ಅಥವಾ

ಒಟ್ಟು 127 ಕಡೆಗಳಲ್ಲಿ , 28 ವಚನಕಾರರು , 103 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

`ನೀನು' `ನಾನು' ಎಂಬ ಉಭಯಸಂಗವಳಿದು ತಾನು ತಾನಾದ ತ್ರಿಕೂಟವೆಂಬ ಮಹಾಗಿರಿಯ ತುಟ್ಟತುದಿಯ ಮೆಟ್ಟಿ ನೋಡಲು, ಬಟ್ಟಬಯಲು ಕಾಣಬಹುದು ನೋಡಾ ! ಆ ಬಯಲ ಬೆರಸುವಡೆ_ತ್ರಿಕೂಟಗಿರಿಯೊಳಗೊಂದು ಕದಳಿಯುಂಟು ನೋಡಾ ! ಆ ಕದಳಿಯ ತಿಳಿದು ಅಲ್ಲಿ ಒಳಹೊಕ್ಕು ನೋಡಲು ತೊಳಗಿ ಬೆಳಗುವ ಜ್ಯೋತಿಯುಂಟು ಕೇಳಾ ! ನಡೆ ಅಲ್ಲಿಗೆ ತಾಯೆ, ಗುಹೇಶ್ವರಲಿಂಗದಲ್ಲಿ ಪರಮಪದವಿ ನಿನಗೆ ಸಯವಪ್ಪುದು ನೋಡಾ
--------------
ಅಲ್ಲಮಪ್ರಭುದೇವರು
ಅರಿಯದೆ ಮರಹಿಂದ ಭವದಲ್ಲಿ ಬಂದೆನಲ್ಲದೆ, ಇನ್ನು ಅರಿದ ಬಳಿಕ ಬರಲುಂಟೆ ? ಹೃದಯಕಮಲಮಧ್ಯದಲ್ಲಿ ನಿಜವು ನೆಲೆಗೊಂಡ ಬಳಿಕ, ಪುಣ್ಯಪಾಪವೆಂಬುದಕ್ಕೆ ಹೊರಗಾದೆನು. ಭುವನಹದಿನಾಲ್ಕರೊಳಗೆ ಪರಿಪೂರ್ಣ ನಿರಂಜನಜ್ಯೋತಿಯಾಗಿ ಬೆಳಗುವ ಪ್ರಭುವ ಕಂಡು ಬದುಕಿದೆನು ಕಾಣಾ ಬಸವಣ್ಣಪ್ರಿಯ ಚೆನ್ನಸಂಗಯ್ಯಾ.
--------------
ನಾಗಲಾಂಬಿಕೆ
ಆರೆಂದು ಕುರುಹ ಬೆಸಗೊಳಲು, ಏನೆಂದು ಹೇಳುವೆನಯ್ಯಾ ? ಕಾಯದೊಳಗೆ ಮಾಯವಿಲ್ಲ; ಭಾವದೊಳಗೆ ಭ್ರಮೆಯಿಲ್ಲ. ಕರೆದು ಬೆಸಗೊಂಬಡೆ ಕುರುಹಿಲ್ಲ. ಒಬ್ಬರಿಗೂ ಹುಟ್ಟದೆ, ಅಯೋನಿಯಲ್ಲಿ ಬಂದು ನಿರ್ಬುದ್ಧಿಯಾದವಳನೇನೆಂಬೆನಣ್ಣಾ ? ತಲೆಯಳಿದು ನೆಲೆಗೆಟ್ಟು ಬೆಳಗುವ ಜ್ಯೋತಿ ಎನ್ನ ಅಜಗಣ್ಣತಂದೆಯ ಬೆನ್ನಬಳಿಯವಳಾನಯ್ಯಾ.
--------------
ಮುಕ್ತಾಯಕ್ಕ
ಅಯ್ಯ ! ಕಾರ್ಯನಲ್ಲ ಕಾರಣನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ. ಭೇದಕನಲ್ಲ ಸಾಧಕನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ. ಪಾತಕನಲ್ಲ ಸೂತಕನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ. ದ್ವೈತನಲ್ಲ ಅದ್ವೈತನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ. ಕಾಟಕನಲ್ಲ ಕೀಟಕನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ. ಎನ್ನವನಲ್ಲ ನಿನ್ನವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ. ಸಂಕಲ್ಪನಲ್ಲ ವಿಕಲ್ಪನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ. ಒಮ್ಮೆ ಆಚಾರದವನಲ್ಲ ಒಮ್ಮೆ ಅನಾಚಾರದವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ. ಕುಂಟಣಿಯಲ್ಲ ನೆಂಟಣಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ. ದುಶ್ಶೀಲನಲ್ಲ ದುರ್ಮಾರ್ಗಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ. ಜಾತಿಯವನಲ್ಲ ಅಜಾತಿಯವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ. ಇಂದು ಉಭಯವಳಿದು ಬೆಳಗುವ ಸಂಗನಬಸವಣ್ಣನ ಉನ್ಮನಾಗ್ರದಲಿ ಹೊಳೆವಾತ ತಾನೆ ನೋಡ ! ಗುಹೇಶ್ವರಲಿಂಗವು ಚೆನ್ನಬಸವಣ್ಣ.
--------------
ಅಲ್ಲಮಪ್ರಭುದೇವರು
ಎನ್ನ ಆಧಾರದಲ್ಲಿ ಅರವತ್ತುಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶವನೊಳಕೊಂಡು ಬೆಳಗುತಿರ್ಪಿರಯ್ಯಾ ನೀವು. ಎನ್ನ ಸ್ವಾದ್ಥಿಷ್ಠಾನದಲ್ಲಿ ಎಪ್ಪತ್ತುಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶವನೊಳಕೊಂಡು ಬೆಳಗುತಿರ್ಪಿರಯ್ಯಾ ನೀವು. ಎನ್ನ ಮಣಿಪೂರಕದಲ್ಲಿ ಎಂಬತ್ತುಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶವನೊಳಕೊಂಡು ಬೆಳಗುತಿರ್ಪಿರಯ್ಯಾ ನೀವು. ಎನ್ನ ಅನಾಹತದಲ್ಲಿ ತೊಂಬತ್ತುಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶವನೊಳಕೊಂಡು ಬೆಳಗುತಿರ್ಪಿರಯ್ಯಾ ನೀವು. ಎನ್ನ ವಿಶುದ್ಧಿಯಲ್ಲಿ ನೂರುಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶವನೊಳಕೊಂಡು ಬೆಳಗುತಿರ್ಪಿರಯ್ಯಾ ನೀವು. ಎನ್ನ ಆಜ್ಞೇಯದಲ್ಲಿ ಅನಂತಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶವನೊಳಕೊಂಡು ಬೆಳಗುತಿರ್ಪಿರಯ್ಯಾ ನೀವು. ಎನ್ನ ಬ್ರಹ್ಮರಂಧ್ರದಲ್ಲಿ ಅಗಣಿತಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶವನೊಳಕೊಂಡು ಬೆಳಗುತಿರ್ಪಿರಯ್ಯಾ ನೀವು. ಎನ್ನ ಶಿಖಾಚಕ್ರದಲ್ಲಿ ಅಖಂಡ ಬೆಳಗನೊಳಕೊಂಡು ಬೆಳಗುತಿರ್ಪಿರಯ್ಯಾ ನೀವು. ಇಂತು ಎನ್ನೊಳಗೆ ಥಳಥಳಿಸಿ ಬೆಳಗುವ ಬೆಳಗಿನ ಬೆಳಗು ಮಹಾಬೆಳಗಿನೊಳಗೆ ಮುಳುಗಿ ಎನ್ನಂಗದ ಕಳೆಯಳಿದಿರ್ದೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಆದಿ ಅನಾದಿಯಿಂದತ್ತತ್ತ ಮೀರಿ ತೋರುವ ಪರಾತ್ಪರವಸ್ತುವೆ ತನ್ನ ಚಿದ್ವಿಲಾಸದಿಂದ ತಾನೆ ಜಗತ್ಪಾವನಮೂರ್ತಿಯಾಗಿ, ತನ್ನಂತರಂಗ ಬಹಿರಂಗದಲ್ಲಿ ಭಕ್ತಿ ಜ್ಞಾನ ವೈರಾಗ್ಯ ಪಟ್ಸ್ಥಲಮಾರ್ಗವಿಡಿದು ಭಕ್ತಿಪ್ರಿಯರಾಗಿ, ತಮ್ಮಂತರಂಗದೊಳಗೆ ಷಡ್ವಿಧಸಕೀಲ ಛತ್ತೀಸಸಕೀಲ ನಾಲ್ವತ್ತೆಂಟುಸಕೀಲ ಐವತ್ತಾರುಸಕೀಲ ಅರುವತ್ತಾರುಸಕೀಲ ತೊಂಬತ್ತಾರುಸಕೀಲ ನೂರೆಂಟುಸಕೀಲ ಇನ್ನೂರ ಹದಿನಾರುಸಕೀಲ ಮೊದಲಾದ ಸಮಸ್ತಸಕೀಲಂಗಳನೊಳಕೊಂಡು, ಬೆಳಗುವ ಗುರು ಲಿಂಗ ಜಂಗಮವ ಕಂಗಳು ತುಂಬಿ, ಮನ ತುಂಬಿ ಭಾವ ತುಂಬಿ ಕರಣಂಗಳು ತುಂಬಿ, ತನು ತುಂಬಿ ಪ್ರಾಣ ತುಂಬಿ ಸರ್ವಾಂಗ ತುಂಬಿ, ಅರ್ಚಿಸಲರಿಯದೆ, ಹಲವನರಸಿ, ತೊಳಲುವ ಮೂಳರ ಕಂಡು ಬೆರಗಾದೆ ನೋಡಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಕುಂಡಲಿಯ ಬಾಗಿಲಲ್ಲಿ ಕೆಂಡವ ಪುಟಮಾಡಿ, ಉದ್ದಂಡವಿಕಾರದ ಉಪಟಳವನುರುಹಿ, ತಂಡತಂಡದ ನೆಲೆಗಳ ದಾಟಿ ದಂಡನಾಳವ ಪೊಕ್ಕು ಮಂಡಲತ್ರಯದ ಮೇಲೆ ಚಂಡ ರವಿಕೋಟಿಪ್ರಭೆಯಿಂದೆ ಬೆಳಗುವ ಅಖಂಡಮೂರ್ತಿಯ ಕಂಡು ಕೂಡಬಲ್ಲಾತನೆ ಪ್ರಚಂಡ ಪ್ರಾಣಲಿಂಗಿಯೆಂಬೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ತತ್ತ್ವ ಮೂವತ್ತಾರರಿಂದತ್ತತ್ತ ಪರಕ್ಕೆ ಪರವಾದ ಗುರುವಿನ ಅಂಗ ತಾನೆ ಸಕಲ ನಿಃಕಲರೂಪಾದ ಲಿಂಗವು. ಅದು ತಾನೆ ಮತ್ತೆ ಸಕಲಾಂಗವೆನಿಸುವ ಜಂಗಮವು. ಆ ಜಂಗಮವು ತಾನೆ ಗುರುವಿನ ನಿಃಕಲಾಂಗವು. ಆ ಶ್ರೀಗುರುವಿನ ಕಳೆಯಿಂದ ಹುಟ್ಟಿದ ನಿಜಸುಖವೇ ಪ್ರಸಾದಲಿಂಗವು, ಇಂತು ಗುರು ಲಿಂಗ ಜಂಗಮವೆನಿಸುವ ಶುದ್ಧ ಸಿದ್ಧ ಪ್ರಸಿದ್ಧ ಲಿಂಗಕಳೆಗಳಿಂದತಿಶಯವಾಗಿ ಬೆಳಗುವ ಶರಣ ತಾನೇ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು.
--------------
ಸ್ವತಂತ್ರ ಸಿದ್ಧಲಿಂಗ
ಇಂತೀ ಅಷ್ಟಾವರಣವ ಸದ್ಗುರುಮುಖದಿಂ ಚಿದಂಗಚಿದ್ಘನಲಿಂಗದ ಮಧ್ಯದಲ್ಲಿ ಸಂಬಂಧವಿಟ್ಟು, ಏಕಲಿಂಗನಿಷ್ಠಾಪರತ್ವದಿಂದ ಸ್ಥೂಲಕಂಥೆಯ ಧರಿಸಿ ಸತ್ಕಾಯಕ-ಸತ್ಕ್ರಿಯಾ-ಸಮ್ಯಜ್ಞಾನ-ಸದ್ಭಕ್ತಿ- ಸದಾಚಾರಸನ್ನಿಹಿತರೆ ನೂತನಗಣಂಗಳೆನಿಸುವರು ನೋಡ. ಅದರಿಂ ಮೇಲೆ ಚಿದಂಗ-ಚಿತ್ಪ್ರಾಣಾಂಗದ ಮಧ್ಯದಲ್ಲಿ ಚಿದ್ಘನಲಿಂಗ-ಚಿತ್ಪ್ರಾಣಲಿಂಗವ ಸದ್ಗುರುಮುಖದಿಂ ಸಂಬಂಧವಿಟ್ಟು ಆ ಲಿಂಗದ ಮಧ್ಯದಲ್ಲಿ ಸಾಕಾರ-ನಿರಾಕಾರವಾದ ಷೋಡಶಾವರಣವ ಸಂಪೂರ್ಣವಮಾಡಿಕೊಂಡು, ಸೂಕ್ಷ್ಮತನುವೆಂಬ ಕಂಥೆಯ ಧರಿಸಿ ಕಂಗಳಾಲಯದ ಜ್ಯೋತಿರ್ಲಿಂಗದ ಮಧ್ಯದಲ್ಲಿ ಮನವ ಮುಳುಗಿಸುವರೆ ಆದಿಗಣಂಗಳೆನಿಸುವರು ನೋಡ. ಅದರಿಂ ಮೇಲೆ, ಚಿದ್ಘನ ತ್ರಿವಿಧಾಂಗ-ಚಿದ್ಘನ ತ್ರಿವಿಧಲಿಂಗವ ಸದ್ಗುರುಮುಖದಿಂ ಸಂಬಂದ್ಥಿಸಿಕೊಂಡು ಆ ಲಿಂಗಾಂಗದ ಮಧ್ಯದಲ್ಲಿ ಕ್ರಿಯಾಷ್ಟಾವರಣ-ಜ್ಞಾನಾಷ್ಟಾವರಣ-ಮಹಾಜ್ಞಾನಾಷ್ಟಾವರಣವ ಸಂಬಂಧವಿಟ್ಟು, ಕಾರಣತನುವೆಂಬ ಕಂಥೆಯ ಧರಿಸಿ, ಹೃತ್ಕಮಲಮಧ್ಯದಲ್ಲಿ ಬೆಳಗುವ ಪರಂಜ್ಯೋತಿರ್ಲಿಂಗಮಧ್ಯದಲ್ಲಿ ಭಾವವ ಮುಳುಗಿಸಿ ಬಚ್ಚಬರಿಯಾನಂದದಲ್ಲಿ ಪರಿಪೂರ್ಣಾನಂದದಿಂದಾಚರಿಸುವರೆ ಅನಾದಿಗಣಂಗಳೆನಿಸುವರು ನೋಡ. ಅದರಿಂ ಮೇಲೆ, ಚಿದ್ಘನ ಅಷ್ಟಾಂಗದ ಮಧ್ಯದಲ್ಲಿ ಚಿದ್ಘನ ಅಷ್ಟಲಿಂಗಂಗಳ ಸದ್ಗುರುಮುಖದಿಂ ಧರಿಸಿ, ಆ ಲಿಂಗಾಂಗದ ಮಧ್ಯದಲ್ಲಿ ಅರುವತ್ತುನಾಲ್ಕು ತೆರದಾವರಣವ ಸಂಬಂದ್ಥಿಸಿಕೊಂಡು ತಮ್ಮ ಸರ್ವಾಂಗದಲ್ಲಿ ಅಷ್ಟವಿಧಕಮಲಂಗಳ ಕಂಡು, ಆ ಕಮಲಮಧ್ಯದಲ್ಲಿ ನೆಲಸಿರ್ಪ ಚತುರ್ವಿಧ ಬಿಂದುಲಿಂಗ, ಷಡ್ವಿಧ ಧಾತುಲಿಂಗ, ದಶವಿಧ ಕ್ಷೇತ್ರಲಿಂಗ, ದ್ವಾದಶ ವಿಕೃತಿಲಿಂಗ, ಷೋಡಶ ಕಳಾಲಿಂಗ, ದ್ವಿವಿಧ ವಿದ್ಯಾಲಿಂಗ, ಸಹಸ್ರ ಶಿವಕಳಾಲಿಂಗ, ತ್ರಿವಿಧ ವಿವೇಕಲಿಂಗ ಇಂತೀ ಅಷ್ಟವಿಧಕಮಲಂಗಳ ಮಧ್ಯದಲ್ಲಿ ನೆಲಸಿರ್ಪ ಅಷ್ಟವಿಧಲಿಂಗಗಳ ಅಷ್ಟವಿಧ ಹಸ್ತಗಳಿಂದ, ಅಷ್ಟವಿಧಾರ್ಚನೆ, ಷೋಡಶೋಪಚಾರಂಗಳ ಮಾಡಿ, ಎರಡಳಿದು ಏಕರೂಪವಾಗಿ ನಿರಾವಯ ಕಂಥೆಯ ಧರಿಸಿ, ಪರತತ್ವ ಜ್ಯೋತಿರ್ಮಯಲಿಂಗದೊಳಗೆ ಉರಿಯುಂಡ ಕರ್ಪುರದಂತೆ ಸಮರಸವಾದರು ನೋಡ. ಅವರಾರೆಂದಡೆ : ರುದ್ರಲೋಕದ ರುದ್ರಗಣಂಗಳು, ಶಿವಲೋಕದ ಶಿವಗಣಂಗಳು, ದೇವಲೋಕದ ದೇವಗಣಂಗಳು, ನಾಗಲೋಕದ ನಾಗಗಣಂಗಳು, ಶಾಂಭವಲೋಕದ ಶಾಂಭವಗಣಂಗಳು ಮುಂತಾದವರು ಬಯಲೊಳಗೆ ಮಹಾಬಯಲು ಬೆರದಂತಾದರು ನೋಡ. ಇಂತೀ ಸರ್ವಾಚಾರಸಂಪತ್ತಿನಾಚರಣೆಯನಾಚರಿಸುವರೆ ನಿರಾವಯಗಣಂಗಳೆನಿಸುವರು ನೋಡ, ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಏಕೈಕನೆಂ....... ಅನೇಕ ವಿಧ ಸದ್ಭಕ್ತಿ ಪದವನರಿದು ಆ ಗುರುವಿನಾ ಮನದ ಮತಿಯ ಬೆಳಗುವ ನಿರ್ಮಳಾಂಗನು ಶಿಷ್ಯ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಕಾಮದ ಕಳವಳದಲ್ಲಿ ಕಂಗೆಡುವನಲ್ಲ ಶರಣ. ಜೀವನುಪಾದ್ಥಿಕೆಯ ಹೊದ್ದವನಲ್ಲ ಶರಣ. ಭಾವದ ಭ್ರಮೆಯಲ್ಲಿ ಸುಳಿವನಲ್ಲ ಶರಣ. ಮನದ ಮರವೆಯಲ್ಲಿ ಮಗ್ನನಲ್ಲ ಶರಣ. ಕರಣಂಗಳ ಕತ್ತಲೆಯಲ್ಲಿ ಸುತ್ತಿ ಬೀಳುವನಲ್ಲ ಶರಣ. ಇಂದ್ರಿಯಂಗಳ ವಿಕಾರದಲ್ಲಿ ಹರಿದಾಡುವನಲ್ಲ ಶರಣ. ಪರತರಲಿಂಗದ ಬೆಳಗಿನೊಳಗೆ ಬೆರೆದು ತೆರಹಿಲ್ಲದೆ ಬೆಳಗುವ ಪರಮಗಂಬ್ಥೀರ ಶರಣನ ನಿಲವಿಂಗೆ ನಮೋ ನಮೋ ಎಂಬೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಆದಿಲಿಂಗ, ಅನಾದಿ ಶರಣನೆಂಬುದು ತಪ್ಪದು; ಆದಿ ಗುರು, ಅನಾದಿ ಶಿಷ್ಯನೆಂಬುದು ತಪ್ಪದು. ಗುರುವಿಂಗೆ ಶಿಷ್ಯಂಗೆ ಏನು ದೂರ ದೇವಾ ? ಮುಳ್ಳುಗುತ್ತುವಡೆ ತೆರಹಿಲ್ಲದ ಪರಿಪೂರ್ಣ ಘನವು. ಒಬ್ಬರಲ್ಲಿ ಒಂದು ಭಾವವುಂಟೆ ? ಎನ್ನೊಳಗೆ ಬೆಳಗುವ ಜ್ಞಾನ, ನಿನ್ನ ಹೃದಯಕಮಲದೊ?ಗಣ ಆವ್ಯಕ್ತಲಿಂಗ. ನಿನ್ನೊಳು ತೊಳಗಿ ಬೆಳಗುವ ಜ್ಯೋತಿರ್ಲಿಂಗ ಎನ್ನಂತರಂಗದ ಸುಜ್ಞಾನಲಿಂಗ. ಒಂದರಲ್ಲಿ ಒಂದು ಬಿಚ್ಚಿ ಬೇರೆ ಮಾಡಬಾರದಾಗಿ, ಪ್ರಾಣಲಿಂಗ ಒಂದೆ, ಉಪದೇಶ ಒಂದೆ, ಕ್ರಿಯಾಕರ್ಮ ಒಂದೆ. ನೀವಿನ್ನಾವುದ ಬೇರೆಮಾಡಿ ನುಡಿವಿರಯ್ಯಾ ? ಕಾರ್ಯದಲ್ಲಿ ಗುರುವಾಗಿ, ಅಂತರಂಗಕ್ಕೆ ಸುಜ್ಞಾನೋಪದೇಶವ ಮುನ್ನವೆ ಮಾಡಿದ ಬಳಿಕ ಕ್ರೀಯಿಂದ ಮಾಡಲಮ್ಮೆನೆಂದಡೆ ಹೋಹುದೆ ? ಕೂಡಲಚೆನ್ನಸಂಗಮದೇವರು ಸಾಕ್ಷಿಯಾಗಿ ಎನಗೆ ನೀವು ಉಪದೇಶವ ಮಾಡಿದಡೆ ಮರ್ತಲೋಕದ ಮಹಾಗಣಂಗ? ಕೈಯಲ್ಲಿ ಅಹುದಹುದೆನಿಸುವೆ ಕಾಣಾ ಸಂಗನಬಸವಣ
--------------
ಚನ್ನಬಸವಣ್ಣ
ಅಯ್ಯ, ನಿಃಶೂನ್ಯಾಕೃತಿ, ಕ್ಷಕಾರ ಪ್ರಣಮ, ದಿವ್ಯನಾದ, ಶಿಖಾಚಕ್ರ, ಮಹಾಜ್ಯೋತಿವರ್ಣ, ನಿರಾಲಂಬಸ್ಥಲ, ಚಿನುಮಯ ತನು, ನಿರಾಳ ಹಸ್ತ, ಶೂನ್ಯಲಿಂಗ, ಉನ್ಮನಿಮುಖ, ನಿರಹಂಕಾರ ಭಕ್ತಿ, ಪರಿಪೂರ್ಣಪದಾರ್ಥ, ಪರಿಪೂರ್ಣಪ್ರಸಾದ, ಪರಶಿವ ಪೂಜಾರಿ, ಪರಶಿವನದ್ಥಿದೇವತೆ, ಅವಿರಳ ಸಾದಾಖ್ಯ, ಆಗಮವೆಂಬ ಲಕ್ಷಣ, ನಿರ್ಮಾಯವೆಂಬ ಸಂಜ್ಞೆ, ದಿವ್ಯನಾದ, ಘೋಷದಿಕ್ಕು, ಮನೋರ್ಲಯ ವೇದ, ಚಿಚ್ಚಂದ್ರನೆ ಅಂಗ, ದಿವ್ಯಾತ್ಮ, ನಿಭ್ರಾಂತಿ ಶಕ್ತಿ ಅನಂತಕಲೆ ಇಂತು ಇಪ್ಪತ್ತುನಾಲ್ಕು ಸಂಕೀಲಂಗಳನೊಳಕೊಂಡು ಎನ್ನ ಶಿಖಾಚಕ್ರವೆಂಬ ಹೇಮಾದ್ರಿಪರ್ವತಕ್ಷೇತ್ರದಲ್ಲಿ ಮೂರ್ತಿಗೊಂಡಿರ್ದ ಶಿವಮಂತ್ರ ಶಿಕ್ಷಾಕರ್ತೃಸ್ವರೂಪವಾದ ಶೂನ್ಯಲಿಂಗವೆ ಹಿರಣ್ಯೇಶ್ವರಲಿಂಗವೆಂದು ಕರಣತ್ರಯವ ಮಡಿಮಾಡಿ, ಅನುಪಮವೆಂಬ ಜಲದಿಂ ಮಜ್ಜನಕ್ಕೆರದು, ಚಂದ್ರ ನಿವೃತ್ತಿಯಾದ ಗಂಧವ ಧರಿಸಿ, ವಿರಳ ಅವಿರಳವಾದಕ್ಷತೆಯನಿಟ್ಟು, ಅಲ್ಲಿಹ ತ್ರಿದಳಂಗಳನೆ ಪುಷ್ಪದ ಮಾಲೆಯೆಂದು ಧರಿಸಿ, ಅಲ್ಲಿಹ ಕಮಲಸದ್ವಾಸನೆಯ ಧೂಪವ ಬೀಸಿ, ಅಲ್ಲಿಹ ಮಹಾಜ್ಯೋತಿವರ್ಣವೆ ಕರ್ಪೂರದ ಜ್ಯೋತಿಯೆಂದು ಬೆಳಗಿ, ಅಲ್ಲಿಹ ನಿಃಸಂಸಾರಾವಸ್ಥೆಯೆಂಬ ನವೀನ ವಸ್ತ್ರವ ಹೊದ್ದಿಸಿ, ಸದಾನಂದವೆಂಬಾಭರಣವ ತೊಡಿಸಿ, ಪರಿಪೂರ್ಣವೆಂಬ ನೈವೇದ್ಯವನರ್ಪಿಸಿ, ನಿರಹಂಕಾರವೆಂಬ ತಾಂಬೂಲವನಿತ್ತು, ಇಂತು ಶೂನ್ಯಲಿಂಗಕ್ಕೆ ಅಷ್ಟವಿಧಾರ್ಚನೆಯಂ ಮಾಡಿ, ಶತಕೋಟಿ ಸೂರ್ಯನ ಪ್ರಭೆಯಂತೆ ಬೆಳಗುವ ಶೂನ್ಯಲಿಂಗವನ್ನು ಕಂಗಳು ತುಂಬಿ ನೋಡಿ, ಮನದಲ್ಲಿ ಸಂತೋಷಂಗೊಂಡು, ಆ ಶೂನ್ಯಲಿಂಗವ ಪೂಜೆಯ ಸಮಾಪ್ತವ ಮಾಡಿ, ಜ್ಞಾನ ಜಪವೆಂಬ ದ್ವಾದಶ ಪ್ರಣಮ ಮಂತ್ರಗಳಿಂದೆ ನಮಸ್ಕರಿಸಿ, ಆ ಶೂನ್ಯಲಿಂಗದ ತಾನೆಂದರಿದು, ಕೂಡಿ ಎರಡಳಿದು ನಿಸ್ಸಂಸಾರಿಯಾಗಿ ಆಚರಿಸಬಲ್ಲಾತನೆ ನಿರಹಂಕಾರ ಭಕ್ತಿಯನುಳ್ಳ ನಿರಾತಂಕ ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಹೊಳೆವ ಕೆಂಜೆಡೆಗಳ, ಮಣಿಮಕುಟದ, ಒಪ್ಪುವ ಸುಲಿಪಲ್ಗಳ, ನಗೆಮೊಗದ, ಕಂಗಳ ಕಾಂತಿಯ, ಈರೇಳುಭುವನವ ಬೆಳಗುವ ದಿವ್ಯಸ್ವರೂಪನ ಕಂಡೆ ನಾನು. ಕಂಡೆನ್ನ ಕಂಗಳ ಬರ ಹಿಂಗಿತ್ತೆನಗೆ. ಗಂಡಗಂಡರೆಲ್ಲರ ಹೆಂಡಿರಾಗಿ ಆಳುವ ಗರುವನ ಕಂಡೆ ನಾನು. ಜಗದಾದಿ ಶಕ್ತಿಯೊಳು ಬೆರಸಿ ಮಾತನಾಡುವ ಪರಮಗುರು ಚೆನ್ನಮಲ್ಲಿಕಾರ್ಜುನನ ನಿಲವ ಕಂಡು ಬದುಕಿದೆನು
--------------
ಅಕ್ಕಮಹಾದೇವಿ
ನಡುರಂಗದ ಜ್ಯೋತಿ ಕವಲುವಟ್ಟೆಯಲ್ಲಿ ಕುಡಿವರಿದು ಎಡಬಲದಲ್ಲಿ ಬೆಳಗುವ ಪರಿಯ ನೋಡಾ. ಒಳ ಹೊರಗೆ ತಾನೊಂದೆಯಾಗಿ ಪರಿಪೂರ್ಣಬೆಳಗು ಪಸರಿಸಿ ಬೆಳಗುವ ಪರಿಯ ನೋಡಾ. ಅಖಂಡಾದ್ವಯ ವಿಶ್ವತೋಚಕ್ಷುಮಯವಾಗಿ ಬೆಳಗುವ ಪರಿಯ ನೋಡಾ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೆಂಬ ಪರಂಜ್ಯೋತಿ, ಬೆಳಗುವ ಪರಿಯ ನೋಡಾ.
--------------
ಸ್ವತಂತ್ರ ಸಿದ್ಧಲಿಂಗ
ಇನ್ನಷ್ಟು ... -->