ಅಥವಾ

ಒಟ್ಟು 5 ಕಡೆಗಳಲ್ಲಿ , 4 ವಚನಕಾರರು , 5 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಯ್ಯಾ, ಕೊಟ್ಟ ಲಿಂಗವ ಮರಳಿ ಕೊಂಡು ಬಾ ಎಂದು ಎನ್ನನಟ್ಟಿದನಯ್ಯಾ ಶಶಿಧರನು ಮತ್ರ್ಯಕ್ಕೆ. ನಿಮ್ಮ ಮುಖದಿಂದ ಎನ್ನ ಭವ ಹರಿವುದೆಂದು ಹರಹಿಕೊಂಡಿದ್ದೆನಯ್ಯಾ ದಾಸೋಹವನು. ನಿಮ್ಮ ಬರವ ಹಾರಿ ಸವೆದವು ಒಂದನಂತ ದಿನಗಳು, ಇಂದೆನ್ನ ಪುಣ್ಯದ ಫಲದಿಂದ ಎನಗೆ ಗೋಚರವಾದಿರಿ, ಹಿಂದಣ ಸಂದೇಹ ಸೂತಕ ಹಿಂಗಿತ್ತು. ಎನ್ನ ಪ್ರಾಣಲಿಂಗವು ನೀವೇ ಆಗಿ, ಎನ್ನ ಸರ್ವಾಂಗಲಿಂಗದಲ್ಲಿ ಸನ್ನಿಹಿತವಾಗಿ, ಎನ್ನ ಚಿಂತೆಯ ನಿಶ್ಚಿಂತೆಯ ಮಾಡಾ ಕೂಡಲಸಂಗಮದೇವ ಪ್ರಭುವೆ.
--------------
ಬಸವಣ್ಣ
ಬೇಕು ಬೇಡೆನ್ನದೆ, ಸಾಕು ಸವಿಯೆನ್ನದೆ, ಆಕಾರವಿದು ತಾನು ಒಲ್ಲೆನೆನದೇಕೈಕ ರುದ್ರ ನಾನಾದೆನು ಎನ್ನದೆ, ಅನೇಕ ಪರಿಯಿಂ ಭಜಿಸು ಸಮತೆ ಪದವಾ. ಆ ಪದದ ಫಲದಿಂದ ನೀ ತಾನೆ ಅಪ್ಪೆಯೈ ಏಕೆ ಭ್ರಾಂತಪ್ಪೆಯೈ. ಗುರು ಕರುಣವು ತನ್ನ ಪದವನೆಯ್ದಿತ್ತು, ನಿನ್ನ ಭವನಾಶವನು ಮುನ್ನವೆ ಮಾಡೂದು ನಂಬು ಕಪಿಲಸಿದ್ಧಮಲ್ಲೇಶನಾ.
--------------
ಸಿದ್ಧರಾಮೇಶ್ವರ
ಒಂದರಳ ಶಿವಂಗೆಂದ ಫಲದಿಂದ ಶಿವಪದಂಗಳಾದುದ ಕೇಳಿಯರಿಯಾ ? ಒಂದರಳನೇರಿಸುವಲ್ಲಿ ಅಡ್ಡವಿಸಿದರೆ ಗೊಂದಣದ ಕುಲಕೋಟಿಗೆ ನರಕ ಕಾಣಾ. ಇಂದು ಚೆನ್ನಮಲ್ಲಿಕಾರ್ಜುನನ ವೇಳೆ ತಡೆದಡೆ ಮುಂದೆ ಬಹ ನರಕಕ್ಕೆ ಕಡೆಯಿಲ್ಲ ಮರುಳೆ.
--------------
ಅಕ್ಕಮಹಾದೇವಿ
ಎಲೆ ಕರುಣಿ, ಜನನಿಯ ಜಠರಕ್ಕೆ ತರಬೇಡವಯ್ಯ. ತಂದರೆ ಮುಂದೆ ತಾಪತ್ರಯಕ್ಕೊಳಗಾದ ತರಳೆಯ ದುಃಖದ ಬಿನ್ನಪವ ಕೇಳಯ್ಯ. ಆಚಾರಲಿಂಗಸ್ವರೂಪವಾದ ಘ್ರಾಣ, ಗುರುಲಿಂಗಸ್ವರೂಪವಾದ ಜಿಹ್ವೆ, ಶಿವಲಿಂಗಸ್ವರೂಪವಾದ ನೇತ್ರ, ಜಂಗಮಲಿಂಗಸ್ವರೂಪವಾದ ತ್ವಕ್ಕು, ಪ್ರಸಾದಲಿಂಗಸ್ವರೂಪವಾದ ಶ್ರೋತ್ರ, ಮಹಾಲಿಂಗಸ್ವರೂಪವಾದ ಪ್ರಾಣ, ಪಂಚಬ್ರಹ್ಮ ಸ್ವರೂಪವಾದ ತನು, ಇಂತಿವೆಲ್ಲವು ಕೂಡಿ ಪರಬ್ರಹ್ಮಸ್ವರೂಪ ತಾನೆಯಾಗಿ, ಆನೆಯ ರೂಪತಾಳಿ ಕೇರಿಯ ನುಸುಳುವ ಹಂದಿಯಂತೆ, ಮೆಟ್ಟುಗುಳಿಯೊತ್ತಿನ ಉಚ್ಚೆಯ ಬಚ್ಚಲೆಂಬ ಹೆಬ್ಬಾಗಿಲ ದಿಡ್ಡಿಯಲ್ಲಿ, ಎಂತು ನುಸುಳುವೆನಯ್ಯ?. ಹೇಸಿ ಹೇಡಿಗೊಂಡೆನಯ್ಯ, ನೊಂದೆನಯ್ಯ, ಬೆಂದೆನಯ್ಯ. ಬೇಗೆವರಿದು ನಿಂದುರಿದೆನಯ್ಯ. ಎನ್ನ ಮೊರೆಯ ಕೇಳಯ್ಯ ಮಹಾಲಿಂಗವೇ. ಎನ್ನ ಭವಕ್ಕೆ ನೂಂಕಬೇಡಯ್ಯ. ನಾನು ಅನಾದಿಯಲ್ಲಿ ಭೋಗಕ್ಕಾಸೆಯ ಮಾಡಿದ ಫಲದಿಂದ, ಅಂದಿಂದ ಇಂದು ಪರಿಯಂತರ ನಾನಾ ಯೋನಿಯಲ್ಲಿ ಬಂದು, ನಾಯಿಯುಣ್ಣದ ಓಡಿನಲ್ಲಿ ಉಂಡು, ನರಗೋಟಲೆಗೊಂಡೆನಯ್ಯ. ಎನಗೆ ಹೊನ್ನು ಬೇಡ, ಹೆಣ್ಣು ಬೇಡ, ಮಣ್ಣು ಬೇಡ, ಫಲವು ಬೇಡ, ಪದವು ಬೇಡ ನಿಮ್ಮ ಶ್ರೀಪಾದವನೊಡಗೂಡಲೂಬೇಡ, ಎನಗೆ ಪುರುಷಾಕಾರವೂ ಬೇಡವಯ್ಯ. ಎನ್ನ ಮನ ಒಪ್ಪಿ, ಪಂಚೈವರು ಸಾಕ್ಷಿಯಾಗಿ, ನುಡಿಯುತ್ತಿಪ್ಪೆನಯ್ಯಾ. ನಿಮ್ಮಾಣೆ, ಎನಗೊಂದ ಕರುಣಿಸಯ್ಯ ತಂದೆ, ಡೋಹರ ಕಕ್ಕಯ್ಯ, ಮಾದಾರ ಚೆನ್ನಯ್ಯ, ಅಂಬಿಗರ ಚೌಡಯ್ಯ ಇಂತಪ್ಪ ಶಿವಶರಣರ ಮನೆಯ ಬಾಗಿಲ ಕಾವ ಶುನಕನ ಮಾಡಿ ಎನ್ನ ನೀ ನಿಲಿಸಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಪದ ಫಲ ಭವಕೆ ತಾರರಯ್ಯ ನಿನ್ನ ಧರ್ಮ. ಪದದಿಂದ ಫಲದಿಂದ ಭವ, ಆ ಭವದಿಂದ ನರಕ. ಇಂತಪ್ಪವನೆನಗೆ ತೋರರಯ್ಯ ನಿಮ್ಮ ಧರ್ಮ. ಇಂತಪ್ಪವನೆನ್ನವರಿಗೆಯೂ ತೋರದಿರಯ್ಯಾ ನಾನೂ ಎನ್ನವರೂ ಕೂಡಿ ನಿನ್ನ ಬೇಡಿಕೊಂಬೆವಯ್ಯಾ ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
-->