ಅಥವಾ

ಒಟ್ಟು 100 ಕಡೆಗಳಲ್ಲಿ , 31 ವಚನಕಾರರು , 94 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಛಲಮದವೆಂಬುದು ತಲೆಗೇರಿ ಗುರುಹಿರಿಯರ ನೆಲೆಯನರಿಯದೆ ಮದಿಸಿಪ್ಪರಯ್ಯ. ರೂಪಮದ ತಲೆಗೇರಿ ಮುಂದುಗೊಂಡು ತಮ್ಮ ತನುವಿನ ರೂಪ ಚೆಲ್ವಿಕೆ ನೋಡಿ ಮರುಳಾಗಿ ಚಿದ್ರೂಪನ ನೆನವ ಮರೆದರಯ್ಯಾ. ಯವ್ವನಮದ ತಲೆಗೇರಿ ಮದಸೊಕ್ಕಿದಾನೆಯಂತೆ ಪ್ರಯಾಸಮತ್ತರಾಗಿ ಕಾಮನ ಬಲೆಯೊಳಗೆ ಸಿಲ್ಕಿ ಕಾಮಾರಿನೆನವ ಮರೆದರಯ್ಯಾ. ಧನಮದವೆಂಬುದು ತನುವಿನೊಳು ಇಂಬುಗೊಂಡು ಅರ್ಥಭಾಗ್ಯ ಕಾಡಿ ವ್ಯರ್ಥ ಸತ್ತಿತು ಲೋಕ. ವಿದ್ಯಾಮದವೆಂಬುದು ಬುದ್ಧಿಗೆಡಿಸಿ ನಾ ಬಲ್ಲವ ತಾ ಬಲ್ಲವನೆಂದು ತರ್ಕಿಸಿ ಪ್ರಳಯಕಿಳಿದರು. ರಾಜ್ಯಮದವೆದ್ದು ರಾಜ್ಯವನಾಡಿಸಿ ಬೇಡಿಸಿಕೊಂಡೆನೆಂದು ರಾಜರಾಜರು ಹತವಾದರು. ತಪಮದವೆದ್ದು ನಾ ತಪಸಿ ನಾ ಸಿದ್ಧ ನಾ ಯೋಗಿ ನನಗಾರು ಸರಿಯಿಲ್ಲವೆಂದು ಅಹಂಕಾರಕ್ಕೆ ಗುರಿಯಾಗಿ ಭವಕ್ಕೆ ಬಂದರು ಹಲಬರು. ಇಂತೀ ಅಷ್ಟಮದವೆಂಬ ಭ್ರಾಂತು[ವ] ತೊಲಗಿಸಿ ನಿಭ್ರಾಂತನಾಗಿರಬಲ್ಲರೆ ಶಿವಶರಣನೆಂಬೆ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಬಟ್ಟ ಬಯಲಲ್ಲಿ ಒಂದು ಶರಧಿ ಹುಟ್ಟಿತ್ತು. ಆ ಶರಧಿಯ ನಡುವೆ ಒಂದು ಕಮಲ ಹುಟ್ಟಿತ್ತು. ಆ ಕಮಲದ ನೆಲೆಯ ಕಾಣಲರಿಯದೆ ತೊಳಲಿ ಬಳಲಿ, ಜಗದೊಳಗೆ ನಚ್ಚುಮಚ್ಚಿಗೊಳಗಾಗಿ, ಚುಚ್ಚಳ ಪೂಜೆಗೆ ಸಿಲ್ಕಿ, ಕುಲಕೆ ಛಲಕೆ ಕೊಂದಾಡಿ, ಭವಕ್ಕೆ ಗುರಿಯಾಗುವ ಮನುಜರ ಕಂಡು ನಾಚಿತ್ತೆನ್ನ ಮನವು. ಆ ಮನದ ಬೆಂಬಳಿಗೊಂಡು ಹೋದವರೆಲ್ಲ ಮರುಳಾಗಿ ಹೋದರು. ಇದ ನೋಡಿ ನಾನು ಬಟ್ಟಬಯಲಲ್ಲಿ ನಿಂದು ನೋಡಿದಡೆ, ಶರಧಿ ಬತ್ತಿತ್ತು ಕಮಲ ಕಾಣಬಂದಿತ್ತು. ಆ ಕಮಲ ವಿಕಾಸವಾಯಿತ್ತು ಪರಿಮಳವೆಂಬ ವಾಸನೆ ತೀಡಿತ್ತು. ಆ ವಾಸನೆವಿಡಿದು ಜಗದಾಸೆಯ ಹಿಂಗಿ ಮಾತು ಮಥನವ ಕೆಡಿಸಿ, ಮಹಾಜ್ಯೋತಿಯ ಬೆಳಗಿನಲಿ ಓಲಾಡುವ ಶರಣರ ಆಸೆ ರೋಷ ಪಾಶಕ್ಕೊಳಗಾದ ಈ ಜಗದ ಹೇಸಿಗಳೆತ್ತಬಲ್ಲರು, ಈ ಮಹಾಶರಣರ ನೆಲೆಯ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ ?
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಅತ್ತಿಯಹಣ್ಣಿಗಾಗಿ ಬಂದು ಸಿಕ್ಕಿದ ಪಿಕಳಿಯಂತೆ ವ್ಯರ್ಥ ಕಾಯರಸವಿಷಯಕ್ಕಾಸೆಗೈದು ಸತ್ತು ಸತ್ತು ಹುಟ್ಟಿ ಭವಕ್ಕೆ ಗುರಿಯಾಗಿ, ಮಾಯಾಬಲೆಯ ಸಂಸಾರಬಂಧನದೊಳು ಬಂದು ಸಿಲ್ಕಿದೆನಯ್ಯಾ. ಮಾಯೆಯ ಹರಿದು, ಸಂಸಾರಬಂಧನವ ಕೆಡಿಸಿ, ಭವರೋಗಕ್ಕೆ ವೈದ್ಯನ ಮಾಡೋ ಶಿವ ವಿಶ್ವಕುಟುಂಬಿ ಮಹಾದೇವ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಅರಿದು ಮಾಡದ ಭಕ್ತಿ ಭವಕ್ಕೆ ತಂದಿತ್ತು. ಅದೆಂತೆಂದಡೆ, ಫಲಭೋಗಂಗಳ ಬಯಸುವನಾಗಿ ಫಲವನುಂಡು ಮರಳಿ ಭವಕ್ಕೆ ಬಹನಾಗಿ. ಇದು ಕಾರಣ, ಅರಿದು ಮುಕ್ತಿಯ ಹಡೆವಡೆ ಅನುಭವವೇ ಬೇಕು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಅಪರಸ್ಥಾನದಲ್ಲಿ ಆನಂದಬ್ರಹ್ಮವ ಭೇದ್ಥಿಸುವ ಪರಿಯೆಂತೋ? ಪೂರ್ವದಕ್ಷಿಣವೆಂಬ ದಿಕ್ಕುಗಳಲ್ಲಿ ಸಮನಿಸುವ ಆತ್ಮ ಅಂತರ್ಯಾತ್ಮ ಭೂತಾತ್ಮ ಸರ್ವಾತ್ಮ ಪರಮಾತ್ಮವೆಂಬ ಆತ್ಮ ಪಂಚಕಗಳೆಂಬವನು ಹಿಂದು ಮುಂದರಿಯದೆ, ಮುಂದು ಹಿಂದೆಂದರಿಯದೆ ಸಂಯೋಗದಲಿಕ್ಕಿ ಪ್ರಯೋಗಿಸಿಹೆನೆಂಬ ಯೋಗಿ ಕೇಳಾ; ಪೂರ್ವವಾವುದು? ದಕ್ಷಿಣವಾವುದು? ಪೂರ್ವದಲ್ಲಿ ದಿವಾಕರರು ಹನ್ನೆರಡರ ಆನಂದ ಪ್ರಭೆಯಲ್ಲಿ ಭವಿಸಲ್ಪಟ್ಟ ನಯನದ ಕಿರಣದ ಕೊನೆಯ ಮೊನೆಯ ಮೇಲೆ ದಿವ್ಯಾಂಗಯೋಗ ಸಮನಿಸುವ ಪರಿಯೆಂತು ಹೇಳಾ? ದಕ್ಷಿಣದಲ್ಲಿ ದಿಗ್ವಳಯ ಹದಿನಾಲ್ಕರ ವ್ಯಾಪ್ತಿಯ ಸಂಚರಿಸದೆ ಸಮನಿಸುವ ಕೋಹಂ ತತ್ವಾರ್ಥದಿಂದತ್ತ ನಾಹಂ ಪರಮಾರ್ಥದಿಂದತ್ತ ಸೋಹಂ ಸದ್ಭಕ್ತಿಯ ಮುಟ್ಟಿದ ದಾಸೋಹ ನಿನ್ನಲ್ಲಿ ಸಂಯೋಗವ ಎಂತು ಮಾಡುವೆ ಹೇಳಾ? ಯೋಗಿ ನೀನು ಯೋಗಕ್ಕೆ ಹರಿವಾವುದು? ಯೋಗಕ್ಕೆ ನೆಲೆ ಯಾವುದು? ಮತ್ತೆ ಪೆರತನರಿಯದೆ ಶಾಶ್ವತವು ನೀನೆ ನೀನೆ ಎಂದೆನ್ನು, ಸಕಲನಿಷ್ಕಲದೊಳಗೆ ನೀನೆ ನೀನೆಯೆನ್ನಾ ತಾತ್ಪರ್ಯವರ್ಮ ಕಳೆಗಳೊಳಗೆ ನೀನೆ ನೀನೆಯೆಂದೆನ್ನಾ. ಓಂ ಗ್ರಾಂ ಘ್ರೀಂ ಘ್ರೂಂ ಎಂಬಕ್ಷರ ಚತುಷ್ಟಯದ ಮೇಲೆ ಶುದ್ಧ ಸಂಯೋಗವೆಂಬ ಗದ್ದುಗೆಯಿಕ್ಕಿ ಅಕ್ಷರದ್ವಯದ ಆನಂದರಾಜ ಕುಳ್ಳಿದ್ದೆ ೈದಾನೆ ಜಪಿಸುತ. ಆ ಜಪವು ನಿತ್ಯ, ಅದು ಮುಕ್ತಿ, ಅದು ಸತ್ಯ. ಅದು ಪದಕ್ಕೆ ಫಲಕ್ಕೆ ಭವಕ್ಕೆ ದೂರ, ವರ್ಣಾಶ್ರಯವ ಮೀರಿತ್ತು ತತ್ವ ಪ್ರಾಪಂಚಿಕವ ಜರಿಯಿತ್ತು. ಮಂತ್ರಂಗಳ ಕೈಯಿಂದ ವಂದಿಸಿಕೊಂಡಿತ್ತು. ಮೂರರಲ್ಲಿ ಭವಿಸಿತ್ತು, ಆರರಲ್ಲಿ ಫಲವಾಯಿತ್ತು. ಮೂವತ್ತಾರರಲ್ಲಿ ಹಣಿತಿತ್ತು ಯೋಗಿಗಳ ನಡೆಸಿತ್ತು ತತ್ವಮಸಿ ಸಂಗಮವಾಯಿತ್ತು. ಕಪಿಲಸಿದ್ಧಮಲ್ಲಿಕಾರ್ಜುನಯ್ಯನೆಂಬ ನಿತ್ಯದಲ್ಲಿ ನಿತ್ಯವಾಯಿತ್ತು.
--------------
ಸಿದ್ಧರಾಮೇಶ್ವರ
ಬ್ರಹ್ಮಂಗೆ ಸರಸ್ವತಿಯಾಗಿ ಬೆನ್ನಲ್ಲಿ ಬಂದಳು ಮಾಯೆ. ವಿಷ್ಣುವಿಂಗೆ ಲಕ್ಷಿ ್ಮಯಾಗಿ ಭವಕ್ಕೆ ತಿರುಗಿದಳು ಮಾಯೆ. ರುದ್ರಂಗೆ ಉಮಾದೇವಿಯಾಗಿ ಶಿರ ತೊಡೆಯಲ್ಲಿ ಕಾಡಿದಳುಮಾಯೆ. ಎಳ್ಳಿಗೆ ಎಣ್ಣೆ, ಮುಳ್ಳಿಗೆ ಮೊನೆಯಾಗಿ, ಹೂವಿಗೆ ಗಂಧವಾಗಿ, ಅವರವರಂಗದಲ್ಲಿ ಹಿಂಗದ ಪ್ರತಿರೂಪಾಗಿ ಸಂದಿಲ್ಲದೆ ಕಾಡುತ್ತಿದ್ದಾಳೆ ಮಾಯೆ. ಡಕ್ಕೆಯ ಉಲುಹಡಗುವುದಕ್ಕೆ ಮುನ್ನವೆ ನಿಶ್ಚೆ ೈಸಿಕೊಳ್ಳಿ, ಕಾಲಾಂತಕ ಬ್ಥೀಮೇಶ್ವರಲಿಂಗವನರಿಯಬಲ್ಲಡೆ.
--------------
ಡಕ್ಕೆಯ ಬೊಮ್ಮಣ್ಣ
ಅರಿವಿಲ್ಲದ ಕಾರಣ ಭವಕ್ಕೆ ಬಂದರು, ಅರಿವಿಲ್ಲದವಂಗೆ ಗುರುವಿಲ್ಲ, ಗುರುವಿಲ್ಲದವಂಗೆ ಆಚಾರವಿಲ್ಲ. ಆಚಾರವಿಲ್ಲದವಂಗೆ ಲಿಂಗವಿಲ್ಲ, ಲಿಂಗವಿಲ್ಲದವಂಗೆ ಜಂಗಮವಿಲ್ಲ. ಜಂಗಮವಿಲ್ಲದವಂಗೆ ಪ್ರಸಾದವಿಲ್ಲ, ಪ್ರಸಾದವಿಲ್ಲದವಂಗೆ ಗಣತ್ವವಿಲ್ಲ. ಅರಿವು ಸಾಹಿತ್ಯ ಗುರು, ಗುರುಸಾಹಿತ್ಯ ಆಚಾರ, ಆಚಾರಸಾಹಿತ್ಯ ಲಿಂಗ, ಲಿಂಗಸಾಹಿತ್ಯ ಜಂಗಮ, ಜಂಗಮಸಾಹಿತ್ಯ ಪ್ರಸಾದ, ಪ್ರಸಾದಸಾಹಿತ್ಯ ಗಣತ್ವ. ಇದು ಕಾರಣ, ಕೂಡಲಚೆನ್ನಸಂಗನಲ್ಲಿ ಈ ಸ್ಥಲವಾದವರಿಗೆಲ್ಲಾ ಭಕ್ತಿ ಉನ್ಮದ ಉಂಟು, [ಸಕಳ] ನಿರ್ವಾಣ ಲಿಂಗೈಕ್ಯಪದವಪೂರ್ವ.
--------------
ಚನ್ನಬಸವಣ್ಣ
ಕೈಯಲ್ಲಿ ಹಿಡಿದಡೆ ಕಲ್ಲು ಸಿಕ್ಕಿತ್ತಲ್ಲದೆ, ಲಿಂಗವಿಲ್ಲಾ ಎಂದೆ. ಕಣ್ಣಿನಲ್ಲಿ ನೋಡಿ ಕಬಳೀಕರಿಸಿದೆನೆಂದಡೆ ಅದು ಕವುಳಿಕವೆಂಬೆ. ಮನದಲ್ಲಿ ನೆನೆದು ಘನದಲ್ಲಿ ನಿಂದೆಹೆನೆಂದಡೆ ಭವಕ್ಕೆ ಬೀಜವೆಂದೆ. ಕೈಗೂ ಕಣ್ಣಿಗೂ ಮನಕ್ಕೂ ಬಹಾಗ ತೊತ್ತಿನ ಕೂಸೆ ? ಕಂಡಕಂಡವರ ಅಪ್ಪಾ ಅಪ್ಪಾ ಎಂಬ ಇಂತೀ ಸುಚಿತ್ತರನರಿಯದೆ, ಉದ್ಯೋಗಿಸಿ ನುಡಿವ ಜಗದ ಭಂಡಕರನೊಲ್ಲೆನೆಂದ, ನಿಃಕಳಂಕ ಮಲ್ಲಿಕಾರ್ಜುನ.
--------------
ಮೋಳಿಗೆ ಮಾರಯ್ಯ
ಕೊಟ್ಟುಕೊಂಡೆನೆಂಬುದೊಂದುಳ್ಳರೆ ಒಂದಕ್ಕೆ ಭಂಗ, ಕೊಡುಕೊಳ್ಳಿಯಳಿದುಳಿದರೆ ಎರಡಕ್ಕೆ ಬಂಗ. ಒಂದು ಭಂಗ ಭವಕ್ಕೆ ಬೀಜ, ಎರಡು ಭಂಗ ಲೀಲೆಗೇಡು, ಒಂದೆರಡರಿಯದೆ ಅಂದಂದಿಗಿತ್ತಡೆ ಅವಧಾನಿಸಿಕೊ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಮರಹು ಬಂದಿಹುದೆಂದು ಗುರು ಕುರುಹನೆ ಕೊಟ್ಟ ; ಅರಿವಿಂಗೆ ಪ್ರಾಣಲಿಂಗ ಬೇರೆ ಕಾಣಿರಣ್ಣಾ. ನಿರ್ಣಯವಿಲ್ಲದ ಭಕ್ತಿಗೆ ಬರಿದೆ ಬಳಲಲದೇತಕೆ ? ಚೆನ್ನಮಲ್ಲಿಕಾರ್ಜುನಯ್ಯನನರಿದು ಪೂಜಿಸಿದಡೆ ಮರಳಿ ಭವಕ್ಕೆ ಬಹನೆ ?
--------------
ಅಕ್ಕಮಹಾದೇವಿ
ಕಾಯದ ಸಂಗದಿಂದ ಆತ್ಮನು ಭವಕ್ಕೆ ಬಪ್ಪುದೊ ? ಆತ್ಮನ ಸಂಗದಿಂದ ಕಾಯ ಲಯಕ್ಕೊಳಗಪ್ಪುದೊ ? ಕಾಯ ಜೀವದಿಂದಳಿವೊ ? ಜೀವ ಕಾಯದಿಂದಳಿವೋ ? ಅಲ್ಲ, ಉಭಯವೂ ಏಕಸ್ಥದಿಂದ ಪ್ರಳಯವೋ ? ಎಂಬುದ ಅಂತಸ್ಥದಿಂದ ತಿಳಿದು, ಕಾಯಕ್ಕೂ ಜೀವಕ್ಕೂ ಭೇದವುಂಟೆಂದಡೆ, ಒಂದ ಬಿಟ್ಟೊಂದು ಇರದು. ಇಲ್ಲಾ ಎಂದೆಡೆ ಆತ್ಮ ವಾಯುಸ್ವರೂಪ, ಘಟ ಸಾಕಾರಸ್ವರೂಪ, ಗುಣ-ಗಂಧ, ಕುಸುಮ-ಗಂಧ, ತಿಲ-ಸಾರದ ಸಂಗದಂತೆ. ಇಂತೀ ಉಭಯಭಾವದ ಭೇದವನರಿದ ಪರಮ[ಸುಖ] ಗಾರುಡೇಶ್ವರಲಿಂಗವನರಿದವಂಗಲ್ಲದೆ ಸಾಧ್ಯವಲ್ಲ.
--------------
ಉಪ್ಪರಗುಡಿಯ ಸೋಮಿದೇವಯ್ಯ
ಶರಣನ ನೋಟ ಭವಕ್ಕೆ ಓಟ ನೋಡಯ್ಯಾ. ಶರಣನ ದೃಷ್ಟಿ ಶಿವದೃಷ್ಟಿ ನೋಡಯ್ಯಾ. ಶರಣನ ದೇಹ ಶಿವದೇಹ ನೋಡಯ್ಯಾ. ಶರಣನ ಪಾದುಕೆ ಎಮ್ಮ ಕಪಿಲಸಿದ್ಧಮಲ್ಲಿಕಾರ್ಜುನನ ಚಮ್ಮಾವುಗೆ ನೋಡಾ, ಮಡಿವಾಳ ಮಾಚಣ್ಣಾ.
--------------
ಸಿದ್ಧರಾಮೇಶ್ವರ
ಶರಣರಿಗೆ ಭವವುಂಟೆಂದು ಮತ್ರ್ಯದಲ್ಲಿ ಹುಟ್ಟಿದ ಭವಭಾರಿಗಳು ನುಡಿದಾಡುವರು. ತಮ್ಮ ಹುಟ್ಟ ತಾವರಿಯರು, ತಾವು ಮುಂದೆ ಹೊಂದುವದನರಿಯರು. ಇವರು ಬಂದ ಬಂದ ಭವಕ್ಕೆ ಕಡೆಮೊದಲಿಲ್ಲ . ಇಂತಪ್ಪ ಸಂದೇಹಿಗಳು ನಮ್ಮ ಶರಣರ ಹುಟ್ಟ ಬಲ್ಲೆನೆನಬಹುದೆ ? ತನ್ನ ನರಿದವನಲ್ಲದೆ ಇದಿರನರಿಯರು. ಈ ಉದರಪೋಷಕರೆಲ್ಲರೂ ಇದ ಬಲ್ಲೆನೆಂಬುದು ಹುಸಿ. ಇದ ಬಲ್ಲವರು ಬಲ್ಲರಲ್ಲದೆ, ಸೊಲ್ಲಿಗಭೇದ್ಯನ ನಾನೆತ್ತ ಬಲ್ಲೆ ? ಎನ್ನ ಗುರು ಚೆನ್ನಮಲ್ಲೇಶ್ವರನೇ ಬಲ್ಲ . ಇನ್ನು ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣನೆ ಬಲ್ಲ .
--------------
ಹಡಪದ ಅಪ್ಪಣ್ಣ
ಉದಯ ಕಾಲ ಮಜ್ಜನಕ್ಕೆರೆಯಲಿಕ್ಕಾಗಿ, ಉದಯ (ಉತ್ಪತ್ತಿ) ಕಾಲಕರ್ಮ ಕೆಡಲಿಕ್ಕಾಗಿ (ಕೆಡುವುದಾಗಿ) ಮಧ್ಯಾಹ್ನಕಾಲ ಮಜ್ಜನಕ್ಕೆರೆಯಲಿಕ್ಕಾಗಿ, ವರ್ತಮಾನ (ಸ್ಥಿತಿ)ಕಾಲಕರ್ಮ ಕೆಡಲಿಕ್ಕಾಗಿ (ಕೆಡುವುದಾಗಿ) ಅಸ್ತಮಾನಕಾಲ ಮಜ್ಜನಕ್ಕೆರೆಯಲಿಕ್ಕಾಗಿ, ಲಯಕಾಲ ಕರ್ಮವು ಕೆಡಲಿಕ್ಕಾಗಿ (ಕೆಡುವುದಾಗಿ) ಹೊತ್ತಾರಿನ ಪೂಜೆ ಬ್ರಹ್ಮಂಗೆ, ಮಧ್ಯಾಹ್ನದ ಪೂಜೆ ವಿಷ್ಣುವಿಂಗೆ, ಅಸ್ತಮಾನದ ಪೂಜೆ ರುದ್ರಂಗೆ. ಇಂತೀ ತ್ರಿವಿಧಕಾಲ ಮಜ್ಜನಕ್ಕೆರೆದವ ಭವಭಾರಿ ಇಂತು ತ್ರಿವಿಧಕಾಲ ನಾಸ್ತಿಯಾಗಿ ಮಜ್ಜಕ್ಕೆರೆಯಬಲ್ಲನಾಗಿ ಕೂಡಲಚೆನ್ನಸಂಗಯ್ಯಾ, ನಿಮ್ಮ ಶರಣ ಭವಕ್ಕೆ ಬಾರ.
--------------
ಚನ್ನಬಸವಣ್ಣ
ಹಿಂದೆ ಬಯಸಿದೆ ಕಾಳುತನದಲ್ಲಿ, ಎನ್ನ ಮಂದಮತಿಯ ನೋಡದಿರಯ್ಯಾ! ಕೆರೆ ಬಾವಿ ಹೂದೋ ಚೌಕ ಛತ್ರಂಗಳ ಮಾಡಿ, ಜೀವಂಗಳ ಮೇಲೆ ಕೃಪೆಯುಂಟೆಂದು ಎನ್ನ ದಾನಿಯೆಂಬರು, ಆನು ದಾನಿಯಲ್ಲವಯ್ಯಾ, ನೀ ಹೇಳಿದಂತೆ ನಾ ಮಾಡಿದೆನು. ನೀ ಬರಹೇಳಿದಲ್ಲಿ ಬಂದೆನು; ನೀ ಇರಿಸಿದಂತೆ ಇದ್ದೆನು. ನಿನ್ನ ಇಚ್ಛಾಮತ್ರವ ಮೀರಿದೆನಾಯಿತ್ತಾದಡೆ ಫಲ ಪದ ಜನನವ ಬಯಸಿದೆನಾದಡೆ ನಿಮ್ಮಾಣೆ! ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ಭವಕ್ಕೆ ಬರಿಸದಿರಯ್ಯಾ ನಿಮ್ಮ ಧರ್ಮ!
--------------
ಸಿದ್ಧರಾಮೇಶ್ವರ
ಇನ್ನಷ್ಟು ... -->