ಅಥವಾ

ಒಟ್ಟು 154 ಕಡೆಗಳಲ್ಲಿ , 21 ವಚನಕಾರರು , 86 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮರ್ಮವರಿದು ಮಾಡುವಂಗೆ ಕರ್ಮವಿಲ್ಲ, ಹೆಮ್ಮೆಯಲ್ಲಿ ಮಾಡಿದವನ ವಿಧಿಯ ನೋಡಾ. ಸಜ್ಜನ ಸದಾಚಾರವರಿದು ಮಾಡುವನು ಕೂಡಲಚೆನ್ನಸಂಗಯ್ಯನಲ್ಲಿ ನಮ್ಮ ಬಸವಣ್ಣನು
--------------
ಚನ್ನಬಸವಣ್ಣ
ಮಾಂಸಪಿಂಡವೆಂದೆನಿಸದೆ ಮಂತ್ರಪಿಂಡವೆಂದೆನಿಸಿದ ಬಸವಣ್ಣ. ವಾಯುಪ್ರಾಣಿಯೆಂದೆನಿಸದೆ ಲಿಂಗಪ್ರಾಣಿಯೆಂದೆನಿಸಿದ ಬಸವಣ್ಣ, ಜಗಭರಿತನೆಂಬ ಶಬ್ದಕ್ಕೆ ಅಂಗವಿಸದೆ, ಶರಣಭರಿತ ಲಿಂಗವೆನಿಸಿದ ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣನು.
--------------
ಚನ್ನಬಸವಣ್ಣ
ಎನ್ನ ಘ್ರಾಣದಲ್ಲಿ ಆಚಾರಲಿಂಗವಾಗಿ ಮೂರ್ತಿಗೊಂಡನಯ್ಯಾ, ಬಸವಣ್ಣನು. ಎನ್ನ ಜಿಹ್ವೆಯಲ್ಲಿ ಗುರುಲಿಂಗವಾಗಿ ಮೂರ್ತಿಗೊಂಡನಯ್ಯಾ, ಚನ್ನಬಸವಣ್ಣನು ಎನ್ನ ನೇತ್ರದಲ್ಲಿ ಶಿವಲಿಂಗವಾಗಿ ಮೂರ್ತಿಗೊಂಡನಯ್ಯಾ, ಘಟ್ಟಿವಾಳ ಮುದ್ದಯ್ಯನು. ಎನ್ನ ತ್ವಕ್ಕಿನಲ್ಲಿ ಜಂಗಮಲಿಂಗವಾಗಿ ಮೂರ್ತಿಗೊಂಡನಯ್ಯಾ, ಸಿದ್ಧರಾಮಯ್ಯನು. ಎನ್ನ ಶ್ರೋತ್ರದಲ್ಲಿ ಪ್ರಸಾದಲಿಂಗವಾಗಿ ಮೂರ್ತಿಗೊಂಡನಯ್ಯಾ, ಮರುಳಶಂಕರದೇವರು, ಎನ್ನ ಹೃದಯದಲ್ಲಿ ಮಹಾಲಿಂಗವಾಗಿ ಮೂರ್ತಿಗೊಂಡನಯ್ಯಾ, ಪ್ರಭುದೇವರು. ಎನ್ನ ಸರ್ವಾಂಗದಲ್ಲಿ ಮೂರ್ತಿಗೊಂಡರು ಪ್ರಮಥರು. ಗವರೇಶ್ವರಲಿಂಗದಲ್ಲಿ ಸುಖಿಯಾಗಿ ಬದುಕಿದೆನು ಕಾಣಾ, ಮಡಿವಾಳ ಮಾಚಯ್ಯ.
--------------
ಮೇದರ ಕೇತಯ್ಯ
ಅರಮನೆಯ ಕೂಳನಾದಡೆಯು ತಮ್ಮುದರದ ಕುದಿಹಕ್ಕೆ ಲಿಂಗಾರ್ಪಿತವೆಂದೆಡೆ ಅದು ಲಿಂಗಾರ್ಪಿತವಲ್ಲ ಆನರ್ಪಿತ. ಅದೆಂತೆಂದೆಡೆ : ಅರ್ಪಿತಂಚ ಗುರೋರ್ವಾಕ್ಯಂ ಕಿಲ್ಬಿಷಸ್ಯ ಮನೋ[s]ರ್ಪಿತಂ ಅನರ್ಪಿತಸ್ಯ ಭುಂಜಿಯಾನ್ ರೌರವಂ ನರಕಂ ವ್ರಜೇತ್ ಎಂದುದಾಗಿ ತನ್ನ ಒಡಲಕಕ್ಕುಲತೆಗೆ ಆಚಾರವನನುಸರಿಸಿ ಭವಿಶೈವ ದೈವ ತಿಥಿವಾರಂಗಳ ಹೆಸರಿನಲ್ಲಿ ಅಟ್ಟಿ ಕೂಳತಂದು ತಮ್ಮ ಇಷ್ಟಲಿಂಗಕ್ಕೆ ಕೊಟ್ಟು ಹೊಟ್ಟೆಯ ಹೊರೆವ ಆಚಾರಭ್ರಷ್ಟ ಪಂಚಮಹಾಪಾತಕರಿಗೆ ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ ಪಾದೋದಕವಿಲ್ಲ ಪ್ರಸಾದವಿಲ್ಲ, ಪ್ರಸಾದವಿಲ್ಲವಾಗಿ ಮುಕ್ತಿಯಿಲ್ಲ. ಮುಂದೆ ಅಘೋರ ನರಕವನುಂಬರು. ಇದನರಿದು ನಮ್ಮ ಬಸವಣ್ಣನು ತನುವಿನಲ್ಲಿ ಆಚಾರಸ್ವಾಯತವಾಗಿ. ಮನದಲ್ಲಿ ಅರಿವು ಸಾಹಿತ್ಯವಾಗಿ ಪ್ರಾಣದಲ್ಲಿ ಪ್ರಸಾದ ಸಾಹಿತ್ಯವಾಗಿ ಇಂತೀ ತನು-ಮನ-ಪ್ರಾಣಂಗಳಲ್ಲಿ ಸತ್ಯ ಸದಾಚಾರವಲ್ಲದೆ ಮತ್ತೊಂದನರಿಯದ ಭಕ್ತನು ಭವಿಶೈವ ದೈವ ತಿಥಿ ಮಾಟ ಕೂಟಂಗಳ ಮನದಲ್ಲಿ ನೆನೆಯ. ತನುವಿನಲ್ಲಿ ಬೆರಸ ಭಾವದಲ್ಲಿ ಬಗೆಗೊಳ್ಳ ಏಕಲಿಂಗ ನಿಷ್ಠಾಪರನು ಪಂಚಾಚಾರಯುಕ್ತನು ವೀರಶೈವ ಸಂಪನ್ನ ಸರ್ವಾಂಗಲಿಂಗಿ ಸಂಗನಬಸವಣ್ಣನು ಈ ಅನುವ ಎನಗೆ ಅರುಹಿಸಿ ತೋರಿದ ಕಾರಣ ನಾನು ಬದುಕಿದೆನು ಕಾಣಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಭಕ್ತಿಯುಕ್ತಿಯ ಹೊಲಬ ಬಲ್ಲವರ, ಮೂರುಲೋಕದೊಳಗಾರನೂ ಕಾಣೆ. ಲಿಂಗದಲ್ಲಿ ಭಕ್ತಿಯ ಮಾಡಿದಡೆ ಭವ ಹರಿಯದೆಂದು ಜಂಗಮಮುಖ ಲಿಂಗವೆಂದರಿದು ಅರ್ಚಿಸಿ ಪೂಜಿಸಿ ದಾಸೋಹವ ಮಾಡಿ ಪ್ರಸನ್ನತೆಯ ಹಡೆದ ಬಸವಣ್ಣನು. ಆ ಪ್ರಸನ್ನತೆಯ ರುಚಿಯನುಪಮಿಸಬಾರದು. ಆ ಬಸವಣ್ಣನ ಪ್ರಸಾದವ ಕೊಂಡು ನಾನು ಬದುಕಿದೆನು. ಆ ಬಸವಣ್ಣನ ಭಕ್ತಿಪ್ರಸಾದವ ಕೊಂಡು ಅಲ್ಲಮಪ್ರಭು ತೃಪ್ತನಾದನು. ಅಲ್ಲಮಪ್ರಭು ಕೊಂಡ ಪ್ರಸಾದದ ತೃಪ್ತಿ ಲಕ್ಷದಮೇಲೆ ತೊಂಬತ್ತಾರುಸಾವಿರ ಜಂಗಮ ತೃಪ್ತಿಯಾಯಿತು; ಆ ಲಕ್ಷದ ಮೇಲೆ ತೊಂಬತ್ತಾರುಸಾವಿರ ಜಂಗಮ ತೃಪ್ತಿಯಾದಲ್ಲಿ ಸಚರಾಚರವೆಲ್ಲ ಕೂಡೆ ತೃಪ್ತಿಯಾಯಿತ್ತೆಂದಡೆ, ಇಲ್ಲವೆಂದು ಬಿಜ್ಜರಿ ತರ್ಕಿಸಲು, ಕಪ್ಪೆಯ ಒಡಲೊಳಗೆ ಪ್ರಭುವಿನ ಪ್ರಸಾದವ ತೋರನೆ ಬಸವಣ್ಣನು ? ಇದು ಕಾರಣ ಕೂಡಲಚೆನ್ನಸಂಗಮದೇವರಲ್ಲಿ ಬಸವಣ್ಣ ಪ್ರಭುದೇವರ ಪ್ರಸಾದದ ಘನವು ತ್ರೈಲೋಕ್ಯದೊಳಗೆ ಬೆಳವಿಗೆಯಾಯಿತ್ತು !
--------------
ಚನ್ನಬಸವಣ್ಣ
ಆದಿಯಲ್ಲಿ ವೇದ್ಯ ಶಿವಸಂಪತ್ತಿನ ಮಹಾಘನ, ಲಿಂಗಪ್ರಾಣ ಸಹಜದಲ್ಲಿ ಉದಯವಾದ ಸಂಗನಬಸವ ನಮೋ ಸಂಗನಬಸವ ನಮೋ ! ಚೆನ್ನಸಂಗನ ಬಸವಿದೇವಂಗೆ ಅಪ್ರತಿಮಂಗೆ ಪ್ರತಿಯಿಲ್ಲ. ಆ ಧರ್ಮವೆ ಧರ್ಮ. ಕೂಡಲಚೆನ್ನಸಂಗಾ, ನಿಮ್ಮ ಶರಣ ಬಸವಣ್ಣನು ಉಪಮಾತೀತನಯ್ಯಾ.
--------------
ಚನ್ನಬಸವಣ್ಣ
ಪೃಥ್ವಿ ಅಪ್ಪು ತೇಜ ವಾಯು ಆಕಾಶವೆಂಬ ಪಂಚಭೂತಂಗಳಲ್ಲಿ ಪಂಚಮುಖಲಿಂಗವ ಪ್ರತಿಷ್ಠೆಯ ಮಾಡಿದನಯ್ಯಾ. ಮನ ಬುದ್ಧಿ ಚಿತ್ತ ಅಹಂಕಾರವೆಂಬ ಅಂತಃಕರಣ ಚತುಷ್ಟಯದಲ್ಲಿ ಚತುರ್ಮುಖಲಿಂಗವ ಪ್ರತಿಷ್ಠೆಯ ಮಾಡಿದನಯ್ಯಾ. ಶ್ರೋತ್ರ ನೇತ್ರ ಘ್ರಾಣ ತ್ವಕ್ಕು ಜಿಹ್ವೆ ವಾಕ್ಕು ಪಾಣಿ ಪಾದ ಪಾಯು ಗುಹ್ಯಗಳೆಂಬ ದಶೇಂದ್ರಿಯಂಗಳಲ್ಲಿ ದಶಮುಖಲಿಂಗವ ಪ್ರತಿಷ್ಠೆಯ ಮಾಡಿ ಅಂತರಂಗ ಬಹಿರಂಗವ ಹತವ ಮಾಡಿದನಯ್ಯಾ ಕೂಡಲಚೆನ್ನಸಂಗಮದೇವಾ ಎನ್ನ ಶ್ರೀಗುರು ಬಸವಣ್ಣನು
--------------
ಚನ್ನಬಸವಣ್ಣ
ತನು ಉಂಟೆಂಬ ಭಾವ ಮನದಲ್ಲಿಲ್ಲವಯ್ಯಾ; ಮನ ಉಂಟೆಂಬ ಭಾವ ಅರುಹಿನಲಿಲ್ಲವಯ್ಯಾ; ಅರುಹು ಉಂಟೆಂಬ ಭಾವ ನುಡಿಯೊಳಗಿಲ್ಲವಯ್ಯಾ. ಇಂತೀ ತನು ಮನ ಜಾÐನವೆಂಬ ತ್ರಿವಿಧವು ಏಕಾರ್ಥವಾದ ಬಳಿಕ, ಆವ ತನುವಿನ ಮೇಲೆ ಸ್ವಾಯತವ ಮಾಡುವೆ? ಎನ್ನ ಕಾಯವೆ ಬಸವಣ್ಣನು, ಎನ್ನ ಪ್ರಾಣಲಿಂಗವೆ ಪ್ರಭುದೇವರು, ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ ಒಳಗು ಹೊರಗೆಂಬುದಿಲ್ಲ ಕಾಣಾ, ಚೆನ್ನಬಸವಣ್ಣಾ.
--------------
ಸಿದ್ಧರಾಮೇಶ್ವರ
ಅಂದಂದಿನ ಮಾತನು ಅಂದಂದಿಗೆ ಅರಿಯಬಾರದು. ಹಿಂದೆ ಹೋದ ಯುಗಪ್ರಳಯಂಗಳ ಬಲ್ಲವರಾರಯ್ಯಾ ? ಮುಂದೆ ಬಪ್ಪ ಯುಗಪ್ರಳಯಂಗಳ ಬಲ್ಲವರಾರಯ್ಯಾ ? ಬಸವಣ್ಣನು ಆದಿಯಲ್ಲಿ ಲಿಂಗಶರಣನೆಂಬುದ ಭೇದಿಸಿ ನೋಡಿ ಅರಿವರಿನ್ನಾರಯ್ಯಾ ? ಲಿಂಗ ಜಂಗಮ ಪ್ರಸಾದದ ಮಹಾತ್ಮೆಗೆ ಬಸವಣ್ಣನೆ ಆದಿಯಾದನೆಂಬುದನರಿದ ಸ್ವಯಂಭು ಜ್ಞಾನಿ, ಗುಹೇಶ್ವರಲಿಂಗದಲ್ಲಿ ಚನ್ನಬಸವಣ್ಣನೊಬ್ಬನೆ.
--------------
ಅಲ್ಲಮಪ್ರಭುದೇವರು
ಹೆಡಗೆಹಾರ ಮೊರಹಾರ ಗೆರಸಿಹಾರ ಮಡಕೆಹಾರ ದೆಸೆದೆಸೆಯಲ್ಲಿ ತಂದು ನೀಡುತ್ತಿರಲು, ಹೊಸಪರಿಯ ಆರೋಗಣೆಯನವಧರಿಸುತ್ತಿರ್ದನು. ಆವಾವ ದೆಸೆಯಲ್ಲಿ ತಂದು ನೀಡುತ್ತಿರ್ದಡೆ, ಆ ದೆಸೆದೆಸೆಗಳೆಲ್ಲಾ ಬಾಯಾಗಿ ಕೊಳುತಿರ್ದನು ! ಎತ್ತ ನೋಡಿದಡೆ ಅತ್ತತ್ತ ಮುಖ. ಅಗೆಯ ಹೊಯಿದಂತೆ ತೆರಹಿಲ್ಲ. ಒಂದು ನಿಮಿಷ ಎಡಹಿದಡೆ, ಅಕ್ಕಿಗಚ್ಚು ನುಚ್ಚು ತವುಡು ಮೊದಲಾಗಿ ಹೆಚ್ಚಿದವು ನಿಮಿಷದೊಳು. ಭಕ್ತಿಬಂಧುಗಳೆಲ್ಲಾ ತಮ್ಮ ತಮ್ಮ ಮಠದಲಾದ ಸಯಿದಾನವ ತಂದು, ಸಾರಗಟ್ಟಿ ನೀಡುತ್ತಿರ್ದಡೆ, ಅದ್ಭುತದಾರೋಗಣೆಯ ಕಂಡು, ಹರಿಹರಿದು ಪಾಕಯತ್ನವ ಮಾಡಿ ಎನ್ನುತ್ತ ಬಸವಪ್ರಿಯ ಕೂಡಲಚೆನ್ನಸಂಗಯ್ಯನಲ್ಲಿ, ಸಂತೋಷದೊಳೋಲಾಡುತ್ತಿರ್ದನು ಎನ್ನ ಪರಮಗುರು ಬಸವಣ್ಣನು.
--------------
ಸಂಗಮೇಶ್ವರದ ಅಪ್ಪಣ್ಣ
ಎನಗೆ ಶಿವ ತಾನೀತ ಬಸವಣ್ಣನು ಮತ್ರ್ಯಲೋಕವನು ಪಾವನವ ಮಾಡುವಲ್ಲಿ. ಎನಗೆ ಗುರು ತಾನೀತ ಬಸವಣ್ಣನು ಎನ್ನ ಭವರೋಗವ bs್ಞೀದಿಸಿ ಭಕ್ತನೆನಿಸುವಲ್ಲಿ. ಎನಗೆ ಲಿಂಗ ತಾನೀತ ಬಸವಣ್ಣನು ಘನವಿಸ್ತಾರವಪ್ಪ ನಿಜಮಹಿಮೆಯುಳ್ಳಲ್ಲಿ. ಎನಗೆ ಜಂಗಮ ತಾನೀತ ಬಸವಣ್ಣನು ಅನಾದಿಸಂಸಿದ್ಧ ಘನಪ್ರಸಾದರೂಪನಾದಲ್ಲಿ. ಎನ್ನ ನಿಂದ ನಿಲುಕಡೆಯೀತ ಬಸವಣ್ಣನು ಎನ್ನ ಸರ್ವಸ್ವಾಯತವ ಮಾಡಿ ಸಲಹುವಲ್ಲಿ. ಇದು ಕಾರಣ, ಕಲಿದೇವರದೇವರು ಸಾಕ್ಷಿಯಾಗಿ ಎನ್ನ ಪೂರ್ವಾಚಾರಿ ಸಂಗನಬಸವಣ್ಣನ ಕರುಣದಿಂದಲಾನು ಬದುಕಿದೆನು.
--------------
ಮಡಿವಾಳ ಮಾಚಿದೇವ
ಆದಿ ಅನಾದಿ ಎಂಬೆರಡರ ಮೂಲವನೆತ್ತಿ ತೋರಿದನಯ್ಯಾ ಬಸವಣ್ಣನು. ಆದಿ ಲಿಂಗ ಅನಾದಿ ಜಂಗಮವೆಂಬ (ಶರಣನೆಂಬ?) ಭೇದವ, ವಿವರಿಸಿ ತೋರಿದನಯ್ಯಾ ಬಸವಣ್ಣನು. ಕಾಯದ ಜೀವದ ಸಂಬಂಧವ, ಅಸಂಬಂಧವ ಮಾಡಿ ತೋರಿದನಯ್ಯಾ ಬಸವಣ್ಣನು. ಎನ್ನ ಆದಿ ಅನಾದಿಯನು ಬಸವಣ್ಣನಿಂದರಿದು ಗುಹೇಶ್ವರಲಿಂಗದಲ್ಲಿ ಸುಖಿಯಾದೆನು ಕಾಣಾ ಚನ್ನಬಸವಣ್ಣ.
--------------
ಅಲ್ಲಮಪ್ರಭುದೇವರು
ಎನ್ನ ತನುವ ನಿರ್ಮಲ ಮಾಡಿದನಯ್ಯಾ, ಬಸವಣ್ಣನು. ಎನ್ನ ಮನವ ನಿರ್ಮಲ ಮಾಡಿದನಯ್ಯಾ, ಚೆನ್ನಬಸವಣ್ಣನು. ಎನ್ನ ಪ್ರಾಣವ ನಿರ್ಮಲ ಮಾಡಿದನಯ್ಯಾ, ಪ್ರಭುದೇವರು. ಇಂತೆನ್ನ ತನುಮನಪ್ರಾಣವ ನಿರ್ಮಲ ಮಾಡಿ, ತಮ್ಮೊಳಿಂಬಿಟ್ಟುಕೊಂಡ ಕಾರಣ, ಕಾಮಧೂಮ ಧೂಳೇಶ್ವರಾ ನಿಮ್ಮ ಶರಣರ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು.
--------------
ಮಾದಾರ ಧೂಳಯ್ಯ
ಲಿಂಗ ಜಂಗಮ, ಜಂಗಮ ಲಿಂಗವೆಂಬುದನಾರು ಬಲ್ಲರು ? ಬಸವಣ್ಣನಲ್ಲದೆ. ಲಿಂಗಕ್ಕೆ ಆಧಾರವಿಲ್ಲವೆಂದು ಮತ್ರ್ಯಲೋಕಕ್ಕೆ ಬಂದು, ಅವತರಿಸಿದನಯ್ಯಾ ಬಸವಣ್ಣನು. ಲಿಂಗಮುಖ ಜಂಗಮವೆಂದರಿದು, ತನ್ನನರ್ಪಿಸಿ, ಇದಿರ ತಪ್ಪಿಸಿ ಇರಬಲ್ಲನಯ್ಯಾ ಬಸವಣ್ಣನು. ಅಂಗಮುಖವೆಲ್ಲ ನಷ್ಟವಾಗಿ, ಭೃತ್ಯಾಚಾರವೆ ತನುವಾಗಿರಬಲ್ಲನಯ್ಯಾ ಬಸವಣ್ಣನು. ಪ್ರಾಣನ ಕಳೆಯರತು ಜಂಗಮವೇ ಪ್ರಾಣವಾಗಿರಬಲ್ಲನಯ್ಯಾ ಬಸವಣ್ಣನು. ಬಸವಪ್ರಿಯ ಕೂಡಲಚೆನ್ನಸಂಗಯ್ಯನಲ್ಲಿ, ಆಚಾರವೇ ಪ್ರಾಣವಾಗಿಪ್ಪ ಸಂಗನಬಸವಣ್ಣನೆ ನಿಮಗೆ ಭಕ್ತನಯ್ಯಾ ಪ್ರಭುವೆ.
--------------
ಸಂಗಮೇಶ್ವರದ ಅಪ್ಪಣ್ಣ
ನಾ ಬಲ್ಲೆನೈ ನಿನ್ನ, ನೀ ಬಲ್ಲೆಯೈ ಎನ್ನ. ಆರಯ್ಯ ಬಲ್ಲನೈ ಬಸವಣ್ಣನು. ಭಾನುವಿನ ಉದಯಕ್ಕೆ ಆಯಕ್ಷರ ಭೇದ ಆನತದಿ ನೀನಾದೆ ಬಸವ ತಂದೆ. ಸೀಮೆಗೆಟ್ಟಾ ಲೋಕ ಏನಾದಡೇನಯ್ಯಾ ಆನು ನಿನ್ನೊಳಗಡಗಿ ಐಕ್ಯಪದದ ಆನತವನೈದಿ ನಾ ಕೂಡೆ ಸುಖಿಯಾದ ಬಳಿಕೇನಾದಡೇನಯ್ಯ ಬಸವಣ್ಣ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಇನ್ನಷ್ಟು ... -->