ಅಥವಾ

ಒಟ್ಟು 48 ಕಡೆಗಳಲ್ಲಿ , 13 ವಚನಕಾರರು , 31 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಂತ್ರವ ಕಲಿತಡೇನು ? ಪುರಶ್ಚರಣೆಯ ಮಾಡಿದಲ್ಲದೆ ಸಿದ್ಧಿಸದು. ಮದ್ದನರಿದು ಫಲವೇನು ? ಪ್ರಯೋಗಿಸಿಕೊಂಡಲ್ಲದೆ ಮಾಣದು. ಲಿಂಗವನರಿದಡೇನು ? ನೆನೆದಲ್ಲದೆ ಸಿದ್ಧಿಸದು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ರೂಪನರ್ಪಿಸಿ ಫಲವೇನು, ರುಚಿಯನರ್ಪಿಸದನ್ನಕ್ಕ ? ರುಚಿಯನರ್ಪಿಸಿ ಫಲವೇನು ಪರಿಣಾಮವನರ್ಪಿಸದನ್ನಕ್ಕ ? ಪರಿಣಾಮವನರ್ಪಿಸಿ ಫಲವೇನು ತನ್ನನರ್ಪಿಸದನ್ನಕ್ಕ ? ತನ್ನನರ್ಪಿಸಿ ಫಲವೇನು, ಕೂಡಲಚೆನ್ನಸಂಗಯ್ಯನೆಂಬ ಭಾವ ಬರಿದಾಗದನ್ನಕ್ಕ ?
--------------
ಚನ್ನಬಸವಣ್ಣ
ಇಳೆಯಮೇಲೆ ಎಲುವಾಲದ ಮರನಿರ್ದುಫಲವೇನು ? ಸಾರಾಯಹೀನ ಕಾಯದಮೇಲೆ ಲಾಂಛನವಿರ್ದು ಫಲವೇನು ? ಭಕ್ತಿ ಜ್ಞಾನ ವೈರಾಗ್ಯಹೀನ ಭಾರ ಭಾರ ಭವಭಾರ ಕಾಣಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ನುಡಿದರೆ ಗುರುವಾಗಿ ನುಡಿಯಬೇಕು, ನಡೆದರೆ ಪರವಾಗಿ ನಡೆಯಬೇಕು. ಕುಳಿತರೆ ಲಿಂಗವಾಗಿ ಕುಳಿತಿರಬೇಕು, ಇದ್ದರೆ ಜಂಗಮವಾಗಿ ಇರಬೇಕು. ಈ ನಾಲ್ಕರ ಹೊಂದಿಗೆಯನರಿಯದವರು ಎಷ್ಟು ದಿನವಿದ್ದರೂ ಫಲವೇನು ಹೇಳಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ ?
--------------
ಹಡಪದ ಅಪ್ಪಣ್ಣ
ಹಸಿದಡೆ ಉಣಬಹುದೆ ನಸುಗುನ್ನಿ ತುರುಚಿಯನು ? ಅವಸರಕಿಲ್ಲದ ದೊರೆಗೆ ಅರ್ಥವಿದ್ದಲ್ಲಿ ಫಲವೇನು ? ಸಾಣೆಯ ಮೇಲೆ ಶ್ರೀಗಂಧವ ತೇವರಲ್ಲದೆ ಇಟ್ಟಿಗೆಯ ಮೇಲೆ ತೇಯಬಹುದೆ ? ರಂಭೆಯ ನುಡಿ ಸಿಂಬಿಗೆ ಶೃಂಗಾರವೆ ? ಜ್ಞಾನಿಯ ಕೂಡೆ ಜ್ಞಾನಿ ಮಾತನಾಡುವನಲ್ಲದೆ ಅಜ್ಞಾನಿಯ ಕೂಡೆ ಜ್ಞಾನಿ ಮಾತನಾಡುವನೆ ? ಸರೋವರದೊಳಗೊಂದು ಕೋಗಿಲೆ ಸ್ವರಗೆಯ್ಯುತ್ತಿದ್ದಡೆ ಕೊಂಬಿನ ಮೇಲೊಂದು ಕಾಗೆ ಕರ್ರೆನ್ನದೆ ?_ಅಂತೆ ಇದ್ದತ್ತು. ಬರದಲ್ಲಿ ಬರಡ ಕರೆದೆಹೆನೆಂದು, ಕಂದಲ ಕೊಂಡು ಹೋದರೆ, ಕಂದಲೊಡೆದು ಕೈ ಮುರಿದಂತಾಯಿತ್ತು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ನೂರನೋದಿ ನೂರ ಕೇಳಿ ಏನು ಆಸೆ ಬಿಡದು, ರೋಷ ಪರಿಯದು. ಮಜ್ಜನಕ್ಕೆರೆದು ಫಲವೇನು ಮಾತಿನಂತೆ ಮನವಿಲ್ಲದ ಜಾತಿ [ಡಂ]ಬರ ನೋಡಿ ನಗುವ ನಮ್ಮ ಕೂಡಲಸಂಗಮದೇವ.
--------------
ಬಸವಣ್ಣ
ಕುರುಹಿನ ರೂಹಿನ ಕೈಯಲ್ಲಿ ದರ್ಪಣವಿದ್ದಲ್ಲಿ ಫಲವೇನು ? ಒಂದಕ್ಕೆ ಜೀವವಿಲ್ಲ , ಒಂದಕ್ಕೆ ತೇಜವಿಲ್ಲ . ಕಾರಣವರಿಯದ ನಿಃಕಾರಣ ಮನುಜರ ಕೈಯಲ್ಲಿ ಲಿಂಗವಿದ್ದು ಫಲವೇನು ? ಅಂಗರಹಿತವಾದ ಸಂಗವನರಿಯರು. ಸಂಗರಹಿತವಾದ ಸುಖವನರಿಯರು. ನಿಸ್ಸಂಗಿ ನಿಂದ ನಿಲವ, ಸಕಳೇಶ್ವರದೇವಾ, ನಿಮ್ಮ ಶರಣ ಬಲ್ಲ .
--------------
ಸಕಳೇಶ ಮಾದರಸ
ಸತ್ಯ ಶೌಚ ನಿತ್ಯನೇಮವ ತಪ್ಪದೆ ಮಾಡಬಲ್ಲಡೆ ಅದು ಲೇಸು. ಮತ್ಸ್ಯ ಕೂರ್ಮ ಮಂಡೂಕ ಜಲದೊಳಗಿರ್ದಲ್ಲಿ ಫಲವೇನು ಚಿತ್ತಮಂತರ್ಗತಂ ದೃಷ್ಟ್ವಾ ತೀರ್ಥಸ್ನಾನಾನ್ನ ಶುಧ್ಯತಿ ಶತಕುಂಭಜಲೇ ಶೌಚಂ ಸುರಾಭಾಂಡಮಿವಾ[s] ಶುಚಿಃ ಆಗಡವ ಮಾಡಿ ಮಾಗುಡವ ಮಿಂದಡೆ, ತಾ [ಕೂ]ಡಬಲ್ಲನೆ ಕೂಡಲಸಂಗಮದೇವ
--------------
ಬಸವಣ್ಣ
ನಡೆಯಲರಿಯದೆ, ನುಡಿಯಲರಿಯದೆ ಲಿಂಗವ ಪೂಜಿಸಿ ಫಲವೇನು ! ಫಲವೇನು ! ಅವರ ದುಃಖವೆನ್ನ ದುಃಖ, ಅವರ ಸುಖವೆನ್ನ ಸುಖ. ಕೂಡಲಸಂಗನ ಶರಣರ ಮನನೊಂದಡೆ ಆನು ಬೆಂದೆನಯ್ಯಾ. 409
--------------
ಬಸವಣ್ಣ
ತಮ್ಮ ನಿಧಾನವ ಸಾಧಿಸುವ ಭೇದವನರಿಯದ ಅಜ್ಞಾನಿಗಳು ಇದ್ದು ಫಲವೇನು ? ಕಾಡಹಂದಿ ನರಿಯಹಿಂಡು ತರುವಿಂಧ್ಯದಲ್ಲಿ ಕೂಡಿರವೆ ? ಹಿರಿಯಹಂದಿ ನಾಯವಿಂಡು ನರವಿಂಧ್ಯದಲ್ಲಿ ಕೂಡಿರುವೆ ? ತಮ್ಮ ತಮ್ಮ ಅಜ್ಞಾನ ಹಿಂಗದೆ ಇದಿರಿಗೆ ಬೋಧೆಯ ಹೇಳಿ ಉದರವ ಹೊರೆವ ಚದುರರೆಲ್ಲ ಹಿರಿಯರಪ್ಪರೆ ? ಲೋಗರ ಮಕ್ಕಳನಿಕ್ಕಿ ನೆಲೆಯ ನೋಡೇನೆಂದರೆ ಅದೆಂತು ಸಾಧ್ಯವಾಗುವುದಯ್ಯ ? ಕೂಡಲಚೆನ್ನಸಂಗಮದೇವ.
--------------
ಚನ್ನಬಸವಣ್ಣ
ಭಕ್ತಿಯಿಲ್ಲದೆ ಗುರುಪೂಜೆಯ ಅನಂತಕಾಲ ಮಾಡಿದರೂ ವ್ಯರ್ಥವೆಂದಿತ್ತು ಗುರುವಚನ. ಭಕ್ತಿಯಿಲ್ಲದೆ ಧ್ಯಾನ ಮೌನ ಗಂಗಾಸ್ನಾನ ಜಪತಪ ನೇಮ-ನಿತ್ಯ ವ್ಯರ್ಥವೆಂದಿತ್ತು ಗುರುವಚನ. ಜಂಗಮತೃಪ್ತಿಯಿಲ್ಲದೆ ಲಿಂಗಕೆ ಪುಷ್ಪ ಪತ್ರಿಯನೇರಿಸಿ ಫಲವೇನು ? ಲಿಂಗಕ್ಕೆ ಜಂಗಮವೆ ಬಾಯಿಯೆಂದಿತ್ತು ಗುರುವಚನ. ವೃಕ್ಷಕ್ಕೆ ಭೂಮಿ ಬಾಯಿಯೆಂದು ನೀರನೆಸಿದರೆ ಮೇಲೆ ಪಲ್ಲವಿಸಿತ್ತು ನೋಡಾ ! ಸ್ಥಾವರಕ್ಕೆ ಜಂಗಮವೆ ಬಾಯಿಯೆಂದು ಪಡಿಪದಾರ್ಥವ ನೀಡಿದರೆ ಶಿವಂಗೆ ತೃಪ್ತಿಯೆಂದಿತ್ತು ರಹಸ್ಯ. ಸಾಕ್ಷಿ : ``ವೃಕ್ಷಸ್ಯ ವದನಂ ಭೂಮಿಃ ಸ್ಥಾವರಸ್ಯತು ಜಂಗಮಃ || ಮಮ ತೃಪ್ತಿರುಮಾದೇವಿ ಉಭಯೋರ್ಲಿಂಗ ಜಂಗಮತಾ ||'' ಎಂದುದಾಗಿ, ``ಸ್ಥಾವರಾರ್ಪಿತನೈವೇದ್ಯಾತ್ ನ ತೃಪ್ತಿರ್ಮಮ ಪಾರ್ವತಿ | ಜಂಗಮಾರ್ಪಿತ ನೈವೇದ್ಯಾತ್ ಮಮ ತೃಪ್ತಿಶ್ಚ ಸರ್ವಥಾ | ಎಂದುದಾಗಿ, ಈ ಶ್ರುತ ದೃಷ್ಟ ಅನುಮಾನವ ಕಂಡು, ಮಾಡುವಾತನೆ ಸದ್ಭಕ್ತನು ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಮರವಿದ್ದು ಫಲವೇನು ನೆಳಲಿಲ್ಲದನ್ನಕ್ಕ ? ಧನವಿದ್ದು ಫಲವೇನು ದಯವಿಲ್ಲದನ್ನಕ್ಕ ? ಹಸುವಿದ್ದು ಫಲವೇನು ಹಯನಿಲ್ಲದನ್ನಕ್ಕ ? ರೂಪಿದ್ದು ಫಲವೇನು ಗುಣವಿಲ್ಲದನ್ನಕ್ಕ ? ಅಗಲಿದ್ದು ಫಲವೇನು ಬಾನವಿಲ್ಲದನ್ನಕ್ಕ ? ನಾನಿದ್ದು ಫಲವೇನು ನಿಮ್ಮ ಜ್ಞಾನವಿಲ್ಲದನ್ನಕ್ಕ ಚೆನ್ನಮಲ್ಲಿಕಾರ್ಜುನಾ ?
--------------
ಅಕ್ಕಮಹಾದೇವಿ
ತಂಗುಳು ಬುತ್ತಿಯ ಕಟ್ಟಿ ಹೊಟ್ಟೆಯ ಮೇಲಿಕ್ಕಿಕೊಂಡಿರ್ದಡೆ ಹಸಿವು ಹೋಗಿ ಅಪ್ಯಾಯನವಹುದೆ ? ಅಂಗದ ಮೇಲೆ ಲಿಂಗವಿದ್ದಲ್ಲಿ ಫಲವೇನು ? ಅಂಗವೂ ಲಿಂಗವೂ ಕೂಡವ ಭೇದವನರಿಯದವರು ಗುರುತಲ್ಪಕರು, ಪಂಚಮಹಾಪಾತಕರು_ಅದೆಂತೆಂದಡೆ: ದ್ವೈತಭಾವಿತದುಃಖಾನಾಮದ್ವೈತಂ ಪರಮಂ ಪದಂ ಭಾರಮನ್ನಂ ಪಥಿ ಶ್ರಾಂತೇ ತಸ್ಮಿನ್ ಭುಕ್ತೇ ಸುಖಾವಹಂ ಮತ್ತೆಯೂ_ಅಂಗಾನಾಂ ಲಿಂಗಸಂಬಂಧೋ ಲಿಂಗಾನಾಮಂಗಸಂಯುತಿಃ ನಿಮಿಷಾರ್ಧ ವಿಯೋಗೇನ ನರಕೇ ಕಾಲಮಕ್ಷಯಂ ಎಂದುದಾಗಿ, ಅಂಗದಲ್ಲಿ ಲಿಂಗ ಒಡಗಲಸಬೇಕು, ಲಿಂಗದಲ್ಲಿ ಅಂಗ ಒಡಗಲಸಬೇಕು. ಇದು ಕಾರಣ_ಎಲ್ಲರೂ ಅಂಗಸಂಬಂಧಿಗಳಲ್ಲದೆ ಲಿಂಗಸಂಬಂಧಿಗಳಪೂರ್ವ ಕಾಣಾ_ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ನೆರೆಮನೆಯಲ್ಲಿ ಸಿರಿಯಿರ್ದಡೆ ಕಾರಣವೇನು ? ಪುರಾತನರ ವಚನ ವಚಿಸಿದಲ್ಲಿ ಫಲವೇನು ? ವಚನದಂತೆ ತಾನಿಲ್ಲ, ತನ್ನಂತೆ ವಚನವಿಲ್ಲ. ಮೂಗಿಲ್ಲದವರು ಕನ್ನಡಿಯ ನೋಡಿದಡೆ, ಶೃಂಗಾರ ಮೆರೆವುದೆ, ದೇವರಾಯ ಸೊಡ್ಡಳಾ ?
--------------
ಸೊಡ್ಡಳ ಬಾಚರಸ
ಅಂಗದಿಂದ ಲಿಂಗ ಹಿಂಗಬಾರದೆಂಬರು: ಅಂಗ, ಲಿಂಗಸಂಬಂಧವಾದಲ್ಲಿ ಫಲವೇನು, ಮನ ಲಿಂಗಸಂಬಂಧವಾಗದನ್ನಕ್ಕ ? ಕೂಡಲಚೆನ್ನಸಂಗಯ್ಯಾ ಮನದಿಂದಲೇನೂ ಘನವಿಲ್ಲಯ್ಯಾ.
--------------
ಚನ್ನಬಸವಣ್ಣ
ಇನ್ನಷ್ಟು ... -->