ಅಥವಾ

ಒಟ್ಟು 14 ಕಡೆಗಳಲ್ಲಿ , 10 ವಚನಕಾರರು , 14 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೆಲದ ಮರೆಯ ನಿಧಾನದಂತೆ ಫಲದ ಮರೆಯ ರುಚಿಯಂತೆ ಶಿಲೆಯ ಮರೆಯ ಹೇಮದಂತೆ ತಿಲದ ಮರೆಯ ತೈಲದಂತೆ ಮರದ ಮರೆಯ ತೇಜದಂತೆ ಭಾವದ ಮರೆಯ ಬ್ರಹ್ಮವಾಗಿಪ್ಪ ಚೆನ್ನಮಲ್ಲಿಕಾರ್ಜುನನ ನಿಲವನರಿಯಬಾರದು.
--------------
ಅಕ್ಕಮಹಾದೇವಿ
ಮೆಟ್ಟಿದ ಅಡಿಯ ದೃಢವಾಗಿ ಮೆಟ್ಟಿ, ಆಚೆಯಲ್ಲಿ ಕಿತ್ತಡಿಯಿಡಬೇಕು. ಮುಂದಕ್ಕೆ ಒದಗು, ಹಿಂದಕ್ಕೆ ದೂರವಾಯಿತ್ತು. ಇಷ್ಟದಲ್ಲಿ ಚಿತ್ತ ನೆಮ್ಮಿ, ಮತ್ತೆ ಪ್ರಾಣನ ಪಥ್ಯವನರಿಯಬೇಕು. ಫಲದ ತೊಡಪು ಕೈಗೆ ತಾಹಂತೆ, ಘಟಜ್ಞಾನಕ್ಕೆ ಬ್ಥಿನ್ನವಿಲ್ಲ, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ತಿಲದ ಮರೆಯ ತೈಲವ ಅರೆದು ಕಾಬ ತೆರದಂತೆ, ಫಲದ ಮರಯ ರಸವ ಹಿಳಿದು ಕಾಬ ಸವಿವ ರುಚಿಯಂತೆ, ತೆರೆಯ ಮರೆಯ ರೂಪ ತೆಗೆದು ಕಾಬ ಸುಖದಂತೆ, ಇಷ್ಟದ ಮರೆಯಲ್ಲಿದ್ದ ದೃಷ್ಟವ, ಉಭಯವ ನಿಶ್ಚಿಯಿಸಿದಲ್ಲಿ ಅದು ಪ್ರಾಣಲಿಂಗಸಂಬಂಧ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ರುದ್ರಂಗೆ ಪಾರ್ವತಿಯು, ವಿಷ್ಣುವಿಂಗೆ ಲಕ್ಷಿ ್ಮಯು, ಬ್ರಹ್ಮಂಗೆ ಸರಸ್ವತಿಯು ಮತ್ತೆ ತೃಣದಶನದ ಫಲದ ಆಹಾರದವರ ಸುತ್ತಿ ಮುತ್ತಿತ್ತು ನೋಡಾ ಮಾಯೆ; ಸಪ್ತಧಾತುವ ಮೀರಿ ಪಂಚಭೂತವ ಜರಿದ ಶರಣರಿಗೋಡಿತ್ತು ಮಾಯೆ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಮರಕ್ಕೆ ಬಿತ್ತು ಹುಟ್ಟಿದರೇನಯ್ಯಾ ಬಿತ್ತಿಂಗೆ ಮರ ಹುಟ್ಟಿದರೇನಯ್ಯಾ? ಮರದ ಬೆಳಸಿನ ಫಲದ ಪರಿಯ ಬೆಸಗೊಳ್ಳಲಿಲ್ಲ. ಸಸಿ ಪಲ್ಲವಿಸಿ ತ್ರಿವಿಧವಾಯಿತ್ತು. ಕೂಡಲಚೆನ್ನಸಂಗಾ ನಿಮ್ಮ ಶರಣಂಗಯ್ಯಾ.
--------------
ಚನ್ನಬಸವಣ್ಣ
ಒಳಗಣವರೈವರ ಎನ್ನ ಕಣ್ಣಿಂಗೆ ತಳವೆಳಗು ಮಾಡಯ್ಯಾ. ಬೆಳವಿಗೆಯ ಬೀಜವ ಬಿತ್ತಿ, ಆ ಫಲದ ರುಚಿಯನುಂಡುಕೊಳ್ಳಯ್ಯಾ ಕಪಿಲಸಿದ್ಧಮಲ್ಲಿನಾಥಯ್ಯಾ.
--------------
ಸಿದ್ಧರಾಮೇಶ್ವರ
ಘಟದ ಮರೆಯಲ್ಲಿ ಅಸುವಿಪ್ಪಂತೆ, ಫಲದ ಮರೆಯಲ್ಲಿ ರಸವಿಪ್ಪಂತೆ, ಶಿಲೆಯ ಮರೆಯಲ್ಲಿ ಕಾಲ ಲಯನ ಲೀಲೆ ತೋರುತ್ತದೆ. ಲೀಲೆ ನಿರ್ವಯಲಾಗಿ, ಆ ಬಯಲ ಬಂಧನವನರಿ, ಅರ್ಕೇಶ್ವರಲಿಂಗವನರಿವುದಕ್ಕೆ.
--------------
ಮಧುವಯ್ಯ
ಜೀವನೆಂಬ ಅಳತದ ಕೋಲಿನಲ್ಲಿ ಭಾವಜ್ಞ ನಾನಾದೆನೆಂಬವರೆಲ್ಲರೂ ಅಳತಕ್ಕೆ ಸಂದು ಹೊರಳಿ ಮರಳುತೈದಾರೆ. ಸರ್ವಸಂಗ ಪರಿತ್ಯಾಗವ ಮಾಡಿದೆನೆಂಬ ಅರುಹಿರಿಯರೆಲ್ಲರೂ ತಥ್ಯಮಿಥ್ಯವೆಂಬ ಕೋಲಿನಲ್ಲಿ ಅಳತೆಗೊಳಗಾಗುತೈದಾರೆ. ಹಿಂದಕೊಂದು ಕುರುಹಿಲ್ಲ, ಮುಂದಕೊಂದು ಲಕ್ಷ ್ಯವಿಲ್ಲಾ ಎಂದು ಹಿಂಗಿ ನುಡಿದು, ನಾವು ನಿರಂಗಿಗಳೆಂದು ಅಂಗವ ಹೊತ್ತು ತಿರುಗಾಡುವರೆಲ್ಲರು ಬಂಧ ಮೋಕ್ಷ ಕರ್ಮಂಗಳಿಂದ ಅಂಗಳ ಬಾಗಿಲ ವಾಸಂಗಳಲ್ಲಿ ಬಾ ಹೋಗೆನಿಸಿಕೊಂಬ ನಿಂದೆಯ ಕೋಲಿನಲ್ಲಿ ಅಳತಕ್ಕೊಳಗಾಹರೆಲ್ಲರು ಸರ್ವಾಂಗಲಿಂಗಿಗಳಪ್ಪರೆ? ಇದರಂದವ ತಿಳಿದು ಆರಾರ ಇರವು ಅವರಿರವಿನಂತೆ. ತಾವಾಗಿ ಅರಿದವರಲ್ಲಿ ಅರುಹಿಸಿಕೊಂಬನ್ನಕ್ಕ ಅವರೊಡಗೂಡಿ ಅವರು ತನ್ನನರಿದ ಮತ್ತೆ ಆ ಅರಿಕೆಯ ತೆರ ತಾನೆಂಬುದನೆ ಪ್ರಮಾಣಿಸಿ ಪಕ್ಷವಾಹನ್ನಕ್ಕ ತೊಟ್ಟಿನೊಳಗಿಪ್ಪ ಫಲದ ತೆರನಂತೆ ಈ ದೃಷ್ಟ ತನ್ನಷ್ಟವಹನ್ನಕ್ಕ ತನ್ನ ಕಣ್ಣಿನಿಂದ ಕನ್ನಡಿಯ ನೋಡಿ ತನ್ನ ತಾನೆ ಅರಿವುದು ಕಣ್ಣೋ ಕನ್ನಡಿಯೋ? ಕನ್ನಡಿಯೆಂದಡೆ ಅಂಧಕಂಗೆ ಪ್ರತಿರೂಪಿಲ್ಲ. ಇದು ಕಾರಣದಲ್ಲಿ ಅವರರಿವ ತಾನರಿದು ತನ್ನರಿವ ಅವರರಿದು ಉಭಯದರಿವು ಒಡಗೂಡುವನ್ನಕ್ಕ ಹಿಂದಣ ಕುರುಹು ಮುಂದಣ ಲಕ್ಷ ್ಯವ ವಿಚಾರಿಸಿ ಮರೆಯಬೇಕು ಧಾರೇಶ್ವರಲಿಂಗನ ಕೂಡಬಲ್ಲಡೆ.
--------------
ಕಾಮಾಟದ ಭೀಮಣ್ಣ
ಪ್ರಥಮದಲ್ಲಿ ಬೀಜವಿಲ್ಲದಿದ್ದಡೆ ವೃಕ್ಷ ಅಂಕುರ ಪಲ್ಲವ ಶಾಖೆ ಕುಸುಮ ಫಲವೆಲ್ಲಿಯವಯ್ಯಾ ? ಆ ಫಲದ ಮಹಾಮಧುರವೆಲ್ಲಿಯದಯ್ಯಾ ? ಪರಶಿವಲಿಂಗಮೂರ್ತಿ ಪರಮಾತ್ಮ ಬ್ರಹ್ಮ ಬಯಲಾದಡೆ ನಿಷ್ಕಳತತ್ತ್ವಂಗಳೆಂತಾದವು ? ಕೇವಲ ಸಕಲತತ್ತ್ವಂಗಳೆಂತದಾವು ? ತಾನು ಹುಟ್ಟಿ ತಮ್ಮವ್ವೆ ಬಂಜೆ ಎನ್ನಬಹುದೇ ? ಅರಸು ಒಬ್ಬನು ಸ್ವತಂತ್ರನು, ಸರ್ವಕ್ರೀ ವರ್ತಿಸಬಾರದು. ಪರಶಿವಲಿಂಗಮೂರ್ತಿ ಸರ್ವತತ್ತ್ವಮಯನಪ್ಪ, ಸರ್ವಕಾರಣಕ್ಕೆ ಕಾರಣನಪ್ಪ. ತನ್ನ ವಿನೋದಕ್ಕೆ ಪಂಚಭೂತಂಗಳನು ಇಚ್ಛಾಜ್ಞಾನಕ್ರಿಯಾಶಕ್ತಿಗಳನೂ ಬ್ರಹ್ಮವಿಷ್ಣಾದಿಗಳನೂ, ಅಷ್ಟಾದಶವಿದ್ಯಂಗಳನೂ ಮಾಡಿ ಉತ್ಪತ್ತಿ ಸ್ಥಿತಿಯನೂ ನೋಡಿ, ವಿನೋದಿಸಿ ಮಹಾಲೀಲೆಯಿಂ ಸಂಹರಿಸಿ ಪರಮಸುಖಿಯಾಗಿಪ್ಪನು. ಮತ್ತೆ `ಯಥಾಪೂರ್ವಮಕಲ್ಪಯತ್' ಎಂದುದಾಗಿ ಮರಳಿ ವಿನೋದಿಸುತಿರ್ಪನು. ಪರಶಿವಲಿಂಗಮೂರ್ತಿಪರಮಾತ್ಮನಲ್ಲಿ ಪರಬ್ರಹ್ಮ ಬಯಲಾದಡೆ ಗುರುವೆಂತಾದ ಜಂಗಮವೆಂತಾದ ಹೇಳಿರೆ ? ಅಂತರಂಗ ಬಹಿರಂಗ ಪರಮಾಕಾಶಮಧ್ಯದಲ್ಲಿ ನಿಷ್ಕಳನು `ಶಿವಂ ಪರಾತ್ಪರಂ ಶೂನ್ಯಂ' ಎಂದುದಾಗಿ `ಶಿವಂ ಪರಮಾಕಾಶಮಧ್ಯೇ ಧ್ರುವಂ' ಎಂದುದಾಗಿ ಶ್ರೀಗುರುಮೂರ್ತಿಯಾಗಿಪ್ಪನು. ಭ್ರೂಮಧ್ಯದಲ್ಲಿ ಪರಂಜ್ಯೋತಿರ್ಲಿಂಗಮೂರ್ತಿಯಾಗಿಪ್ಪನು. `ಪರಾತ್ಪರಂ ಪರಂಜ್ಯೋತಿಭ್ರ್ರೂಮಧ್ಯೇ ತು ವ್ಯವಸ್ಥಿತಂ ಎಂದುದಾಗಿ. ಹೃದಯಸ್ಥಾನದಲ್ಲಿ ಪ್ರಾಣಲಿಂಗವು ಜಂಗಮಲಿಂಗವಾಗಿ ಸಕಲವ್ಯಾಪಾರನಾಗಿಪ್ಪನು. `ಹೃದಯಸ್ಯ ಮಧ್ಯೇ ವಿಶ್ವೇದೇವಾ ಜಾತವೇದಾ ವರೇಣ್ಯಃ' ಬ್ರಹ್ಮರಂಧ್ರದಲ್ಲಿ ಲಿಂಗಮೂರ್ತಿ ಪರಮಾತ್ಮ, ಭ್ರೂಮಧ್ಯದಲ್ಲಿ ಲಿಂಗಮೂರ್ತಿ ಅಂತರಾತ್ಮ, ಹೃದಯದಲ್ಲಿ ಜಂಗಮಮೂರ್ತಿ ಜೀವಾತ್ಮ, ಬಹಿರಂಗದಲ್ಲಿ ದೀಕ್ಷೆಗೆ ಗುರು, ಪೂಜೆಗೆ ಲಿಂಗ, ಶಿಕ್ಷೆಗೆ ಜಂಗಮ. `ಏಕಮೂರ್ತಿಸ್ತ್ರಿಧಾ ಭೇದಃ' ಎಂದುದಾಗಿ ಅಂತರಂಗ ಬಹಿರಂಗ ಸಕಲ ನಿಷ್ಕಲವೆಲ್ಲವೂ ಏಕೀಭವಿಸಿ `ಇಷ್ಟಂ ಪ್ರಾಣಸ್ತಥಾ' ಎಂದುದಾಗಿ ಲಿಂಗವಾಗಿ ಪೂಜೆಗೊಳ್ಳುತ್ತಿದ್ದಾನು. ಇದು ಕಾರಣ, ಸಕಲತತ್ತ್ವ ಸರ್ವಕಾರಣವಯ್ಯ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಪ್ರಥಮ ಮೂಲದಲ್ಲಿ ನಿರಾಕಾರವಸ್ತು ಸಾಕಾರವಾಯಿತ್ತು. ಆಚಾರಕ್ಕೋಸ್ಕರವಾಗಿ ವಸ್ತು ಅನಾಚಾರಿಯಾದ. ಅನಾಹತ ಸಂಸಿದ್ಧ ಆಗಲಾಗಿ ವಿಚಾರಮುಖದಿಂದ ಆಚಾರ್ಯನಾದ. ಆ ಮರದ ಶಾಖೆಯ ತೊಡಪಿಂದ ಆ ಮರದ ಫಲದ ಕೈಗೆ ತಾಹಂತೆ ಈ ಗುಣ ಕ್ರೀ ನಿಃಕ್ರೀಯೆಂಬ ಉಭಯವಿವರದ ಭೇದ. ಉಭಯಕ್ಕೆ ಒಂದು ಶುದ್ಧವಾದಲ್ಲಿ ಒಂದಲ್ಲಿ ಒಂದು ಸಂದಿತ್ತು. ಈ ಗುಣ ಕ್ರೀ ನಿಃಕ್ರೀಲೇಪ, ಏಕಸ್ಥಲ ಐಕ್ಯನ ಕೂಟ ಗೋಪತಿನಾಥ ವಿಶ್ವೇಶ್ವರಲಿಂಗದ ಒಳಗಿನಾಟ.
--------------
ತುರುಗಾಹಿ ರಾಮಣ್ಣ
ಒಂದು ದ್ವಾರದಲ್ಲಿ ಬಂದ ಆತ್ಮಂಗೆ, ಹಲವು ದ್ವಾರದಲ್ಲಿ ಉಂಟೆಂದು, ಹೊಲಬುದಪ್ಪಿ ನುಡಿದವರ ನೋಡಾ. ವಾಯು ಒಂದಲ್ಲದೆ ಶತವಾಯುವಿಲ್ಲೆಂದೆ, ಇಂದ್ರಿಯ ಒಂದಲ್ಲದೆ ಐದಿಲ್ಲವೆಂದೆ. ಕರಣ ಒಂದಲ್ಲದೆ ನಾಲ್ಕಿಲ್ಲವೆಂದೆ, ಮದ ಒಂದಲ್ಲದೆ ಎಂಟಿಲ್ಲವೆಂದು. ವ್ಯಸನ ಒಂದಲ್ಲವೆ ಏಳಿಲ್ಲವೆಂದೆ, ಆಧಾರ ಒಂದಲ್ಲದೆ ಷಡಾಧಾರವಿಲ್ಲವೆಂದೆ. ಒಂದು ಬೀಜದಲ್ಲಿ ಅದ ಹಣ್ಣಿನ ರುಚಿಗೆ, ನಾನಾ ಫಲದ ರಸದ ರುಚಿ ಉಂಟೆ? ಆ ಬೀಜ ಮೊಳೆತಲ್ಲಿ ಏಕರೂಪವಾಗಿ ತಲೆದೋರಿತ್ತು. ಬಲಿದು ಮತ್ತೆ ಹಲವುರೂಪಾಗಿ ಪಲ್ಲವಿಸಿತ್ತು. ನೆಲೆಯ ಕಡಿದ ಮತ್ತೆ ರೂಪೆಲ್ಲ ನೆಲೆಯೊಳಡಗಿದವು. ಸೆಲೆಸಂದ ಹೊನ್ನಿಂಗೆ ಒಟ್ಟವುಂಟೆ? ಬಲುಹು ಮುರಿದವಂಗೆ ರಣದ ಸುದ್ದಿಯೇಕೋ? ಜಲದಲ್ಲಿ ಮುಳುಗಿದವಂಗೆ ಇಳೆಯವರ ಸುದ್ದೀಯೇಕೋ? ಇದು ಕಾರಣ, ನಾನಾ ವರ್ಣದ ಹೇಮವ ಭಾವಿಸಿ, ಒಂದರಲ್ಲಿ ಕಡೆಗಾಣಿಸಿದ ಮತ್ತೆ ಭಾವನೆಯ ಬಣ್ಣ ಒಂದಲ್ಲದೆ ಮತ್ತೆ ಭಾವಿಸಲಿಲ್ಲವಾಗಿ, ಅರಿದಲ್ಲಿ ಜ್ಞಾನ, ಮರೆದಲ್ಲಿ ಅಜ್ಞಾನ, ನಾನಾರೆಂಬುದನರಿದಲ್ಲಿಯೆ ಒಂದು ಗುಣ ನಿಂದಿತ್ತು. ತನ್ನ ಮರೆದಲ್ಲಿಯೆ ನಾನಾ ಸಂಚಲನವಾಯಿತ್ತು, ಇದಕ್ಕಿದೇ ದೃಷ್ಟ. ದೇಹವಿಡಿದುದಕ್ಕೆರಡಿಲ್ಲದೆ ಮೀರಲಿಲ್ಲವಾಗಿ, ಜಗವನರಿವುದಕ್ಕೆ ದಿವರಾತ್ರಿಯದೆ ಮೀರಿ ತೋರಲಿಲ್ಲವಾಗಿ, ಸಂಸಾರ ಹರಿವುದಕ್ಕೆ ನಿಃಕಳಂಕ ಮಲ್ಲಿಕಾರ್ಜುನನಲ್ಲದಿಲ್ಲವಾಗಿ.
--------------
ಮೋಳಿಗೆ ಮಾರಯ್ಯ
ಪ್ರಸಾದವನೆ ಬಿತ್ತಿ, ಪ್ರಸಾದವನೆ ಬೆಳೆವ, ಫಲದ ಪರಿಯ ಬೆಸಗೊಳಲಿಲ್ಲ, ಫಲದರ್ಥಿಯಲ್ಲ, (ಪದಾರ್ಥ)ಕಾಯ ಪ್ರಸಾದಕ್ಕೆ ಭೇದವಿಲ್ಲ, ಕೂಡಲಚೆನ್ನಸಂಗಾ ನಿಮ್ಮ ಶರಣಂಗೆ.
--------------
ಚನ್ನಬಸವಣ್ಣ
ಶ್ರುತ್ಯಾಗಮ ಶಾಸ್ತ್ರಾದಿಗಳು ದೈವವಲ್ಲದಿರಲಾ, ಸ್ವರ್ಗಮೋಕ್ಷಂಗಳಿಗೆ ಶ್ರುತ್ಯಾಗಮ ಶಾಸ್ತ್ರಪ್ರಮಾಣ ಸಾಧನವೆಂಬ ಕರ್ಮವಾದಿಗಳಿಗೆ ನಿರುತ್ತರೋತ್ತರವ ಕೇಳಿರೆ : || ಶ್ರುತಿ || `ಜ್ಯೋತಿಷೊ*ೀಮೇನ ಸ್ವರ್ಗಕಾಮೋ ಯಜಜೇತ' ಎಂಬ ವೇದವಾಕ್ಯದ ಬಲುಮೆವಿಡಿದು ನುಡಿವರೆ, ಯಜ್ಞದಿಂದ ಸ್ವರ್ಗಾಪೇಕ್ಷಿತನು ಅಗ್ನಿಯನೆ ಪೂಜಿಸುವಯೆಂದು, ಕ್ರಿಯಾಕರ್ಮವೆ ದೈವವೆಂದು, ತಾನು ಮಾಡಿದ ಕರ್ಮ ಫಲವು ತನಗೆ ಅನುಭವಿಸಲುಳ್ಳದೆಂದು, ಕರ್ಮಕ್ಕೆ ಕರ್ತೃತ್ವವನ್ನು ಕೆಲಬರು ಕರ್ಮವಾದಿಗಳು ಹೇಳುತ್ತಿಹರು. ಅಹಂಗಲ್ಲ, ಕರ್ಮವೆ ಶರೀರದಿಂದನುಭವಿಸಲುಳ್ಳರಾಗಿ ವರ್ತಿಸುತ್ತಿಹುದೊ, ಅಲ್ಲ, ಮತ್ತಾ ಶರೀರಕ್ಕೆ ಕರ್ಮವೆ ಅನಾದಿಯಹುದೊ, ಈ ಕರ್ಮಕ್ಕೆ ಕಾಯಂಗಳೆರಡು ಜೀವಾತ್ಮನನು ಒಂದೆಬಾರಿಯಯಿದಿದೊ. ಈಹಿಂಗೆಂದು ಕೆಲಬರು ತರ್ಕಿಸುವರು. ಅದು ಹಂಗಾಗದಿಹುದಲ್ಲದೆ, ಆ ಕರ್ಮವು ಕ್ಷಣಿಕವಾಗಿಯೂ ಅಚೇತನವಾಗಿಯೂ ನಿರ್ಗುಣವಾಗಿಯೂ ಕಾಣಲುಳ್ಳದಾಗಿ, ಅದು ಮಾಡುವಾತನನುಯೆ ಹಾಂಗೆಯಿಹುದು. ಆಕರ್ತನು ಆವನೊಬ್ಬನು ಅಪರಾಧವ ಮಾಡಿದವ, ಮಾಡಿದ ಪುರುಷನು ಆ ಅಪರಾಧಕ್ಕೆ ತಕ್ಕುದಾದ ಶಿಕ್ಷೆಯನು ತನಗೆ ತಾನೆ ಮಾಡಿದನೊಯೇನು ಅಲ್ಲ. ಮತ್ತೆ ಆ ಅಪರಾಧವೆ ಸಂಕಲಿಯಾಗಿ, ಆ ಅಪರಾಧಿಯ ಕಾಲ ಬಂದಿಸುಹವನು. ಮಾಡೊದೊಯೇನು ಅಲ್ಲ. ಮತ್ತೆ ಆ ಅಪರಾಧಿಗೆ ಕರ್ಮಿಗೆ ಆ ಕರ್ಮವನು ಸಂಘಟಿಸಲು, ಕರ್ಮಾಧೀನನಲ್ಲದಾತನಾಗಿ, ಸ್ವತಂತ್ರನಾಗಿ, ಸರ್ವೇಶ್ವರ ಎಲ್ಲದಕ್ಕೂ ಒಡೆಯನಾಗಿ, ಸರ್ವಗತನಾಗಿ ಸರ್ವಗತನಾದ ಶಿವನು ಉಂಟಾಗಿ ಕರ್ಮಕ್ಕೆವೂ ಕರ್ಮಿಗೆವೂ ಕರ್ತೃತ್ವವಾಗದು. ಈಹಿಂಗಾಂಗದಿಹುದೆ ಪೂರ್ವಮೀಮಾಂಸವನು ಹೇಳುವ ಒಬ್ಬುಳಿಯ ಕರ್ಮಂಗಳು ಬೇರೆ ಬೇರೆ ಆರು ಕೆರಂಗಳಾಗುತಿಹವು. ಅವಾವೆನಲು, ಅಮಾವಾಸ್ಯೆ ಹುಣ್ಣಿಮೆಗಳಲಿ ಪಿತೃಕಾರ್ಯ ಮೊದಲಾದ ಕರ್ಮಂಗಳ ಮಾಡಬೇಕಾದುದರಿಂದ ಒಂದಾನೊಂದು ಸಂಸ್ಕಾರವನ್ನು ಸಂಘಟಿಸುತ್ತಿಹವು. ಆ ಸಂಸ್ಕಾರರೂಪಂಗಳಾದ ಆರು ಅಪೂರ್ವಂಗಳಾಗುತ್ತಿಹವು. ಅವು ಬೇರೊಂದು ಪ್ರಮಾಣದಿಂದ ಪೂರ್ವಮಾಗಿ ಉತ್ಕøಷ್ಟವಾದ ಅಪೂರ್ವವನ್ನು ಹುಟ್ಟಿಸುತ್ತಿಹವು. ಆ ಉತ್ಕøಷ್ಟವಾದ ಪೂರ್ವದಿಂದ ಮಾತಲುಳ್ಳ ಫಲದ ಕಡೆವು. ಅದೇ ದೈವವೆಂದು ಕಾಣಬಾರದೆಂದು, ಕರ್ಮವೆಂದು ನಾಮ ಮೂರಾರದವರಿಂದ ದೇಹಾಂತರ ಲೋಕಾಂತರ ದೇಶಾಂತರ ಕಾಲಾಂತರಗಳಲ್ಲಿ ಅದು ಆತಂಗೆ ಅನುಭವಿಸಬೇಕಾದ ಫಲಂಗಳನು ಕೊಡುತ್ತಿಹುದೆಂಬ ವಚನ ವ್ಯರ್ಥವು. ಅದು ಹೇಗೆಂದಡೆ, ಜಡಸ್ವರೂಪವಾದ ಕರ್ಮವು ದೇಹಾಂತರ ಮೊದಲಾದವರಲ್ಲಿ ಆ ಫಲವನು ಕೊಡಲು ಸಮರ್ಥವಲ್ಲದಿಹುದೆ. ಈಹಿಂಗಾಗಿ ಒಡೆಯನನು ತೊಲಗಿಸಿ, ಕರ್ಮಫಲವನು ಕೊಡವದಹುದೆ. ಅಹಂಗಾದಡೆ, ಜೈನ ಬೌದ್ಧ ಭಾಷಾದಿ (?) ಕರ್ಮವಾದಿಗಳ ಜಪತಪದಾನಧರ್ಮಫಲಂಗಳು ವ್ಯರ್ಥಂಗಳಾಗುತಿರಲು, ಅವು ಪುಷ್ಟಿವರ್ಧನಭೂತವಾದ ಭೋಜನಕ್ರಿಯೆಗಳಿಂದಯೆಹಾಹಂಗೆ ಮರಣವು ಆಯಿತ್ತು. ಅಹಂಗೆ ಒಂದೆ ಕರ್ಮವು ಫಲವು ಕೊಡಲು ಸಮರ್ಥವಲ್ಲ. ಅಹಂಗಾಗದಿಹುದೆ ಭೋಜನವ ಮಾಡಿದ ಮಾತ್ರವೆ ಪುಷ್ಟಿಯಾಗುತ್ತಿಹುದು ಮರಣವಿಲ್ಲದಿಹುದು. ಹಿಂಗಲ್ಲವೊ ಎಂದಡೆ, ಕೆಟ್ಟ ಕರ್ಮವುಯೆಯ್ದಿತ್ತು. ಉಂಡದರೊಳಗೆ ಸಿಲ್ಕಿದ ಅನ್ನವು ವಿಷವಹುದಲಾ. ಪುಷ್ಟಿಯ ತೊಲಗಿಸಿ ಮರಣವನು ಅಹಂಗೆ ಕೊಡುತ್ತಿರದು. ಇದು ಕಾರಣ, ಸರ್ವಗತನಾದ ಶಿವನು ಅರಿಕರ್ಮಕ್ಕೆ ತಕ್ಕ ಫಲವ ಕೊಡುವಾತನು. ಹಿಂಗಾಗಿರಲಿ, ಕರ್ಮಕ್ಕೆ ತಾನೆ ಕರ್ತೃತ್ವವಾಗುಹವು, ಆಗುತ್ತಿರದು. ಮತ್ತೆಯೂ ದೃಷ್ಟಾಂತರ ಸರಳು ಬಿಲ್ಲಕಾರನಿಲ್ಲದೆ ತಾನು ಗುರಿಯ ತಾಗೂದೆಯೇನು ? ಅಹಂಗೆ, ಕರ್ಮವು ಶಿವಪ್ರೇರಣೆಯಿಲ್ಲದೆ ಅಕರ್ಮಿಗೆ ಮೇಲುಕೀಳಾದ ಕರ್ಮಫಲವನು ತಾನೆ ಕೊಡಲು ಸಾಮಥ್ರ್ಯವಿಲ್ಲ, ತಪ್ಪದು. ವಾಯುವ್ಯದಲ್ಲಿ : ಅಜ್ಞೋ ಜಂತುರನೀಶೋಯಮಾತ್ಮನಃ ಸುಖದುಃಖಯೋಃ | ಈಶ್ವರಃ ಪ್ರೇರಿತೋ ಗಚ್ಛೇತ್ಸ್ವರ್ಗಂ ವಾ ಶ್ವಭ್ರಮೇವ ವಾ || ಅದು ಕಾರಣ, ಅರಿಯದವನಾಗಲಿ ಅಯಂ ಜಂತು-ಈ ಪ್ರಾಣಿ, ಆತ್ಮನಃ-ತನ್ನ, ಸುಖದುಃಖಯೋಃ-ಸುಖದುಃಖಂಗಳಿಗೆ, ಅನಿಶಃ-ಒಡೆಯನಲ್ಲ. ಈಶ್ವರ ಪ್ರೇರಿತ ಶಿವನು ಪ್ರೇರಿಸಲುಳ್ಳವನಾಗಿ, ಸ್ವರ್ಗವನಾದಡೂ ನರಕವನಾದಡೂ ಎಯ್ದುವನು. ನಾಭುಕ್ತ ಕ್ರಿಯತೇ ಕರ್ಮ ಕಲ್ಪಕೋಟಿಶತೈರಪಿ | ಅವಶ್ಯಮನುಭೋಕ್ತವ್ಯಂ ಕೃತಂ ಕರ್ಮ ಶುಭಾಶುಭಂ || ಇವು ಮೊದಲಾದ ವಚನ ಪ್ರಮಾಣದಿಂದ ಕರ್ಮವು ಕಲ್ಪಕೋಟಿ ಶತಂಗಳಿಂದಡಾ ಅನುಭವಿ.....ತಿರದು. ಮಾಡಲುಳ್ಳದಾಗಿ ಮೇಲು ಕೀಳಾದವು. ಏನ ಮಾಡಿಯೂ ಅನುಭವಿಸಬೇಕಾದುದು, ಈಹಿಂಗೆಂಬ ವಚನವು ವ್ಯರ್ಥ ಪೋಗುತ್ತಿಹುದು. ಅದು ಹೇಂಗೆಯಾಯೆಂದಡೆ :ವಾಯವ್ಯದಲ್ಲಿ- ಅಹೋವಿಪರ್ಯಾಸಶ್ಚೇ ಮೇದೋ ಯಾವದ್ವರಂ ಯಜಮಾನ ಸ್ವಯಂ ದಕ್ಷಃ | ಬ್ರಹ್ಮಪುತ್ರ ಪ್ರಜಾಪತಿಃ ಧರ್ಮಾದಯಃ ಸದಸ್ಯಾಶ್ಚ ರಕ್ಷಿತಾ ಗರುಡಧ್ವಜಃ ಭಾನಾಶ್ಯಪ್ರತಿಗ್ರುಣ್ವಂಕ್ತಿ ಸಾಕ್ಷಾದಿಂದ್ರಾದಯಸ್ವರಾಃ ತಥಾಪಿ ಯಜಮಾಸ್ಯದಕ್ಷಸ್ಯಾ ದಾಹಂರ್ತಿಜಃ ಸದ್ಯಯೇವ ಶಿರಶ್ಛೇದ ಸಾದುಸಂಪದ್ಯತೇ ಫಲಂ ಕೃತ್ವಾತು ಸಮಹತ್ಪುರಣ್ಯಾಮಿಷ್ಟ ಯಶಶತೈರಪಿ ನ ತತ್ಫಲಮವಾಪ್ನೋತಿ ಭಕ್ತಿಹೀನೋ ಯದೀಶ್ವರೇ | ಈ ಅರ್ಥದಲ್ಲಿ ಸತ್ಪುರುಷರ ವೇದದಿಂದರಿಯಲು, ತಕ್ಕುದಾದ ಆಚಾರವನು ಬಿಟ್ಟು ಒಡನೆ ಹುಟ್ಟಿದುದಾದ ತನ್ನವರೆಂಬ ಸ್ನೇಹದಲ್ಲಿ ಹುಟ್ಟಿದುದಾ[ದ] ಚರಣವನ್ನು ಬಿಟ್ಟು, ಅಪಾಯರಹಿತವಾಗಿ ಪ್ರಮಥಪದವಿಯನು ಎಯ್ದಿದನು. ಈಹಿಂಗಾಗಿಯೇ, ಬರಿಯ ಕರ್ಮಕ್ಕೆ ಕರ್ತೃತ್ವವುಂಟಾಗುತಿಹುದೆ ? ಚಂಡೇಶ್ವರನಿಂದ ತನ್ನ ತಂದೆಯಾದ ಬ್ರಾಹ್ಮಣನ ಕಾಲುಗಳ ತರಿದಲ್ಲಿ, ಆ ದೋಷಫಲವುಯಹಂಗೆ ಇಲ್ಲವಾಯಿತ್ತು. ಮಾಮನಾದೃತ್ಯ ಪುಣ್ಯಂ ವಸ್ಯಾಂತ್ಪ್ರತಿಪಾದಿನಃ | ಮನ್ನಿ ಮಿತ್ತಕೃತಂ ಪಾಪಂ ಪುಣ್ಯಂ ತದಪಿ ಜಾಯತೇ || ಇದು ಶಿವನ ನುಡಿ, ಮಾರಿಯೆನ್ನನು ಕೈಕೊಳ್ಳದ ಪುಣ್ಯವಾದಡೆಯು, ಮಾಡುವವಂಗೆ ಪಾಪವು ಅಹುದು. ನಾನು ನಿಮಿತ್ತ ಮಾಡಿದ ಪಾಪವಾಯಿತ್ತಾದಡೆಯು ಸುಕೃತವಾಗುತ್ತಿಹುದು. `ಉಪಕ್ರಮ್ಯ ಕರ್ಮಾದಿ ಪತಿತ್ವ ವಿರುಪಾಕ್ರೋಸ್ಥಿತಿ ಸರ್ವಕರ್ಮಾದಿ ಪತಿಃ' ಮತ್ತೆ ಉಪಕ್ರಮಿಸಿ ಕರ್ಮಂಗಳಿಗೊಡೆಯನು ಪರಮೇಶ್ವರನು ಉಂಟೆಂಬ ವೇದವು ಮೊದಲಾದ ವಾಕ್ಯಪ್ರಮಾಣದಿಂದ, ನಾನಾ ಪುರಾಣ ವಚನ ಪ್ರಮಾಣದಿಂದ ಸಮಸ್ತ ಕರ್ಮಂಗಳಿಗೊಡೆಯನು ಶಿವನು. ಆ ಶಿವನ ತೊಲಗಿಸಿ, ಬರಿಯ ಕರ್ಮಕ್ಕೆ ಕರ್ತನಾಗುಹವು ಇಲ್ಲದಿರುತ್ತಿಹುದು. ಇದನರಿದು, ಎಲೆ ಕರ್ಮವಾದಿಗಳಿರಾ, ಸಕಲಕರ್ಮಕ್ಕೆ ಶಿವನೆ ಕರ್ತುವೆಂದರಿದಿರಾದಡೆ, ಬಸವಪ್ರಿಯ ಕೂಡಲಚೆನ್ನಸಂಗ ನಿಮಗೆ ಸುಕರ್ಮ ಫಲವನು ಕೊಡುವ ಕಂಡಿರೆ.
--------------
ಸಂಗಮೇಶ್ವರದ ಅಪ್ಪಣ್ಣ
ಫಲದ ಸವಿಯ ವೃಕ್ಷವರಿದಡೆ, ಕೊಡುವುದೆ ಇದಿರಿಂಗೆ ? ಅನ್ನದ ಸವಿಯ ಕುಡಿಕೆಯರಿದಡೆ, ಮಿಗುವುದೆ ಇದಿರಿಂಗೆ ? ಲಿಂಗಸಂಗಿಯಾದಡೆ, ಕಂಡಕಂಡವರಲ್ಲಿ ಉಲಿವನೆ ? ನಿಸ್ತರಂಗವನೈದಿದ ಮಂಗಲೋತ್ತರದಂತೆ ಇದರ ಸಂಗವು. ಲಿಂಗೈಕ್ಯವು ಹೀಂಗಿದೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
-->