ಅಥವಾ

ಒಟ್ಟು 14 ಕಡೆಗಳಲ್ಲಿ , 10 ವಚನಕಾರರು , 14 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅತ್ತಿಯ ಹಣ್ಣು ಹಸ್ತ ನೇತ್ರಕ್ಕೆ ಮೃದು ಮಿಶ್ರವಿರ್ದಡೇನು, ಬಿಚ್ಚಿದರೆ ಕ್ರಿಮಿ ಘನವಯ್ಯಾ. ದುಃಸಂಸಾರಿ ಸಮಯಕ್ಕೆ ನಾಚಿ ಲಾಂಛನಧಾರಿಯಾದಡೇನು, ನುಡಿ ರೂಪು ನಯನ ನುಣುಪಲ್ಲದೆ, ಮನಭಾವವನೊರೆದುನೋಡಿದರೆ ದುಷ್ಕರ್ಮಘನ ಕಾಣಾ. ಇಂತಲ್ಲದೆ ನಿಮ್ಮ ಶರಣ ಗುರುನಿರಂಜನ ಚನ್ನಬಸವಲಿಂಗಾ ತೆಂಗು ಬಾಳೆಯ ಫಲದಂತೆ ಬಿಚ್ಚಿನೋಡಿದರೆ ಲಿಂಗಸಾರಾಯಸುಖಿ ನೋಡಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಪರ್ಣದ ಮರೆಯ ಫಲದಂತೆ, ಬಣ್ಣದ ಮರೆಯ ಬಂಗಾರದಂತೆ, ತಂತು ಚರ್ಮಂಗಳಲ್ಲಿ ತೋರುವವನ ಗತಿಯಂತೆ. ಕಾಯದಲ್ಲಿ ಸುಳುಹುದೋರುತ್ತ. ಭಾವದಲ್ಲಿ ಪರವನಾಚರಿಸುತ್ತ ಕಾಯದ ಮರೆಯಲ್ಲಿ ತಿರುಗಾಡುವ ಭಾವಶುದ್ಧಾತ್ಮ ಉಭಯಕ್ಕೆ ಕಾಲಾಂತಕ ಬ್ಥೀಮೇಶ್ವರಲಿಂಗವು ಅವರ ಬಾಗಿಲಲ್ಲಿಬಳಸಾಡುತಿಪ್ಪನು.
--------------
ಡಕ್ಕೆಯ ಬೊಮ್ಮಣ್ಣ
ಅರಿದೆಹೆನೆಂದು ಭಾವಿಸುವನ್ನಕ್ಕ, ಶರೀರವಳಿದ ಮತ್ತೆ, ಅರಿವುದೇನು ? ಸಕಲಭೋಗಂಗಳಲ್ಲಿ ಇದ್ದು ಬೆರಸಿ, ಮಗ್ನವಾಗದೆ ಗೇರಿನ ಫಲದಂತೆ ಇರು. ಗುಡಿಯೊಡೆಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗವನರಿವುದಕ್ಕೆ.
--------------
ಮನುಮುನಿ ಗುಮ್ಮಟದೇವ
ಬ್ರಹ್ಮ ಅವ್ವೆಯ ಗಂಡನಾದ. ವಿಷ್ಣು ಅಕ್ಕನ ಗಂಡನಾದ. ರುದ್ರ ಕಿರುತಂಗಿಯ ಗಂಡನಾದ. ಈ ಮೂವರ ಹೋಬಳಿ ಇದೇನು ಚೋದ್ಯ! ಇಂತಿವು ಮಾಯಾಮಲಯೋನಿ ಸಂಬಂಧ. ಏಕಗುಣ ಭಾವ, ತರುಕೊಂಬು ಫಲದಂತೆ. ಸಾಕು ಸಂಸರ್ಗ, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಅರಿತಡೆ ಇಹಪರದವನಾಗಿ ಇದ್ದಲ್ಲಿ ಷಡ್ವಾದಿ ಸರ ಸಮನಾಗಿ ಭಿತ್ತಿಯ ಚಿತ್ರದಂತೆ ಸುಳಿದೋರದ ಸಲಿಲದಂತೆ, ಕಲೆದೋರದ ಫಲದಂತೆ, ತ್ರಿವಿಧಕ್ಕಲ್ಲದೆ ತೂತಿನ ಬಲವಿಲ್ಲದೆ ಆತನನರಿ, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಪೈರಿಗೆ ನೀರು ಬೇಕೆಂಬಲ್ಲಿ ಉಚಿತವನರಿದು ಬಿಡಬೇಕು. ಕ್ರೀಗೆ ಅರಿವು ಬೇಕೆಂಬಲ್ಲಿ ಉಭಯನರಿದು ಘಟಿಸಬೇಕು. ಏರಿ ಹಿಡಿವನ್ನಕ್ಕ ನೀರ ಹಿಡಿದಡೆ ಸುಖವಲ್ಲದೆ ಮೀರಿದರುಂಟೆ? ಕ್ರೀಯ ಬಿಡಲಿಲ್ಲ, ಅರಿವ ಮರೆಯಲಿಲ್ಲ. ಬೆಳೆಯ ಕೊಯಿದ ಮತ್ತೆ, ಹೊಲಕ್ಕೆ ಕಾವಲುಂಟೆ? ಫಲವ ಹೊತ್ತ ಪೈರಿನಂತೆ, ಪೈರನೊಳಕೊಂಡ ಫಲದಂತೆ, ಅರಿವು ಆಚರಣೆಯೆಲ್ಲ ನಿಂದು, ಆಚರಣೆ ಅರಿವಿನಲ್ಲಿ ಲೇಪನಾದ ಮತ್ತೆ ಕಾಮಭೀಮ ಜೀವಧನನೊಡೆಯನೆಂಬುದ ಭಾವಿಸಲಿಲ್ಲ.
--------------
ಒಕ್ಕಲಿಗ ಮುದ್ದಣ್ಣ
ಮೇಘಧಾರೆಯಿಂದ ಸುರಿದ ಹನಿಯೆಲ್ಲ ಮುತ್ತಪ್ಪವೆ ? ಧರೆಯ ಮೇಲಿಪ್ಪರೆಲ್ಲ ಶರಣರಪ್ಪರೆ ? ಪರುಷವ ಮುಟ್ಟದೆ ಪಾಷಾಣವ ಮುಟ್ಟಿದ ಕಬ್ಬುನ ಹೇಮವಹುದೆ ? ಅಷ್ಟವಿಧಾರ್ಚನೆ ಶೋಡಷೋಪಚಾರವ ಮಾಡಿ, ಭಾವ ಮುಟ್ಟದಿರ್ದಡೆ ವಾಯ ಕಾಣಿ ಭೋ. ರಜವ ತೂರಿ ಚಿನ್ನವನರಸುವಂತೆ, ನಿಮ್ಮನರಿಯದೆ, ಅಂಜನವನೆಚ್ಚಿದ ಕಣ್ಣಿಗೆ ತೋರೂದೆ ಕಡವರ ? ಜಂಗಮವ ನಂಬಿದ ಮಹಂತಂಗೆ ತೋರದಿಪ್ಪನೆ ತನ್ನ ? ಎಲ್ಲಾ ದೈವವ ಪೂಜಿಸಿ, ಬರಿದಾದೆಲವದ ಫಲದಂತೆ, ಸಕಳೇಶ್ವರನ ಸಕೀಲವನರಿಯದವರು ಇಲ್ಲಿಂದತ್ತಲೆ.
--------------
ಸಕಳೇಶ ಮಾದರಸ
ನೆನೆವುದು ನೆನೆಹಿಸಿಕೊಂಬುದು ಜಡನೆಂದು ಮತ್ತೆ, ನಾ ನೀನೆಂಬುದಿಲ್ಲ. ಬಾಳೆಯ ಫಲದಂತೆ, ಚೇಳಿಗೆ ಗರ್ಭವಾದಂತೆ, ವೇಣುವಿಗೆ ಅಕ್ಕಿ ಹುಟ್ಟಿದ ಮತ್ತೆ ಬಾಳುವೆ ಉಂಟೆ ? ನೀನೆಂಬುದ ತಾನರಿದಲ್ಲಿ, ನಾ ನೀನೆಂಬ ಭಾವವೇನೂ ಇಲ್ಲ. ಕಾಮಧೂಮ ಧೂಳೇಶ್ವರ ಏನೂ ಎನಲಿಲ್ಲ.
--------------
ಮಾದಾರ ಧೂಳಯ್ಯ
ಹಾಲಿನೊಳಗಿರ್ದ ತುಪ್ಪದಂತೆ ಎಳೆತರುವಿನೊಳಗಿರ್ದ ಫಲದಂತೆ ಮದುವಣಿಗರೊಳಗಿರ್ದ ಮಗನಂತೆ ತೋರದಿರ್ದನು ನಿರಂಜನ ಚನ್ನಬಸವಲಿಂಗ.
--------------
ದೇಶಿಕೇಂದ್ರ ಸಂಗನಬಸವಯ್ಯ
ಹಾಲು ಅನಿಲ ಕಂದಮೂಲ ಪರ್ಣಾಂಬು ಫಲಾದಿಗಳನೆ ಆಹಾರವ ಕೊಂಡು ಮುಕ್ತರಾದೆಹೆವೆಂಬ ಅಣ್ಣಗಳು ನೀವು ಕೇಳಿರೆ. ಆಹಾರವ ಕೊಂಡು ಅಣುರೇಣು ನೊರಜ ಸರ್ವ ಸರ್ಪ ಪಕ್ಷಿಗಳು ವಾಯುವನೇ ಉಂಡು ಬೆಳೆವವು ನೋಡಾ. ಖಗ ಮೃಗ ವಾನರ ಕ್ರಿಮಿ ಕೀಟಕ ಇವೆಲ್ಲವೂ ಕಂದಮೂಲ ಪರ್ಣಾಂಬುವನೆ ಉಂಡು ಬೆಳೆವವು ಕೇಳಿರಣ್ಣಾ. ಕ್ಷೀರಾಬ್ಧಿಯೊಳಗೆ ಹುಟ್ಟಿದ ಪ್ರಾಣಿಗಳೆಲ್ಲ ಕ್ಷೀರವನೆ ಉಂಡು ಬೆಳೆವವು. ನಿಮಗೆ ಮುಕ್ತಿಯುಂಟಾದಡೆ ಇವು ಮಾಡಿದ ಪಾಪವೇನು ಹೇಳಿರೇ ? ವಿಚಾರಿಸುವಡೆ ನಿಮ್ಮಿಂದ ಅವೆ ಹಿರಿಯರು ನೋಡಾ. ವಾಗದ್ವೈತವ ನುಡಿದು ಅನುವನರಿಯದೆ ಬರುಸೂರೆವೋದಿರಲ್ಲಾ. ಆದಿ ಅನಾದಿಯ ಅಂಗವ ಮಾಡಿ, ಆ ಮಹಾ ಅನಾದಿಯ ಪ್ರಕಾಶವನೆ ಶ್ರೀಗುರು ಸಾಕಾರಮೂರ್ತಿಯಂ ಮಾಡಿ, ಅಂಗ ಮನ ಪ್ರಾಣ ಸರ್ವಾಂಗದಲ್ಲಿ ನೆಲೆಗೊಳಿಸಿದ ಭೇದವನರಿತು, ಶ್ರೋತ್ರ ನೇತ್ರ ಘ್ರಾಣ ತ್ವಕ್ಕು ಜಿಹ್ವೆ ಮೊದಲಾದ ಸರ್ವೇಂದ್ರಿಯದಲ್ಲಿ ವೇಧಿಸಿಕೊಂಡು, ಶುದ್ಧ ಸುಯಿದಾನ ಸುಜ್ಞಾನದಿಂದ ಲಿಂಗಾವಧಾನ ಹಿಡಿದು ಅರ್ಪಿಸಿ, ಆ ಪರಮ ಪ್ರಸಾದವನುಂಡು, ಮಾತಂಗ ನುಂಗಿದ ನಾರಿವಾಳದ ಫಲದಂತೆ ಬಯಲುಂಡ ಪರಿಮಳದಂತೆ ನಿಜಗುರು ಭೋಗಸಂಗನೊಳು ಸಯವಾದ ಶರಣರಿರವು, ಮಿಕ್ಕಿನ ಭವಭಾರಿಗಳಿಗೆಂತು ಸಾಧ್ಯವಪ್ಪುದೊ, ಕೇಳಯ್ಯಾ.
--------------
ಭೋಗಣ್ಣ
ಯೋನಿಯಲ್ಲಿ ಹುಟ್ಟಿದ ಸಕಲಜೀವಂಗಳೆಲ್ಲ, ಮತ್ತೆ ಯೋನಿಯ ಬಯಕೆ, ಮತ್ತಾ ಯೋನಿಗಾಗಿ ಜನನ, ಯೋನಿಗಾಗಿ ಮರಣ. ಇಂತಿವ ತಿಳಿದ ಮತ್ತೆ ತಾವು ಅದರಲ್ಲಿ ಅಳಿವುತ್ತ ಮತ್ತೆ ಜ್ಞಾನವೆ ? ಮತ್ತೆ ಶಿವಧ್ಯಾನವೆ ? ಮತ್ತೆ ನಾನಾ ವ್ರತ ನೇಮವೆ ? ಶುದ್ಧ ಭಾವವೆ ? ಎಲ್ಲೆಲ್ಲಿ ನೋಡಿದಡೆ ಕಟಿಹದ ಬಿದಿರಿನಂತೆ, ತೊಟ್ಟು ಬಿಟ್ಟ ಹಣ್ಣಿನಂತೆ, ದ್ರವ ತಟ್ಟಾರಿದ ಫಲದಂತೆ, ನಿಶ್ಚಯವಾಗಿರ್ಪವರಲ್ಲಿಯಲ್ಲದೆ, ನಿಃಕಳಂಕ ಮಲ್ಲಿಕಾರ್ಜುನನು ಮತ್ತೆಲ್ಲಿಯೂ ಇಲ್ಲ.
--------------
ಮೋಳಿಗೆ ಮಾರಯ್ಯ
ಬೀಜದಿಂದ ಅಂಕುರ ತೋರಿದ ಬಳಿಕ ಬೀಜ ನಾಶವಪ್ಪುದು ನೋಡಯ್ಯ. ಪುಷ್ಟದಿಂದ ಫಲ ತೋರಿದ ಬಳಿಕ ಪುಷ್ಟ ನಾಶವಪ್ಪುದು ನೋಡಯ್ಯ. ಸತ್ಕರ್ಮದಿಂದ ತತ್ತ್ವ ವ್ಯಕ್ತವಾದ ಬಳಿಕ ಕರ್ಮ ನಾಶವಪ್ಪುದು ನೋಡಯ್ಯ. ಈ ಪರಿಯಿಂದ ಅಂಕುರ ಫಲದಂತೆ, ತಮ್ಮಲ್ಲಿ ತನ್ಮಯವಾಗಿರ್ದ ತತ್ತ್ವವ ತಾವರಿಯದೆ, ಹಲವು ಶಾಸ್ತ್ರವನೋದಿ ತಿಳಿವಿಲ್ಲದ ಮೂಢರೆಲ್ಲ ಹೊಲಬುಗೆಟ್ಟು ಹೋದರಲ್ಲ. ಅದೆಂತೆಂದಡೆ: ಗೋಪ ಕಕ್ಷೆಯಲ್ಲಿ ಛಾಗದ ಮರಿಯನಿಟ್ಟು ಮರಿಯ ಕಾಣೆನೆಂದು ಬಾವಿಯ ನಿಲಿಕಿ ನೋಡೆ ಬಾವಿಯ ನೀರೊಳಗೆ ಮರಿಯ ಬಿಂಬವ ಕಂಡು ಬಾವಿಯ ್ಲಲ್ವಿ ಬೀಳುವ ಗೋಪನಂತೆ, ಉಭಯಕುಚಮಧ್ಯಕೋಟರದಲ್ಲಿ ನಿದ್ರೆಗೆಯ್ವುತಿರ್ದ ಸುತನ ಮರೆದು, ಸುತನ ಕಾಣೆನೆಂದು ರೋದನವ ಮಾಡುವ ಮೂಢಸ್ತ್ರೀಯಂತೆ, ತಮ್ಮಲ್ಲಿದ್ದ ನಿಜತತ್ತ್ವವ ತಾವರಿಯದವರು ಆತ್ಮಾರ್ಥವಾಗಿ ಕೆಟ್ಟು ವ್ಯರ್ಥರಾದರೆಲ್ಲಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ನಿಜಲಿಂಗೈಕ್ಯ ನಿರ್ವಾಣಪದದನುಭಾವದ ಸೌಖ್ಯ ವಚನವನು ಹೇಳುವ ಹಿರಿಯರೆಲ್ಲ ತಮ್ಮ ಕತ್ತಲೆಯನುಳಿಸಿ ಇತರರಲ್ಲರಸಿ ವಾಕ್ಪಟುತ್ವವನೆತ್ತಿಹರು. ಸಮುಖ ಕಿಂಕರತ್ವವನಿದಿರಿಟ್ಟು ಅರಸುವರಂತೆ ಜಲದಲ್ಲೊರ್ಣಿಸಿದ ಭಕ್ತಿಜ್ಞಾನ ವೈರಾಗ್ಯಪತಾಕಿಯನ್ನು ಉಲಿಸುತ್ತ ಕೇಳುತ್ತಿಹರು. ಇವರರಿವು ಎಂತೆನಲು ಎಲುಪಾಲದ ಮರದ ಫಲದಂತೆ, ಮರೀಚಿಕೆಯ ಜಲದಂತೆ, ಹೆಣನ ಸೊಬಗು ಪ್ರಲಾಪದಂತೆ, ಗುರುನಿರಂಜನ ಚನ್ನಬಸವಲಿಂಗಕ್ಕವರು ಅವರಂತೆ, ತಾನು ತನ್ನಂತೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಕದಳಿಯ ಫಲದಂತೆ ಪ್ರಣವವೃಕ್ಷಾಂಕಜಿಹ್ವೆಯಿಂದುಲಿವುದೊಂದೆ ಶಿವನುಡಿ. ಇದರಿಂದ ವಿಹೀನ ಫಲವು ಮಾತೇನ ಬಾತೆ ? ತಥ್ಯವಿರಹಿತ ಬಾಳಲಿಲ್ಲ ಶರಣ ಗುರುನಿರಂಜನ ಚನ್ನಬಸವಲಿಂಗವಿಡಿದು.
--------------
ದೇಶಿಕೇಂದ್ರ ಸಂಗನಬಸವಯ್ಯ
-->