ಅಥವಾ

ಒಟ್ಟು 4 ಕಡೆಗಳಲ್ಲಿ , 3 ವಚನಕಾರರು , 4 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಕ್ತ, ಭೃತ್ಯನಾಗಿ ಮಾಡುವ ಮಾಟದಲ್ಲಿ ವಿಚಾರವುಂಟಯ್ಯಾ, ಅದೆಂತೆಂದರೆ:ಸಂಸಾರಚ್ಛೇದನೆಯುಳ್ಳರೆ ಜಂಗಮಲಿಂಗವಹುದು, ಅದಕ್ಕೆ ಮಾಡಿದ ಫಲಂ ನಾಸ್ತಿ. ಸಂಸಾರಚ್ಛೇದನೆ ಇಲ್ಲದಿದ್ದರೆ ಆ ಜಂಗಮ ಭವಭಾರಿಯಹನು. ಅದಕ್ಕೆ ಮಾಡಿದಲ್ಲಿ ಫಲವುಂಟು. ಫಲವುಂಟಾದಲ್ಲಿ ಭವ ಉಂಟು, ಫಲವಿಲ್ಲದಲ್ಲಿ ಭವವಿಲ್ಲ. `ಮನದಂತೆ ಮಂಗಳ' ಎಂಬ ಶ್ರುತಿಯ ದಿಟವ ಮಾಡಿ, ಈ ಉಭಯದೊಳಗೆ ಆವುದ ಪ್ರಿಯವಾಗಿ ಮಾಡುವರು ಅಹಂಗೆ ಇಹರು ಕಾಣಾ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಜಂಗಮ ಬರಬೇಕೆಂದು ಲಿಂಗಾರ್ಚನೆಯ ಮಾಡೂದು. ಆ ಜಂಗಮ ಬಂದರೆ ತನ್ನ ಲಿಂಗಾರ್ಚನೆಯ ಮಾಣಬೇಕು, ಮಾದು ಜಂಗಮಾರ್ಚನೆಯ ಮಾಡಬೇಕು. ಲಿಂಗದಲೇನುಂಟು, ಜಂಗಮದಲೇನುಂಟೆಂದರೆ: ಲಿಂಗದಲ್ಲಿ ಫಲವುಂಟು ಪದವುಂಟು ಛಲವುಂಟು ಭವವುಂಟು. ಜಂಗಮದಲ್ಲಿ ಫಲವಿಲ್ಲ ಪದವಿಲ್ಲ ಕುಲವಿಲ್ಲ ಛಲವಿಲ್ಲ ಭವವಿಲ್ಲ. ಇದು ಕಾರಣ ಕೂಡಲಚೆನ್ನಸಂಗಮದೇವಾ ಜಂಗಮವೇ ಲಿಂಗವೆಂದು ನಂಬಿದನಾಗಿ ಬಸವಣ್ಣ ಸ್ವಯಲಿಂಗವಾದ.
--------------
ಚನ್ನಬಸವಣ್ಣ
ಶ್ರೀಗುರುಪ್ರೇಮವಿಲ್ಲದೆ ಲಿಂಗಾರ್ಚನೆಯ ಮಾಡಿದಡೆ ಅದು ಲಿಂಗಾರ್ಚನೆಯಲ್ಲ. ಜಂಗಮಪ್ರೇಮವಿಲ್ಲದೆ ಲಿಂಗಾರ್ಚನೆಯ ಮಾಡಿದಡೆ ಅದೂ ಲಿಂಗಾರ್ಚನೆಯಲ್ಲ. ಶಿವಲಿಂಗಪ್ರೇಮವಿಲ್ಲದೆ ಲಿಂಗಾರ್ಚನೆಯ ಮಾಡಿದಡೆ ಅದೂ ಲಿಂಗಾರ್ಚನೆಯಲ್ಲ. ಅರ್ಪಿತವನರಿತು, ಅರ್ಪಿಸಿ ಪ್ರಸನ್ನತೆಯ ಹಡೆದು ಪ್ರಸಾದವ ಗ್ರಹಿಸದೆ ಲಿಂಗಾರ್ಚನೆಯ ಮಾಡಿದಡೆ ಅದೂ ಲಿಂಗಾರ್ಚನೆಯಲ್ಲ. ಸರ್ವಾಚಾರಸಂಪತ್ತಿಲ್ಲದೆ ಲಿಂಗಾರ್ಚನೆಯ ಮಾಡಿದಡೆ ಅದೂ ಲಿಂಗಾರ್ಚನೆಯಲ್ಲ. ವಿಚಾರಜ್ಞಾನ ಸುಜ್ಞಾನ ಮಹಾಜ್ಞಾನವೆಂಬ ಪರಿಯನರಿಯದೆ ಲಿಂಗಾರ್ಚನೆಯ ಮಾಡಿದಡೆ ಅದೂ ಲಿಂಗಾರ್ಚನೆಯಲ್ಲ. ಪ್ರಸಾದವ ಹಡೆದು ಮುಕ್ತನಲ್ಲ ಪೂಜಕಾ ಬಹವಸ್ಸಂತಿ ಭಕ್ತಾಶ್ಚ ಲಕ್ಷಮೇವ ಚ ಮತ್ಪ್ರಸಾದಧರಾ ದೇವಿ ದ್ವೌ ತ್ರಯೋ ದ[ಶ]ಪಂಗಕಃ ಇಂತು ಪೂಜಕರಪ್ಪರು. ಬೆಟ್ಟವನೆಚ್ಚ ಕೋಲ್ತಪ್ಪದಂತೆ, ಪೂಜೆಯ ಫಲವುಂಟು. ಸಜ್ಜನಸದ್ಭಕ್ತಿಶಿವಾಚಾರ ಸಂಪತ್ತಿಗೆ ಸಲ್ಲದು. ಇದನರಿದು ಶ್ರೀಗುರುಲಿಂಗ ಶಿವಲಿಂಗ ಜಂಗಮಲಿಂಗದಲ್ಲಿ ಅತ್ಯಂತ ಪ್ರೇಮಿಯಾಗಿ, ಆವಾವ ವಸ್ತು ತನಗೆ ಪ್ರೇಮವಾದುದನಿತ್ತು ಪ್ರಸಾದಿಯಾಗಿ, ಶಿವಲಿಂಗಾರ್ಚನೆಯಂ ಮಾಡಿದಡೆ ಸರ್ವಲೋಕಕ್ಕೆ ಪೂಜ್ಯನಪ್ಪನಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಶರಣರೈಕ್ಯರೆಂದು ನುಡಿದಾಡುವರು, ಶರಣಸ್ಥಲವೆಂತಿರ್ಪುದೆಂದರಿಯರು. ಅನ್ನವನಿಕ್ಕಿದವರೆಲ್ಲ ಶರಣರೆ ? ಹೊನ್ನು ಕೊಟ್ಟವರೆಲ್ಲ ಶರಣರೆ ? ಹೆಣ್ಣುಕೊಟ್ಟವರೆಲ್ಲ ಶರಣರೆ ? ಮಣ್ಣುಕೊಟ್ಟವರೆಲ್ಲ ಶರಣರೆ ? ಅಲ್ಲಲ್ಲ ಅದಕ್ಕೆ ಪುಣ್ಯದಾ ಫಲವುಂಟು. ಅದಂತಿರಲಿ ಶರಣನಾದರೆ ತನ್ನ ಮರಣ ಬಾಧೆ ಗೆಲಿಯಬೇಕು. ಮರಣ ಬಾಧೆಯ ಗೆದ್ದ ಶರಣರು ಕಂಡನುವೆ ಅಂಗ ಮನ ಸುಸಂಗ. ಅವರು ಹಿಡಿದ ಧನವೆ ಪದಾರ್ಥ. ಇದೀಗ ನಮ್ಮ ಮುನ್ನಿನ ಶರಣರ ನಡೆನುಡಿ. ಇದನರಿಯದೆ ಈಗ ಮನೆ ಮನೆಗೆ ಶರಣರು, ತನತನಗೆ ಶರಣರು ಎಂದು ನುಡಿದಾಡುವರು. ಈ ಬಿನುಗರ ನುಡಿಯ ಮೆಚ್ಚುವನೆ ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ?
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
-->