ಅಥವಾ

ಒಟ್ಟು 143 ಕಡೆಗಳಲ್ಲಿ , 5 ವಚನಕಾರರು , 5 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತನ್ನ ತಾನರಿದ ಮಹಾಜ್ಞಾನಿ ಶರಣನು ಚರಿಸುವ ಕ್ರಮವೆಂತೆಂದಡೆ: ಸ್ಥೂಲವೆಂಬ ಕಂಥೆಯ ತೊಟ್ಟು, ಸೂಕ್ಷ್ಮವೆಂಬ ಟೊಪ್ಪರವನಿಕ್ಕಿ, ತತ್ವವೆಂಬ ಖರ್ಪರವನಾಂತು, ಸತ್ಯವೆಂಬ ದಂಡವಂ ಪಿಡಿದು, ಶಾಂತಿಯೆಂಬ ಭಸಿತವಂ ತೊಡೆದು, ಸುಚಿತ್ತವೆಂಬ ಮಣಿಯ ಕಟ್ಟಿ, ವೈರಾಗ್ಯವೆಂಬ ಹಾವುಗೆಯಂ ಮೆಟ್ಟಿ, ಮನದೃಢವೆಂಬ ಕೌಪವಂ ಕಟ್ಟಿ, ಆಚಾರವೆಂಬ ಕಂಕಣವನ್ನಿಕ್ಕಿ, ಕ್ಷಮೆದಮೆಗಳೆಂಬ ಕುಂಡಲಮಂ ಧರಿಸಿ, ಪರಮಾನಂದದಿಂದ ಸುಳಿದು, ಜಗವ ಪಾವನವ ಮಾಡಲೆಂದು ಭಕ್ತಿ ಭಿಕ್ಷವಂ ಬೇಡುತ್ತ ಬಂದನಯ್ಯ, ತನ್ನ ಒಲುಮೆಯ ಶರಣರ್ಗೆ ನಿಜಸುಖವನೀಯಲೆಂದು. ಕಲಿದೇವರದೇವಾ, ನಿಮ್ಮ ಶರಣ ಪ್ರಭುವೆಂಬ ಜಂಗಮವಂ ಕಂಡು, ಅರ್ಚಿಸಿ, ಪೂಜಿಸಿ, ಒಕ್ಕುದನುಂಡು, ನಿಶ್ಚಿಂತನಾದೆನಯ್ಯ.
--------------
ಮಡಿವಾಳ ಮಾಚಿದೇವ
ನಾಡಿಧಾರಣ ವಾಯುಧಾರಣ ಅಗ್ನಿಧಾರಣ ಅಮೃತಧಾರಣ ಆಧಾರಧಾರಣ ನಿರಾಧಾರಧಾರಣ ಷಷಿ*ಧಾರಣವಂ ಮಾಡಿ, ಇನ್ನು ಆತ್ಮಯೋಗಿಯಾಗಿರಬಾರದೆಂದು ನಿಂದು, ತಾನೆ ತಿಳಿದು, ವಿಚಾರಿಸಿಕೊಂಡು ಅನಂತದೇಶಗಳಂ ತಿರುಗಿ ಸದ್ಗುರುಸ್ವಾಮಿಯನರಸಿ, ಅವರ ಕಾರುಣ್ಯಪಡೆವೆನೆಂದು ಬಾಹಾಗ ಸದ್ಗುರುಸ್ವಾಮಿ ಕಂಡನು. ಇದಕ್ಕೆ ಈಶ್ವರ ಉವಾಚ : ``ಗುಕಾರಂ ಚ ಗುಣಾತೀತಂ ರುಕಾರಂ ರೂಪವರ್ಜಿತಂ | ಗುಣರೂಪವಿಹೀನತ್ವಂ ಗುರುರಿತ್ಯಭಿಧೀಯತೇ || ಗುಕಾರಂ ಮಮ ರೂಪಂ ಚ ರುಕಾರಂ ತನುರೂಪಕಂ | ಉಭಯೋಃ ಸಂಗಮೇ ದೇವಾಃ ಗುರುರೂಪೋ ಮಹೇಶ್ವರಃ || ಗುಕಾರಂ ಚ ಗುಣಾತೀತಂ ರುಕಾರಂ ರೂಪವರ್ಜಿತಂ | ಗುಣರೂಪಮತೀತಂ ಚ ಯೋ ದದ್ಯಾತ್ ಸ ಗುರುಸ್ಮೃತಃ || ಯೋ ಗುರುಃ ಸ ಶಿವಃ ಪ್ರೋಕ್ತಃ ಶಿವಸ್ಯ ಏವ ಗುರುಸ್ಮೃತಃ | ಭುಕ್ತಿಮುಕ್ತಿಪ್ರದಾತಾ ಚ ಮಮರೂಪೋ ಮಹೇಶ್ವರಃ||'' ಇಂತೆಂದುದಾಗಿ, ಇದಕ್ಕೆ ಶ್ರೀ ಮಹಾದೇವ ಉವಾಚ : ``ಪರಶಿವೋ ಗುರೋಮೂರ್ತಿ ಶಿಷ್ಯದೀಕ್ಷಾದಿಕಾರಣಾತ್ |'' ಇಂತೆಂದುದಾಗಿ, ಪರಶಿವ ತಾನೇ ಗುರುವಾಗಿ ಬಂದನಯ್ಯ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಸಮತೆಯೆಂಬ ಕಂಥೆಯ ಧರಿಸಿ ಕ್ಷಮೆಯೆಂಬ ಭಸ್ಮಧಾರಣವನಳವಡಿಸಿ ಸರ್ವಜೀವದಯಾಪರವೆಂಬ ಕಮಂಡಲವ ತಳೆದುಕೊಂಡು ಸುಜ್ಞಾನವೆಂಬ ದಂಡವ ಹಿಡಿದು ವೈರಾಗ್ಯವೆಂಬ ಭಿಕ್ಷಾಪಾತ್ರೆ ಸಹಿತ, ಭಕ್ತಿ ಭಿಕ್ಷವ ಬೇಡ ಬಂದನಯ್ಯ. ಸತ್ಯ ಶರಣರಾದ ಭಕ್ತರನರಸುತ್ತ. ಭಕ್ತಿ ಭಿಕ್ಷವ ಬೇಡ ಬಂದನಯ್ಯ. ಕಾಯದ ಕಳವಳವ ಕಳೆದು, ಜೀವನೋಪಾಯವಿಲ್ಲದೆ, ಸುಳಿವನಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣ ಭಕ್ತಿ ಕಾರಣವಾಗಿ.
--------------
ಸ್ವತಂತ್ರ ಸಿದ್ಧಲಿಂಗ
ಪ್ರಥಮದಲ್ಲಿ ನಾಮ ರೂಪು ಕ್ರೀ ಏನೂ ಏನೂ ಇಲ್ಲದ ಮಹಾಘನ ಶೂನ್ಯಬ್ರಹ್ಮವು. ಆ ಶೂನ್ಯಬ್ರಹ್ಮದಿಂದ ಶುದ್ಧ ಪ್ರಣವ. ಆ ಶುದ್ಧ ಪ್ರಣವಧಿಂದ ಚಿತ್ತು ಭಾವದಕ್ಷರ. ಆ ಚಿತ್ತು ಭಾವದಕ್ಷರದಿಂದ ಪರಶಕ್ತಿ. ಆ ಪರಾಶಕ್ತಿಯಿಂದ ಅಕ್ಷರತ್ರಯಂಗಳು. ಆ ಅಕ್ಷರತ್ರಯಂಗಳಿಂದ ಓಂಕಾರ. ಆ ಓಂಕಾರವೆ ಬಸವಣ್ಣನು. ಆ ಬಸವಣ್ಣನೆ ಎನ್ನ ವದನಕ್ಕೆ ಓಂಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಬಲದ ಭುಜಕ್ಕೆ ನಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಎಡದ ಭುಜಕ್ಕೆ ಮಃಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ದೇಹಮಧ್ಯಕ್ಕೆ ಶಿಕಾರವಾಗಿ ಬಂದನಯ್ಯ ಬಸವಣ್ಣ ಎನ್ನ ಬಲದ ತೊಡೆಗೆ ವಾಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಎಡದ ತೊಡೆಗೆ ಯಕಾರಾವಾಗಿ ಬಂದನಯ್ಯ ಬಸವಣ್ಣ. ಎನ್ನ ಸ್ಥೂಲತನುವಿಂಗೆ ಉಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಸೂಕ್ಷ ್ಮತನುವಿಂಗೆ ಮಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಕಾರಣತನುವಿಂಗೆ ಆಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಆಯತಕ್ಕೆ ಬಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಸ್ವಾಯತಕ್ಕೆ ಸಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಸನ್ನಿಹಿತಕ್ಕೆ ನಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಕ್ರೀಗೆ ಅವಾಚ್ಯ ಸ್ವರೂಪಾಗಿ ಬಂದನಯ್ಯ ಬಸವಣ್ಣ. ಎನ್ನ ಜ್ಞಾನಕ್ಕೆ ಮಹಾಶೂನ್ಯ ಸ್ವರೂಪನಾಗಿ ಬಂದನಯ್ಯ ಬಸವಣ್ಣ. ಎನ್ನ ರುಧಿರಕ್ಕೆ ನಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಮಾಂಸಕ್ಕೆ ಮಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಮೇದಸ್ಸಿಂಗೆ ಶಿಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಆಸ್ಥಿಗೆ ವಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಮಜ್ಜೆಗೆ ಯಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ತ್ವಗಮಯಕ್ಕೆ ಓಂಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ದೇಹಭಾವ ಕೊಂದಹೆನೆಂದು ಬಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಹೊನ್ನು ಹೆಣ್ಣು ಮಣ್ಣೆಂಬ ಸಕಲಾಸೆಯ ಕೊಂದಹೆನೆಂದು ಸಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಇಂದ್ರಿಯ ವಿಷಯಂಗಳ ಕೊಂದಹೆನೆಂದು ವಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ನಾದಕ್ಕೆ ಆಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಬಿಂದುವಿಂಗೆ ಉಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಕಳೆಗೆ ಮಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಪ್ರಾಣಕ್ಕೆ ಓಂಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ವಿಶ್ವಂಗೆ ಇಷ್ಟಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ತೈಜಸಿಂಗೆ ಪ್ರಾಣಲಿಂಗವಾಗಿ ಬಂದನಯ್ಯ ಬಸವಣ್ಣ ಎನ್ನ ಪ್ರಜ್ಞೆಗೆ ತೃಪ್ತಿಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಸತ್ವಕ್ಕೆ ಶುದ್ಧಪ್ರಸಾದವಾಗಿ ಬಂದನಯ್ಯ ಬಸವಣ್ಣ. ಎನ್ನ ರಜಕ್ಕೆ ಸಿದ್ಧಪ್ರಸಾದವಾಗಿ ಬಂದನಯ್ಯ ಬಸವಣ್ಣ. ಎನ್ನ ತಮಕ್ಕೆ ಪ್ರಸಿದ್ಧಪ್ರಸಾದವಾಗಿ ಬಂದನಯ್ಯ ಬಸವಣ್ಣ. ಎನಗೆ ಬಕಾರವೆ ಗುರುವಾಗಿ ಬಂದನಯ್ಯ ಬಸವಣ್ಣ. ಎನಗೆ ಸಕಾರವೆ ಲಿಂಗವಾಗಿ ಬಂದನಯ್ಯ ಬಸವಣ್ಣ. ಎನಗೆ ವಕಾರವೆ ಜಂಗಮವಾಗಿ ಬಂದನಯ್ಯ ಬಸವಣ್ಣ. ಎನ್ನ ಸ್ಥೂಲತನುವಿಂಗೆ ಇಷ್ಟಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಸೂಕ್ಷ ್ಮತನುವಿಂಗೆ ಪ್ರಾಣಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಕಾರಣತನುವಿಂಗೆ ಭಾವಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಶಿವ ಕ್ಷೇತ್ರಜ್ಞ ಕರ್ತಾರ ಭಾವ ಚೈತನ್ಯ ಅಂತರ್ಯಾಮಿಯೆಂಬ ಷಡುಮೂರ್ತಿಗಳಿಗೆ ನಕಾರ ಮಃಕಾರ ಶಿಕಾರ ವಾಕಾರ ಯಕಾರ ಓಂಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಚಿತ್ತಕ್ಕೆ ಆಚಾರಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಬುದ್ಧಿಗೆ ಗುರುಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಅಹಂಕಾರಕ್ಕೆ ಶಿವಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಮನಸ್ಸಿಂಗೆ ಜಂಗಮಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಜ್ಞಾನಕ್ಕೆ ಪ್ರಸಾದಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಭಾವಕ್ಕೆ ಮಹಾಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಬ್ರಹ್ಮತತ್ವಕ್ಕೆ ನಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ವಿಷ್ಣುತತ್ವಕ್ಕೆ ಮಃಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ರುದ್ರತತ್ವಕ್ಕೆ ಶಿಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಈಶ್ವರತತ್ವಕ್ಕೆ ವಾಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಸದಾಶಿವತತ್ವಕ್ಕೆ ಯಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಮಹಾಶ್ರೀಗುರುತತ್ವಕ್ಕೆ ಓಂಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಪೃಥ್ವಿಗೆ ನಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಅಪ್ಪುವಿಂಗೆ ಮಃಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಅಗ್ನಿತತ್ವಕ್ಕೆ ಶಿಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ವಾಯುವಿಂಗೆ ವಾಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಆಕಾಶಕ್ಕೆ ಯಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಆತ್ಮಂಗೆ ಓಂಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಪ್ರಾಣವಾಯುವಿಂಗೆ ನಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಅಪಾನವಾಯುವಿಂಗೆ ಮಃಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ವ್ಯಾನವಾಯುವಿಂಗೆ ಶಿಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಉದಾನವಾಯುವಿಂಗೆ ವಾಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಸಮಾನವಾಯುವಿಂಗೆ ಯಕಾರವಾಗಿ ಬಂದನಯ್ಯ ಬಸವಣ್ಣ ಎನ್ನ ಪಂಚವಾಯುವಿಗೆ ಓಂಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಆಧಾರಚಕ್ರಕ್ಕೆ ಆಚಾರಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಸ್ವಾಧಿಷಾ*ನಚಕ್ರಕ್ಕೆ ಗುರುಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಮಣಿಪೂರಚಕ್ರಕ್ಕೆ ಶಿವಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಅನಾಹತಚಕ್ರಕ್ಕೆ ಜಂಗಮಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ವಿಶುದ್ಧಿಚಕ್ರಕ್ಕೆ ಪ್ರಸಾದಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಆಜ್ಞಾಚಕ್ರಕ್ಕೆ ಮಹಾಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಚತುರ್ದಳಕ್ಕೆ ನಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಷಡುದಳಕ್ಕೆ ಮಃಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ದ್ವಾದಶದಳಕ್ಕೆ ವಾಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಷೋಡಶದಳಕ್ಕೆ ಯಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ದ್ವಿದಳಕ್ಕೆ ಓಂಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಚತುರಾಕ್ಷರಕ್ಕೆ ನಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಷಡಾಕ್ಷರಕ್ಕೆ ಮಃಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ದಶಾಕ್ಷರಕ್ಕೆ ಶಿಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ದ್ವಾದಶಾಕ್ಷರಕ್ಕೆ ವಾಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಷೋಡಶಾಕ್ಷರಕ್ಕೆ ಯಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ದ್ವಿಯಾಕ್ಷರಕ್ಕೆ ಓಂಕಾರವಾಗಿ ಬಂದನಯ್ಯ ಬಸವಣ್ಮ. ಎನ್ನ ಕೆಂಪುವರ್ಣಕ್ಕೆ ನಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ನೀಲವರ್ಣಕ್ಕೆ ಮಃಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಕುಂಕುಮವರ್ಣಕ್ಕೆ ಶಿಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಪೀತವರ್ಣಕ್ಕೆ ವಾಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಶ್ವೇತವರ್ಣಕ್ಕೆ ಯಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಮಾಣಿಕ್ಯವರ್ಣಕ್ಕೆ ಓಂಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಜ್ರಾಗ್ರಾವಸ್ಥೆಗೆ ನಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಸ್ವಪ್ನಾವಸ್ಥೆಗೆ ಮಃಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಸುಷುಪ್ತಾವಸ್ಥೆಗೆ ಶಿಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ತೂರ್ಯಾವಸ್ಥೆಗೆ ವಾಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಅತೀತಾವಸ್ತೆಗೆ ಯಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ನಿರಾವಸ್ಥೆಗೆ ಓಂಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಅಂತಃಕರಣಂಗಳಿಗೆ ಚತುರ್ವಿಧ ಬಿಂದು ಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಅರಿಷಡ್ವರ್ಗಂಗಳಿಗೆ ಷಡ್ವಿಧಧಾತು ಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ದಶವಾಯುಗಳಿಗೆ ದಶವಿದ ಕ್ಷೇತ್ರಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ದ್ವಾದಶೇಂದ್ರಿಯಂಗಳಿಗೆ ದ್ವಾದಶ ವಿಕೃತಿಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಷೋಡಶಕಲೆಗೆ ಷೋಡಶಕಲಾಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಅಹಂಕಾರ ಮಮಕಾರಗಳಿಗೆ ವಿದ್ಯಾಲಿಂಗವಾಗಿ ಬಂದನಯ್ಯಬಸವಣ್ಣ. ಎನ್ನ ಭಕ್ತಿಸ್ಥಲಕ್ಕೆ ಆಚಾರಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಮಾಹೇಶ್ವರಸ್ಥಲಕ್ಕೆ ಗುರುಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಪ್ರಸಾದಿಸ್ಥಲಕ್ಕೆ ಶಿವಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಪ್ರಾಣಲಿಂಗಿಸ್ಥಳಕ್ಕೆ ಜಂಗಮಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಶರಣಸ್ಥಲಕ್ಕೆ ಪ್ರಸಾದಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಐಕ್ಯಸ್ಥಲಕ್ಕೆ ಮಹಾಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಚಿತ್ತಕ್ಕೆ ನಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಬುದ್ಧಿಗೆ ಮಃಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಅಹಂಕಾರಕ್ಕೆ ಶಿಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಮನಕ್ಕೆ ವಾಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಜ್ಞಾನಕ್ಕೆ ಯಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಭಾವಕ್ಕೆ ಓಂಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಕ್ರಿಯಾಶಕ್ತಿಗೆ ನಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಜ್ಞಾನಶಕ್ತಿಗೆ ಮಃಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಇಚ್ಛಾಶಕ್ತಿಗೆ ಶಿಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಆದಿಶಕ್ತಿಗೆ ವಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಪರಶಕ್ತಿಗೆ ಯಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಚಿತ್ಶಕ್ತಿಗೆ ಓಂಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಶ್ರದ್ಧೆಗೆ ನಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ನಿಷೆ*ಗೆ ಮಃಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಅವಧಾನಕ್ಕೆ ಶಿಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಅನುಭಾವಕ್ಕೆ ವಾಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಆನಂದಕ್ಕೆ ಯಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಸಮರಸಕ್ಕೆ ಓಂಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಶಬ್ದಕ್ಕೆ ಗುರುವಾಗಿ ಬಂದನಯ್ಯ ಬಸವಣ್ಣ. ಎನ್ನ ಸ್ಪರುಶನಕ್ಕೆ ಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ರೂಪಿಂಗೆ ಶಿವಲಾಂಛನವಾಗಿ ಬಂದನಯ್ಯ ಬಸವಣ್ಣ. ಎನ್ನ ರಸಕ್ಕೆ ಶಿವಪ್ರಸಾದವಾಗಿ ಬಂದನಯ್ಯ ಬಸವಣ್ಣ. ಎನ್ನ ಗಂಧಕ್ಕೆ ಶಿವಾನುಭಾವವಾಗಿ ಬಂದನಯ್ಯ ಬಸವಣ್ಣ ಎನ್ನ ನಾಸಿಕಕ್ಕೆ ನಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಜಿಹ್ವೆಗೆ ಮಃಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ನೇತ್ರಕ್ಕೆ ಶಿಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ತ್ವಕ್ಕಿಂಗೆ ವಾಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಶ್ರೋತ್ರಕ್ಕೆ ಯಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಹೃದಯಕ್ಕೆ ಓಂಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ವಾಕ್ಕಿಂಗೆ ಯಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಪಾಣಿಗೆ ವಾಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಪಾದಕ್ಕೆ ಶಿಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಗುಹ್ಯಕ್ಕೆ ಮಃಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಪಾಯುವಿಂಗೆ ನಕಾರವಾಗಿ ಬಂದನಯ್ಯ ಬಸವಣ್ಣ. ಇಂತೀ ಪಂಚೇಂದ್ರಿಯಂಗಳೆ ಪಂಚಮಹಾಯಜ್ಞ. ಆ ಪಂಚಮಹಾಯಜ್ಞದಲ್ಲಿ ಎನ್ನ ಮನ ಹಾರೈಸಿ ಪೂರೈಸಿ ಒಲಿದು ಕೇಳಿತ್ತು ಮುಟ್ಟಿತ್ತು ನೋಡಿತ್ತು ರುಚಿಸಿತ್ತು ವಾಸಿಸಿತ್ತು. ಎನ್ನ ಮಾನಸ ವಾಚಕ ಕಾಯಕ ಕರಣಂಗಳೆಲ್ಲವು ಪಂಚಮಹಾಯಜ್ಞ ಸೋಂಕಿ ಪಂಚಮಹಾಯಜ್ಞವಪ್ಪುದು ತಪ್ಪದು. ಅದೆಂತೆಂದಡೆ- ಮಹಾಜ್ಯೋತಿಯ ಸೋಂಕಿದ ಉತ್ತಮ ಅಧಮ ತೃಣ ಮೊದಲಾದವೆಲ್ಲವು ಮಹಾ ಅಗ್ನಿಯ ಸೋಂಕಿ ಮಹಾ ಅಗ್ನಿಯಪ್ಪುದು ತಪ್ಪದು. ಇಂತಪ್ಪ ಮಹಾಯಜ್ಞವನೊಳಕೊಂಡಿಪ್ಪ ಮೂಲಾಗ್ನಿಯೇ ಬಸವಣ್ಣ. ಆ ಬಸವಣ್ಣನೆ ಗುರು ಲಿಂಗ ಜಂಗಮ ಪ್ರಸಾದ ಪಾದೋದಕ ವಿಭೂತಿ ರುದ್ರಾಕ್ಷಿ ಪಂಚಾಕ್ಷರಿಯೇ ಚಿದ್ಬ ್ರಹ್ಮ. ಆ ಚಿದ್ಬ ್ರಹ್ಮವೇ ಬಸವಣ್ಣ. ಆ ಬಸವಣ್ಣನೇ ಎನಗೆ ಅಷ್ಟಾವರಣ ಸ್ವರೂಪನಾದ ಸಚ್ಚಿದಾನಂದ ಬಸವಣ್ಣ. ನಿತ್ಯಪರಿಪೂರ್ಣ ಬಸವಣ್ಣ. ಅಖಂಡಾದ್ವಯ ಬಸವಣ್ಣ. ನಿರಂಜನ ಬಸವಣ್ಣ. ನಿರ್ಮಾಯ ಬಸವಣ್ಣ, ನಿರಾಚರಣ ಬಸವಣ್ಣ. ನಿರ್ಜನಿತ ಬಸವಣ್ಣ. ನಿರ್ಲೇಪ ಬಸವಣ್ಣ. ನಿಃಕಪಟಿ ಬಸವಣ್ಣ. ಅಸಾಧ್ಯ ಸಾಧಕ ಬಸವಣ್ಣ. ಅಭೇದ್ಯ ಭೇದಕ ಬಸವಣ್ಣ. ಚಿತ್ಪ್ರಕಾಶ ಬಸವಣ್ಣ. ಇಂತಪ್ಪ ಬಸವಣ್ಣನ ಅಂಗವೆ ಚಿದಾಕಾಶ. ಆ ಚಿದಾಕಾಶದ ಮಧ್ಯದಲ್ಲಿ ಚಿತ್ಪ್ರಾಣವಾಯು. ಆ ಚಿತ್ಪ್ರಾಣವಾಯುವಿನ ಮಧ್ಯದಲ್ಲಿ ಚಿದಾಗ್ನಿ. ಆ ಚಿದಾಗ್ನಿಯ ಮಧ್ಯದಲ್ಲಿ ಚಿಜ್ಜಲ. ಆ ಚಿಜ್ಜಲದ ಮಧ್ಯದಲ್ಲಿ ಚಿದ್ಭೂಮಿ. ಆ ಚಿದ್ಭೂಮಿಯ ಮಧ್ಯದಲ್ಲಿ ಹೃದಯ. ಆ ಹೃದಯದ ಮಧ್ಯದಲ್ಲಿ ಆಕಾರ ಉಕಾರ ಮಕಾರ ಪ್ರಣಮಪೀಠ. ಆ ಪ್ರಣವಪೀಠದ ಮಧ್ಯದಲ್ಲಿ ಜಂಗಮ ಆ ಜಂಗಮವ ಮಕುಟದಲ್ಲಿ ಶೂನ್ಯಲಿಂಗ. ಆ ಶೂನ್ಯಲಿಂಗದಲ್ಲಿ ಚಿದಂಬರ, ಆ ಚಿದಂಬರರಲ್ಲಿ ಶಿವಶಕ್ತಿ. ಆ ಶಿವಶಕ್ತಿಯಲ್ಲಿ ಪಂಚಶಕ್ತಿ. ಆ ಪಂಚಶಕ್ತಿಯಲ್ಲಿ ಪಂಚನಾದ. ಆ ಪಂಚನಾದದಲ್ಲಿ ಪಂಚಸಾದಾಖ್ಯ. ಆ ಪಂಚಸಾದಾಖ್ಯದಲ್ಲಿ ಈಶ್ವರ. ಆ ಈಶ್ವರನಲ್ಲಿ ಮಾಹೇಶ್ವರ. ಆ ಮಾಹೇಶ್ವರನಲ್ಲಿ ರುದ್ರ. ಆ ರುದ್ರನಲ್ಲಿ ತ್ರಯವಯ ಹಿರಣ್ಯಗರ್ಭ ವಿರಾಟ್‍ಮೂರ್ತಿ. ಇಂತೀ ಎಂಬತ್ತುಮೂರು ಮೂರ್ತಿಗಳೊಳಗೆ ಎಂಬತ್ತೆರಡೆ ಬಸವಣ್ಣನಂಗವೊಂದೆ ಪ್ರಾಣ. ಆ ಪ್ರಾಣ ಚೈತನ್ಯ ಶೂನ್ಯವೆ ಗೋಳಕ ಗೋಮುಖ ವೃತ್ತಾಕಾರವಾಗಿ ಕರಸ್ಥಲದಲ್ಲಿ ಪಿಡಿದು ಆ ಲಿಂಗದ ಆದಿಪ್ರಣಮವೆ ಪೀಠ, ಆಕಾರವೆ ಕಂಠ, ಉಕಾರವೆ ಗೋಮುಖ, ಮಕಾರವೆ ವರ್ತುಳ, ನಾಳ ಬಿಂದು ಮಹಾತೇಜ. ನಾದವೆ ಅಖಂಡಲಿಂಗ. ಇಂತಪ್ಪ ಬಸವಣ್ಣನ ನಿತ್ಯತ್ವವೆ ಲಿಂಗ; ಪೂರ್ಣತ್ವವೆ ಗುರು. ಚಿತ್ಪ್ರಕಾಶವೆ ಜಂಗಮ. ಆನಂದವೆ ಪ್ರಸಾದ, ಚಿದ್ರಸದ ಪ್ರವಾಹವೆ ಪಾದತೀರ್ಥ. ಇಂತಪ್ಪ ಬಸವಣ್ಣ ಅನಂತಕೋಟಿ ಬ್ರಹ್ಮಾಂಡಗಳ ರೋಮಕೂಪದಲ್ಲಿ ಸಂಕಲ್ಪಿಸಿ ಅಲ್ಲಿದ್ದಾತ್ಮಂಗೆ ಸುಜ್ಞಾನ ಕ್ರೀಯನಿತ್ತು ತದ್ ಭೃತ್ಯ ಕರ್ತೃ ತಾನಾಗಿ ಇಷ್ಟಾರ್ಥಸಿದ್ಧಿಯನೀವುತಿಪ್ಪ ಬಸವಣ್ಣನ ಭೃತ್ಯರ ಭೃತ್ಯರ ತದ್‍ಭೃತ್ಯನಾಗಿರಿಸಿ ಬಸವಣ್ಣನ ಪಡುಗ ಪಾದರಕ್ಷೆಯ ಹಿಡಿವ ಭಾಗ್ಯವಯೆನಗೀವುದಯ್ಯ, ಪರಂಜ್ಯೋತಿ ಮಹಾಲಿಂಗಗುರು ಸಿದ್ಧಲಿಂಗಪ್ರಭುವಿನಲ್ಲಿ ಬಸವಣ್ಣನ ಅರುಹಿಕೊಟ್ಟ ಸಿದ್ಧೇಶ್ವರನ ಶ್ರೀಪಾದಪದ್ಮದಲ್ಲಿ ಭೃಂಗನಾಗಿರ್ದೆನಯ್ಯಾ, ಬೋಳಬಸವೇಶ್ವರ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಗುಮ್ಮಳಾಪುರದ ಸಿದ್ಧಲಿಂಗ
ಒಂದೊಂದಾಗಿ ಕೂಡಿದಲ್ಲಿಗೆ ಬಂದನಯ್ಯ ಒಬ್ಬ ವಿಶ್ವಾಸಘಾತಕನು. ಒಂದು ಒಂದಾಗಿರ್ದುದ ಕೆಡಿಸಿ ಛಂದವಾಯಿತೆಂದೆಂಬ ಮುದುಗುರಿಯ ಮುಖವ ನೋಡಲಾಗದು ಕಾಣಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
-->