ಅಥವಾ

ಒಟ್ಟು 40 ಕಡೆಗಳಲ್ಲಿ , 6 ವಚನಕಾರರು , 16 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಕ್ತಿಯಾಚಾರದ ಪಥವಿಡಿದು ನಲಿನಲಿದುಲಿದಡೂ ಲಿಂಗಸಾಹಿತ್ಯವಿಲ್ಲ. ಮನವೆ ಲಿಂಗದಲ್ಲಿ ನೆಲೆಗೊಳಿಸುವೆನೆಂದು ಧ್ಯಾನಮೌನದಲ್ಲಿ ನಿಂತಡೂ ಲಿಂಗಸಾಹಿತ್ಯವಿಲ್ಲ. ಸರ್ವಪ್ರಪಂಚುಗಳು ವಾಯುವಿಂದ ತೋರುತ್ತಿರಲು ಆ ಪ್ರಪಂಚನಳಿದು ಲಿಂಗವನೊಡೆವೆರಸುವೆನೆಂದು ಶ್ವಾಸ ನಿಃಶ್ವಾಸಂಗಳ ಪಿಡಿದು ನಿಲಿಸಿದರೂ ಲಿಂಗಸಾಹಿತ್ಯವಿಲ್ಲ. ಸದ್ಭಕ್ತಿವೆತ್ತು ಭಾವಪ್ರಸಂಗದಿಂ ಕಂಗಳಂ ಕಳೆದು ಜಿಹ್ವೆಯಂ ಕೊಯಿದು ಶಿರವನರಿದು, ಹಸ್ತವನುತ್ತರಿಸಿತ್ತಡೂ ಲಿಂಗಸಾಹಿತ್ಯವಿಲ್ಲ. ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣ, ಸಮಾಧಿ ಎಂಬ ಅಷ್ಟಾಂಗಯೋಗ ಘಟ್ಟಿಗೊಂಡು, ಪ್ರಾಣ ಮನ ಪವನ ಹುರಿಗೂಡಿ, ಆಧಾರ ಸ್ವಾಧಿಷ್ಠಾನ ಮಣಿಪೂರಕ ಅನಾಹತ ವಿಶುದ್ಧಿ ಆಜ್ಞೇಯವೆಂಬ ಷಡಾಧಾರದ ಬಳಿವಿಡಿದು, ನೆತ್ತಿಯಿಂದುತ್ತರಕ್ಕೆ ಉಚ್ಚಳಿಸಿ ಹಾಯಿದು, ನಡುನೆತ್ತಿ ತೂತಾದಡೂ ಲಿಂಗಸಾಹಿತ್ಯವಿಲ್ಲ. ಸತ್ಯ, ಸಮತೆ, ಸಮಾಧಾನ, ಸದ್ಭಾವ, ಸವಿರಕ್ತಿಯಿಂದತ್ಯಾನಂದ ತೋರುತ್ತಿರಲು ಅದು ನೆಲೆಗೊಂಡು ನಿಲ್ಲದಾಗಿ ಹೇಳದೆ ಬಂದು ಕೇಳದೆ ಹೋಯಿತ್ತು. ಸೌರಾಷ್ಟ್ರ ಸೋಮೇಶ್ವರನ ನಿಜವನರಿಯದೆ ಅನುಭವವ ಮಾಡಿ ಫಲವೇನಯ್ಯಾ ?
--------------
ಆದಯ್ಯ
ಜಂಗಮವಾಗಿ ಫಲವೇನಯ್ಯಾ, ಜಗದ ಹಂಗುದೊರೆಯದನ್ನಕ್ಕ? ಯೋಗಿಯಾದಲ್ಲಿ ಫಲವೇನಯ್ಯಾ, ನಿನ್ನಂಗ ಬರದನ್ನಕ್ಕ, ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ವೇಶವ ಧರಿಸಿ ಫಲವೇನಯ್ಯಾ, ವೇಷದಂತಾಚರಣೆ ಇಲ್ಲದನ್ನಕ್ಕ? ವೇದಾಂತವನೋದಿ ಫಲವೇನಯ್ಯಾ, ಬ್ರಹ್ಮ ತಾವಾಗದನ್ನಕ್ಕ? ನಾನಾ ಕೆರೆಯ ತೋಡಿ ಫಲವೇನಯ್ಯಾ, ಪುಣ್ಯತೀರ್ಥಂಗಳು ಬರದನ್ನಕ್ಕ? ಕಪಿಲಸಿದ್ಧಮಲ್ಲಿನಾಥಾ.
--------------
ಸಿದ್ಧರಾಮೇಶ್ವರ
`ಏಕಜನ್ಮನ್ಯೇವ ವಿದ್ಯಾಪ್ರಾಪ್ತಿರ್ಭವಿಷ್ಯ್ಕತಿ' ಎಂಬ ವಾಕ್ಯವದು ಪುಸಿಯೇನಯ್ಯಾ? ಶಾಸ್ತ್ರವನೋದಿ ಓದಿ ಪಿಶಾಚಿಯಾಗನೆ ಅಂದು ಕಾಶಿಯಲ್ಲಿ ಹರಿದತ್ತನು? ವಾಸಿದಲ್ಲಿ ಫಲವೇನಯ್ಯಾ, ವಾದಿಸಬೇಡ! ನಮ್ಮ ಕಪಿಲಸಿದ್ಧಮಲ್ಲಿಕಾರ್ಜುನಲಿಂಗವ ಪೂಜಿಸದೆ ವ್ಯರ್ಥ ದಿನಗಳೆಯಬೇಡ. |
--------------
ಸಿದ್ಧರಾಮೇಶ್ವರ
ವೇಷವ ಧರಿಸಿ ಫಲವೇನಯ್ಯಾ, ವೇಷದಂತಾಚರಣೆ ಇಲ್ಲದನ್ನಕ್ಕ? ವೇದಾಂತವನೋದಿ ಫಲವೇನಯ್ಯಾ, ಬ್ರಹ್ಮ ತಾವಾಗನ್ನಕ್ಕ? ನಾನಾ ಕೆರೆಯ ತೋಡಿ ಫಲವೇನಯ್ಯಾ, ಪುಣ್ಯತೀರ್ಥಂಗಳು ಬರದನ್ನಕ್ಕ? ಕಪಿಲಸಿದ್ಧಮಲ್ಲಿನಾಥಾ.
--------------
ಸಿದ್ಧರಾಮೇಶ್ವರ
ಆರಾಧನೆಯ ಮಾಡಿ ಫಲವೇನಯ್ಯಾ, ಸಂತೃಪ್ತಿವಡೆಯದನ್ನಕ್ಕ? ಮದುವೆಯಾಗಿ ಫಲವೇನಯ್ಯಾ, ಮೋಹದ ವಿಘ್ನಂಗಳಾಗದನ್ನಕ್ಕ? ಭಕ್ತನಾಗಿ ಫಲವೇನಯ್ಯಾ ಲಿಂಗಪೂಜೆಯ ಮಾಡದನ್ನಕ್ಕ? ಲಿಂಗವ ಪೂಜಿಸಿ ಫಲವೇನಯ್ಯಾ, ಮೋಕ್ಷವ ಹಡೆಯದನ್ನಕ್ಕ? ಮೋಕ್ಷಮಾದ ಫಲವೇನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನನೆಂಬ ನಾಮಧೇಯವಳಿಯದನ್ನಕ್ಕ, ಕೇದಾರ ಗುರುವೆ.
--------------
ಸಿದ್ಧರಾಮೇಶ್ವರ
ಚಂದ್ರನು ಅಮೃತಕರನಾದಡೇನಯ್ಯಾ, ಒಳಗಣ ಕಳಂಕ ಬಿಡದನ್ನಕ್ಕರ ಸೂರ್ಯ ಮಹಾಪ್ರಕಾಶನಾದಡೇನಯ್ಯಾ, ಅಸ್ತಮಾನಕ್ಕೆ ಅಸ್ತಂಗತನೆಂಬ ಹೀನ ಬಿಡದನ್ನಕ್ಕರ ಆನು ನಿಮ್ಮ ಕೃಪೆಯ ಹಡೆದು ಫಲವೇನಯ್ಯಾ, ನಿಮ್ಮ ಶರಣರು ಎನ್ನ ಮೇಲೆ ಮುನಿದು ಹೋದ ಬಳಿಕ ಕೂಡಲಸಂಗಮದೇವಯ್ಯಾ, ನಿಮ್ಮ ಶರಣರ ಮನದಲ್ಲಿ ಎನ್ನ ಮೇಲೆ ಕರುಣ ಹುಟ್ಟಿಬಪ್ಪಂತೆ ಮಾಡಯ್ಯಾ.
--------------
ಬಸವಣ್ಣ
ನಾನಾ ಯೋನಿಯಲ್ಲಿ ಬಂದು ಫಲವೇನಯ್ಯಾ ಪುಣ್ಯಪಾಪವೆಂದರಿಯದನ್ನಕ್ಕ. ಪುಣ್ಯಪಾಪವೆಂದರಿದಲ್ಲಿ ಫಲವೇನಯ್ಯಾ ಶಿವಭಕ್ತನಾಗದನ್ನಕ್ಕ. ಶಿವಭಕ್ತನಾದಲ್ಲಿ ಫಲವೇನಯ್ಯಾ ಲಿಂಗಜಂಗಮವೆಂದರಿಯದನ್ನಕ್ಕ. ಲಿಂಗಜಂಗಮವೆಂದರಿದಲ್ಲಿ ಫಲವೇನಯ್ಯಾ ಭವಿಯ ಕೊಳುಕೊಡೆ ಹಿಂಗದನ್ನಕ್ಕ. ಭವಿಯ ಕೊಳುಕೊಡೆ ಹಿಂಗಿದಲ್ಲಿ ಫಲವೇನಯ್ಯಾ ಆಶೆಯಾಮಿಷವಳಿಯದನ್ನಕ್ಕ. ಆಶೆಯಾಮಿಷಂಗಳಳಿದಲ್ಲಿ ಫಲವೇನಯ್ಯಾ ಸಮತೆ ನೆಲೆಗೊಳ್ಳದನ್ನಕ್ಕ. ಸಮತೆ ನೆಲೆಗೊಂಡಲ್ಲಿ ಫಲವೇನಯ್ಯಾ ಮೂರುಬಟ್ಟೆಯನರಿಯದನ್ನಕ್ಕ. ಮೂರುಬಟ್ಟೆಯನರಿದಲ್ಲಿ ಫಲವೇನಯ್ಯಾ ಅಷ್ಟಮದಂಗಳು ಬೆಂದು ನಷ್ಟವಾಗದನ್ನಕ್ಕ. ಅಷ್ಟಮದಂಗಳು ಬೆಂದು ನಷ್ಟವಾದಲ್ಲಿ ಫಲವೇನಯ್ಯಾ ಅಮರಗುಂಡದ ಮಲ್ಲಿಕಾರ್ಜುನದೇವರಲ್ಲಿ ಶಿಖಿಕರ್ಪುರದಂತೆ ಅಡಗದನ್ನಕ್ಕ.
--------------
ಪುರದ ನಾಗಣ್ಣ
ಲಿಂಗವ ಪೂಜಿಸಿ ಫಲವೇನಯ್ಯಾ, ಸಮರತಿ ಸಮಕಳೆ ಸಮಸುಖವನರಿಯದನ್ನಕ್ಕ ಲಿಂಗವ ಪೂಜಿಸಿ ಫಲವೇನಯ್ಯಾ, ಕೂಡಲಸಂಗಮದೇವರ ಪೂಜಿಸಿ ನದಿಯೊಳಗೆ ನದಿ ಬೆರಸಿದಂತಾಗದನ್ನಕ್ಕ
--------------
ಬಸವಣ್ಣ
ಎಲ್ಲ ಎಲ್ಲವನರಿದು ಫಲವೇನಯ್ಯಾ, ತನ್ನ ತಾನರಿಯಬೇಕಲ್ಲದೆ ? ತನ್ನಲ್ಲಿ ಅರಿವು ಸ್ವಯವಾಗಿರಲು ಅನ್ಯರ ಕೇಳಲುಂಟೆ ? ಚೆನ್ನಮಲ್ಲಿಕಾರ್ಜುನಾ, ನೀನರಿವಾಗಿ ಮುಂದುದೋರಿದ ಕಾರಣ ನಿಮ್ಮಿಂದ ನಿಮ್ಮನರಿದೆನಯ್ಯಾ ಪ್ರಭುವೆ.
--------------
ಅಕ್ಕಮಹಾದೇವಿ
ಅಭ್ಯಾಸದ ಮಾತಲ್ಲ, ಶ್ರೋತ್ರದ ಸುಖವಲ್ಲ, ಶಾಸ್ತ್ರದ ಅನುಭಾವದ ಮಾತಲ್ಲ. ಒಳಗಣ ಮಾತಲ್ಲ ಹೊರಗಣ ಮಾತಲ್ಲ. ಇದರಂಗ (ತು?) ವನರಿಯರೆ, ಅನುಭಾವವ ಮಾಡಿ ಫಲವೇನಯ್ಯಾ ? ಗುಹೇಶ್ವರಲಿಂಗವು ಉಪಮಾತೀತ ನೋಡಯ್ಯಾ ಸಿದ್ಧರಾಮಯ್ಯ !
--------------
ಅಲ್ಲಮಪ್ರಭುದೇವರು
ಲಿಂಗವ ಪೂಜಿಸಿ ಫಲವೇನಯ್ಯಾ, ಅಂಗನೆಯರೊಲುಮೆಯಾಗದನ್ನಕ್ಕ? ಜಂಗಮವ ಪೂಜಿಸಿ ಫಲವೇನಯ್ಯಾ, ಮೋಕ್ಷಾಂಗನೆ ಮೈಗೂಡದನ್ನಕ್ಕ? ಅಂಗಜ ಬಂದು ಫಲವೇನಯ್ಯಾ, ನಾ ಮನವೊದು ರತಿಗೊಯದನ್ನಕ್ಕ? ಶರಣಸತಿ ಲಿಂಗಪತಿ ಎಂಬ ವೀರತ್ವ ಕೆಟ್ಟತೆನ್ನಲೆ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಜಂಗಮವಾಗಿ ಫಲವೇನು, ನೋಡಿ ಮನದೆರೆದು ಮಾತನಾಡಿಸಿ ಜನಜನನವಿಪಿನದಾವಾನಲವಾಗದನ್ನಕ್ಕ? ಜಂಗಮವಾಗಿ ಫಲವೇನು ಭಕ್ತ ತನುತಾಪತ್ರಯವ ನೋಡಿ ಮನದೆರೆದು ಮಾತನಾಡಿಸಿ ಮರುಗದನ್ನಕ್ಕ? ಜಂಗಮವಾಗಿ ಫಲವೇನು, ಭಕ್ತ ವಾಂಛಿತಾರ್ಥಂಗಳನರಿದು, ಪೂಜಾಮುಖಂ ಭೂತಿಯ ಕೊಟ್ಟು, ಆತನ ಪ್ರಪಂಚ ಸಂಭ್ರಮವ ನೋಡದನ್ನಕ್ಕ? ಜಂಗಮವಾಗಿ ಫಲವೇನಯ್ಯಾ, ನಮ್ಮ ಕಪಿಲಸಿದ್ಧಮಲ್ಲಿಕಾರ್ಜುನನ ಕೂಡಿ, ಸುಭಕ್ತರ ಹಸ್ತದಲ್ಲಿ ಕೊಟ್ಟು ಮೋಹ ಮಾಡದನ್ನಕ್ಕ?
--------------
ಸಿದ್ಧರಾಮೇಶ್ವರ
ಮಂತ್ರವ ಜಪಿಸಿ ಫಲವೇನಯ್ಯಾ ಮಂತ್ರಮ್ರ್ಕೂ ಕಾಣದನ್ನಕ್ಕ? ಯಂತ್ರವ ಧರಿಸಿ ಫಲವೇನಯ್ಯಾ ಅಂತರ ರೋಗ ಪರಿಹಾರವಾಗದನ್ನಕ್ಕ? ತಂತ್ರವನೋ ಫಲವೇನಯ್ಯಾ, ಅದರಂತರ ಮೈಗೂಡದನ್ನಕ್ಕ? ಶರಣನಾಗಿ ಫಲವೇನಯ್ಯಾ, ಂಗ ಜಂಗಮವ ಪೂಜಿಸಿ ಮೋಕ್ಷವಡೆಯದನ್ನಕ್ಕ? ಎಲೆ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಆದಿಯನರಿಯದೆ, ಅನಾದಿಯಿಂದತ್ತತ್ತ ತಾನಾರೆಂಬುದ ವಿಚಾರಿಸಿ ತಿಳಿದು ನೋಡದೆ; ಮಾಡಿದಡೆ ಫಲವೇನಯ್ಯಾ ಬಸವಯ್ಯಾ ? ಸಾವನ್ನಕ್ಕ ಸಾಧನೆಯ ಮಾಡಿದಡೆ, ಕಾದುವ ದಿನ ಇನ್ನಾವುದಯ್ಯಾ ಬಸವಯ್ಯಾ ? ಬಾಳುವನ್ನಕ್ಕ ಭಜನೆಯ ಬಾಡಿದಡೆ ತಾನಹ ದಿನ ಇನ್ನಾವುದಯ್ಯಾ ಬಸವಯ್ಯಾ ?_ ಇದು ಕಾರಣ, ಮರ್ತ್ಯಲೋಕದ ಭಕ್ತರುಗಳೆಲ್ಲರು, ತಥ್ಯವನರಿಯದೆ, ಮಿಥ್ಯವನೆ ಹಿಡಿದು ಮಿಥ್ಯವನೆ ಪೂಜಿಸಿ ವ್ಯರ್ಥರಾಗಿ ಹೋದರು, ತಮ್ಮ ತಾವರಿಯದೆ ಕೆಟ್ಟರು. ತಲೆಯ ಕೊಯಿದು ದೇಹವ ಕಡಿದು, ಕಣ್ಣ ಕಳೆದು ಹೊಟ್ಟೆಯ ಸೀಳಿ, ಮಗನ ಕೊಂದು ಬಾಣಸವ ಮಾಡಿ, ವಾದಿಗೆ ಪುರಂಗಳನೊಯ್ದು, ಕಾಯವೆರಸಿ ಕೈಲಾಸಕ್ಕೆ ಹೋದವರೆಲ್ಲರು ಭಕ್ತರಪ್ಪರೆ ? ಅವರಿಗೆ ಶಿವಪಥವು ಸಾಧ್ಯವಾಯಿತ್ತೆ ? ಭವ ಹಿಂಗಿತ್ತೆ ? ಅದು ಸಹಜವೆ ?_ಅಲ್ಲಲ್ಲ ನಿಲ್ಲು ಮಾಣು. ನರಲೋಕದವರೆಲ್ಲರು ನರಸಂಸಾರಕ್ಕೊಳಗಾದರು, ಸುರಲೋಕದ ಸುರರುಗಳೆಲ್ಲ ಸುರಸಂಸಾರಕ್ಕೊಳಗಾದರು, ರುದ್ರಲೋಕದ ರುದ್ರರುಗಳೆಲ್ಲ ರುದ್ರಸಂಸಾರಕ್ಕೊಳಗಾದರು, ಮುನಿಜನಂಗಳೆಲ್ಲರು ತಪವೆಂಬ ಸಂಸಾರಕ್ಕೊಳಗಾದರು, ಜಂಗಮವ ಹಿಡಿದವರೆಲ್ಲರು ಸಾಯುಜ್ಯವೆಂಬ ಸಂಸಾರಕ್ಕೊಳಗಾದರು, ಲಿಂಗವ ಹಿಡಿದವರೆಲ್ಲರು ಫಲ_ಪದಗಳೆಂಬ ಸಂಸಾರಕ್ಕೊಳಗಾದರು, ಇಂತೀ ಸಂಸಾರಕ್ಕೊಳಗಾದವರೆಲ್ಲ ಮಾಯೆಯ ಹೊಡೆಗಿಚ್ಚ ಗೆಲಬಲ್ಲರೆ ? ಇದು ಕಾರಣ; ನಿತ್ಯ ನಿಜತತ್ವ ತಾನೆಂದರಿಯದೆ, `ತತ್ವಮಸಿ' ವಾಕ್ಯವ ಹೊರಹೊರಗನೆ ಬಳಸಿ ಕೆಟ್ಟರಲ್ಲಾ ಹಿರಿಯರು, ಸತ್ತರಲ್ಲಾ ನಾಯಿ ಸಾವ ! ಸತ್ತವರ ಹೆಸರ ಪತ್ರವ ನೋಡಿದಡೆ (ಓದಿದಡೆ?) ಅದೆತ್ತಣ ಮುಕ್ತಿಯೊ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಇನ್ನಷ್ಟು ... -->