ಅಥವಾ

ಒಟ್ಟು 10 ಕಡೆಗಳಲ್ಲಿ , 9 ವಚನಕಾರರು , 10 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವೇಷವ ಹೊತ್ತು , ಆಶೆ ರೋಷವ ಬಿಡದೆ, ದೇಶವ ತಿರುಗಿ, ಹೊರವೇಷದ ವಿಭೂತಿ ರುದ್ರಾಕ್ಷಿ ಕಾವಿ ಕಾಷಾಯಾಂಬರವ ಧರಿಸಿ ಫಲವೇನು? ಕಾಮ ಕೆಡದು, ಕ್ರೋಧ ಬಿಡದು, ಲೋಭ ಹಿಂಗದು, ಮೋಹ ನಿಲ್ಲದು, ಮದ ಹೆರೆಸಾರದು, ಮತ್ಸರ ಬೆಂದುಹೋಗದು. ಇವೆಲ್ಲ ಸಹಿತ ಜಂಗಮಭಕ್ತರೆಂದು ಸುಳಿವವರ ಕಂಡು ನಾಚಿತ್ತು ಎನ್ನ ಮನ. ಭಕ್ತಜಂಗಮ ಘನವನೇನೆಂದು ಉಪಮಿಸುವೆ ? ರೂಪಿನ ಹಾಗೆ, ನೆಳಲಿನ ಹಾಗೆ, ದೇಹದ ಹಾಗೆ, ಪ್ರಾಣದ ಹಾಗೆ, ಭಾವದ ಹಾಗೆ, ನಿರ್ಭಾವದ ಹಾಗೆ, ಉರಿಯ ಹಾಗೆ, ಕರ್ಪುರದ ಹಾಗೆ, ಆವಿಯ ಹಾಗೆ, ನೀರ ಹಾಗೆ, ಎರಡೊಂದಾದರೆ ತೆರಹಿಲ್ಲ. ಆ ನಿಲುವಿಂಗೆ ನಮೋ ನಮೋ ಎನುತಿರ್ದೆ ಕಾಣಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ .
--------------
ಹಡಪದ ಅಪ್ಪಣ್ಣ
ಆರು ನೆಲೆ ಮಂಟಪದ ಕೋಣೆಯಲ್ಲಿ ಆರು ಜ್ಯೋತಿಯ ಮುಟ್ಟಿಸಿ ಆ ಜ್ಯೋತಿಯ ಬೆಳಗಿನಲ್ಲಿ ಆರು ಲಿಂಗವ ನಿರ್ಮಿಸಿ ಆರು ಲಿಂಗದ ಪ್ರತುಮೆಯಲ್ಲಿ ಆರು ಹಂತದ ಸೋಪಾನದಲ್ಲಿ ಮಹಾ ನಿರ್ಮಳವೆಂಬ ದುರ್ಗಮಂ ನಿರ್ಮಿಸಿ ಆ ದುರ್ಗದಲ್ಲಿ ಅರಸಂಗೆ ಕಾಲಿಲ್ಲದಾಕೆಯ ಮದುವೆಯ ಮಾಡಿ ತೂತಿಲ್ಲದ ಭೋಗಕ್ಕೆ ಕೂಡಿ ಬಿಂದುವಿಲ್ಲದೆ ಮಕ್ಕಳಾದ ಪರಿಯ ನೋಡಾ. ತೊಟ್ಟಿಲಿಲ್ಲದೆ ಹಾಸಿ ಮಲಗಿಸಿ ನಿದ್ರೆಗೆಯ್ಸಿದ ಶರಣನಾಚರಣೆಯನೆಂತೆಂಬೆನು. ಇದ ಕಂಡು ನಡೆಯಲರಿಯದೆ, ತಮ್ಮ ಮನ ಬಂದಂತೆ ನಡೆವರು. ಶಿವಯೋಗಕ್ಕೆ ದೂರವಾದರು ನೋಡಾ. ಹೊನ್ನ ಕಟ್ಟಿ ವಿರಕ್ತನು ಬ್ಥಿಕ್ಷೆಯೆನಲಾಗದು. ಭಕ್ತನ ಗೃಹವೆಂದು ಜಂಗಮವು ಹೋದಲ್ಲಿ ಆ ಭಕ್ತನು ಎದ್ದು ನಮಸ್ಕರಿಸಿ ತನ್ನಲ್ಲಿರ್ದ ಪದಾರ್ಥವಂ ತಾನು ಸಹವಾಗಿ ಶಿವಾರ್ಪಣವ ಮಾಡ[ಬ]ಹುದಲ್ಲದೆ. ಇದಲ್ಲದೆ, ಜಂಗಮವ ಬೇರೆ ಕುಳ್ಳಿರಿಸಿ ಉಂಡನಾದರೆ ಅವನಿಗೆ ದೀಕ್ಷೆಯ ಕೊಟ್ಟ ಗುರುವಿಗೆ ತನ್ನ ಮಾರ್ಗವ ಬಿಟ್ಟು ಶಿವಭಕ್ತನಾದರೆ ಮೋಕ್ಷವಿಲ್ಲವಾಗಿ. ಕೋಳಿ ಒಂದು ಕುಟುಕ ಕಂಡರೆ ತನ್ನ ಮರಿಗೆ ತೋರದುಳಿವುದೆ? ಕಾಗೆ ಒಂದಗುಳ ಕಂಡರೆ ತನ್ನ ಬಳಗವ ಕರೆಯದುಳಿವುದೆ? ಶಿವಭಕ್ತನಾಗಿ ತನ್ನ ಲಿಂಗವ ಪೂಜಿಸಿ ಜಂಗಮವ ಮರೆದವನಾದರೆ ಸತ್ತ ದನವಿಗೆ ನರಿ ಹೋದಂತಾಯಿತ್ತು. ಆ ನರಿ ಹೋದ ನೆನಹಿನಲ್ಲಿ ನಾಯಿ ಹೋದಂತಾಯಿತ್ತು. ಇಷ್ಟಕ್ಕಿಂದ ಕರಕಷ್ಟವೆ ಶಿವಭಕ್ತರು? ಷಟ್ಚಕ್ರದ ಭಾವದಲ್ಲಿವೊಪ್ಪಿರುವ ಶಿವಶರಣರು ತಮ್ಮ ನಡೆ ನುಡಿಗಳ ಬಿಡದೆ ನಡೆವುದು. ಅದ ಕಂಡು ಕಣ್ದೆರೆದು ನೋಡಿದೆನಯ್ಯ. ಆವ ವರ್ತನೆಯಲ್ಲಿ ತಾನಿದ್ದರೇನು? ಆವ ಭಾವ ಹೇಂಗಿದ್ದರೇನು? ನಮ್ಮಾಚರಣೆ ನಮಗೆ ಶುದ್ಧ. ಗುರು ಕಲ್ಪಿತನಾದರು ಅವನು ಹಿಂದೆ ಸಂಬಂಧವಾದ ಕಾರಣ, ಅವನಿಗೆ ಬಂಧ ದೊರಕುವದಲ್ಲದೆ ನನಗೆ ದೊರಕದೆಂದು ತಾನು ನಿಶ್ಚೆಸಿದರೆ ತನಗೆ ದೊರಕಬಲ್ಲದೆ? ತಾನು ಪೂರ್ವದಲ್ಲಿ ತಾ ಪಡದುದು ತನಗೆ ತಪ್ಪುವದೆ? ಪ್ರಾಣಿಹಿಂಸೆಯ ಮಾಡುವಾತನಾದರೆಯು ಅವನಿಗೆ ಕಲ್ಪಿತವೇತಕ್ಕೆ? ಹಿಂದೆ ಅವನು ಶಿವನಪ್ಪಣೆವಿಡಿದು ಬಂದ ಕಾರಣ ಅವನಿಗೆ ಬಂದಿತಲ್ಲದೆ ಗಗನದ ಮಂಟಪದ ಮೇಲೆ ಊಧ್ರ್ವಮುಖದ ಗದ್ದುಗೆಯ ಮಾಡಿ ಮಹಾಪ್ರಕಾಶವೆಂಬ ಬೆಳಗಂ ತೋರಿ ಓಂಕಾರವೆಂಬ ಲಿಂಗವ ಮೂರ್ತಮಾಡಿಸಿ ಅದಕ್ಕೆ ಸದ್ಭಾವವೆಂಬ ಪುಷ್ಪವ ತಂದು ಜ್ಞಾನಪ್ರಕಾಶವೆಂಬ ಜ್ಯೋತಿಯಂ ಪೊತ್ತಿಸಿ ಸದ್ಭಕ್ತಿಯೆಂಬ ನೈವೇದ್ಯಮಂ ಮಾಡಿ ನಿರ್ಮಳವೆಂಬ ಪೂಜಾರಿಯಾಗಿರ್ಪನು. ಇದನರಿಯದೆ ತಮ್ಮ ಮನ ಬಂದಂತೆ ಇಪ್ಪವರ ಲಿಂಗಹೋದವನಾದರು ಅವನ ಕಣ್ಣಲ್ಲಿ ಕಂಡು ಅವನಷ್ಟಕ್ಕಲ್ಲದೆ ಅನ್ಯರ ಗೃಹವ ಬಿಡಲೇತಕ್ಕೇ? ಪಾಪವ ಮಾಡಿದನಾರು ಅವನ ಗೃಹಕ್ಕಲ್ಲದೆ ಅವನೊಂದಿಗೆ ಬೆರಸಿದವನಾದರು ಅವನಿಗೆ ಪಾಪ ಸಂಭವಿಸುವುದುಂಟೇ? ಇದ ಸಂಕಲ್ಪವ ಮಾಡಿ ಬಿಡಲೇತಕ್ಕೆ? ಒರ್ವಾನೊಬ್ಬನು ಭವಿಯ ಒಡನಾಡಲು ಅವನ ಪಾಪವು ಅವನಲ್ಲಿಪ್ಪುದಲ್ಲದೆ ಮಿಕ್ಕಿನ ಗೃಹಕ್ಕೆ ಸಂಬಂಧವೇನು? `ಮಾಡಿದವರನಲ್ಲದೆ ಮಿಕ್ಕಿನವರ ಸಂಕಲ್ಪವ ಮಾಡಲಾಗದು'ಯೆಂಬುದು ಗುರುವಚನ. ಹೆಣ್ಣು ಬಿಂದು ಸಂಬಂಧವಾಗಲು ಆ ಭೋಗಕ್ಕೆ ಶರಣನು ಅದನು ಮನದಲ್ಲಿ ಕಂಡು ಸಂತೋಷವಾಗಿಪ್ಪ. ಇಂತೀ ಭಾವಶುದ್ಧವುಳ್ಳಾತನು ಮತ್ರ್ಯಲೋಕಕ್ಕೆ ಮರಳಿ ಬಾರನೆಂಬುದು. ಶರಣ ಸಕಲವಿದ್ಯವ ಕಲಿತು ಫಲವೇನು? ನಿಂದ್ಯನೆ ದೊರಕೊಂಡಮೇಲೆ? ಹುಣ್ಣು ಹುಗಳು ಕೋಷ್ಠವಾಗಿರಲು, ಅವರ ಕಂಡು ಜರಿಯಲಾರದೆಂಬುದೆನ್ನ ಭಾಷೆ. ಇಂದ್ರಿಯಸುಖಕ್ಕೆ ಹೋಗಿ ಬಿದ್ದು ಶಿವಮಾಡಿದರಾಯಿತ್ತೆಂಬ ಅವಿಚಾರದ ನುಡಿಯ ಕೇಳಲಾಗದು. ತನ್ನ ಮನವು ಶುದ್ಧವಾದ ಮೇಲೆ, ಸಕಲ ಸುಖಂಗಳು ತನಗುಂಟಲ್ಲದೆ, ಜ್ಞಾನಿಗೆ ಕತ್ತಲೆಯಿಲ್ಲ. ಅಜ್ಞಾನಿಗೆ ಪಾಪವಿಲ್ಲ. ಇದನರಿದು, ಮುಂದುಗೊಂಡು ತಿರುಗುವ, ಅಣ್ಣಗಳ ಕಂಡು, ನಗುತಿರ್ಪರು ನಿಮ್ಮ ಶರಣರು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಮಜ್ಜನಕ್ಕೆರೆವರೆಲ್ಲ, ಇದ್ದಲ್ಲಿ ಫಲವೇನು? ಮುದ್ರಾಧಾರಿಗಳಪ್ಪರಯ್ಯಾ. ಲಿಂಗದಲ್ಲಿ ನಿಷೆ*ಯಿಲ್ಲ, ಜಂಗಮದಲ್ಲಿ ಪ್ರೇಮವಿಲ್ಲ ವೇಷಧಾರಿಗಳಪ್ಪರಯ್ಯಾ. ಲಾಂಛನ ನೋಡಿ ಮಾಡುವ ಭಕ್ತಿ, ಸಜ್ಜನಸಾರಾಯವಲ್ಲ, ಗುಹೇಶ್ವರ ಮೆಚ್ಚನಯ್ಯಾ.
--------------
ಅಲ್ಲಮಪ್ರಭುದೇವರು
ಪಂಚಭೂತದನುವರಿದು ಸುಸಂಗನಾದಬಳಿಕ ಪಂಚಮುಖನು ಬೇರುಂಟೆ ತನ್ನೊಳಗಲ್ಲದೆ? ವಂಚನೆಯೊಳು ಪಂಚಬ್ರಹ್ಮವನೋದಿ ಫಲವೇನು? ಈಚುವೋದ ತೆನೆಯಂತೆ ವಂಚನೆಯಿಲ್ಲದೆ ಸಂಚಿಸಿಕೊಳ್ಳನೆ ಕಂಚಿಯ ಕೈಲಾಸಕ್ಕೆ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ?
--------------
ಉರಿಲಿಂಗಪೆದ್ದಿ
ಹಿಂದಣ ಜನ್ಮದಲ್ಲಿ ಹಲು ಸುಕೃತಂಗಳಂ ಮಾಡಿಕೊಂಡ ದೆಸೆಯಿಂದ ನೀವು ಹುಟ್ಟಿದಿರಯ್ಯ. ನೀವು ಮುಂದಕ್ಕೆ ಶಿವಭಕ್ತಿ ದೊಡ್ಡಿತ್ತೆಂದು ನಂಬಲರಿಯದೆ ಭ್ರಮಿತರಾಗಿ ಘನತರಸುಖವಂ ನೀಗಿ ಭಕ್ತಿಪಾಶದೆಶೆಯೊಳು ಇರಲೊಲ್ಲದೆ ಹಿಂದಣ ಅರಿಕೆಯಂ ಮರೆದು ಮುಂದಣ ಅರಿಕೆಯಂ ತೊರೆದು ಕಂಡ ಕಂಡ ಹಂದಿಯೊಳಾಡಿ ನರಕವ ತಿಂಬಂತೆ ಬೆಂದ ಸಂಸಾರವೆಂಬ ಹೃದಯಕೂಪದೊಳು ಮುಳುಗಾಡುವ ಲೋಕದ ಮಂದಿಯಂತೆ ಹೊನ್ನೆನ್ನದು ಹೆಣ್ಣೆನ್ನದು ಮಣ್ಣೆನ್ನದೆಂಬ ಭಿನ್ನಭಾವದೊಳು ಮನಸಂದು, ಹೆಂಡರಿಗಾಗಬೇಕು ಮಕ್ಕಳಿಗಾಗಬೇಕೆಂಬ ಭಂಡ ಮೂಕೊರೆಯ ಮೂಳಹೊಲೆಯರಿರಾ, ನೀವು ಕೇಳಿರೋ. ನೀವು ಶಿವಭಕ್ತರ ಬಸುರಲ್ಲಿ ಹುಟ್ಟಿ ಫಲವೇನು? ಮಾತಿಂಗೆ ಲಿಂಗವ ಕಟ್ಟಿದಿರಿ, ವರ್ತನೆಗೊಬ್ಬ ಗುರುವೆಂಬಿರಿ. ಆ ಗುರು ತೋರಿದ ಚರಲಿಂಗಕ್ಕೆ ಬೋನವಿಲ್ಲ, ಆಚಾರವಿಲ್ಲ. ಕೀಳು ದೈವದ ಬೆನ್ನೊಳು ಹರಿದಾಡುವ ನರಕಿಯ ಯಮನವರು ಕೊಂಡೊಯ್ದು ನಡುವಿಂಗೆ ಗಿರಿಕಿಯನಿಕ್ಕಿ ಮೆಟ್ಟಿ ಮೆಟ್ಟಿ ಬಿಗುವಾಗ ಹಲುಗಿರಿಕೊಂಡು ಹೋಗುವ ಮಾನವರು ಜಗದರಿಕೆಯಲ್ಲಿ, ನರಕದಲ್ಲಿ ಬೀಳುವದ ಕಂಡು ನಗುತಿರ್ದ ಎನ್ನೊಡೆಯನಂಬಿಗರ ಚೌಡಯ್ಯನು.
--------------
ಅಂಬಿಗರ ಚೌಡಯ್ಯ
ಮನನ ಮಾಡಿದ ಮಂತ್ರ ಮಹಾಪದವಿಯ ಕೊಟ್ಟಿತ್ತಯ್ಯಾ. ಮನನವರಿಯದ ಮಂತ್ರ ಮಂತ್ರದಲ್ಲಿಯ ವಸ್ತುವ ಕೊಟ್ಟಿತ್ತಯ್ಯಾ. ಮಂತ್ರವೇನು ಮನವೆ? ಕಪಿಲಸಿದ್ಧಮಲ್ಲಿಕಾರ್ಜುನನ ಫಲವೇನು? ವಿಚಾರದಿಂದ, ವಿಶ್ವಾಸದಿಂದಗಣಿತ ಫಲವ ಕೊಟ್ಟಿತ್ತಯ್ಯಾ.
--------------
ಸಿದ್ಧರಾಮೇಶ್ವರ
ಆಚಾರದ ಅರಿವು ಹೊರಗಾದ ಮೇಲೆ. ಅಂಗದ ಮೇಲೆ ಲಿಂಗವಿದ್ದು ಫಲವೇನು? ಕುರುಡನ ಕೈಯ ಕನ್ನಡಿ ಇದ್ದ ಹಾಗೆ, ಬರಡಾವಿಗೆ ಶಿಶು ಹುಟ್ಟಿದ ಹಾಗೆ, ಕುರುಡಗೆ ಕಣ್ಣೆಬೇನೆ ಬಂದ ಹಾಗೆ, ಕುರುಡಿಗೆ ಮಕ್ಕಳಾದ ಹಾಗೆ, ದೀನನ ಮನೆಯಲ್ಲಿ ಹೊನ್ನಿದ ಹಾಗೆ. ಇವರೇನ ಮಾಡಿದರೇನು? ತಮ್ಮ ಹಾನಿವೃದ್ಧಿಯನರಿಯದನ್ನಕ್ಕ, ಕಾಲ ಕಾಮಾದಿಗಳ ಬಾಯೊಳಗೆ ಸಿಲ್ಕಿ, ಅಗಿದಗಿದು ತಿನಿಸಿಕೊಳುತಿಪ್ಪರಲ್ಲ, ಎನ್ನ ದೇವ ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಸತ್ಯವಿಲ್ಲದ ಭಕ್ತಿಯ ಸಾವಿರ ವರುಷ ಮಾಡಿದರೇನು? ನಿಷೆ*ಯಿಲ್ಲದ ಪೂಜೆಯನೇಸುಕಾಲ ಮಾಡಿದರೇನು? ಭಾವ ನೆಲೆಗೊಳ್ಳದ ಪ್ರಸಾದವನೇಸುಕಾಲ ಕೊಂಡಲ್ಲಿ ಫಲವೇನು? ಅಭ್ಯಾಸವಾಯಿತ್ತಲ್ಲದೆ, ಒಬ್ಬರೊಬ್ಬರ ಕಂಡು ಮಾಡುವರಲ್ಲದೆ, ಸಹಜವಿಲ್ಲ, ಸಮ್ಯಕ್ಕಿಲ್ಲ, ನಿಜವಿಲ್ಲ. ಇದು ಕಾರಣ, ಇಂತಪ್ಪವರ ಭಕ್ತರೆಂದೆನಲಾಗದು, ಕೂಡಲಚೆನ್ನಸಂಗಯ್ಯಾ ನೀ ಸಾಕ್ಷಿಯಾಗಿ ಛೀಯೆಂಬೆನು.
--------------
ಚನ್ನಬಸವಣ್ಣ
ವೃಕ್ಷ ಬೀಜದೊಳಗಡಗಿ, ಬೀಜ ವೃಕ್ಷದೊಳಗಡಗಿ ಉಭಯವಿದು ಫಲವೇನು? ಆದಿ ಧರೆಯಿದಲ್ಲದೆ ಉಭಯನಾಮವಿಲ್ಲ. ಅರಿವಿನ ಅರಿಕೆ, ಕುರುಹಿನ ಪೂಜೆ ನೆರಿಗೆಯಾಗಬೇಕೆ ? ಅಲೇಖನಾದ ಶೂನ್ಯ ಬಲುಗಲ್ಲಿನ ನೆಲೆಯ ದಾಂಟಿದೆಯಲ್ಲಾ.
--------------
ವಚನಭಂಡಾರಿ ಶಾಂತರಸ
ಗುರುವೆಂಬ ಅಂಗವ ಧರಿಸಿದಡೇನು? ಚಿತ್ರದ ಸತಿಯ ಕೈಯ ದೀಪಕ್ಕೆ ಮೊತ್ತದ ತಮ ಹರಿದುದುಂಟೆ? ನಿಃಕಳೆಯ ಲಿಂಗವ ಧರಿಸಿದಲ್ಲಿ ಫಲವೇನು? ಮೃತ್ತಿಕೆಯ ಬೊಂಬೆಯ ಕೈಯಲ್ಲಿ ನಿಶ್ಚಯದ ಖಂಡೆಯವಿರೆ, ಕುಟ್ಟಬಲ್ಲುದೆ? ವಿಧಾಂತ ರೂಪು ಲಾಂಛನದ ತೊಟ್ಟು, ಬಹುರೂಪಿಯಾದಲ್ಲಿ ನೆರೆ ಈಶನ ಯುಕ್ತಿಯ ವಿರಕ್ತಿ ಜಂಗಮವಾಗಬಲ್ಲನೆ? ಇಂತೀ ಮಾತಿನ ಬಳಕೆಯ ವೇಷವ ಬಿಟ್ಟು, ನಿಜತತ್ವದ ಸಾಕಾರವೆ ಮೂರ್ತಿಯಾದ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ತಾನೆ.
--------------
ಶಿವಲೆಂಕ ಮಂಚಣ್ಣ
-->