ಅಥವಾ

ಒಟ್ಟು 15 ಕಡೆಗಳಲ್ಲಿ , 8 ವಚನಕಾರರು , 14 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೇಹಿಯಲ್ಲ ನಿರ್ದೇಹಿಯಲ್ಲ ನಿತ್ಯ, ಫಲಪದವ ಮೀರಿದ ಸ್ವತಂತ್ರ, ಆಗುಹೋಗಿಲ್ಲದ ಭರಿತ, ಅಚಲಲಿಂಗ ಸನ್ನಹಿತ, ನಿಜನಿಂದ ಘನತೇಜ. ಹೆಸರಿಡಬಾರದ ಹಿರಿಯನಯ್ಯಾ, ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣ.
--------------
ಆದಯ್ಯ
ಬಲ್ಲೆ ಬಲ್ಲೆ ನಿನ್ನ, ಜನನ ಮರಣಕ್ಕೆ ಹೊರಗಾದೆನೆಂಬುದ. ಬಲ್ಲೆ ಬಲ್ಲೆ ನಿನ್ನ, ಕಾಲಕಲ್ಪಿತಕ್ಕೆ ಹೊರಗಾದೆನೆಂಬುದ. ಬಲ್ಲೆ ಬಲ್ಲೆ, ನೀನು ಮಹಾನಿತ್ಯ ಮಂಗಳನೆಂಬುದ. ಬಲ್ಲೆ ಬಲ್ಲೆ, ನೀನು ಸತ್ಯಶುದ್ಧದೇವನೆಂಬುದ. ಬಲ್ಲೆ ಬಲ್ಲೆ, ನೀನು ಫಲಪದವ ಮೀರಿದನೆಂಬುದ. ಬಲ್ಲೆ ಬಲ್ಲೆ, ನೀನು ಉರುತರ ಲೋಕಪ್ರಕಾಶನೆಂಬುದ. ಬಲ್ಲೆ ಬಲ್ಲೆ, ನೀನು ಪರಿಭವಕ್ಕೆ ಬಾರನೆಂಬುದ. ಬಲ್ಲೆ ಬಲ್ಲೆ, ನೀನು ಕಾಲನ ಕಮ್ಮಟಕ್ಕೆ ಸಲ್ಲನೆಂಬುದ. ಎನ್ನ ಬಲ್ಲತನಕ್ಕೆ ಮಂಗಳವನೀಯೆ ಉತ್ತರ ದಕ್ಷಿಣ ಪೂರ್ವ ಪಶ್ಚಿಮವೆಂಬ ದ್ವಾರಂಗಳಲ್ಲಿ ತಪ್ಪದೆ ಬಪ್ಪಾಗ ಆನು ನಿನ್ನೊಡನೆ ಬಾರದೆ ಉಳಿದುದುಂಟೆ? ಆನೇನು ಭೇದವಾಗಿಪ್ಪೆನೆಲೆ ಅಯ್ಯಾ. ಸಂದು ಸವೆದು ಹಂಗು ಹರಿದು ಲೀಯ ಒಳಗಾಗಿದ್ದ ಎನ್ನ ನೋಡದೆ ಇಪ್ಪುದು ಅದಾವ ಗರುವತನ? ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಬಿನ್ನಾಣ ದೇಹವನು ತನ್ನಮಯ ಮಾಡಿದನು ಉನ್ನತೋನ್ನತ ಲಿಂಗವನು ತೋರಿ ಫಲಪದವ ಹೊದ್ದದ ಹಾಂಗೆ ಮಾಡಿದನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಪರಸ್ತ್ರೀಯರ ಮುಟ್ಟದಿರಬೇಕು. ಪರಧನವನಪಹರಿಸದಿರಬೇಕು. ಪರದೈವವ ಪೂಜಿಸದಿರಬೇಕು. ಪರಹಿಂಸೆಯ ಮಾಡದಿರಬೇಕು. ಪರಲೋಕದ ಫಲಪದವ ಬಯಸದಿರಬೇಕು. ಮನವು ನಿರ್ವಯಲಾಗಿ ಇಷ್ಟಲಿಂಗದಲ್ಲಿ ನಿಷೆ*ಬಲಿದಿರಬೇಕು. ಕಷ್ಟಜನ್ಮಂಗಳ ಕಡೆಗೊಡ್ಡಿರ್ಪಾತನೇ ವೀರಮಾಹೇಶ್ವರನು ನೋಡಾ. ಅದೆಂತೆಂದೊಡೆ : ``ಪರಸ್ತ್ರೀಯಂ ಪರಾರ್ಥಂ ಚ ವರ್ಜಯೇತ್ ಭಾವಶುದ್ಧಿಮಾನ್ | ಲಿಂಗನಿಷಾ*ನಿಯುಕ್ತಾತ್ಮಾ ಮಾಹೇಶ್ವರಮಹಾಸ್ಥಲಂ ||'' ಎಂದುದಾಗಿ, ಇಂತಪ್ಪ ಪರಮ ಮಾಹೇಶ್ವರನ ಶ್ರೀಪಾದಕ್ಕೆ ನಮೋ ನಮೋ ಎಂಬೆನಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಅಯ್ಯಾ, ನಿನ್ನಾಳಾಗಿ ಆರೆನಯ್ಯಾ ಕೆಲಬರ ಬೋಸರಿಸಲು. ಅಯ್ಯಾ, ನಿನ್ನಾಳಾಗಿ ಆರೆನಯ್ಯಾ ಕೆಲಬರ ಸ್ತುತಿಯಿಸಲು. ಅಯ್ಯಾ, ನೀ ನಿತ್ಯನೆಂದು ಮರೆವೊಕ್ಕಡೆ ಸೀಯದಂತಿಪ್ಪರೆ? ಶಿವನೆ ನಿನ್ನ ಕಾಮ್ಯಾರ್ಥವ ಬೇಡಿ ಬಾಧೆಬಡಿಸೆ. ನಿನಗೇನುಂಟಯ್ಯಾ, ನೀನು ನಿಃಕಾಮಿ. ಅಂಜದಿರು, ಫಲಪದವ ಬೇಡೆ; ನೀನಿಹ ಲೋಕ ನಿನಗಿರ. ಕಾಡದೆ ನಿನ್ನವರೊಳಗೆ ಕೂಡಿರುವ ಪದವ ಕರುಣಿಸಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನ
--------------
ಸಿದ್ಧರಾಮೇಶ್ವರ
ಶಿವಭಕ್ತಿ ಶಿವಾಚಾರ ಬೇಕಾದ ಭಕ್ತನು ತನ್ನ ಮಠಕ್ಕೆ ಬಂದ ಲಿಂಗಜಂಗಮದ ಸಮಯಾಚಾರ ಸಮಯಭಕ್ತಿಯ ನಡೆಸಬೇಕಯ್ಯ. ಬಂದ ಲಿಂಗಜಂಗಮದ ಸಮಯಭಕ್ತಿಯ ತಪ್ಪಿಸಿ ಮುಂದೆ ಶಿವಪೂಜೆಯ ಮಾಡಿ ಫಲಪದವ ಪಡೆವೆನೆಂಬ ಹಂದಿಗಳೆತ್ತ ಬಲ್ಲರಯ್ಯಾ ಸತ್ಯರ ನೆಲೆಯ. ಮುಂದಿರ್ದ ನಿಧಾನವ ಕಾಣಲರಿಯದೆ ಸಂದಿಗೊಂದಿಯ ಹೊಕ್ಕು ಅರಸಿ ಬಳಲುವ ಅಂಧಕನಂತೆ, ಎಂದಾದರೂ ತನ್ನ ವ್ಯಸನವೆತ್ತಿದಾಗ ಒಂದೊಂದು ಪರಿಯಲ್ಲಿ ಸಿದ್ಧಾನ್ನಂಗಳು ಮಾಡಿ ಚೆಂದ ಚೆಂದದಲಿ ಬೋನ ಪದಾರ್ಥಂಗಳಂ ಮಾಡಿ ತಮ್ಮ ಹಿಂದಣ ಮುಂದಣ ಹರಕೆಯನೊಡಗೂಡಿ ಬಂಧುಬಳಗವ, ಮುಯ್ಯೂಟವ ಕೂಡಿ ಆ ದಿನದಲ್ಲಿ ಚಂದ್ರಶೇಖರನ ಭಕ್ತರಿಗೆ ದಣಿ[ಯೆ] ಉಣಲಿಕ್ಕಿದೆನೆಂಬ ಅಂಧಕ ಮೂಳಹೊಲೆಯರಿಗೆ ಎಂದೆಂದಿಗೂ ಮುಕ್ತಿಯಿಲ್ಲವೆಂದಾತ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಹರಿ ಹರಗೆ ಸರಿಯೆಂಬ ಎಲೆ ನೀಚ ಪರವಾದಿಗಳಿರಾ ನೀವು ಕೇಳಿರೊ. ಹರಿ ಹತ್ತು ಭವದಲ್ಲಿ ಹುಟ್ಟಿ ಬಂದು ನಮ್ಮ ಹರನ ಶ್ರೀಚರಣವನರ್ಚಿಸಿ ವರವ ಪಡೆದನಲ್ಲದೆ ನಮ್ಮ ಹರನು ಆವ ಭವದಲ್ಲಿ ಹುಟ್ಟಿದ ? ಆವ ದೇವರ ಪೂಜಿಸಿ ಆವ ಆವ ಫಲಪದವ ಪಡೆದನು ಬಲ್ಲರೆ ನೀವು ಹೇಳಿರೊ ? ಇದನರಿಯದೆ ಹರಿ ಹರಗೆ ಸರಿಯೆಂಬ ಪರವಾದಿಗಳ ಬಾಯ ಕೆರಹಿನಟ್ಟೆಯಲ್ಲಿ ಹೊಯ್ದಲ್ಲದೆ ಎನ್ನ ಸಿಟ್ಟು ಮಾಣದು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ತನ್ನಿಂದಾದ ಚನ್ನರುದ್ರಾಕ್ಷಿಯನು ಮುನ್ನ ಧರಿಸಿದ ಮುನಿಜನ ದೇವತಾದಿಗಳೆಲ್ಲ ಮನ್ನಣೆಯ ಫಲಪದವ ಪಡೆದು ಸುಖಿಯಾಗಿರ್ದರು. ಮತ್ತೆ ಸಕಲರೊಲಿದು ಧರಿಸಿ ಇಚ್ಫೈಸಿ ಪಡೆದರಗಣಿತ ಸೌಖ್ಯವನು. ಇಂತಪ್ಪ ಮಹಾಘನ ರುದ್ರಾಕ್ಷಿಯನು ಹಗಲಿರುಳು ಬಿಡದೆ ಧರಿಸಿ ಪರಮಸುಖಿಯಾಗಿರ್ದೆನು ನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಗುರು ಕರುಣಾಕರ ಪರಶಿವ ಪರಮ ಗುರು ಭವಹರ ಚಿನ್ಮಯ ಚಿದ್ರೂಪ ಗುರುವೆ ನಿರಂಜನ ನಿರ್ಮಳ ನಿಃಖಳಗುರುವೆ ಸುರತುರವೆ. ಪದ :ವಹ್ನಿ ವಿಪಿನ ತರು ಕಾಷ*ವ ಸುಡುವಂ ತೆನ್ನ ಭವದ ಗೊಂಡಾರಣ್ಯವ ನೆನ್ನಯ ಗುರುಕರುಣಗ್ನಿಯಲ್ಲಿ ಉರುಹಿ ಮುನ್ನಿನ ಸುಕೃತದ ದೆಸೆಯಲಿ ಗುರುಕೃಪೆ ಅನ್ಯಥಾ ಭಾಗ್ಯವ ಪಡೆದೆನು ಪರುಷದ ಸನ್ನಿಧಿಯಲಿಹ ಲೋಹ ಪರಿಗು ಸಯುಕ್ತ. | 1 | ಅಂಗಾತ್ಮನ ಪ್ರಾಣನ ಭವಿತನಗಳ ಹಿಂಗಿಸಿ ಅವಿರಳ ಪರಬ್ರಹ್ಮದ ಮಹಾ ಲಿಂಗವ ಕರ ಉರ ಶಿರ ಮನ ಭಾವದಲ್ಲಿ ಸಂಗವ ಮಾಡಿಯೆ ಪ್ರಕೃತಿ ವಿಕೃತಿ ವಿಷ ಯಂಗಳನೆಲ್ಲವ ತೊರಸಿ ಗಣಂಗಳ ಡಿಂಗರಿಗನ ಮಾಡಿದೆನ್ನಯ ಗುರುಮಹಿಮೆ. | 2 | ದುರ್ಲಿಖಿತಂಗಳ ತೊಡೆದು ವಿಭೂತಿ ಧರಿಸ ಕಲಿಸಿ ಫಣಿಯೊಳು ರುದ್ರಾಕ್ಷಿಯ ಸರಮಾಲೆಯ ತೊಡಕಲಿಸಿ ಷಡ ಕ್ಷರಿಯ ಸ್ಮರಿಸ ಕಲಿಸಿ `ಶಿವಧ್ಯಾನವ ಹಿಂಗದ ಲಿರು ನೀ ಕಂದಾ' ಯೆಂದು ಅಭಯಕರ ಶಿರದೊಳು ಮಡುಗಿಯೆ ಸಲುಹಿದ ಗುರು ನಿತ್ಯ. | 3 | ರಂಬಿಸಿ ನಿಲ್ಲದಳುವಿಂಗೆ ಕಂದೆಗೆ ಮೇಣ್ ರಂಭೆ ಸ್ತನವನೂಡಿಯೆ ಸಲಹುವ ತೆರ ಹಂಬಲಿಸಿ ಭಯಪಡುತಿಹಗೆ ಸೂರ್ಯ ನೀನೆ ಶಂಭು ಚರಣತೀರ್ಥಪ್ರಸಾದವ ನುಂಬಕಲಿಸಿಯೆ ಅನ್ಯಹಾರದ ಬೆಂಬಳಿಗಳ ಕೆಡಿಸಿದೆನ್ನಯ ಗುರು ಮಹಿಮೆ. | 4 | ಮಾಡಕಲಿಸಿದ ಲಿಂಗದ ಸೇವೆಯ ಸದಾ ನೀಡಕಲಿಸಿದ ಜಂಗಮಕಮೃತಾನ್ನವ ಬೇಡಕಲಿಸಿ ಮುಕ್ತಿಯ ಫಲಪದವ ಗೂಡಕಲಿಸಿ ಶಿವಾನಂದದಾ ಲೀಲೆಯೊ ಳಾಡಕಲಿಸಿ ನಿಜ ನಿತ್ಯ ನಿರ್ಮಳನ ಮಾಡಿದ ಗುರುವರ ಸಿದ್ಧಮಲ್ಲೇಶಾ | 5 |
--------------
ಹೇಮಗಲ್ಲ ಹಂಪ
ಪರಧನವ ಹಿಡಿಯದೆ, ಪರಸ್ತ್ರೀಯರ ಮುಟ್ಟದೆ, ಪರದೈವವ ಪೂಜಿಸದೆ, ಪರಹಿಂಸೆಯ ಮಾಡದೆ, ಪರಲೋಕದ ಫಲಪದವ ಬಯಸದೆ, ಪರನಿಂದೆಯ ಕೇಳದೆ, ಗರ್ವಾಹಂಕಾರದಲ್ಲಿ ಬೆರೆಯದೆ, ಕರಣಾದಿ ಗುಣಂಗಳಲ್ಲಿ ಹರಿಯದೆ, ಗುರುಭಕ್ತಿ ಲಿಂಗಪೂಜೆ ಜಂಗಮದಾಸೋಹವ ಮರೆಯದೆ, ಸತ್ಯಸದಾಚಾರವ ತೊರೆಯದೆ, ಸರ್ವಾಚಾರಸಂಪನ್ನನಾದ ಮಹಾತ್ಮನೆ ಅನಾದಿಗುರುಪಟ್ಟಕ್ಕೆ ಯೋಗ್ಯನು. ಆ ಮಹಾತ್ಮನೆ ಪರಮಘನಲಿಂಗದೇವರೆಂಬೆನು ಆ ಮಹಾತ್ಮನೆ ಭವಕೆ ಘನವಾದ ಮಹಾಘನ ಪರಶಿವಮೂರ್ತಿಯೆಂಬೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಅಜಹರಿಸುರರೆಲ್ಲ ಆವ ದೇವನ ಶ್ರೀಚರಣವನರ್ಚಿಸಿ ಫಲಪದವ ಪಡೆದರು ತಿಳಿದು ನೋಡಿರೋ ಮಾಯಾವಾದಿಗಳು ನೀವೆಲ್ಲ. ಮನು ಮುನಿಗಳು ಮರುಳತಾಂಡವರು ಅಷ್ಟದಿಕ್ಪಾಲಕರೆಲ್ಲ ಆವ ದೇವನ ಶ್ರೀ ಚರಣವನರ್ಚಿಸಿ ಫಲಪದವ ಪಡೆದರು ತಿಳಿದು ನೋಡಿರೋ ಮಾಯಾವಾದಿಗಳು ನೀವೆಲ್ಲ. ಕಾಲ ಕಾಮ ದಕ್ಷಾದಿಗಳು ಆವ ದೇವನಿಂದ ಅಳಿದು ಹೋದರು ತಿಳಿದು ನೋಡಿರೊ ಮಾಯಾವಾದಿಗಳು ನೀವೆಲ್ಲ. ವೇದ ಶಾಸ್ತ್ರ ಆಗಮ ಪುರಾಣ ಶ್ರುತಿ ಸ್ಮೃತಿಗಳೆಲ್ಲ ಆವ ದೇವನ ಹೊಗಳುತಿರ್ಪುವು ಹೇಳಿರೋ ಮಾಯಾವಾದಿಗಳು ನೀವೆಲ್ಲ. ಇಂತೀ ಭೇದವ ಕೇಳಿ ಕಂಡು ತಿಳಿದು ನಂಬಲರಿಯದೆ ದಿಂಡೆಯ ಮತದ ಡಂಬಕ ಮೂಳ ಹೊಲೆಯರಂತಿರಲಿ. ಕಾಕು ದೈವದ ಗಂಡ ಲೋಕಪತಿ ಏಕೋದೇವ ನಮ್ಮ ಅಖಂಡೇಶ್ವರನಲ್ಲದೆ ಅನ್ಯದೈವವಿಲ್ಲವೆಂದು ಮುಂಡಿಗೆಯನಿಕ್ಕಿ ಹೊಯ್ವೆನು ಡಂಗುರವ ಮೂಜಗವರಿವಂತೆ.
--------------
ಷಣ್ಮುಖಸ್ವಾಮಿ
ಬ್ರಹ್ಮಪದವ ಪಡೆದೆನೆಂಬುದು ಭ್ರಮೆ ಕಾಣಿರೋ. ವಿಷ್ಣುಪದವ ಪಡೆದೆನೆಂಬುದು ತೃಷ್ಣೆ ಕಾಣಿರೋ. ಇಂದ್ರಪದವ ಪಡೆದೆನೆಂಬುದು ಬಂಧನ ಕಾಣಿರೆಲವೋ ಮರುಳು ಮಾನವರಿರಾ. ದೇವಾತಾದಿಭೋಗಂಗಳ ಪಡೆದಿಹೆನೆಂದು ಪರಿಣಾಮಿಸುವ ಗಾವಿಲರನೇನೆಂಬೆನಯ್ಯ? ದನುಜಪದ ನಿತ್ಯವೆಂಬ ಮನುಜರ ಮರುಳತನವ ನೋಡಾ. ಬ್ರಹ್ಮವಿಷ್ಣು ಇಂದ್ರಾದಿಗಳಿಗೊಡೆಯನಾದ ರುದ್ರನ ಪದವ ಪಡೆದೆನೆಂಬುದು- ಅದು ಅಂತಿರಲಿ. ಅದೇನು ಕಾರಣವೆಂದರೆ: ಇವೆಲ್ಲವೂ ಅನಿತ್ಯಪದವಾದ ಕಾರಣ. ಇವೆಲ್ಲ ಪದಂಗಳಿಗೂ ಮೇಲಾದ ಮಹಾಲಿಂಗ ಪದವೇ ನಿತ್ಯತ್ವಪದ. ಆ ಮಹಾಲಿಂಗ ಪದದೊಳಗೆ ಸಂಯೋಗವಾದ ಘನಲಿಂಗ ಪದಸ್ಥ ಶರಣನು ತನಗನ್ಯವಾಗಿ ಒಂದು ವಸ್ತುವ ಬಲ್ಲನೇ ಅನನ್ಯ ಶರಣನು? ಇದು ಕಾರಣ, ತನುವ ಬಳಲಿಸಿ ತಪವಮಾಡಿ ಫಲಪದವ ಪಡೆದು ಭೋಗಿಸಿಹೆನೆಂಬವರ ವಿಧಿಯೆಲ್ಲ ಹಂದಿ ತಪವಮಾಡಿ ಹಾಳು[ಗೇರಿ]ಯ ಹಡೆದಂತಾಯಿತ್ತು ಕಾಣಾ. ಶಿವಪದವಲ್ಲದೆ ಉಳಿದ ಪದವೆಲ್ಲಾ ಹುಸಿ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಮಾಡುವ ಭಕ್ತ ನೀನೆಯೆಂದರಿದೆ ; ಮಾಡಿಸಿಕೊಂಬ ದೇವ ನೀನೆಯೆಂದರಿದೆ. ಇದು ಕಾರಣ, ಅಖಂಡೇಶ್ವರಾ, ನಾ ನಿಮ್ಮ ಫಲಪದವ ಬೇಡಲಿಲ್ಲ ; ನೀವೊಲಿದು ಎನಗೆ ಕೊಡಲಿಲ್ಲ.
--------------
ಷಣ್ಮುಖಸ್ವಾಮಿ
ಎಮ್ಮ ಶಿವಗಣಂಗಳು ಕಲ್ಯಾಣಪುರದಲ್ಲಿ ಇಂತಪ್ಪ ಕಾಮಾಟದಿಂದ ಕಾಯಕವ ಮಾಡಿ ಜಂಗಮಾರ್ಚನೆ ಮಾಡುತ್ತಿರ್ದರಲ್ಲದೆ, ಲೌಕಿಕರ ಹಾಗೆ ಮಣ್ಣು ಕಲ್ಲಿನ ಕಾಮಾಟವ ಮಾಡಿ ನಾಲ್ಕು ಹಾಗದ ಕಾಂಚನವ ತಂದು, ಗುರು-ಲಿಂಗ-ಜಂಗಮಕ್ಕೆ ಭಿನ್ನವಿಟ್ಟು ಅರ್ಚಿಸಿ, ಫಲಪದವ ಪಡವರೆ, ಇಲ್ಲೆಂಬ ಹಾಗೆ. ಮತ್ತಂ, ಒಂದು ಸಮಯದಲ್ಲಿ ಮಾಡಿದಡೆಯೂ ಮಾಡುವರು. ಮಾಡಿದಡೆಯೂ ಜ್ಞಾನಕ್ಕೆ ಹಾನಿ ಇಲ್ಲ, ದೋಷವಿಲ್ಲ. ಅದೆಂತೆಂದಡೆ : ಶಿವಕೃಪೆಯಿಂ ದೇಹವ ತಾಳಿ ಮತ್ರ್ಯಲೋಕಕ್ಕೆ ಬಂದ ಮೇಲೆ, ಆ ದೇಹದಲ್ಲಿರುವ ಪರಿಯಂತರದಲ್ಲಿ ಅನ್ನ ಉದಕ ವಸ್ತ್ರದಿಂದ ದೇಹವ ರಕ್ಷಿಸಬೇಕಲ್ಲದೆ, ಆ ಅನ್ನ ಉದಕ ವಸ್ತ್ರದಿಂದ ದೇಹದ ಶೋಷಣವ ಮಾಡಲಾಗದು, ಮಾಡಿದಡೆ ಜ್ಞಾನಕ್ಕೆ ಹಾನಿ. ಅದೇನು ಕಾರಣವೆಂದಡೆ: ಅಂತಪ್ಪ ದೇಹಕ್ಕೆ ಅನ್ನ ಉದಕ ವಸ್ತ್ರದಿಂದ ಸುಖಿಸಿದಡೆ ಜ್ಞಾನಕ್ಕೆ ಹಾನಿ. ಹೀಗೆಂದರೆಂದು ಆ ದೇಹಕ್ಕೆ ಅನ್ನ ಉದಕ ವಸ್ತ್ರದಿಂದ ಶೋಷಣೆಯ ಮಾಡಿದಡೆಯು ಜ್ಞಾನಕ್ಕೆ ಹಾನಿ. ಈ ಉಭಯ ಭೇದವ ತಿಳಿದು ಆ ದೇಹ ನಿಮಿತ್ಯವಾಗಿ ಪ್ರಪಂಚವ ಮಾಡುವರಲ್ಲದೆ ಇಂದಿಂಗೆಂತು ನಾಳಿಂಗೆಂತು ಎಂದು ಹೆಂಡರು ಮಕ್ಕಳುಪಾದಿಯ ಪಿಡಿದು ಮಾಡುವರೆ ? ಮಾಡುವರಲ್ಲ. ಈ ನಿರ್ಣಯವನು ಶಿವಜ್ಞಾನಶರಣರೇ ಬಲ್ಲರಲ್ಲದೆ, ಈ ಲೋಕದ ಜಡಮತಿಗಳೆತ್ತ ಬಲ್ಲರಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
-->