ಅಥವಾ

ಒಟ್ಟು 6 ಕಡೆಗಳಲ್ಲಿ , 4 ವಚನಕಾರರು , 6 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪ್ರಥಮಾಂಗುಲದಲ್ಲಿ ಉಪದೃಷ್ಟ. ಉಭಯಾಂಗುಲದಲ್ಲಿ ಕರ್ಮಕ್ರೀ. [ತ್ರಿವಿ]ಧಾಂಗುಲದಲ್ಲಿ ಸಂ[ಶ]ಯಸಿದ್ಧಿ. ಚತುರ್ವಿಧ ಅಂಗುಲದಲ್ಲಿ ಚತುರ್ವಿಧ ಫಲಪದ. ಪಂಚಮಪಕ್ಷದಲ್ಲಿ ಸಂಚಿತ ಪ್ರಾರಬ್ಧ ಆಗಾಮಿಗಳೆಂಬ ಭವದ ಗೊಂಚಲ ಸಂಚಂಗಳಿಲ್ಲ. ಇದು ಪಂಚಾಕ್ಷರಿಯ ಪ್ರಣಮಮಂತ್ರದ ಕ್ರೀ ಆಚಾರ್ಯನಂಗ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.
--------------
ಪ್ರಸಾದಿ ಭೋಗಣ್ಣ
ಇಂತೀ ಕ್ರಮದಲ್ಲಿ ಗುರು-ಲಿಂಗ-ಜಂಗಮಕ್ಕೆ ತನು-ಮನ-ಧನ ನೀಡಿದ ಭಕ್ತಗಣಂಗಳಿಗೆ ಮೋಕ್ಷವೆಂಬುದು ಕರತಳಾಮಳಕವಾಗಿರ್ಪುದು. ಇಂತಪ್ಪ ವಿಚಾರವ ತಿಳಿಯದೆ ಮೂಢಮತಿಯಿಂದ ಗುರು-ಲಿಂಗ-ಜಂಗಮಕ್ಕೆ ತನು-ಮನ-ಧನವ ನೀಡಿದಾತನೇ ಭಕ್ತನೆಂದು ವೇದಾಗಮಶ್ರುತಿ ಪ್ರಮಾಣವಾಕ್ಯಂಗಳು ಸಾರುತ್ತಿರ್ಪವು. ಆ ಶ್ರುತಿ ಸಾರಿದ ವಾಕ್ಯಗಳು ಪ್ರಮಾಣ. ಅದೆಂತೆಂದಡೆ: ಅಂತಪ್ಪ ಶ್ರುತಿವಾಕ್ಯಂಗಳ ಕೇಳಿ ಸ್ವಾನುಭಾವಗುರುಮುಖದಿಂದ ವಿಚಾರಿಸಿಕೊಳ್ಳಲರಿಯದೆ, ತಮ್ಮಲ್ಲಿ ಸ್ವಯಂಜ್ಞಾನೋದಯವಾಗಿ ತಾವು ತಿಳಿಯದೆ ಮೂಢಮತಿಯಿಂದ ಅಜ್ಞಾನ ಎಡೆಗೊಂಡು ಗುರುವಿಗೆ ತನುವ ನೀಡಬೇಕೆಂದು, ಆ ಗುರುವಿನ ಸೇವಾವೃತ್ತಿಯಿಂದ ತನುವ ದಂಡನೆಯ ಮಾಡುವರು. ಅದೇನು ಕಾರಣವೆಂದಡೆ: ಗುರುವಿನ ನಿಲುಕಡೆಯನರಿಯದ ಕಾರಣ. ಲಿಂಗಕ್ಕೆ ಮನವ ನೀಡಬೇಕೆಂದು ಧೂಪ-ದೀಪ-ನೈವೇದ್ಯ-ತಾಂಬೂಲ ಮೊದಲಾದ ಅಷ್ಟವಿಧಾರ್ಚನೆ ಷೋಡಶೋಪಚಾರಂಗಳ ಮಾಡಿ, ಹಸ್ತದಲ್ಲಿರುವ ಇಷ್ಟಲಿಂಗದಲ್ಲಿ ಮನವ ನಿಲ್ಲಿಸಬೇಕೆಂದು ಎವೆಗೆ ಎವೆ ಹೊಡೆಯದೆ ಸತ್ತ ಮಲದ ಕಣ್ಣಿನಂತೆ ಕಣ್ಣು ತೆರೆದು ನೋಡಿದಡೆ ಆ ಕಲ್ಲಲಿಂಗದಲ್ಲಿ ಮನವು ನಿಲ್ಲಬಲ್ಲುದೆ ? ನಿಲ್ಲಲರಿಯದು. ಅದೇನು ಕಾರಣವೆಂದಡೆ : ಆ ಇಷ್ಟಬ್ರಹ್ಮದ ನಿಜನಿಲುಕಡೆಯ ಸ್ವರೂಪ ತಾವೆಂದರಿಯದ ಕಾರಣ. ಇಂತೀ ಪರಿಯಲ್ಲಿ ಮನವ ಬಳಲಿಸುವರು. ಜಂಗಮಕ್ಕೆ ಧನವ ನೀಡಬೇಕೆಂದು ಅನ್ನ-ವಸ್ತ್ರ ಮೊದಲಾದ ಹದಿನೆಂಟು ಧಾನ್ಯ ಜೀನಸು ಸಹವಾಗಿ ನಾನಾ ಧಾವತಿಯಿಂದ ಗಳಿಸಿ ಸಕಲ ಪದಾರ್ಥವನು ಜಂಗಮಕ್ಕೆ ನೀಡಿ, ಆತ್ಮನ ಬಳಲಿಸುವರು. ಅದೇನು ಕಾರಣವೆಂದಡೆ, ಆ ಜಂಗಮದ ನಿಜನಿಲುಕಡೆಯ ಸ್ವರೂಪ ತಾವೆಂದರಿಯದ ಕಾರಣ. ಇಂತಿವೆಲ್ಲವು ಹೊರಗಣ ಉಪಚಾರ. ಈ ಹೊರಗಣ ಉಪಚಾರವ ಮಾಡಿದವರಿಗೆ ಪುಣ್ಯಫಲಪ್ರಾಪ್ತಿ ದೊರಕೊಂಬುವದು. ಆ ಪುಣ್ಯಫಲ ತೀರಿದ ಮೇಲೆ ಮರಳಿ ಭವಬಂಧನವೇ ಪ್ರಾಪ್ತಿ. ಅದೆಂತೆಂದಡೆ : ಪುಣ್ಯವೇ ತೈಲ, ಫಲವೇ ಜ್ಯೋತಿ. ತೈಲವು ತೀರಿದ ಹಾಗೆ ಆ ಜ್ಯೋತಿಯ ಪ್ರಕಾಶ ಅಡಗುವದು. ಪುಣ್ಯ ತೀರಿದ ಮೇಲೆ ಫಲಪದ ನಾಶವಾಗುವದು ನೋಡೆಂದ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಇಂತಪ್ಪ ಶ್ರೀವಿಭೂತಿಯ ಧರಿಸಲರಿಯದೆ ಶ್ವೇತ, ಪೀತ, ಕಪೋತ, ಮಾಂಜಿಷ್ಟ, ಮಾಣಿಕ್ಯವೆಂಬ ಪಂಚವರ್ಣದ ಗೋವಿಗೆ ಭೂಮಿಯ ಸಾರಿಸಿ ಆ ಭೂಮಿಯಲ್ಲಿ ಪಂಚಗೋವುಗಳ ಕಟ್ಟಿ, ಪೂಜೋಪಚಾರ ಮಾಡಿ, ಮಂತ್ರದಿಂದ ಅನ್ನ ಉದಕವ ಹಾಕಿ, ಆ ಗೋವಿನ ಸಗಣಿ ಭೂಮಿಗೆ ಬೀಳದೆ ಅಂತರದಲ್ಲಿಯೇ ಪಿಡಿದು, ಕುಳ್ಳು ಮಾಡಿ ಬಿಸಿಲಿಲ್ಲದೆ ನೆರಳಲ್ಲಿ ಒಣಗಿಸಿ, ಮಂತ್ರದಿಂದ ನೆಲ ಸಾರಿಸಿ, ಮಂತ್ರದಿಂದ ಸುಟ್ಟು ಭಸ್ಮವ ಮಾಡಿ, ಆ ಭಸ್ಮಕ್ಕೆ ಜಂಗಮಾರ್ಚನೆಯ ಮಾಡಿ, ಜಂಗಮದ ಪಾದೋದಕದಿಂದ ಆ ಭಸ್ಮವ ಮಂತ್ರದಿಂದ ಶುದ್ಧಸಂಸ್ಕಾರವ ಮಾಡಿ, ಇಂತಪ್ಪ ವಿಭೂತಿಯ ತ್ರಿಕಾಲದಲ್ಲಿ ಕ್ರೀಯವಿಟ್ಟು ಧರಿಸಿ ಲಿಂಗಾರ್ಚನೆಯ ಮಾಡಿದವರಿಗೆ ಸಕಲ ಕಂಟಕಾದಿಗಳ ಭಯ ಭೀತಿ ನಷ್ಟವಾಗಿ ಚತುರ್ವಿಧಫಲಪದಪ್ರಾಪ್ತಿ ದೊರಕೊಂಬುವದು. ಆ ಫಲಪದ ಪಡೆದವರು ವೃಕ್ಷದ ಮೇಲೆ ಮನೆಯ ಕಟ್ಟಿದವರು ಉಭಯರು ಒಂದೆ. ಅದೆಂತೆಂದಡೆ: ವೃಕ್ಷದ ಮೇಲೆ ಮನೆ ಕಟ್ಟಿದವರು ಆ ವೃಕ್ಷವಿರುವ ಪರ್ಯಂತರವು ಆ ಮನೆಯಲ್ಲಿರುವರು. ಆ ವೃಕ್ಷವು ಮುಪ್ಪಾಗಿ ಅಳಿದುಹೋದಲ್ಲಿ ನೆಲಕ್ಕೆ ಬೀಳುವರಲ್ಲದೆ, ಅಲ್ಲೆ ಸ್ಥಿರವಾಗಿ ನಿಲ್ಲಬಲ್ಲರೆ? ನಿಲ್ಲರೆಂಬ ಹಾಗೆ. ಸಾಲೋಕ್ಯ, ಸಾಮೀಪ್ಯ, ಸಾರೂಪ್ಯ, ಸಾಯುಜ್ಯವೆಂಬ ಚತುರ್ವಿಧಫಲಪದವ ಪಡೆದವರು ಆ ಫಲಪದವಿ ಇರುವ ಪರ್ಯಂತರವು ಸ್ಥಿರವಾಗಿ ಇರುವರಲ್ಲದೆ, ಆ ಫಲಪದವಿ ಕಾಲೋಚಿತದ ಮೇಲೇರಿ ಅಳಿದು ನಾಶವಾದ ಮೇಲೆ ಮರಳಿ ಭವಕ್ಕೆ ಬೀಳುವರಲ್ಲದೆ, ಅಲ್ಲಿ ಸ್ಥಿರವಾಗಿ ನಿಲ್ಲಲರಿಯರೆಂದು ನಿಮ್ಮ ಶರಣ ಕಂಡು ಅದು ಮಾಯಾಜಾಲವೆಂದು ತನ್ನ ಪರಮಜ್ಞಾನದಿಂ ಭೇದಿಸಿ ಚಿದ್‍ವಿಭೂತಿಯನೇ ಸರ್ವಾಂಗದಲ್ಲಿ ಧರಿಸಿ, ಶಿಖಿ-ಕರ್ಪುರದ ಸಂಯೋಗದ ಹಾಗೆ ಆ ಚಿದ್ಭಸ್ಮದಲ್ಲಿ ನಿರ್ವಯಲಾದನಯ್ಯಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ವೇದವನೋದಿದವರೆಲ್ಲ ನಮ್ಮ ಶರಣರು ಹೋದ ಹಾದಿಯನರಿಯದೆ, ನಾಹಂ ಎಂದು ಅಹಂಕರಿಸಿ, ಅನಿತ್ಯದೇಹಿಗಳಾಗಿ, ಅನಾಮಿಕರಾಗಿಹೋದರು. ಶಾಸ್ತ್ರವನೋದಿದವರೆಲ್ಲ ನಮ್ಮ ಶರಣರು ಹೋದ ಹಾದಿಯನರಿಯದೆ, ಶ್ರವಣ, ಸನ್ಯಾಸಿ, ಯೋಗಿ, ಜೋಗಿಯಾಗಿ ಹೀಗೆ ಕೆಲಬರು ಕೆಟ್ಟರು. ಆಗಮವನೋದಿದವರೆಲ್ಲ ನಮ್ಮ ಶರಣರು ಹೋದ ಹಾದಿಯನರಿಯದೆ, ಕ್ರಿಯಾಪಾದ, ಚರ್ಯಪಾದ, ಜ್ಞಾನಪಾದವೆಂದು ನಾನಾಪರಿಯ ಕರ್ಮಭಕ್ತಿಯ ಮಾಡಿ, ಲಿಂಗ ಜಂಗಮದ ಮರ್ಮವನರಿಯದೆ, ಅಧರ್ಮಿಗಳಾಗಿ ಹೋದರು. ಪುರಾಣವನೋದಿದವರೆಲ್ಲ ನಮ್ಮ ಪುರಾತರು ಹೋದ ಹಾದಿಯನರಿಯದೆ, ಪುರದ ಬೀದಿಯೊಳಗೆ ಮಾತು ಕಥೆಯ ಪಸಾರವನಿಕ್ಕಿ ಮಾಡಿ, ಫಲಪದ ಮುಕ್ತಿಗೆ ಸಲ್ಲದೆ ಹೋದರು. ಇದು ಕಾರಣ, ಈ ಚತುರ್ವಿಧದೊಳಗಾವಂಗವೂ ಅಲ್ಲ . ಎಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣನ ಶರಣರ ಪರಿ ಬೇರೆ.
--------------
ಹಡಪದ ಅಪ್ಪಣ್ಣ
ಭಕ್ತರಾದೆವೆಂಬರು_ಭಕ್ತಿಯ ಪರಿಯನರಿಯರು ಭಕ್ತರೆಂತಾದಿರಯ್ಯಾ ? ಮಾಹೇಶ್ವರರಾದೆವೆಂಬರು, _ಆದಿ ಅನಾದಿಯ ಅರಿಯದನ್ನಕ್ಕ ಮಾಹೇಶ್ವರರೆಂತಾದಿರಯ್ಯಾ ? ಪ್ರಸಾದಿಗಳಾದೆವೆಂಬರು, _ಪ್ರಸಾದದ ಅರ್ಪಿತ ಆಯತವನರಿಯದೆ ಪ್ರಸಾದವ ಗ್ರಹಿಸುವನ್ನಕ್ಕ ಪ್ರಸಾದಿಗಳೆಂತಾದಿರಯ್ಯಾ ? ಪ್ರಾಣಲಿಂಗಿಗಳಾದೆವೆಂಬರು_ನಡೆ ನುಡಿ ಭಾವ ಎರಡಾಗಿದೆ ಪ್ರಾಣಲಿಂಗಿಗಳೆಂತಾದಿರಯ್ಯಾ ? ಶರಣನಾದೆವೆಂಬರು_ಇಂದ್ರಿಯಂಗಳ ಭಿನ್ನವಿಟ್ಟು ವರ್ತಿಸುವನ್ನಕ್ಕ ಶರಣರೆಂತಾದಿರಯ್ಯಾ ? ಐಕ್ಯವಾದೆವೆಂಬರು_ಧರ್ಮಕರ್ಮ ಚತುರ್ವಿಧದ ಫಲಪದ ಮೋಕ್ಷ ಜನನ ಮರಣ ಬೆನ್ನ ಬಿಡದೆ ಐಕ್ಯರೆಂತಾದಿರಯ್ಯಾ ? ಕೂಡಲಚೆನ್ನಸಂಗಮದೇವರಲ್ಲಿ ಈ ಷಡುಸ್ಥಲದ ನಿರ್ಣಯವ ಬಸವಣ್ಣನೆ ಬಲ್ಲ.
--------------
ಚನ್ನಬಸವಣ್ಣ
ಎನಗೆನ್ನ ಗುರುಬಸವಣ್ಣ ತೋರಿದ ಘನವ, ನಿಮಗೆ ಬಿನ್ನೈಸುವೆನು ಕೇಳಾ ಪ್ರಭುವೆ. ಪ್ರಸಾದದಿಂದ ಹುಟ್ಟಿದ ಕಾಯಕ್ಕೆ ಪ್ರಸಾದದಿಂದೊಗೆದ ಲಿಂಗವ ಕೊಟ್ಟು ಪ್ರಸಾದಲಿಂಗಮುಖದಲ್ಲಿ ಪ್ರಸಾದಮಯವಾದ, ಪ್ರಣವಪಂಚಾಕ್ಷರಿಯ ಪ್ರಸಾದಿಸಿ ತನ್ನಾದಿರೂಪಿನಲ್ಲಿ ಅನಾದಿಲಿಂಗಪ್ರಸಾದವ ಭೋಗವ ಮಾಡಿ ಆ ಪ್ರಸಾದದಿಂದೊಗೆದ ಪ್ರಸಾದವ ತನ್ನ ಪ್ರಸಾದಜ್ಞಾನವೆಂಬ ಪರಮಶಿಖಿಯಿಂದ ದಹನ ಮಾಡಿ, ಎನಗೆ, ಸಮಸ್ತ ಶಿವಭಕ್ತರ್ಗೆ ಇದು ಭಕ್ತಿ ನೀತಿಯೆಂದು ವಿಭೂತಿಯನಿಟ್ಟು ತ್ರಿಪುರದ ಸಂಚವನಳಿದು ತ್ರಿಜಗವ ರಕ್ಷಿಸಲೆಂದು ತ್ರಿಲೋಚನದಲ್ಲಿ ಉಗ್ರಶಾಂತಿ ಗಾಂಭೀರ್ಯವೆಂಬ ಜಲಬಿಂದುವೆ ಬೀಜವಾಗಿ ಬೆಳೆದ ರುದ್ರಾಕ್ಷಿಯ ಧರಿಸಿ, ಶಾಂಭವೀಮುದ್ರೆಯನೊತ್ತಿ ನಾದ ಬಿಂದು ಕಳೆಯೊಂದಾದಂದಿನ ಅನಾದಿ ಬೋಧಚೈತನ್ಯಜ್ಞಾನಲಿಂಗ ತಾನೆ ಜಂಗಮವೆಂದು ತಿಳುಹಿ ಆ ಜಂಗಮದ ಪಾದೋದಕ ಪ್ರಸಾದವೆ ಇಷ್ಟವಾದ ಷಡ್ವಿಧಲಿಂಗದ ಮೂಲಾಂಗವೆನಿಸುವ ಇಷ್ಟಲಿಂಗಕ್ಕೆ ಮಜ್ಜನ ನೈವೇದ್ಯವ ಸಜ್ಜನಸುದ್ಧ ಶಿವಭಕ್ತಿಯಿಂದ ಮಾಡೆಂದ ಬಸವಣ್ಣ. ಅದೆಂತೆಂದಡೆ; ಹಂಸೆಗೆ ಹಾಲನೆರೆವರಲ್ಲದೆ ಹುಳಿಯನೆರೆವರೆ ? ಇಷ್ಟಲಿಂಗಕ್ಕೆ ಪ್ರಸಾದವೆ ಭೋಜನವೆಂದು ಬಸವಣ್ಣ ನಿರೂಪಿಸಲು, `ನಿರಂತರವೆ ? ಎಂದು ಬಿನ್ನೈಸೆ, ಬೋಧಿಸಿದ ಬಸವಣ್ಣನು. ಅದೆಂತೆಂದಡೆ; ಪದಾರ್ಥವ ಕೊಟ್ಟಡೆ ಫಲಪದ ತಪ್ಪದು, ಪ್ರಸಾದವ ಕೊಟ್ಟಡೆ ಫಲಂ ನಾಸ್ತಿ ಪದಂ ನಾಸ್ತಿ ಭವಂ ನಾಸ್ತಿ ಎಂದನಯ್ಯಾ ಎನ್ನ ಗುರು ಬಸವಣ್ಣನು. ಅದೆಂತೆಂದಡೆ; ಪದಾರ್ಥವೆ ಕರ್ಮರೂಪು, ಪ್ರಸಾದವೆ ನಿಃಕರ್ಮರೂಪು. `ದ್ರವ್ಯಂ ಕ್ರಿಯಾಸ್ವರೂಪಂ ಚ ಪ್ರಸಾದೋ ಕರ್ಮಬಾಹ್ಯಕಃ ಪದಾರ್ಥೋ ಜನ್ಮಹೇತುಃ ಸಾತ್ ಪ್ರಸಾದೋ ಭವನಾಶಕಃ ಇಂತೆಂದು ನುಡಿದು, ನಡೆದು ತೋರಿ ಹೊರೆದನಲಾ ಬಸವಣ್ಣ, ಸಕಲ ಮಾಹೇಶ್ವರರ. ಇದನರಿದು ಕೊಡುವದು, ಇದನರಿದು ಕೊಂಬುದು ಇದೇ ಭಕ್ತಿಗೆ ಬೇಹ ಬುದ್ಧಿ, ಇದೇ ಪ್ರಸಾದಕ್ಕೆ ಪರಮಕಾರಣ. ಇಂತಲ್ಲದವಂಗೆ ಲಿಂಗವಿಲ್ಲ; ಲಿಂಗವಿಲ್ಲಾಗಿ ಪ್ರಸಾದವಿಲ್ಲ. ಇದನರಿದು, ಗುರುವಿಡಿದು ಲಿಂಗದಿಚ್ಛೆಯನರಿದು ಸುಖಿಸಿದೆನಯ್ಯಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
-->