ಅಥವಾ

ಒಟ್ಟು 3 ಕಡೆಗಳಲ್ಲಿ , 3 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಯ್ಯ ! ಸಮಸ್ತಧಾನ್ಯಾದಿಗಳಲ್ಲಿ, ಸಮಸ್ತ ಫಲಾದಿಗಳಲ್ಲಿ, ಸಮಸ್ತಪುಷ್ಪಪತ್ರಾದಿಗಳಲ್ಲಿ ಮಧುರ, ಒಗರು, ಕ್ಷಾರ, ಆಮ್ಲ, ಕಹಿ, ಲವಣ ಮೊದಲಾದ ಸಮಸ್ತಪರಮಚಿದ್ರಸವಡಗಿರ್ಪಂತೆ, ಷೋಡಶಮದಗಜದಂತರಂಗದ ಮಧ್ಯದಲ್ಲಿ ಸಮಸ್ತ ವೈರಾಗ್ಯ, ತಿರಸ್ಕಾರಸ್ವರೂಪ ಮಹಾ [ಅ]ಜ್ಞಾನವಡಗಿರ್ಪಂತೆ, ಚಂದ್ರಕಾಂತದ ಶಿಲಾಮಧ್ಯದಲ್ಲಿ ಚಿಜ್ಜಲವಡಗಿರ್ಪಂತೆ, ಶಿಶುಗಳು `ಕಂಡ ಕನಸು' ತಂದೆ ತಾಯಿಗಳಿಗೆ ಕಾಣಿಸಿದಂತೆ, ಕರವೀರ, ಸುರಹೊನ್ನೆ, ಜಾಜಿ, ಬಕುಳ, ಪಾದರಿ, ಪಾರಿಜಾತ, ಮೊಲ್ಲೆ, ಮಲ್ಲಿಗೆ, ತಾವರೆ, ನೈದಿಲೆ, ಸಂಪಿಗೆ, ದವನ, ಪಚ್ಚೆ, ಕಸ್ತೂರಿ, ಮರುಗ, ಬಿಲ್ವ ಮೊದಲಾದ ಪುಷ್ಪ ಪತ್ರಾದಿಗಳಲ್ಲಿ ಮಹಾಸದ್ವಾಸನಾ ಸ್ವರೂಪವಾದ ಪರಿಮಳವಡಗಿರ್ಪಂತೆ, ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ, ನಾಗ, ಕೂರ್ಮ, ಕೃಕರ, ದೇವದತ್ತ, ಧನಂಜಯವೆಂಬ ದಶವಾಯುಗಳ ಮಧ್ಯದಲ್ಲಿ ಭ್ರಮರನಾದ, ವೀಣಾನಾದ, ಘಂಟಾನಾದ, ಭೇರಿನಾದ, ಮೇಘನಾದ, ಪ್ರಣಮನಾದ, ದಿವ್ಯನಾದ, ಸಿಂಹನಾದ, ಶರಭನಾದ, ಮಹಾನಾದಂಗಳಡಗಿರ್ಪಂತೆ, ಸದ್ಭಕ್ತ ಶಿವಶರಣಗಣಂಗಳ ಮಧ್ಯದಲ್ಲಿ ಅಡಗಿರ್ದು, ಜಗದ ಜಡಜೀವರಿಗೆ ಗೋಚರವಿಲ್ಲದಿರ್ಪುದು ನೋಡ ! ಗುಹೇಶ್ವರಲಿಂಗವು, ಚೆನ್ನಬಸವಣ್ಣ
--------------
ಅಲ್ಲಮಪ್ರಭುದೇವರು
ಕಂಗಳ ಮುಂದೆ ಬಂದು ನಿಂದು, ಕಂಡುದೆಲ್ಲವು ಲಿಂಗಾರ್ಪಿತವೆ ? ಫಲಾದಿಗಳಲ್ಲಿ ಪಾಕವಾದ ಕಡ್ಡಿ ತೊಟ್ಟು ಬಿತ್ತು ಮೊದಲಾದ ತುಷ ಪಾಷಾಣ ಬೋನದೊಳಗಾದ ಸಮೂಹವೆಲ್ಲವು, ಲಿಂಗನೈವೇದ್ಯ ಸಮರ್ಪಣವೆ ? ಸಾರೂಪ ದ್ರವ್ಯಂಗಳಲ್ಲಿ ಅರೋಚಕವ ಕಳೆದು, ಮನದಲ್ಲಿ ನೇಮಿಸಿ, ಇಷ್ಟಲಿಂಗಕ್ಕೆ ಇದಿರಿಟ್ಟು, ಪದಾರ್ಥವ ಕೊಡುವಲ್ಲಿ, ಪ್ರಾಣಲಿಂಗಕ್ಕೆ ನಾನಾ ರಸಂಗಳ ಸಾಗಿಸುವಲ್ಲಿ, ಅರ್ಪಿತ ಅನರ್ಪಿತವೆಂಬ ಉಭಯದ ಗೊತ್ತ ಮುಟ್ಟಿ ಅರ್ಪಿಸಬಲ್ಲಡೆ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗಕ್ಕೆ ಅರ್ಪಿತವಾಯಿತ್ತು.
--------------
ಶಿವಲೆಂಕ ಮಂಚಣ್ಣ
ಪ್ರಥಮದಲ್ಲಿ ಪೀಠಿಕಾಸೂತ್ರವದೆಂತೆಂದೊಡೆ : ಶೈವಪಾಷಂಡಿಗಳು ಆಚರಿಸಿದ ಪಿಪೀಲಿಕಜ್ಞಾನ, ವಿಹಂಗಜ್ಞಾನ, ಮರ್ಕಟಜ್ಞಾನ, ಗಜಜ್ಞಾನ, ಕುಕ್ಕುಟಜ್ಞಾನ, ಶ್ವಾನಜ್ಞಾನ, ವೇದಾಂತಜ್ಞಾನ, ಸಿದ್ಧಾಂತಜ್ಞಾನ, ಭಿನ್ನಯೋಗ, ಚರ್ಯಾ-ಕ್ರಿಯಾ-ಕರ್ಮಜ್ಞಾನಂಗಳನ್ನು ತೊರೆದು ಕೇವಲ ಸುಜ್ಞಾನವೆ ಚಿತ್ಪಿಂಡಾಕೃತಿಯ ಧರಿಸಿ, ಆ ಪಿಂಡಮಧ್ಯದಲ್ಲಿ ಮಹಾಜ್ಞಾನವೆ ಚಿತ್ಪ್ರಾಣವಾಗಿ ಶೋಭಿಸಿ, ಅವೆರಡರ ಮಧ್ಯವೆ ಪರಿಪೂರ್ಣ ಸ್ವಾನುಭಾವ, ಉನ್ಮನಜ್ಞಾನವೇ ಸಾಕಾರಲೀಲೆಯ ಧರಿಸಿ, ಪರಮಜ್ಞಾನಾಂಜನ ಸದ್ವಾಸನಪರಿಮಳವೆ ಕ್ರಿಯಾಭಕ್ತಿ, ಜ್ಞಾನಭಕ್ತಿ, ಮಹಾಜ್ಞಾನಭಕ್ತಿ , ನಿರವಯಭಕ್ತಿ , ಸಚ್ಚಿದಾನಂದಭಕ್ತಿ, ಪರಿಪೂರ್ಣಭಕ್ತಿ ಮೊದಲಾದ ಷಡ್ವಿಧಭಕ್ತಿ ಯೆ ಅಂತರಂಗದ ಸುಚಿತ್ತ ಸುಬುದ್ಧಿ ನಿರಹಂಕಾರ ಸುಮನ ಸುಜ್ಞಾನ ಸದ್ಭಾವಂಗಳಲ್ಲಿ, ಕ್ಷೀರದೊಳು ಘೃತ, ಬೀಜದೊಳು ವೃಕ್ಷ, ಪಾಷಾಣದೊಳಗ್ನಿ ಅಡಗಿಪ್ಪಂತೆ, ಅಂಗಾಪ್ತಸ್ಥಾನ ಸದ್ಭಾವವೆಂಬ ಚತುರ್ವಿಧಭಕ್ತಿಯೆ ಸಾಕಲ್ಯವಾಗಿ, ಪುಷ್ಪದೊಳು ಪರಿಮಳ, ಫಲಾದಿಗಳಲ್ಲಿ ಫಳರಸವೆಸೆದಂತೆ, ಘಟಸರ್ಪ ತನ್ನ ಮಾಣಿಕ್ಯದ ಬೆಳಕಿನಲ್ಲಿ ಆಹಾರವ ಕೊಂಡಂತೆ, ಸಾಕಾರವಾಗಿ ಪರಿಶೋಭಿಸಿ, ಗುರುಚರಮಾರ್ಗದಿಂದ ಅಷ್ಟವಿಧಭಕ್ತಿವಿಡಿದು ಬೆಳಗುವ ಮಹಾಲಿಂಗಶರಣನ ವಿವರವೆಂತೆಂದಡೆ : ಮಹದರುವೆಂಬ ಗುರುವಿನಲ್ಲಿ ಶ್ರದ್ಧೆ, ಮಹಾಜ್ಞಾನವೆಂಬ ಲಿಂಗದಲ್ಲಿ ನೈಷೆ* , ಪೂರ್ಣಾನುಭಾವವೆಂಬ ಜಂಗಮದಲ್ಲಿ ಸಾವಧಾನ, ಕರುಣಾಮೃತವೆಂಬ ಪಾದೋದಕದಲ್ಲಿ ಅನುಭಾವ, ಕೃಪಾನಂದರಸವೆಂಬ ಪ್ರಸಾದದಲ್ಲಿ ಆನಂದ, ಚಿದ್ಬೆಳಗಿನ ಪ್ರಕಾಶವೆಂಬ ಭಸಿತದಲ್ಲಿ ಸಮರಸ, ದೃಗ್ದೃಷ್ಟಿ ಪುಂಜರಂಜನೆಯೆಂಬ ಮಣಿಮಾಲೆ ಕುಕ್ಷಿಗಳಲ್ಲಿ , ನಿಃಕಳಂಕ ಆನಂದಮಯವೆಂಬ ಚಿದ್ಘೋಷ ಮಂತ್ರದಲ್ಲಿ , ನಿರವಯಭಕ್ತಿ ಕಡೆಯಾದ ಅಷ್ಟವಿಧಭಕ್ತಿಯೆ ನಿಧಿನಿಧಾನವಾಗಿ, ಜಗಜಗಿಸಿ ಬೆಳಗುವ ಮಹಾಲಿಂಗಶರಣಚರಗುರುಗಳ ತನ್ನ ಸ್ವಾನುಭಾವಜ್ಞಾನದಿಂದರಿದು, ಅಂಗ ಮನಪ್ರಾಣಭಾವನಿಷಾ*ಚಾರದಲ್ಲಿ ಸಾಕಾರಲೀಲೆಗೆ ಪಾವನಾರ್ಥವಾಗಿ, ಷೋಡಶಭಕ್ತಿ ಜ್ಞಾನ ವೈರಾಗ್ಯ ಸ್ಥಳ ಕುಳ ಸಕೀಲ ಸಂಬಂಧಾಚರಣೆಯ ವೀರಶೈವ ಪರಿವರ್ತನೆ ಅರ್ಪಿತಾವಧಾನ ಕೊಟ್ಟುಕೊಂಬ ನಿಲುಕಡೆ, ಸಗುಣ ನಿರ್ಗುಣ ಸತ್ಯಶುದ್ಧಕಾಯಕ, ಸದ್ಧರ್ಮ ನಡೆನುಡಿ, ಘನಗಂಭೀರ ಪರುಷಸೋಂಕುಗಳೆ ಸಾರಿ ತೋರಿ ಬೀರಿ ಊರಿ ಜಾರಿ ಹಾರಿ ಸೈರೆಮೀರಿ ಮಹಾಬಯಲೊಳಗೆ ಬಯಲಾಗಿ ತೋರುವ ನಿಃಕಳಂಕ ನಿರಾಲಂಬ ನಿಃಪ್ರಪಂಚ ನಿರಾತಂಕ ನಿರುಪಾಧಿಕ ನಿರ್ಭೇದ್ಯ ನಿಶ್ಚಿಂತ ನಿಃಕಾಮ ನಿಃಫಲದಾಯಕ ನಿಃಕ್ರೋಧ ನಿರಾಸಿಕ ನಿರ್ವಾಣಿ ನಿರ್ಮರಣ ನಿರ್ಜಾತ ನಿಜಾನಂದಭರಿತಚರಿತ ನಿರಹಂಕಾರ ನಿರ್ದೇಹ ನಿರ್ಲಂಪಟ ನಿರ್ವ್ಯಸನಿ ನಿರ್ಭಾಗ್ಯ ನಿಃಸಂಸಾರಿ ನಿವ್ರ್ಯಾಪಾರಿ ನಿರ್ಮಲ ನಿಸ್ಸಂಗ ನಿಃಶೂನ್ಯ ನಿರಂಜನ ನಿರವಯ ಘನಗಂಭೀರ ಪರಾತ್ಪರ ಅಗಮ್ಯ ಅಪ್ರಮಾಣ ಅಗೋಚರ ಅನಾಮಯ ಅಗಣಿತ ಅಚಲಾನಂದ ಅಸಾಧ್ಯಸಾಧಕ ಅಭೇದ್ಯಭೇದಕ ಅನಾದಿಭಕ್ತ ಮಹೇಶ ಪ್ರಸಾದಿ ಪ್ರಾಣಲಿಂಗಿ ಶರಣೈಕ್ಯ ನಿರವಯಪ್ರಭು ಮಹಾಂತ ತಾನೇ ನೋಡಾ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
--------------
ಮೂರುಸಾವಿರ ಮುಕ್ತಿಮುನಿ
-->