ಅಥವಾ

ಒಟ್ಟು 151 ಕಡೆಗಳಲ್ಲಿ , 42 ವಚನಕಾರರು , 112 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂಗ ಪ್ರಾಣ ಸಂಗವುಳ್ಳನ್ನಕ್ಕ, ಲಿಂಗಪೂಜೆಯೆಂಬ ದಂದುಗ ಬಿಡದು. ಈ ಹೊರಗು ಒಳಗಾಗಿಯಲ್ಲದೆ, ಪ್ರಾಣಲಿಂಗಿಯೆಂಬ ಸಂಬಂದ್ಥಿಯಲ್ಲ. ಲಿಂಗಕ್ಕೆ ಪ್ರಾಣ, ಪ್ರಾಣಕ್ಕೆ ಲಿಂಗ ಉಭಯಸಂಬಂಧವಾದಲ್ಲಿ, ಉರಿ ಕೊಂಡ ಕರ್ಪುರಕ್ಕೆ ತೊಡರುವುದಕ್ಕೆ ಠಾವಿಲ್ಲ, ಕಾಮಧೂಮ ಧೂಳೇಶ್ವರಾ.
--------------
ಮಾದಾರ ಧೂಳಯ್ಯ
ಏರಿ ನೀರ ಕುಡಿಯಿತ್ತು. ಬೇರು ಬೀಜವ ನುಂಗಿತ್ತು. ಆರೈಕೆಯ ಮಾಡುವ ತಾಯಿ, ಧಾರುಣಿಯಲ್ಲಿ ಕೊರಳ ಕೊಯ್ದಳು. ಮಗು ಸತ್ತು, ಆ ಕೊರಳು ಬಿಡದು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅರ್ಪಿತ ಅರ್ಪಿತವೆನುತ್ತಿಹರೆಲ್ಲ ಅರ್ಪಿತವಾವುದೆಂದು ಹೇಳಿರಯ್ಯಾ? ಕಾಯಾರ್ಪಿತವೆಂಬಿರೆ ಅಳಿವಿನೊಳಗಾಯಿತ್ತು, ಭಾವಾರ್ಪಿತವೆಂಬಿರೆ ಭ್ರಮೆಗೊಳಗಾಯಿತ್ತು, ಜಿಹ್ವಾರ್ಪಿತವೆಂಬಿರೆ ರುಚಿಯೊಳಗಾಯಿತ್ತು. ಸರ್ವವೂ ಶಿವನಾಜ್ಞೆಯೊಳಗೆಂಬಿರೆ ಭವಬಂಧನ ಬಿಡದು, ಅರ್ಪಿಸಲೇಬೇಕು, ಅರ್ಪಿಸಿದಲ್ಲದೆ ಪ್ರಸಾದವಾಗದು. ಅರ್ಪಿತದ ಮರ್ಮ ಸಕೀಲನು ಕೂಡಲಚೆನ್ನಸಂಗಾ ನಿಮ್ಮ ಶರಣ ಬಲ್ಲ.
--------------
ಚನ್ನಬಸವಣ್ಣ
ಸರ್ಪನ ಬಾಯ ಕಪ್ಪೆ ನೊಣಕ್ಕೆ ಹಾರುವಂತೆ ಆಪ್ಯಾಯನ ಬಿಡದು. ಕಾಯವರ್ಪಿತವೆಂಬ ಹುಸಿಯ ನೋಡಾ. ನಾನು ಭಕ್ತಳೆಂಬ ನಾಚಿಕೆಯ ನೋಡಾ. ನಾನು ಯುಕ್ತಳೆಂಬ ಹೇಸಿಕೆಯ ನೋಡಾ. ಓಗರವಿನ್ನಾಗದು, ಪ್ರಸಾದ ಮುನ್ನಿಲ್ಲ ; ಚೆನ್ನಮಲ್ಲಿಕಾರ್ಜುನಯ್ಯ ಉಪಚಾರದರ್ಪಿತವನವಗಡಿಸಿ ಕಳೆವ
--------------
ಅಕ್ಕಮಹಾದೇವಿ
ಸ್ಥಲಂಗಳನರಿದು ಆಚರಿಸುವಲ್ಲಿ ಮೂರನರಿದು ಮೂರ ಮರೆದು ಮೂರವೇದಿಸಿ ಐದ ಕಾಣಿಸಿಕೊಂಡು ಆರರ ಅರಿಕೆ ಹಿಂಗಿ ಮತ್ತಿಪ್ಪತ್ತೈದರ ಭೇದವಡಗಿ ಮತ್ತೊಂದರಲ್ಲಿ ಕಂಡೆಹೆನೆಂಬ ಸಂದು ಸಲೆ ಸಂದು ಒಂದಿ ಒಂದಾಹನ್ನಕ್ಕ ಗೋಪತಿನಾಥ ವಿಶ್ವೇಶ್ವರಲಿಂಗವೆಂಬ ಉಭಯನಾಮ ಬಿಡದು.
--------------
ತುರುಗಾಹಿ ರಾಮಣ್ಣ
ಬಲ್ಲಂದಟ್ಟು ಅದೆಲ್ಲಿದ್ದರೂ ತನ್ನ ವೇದನೆಯ ಬಿಡದು. ಭಾವಜ್ಞರ ಮನೆಯ ಬಾಗಿಲಲ್ಲಿದ್ದರೂ, ಸ್ವಜಾತಿಯ ಗುಣವಲ್ಲದೆ ನೀತಿಯ ಗುಣವಿಲ್ಲ. ಇಂತಿವರುಗಳ ಮಾತೇಕೆ, ನಿಃಕಳಂಕ ಮಲ್ಲಿಕಾರ್ಜುನಾ ?
--------------
ಮೋಳಿಗೆ ಮಾರಯ್ಯ
ವೇಷವ ಹೊತ್ತು , ಆಶೆ ರೋಷವ ಬಿಡದೆ, ದೇಶವ ತಿರುಗಿ, ಹೊರವೇಷದ ವಿಭೂತಿ ರುದ್ರಾಕ್ಷಿ ಕಾವಿ ಕಾಷಾಯಾಂಬರವ ಧರಿಸಿ ಫಲವೇನು? ಕಾಮ ಕೆಡದು, ಕ್ರೋಧ ಬಿಡದು, ಲೋಭ ಹಿಂಗದು, ಮೋಹ ನಿಲ್ಲದು, ಮದ ಹೆರೆಸಾರದು, ಮತ್ಸರ ಬೆಂದುಹೋಗದು. ಇವೆಲ್ಲ ಸಹಿತ ಜಂಗಮಭಕ್ತರೆಂದು ಸುಳಿವವರ ಕಂಡು ನಾಚಿತ್ತು ಎನ್ನ ಮನ. ಭಕ್ತಜಂಗಮ ಘನವನೇನೆಂದು ಉಪಮಿಸುವೆ ? ರೂಪಿನ ಹಾಗೆ, ನೆಳಲಿನ ಹಾಗೆ, ದೇಹದ ಹಾಗೆ, ಪ್ರಾಣದ ಹಾಗೆ, ಭಾವದ ಹಾಗೆ, ನಿರ್ಭಾವದ ಹಾಗೆ, ಉರಿಯ ಹಾಗೆ, ಕರ್ಪುರದ ಹಾಗೆ, ಆವಿಯ ಹಾಗೆ, ನೀರ ಹಾಗೆ, ಎರಡೊಂದಾದರೆ ತೆರಹಿಲ್ಲ. ಆ ನಿಲುವಿಂಗೆ ನಮೋ ನಮೋ ಎನುತಿರ್ದೆ ಕಾಣಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ .
--------------
ಹಡಪದ ಅಪ್ಪಣ್ಣ
ಕಾಯದ ಕಳವಳಕ್ಕಂಜಿ ಪ್ರಾಣ ಹೋದಲ್ಲಿ, ಭವ ಹಿಂಗದು, ಪ್ರಕೃತಿ ಬಿಡದು. ವಾಯಕ್ಕಾದಡೆ ಸತ್ತು ದೇವರ ಕೂಡಿಹೆವೆಂಬರು, ಈ ವಾಯದ ಮಾತಿಂಗೆ ಆನು ಬೆರಗಾದೆನು. ಕಾಯವಿದ್ದಲ್ಲಿ ಸಾಯದ ಸಾವ ಬಲ್ಲಡೆ ಬೇರಿಲ್ಲ, ಗುಹೇಶ್ವರ ತಾನೆ !
--------------
ಅಲ್ಲಮಪ್ರಭುದೇವರು
ಪೂರ್ವಜನ್ಮದಲ್ಲಿ ಮಾಡಿದ ಕರ್ಮ, ಈಗಿನ ಜನ್ಮದಲ್ಲಿ ಭೋಗಿಸಲಿಕ್ಕೀಡಾಯಿತ್ತು. ಈಗ ಮಾಡಿದ ಕರ್ಮ, ಮುಂದಕ್ಕೆ ಬಿತ್ತಿದ ಬೆಳೆಯನುಂಬಂತೆ ಬರ್ಪುದು ತಪ್ಪದು. ಈ ಕರ್ಮವುಳ್ಳನ್ನಕ್ಕ ಆರಿಗಾದರೂ ಬಳಲಿಕೆ ಬಿಡದು. ಈ ಕರ್ಮ ಹರಿದಂದಿಗೆ ನಿಮ್ಮ ಕಾಂಬರು ಕಾಣಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಏನನೋದಿ ಏನ ಕೇಳಿ ಏನ ಹೇಳಿದಡೆ ಏನು ಫಲ ತನ್ನಲ್ಲಿದ್ದ ವಸ್ತುವ ತಾನರಿಯದನ್ನಕ್ಕ? ಚಿನ್ನದ ತೊಡಹದ ತಾಮ್ರದಂತೆ ಒಳಗೆ ಕಾಳಿಕೆ ಬಿಡದು. ನುಣ್ಣಗೆ ಬಣ್ಣಗೆ ನುಡಿವ ಅಣ್ಣಗಳೆಲ್ಲರು ಕಣ್ಣು ಕಾಣದೇ ಕಾಡಬಿದ್ದರು. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮನರಿಯದ ಅಂಧಕರೆಲ್ಲರು.
--------------
ಸ್ವತಂತ್ರ ಸಿದ್ಧಲಿಂಗ
ನುಡಿದೆಹೆನೆಂಬ ಉಲುಹಿನ ಗಲಭೆಯ ತೋಟಿ ಬಿಡದು. ಉತ್ತಮ ಮಧ್ಯಮ ಕನಿಷ್ಠವೆಂಬುವ ತಿರುಗಿ ಕಂಡೆಹೆನೆಂಬ ಕಾಲಿನ ಎಡೆಯಾಟ ಬಿಡದು. ಎನಗೆ ಗರ್ವ ಮೊದಲಾದಲ್ಲಿ ನಿಮಗೆ ಗರ್ವ ವೆಗ್ಗಳವಾಯಿತ್ತು. ಈ ಉಭಯ ತೋಟಿಯ ನಾನಿನ್ನಾರಿಗೆ ಹೇಳುವೆ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಇನ್ನೇವೆನಯ್ಯಾ ನಾನು ಕೆಡೆದಿದ್ದೇನೆ. ಕಾಯವುಳ್ಳನ್ನಕ್ಕ ಕರ್ಮ ಬಿಡದು; ಜೀವವುಳ್ಳನ್ನಕ್ಕ ಪ್ರಕೃತಿ ಕೆಡದು; ಭಾವಿಸಿಹೆನೆಂಬನ್ನಕ್ಕ ವಿಶ್ವಾಸ ಬಿಡದು; ಈ ಉಭಯವುಳ್ಳನ್ನಕ್ಕ ಮನ ನಿನ್ನ ನೆನೆಯಬಿಡದು. ನೀ ನಷ್ಟವಾದಲ್ಲಿ ಎನ್ನ ಭಾವ ನಷ್ಟ; ಭಾವ ನಷ್ಟವಾದಲ್ಲಿ ಎನ್ನಯ್ಯನಿಲ್ಲ; ನೀನು ಪ್ರಿಯನಲ್ಲ; ಇಮ್ಮಡಿ ದೇವನಲ್ಲ. ನಿಃಕಳಂಕಮಲ್ಲಿಕಾರ್ಜುನನೆಂಬ ಭಾವ ಎಲ್ಲಿ ಅಡಗಿತ್ತೆಂದರಿಯೆನಲ್ಲ !
--------------
ಮೋಳಿಗೆ ಮಹಾದೇವಿ
ಮಗು ಸತ್ತು ಕೊರಳು ಕುಗ್ಗದು, ಅಂಗುಳಾರದು, ಬಾಯ ಬರೆ ಹಿಂಗದು. ಇನ್ನಾವ ನೇಣ ಹಾಕುವೆ ಕೊರಳಿಗೆ ? ಒಂದು ನೇಣಿನಲ್ಲಿ ಸಂದೇಹ ಬಿಡದು. ಎರಡು ನೇಣಿನಲ್ಲಿ ಹಿಂಗಿ ಹೋಗದು. ಮೂರು ನೇಣಿನಲ್ಲಿ ಮುಗಿತಾಯವಾಗದು. ಹಲವು ನೇಣಿನಲ್ಲಿ ಕಟ್ಟುವಡೆದ ಕೂಸು, ಅದಕ್ಕೆ ಒಲವರವೇಕೆ, ನಿಃಕಳಂಕ ಮಲ್ಲಿಕಾರ್ಜುನಾ ?
--------------
ಮೋಳಿಗೆ ಮಾರಯ್ಯ
ಮೆಟ್ಟಿಲಿಲ್ಲದ ಭೂಮಿಯಲ್ಲಿ ಹುಟ್ಟಿಲಿಲ್ಲದ ಹೆಮ್ಮರ ಹುಟ್ಟಿತ್ತು ನೋಡಾ. ಮೆಟ್ಟಿ ಹತ್ತೆಹೆನೆಂದರೆ ಕೊಂಬಿಲ್ಲ; ಮುಟ್ಟಿ ಹಿಡಿದಿಹೆನೆಂದರೆ ಮೂರ್ತಿಯಲ್ಲ. ಅದರಲ್ಲಿ ಕಟ್ಟಣೆಗೆಯ್ದದ ಹಣ್ಣು ರಸತುಂಬಿ, ತೊಟ್ಟು ಬಿಡದು ನೋಡಾ. ತೊಟ್ಟ ಮುಟ್ಟದೆ ಕಟ್ಟಣೆಗೆಯ್ದದ ಹಣ್ಣು ಮುಟ್ಟಿ ಸವಿಯಬಲ್ಲಾತನ ಹುಟ್ಟರತಾತನೆಂಬೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಕಂಡು ತವಕ ಸಂಗದಿಂದಳಿವಂತೆ, ನಿನ್ನ ನೋಡುವ ನೋಟ, ಎನ್ನಯ ಮನದ ಕೂಟದಿಂದ ಹರಿಯಿತ್ತು. ಮತ್ತೆ ನಿಮ್ಮಾಸೆ ಮುಟ್ಟುವ ಭೇದ ಬಿಡದು. ನೀವು ರೂಪಾಗಿ, ನಾ ಸಾಕಾರವಾಗಿ ಉಭಯವುಳ್ಳನ್ನಕ್ಕ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ವಾಸ ರೂಪಾದೆ.
--------------
ಶಿವಲೆಂಕ ಮಂಚಣ್ಣ
ಇನ್ನಷ್ಟು ... -->