ಅಥವಾ

ಒಟ್ಟು 91 ಕಡೆಗಳಲ್ಲಿ , 36 ವಚನಕಾರರು , 86 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುಹಿರಿಯರ ಪಾದಸೇವೆಯ ನೆರೆ ಮಾಡುವ ಪರಿಯ ಕೇಳಿರೊ ಭಕ್ತರು. ಮಾಡಿ ನೀಡುವಲ್ಲಿ ಸೊರಗಿ ಸೊಕ್ಕಿ ಕೆಕ್ಕಸಗೆಲವುತ್ತ ಮಾಡಲಾಗದು. ಸಲೆ ಪಂಕ್ತಿಯಲ್ಲಿ ಸಂಚು ವಂಚನೆ ಸನ್ನೆ ಸಟೆ ಮೈಸಂಜ್ಞೆಯಲುಂಬುದ ಬಿಟ್ಟು ಪನ್ನಗಧರನ ಶರಣರಿಗೆ ಬಿನ್ನಹವಮಾಡಿ ಬಿಜಯಂಗೆಯಿಸಿ ತಂದು ಪರಮಾನ್ನ ಪರಿಮಳದಗ್ಘಣಿಯ ನೀಡುವ ಭಕ್ತರಿಗೆ ಮುಕ್ತಿ ಕಾಣಾ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಜಂಗಮದಿಂಗಿತಾಕಾರವ ನೋಡಿ ಲಿಂಗವೆಂದರಿದ ಭಕ್ತರು ಮನ ಮನ ಬೆರಸಿದಡೆ, ಕೂರ್ಮದ ಶಿಶುವಿನ ಸ್ನೇಹದಂತೆ ಮುನ್ನವೆ ತೆರಹಿಲ್ಲದಿರಬೇಕು ನೋಡಾ. ಬಂದ ಬರವನರಿಯದೆ ನಿಂದ ನಿಲವ ನೋಡದೆ ಕೆಮ್ಮನೆ ಅಹಂಕಾರವ ಹೊತ್ತಿಪ್ಪವರ ನಮ್ಮ ಗುಹೇಶ್ವರಲಿಂಗನು ಒಲ್ಲ ಕಾಣಾ.
--------------
ಅಲ್ಲಮಪ್ರಭುದೇವರು
ಎಲಾ, ಶೈವ ವೀರಶೈವ ಎಂಬುವವು ಉಭಯ ಮತಗಳುಂಟು. ಅವು ಎಂತೆಂದಡೆ, ಸ್ಥಾಪ್ಯಲಿಂಗವ ಪೂಜೆಮಾಡುವುದೇ ಶೈವ; ಗುರುವು ಕೊಟ್ಟ ಇಷ್ಟಲಿಂಗವ ಪೂಜೆಮಾಡುವುದೇ ವೀರಶೈವ. ಅದರೊಳಗೆ ಲಿಪ್ತವಾಗಿರ್ಪರೇ ಭಕ್ತರು, ನೀವು ಕೇಳಿರಯ್ಯಾ : ಸ್ಥಾಪ್ಯಲಿಂಗವ ಪೂಜಿಸಿದ ಕರ ಪೋಗಿ ಪರಸ್ತ್ರೀಯರ ಕುಚಂಗಳ ಪಿಡಿಯಬಹುದೆ ? ಈಗ ಯತಿಯ ನುಡಿದ ಜಿಹ್ವೆ ಪೋಗಿ ಪರಸ್ತ್ರೀಯರ ಅಧರಪಾನ ಮಾಡಬಹುದೆ ? ಮಹಾಮಂತ್ರವ ಕೇಳಿದ ಕರ್ಣ ಪೋಗಿ ಪರತಂತ್ರವ ಕೇಳಬಹುದೆ ? ಲಿಂಗಪೂಜಕರ ಅಂಗ ಪೋಗಿ ಪರರಂಗವನಪ್ಪಬಹುದೆ ? ಇವನು ಶೈವ ಭಕ್ತನಲ್ಲಾ ! ಶೈವನಾಗಲಿ ವೀರಶೈವನಾಗಲಿ ಏಕಲಿಂಗನಿಷ್ಠಾಪರನಾಗಿ, ಅಷ್ಟಮದಂಗಳೊಳ್ದಳಗೊಂಡು ಸಂಹರಿಸಿ, ಪಂಚಕ್ಲೇಶ ದುರಿತ ದುರ್ಗುಣಗಳ ಕಳೆದುಳಿದು, ಆರು ಚಕ್ರವ ಹತ್ತಿ ಮೀರಿದ ಸ್ಥಲದೊಳಗಿಪ್ಪ ಲಿಂಗಮಂ ಪೂಜಿಸಿ, ಮೋಕ್ಷಮಂ ಪಡೆದಡೆ, ವೀರಶೈವನೆಂದು ನಮೋ ಎಂಬುವೆನಯ್ಯಾ ಬರಿದೆ ವೀರಶೈವನೆಂದು ತಿರುಗುವ ಮೂಳ ಹೊಲೆಯರ ಮುಖವ ನೋಡಲಾಗದು ಕಾಣಾ ಕೂಡಲಾದಿ ಚನ್ನಸಂಗಮದೇವಾ.
--------------
ಕೂಡಲಸಂಗಮೇಶ್ವರ
ವಚನದ ರಚನೆಯ ನುಡಿವ ಬರುಬಾಯ ಭುಂಜಕರೆಲ್ಲ ಭಕ್ತರಪ್ಪರೆ ಅಯ್ಯಾ ? ಮಾಡುವ ದಾಸೋಹದಿಂದ ಭಕ್ತಂಗೆ ಅವಗುಣಂಗಳಿಲ್ಲದಿರಬೇಕು. ಕೋಪದ ಕೆಚ್ಚಂ ಕಡಿದು, ಲೋಭಲಂಪಟಮಂ ಕೆದರಿ, ಮೋಹದ ಮುಳ್ಳುಮೊನೆಯ ತೆಗೆದು, ಮದದಚ್ಚಂ ಮುರಿದು, ಮಚ್ಚರಿಪ ಸರ್ಪನಂ ಸಮತೆಯೆಂಬ ಗಾರುಡದಲ್ಲಿ ಗಾರುಡಿಸಿ, ಕರಣಾದಿ ಗುಣಂಗಳಿಚ್ಛೆಗೆ ಹರಿಯಲೀಯದೆ, ವಿಶ್ರಮಿಸಿಪ್ಪ ಭಕ್ತನ ಕಾಯವೆ ಕೈಲಾಸ. ಅಂತಲ್ಲದೆ ಬರಿಯಮಾತಿಂಗೆ ಮಾತನೆ ಕೊಟ್ಟು, ತಾನಾಡಿದುದೆ ನೆಲೆಯೆಂಬಾತ ಭಕ್ತನೆ ? ಅಲ್ಲ, ಉಪಜೀವಿ. ಹೇಮದಿಚ್ಛೆಗೆ ಹರಿದು ಕಾಮರತಿಗಳುಪವ, ಕೋಪದುರಿಯ ಹೊದ್ದುಕೊಂಬ, ಲೋಭಮೋಹದ ಕೆಚ್ಚ ಕೂಡಿಕೊಂಡು, ನರಕದೊಳಗೋಲಾಡುವಾತ ಭಕ್ತನೆ ? ಅಲ್ಲ. ಆದಿಯಲ್ಲಿ ನಮ್ಮವರು ಹೊನ್ನು ಹೆಮ್ಣು ಮಣ್ಣು, ಈ ತ್ರಿವಿಧವ ಬಿಟ್ಟಿದರೆ ? ಇಲ್ಲ. ಆವ ತಲೆಯೆತ್ತಲೀಯರಾಗಿ, ಅನ್ಯಸಂಗವ ಹೊದ್ದರು. ಭವಿಮಿಶ್ರವ ಮುಟ್ಟರು, ಹಮ್ಮುಬಿಮ್ಮುಯಿಲ್ಲದಿಪ್ಪ ಇಂತಪ್ಪರೆ ನಮ್ಮ ಭಕ್ತರು. ನಮ್ಮ ಭಕ್ತರ ನೆಲೆಯ, ಮಹಾದಾನಿ ಸೊಡ್ಡಳಾ, ನೀನೆ ಬಲ್ಲೆಯಲ್ಲದೆ, ಉಳಿದ ಜಡಜೀವಿಗಳೆತ್ತ ಬಲ್ಲರು ?
--------------
ಸೊಡ್ಡಳ ಬಾಚರಸ
ಕಪಿ ಕಳ್ಳ ಕುಡಿದು, ಕಡಲ ದಾಂಟುವೆನೆಂದು ಲಂಘಿಸಿ ನಡುನೀರಿನಲ್ಲಿ ಬಿದ್ದು, ಮೀನು ಮೊಸಳೆಗೆ ಆಹಾರವಾದಂತಾಯಿತಯ್ಯ ಎನ್ನ ಬಾಳು. ಆದಿಯಲ್ಲಿ ನಿನ್ನ ಗರ್ಭಾಂಬುದ್ಥಿಯಲ್ಲಿ ಜನಿಸಿ, ನಿನ್ನ ನೆನಹಿಲ್ಲದೆ, ಇಷ್ಟಲಿಂಗವನರಿಯದ ಪರಮ ಕಷ್ಟಜೀವಿಗಳ, ಪ್ರಾಣಲಿಂಗವನರಿಯದ ಪರಮಪಾತಕರ, ಭಾವಲಿಂಗವನರಿಯದ ಭವಕ್ಕೊಳಗಾದ ಹುಲುಮಾನವರ, ತಂದೆ-ತಾಯಿ ಬಂಧು-ಬಳಗವೆಂದು, ಭಾವಿಸಿದ ಬಲು ಪಾತಕವೆನ್ನನಂಡಲೆದು, ಅಮರ್ದಪ್ಪಿ ಅಗಲದ ಕಾರಣ, ನಿಂದ ಠಾವಿಂಗೆ ನೀರ್ದಳಿವರಯ್ಯ. ಕುಳಿತ ಠಾವಿಂಗೆ ಹೋಮವನಿಕ್ಕಿಸುವರಯ್ಯ. ನಾನು ಬಂದ ಬಟ್ಟೆಯೊಳಗೋರ್ವರು ಬಾರರಯ್ಯ. ಕಾಲನಾಳಿಂಗೆ ಕಾಲ್ದುಳಿಯಾದೆನಯ್ಯ. ಶುನಕ ಸೂಕರಾದಿಗಳ ಬಸಿರಲ್ಲಿ ಬರುವಂತೆ, ಮಾಡಿತಯ್ಯ ಎನ್ನ ಮಾಯೆ. ಒರ್ವರಿಗೆ ಹುಟ್ಟಿ ಮತ್ತೋರ್ವರಿಗೆ ಅಪ್ಪಾ ಎಂಬ ನಾಣ್ಣುಡಿಯ ದೃಷ್ಟವೆನಗಾಯಿತಯ್ಯ ಗುರುವೆ. ಈ ದೋಷಮಂ ಕರುಣದಿಂ ಕಳೆದು ಶುದ್ಧನಂ ಮಾಡಿ. ನಿನ್ನನೇ ಜನನೀ ಜನಕರೆಂಬ, ನಿನ್ನ ಭಕ್ತರು ಬಂಧು ಬಳಗವೆಂಬ ಸುಜ್ಞಾನಮಂ ಕೊಟ್ಟು, ಜಾಗ್ರತ್ಸ ್ವಪ್ನ ಸುಷುಪ್ತಿಯಲ್ಲಿ ನಿನ್ನತ್ತಲೆನ್ನ ಮುಖವ ಮಾಡಿ, ಅಕ್ಕರಿಂದ ರಕ್ಷಿಪುದಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಗುರುಹಸ್ತದಲ್ಲಿ ಉತ್ಪತ್ಯವಾಗಿ, ಜಂಗಮಾನುಭವ ಶರಣರ ಸಂಗದಲ್ಲಿ ಬೆಳೆದು, ನಿಜಲಿಂಗದಲ್ಲಿ ಲೀಯವಾದ ಗುರುಚರ ಭಕ್ತರು ತಮ್ಮ ಸ್ಥೂಲಕಾಯವೆಂಬ ನರಕಂಥೆಯ ಕಳೆದರೆ, ಭಕ್ತ ಬಂಧುಗಳಾದ ಆಪ್ತ ಗಣಂಗಳು ಬಂದು ಸಮಾಧಿಯಂ ತೆಗೆದು, ಆ ಕಾಯವೆಂಬ ಕಂಥೆಯ ನಿಕ್ಷೇಪವಂ ಮಾಡುವುದೆ ಸದಾಚಾರ. ಇಂತಲ್ಲದೆ ಮೃತವಾದನೆಂದು ಗೂಟವಂ ಬಲಿದು, ಗುಂಟಿಕೆಯನಿಕ್ಕಿ, ಶೋಕಂಗೆಯ್ದು, ಪ್ರೇತಸೂತಕ ಕರ್ಮವಿಡಿದು, ತದ್ದಿನವಂ ಮಾಡುವದನಾಚಾರ, ಪಂಚಮಹಾಪಾತಕ. ಅವಂಗೆ ಗುರು ಲಿಂಗ ಜಂಗಮ ಪ್ರಸಾದವಿಲ್ಲ ಅದೆಂತೆಂದೊಡೆ: ``ಯೋ ಗುರುಂ ಮೃತಭಾವೇನ ತದ್ದಿನಂ ಯಸ್ಯ ಶೋಚ್ಯತೇ ಗುರುಲಿಂಗಪ್ರಸಾದಂ ಚ ನಾಸ್ತಿ ನಾಸ್ತಿ ವರಾನನೇ ಎಂದುದಾಗಿ, ಪ್ರೇತಸೂತಕದ ಪಾತಕರಿಗೆ ಅಘೋರನರಕ ತಪ್ಪದು. ಇಂತಪ್ಪ ಅಘೋರನರಕಿಗಳ ಮುಖವ ನೋಡಲಾಗದು ಕಾಣಾ ಕೂಡಲಚೆನ್ನಸಂಗಯ್ಯ.
--------------
ಚನ್ನಬಸವಣ್ಣ
ಭಕ್ತಿಯುಳ್ಳವಂಗೆ ನಿಷ್ಠುರದ ಮಾತೇಕೆಂಬರು ನಾಲ್ಕರ ಮುಕ್ತಿಯ ಭಕ್ತರು. ನಿಷ್ಠೆವಂತರಿಗೆ ಇದೇ ಭಕ್ತಿ, ಅನಿತ್ಯವನರಿದ ನಿಶ್ಚಟಂಗೆ ಮಿಥ್ಯವನಾರಾದಡೂ ನುಡಿಯಲಿ, ಸತ್ಯವಿದ್ದ ಮತ್ತೆ. ಕಲ್ಲಿನ ಮನೆಯಲ್ಲಿದ್ದವಂಗೆ ದಳ್ಳುರಿ ಬಿದ್ದಡೇನು ? ಇವರೆಲ್ಲರ ಬಲ್ಲತನಕ್ಕಂಜಿ ನಾನೊಳ್ಳಿಹನೆಂದಡೆ, ಆತನು ಎಲ್ಲಿಗೆ ಯೋಗ್ಯ, ನಿಃಕಳಂಕ ಮಲ್ಲಿಕಾರ್ಜುನಾ ?
--------------
ಮೋಳಿಗೆ ಮಾರಯ್ಯ
ಷೋಡಶಕಳೆಯುಳ್ಳ ಜಂಗಮವ ರಾಜರುಗಳು ಪೂಜೆಯ ಮಾಡುವರು. ವಿಷಯವುಳ್ಳ ಜಂಗಮವ ವೇಸಿ ಪೂಜೆಯ ಮಾಡುವಳು. ರಸವಿದ್ಯೆಯುಳ್ಳ ಜಂಗಮವ ಅಕ್ಕಸಾಲೆ ಪೂಜೆಯ ಮಾಡುವನು. ವೇಷವುಳ್ಳ ಜಂಗಮವ ಭಕ್ತರು ಪೂಜೆ ಮಾಡುವರು. ಜ್ಞಾನವುಳ್ಳ ಜಂಗಮವ ಆರಿಗೂ ಕಾಣಬಾರದು ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಭಕ್ತರು ಮನೆಗೆ ಬಂದಡೆ, ತಮ್ಮ ಮನೆಯಲ್ಲಿ ತಾವಿಪ್ಪಂತಿರಬೇಕು. ಅಂಜದೆ ಅಳುಕದೆ ನಡುಗುತ್ತಿರದೆ, ತಮ್ಮ ಶುದ್ಧಿ ತಾವಿರಬೇಕು. ತಾವು ಆಳ್ವವರು ಅಲಿನಂತಿದ್ದಡೆ, ಬಸವಪ್ರಿಯ ಕೂಡಲಚೆನ್ನಸಂಗ ಹಲ್ಲ ಕಳೆವ.
--------------
ಸಂಗಮೇಶ್ವರದ ಅಪ್ಪಣ್ಣ
ಅಯ್ಯಾ, ನಾನಧವೆ, ಅಯ್ಯಯ್ಯ ಕೈಯ ಕೋಲಕೊಂಬರೆ ? ಅಯ್ಯಾ, ಎಳೆಗರುವಿನ ಎಳಗಂತಿಯನೆಳೆದೊಯ್ವರೆ ಭಕ್ತರು ? ಅಯ್ಯೋ ಅಯ್ಯೋ ಎನಲೊಯ್ವರೆ, ಬಸವಣ್ಣಪ್ರಿಯ ಚೆನ್ನಸಂಗಯ್ಯಾ ?
--------------
ನಾಗಲಾಂಬಿಕೆ
ನಾನಾ ವ್ರತದ ಭಾವಂಗಳುಂಟು. ಲಕ್ಷಕ್ಕೆ ಇಕ್ಕಿಹೆನೆಂಬ ಕೃತ್ಯದವರುಂಟು. ಬಂದಡೆ ಮುಯ್ಯಾಂತು ಬಾರದಿದ್ದಡೆ ಭಕ್ತರು ಜಂಗಮವ ಆರನೂ ಕರೆಯೆನೆಂಬ ಕಟ್ಟಳೆಯವರುಂಟು. ತಮ್ಮ ಕೃತ್ಯವಲ್ಲದೆ ಮತ್ತೆ ಬಂದಡೆ ಕತ್ತಹಿಡಿದು ನೂಕುವರುಂಟು. ಗುರುಲಿಂಗಜಂಗಮದಲ್ಲಿ ತಪ್ಪಕಂಡಡೆ ಒಪ್ಪುವರುಂಟು. ಮೀರಿ ತಪ್ಪಿದಡೆ ಅರೆಯಟ್ಟಿ ಅಪ್ಪಳಿಸುವರುಂಟು. ಇಂತೀ ಶೀಲವೆಲ್ಲವು ನಾವು ಮಾಡಿಕೊಂಡ ಕೃತ್ಯದ ಭಾವಕೃತ್ಯ. ತಪ್ಪಿದಲ್ಲಿ ದೃಷ್ಟವ ಕಂಡು ಶರಣರೆಲ್ಲರು ಕೂಡಿ ತಪ್ಪ ಹೊರಿಸಿದ ಮತ್ತೆ ಆ ವ್ರತವನೊಪ್ಪಬಹುದೆ ! ಕೊಪ್ಪರಿಗೆಯಲ್ಲಿ ನೀರ ಹೊಯಿದು ಅಪೇಯವ ಅಪ್ಪುವಿನಲ್ಲಿ ಕದಡಿ ಅಶುದ್ಧ ಒಪ್ಪವಿಲ್ಲವೆಂದು ಮತ್ತೆ ಕುಡಿಯಬಹುದೆ? ತಪ್ಪದ ನೇಮವನೊಪ್ಪಿ ತಪ್ಪ ಕಂಡಲ್ಲಿ ಬಿಟ್ಟು ಇಂತೀ ಉಭಯಕ್ಕೆ ತಪ್ಪದ ಗುರು ವ್ರತಾಚಾರಕ್ಕೆ ಕರ್ತನಾಗಿರಬೇಕು. ಇಂತೀ ಕಷ್ಟವ ಕಂಡು ದ್ರವ್ಯದಾಸೆಗೆ ಒಪ್ಪಿದನಾದಡೆ ಅವನೂಟ ಸತ್ತನಾಯಮಾಂಸ. ನಾ ತಪ್ಪಿ ನುಡಿದೆನಾದಡೆ ಎನಗೆ ಎಕ್ಕಲನರಕ. ನಾ ಕತ್ತಲೆಯೊಳಗಿದ್ದು ಅಂಜಿ ಇತ್ತ ಬಾ ಎಂಬವನಲ್ಲ. ವ್ರತ ತಪ್ಪಿದವರಿಗೆ ನಾ ಕಟ್ಟಿದ ತೊಡರು. ಎನ್ನ ಪಿಡಿದಡೆ ಕಾದುವೆ, ಕೇಳಿದಡೆ ಪೇಳುವೆ. ಎನ್ನಾಶ್ರಯದ ಮಕ್ಷಿಕ ಮೂಷಕ ಮಾರ್ಜಾಲ ಗೋ ಮುಂತಾದ ದೃಷ್ಟದಲ್ಲಿ ಕಾಂಬ ಚೇತನಕ್ಕೆಲ್ಲಕ್ಕೂ ಎನ್ನ ವ್ರತದ ಕಟ್ಟು. ಇದಕ್ಕೆ ತಪ್ಪಿದೆನಾದಡೆ ನಿಮ್ಮಾಣೆ ನಿಮ್ಮ ಪ್ರಮಥರಾಣೆ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವೆ ಎಚ್ಚತ್ತು ಬದುಕು.
--------------
ಅಕ್ಕಮ್ಮ
ದಾಸೋಹಿ ದಾಸೋಹಿಗಳೆಂದು ಬೇಸರಿಲ್ಲದೆ ಅಂಚೆಬೆಂತನಂತೆ ದೇಶ ದೇಶವ ತಿರುಗಿ ಆಸೆಯೆಂಬ ಅದ್ಭುತ ಅಂಗಗೊಂಡು ಹೇಸಿಕೆಯೊಳು ಬಿದ್ದೇಳದ ಮಕ್ಷುಕನಂತೆ ಮಲಬದ್ಧ ಮನುಜರ ಬೋದ್ಥಿಸಿ ಕಾಡಿ ಕರೆಕರೆಸಿ, ಕಾಸಾದಿ ದ್ರವ್ಯವ ಕೊಂಡು ಬಂದು ಹಾಸಿ ಹಬ್ಬಕಿಕ್ಕಿ, ನಾಮಾಡಿದೆನೆಂಬ ನಾಯಿಯ ತೇಜವ ಹೊತ್ತು ತೊಳಲುವ ತಥ್ಯ ಭಂಡರ ಸೋಗಿಗೆ ಸೊಗಸರಯ್ಯಾ ನಿಮ್ಮ ಭಕ್ತರು ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಗುರುಹಿರಿಯರ ದರುಶನ ಸ್ಪರುಷನದಲ್ಲಿ ಇರುವ ಕಟ್ಟಳೆಯ ಕೇಳಿರೊ. ಭಕ್ತರು ಆಡದ ಆಚಾರ ಗಂಟುಹಾಕಲಾಗದು. ಗಡ್ಡ ಮೀಸೆಯ ತಿದ್ದಲಾಗದು. ಮಡ್ಡಮಾತು ಗೀತವನಾಡಲಾಗದು. ಅಥವ ಆಡಿದರೆ ಅವರ ಸಿರದ ಗುಡ್ಡದ ಬೋಳರ ಸಮಾನವೆಂದು ಕಂಡು ಸಡ್ಡೆಮಾಡದೆ ಇರುವರು ಸತ್ಪುರುಷರು ಕಾಣಾ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಬಂಜೆ ಬೇನೆಯನರಿಯದಂತೆ ಒಬ್ಬರೊಂದ ನುಡಿವಿರಿ, ಕೇಳಿರಯ್ಯಾ. ಎನಗೆ ಆಯುಷ್ಯ ಭವಿಷ್ಯ, ಎನ್ನ ಭಕ್ತರು. ಎನಗೆ ಆಯುಷ್ಯ ಭವಿಷ್ಯ, ಎನ್ನ ಪ್ರಮಥರು ಕಂಡಯ್ಯಾ. ಕೂಡಲಸಂಗನ ಶರಣರು ಮುಖಲಿಂಗಿಗಳಯ್ಯಾ. 410
--------------
ಬಸವಣ್ಣ
ಹೇಳಯ್ಯಾ, ಹೇಳಯ್ಯಾ, ಆ ಕಾಲದಲಿ ಮಾಡುವಿರಿ ಲಗುನವೆಂತಹುದಯ್ಯ? ಕೇಳಯ್ಯಾ, ಆ ಕಾಲವೆ ಸುಕಾಲವಾಗಿ ಲಗುನವಿಂತಹುದು. ಭಕ್ತರು ಕಪಿಲಸಿದ್ಧಮಲ್ಲಿನಾಥನ ಮನಮನದ ಚಿತ್ತದಲ್ಲಿ ಮುಂದಿಟ್ಟು ನಡೆವರಾಗಿ ಅಂತಹುದಯ್ಯಾ, ಅಂತಹುದಯ್ಯಾ.
--------------
ಸಿದ್ಧರಾಮೇಶ್ವರ
ಇನ್ನಷ್ಟು ... -->