭ್ರಮೆಗೊಂಡಿತ್ತು ನೋಡಾ. ತ್ರೆ ೈಜಗವೆಲ್ಲಾ ಮೂರ್ಛೆಗತರಾದರು ನೋಡಾ. ವೀರರು ದ್ಥೀರರು ವ್ರತಿಗಳು ಸಾಮಥ್ರ್ಯರೆಲ್ಲ ಮತಿಗೆಟ್ಟು ಮರುಳಾದರು ನೋಡಾ. ಸತಿ ಸುತರ ಕೂಟವನೊಲ್ಲೆನೆಂಬ ವಿರಕ್ತರೆಲ್ಲ ವಿಕಾರಗೊಂಡರು ನೋಡಾ. ಶಿವನಿರ್ಮಿತದಿಂದಾದ ಮಾಯವ ಪರಿಹರಿಸಿಹೆನೆಂದಡೆ, ಅಜ ಹರಿ ರುದ್ರಾದಿಗಳಿಗೆ ಅಸಾಧ್ಯ ನೋಡಾ. ಈ ಮಾಯಾ ಪ್ರಪಂಚ ಕಳೆವಡೆ ಪರಶಿವಜ್ಞಾನ ಮುಖದಿಂದ ಅಲ್ಲದೆ ಪರಿಹರವಾಗದು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಇನ್ನಷ್ಟು ... -->