ಅಥವಾ

ಒಟ್ಟು 160 ಕಡೆಗಳಲ್ಲಿ , 42 ವಚನಕಾರರು , 147 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀರುದ್ರಾಕ್ಷಿಯ ಹಸ್ತ ತೋಳು ಉರ ಕಂಠ ಮೊದಲಾದ ಸ್ಥಾನಂಗಳಲ್ಲಿ ಧರಿಸಿ, ಶಿವಾರ್ಚನೆಯ ಮಾಡುವುದು ಸದಾಚಾರ, ಅದೇ ಸದ್ಯೋನ್ಮುಕ್ತಿ. ಅದು ಕಾರಣ, ಆ ಮಹಾರುದ್ರಾಕ್ಷಿಯ ಧರಿಸಿ, ಎನ್ನ ಭವಂ ನಾಸ್ತಿಯಾತಿತ್ತು. ಮಹಾಲಿಂಗ ಕಲ್ಲೇಶ್ವರಾ, ರುದ್ರಾಕ್ಷಿಯಿಂದೆ ಕೃತಾರ್ಥನಾದೆನು.
--------------
ಹಾವಿನಹಾಳ ಕಲ್ಲಯ್ಯ
ಭಕ್ತಿಯ ಕುಳವನು ಬಸವಣ್ಣನೇ ಬಲ್ಲನು. ಪ್ರಸಾದದ ನೆಲೆಯನು ಬಸವಣ್ಣನೇ ಬಲ್ಲನು. ಬಸವಣ್ಣ ನಡೆದುದೇ ಮಾರ್ಗ, ಅಖಿಳಗಣಂಗಳಿಗೆ, ಬಸವಣ್ಣ ನುಡಿದುದೇ ವೇದ, ಮಹಾಪುರುಷರಿಗೆ, ಬಸವಣ್ಣನನಾದಿ, ಲಿಂಗವಾದಿ ಎಂದರಿದೆನಾಗಿ, ಬಸವಣ್ಣನ ನೆನೆವುತಿರ್ದೆನಯ್ಯಾ. ಬಸವಣ್ಣನ ಪಾದವಿಡಿದೆನಾಗಿ, ಲಿಂಗವೇದಿಯಾದೆನು. ಬಸವಣ್ಣನ ಬಾಗಿಲ ಕಾಯ್ದೆನಾಗಿ, ಪ್ರಸಾದ ಸಾಧ್ಯವಾಯಿತ್ತು. ಬಸವಣ್ಣನ ಕರುಣದಿಂದ ಪ್ರಭುದೇವರ ನಿಲವ ಕಂಡೆನು. ಬಸವಣ್ಣನ ಬೋಧೆಯಿಂದ ಜಂಗಮವೇ ಲಿಂಗವೆಂದರಿದೆನು. ಆ ಜಂಗಮ ಮುಖದಿಂದಲ್ಲದೆ ಲಿಂಗತೃಪ್ತಿಯಾಗದು. ಪ್ರಸಾದಸಿದ್ಧಿಯಾದಲ್ಲದೆ ಭವಂ ನಾಸ್ತಿಯಾಗದು. ಇದು ಕಾರಣ, ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ, ನಿಮ್ಮ ಶರಣ ಬಸವಣ್ಣನ ನಂಬಿ, ನಾನು ಕೆಟ್ಟು, ಬಟ್ಟಬಯಲಾಗಿ ಹೋದೆನೆಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಮರುಳಶಂಕರದೇವ
ಲಿಂಗಪ್ರಸಾದವ ಜಂಗಮಕ್ಕೆ ಕೊಡುವ ಕರ್ಮಿಗಳು ನೀವು ಕೇಳಿರೆ. ಜಂಗಮಪ್ರಸಾದವ ಲಿಂಗಕ್ಕೆ ಕೊಡುವ ಧರ್ಮಿಗಳು ನೀವು ಕೇಳಿರೆ. ಲಿಂಗಪ್ರಸಾದವ ಜಂಗಮಕ್ಕೆ ಕೊಡುವುದು ಅನಾಚಾರ. ಜಂಗಮಪ್ರಸಾದವ ಲಿಂಗಕ್ಕೆ ಕೊಡುವುದು ಸದಾಚಾರ. ಅದೆಂತೆದಡೆ- ಶಿವಧರ್ಮ ಪುರಾಣದಲ್ಲಿ : ಲಿಂಗಾರ್ಪಿತ ಪ್ರಸಾದಂ ಚ ನದದ್ಯಾಜ್ಜಂಗಮಾರ್ಪಿತಂ | ಜಂಗಮಾರ್ಪಿತ ಪ್ರಸಾದಂ ತದದ್ಯಾಲಿಂಗಮೂರ್ತಿಷು || ಎಂದುದಾಗಿ, ಇದು ಕಾರಣ, ಜಂಗಮಪ್ರಸಾದವ ಲಿಂಗಕ್ಕೆ ಕೊಟ್ಟು ಕೊಂಬೆನಾಗಿ, ಎನ್ನ ಭವಂ ನಾಸ್ತಿಯಾಯಿತ್ತಯ್ಯಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಕಂಗಳ ಮುಂದಣ ಬಯಲಿನೊಳಗೊಂದು ಪ್ರಕಾಶಾನ್ವಿತವಾದ ಮಹಾಚೋದ್ಯತರವಾದ ಗಗನಕೋಶವುಂಟು. ಅಲ್ಲೊಂದು ದಿವ್ಯತರವಾದ ಕಮಲವುಂಟು. ಆ ಕಮಲದ ಮಧ್ಯದಲ್ಲಿ ಆಣವತ್ರಯಾನ್ವಿತವಾದ ಮಹತ್ಕರ್ಣಿಕೆಯುಂಟು. ಮತ್ತದರಗ್ರದಂತರ್ವರ್ಣತ್ರಯಂಗಳೊಳಗೆ ನೀಲವಿದ್ರುಮರತ್ನ ಚಂದ್ರಪ್ರಕಾಶ ದಿವ್ಯಸಿಂಹಾಸನದ ಮೇಲೆ ಬೆಳಗುತ್ತಿರ್ಪ ಶಿವಲಿಂಗವನನುಸಂಧಾನಿಸಿ ಪೂಜಿಸುವ ಕ್ರಮವೆಂತೆಂದೊಡೆ : ಶ್ರೀಗುರುಕರುಣಕಟಾಕ್ಷವೀಕ್ಷಣಬಲದಿಂದ ಕಲ್ಮಷ ಕಂಟಕಾದಿಗಳಂ ತೊಲಗಿಸಿ, ಶಿವಲೋಕದ ಮಾರ್ಗವಿಡಿದು ಹೋಗಿ, ಆ ಶಿವಲೋಕದ ಸಮೀಪಕ್ಕೆ ಸೇರಿ, ಪರೀಕ್ಷೆಯ ಮಾಡಿ ನೋಡಲು, ಆ ಶಿವಲೋಕದ ಬಹಿರಾವರಣದಲ್ಲಿ ಮೂವತ್ತೆರಡು ಬಹಿರ್ಮುಖರು ಸಂಸ್ಥಿತರಾದ ವಿವರ : ಈಶಾನ್ಯ ಪರ್ಜನ್ಯ ಜಯಂತ ಮಹೇಂದ್ರ ಆದಿತ್ಯ ಸತ್ಯ ಭೃಂಷ ಅಂತರಿಕ್ಷ ಅಗ್ನಿ ವಿಮಾಷ ಥತ ಗ್ರಹಕ್ಷತ ಯಮ ಗಂಧರ್ವ ಭೃಂಗುರಾಜ ಮೃಗ ನಿರುತಿ ದೌವಾರಿಕ ಸುಗ್ರೀವ ಪುಷ್ಪದತ್ತ ವರುಣ ಅಸುರ ಶೇಷ ಋಭು ವಾಯು ನಾಗ ಮುಖ ಪಲಾಟಕ ಸೋಮ ಭೂತ ಅದಿತ ದಿತರೆಂಬುವರೇ ಮೂತ್ತೆರಡು ವಸ್ತುದೇವತೆಯರ ಒಡಂಬಡಿಸಿಕೊಂಡು ಅವರಿಂದೊಳಗಿರ್ಪ ಸೂರ್ಯವೀಥಿಯೆನಿಸುವ ತೃತೀಯವರ್ಣದ ಮೂವತ್ತೆರಡುದಳದಲ್ಲಿ ಎಂಟು ಶೂನ್ಯದಳಗಳನುಳಿದು, ಮಿಕ್ಕ ಇಪ್ಪತ್ತುನಾಲ್ಕುದಳಗಳಲ್ಲಿರುವ ಇಪ್ಪತ್ತುನಾಲ್ಕು ವಿಕಲಾಕ್ಷರಂಗಳೇ ಅಷ್ಟವಿಧೇಶ್ವರರು, ಅಷ್ಟದಿಕ್ಪಾಲಕರು, ಅಷ್ಟವಸುಗಳಾದ ವಿವರ : ಕ ಕಾರವೆ ಅನಂತ, ಖ ಕಾರವೆ ಇಂದ್ರ, ಗಕಾರವೆ ಧರ, ಘಕಾರವೆ ಸೂಕ್ಷ್ಮ , ಓಂಕಾರವೆ ಅಗ್ನಿ, ಚಕಾರವೆ ಧ್ರುವ, ಛಕಾರವೆ ಶಿವೋತ್ತಮ, ಜಕಾರವೆ ಯಮ, ಝಕಾರವೆ ಸೋಮ, ಞಕಾರವೆ ಏಕನೇತ್ರ, ಟಕಾರವೆ ನಿರುತಿ, ಠಕಾರವೆ ಆಪು, ಡಕಾರವೆ ರುದ್ರ, ಢಕಾರವೆ ವರುಣ, ಣಕಾರವೆ ಅನಿಲ, ತಕಾರವೆ ತ್ರಿಮೂರ್ತಿ, ಥಕಾರವೆ ವಾಯು, ದಕಾರವೆ ಅನಲ, ಧಕಾರವೆ ಶ್ರೀಕಂಠ, ನಕಾರವೆ ಕುಬೇರ, ಪಕಾರವೆ ಪ್ರತ್ಯೂಷ, ಫಕಾರವೆ ಶಿಖಂಡಿ, ಬಕಾರವೆ ಈಶಾನ, ಬಕಾರವೆ ಪ್ರಭಾಸ. ಇಂತೀ [ಅಷ್ಟ] ವಿಧೇಶ್ವರಾದಿಗಳಿಗಬ್ಥಿವಂದಿಸಿ, ಅದರಿಂದೊಳಗಿರ್ಪ ಚಂದ್ರವೀಥಿಯೆನಿಪ ದ್ವಿತೀಯಾವರಣದ ಷೋಡಶದಳದಲ್ಲಿರುವ ಷೋಡಶ ಸ್ವರಾಕ್ಷರಂಗಳೆ ಷೋಡಷರುದ್ರರಾದ ವಿವರ : ಅಕಾರವೆ ಉಮೇಶ್ವರ, ಆಕಾರವೆ ಭವ, ಇಕಾರವೆ ಚಂಡೇಶ್ವರ, ಈಕಾರವೆ ಶರ್ವ, ಉಕಾರವೆ ನಂದಿಕೇಶ್ವರ, ಊಕಾರವೆ ರುದ್ರ, ಋಕಾರವೆ ಮಹಾಕಾಳ, Iೂಕಾರವೆ ಉಗ್ರ, ಲೃಕಾರವೆ ಭೃಂಗಿರೀಟಿ, ಲೂೃಕಾರವೆ ಬ್ಥೀಮ, ಏಕಾರವೆ ಗಣೇಶ್ವರ, ಐಕಾರವೆ ಈಶಾನ, ಓಕಾರವೆ ವೃಷಭೇಶ್ವರ, ಔಕಾರವೆ ಪಶುಪತಿ, ಅಂ ಎಂಬುದೆ ಷಣ್ಮುಖಿ, ಅಃ ಎಂಬುದೆ ಮಹಾದೇವನು. ಇಂತಪ್ಪ ಷೋಡಶರುದ್ರರಿಗೆ ಸಾಷ್ಟಾಂಗವೆರಗಿ ಬಿನ್ನವಿಸಿಕೊಂಡು, ಅದರಿಂದೊಳಗಿರ್ಪ ಅಗ್ನಿವೀಥಿಯೆನಿಸುವ ಪ್ರಥಮಾವರಣ ಅಷ್ಟದಳಗಳಲ್ಲಿರ್ಪ ಅಷ್ಟವ್ಯಾಪಕಾಕ್ಷರಂಗಳೆ ಅಷ್ಟಶಕ್ತಿಯರಾದ ವಿವರ : ಸಕಾರವೆ ಉಮೆ, ಷಕಾರವೆ ಜ್ಯೇಷ್ಠೆ, ಶಕಾರವೆ ರೌದ್ರೆ, ವಕಾರವೆ ಕಾಳೆ, ಲಕಾರವೆ ಬಾಲೆ, ರಕಾರವೆ ಬಲಪ್ರಮಥಿನಿ, ಯಕಾರವೆ ಸರ್ವಭೂತದಮನೆ, ಮಕಾರವೆ ಮನೋನ್ಮನಿ. ಇಂತಪ್ಪ ಶಿವಶಕ್ತಿಯರ ಪಾದಪದ್ಮಂಗಳಿಗೆ ಸಾಷ್ಟಾಂಗವೆರಗಿ, ಪೊಡಮಟ್ಟು ಅದರಿಂದೊಳಗಿರ್ಪ ಅತಿರಹಸ್ಯವಾದ ಮೂವತ್ತೆರಡು ಕ್ಲೇಶಂಗಳಿಗಾಶ್ರಯವಾದ ಶಾಂತಿಬಿಂದುಮಯವಾದ ಅಂತರ್ಮಂಡಲದ ಚತುರ್ದಳದಲ್ಲಿರುವ ಚತುರಕ್ಷರಂಗಳೇ ಚತುಃಶಕ್ತಿಯರಾದ ವಿವರ : ಸಂ ಎಂಬುದೆ ಅಂಬಿಕೆ, ಅಂ ಎಂಬುದೆ ಗಣಾನಿ, ಡಿಂ ಎಂಬುದೆ ಈಶ್ವರಿ, ಕ್ಷುಂ ಎಂಬುದೇ ಉಮೆ. ಇಂತಪ್ಪ ಪರಶಕ್ತಿಯರ ಪಾದಾರವಿಂದವನು ಅನೇಕ ಪ್ರಕಾರದಿಂ ಸ್ತುತಿಮಾಡಿ ಬೇಡಿಕೊಂಡು ಅವರಪ್ಪಣೆವಿಡಿದು ಒಳಪೊಕ್ಕು, ಅಲ್ಲಿ ಕದಂಬಗೋಳಕಾಕಾರ ಸ್ಫುರಶಕ್ತಿದೀದ್ಥಿಕಾಯೆಂದುಂಟಾಗಿ ರಹಸ್ಯಕ್ಕೆ ರಹಸ್ಯವಾದ ಷಡಧ್ವಜನ್ಮಭೂಮಿಯಾದ ಶಕ್ತಿಶಿರೋಗ್ರದಲ್ಲಿ ಪಂಚಾಕಾಶ ಷಟ್ತಾರಕ ತ್ರಿವಿಧಲಿಂಗಾಂಗಗಳೆ ಕಕಾರವಾದ ಪರಬ್ರಹ್ಮದ ನೆಲೆಯನರಿಯುವುದೇ ಮುದ್ವೀರಪ್ರಿಯ ಸಂಗಮೇಶ್ವರನಲ್ಲಿ ಬೆರೆವಂಥ ನಿಜಯೋಗ ಕಾಣಿರೊ.
--------------
ಮುದ್ವೀರ ಸ್ವಾಮಿ
ಕಾಯದ ಕಳವಳಕ್ಕಂಜಿ ಪ್ರಾಣ ಹೋದಲ್ಲಿ, ಭವ ಹಿಂಗದು, ಪ್ರಕೃತಿ ಬಿಡದು. ವಾಯಕ್ಕಾದಡೆ ಸತ್ತು ದೇವರ ಕೂಡಿಹೆವೆಂಬರು, ಈ ವಾಯದ ಮಾತಿಂಗೆ ಆನು ಬೆರಗಾದೆನು. ಕಾಯವಿದ್ದಲ್ಲಿ ಸಾಯದ ಸಾವ ಬಲ್ಲಡೆ ಬೇರಿಲ್ಲ, ಗುಹೇಶ್ವರ ತಾನೆ !
--------------
ಅಲ್ಲಮಪ್ರಭುದೇವರು
ದ್ವಂದ್ವವು ಜೀವನ ಕಾಯಕ್ಕೆ ಒಂದಲ್ಲ ಅನಂತ ಆಸ್ಕರ. ಚಂದ್ರಾರ್ಕ ಹುಟ್ಟು ಹೊಂದು ಹೋಹುದು, ಬಪ್ಪುದು ; ಒಂದನೆ ತಿಳಿವುದು ಸದ್ಬಿಂದು ಬೀಜ ಸಹಜವ. ಮುಂದಣ ಸ್ಥಿತಿ ಹಿಂದಣ ಭವ. ಅಂದಿಗಂದಿಗೆ ಕಾಬುದು ಅಗಣಿತಗಣಿತ ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.
--------------
ವೀರಸಂಗಯ್ಯ
ಗುರುಪ್ರಸಾದವ ಕೊಂಡು ಎನ್ನ ತನು ಶುದ್ಧಪ್ರಸಾದವಾಯಿತ್ತು. ಲಿಂಗಪ್ರಸಾದವ ಕೊಂಡು ಎನ್ನ ಮನ ಸಿದ್ಧಪ್ರಸಾದವಾಯಿತ್ತು. ಜಂಗಮಪ್ರಸಾದವ ಕೊಂಡು ಎನ್ನ ಪ್ರಾಣವು ಪ್ರಸಿದ್ಧಪ್ರಸಾದವಾಯಿತ್ತು. ಇಂತೀ ತ್ರಿವಿಧಪ್ರಸಾದವ ಕೊಂಡು ಎನ್ನ ಭವ ನಾಸ್ತಿಯಾಗಿತ್ತಾಗಿ, ಅಖಂಡೇಶ್ವರಾ, ಇನ್ನೆನಗೆ ಆವಾವ ಭಯವಿಲ್ಲವಯ್ಯ.
--------------
ಷಣ್ಮುಖಸ್ವಾಮಿ
ಮಾಡಿ ನೀಡಿ ಲಿಂಗವ ಪೂಜಿಸಿಹೆವೆಂಬವರು ನೀವೆಲ್ಲಾ ಕೇಳಿರಣ್ಣಾ: ಹಾಗದ ಕೆರಹ ಹೊರಗೆ ಕಳೆದು, ದೇಗುಲಕ್ಕೆ ಹೋಗಿ ನಮಸ್ಕಾರವ ಮಾಡುವನಂತೆ ತನ್ನ ಕೆರಹಿನ ಧ್ಯಾನವಲ್ಲದೆ ದೇವರ ಧ್ಯಾನವಿಲ್ಲ. ಧನವನಿರಿಸದಿರಾ, ಇರಿಸಿದಡೆ ಭವ ಬಪ್ಪುದು ತಪ್ಪುದು. ಕೂಡಸಂಗನ ಶರಣರಿಗೆ ಸವೆಸಲೇಬೇಕು. 199
--------------
ಬಸವಣ್ಣ
ಮುಖವನರಿಯದೆಂತರ್ಪಿಸುವೆನಯ್ಯಾ? ಅದು ಭವ ಹರಿಯದು. ಅವಯವದ ಪರಿಯಾಣದಲ್ಲಿ ಅನಿಮಿಷವೆಂಬ ಓಗರವನಿಕ್ಕಿ, ತನುತ್ರಯದಿಂ ಮೇಲಣ ಆನಂದ ಕೋಣೆಯಲ್ಲಿ, ಅನಿಮಿಷಂಗಾರ್ಚನೆಯ ಮಾಡಬಲ್ಲಡೆ ಆತನನುಪಮ ಲಿಂಗಾರ್ಚಕನೆಂಬೆ; ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ನೀನೆಂಬೆ.
--------------
ಸಿದ್ಧರಾಮೇಶ್ವರ
ಲಿಂಗದಲ್ಲಿ ಹೊಳೆದು ಹೋಹ ಜಂಗಮವ ಕಂಡು ಬಿಟ್ಟಡೆ ಭವ ಹೊದ್ದಿತ್ತಯ್ಯಾ ಎನ್ನ ಭಕ್ತಿಗೆ. ಹಿಂದೆ ಲಿಂಗವನಗಲಿದ ಕಾರಣ ಬಂದೆನೀ ಜನ್ಮಕ್ಕೆ, ಕೂಡಲಸಂಗಯ್ಯ ತಪ್ಪಿಹೋಗದ ಮುನ್ನ ಹಿಡಿದು ತನ್ನಿ.
--------------
ಬಸವಣ್ಣ
ಮುನಿಯದಿರಿ ಮುನಿಯದಿರಿ ನಿಮಗೊಂದು ಯುಕ್ತಿಯ ಹೇಳಿಹೆನು, ಅದೆಂತೆಂದಡೆ: ನೀವೆನ್ನ ವಂಶೀಭೂತರಾದ ಕಾರಣ_ನಿಮ್ಮ ಹೆಚ್ಚು ಕುಂದು ಎನ್ನದಾಗಿ, ನಿಮ್ಮ ಅಸ್ತಿ ನಾಸ್ತಿ ಎನ್ನದಾಗಿ, ನಿಮ್ಮ ಹಾನಿವೃದ್ಧಿ ಎನ್ನದಾಗಿ. ಹಾವ ಹಡದವರು ಬೇಲಿಯ ಹೊಗುವರೆ ಹೋಹುದೆ ಅಯ್ಯಾ ? ವ್ಯಾಧನು ಸೂಸಲ ಚೆಲ್ಲಿ ಜಂತ್ರವ ಹಣ್ಣಿ, ಅಡಿಗಲ್ಲನೊಡ್ಡಿ ಹೋದಬಳಿಕ ಸೂಸಲ ಕಂಪಿಗೆ ಹೆಗ್ಗಣ ಬಂದು ಬಿದ್ದಂತೆ ಬಿದ್ದಿರಲ್ಲಾ ಮಾಯದ ಬಲೆಯಲ್ಲಿ ! ಕೋಪವೆಂಬ ಅಡಗನೊಡ್ಡಿ ತಾಪವೆಂಬ ಅರೆಗಲ್ಲನಿರಿಸಿ ಹುಸಿಯೆಂಬ ಮೀಟುಗವಣೆಯ ಜಂತ್ರಿಸಿ, ಹೊನ್ನು ಹೆಣ್ಣು ಮಣ್ಣೆಂಬ ಅಡಿಗಲ್ಲನೊಡ್ಡಿ ಕೆಡಹಿದನಲ್ಲಾ ನಿಷ್ಕರುಣಿ ಮುಕ್ಕಣ್ಣ ವ್ಯಾಧನು ! ಅದೆಂತೆಂದಡೆ, ಶಿವರಹಸ್ಯದಲ್ಲಿ: ``ನಿಸ್ಸಂಗತ್ವಂ ನಿರಾಭಾರೀ ನಿಸ್ಸೀಮಂ ನಿರುಪಾಧಿಕಂ ನಿರ್ದೇಹಂ ನಿರ್ಮಲಂ ನಿತ್ಯಂ ಸತ್ಯಂ ಜಂಗಮಲಕ್ಷಣಂ ಇಂತೆಂಬ ಶ್ರುತ್ಯರ್ಥವ ಕೇಳದೆ, ಜಂಗಮವಾಗಿ ಸುಳಿವ ಮರುಳುಗಳಿರಾ ಕೇಳಿರೆ, ಇದಕ್ಕೆ ಮತ್ತೆಯೂ ಶ್ರುತಿ: ``ಸುಖಂ ಚ ಬಿಂದುಮಾತ್ರೇಣ ದುಃಖಂ ಪರ್ವತ ಏವ ಚ ಹರಿಣೀಪಾದಮಾತ್ರೇಣ ಬಂಧನಂ ತು ಜಗತ್ರಯಂ ಇಂತೆಂಬ ಶ್ರುತಿಗೊಳಗಾಗದೆ ಹೊನ್ನು ಹೆಣ್ಣು ಮಣ್ಣಿನಾಸೆಯಂ ಬಿಟ್ಟು ಕೋಪ ತಾಪಮಂ ಬಿಟ್ಟು, ಭ್ರಾಂತು ಭ್ರಮೆಯಂ ಬಿಟ್ಟು ಜಂಗಮವಾಗಬೇಕು ಕಾಣಿರೆ ಮರುಳುಗಳಿರಾ. ಇಂತೀ ಷಡುಲೋಭದ ರುಚಿ ಹಿಂಗಿ ಜಂಗಮವಾದಲ್ಲದೆ ಭವ ಹಿಂಗದು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಹೊನ್ನು ಹೆಣ್ಣು ಮಣ್ಣೆಂಬ ತ್ರಿವಿಧವನಳಿದಲ್ಲದೆ ಭವ ಹಿಂಗದೆಂಬರು ಬ್ಥಿನ್ನ ಭಾವದಜ್ಞಾನಕಲಾತ್ಮರು. ಅವೇನು ತಮ್ಮ ಸಂಬಂಧವೆ? ಸಂಬಂಧವಲ್ಲ. ತಮ್ಮ ಸಂಬಂಧವಾದ ಮಲತ್ರಯವ ಪೇಳ್ವೆ. ತನುವೇ ಮಣ್ಣು, ಮನವೇ ಹೆಣ್ಣು, ಆತ್ಮವೇ ಹೊನ್ನು. ಇಂತೀ ಹೊನ್ನು ಹೆಣ್ಣು ಮಣ್ಣೆಂಬ ತ್ರಿವಿಧವನೊಳಗಿಟ್ಟುಕೊಂಡು ಬಾಹ್ಯದ ಮಲತ್ರಯಂಗಳ ವಿಸರ್ಜಿಸಿ ಭವಹಿಂಗಿಸಬೇಕೆಂದು ಗುಡ್ಡ ಗಂಹರವ ಸೇರುವರು. ಅವರಿಗೆ ಎಂದಿಗೂ ಭವಹಿಂಗದು. ಮತ್ತೆಂತೆಂದೊಡೆ: ಸುಜ್ಞಾನೋದಯವಾಗಿ ಶ್ರೀಗುರುಕಾರುಣ್ಯವ ಹಡದು ಅಂಗದ ಮೇಲೆ ಇಷ್ಟಲಿಂಗವ ಸ್ವಾಯತವ ಮಾಡಿಕೊಂಡು ಆ ಇಷ್ಟಬ್ರಹ್ಮವನು ತನುಮನಧನದಲ್ಲಿ ಸ್ವಾಯತವ ಮಾಡಿ, ಆ ತ್ರಿವಿಧ ಲಿಂಗದ ಸತ್ಕ್ರಿಯಾ ಸಮ್ಯಜ್ಞಾನ ಸ್ವಾನುಭಾವದಾಚರಣೆಯಿಂದ ಆ ತನುತ್ರಯದ ಪ್ರಕೃತಿಯನಳಿದು, ಆ ಮಾಯಾಮಲಸಂಬಂಧವೆಂಬ ಸತಿಸುತರು ಮಾತಾಪಿತೃಗಳ ಸಂಬಂಧವಿಡಿದು, ಆಚರಿಸಿದಡೆಯು ಅದಕ್ಕೇನು ಚಿಂತೆಯಿಲ್ಲ, ಇಷ್ಟುಳ್ಳವರಿಗೆ ಭವ ಹಿಂಗಿ ಮುಕ್ತಿಯಾಗುವದು. ಪ್ರಮಥಗಣಂಗಳ ಸಮ್ಮತ ಶಿವಜ್ಞಾನಿಗಳು ಮೆಚ್ಚುವರು. ಅದೇನು ಕಾರಣವೆಂದಡೆ: ಈ ಮಲಸಂಬಂಧ ಜೀವಾತ್ಮರೆಲ್ಲ ದೇಹ ಇರುವ ಪರ್ಯಂತರವಲ್ಲದೆ ಲಿಂಗಾಂಗಿಗೆ ಇದ್ದೂ ಇಲ್ಲದಂತೆ ನೋಡೆಂದನಯ್ಯಾ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಬಾಲತ್ವದಲ್ಲಿ ತನ್ನ ಮಲಮೂತ್ರದೊಡನೆ ಹೊರಳಾಡಿ, ಯೌವನಪ್ರಾಯದಲ್ಲಿ ಮದಮತ್ಸರದಿಂದ ಹೋರಾಡಿ, ಕಾಮದಲ್ಲಿ ಕರಗಿ, ಕ್ರೋಧದಲ್ಲಿ ಕೊರದು, ಲೋಭ ಮೋಹದಿಂದ ಮಗ್ನರಾಗಿ, ಯೌವನಬಲಗುಂದಿ ಮುಪ್ಪುವರಿದು ಹಲ್ಲು ಬಿದ್ದು, ಕಣ್ಣು ಒಳನಟ್ಟು, ಬೆನ್ನು ಬಾಗಿ, ದಮ್ಮು ಹತ್ತಿ, ಗುರುಗೂರಿ ಗರಹತ್ತಿ, ಸಾಯುವ ಮನುಜರಿಗೆ, ವಿಭೂತಿ ವೀಳ್ಯೆ ಎಂದು ಮಾಡಿ, ಅವನ ಪಣೆಯಲ್ಲಿ ವಿಭೂತಿಯ ಧರಿಸಿ, ಸರ್ವಾಂಗದಲ್ಲಿ ವಿಭೂತಿ ಲೇಪನ ಮಾಡಿ, ಸ್ಥಾನಸ್ಥಾನಂಗಳಲ್ಲಿ ರುದ್ರಾಕ್ಷಿಯ ಧರಿಸಿ, ಅವನ ಮನೆಯಲ್ಲಿ ಶಿವಗಣಂಗಳು ಸಲಿಸಿ, ಅವನ ಮಸ್ತಕದ ಮೇಲೆ ಸಕಲ ಗಣಂಗಳು ತಮ್ಮ ಪಾದವನಿಟ್ಟು ಅವನ ಕೈಯಲ್ಲಿ ವಿಭೂತಿ ರುದ್ರಾಕ್ಷಿ ಬಿಲ್ವಪತ್ರಿ ಸುವರ್ಣ ಮೊದಲಾದ ಕಾಂಚನವ ಬ್ಥಿಕ್ಷವ ಕೊಂಡು ಅವನು ಸತ್ತುಹೋದ ಮೇಲೆ ಊರ ಹೊರಗಾಗಲಿ, ಊರೊಳಗಾಗಲಿ, ಲಿಂಗಸ್ಥಾಪನೆಯಿದ್ದ ಮಠಮಾನ್ಯದಲ್ಲಿ ಏಳುಪಾದ ನಿಡಿದು, ಏಳುಪಾದ ಉದ್ದ ಭೂಮಿಯ ಒಳಗೆ, ಐದುಪಾದ ಚೌಕು, ಮೂರುಪಾದ ಅಡ್ಡಗಲ, ಮೂರುಪಾದ ಒಳಯಕ್ಕೆ ತ್ರಿಕೋಣೆ. ಇಂತೀ ಕ್ರಮದಲ್ಲಿ ಕ್ರಿಯಾಸಮಾದ್ಥಿಯ ಮಾಡಿ, ಸುಣ್ಣ ಕೆಂಪುಮಣ್ಣಿನ ಸಾರಣೆಯ ಮಾಡಿ ರಂಗವಾಲಿಯ ತುಂಬಿ, ತಳಿರುತೋರಣವ ಕಟ್ಟಿ, ಕೋಣಿ ಕೋಣಿ ಸ್ಥಾನಕ್ಕೆ ಓಲೆಯ ಮೇಲೆ ಪ್ರಣಮವಂ ಬರೆದು ಆ ಸಮಾದ್ಥಿಯಲ್ಲಿ ಸಂಬಂದ್ಥಿಸಿ, ಮತ್ತಂ, ಅವನ ಶವಕ್ಕೆ ಹಾಗೆ ಪ್ರಣಮವಂ ಬರೆದು ಸಂಬಂದ್ಥಿಸಿ, ಸಂಚರಿಸಿ ಮೇಲೆ ಮೋಕ್ಷವಾಯಿತು ಎಂಬರಯ್ಯಾ; ಮೋಕ್ಷವಾಗಲರಿಯದು. ಅದೆಂತೆಂದಡೆ, ಇಂತಿವೆಲ್ಲವು ಹೊರಗಣ ಉಪಚಾರವು. ಈ ಉಪಚಾರದಿಂದ ಕರ್ಮದೋಷಗಳು ಹರಿದು ಪಿಶಾಚಿಯಾಗನು, ಭವ ಹಿಂಗದು. ಇಂತೀ ಕ್ರಮದಲ್ಲಿ, ಅಂತರಂಗದಲ್ಲಿ ಲಿಂಗಾಂಗಕ್ಕೆ ಸ್ವಾನುಭಾವಜ್ಞಾನಸೂತ್ರದಿಂ ಪ್ರಣವಸಂಬಂಧ ಮಾಡಿಕೊಂಡಡೆ ಅದೇ ಕ್ರಿಯಾಸಮಾದ್ಥಿ, ಗೋಮುಖಸಮಾದ್ಥಿ, ಮಹಾನಿಜ ಅಖಂಡ ಚಿದ್ಬಯಲಸಮಾದ್ಥಿ. ಇಂತಪ್ಪ ಸಮಾದ್ಥಿ ಉಳ್ಳವರಿಗೆ ಭವಬಂಧನ ಹಿಂಗಿ ಮುಂದೆ ಮೋಕ್ಷವಾಗುವದು ನೋಡೆಂದನಯ್ಯ ನಿಮ್ಮ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಜಯಜಯ ಪರಮೇಶ ಪರಬ್ರಹ್ಮ ಜಯಜಯ ನಿತ್ಯಾನಂದ ಪದ : ಹರಿಯಜಸುರರೊಂದ್ಯ ಜಯಜಯ ಗಿರಿಸುತೆಪ್ರಾಣೇಶ ಜಯಜಯ ಪರಮುನಿಗಳಾತ್ಮ ಜಯಜಯ ಪರಂಜ್ಯೋತಿರ್ಲಿಂಗ ಜಯಜಯ ತರಣಿಕೋಟಿತೇಜ ಜಯಜಯ ಉರಗಾಭರಣಭವ ಜಯಜಯ ಕರುಣರಸಸಿಂಧು ಜಯಜಯ ಮುರಹರ ಮೃತರಹಿತ ಜಯಜಯ || 1 || ತ್ರಿಪುರಸಂಹರ ನಿತ್ಯ ಜಯಜಯ ಅಪರಂಪಾರಮೂರ್ತಿ ಜಯಜಯ ಕೃಪತ್ರೈಲೋಕೇಶ ಜಯಜಯ ಉಪಮೆರಹಿತಪುಣ್ಯ ಜಯಜಯ ಜಪತಪಕೊಲಿವಾತ ಜಯಜಯ ಅಪಹರಿ ಶಿಖೆಯೊಳಿಟ್ಟ ಜಯಜಯ ವಿಪಿನಕಾಷ್ಠಾರಿನೇತ್ರ ಜಯಜಯ ನಿಪುಣ ನಿರ್ಗುಣ ಶಂಭು ಜಯಜಯ || 2 || ಮಾರಾರಿ ಮದಚರ್ಮ ಜಯಜಯ ಮೂರುನೇತ್ರದ ಭವ ಜಯಜಯ ಈರೇಳು ಭುವನಾತ್ಮಜ ಜಯಜಯ ವಾರಿಜ ಅರಿಭೂಷ ಜಯಜಯ ಮೇರುವಿಗಣಪೂಜ್ಯ ಜಯಜಯ ಪೂರಿತ ಪುಣ್ಯಾಂಗ ಜಯಜಯ ಧಾರುಣಿ ದಯಪಾಲ ಜಯಜಯ ಕರುಣಿ ಚಿನ್ಮಯ ಜಯಜಯ || 3 || ನಂದಿವಾಹನ ನಿತ್ಯ ಜಯಜಯ ಅಂಧಕಾಸುರವೈರಿ ಜಯಜಯ ಕಂದುಗೊರಳ ಶಿವನೆ ಜಯಜಯ ಸಂದ ಕುಣಪಶೂಲ ಜಯಜಯ ಕಂದಗೆ ವರವಿತ್ತ ಜಯಜಯ ಗಂಧರ್ವರಿಗೊಲಿದೆ ಜಯಜಯ ಇಂದ್ರಪೂಜಿತಲಿಂಗ ಜಯಜಯ ತಂದೆತಾಯಿಲ್ಲದ ಮೋನ ಜಯಜಯ || 4 || ಭವರೋಗಕ್ಕೆ ವೈದ್ಯ ಜಯಜಯ ಶಿವ ವಿಶ್ವಕುಟುಂಬಿ ಜಯಜಯ ಜವನ ಸಂಹರ ಅಮಲ ಜಯಜಯ ಪವಿತ್ರಸ್ವರೂಪಕಾಯ ಜಯಜಯ ಭುವನ ಸರ್ವಕೆ ದೇವ ಜಯಜಯ ಕುವರ ಹಂಪನ ಪ್ರಾಣ ಜಯಜಯ ದೇವ ಗುರುಸಿದ್ಧಮಲ್ಲ ಜಯಜಯ ಕವಿವ ದುರಿತಹರ ಜಯಜಯ
--------------
ಹೇಮಗಲ್ಲ ಹಂಪ
ತನುವ ಬೇಡಿದಡೀವೆ, ಮನವ ಬೇಡಿದಡೀವೆ, ಧನವ ಬೇಡಿದಡೀವೆ ನಿಮ್ಮ ಶರಣಂಗೆ. ಎನಗೆ ಬೇಕೆಂಬ ಭಾವ ಮನದಲ್ಲಿ ಹೊಳೆದಡೆ ಘನಮಹಿಮ, ನಿಮ್ಮ ಪಾದದಾಣೆ. ಮನ ವಚನ ಕಾಯದಲ್ಲಿ ನೀವಲ್ಲದೆ ಮತ್ತೊಂದನರಿದಡೆ ಕೂಡಲಸಂಗಮದೇವಾ, ಭವ ಘೋರದಲ್ಲಿಕ್ಕಯ್ಯಾ.
--------------
ಬಸವಣ್ಣ
ಇನ್ನಷ್ಟು ... -->