ಅಥವಾ

ಒಟ್ಟು 3 ಕಡೆಗಳಲ್ಲಿ , 3 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

‍ಋಣ ತಪ್ಪಿದ ಹೆಂಡಿರಲ್ಲಿ ಗುಣ ತಪ್ಪಿದ ನಂಟರಲ್ಲಿ ಜೀವವಿಲ್ಲದ ದೇಹದಲ್ಲಿ ಫಲವೇನೋ? ಆಳ್ದನೊಲ್ಲದಾಳಿನಲ್ಲಿ ಸಿರಿತೊಲಗಿದರಸಿನಲ್ಲಿ ವರವಿಲ್ಲದ ದೈವದಲ್ಲಿ ಫಲವೇನೋ? ಕಳಿದ ಹೂವಿನಲ್ಲಿ ಕಂಪನು ಉಳಿದ ಸೊಳೆಯಲ್ಲಿ ಪೆಂಪನು ಕೊಳೆಚೆನೀರಿನಲ್ಲಿ ಗುಣವನರಸುವಿರಿ! ಮರುಳೆ ವರಗುರು ವಿಶ್ವಕ್ಕೆಲ್ಲ ಗಿರಿಜಾಮನೋವಲ್ಲಭ ಪರಮ ಕಾರುಣಿಕ ನಮ್ಮ ಕೂಡಲಸಂಗಮದೇವ
--------------
ಬಸವಣ್ಣ
ಧರೆಯ ಮೇಗಣ ಹುಲ್ಲೆ, ಚಂದ್ರಮನೊಳಗಣ ಎರಳೆ, ಕೂರ್ತಡೆ ಫಲವೇನೋ ಕೂಟವಿಲ್ಲದನ್ನಕ್ಕ ಇಂಬನರಿಯದ ಠಾವಿನಲ್ಲಿ ಕಣ್ಣೋಟವ ಮಾಡಿದಡೆ, ತುಂಬಿದ ತೊರೆಯ ನಡುವೆ ಮಾಮರ ಕಾತಂತೆ. ಚೆನ್ನಮಲ್ಲಿಕಾರ್ಜುನದೇವಾ, ದೂರದ ಸ್ನೇಹವಮಾಡಲು ಬಾರದ ಭವಕ್ಕೆ ಬಂದೆ.
--------------
ಅಕ್ಕಮಹಾದೇವಿ
ಪೃಥ್ವಿ ಅಪ್ಪು ತೇಜ ವಾಯುವಾಕಾಶವೆಂಬ ಪಂಚಭೂತ ವಿಕಾರತನುಗಳು ಲಿಂಗಪೂಜೆಯ ಬೆಬ್ಬನೆ ಬೆರವರು ಉಪದೇಶಮಾರ್ಗ. ತನುಮನಧನವ ಪ್ರಾಣಾದಿಗಳ ಗುರುಲಿಂಗಕ್ಕೆ ಕೊಟ್ಟೆವೆಂಬರು ನೋಡಾ! ನಾಚಿಕೆಯಿಲ್ಲದ ಹೇಸಿಗೆಗೆಟ್ಟ ಉನ್ಮತ್ತರು. ಲಿಂಗವಿದ್ದುದಕ್ಕೆ ಫಲವೇನೋ ಅಂಗವಿಕಾರವಳಿಯದನ್ನಕ್ಕ, ಇಂದ್ರಿಯ ಸಂಗ ಮರೆಯದನ್ನಕ್ಕ ಪ್ರಸಾದವ ಕೊಂಡೆವೆಂಬರು ನೋಡಾ ಬಹುಭಾಷಿಗಳು. ನಿಧಾನವಿದ್ದ ನೆಲ ನುಡಿವುದು. ಭೂತವಿಡಿದ ಮನುಷ್ಯ ತನ್ನ ತಾ ಮರೆದಿಹ. ಲಿಂಗವಿದ್ದುದಕ್ಕೆ ಪ್ರಮಾಣವೇನೋ ನಡೆತತ್ವ ನುಡಿ ಸಿದ್ಧಾಂತವಾಗಬೇಕು. ಪಂಚೇಂದ್ರಿಯಂಗಳ ಉನ್ಮತ್ತವಡಗಬೇಕು. ಸದಾಚಾರವೆಂತಳವಡುವದು ಸದಾಚಾರ ತನ್ನಲ್ಲಿ ಸಾಹಿತ್ಯವಾಗದನ್ನಕ್ಕ. ಇಹಪರವನರಸುವ ಸಂದೇಹಿಗಳಿಗೆ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ನಿಲ್ಲು ಮಾಣು.
--------------
ಘಟ್ಟಿವಾಳಯ್ಯ
-->