ಅಥವಾ

ಒಟ್ಟು 214 ಕಡೆಗಳಲ್ಲಿ , 39 ವಚನಕಾರರು , 169 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಾರಿದ್ಥಿಯ ಹೊಯ್ದು ಬೇರ್ಪಡಿಸಬಹುದೆ ? ಫಲದೊಳಗಣ ಬೀಜ ಬಲಿವುದಕ್ಕೆ ಮೊದಲೆ ತೆಗೆಯಬಹುದೆ ? ಮಹಾಘನವನರಿವುದಕ್ಕೆ ಮೊದಲೆ, ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯನಹ ಪರಿ ಇನ್ನೆಂತೊ ? ಇಕ್ಷುದಂಡ ಬಲಿವುದಕ್ಕೆ ಮೊದಲೆ ತನಿರಸ ಬಹುದೆ ? ನಾನೆಂಬುದಕ್ಕೆ ಸ್ಥಾಣು, ಅಹುದಕ್ಕೆ ಭಾವದ ಬಲಿಕೆ ಇನ್ನಾವುದು, ನಿಃಕಳಂಕ ಮಲ್ಲಿಕಾರ್ಜುನಾ ?
--------------
ಮೋಳಿಗೆ ಮಾರಯ್ಯ
ಮೆಲ್ಲಮೆಲ್ಲನೆ ಭಕ್ತ, ಮೆಲ್ಲಮೆಲ್ಲನೆ ಮಾಹೇಶ್ವರ, ಮೆಲ್ಲಮೆಲ್ಲನೆ ಪ್ರಸಾದಿ, ಮೆಲ್ಲಮೆಲ್ಲನೆ ಪ್ರಾಣಲಿಂಗಿ, ಮೆಲ್ಲಮೆಲ್ಲನೆ ಶರಣ, ಮೆಲ್ಲಮೆಲ್ಲನೆ ಐಕ್ಯರಾದೆವೆಂಬರು_ ನಿಮ್ಮ ಶರಣರು ತಾವೇನು ಮರುಜವಣಿಯ ಕೊಂಡರೆ ? ಅಮೃತಸೇವನೆಯ ಮಾಡಿದರೆ ? ಆವ ಸ್ಥಲದಲ್ಲಿ ನಿಂದರೂ ಆ ಸ್ಥಲದಲ್ಲಿ ಷಡುಸ್ಥಲ ಅಳವಡದಿದ್ದರೆ, ಆ ಭಕ್ತಿಯ ಬಾಯಲ್ಲಿ ಹುಡಿಯ ಹೊಯ್ದು ಹೋಗುವೆನೆಂದ ಕೂಡಲಚೆನ್ನಸಂಗಮದೇವರ
--------------
ಚನ್ನಬಸವಣ್ಣ
ಅಕಾರಪ್ರಣವದಿಂದ ಸ್ಥೂಲದೇಹ ದಗ್ಧವಾಯಿತ್ತು; ಉಕಾರಪ್ರಣವದಿಂದ ಸೂಕ್ಷ್ಮದೇಹ ನಿರ್ಮಲವಾಯಿತ್ತು; ಮಕಾರಪ್ರಣವದಿಂದ ಕಾರಣದೇಹ ಕರ್ಮ [ಬೀಜ]ವಳಿಯಿತ್ತು. ಅಕಾರದಲ್ಲಿ ಜಾಗೃತಿ, ಉಕಾರದಲ್ಲಿ ಸ್ವಪ್ನದಲ್ಲಿ ಮಕಾರದಲ್ಲಿ ಸುಷಪ್ತ್ವಿ.] [ಜಾಗ್ರ] ಸ್ವಪ್ನದಲ್ಲಿದ್ದ ರೂಹು ಸುಷುಪ್ತಿಯಲ್ಲಿಲ್ಲ. ತ್ರಿವಿಧಾವಸ್ಥೆಯಲ್ಲೊಂದಾಗದ ಮಾತ್ರ ಪ್ರಾಣಲಿಂಗಿ ಆತನಲ್ಲ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಅಷ್ಟಾವರಣದಲ್ಲಿ ನೈಷ್ಠೆವಾರಿಯಾಗದನ್ನಕ್ಕರ ಭಕ್ತಿಸ್ಥಲವೆಂತು ಅಳವಡುವುದಯ್ಯಾ ! ಅಷ್ಟಾವರಣದಲ್ಲಿ ನೈಷ್ಠೆವಾರಿಯಾಗದನ್ನಕ್ಕರ ಮಹೇಶ್ವರಸ್ಥಲವೆಂತು ಅಳವಡುವುದಯ್ಯಾ ! ಅಷ್ಟಾವರಣದಲ್ಲಿ ನೈಷ್ಠೆವಾರಿಯಾಗದನ್ನಕ್ಕರ ಪ್ರಸಾದಿಸ್ಥಲವೆಂತು ಅಳವಡುವುದಯ್ಯಾ ! ಅಷ್ಟಾವರಣದಲ್ಲಿ ನೈಷ್ಠೆವಾರಿಯಾಗದನ್ನಕ್ಕರ ಪ್ರಾಣಲಿಂಗಿಸ್ಥಲವೆಂತು ಅಳವಡುವುದಯ್ಯಾ ಅಷ್ಟಾವರಣದಲ್ಲಿ ನೈಷ್ಠೆವಾರಿಯಾಗದನ್ನಕ್ಕರ ಶರಣಸ್ಥಲವೆಂತು ಅಳವಡುವುದಯ್ಯಾ ! ಅಷ್ಟಾವರಣದಲ್ಲಿ ನೈಷ್ಠೆವಾರಿಯಾಗದನ್ನಕ್ಕರ ಐಕ್ಯಸ್ಥಲವೆಂತು ಅಳವಡುವುದಯ್ಯಾ ! ಭಕ್ತ ಮಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯಸ್ಥಲವೆಂಬ ಷಡುಸ್ಥಲಕ್ಕೆ ಅಷ್ಟಾವರಣವೆ ಮುಖ್ಯ ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಘನಕ್ಕೆ ಮಹಾಘನಗಂಬ್ಥೀರ ಭಕ್ತ ಮಹೇಶ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯ ಸನ್ಮಾನಿತರು, ನಿರವಯವಸ್ತುವಿನ ಪ್ರತಿಬಿಂಬರಾಗಿ, ತಮ್ಮ ತಾವರಿದು. ಚತುರ್ವಿಧ ವಿಸರ್ಜನೆಯನರಿದಾಚರಿಸುವುದು. ಆ ವಿಸರ್ಜನೆಗಳಾವಾವೆಂದಡೆ : ಮಲಮೂತ್ರವೆರಡನು ವಿಸರ್ಜನೆಯಿಂದ ಬಿಡುವಂಥದೆ ಸ್ಥೂಲಾಚಮನವೆನಿಸುವುದು. ಕ್ರೀಡಾವಿಲಾಸದಿಂದ ತಮ್ಮರ್ಧಾಂಗವೆಂದು ಭಕ್ತಗಣಸಾಕ್ಷಿಯಾಗಿ ವಿರಾಜಿಸುವಂಥ ಕ್ರಿಯಾಂಗನೆಯಲ್ಲಿ ವೀರ್ಯವ ಬಿಡುವಂಥಾದ್ದೊಂದು ಸ್ತೂಲಾಚಮನವೆನಿಸುವುದು. ಈ ಸ್ಥೂಲಾಚಮನಗಳ ಮಾಡಿದ ವೇಳೆಯಲ್ಲಿ ದಂತಗಳ್ಮೂವತ್ತೆರಡನು ತೀಡಿ, ಲಿಂಗಾಂಗ ಮಜ್ಜನಂಗೈದು, ಸರ್ವೋಪಚಾರಂಗಳಿಂ ಕ್ರಿಯಾಜಪ ಜ್ಞಾನಜಪ ಮಹಾಜ್ಞಾನಜಪ ಪರಿಪೂರ್ಣಾನುಭಾವಜಪಂಗಳೊಳ್ ಲಿಂಗಜಂಗಮ ಜಂಗಮಲಿಂಗಾರ್ಪಣವ ಮಾಡುವುದು. ಶಿವಶರಣಗಣಾರಾಧ್ಯರು ಲಿಂಗಾಬ್ಥಿಷೇಕ ಅರ್ಚನಾದಿಗಳ ಮಾಡಿ, ಅರ್ಪಣ ಸಂದ್ಥಿನಲ್ಲಿ ಜಲತೋರಿಕೆಯಾಗಿ ವಿಸರ್ಜಿಸಿ, ಉದಕವ ಬಳಸಿದ ವೇಳೆಯೊಳು, ಲಿಂಗಬಾಹ್ಯರಸಂಗಡ ಪ್ರಸಂಗಿಸಿದರೂ ದೀಕ್ಷಾಜಲದಿಂದ ಆರುವೇಳೆ ಲಿಂಗಸ್ಪರಿಶನದಿಂದ ಜಿಹ್ವೆಯ ಪ್ರಕ್ಷಾಲಿಸಿ, ಮುಖ ಮಜ್ಜನವಮಾಡಿ, ಲಿಂಗಾರ್ಚನಾರ್ಪಣವನುಭಾವಗಳ ಮಾಡುವುದು, ಇದು ಸೂಕ್ಷ್ಮಾಚಮನವೆನಿಸುವುದು. ಪ್ರಮಾಣಗಳಾದರೂ ಅನುವಲ್ಲದೆ ವಿಪತ್ತಿನ ವೇಳೆಯಾಗಲಿ, ಜಲ ಪರಿಹರಿಸಿದಲ್ಲಿ ಪರಿಣಾಮಜಲದಿಂದ ಆ ಸ್ಥಾನವ ಪ್ರಕ್ಷಾಲಿಸಿ, ಹಸ್ತಪಾದವ ತೊಳೆದು ಉದಕವ ಶೋದ್ಥಿಸಿ, ಲಿಂಗಸ್ಪರಿಶನವಗೈದು, ಆರುವೇಳೆ ಜಿಹ್ವೆಯ ಪ್ರಕ್ಷಾಲಿಸಿ, ಸತ್ಯೋದಕದ ಪರಮಾನಂದಜಲ ಮಹಾಜ್ಞಾನಪ್ರಣಮಪ್ರಸಾದಂಗಳ ಗುಟುಕ ಲಿಂಗಮಂತ್ರ ನೆನಹಿನೊಡನೆ ಸೇವಿಸುವುದು. ಲಿಂಗಬಾಹ್ಯರ ಸಂಗಡಪ್ರಸಂಗಿಸಿದೊಡೆ ಇದೇ ರೀತಿಯಲ್ಲಿ ಮುಖಪ್ರಕ್ಷಾಲನಂಗೈದು ಆಚರಿಸುವುದು. ಇದಕೂ ಮೀರಿದರೆ ಜಲಬಿಟ್ಟು, ಭವಿಗಳಸಂಗಡ ಪ್ರಸಂಗವ ಮಾಡಿದರೆ ಆ ಸಮಯದಲ್ಲಿ ಪ್ರಮಾದವಶದಿಂದ ಉದಕವು ದೊರೆಯದಿದ್ದರೆ ಅಲ್ಲಿ ವಿಸರ್ಜನಸ್ಥಾನವ ದ್ರವವಾರುವಂತೆ ಶುಚಿಯುಳ್ಳ ಮೃತ್ತಿಕೆ ಪಾಷಾಣ ಕಾಷ್ಠ ಕಾಡುಕುರುಳು ಪರ್ಣಗಳಿಂದ ಪ್ರಕ್ಷಾಲನಂಗೈದು, ಜಿಹ್ವಾಗ್ರದಲ್ಲಿ ಸಂಬಂಧವಾದ ಗುರುಲಿಂಗೋದಕದಿಂದ ಮತ್ತಾ ಜಿಹ್ವೆಯ ಪ್ರಕ್ಷಾಲಿಸಿ, ಆರುವೇಳೆ ತೂವರಂಗೈದು, ಹರಹರ ಶಿವಶಿವ ಜಯಜಯ ಕರುಣಾಕರ ಮತ್ಪ್ರಾಣನಾಥ ಶ್ರೀಗುರುಬಸವಲಿಂಗಾಯೆಂದು ಘನಮನವ ಚಿದ್ಘನಲಿಂಗಪ್ರಸನ್ನಧ್ಯಾನದಿಂದ ನವನಾಳವೆಂಬ ಕವಾಟಬಂಧನಂಗೈದು, ಪ್ರದಕ್ಷಣವಮಾಡಿ, ಪರಿಪೂರ್ಣ ಚಿದ್ಬೆಳಗಿನೊಳು ಮತ್ತೆಂದಿನಂತೆ ಅತಿಜಾಗ್ರವೆಂಬ ಮಹಾದರುವಿನೊಳ್ ಸತ್ಕøತ್ಯ ಸದ್ಧರ್ಮರಾಗಿರ್ಪುದು. ಮುಂದೆ ಲಿಂಗಾರ್ಚನಾರ್ಪಣಗಳ ಮಾಡಬೇಕಾದರೆ, ಶುದ್ಧೋದಕದಿಂದ ಲಿಂಗಾಬ್ಥಿಷೇಕಸ್ನಾನಂಗೈದು, ಪಾವುಡಗಳ ಮಡಿಮಾಡಿ ಪರಿಣಾಮಾರ್ಪಣ ತೃಪ್ತರಾಗಿರ್ಪುದು. ಇದಕೂ ಮೀರಿದರೆ, ಜಲವ ಬಿಡುವುದು, ಭವಿಗಳಸಂಗಡ ಪ್ರಸಂಗಿಸಿದರೆ ಸ್ನಾನಮಾಡುವ ಪರಿಯಂತರ ಜಿಹ್ವಾಗ್ರದಲ್ಲಿ ಸ್ಥಾಪ್ಯವಾದ ಸತ್ಯಶುದ್ಧ ಗುರುಲಿಂಗೋದಕ ಮಹಾಪ್ರಣಮಪ್ರಸಾದವೆ ಮೊದಲು ಕ್ರಿಯಾಘನ ಗುರುಲಿಂಗಜಂಗಮಾರ್ಚನೆ ತೀರ್ಥಪ್ರಸಾದಸೇವನೆಗಳಂ ಮಾಡಲಾಗದು. ಇದಕೂ ಮೀರಿದರೆ, ತನ್ನ ದೀಕ್ಷಾಗುರು ಶಿಕ್ಷಾಗುರು ಮೋಕ್ಷಾಗುರು ಪರಿಪೂರ್ಣಗುರುಸ್ಮರಣೆ ಧ್ಯಾನದಿಂದ ಸರ್ವಾವಸ್ಥೆಗಳ ನೀಗಿ, ಮಹಾಬಯಲ ಬೆರೆವುದು. ಇದಕೂ ಮೀರಿದರೆ, ತನುವಿಗೆ ಆಯಸದೋರಿ, ಆಪ್ತರಾರೂ ಇಲ್ಲದಂತೆ, ಪರಿಣಾಮಜಲ ದೊರೆಯದ ವೇಳೆಯೊಳು ಮಲಮೂತ್ರಗಳೆರಡೂ ತೋರಿಕೆಯಾದರೆ, ಎಲ್ಲಿ ಪರಿಯಂತರ ಸಂಶಯಗಳುಂಟೊ ಅಲ್ಲಿ ಪರಿಯಂತರವು ಎರಡನೂ ವಿಸರ್ಜಿಸುವುದು. ಆ ಸಂಶಯ ತೀರಿದಲ್ಲಿ ಉದಕವಿದ್ದಲ್ಲಿಗೆ ಹೋಗಿ, ಪೂರ್ವದಂತೆ ಮೃತ್ತಿಕಾಶೌಚಗಳ ಬಳಸಿ, ನಿರ್ಮಲವಾಗಿ ತೊಳೆದು, ಹಸ್ತಪಾದಗಳ ಪ್ರಕ್ಷಾಲಿಸಿ, ಆ ಸಮಯದಲ್ಲಿ ಕ್ರಿಯಾಭಸಿತವಿದ್ದರೂ ರಸಯುಕ್ತವಾದ ಪದಾರ್ಥವಾದರೂ ಪುಷ್ಪಪತ್ರಿಗಳಾದರೂ ಇದ್ದರೆ ಸತ್ಕ್ರಿಯಾಲಿಂಗಾರ್ಚನಾರ್ಪಣಗಳಿಗೆ ಬಾರವು. ಆದ್ದರಿಂದ ಅವು ಇದ್ದವು ನಿಕ್ಷೇಪವ ಮಾಡುವುದು. ಕ್ರಿಯಾಗುರು ಲಿಂಗಜಂಗಮಮುಖದಿಂದ ಶುದ್ಧೋದಕವ ಮಾಡಿ, ತ್ರಿವಿಧ ಸ್ನಾನಂಗೈದು, ಪುರಾತನೋಕ್ತಿಯಿಂದ ಜಂಗಮಲಿಂಗದಲ್ಲಿ ಚಿದ್ಭಸಿತವ ಬೆಸಗೊಂಡು, ಸತ್ಕ್ರಿಯಾರ್ಪಣಗಳನಾಚರಿಸಿ, ನಿತ್ಯಮುಕ್ತರಾಗಿರ್ಪವರೆ ಪೂರ್ವಾಚಾರ್ಯಸಗುಣಾನಂದಮೂರ್ತಿಗಳೆಂಬೆ ಕಾಣಾ ನಿರವಯಪ್ರಭು ಮಹಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
--------------
ಮೂರುಸಾವಿರ ಮುಕ್ತಿಮುನಿ
ಅನಂತಕೋಟಿ ಸೋಮಸೂರ್ಯಾಗ್ನಿ ಪ್ರಕಾಶವ ಕಂಡು ಮುಳುಗಿದ ಮಹಾತ್ಮನು ಖಂಡಿತ ಮಾರ್ಗದ ಕರ್ಮಕತ್ತಲೆಯ ಕನಸಿನೊಳಗರಿಯನು. ಬ್ಥಿನ್ನ ನುಡಿಗಡಣಕ್ಕಿಂಬುಗೊಟ್ಟರಿವ ಮನತ್ರಯವು ಮಹದಲ್ಲೊಪ್ಪುತ್ತಿಹುದು. ಸಕಲನಿಃಕಲಸನುಮತ ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಪ್ರಾಣಲಿಂಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ರಸ ಗಂಧ ರೂಪು ಶಬ್ದ ಸ್ಪರ್ಶ ಪಂಚೇಂದ್ರಿಯಂಗಳಲ್ಲಿ ಅರ್ಪಿಸುವನ್ನಕ್ಕ ಭಕ್ತ. ರೂಪು ರುಚಿಯ ಕಂಡರ್ಪಿಸುವನ್ನಕ್ಕ ಮಾಹೇಶ್ವರ. ಇಚ್ಫೆಯನರಿತು ಸಾಕು ಬೇಕೆಂಬನ್ನಕ್ಕ ಪ್ರಸಾದಿ. ಕಂಡಲ್ಲಿ ಮುಟ್ಟದೆ ಕಾಣಿಸಿಕೊಂಡು ಮುಟ್ಟಿಹೆನೆಂಬಲ್ಲಿ ಪ್ರಾಣಲಿಂಗಿ. ವಂದನೆ ನಿಂದೆಗೆ ಒಳಗಹನ್ನಕ್ಕ ಶರಣ. ಮುಟ್ಟುವ ತಟ್ಟುವ ತಾಗುವ ಸೋಂಕುವ ಸುಖವನರಿದು ಕೂಡಬೇಕೆಂಬನ್ನಕ್ಕ ಐಕ್ಯ. ಆ ಗುಣ ಪರುಷವ ಸೋಂಕಿದ ಲೋಹದಂತಾದುದು ಷಟ್‍ಸ್ಥಲ. ಇಂತೀ ಆರನವಗವಿಸಿ ಬೇರೊಂದು ತೋರದಿಪ್ಪುದು ಐಕ್ಯಸ್ಥಲಲೇಪಭೇದ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.
--------------
ಪ್ರಸಾದಿ ಭೋಗಣ್ಣ
ಪೃಥ್ವಿಯಂತಹ ಭಕ್ತ, ಉದಕದಂತಹ ಮಾಹೇಶ್ವರ, ಅಗ್ನಿಯಂತಹ ಪ್ರಸಾದಿ, ವಾಯುವಿನಂತಹ ಪ್ರಾಣಲಿಂಗಿ, ಆಕಾಶದಂತಹ ಶರಣ, ಚಂದ್ರನಂತಹ ನೇಮಸ್ತ, ಸೂರ್ಯನಂತಹ ಅನುಭವಿ, ಆತ್ಮನಂತಹ ಐಕ್ಯ- ಇಂತೀ ಅಷ್ಟತನು ಗಟ್ಟಿಗೊಂಡು, ಕೂಡಲಚೆನ್ನಸಂಗನ ಶರಣನು ಅನಂತಕುಳರಹಿತನು.
--------------
ಚನ್ನಬಸವಣ್ಣ
ಅಯ್ಯಾ, ಚಿದಂಗ ಚಿದ್ಘನಲಿಂಗ ಶಕ್ತಿ ಭಕ್ತಿ ಹಸ್ತ ಮುಖ ಪದಾರ್ಥ ಪ್ರಸಾದ ಎಂಬಿವಾದಿಯಾದ ಸಮಸ್ತ ಸಕೀಲಂಗಳ ನೆಲೆ ಕಲೆಯರಿಯದೆ, ಜಿಹ್ವಾಲಂಪಟಕ್ಕೆ ಆಹ್ವಾನಿಸಿ, ಗುಹ್ಯಾಲಂಪಟಕ್ಕೆ ವಿಸರ್ಜಿಸಿ, ಸಕಲೇಂದ್ರಿಯಮುಖದಲ್ಲಿ ಮೋಹಿಯಾಗಿ, ಸದ್ಗುರುಕರುಣಾಮೃತರಸ ತಾನೆಂದರಿಯದೆ ಬರಿದೆ ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯ ಗುರುಚರಪರವೆಂದು ಬೊಗಳುವ ಕುನ್ನಿಗಳ ನೋಡಿ ಎನ್ನ ಮನ ಬೆರಗು ನಿಬ್ಬೆರಗು ಆಯಿತ್ತಯ್ಯಾ, ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಭಕ್ತ, ಮಾಹೇಶ್ವರ, ಪ್ರಸಾದಿ, ಪ್ರಾಣಲಿಂಗಿ, ಶರಣನೈಕ್ಯನು ಮೆಲ್ಲ ಮೆಲ್ಲನೆ ಆದೆಹೆನೆಂಬನ್ನಬರ ನಾನು ವಜ್ರದೇಹಿಯೆ ನಾನೇನು ಅಮೃತವ ಸೇವಿಸಿದೆನೆ ಆನು ಮರುಜವಣಿಯ ಕೊಂಡೆನೆ ನುಡಿದ ನುಡಿಯೊಳಗೆ ಷಡುಸ್ಥಲ ಬಂದು ಎನ್ನ ಮನವನಿಂಬುಗೊಳ್ಳದಿದ್ದಡೆ, ಸುಡುವೆನೀ ತನುವ ಕೂಡಲಸಂಗಮದೇವಾ.
--------------
ಬಸವಣ್ಣ
ನಿರಾಮಯ ಭಕ್ತ, ನಿರಾಮಯ ಮಹೇಶ್ವರ, ನಿರಾಮಯ ಪ್ರಸಾದಿ, ನಿರಾಮಯ ಪ್ರಾಣಲಿಂಗಿ, ನಿರಾಮಯ ಶರಣ, ನಿರಾಮಯ ಐಕ್ಯನೆಂದು ಆರು ಪ್ರಕಾರವಾಗಿಹುದು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಪೃಥ್ವಿ ಅಂಗ, ಚಿತ್ತ ಹಸ್ತ, ನಾಸಿಕ ಮುಖ, ಗಂಧ ಪದಾರ್ಥ, ಆಚಾರಲಿಂಗಕರ್ಪಿತ ಭಕ್ತ. ಅಪ್ಪು ಅಂಗ, ಬುದ್ದಿ ಹಸ್ತ, ಜಿಹ್ವೆ ಮುಖ, ರುಚಿ ಪದಾರ್ಥ, ಗುರುಲಿಂಗಕರ್ಪಿತ ಮಹೇಶ್ವರ. ಅನಿಲ ಅಂಗ, ನಿರಹಂಕಾರ ಹಸ್ತ, ನೇತ್ರ ಮುಖ, ರೂಪು ಪದಾರ್ಥ, ಶಿವಲಿಂಗಕರ್ಪಿತ ಪ್ರಸಾದಿ. ಪವನ ಅಂಗ, ಮನ ಹಸ್ತ, ತ್ವಕ್ಕು ಮುಖ, ಸ್ಪರ್ಶ ಪದಾರ್ಥ, ಜಂಗಮಲಿಂಗಕರ್ಪಿತ ಪ್ರಾಣಲಿಂಗಿ. ವ್ಯೋಮ ಅಂಗ, ಜ್ಞಾನ ಹಸ್ತ, ಶ್ರೋತ್ರ ಮುಖ, ಶಬ್ದ ಪದಾರ್ಥ, ಪ್ರಸಾದಲಿಂಗಕರ್ಪಿತ ಶರಣ. ಹೃದಯ ಅಂಗ, ಭಾವ ಹಸ್ತ, ಅರ್ಥ ಮುಖ, ಪರಿಣಾಮ ಪದಾರ್ಥ, ಮಹಾಲಿಂಗಕರ್ಪಿತ ಐಕ್ಯ. ಇಂತೀ ಷಟ್‍ಸ್ಥಲವಳವಟ್ಟಾತನು ಪರಶಕ್ತಿಸ್ವರೂಪನು, ಆತನು ನಿಜಶಿವಯೋಗಸಂಪನ್ನನು, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಇನ್ನೊಂದು ಪ್ರಕಾರದ ಅಂಗಸ್ಥಲವೆಂತೆಂದಡೆ : ಐಕ್ಯ ಶರಣಸ್ಥಲವೆರಡು ಯೋಗಾಂಗ. ಪ್ರಾಣಲಿಂಗಿ ಪ್ರಸಾದಿಸ್ಥಲವೆರಡು ಭೋಗಾಂಗ. ಮಾಹೇಶ್ವರ ಭಕ್ತಸ್ಥಲವೆರಡು ತ್ಯಾಗಾಂಗ. ಇದಕ್ಕೆ ಈಶ್ವರ್ದೋವಾಚ : ``ಯೋಗಾಂಗಮೈಕ್ಯಂ ಶರಣಂ ಸ್ಥಲಮಿತ್ಯುಭಯಂ ಭವೇತ್ | ಪ್ರಾಣಲಿಂಗಂ ಪ್ರಸಾದೀತಿ ದ್ವಯಂ ಭೋಗಾಂಗಮಿಷ್ಯತೇ || ಮಾಹೇಶ್ವರಸ್ಥಲಂ ಭಕ್ತಸ್ಥಲಮಿತ್ಯುಭಯಸ್ತಥಾ | ತ್ಯಾಗಾಂಗಂ ಭವೇನ್ನಿತ್ಯಂ ಪ್ರೋಚ್ಯತೇ ಪಾರಮಾರ್ಥಿಕೈಃ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ತನುತ್ರಯ ಮಲತ್ರಯಂಗಳೆಂಬ ಶಂಕೆಯಲ್ಲಿ ಕೆಡದೆ, ಹಮ್ಮಿನ ಬೊಮ್ಮನ ನೀನಾಡದೆ ಮಾಡಾ ಲಿಂಗಾರ್ಚನೆಯ, ಶ್ರೋತ್ರಿಯ ಕೈಗಳಿಂದ ಇಷ್ಟಂಗಾರ್ಚನೆಯ, ನೇತ್ರದ ಕೈಯಿಂದ ಗುರುಲಿಂಗಾರ್ಚನೆಯ. ಇಂತು ತ್ರಿವಿಧ ಮುಟ್ಟಿ ಕರಕರಂಗಳಲ್ಲಿ ಚರಂಗಾರ್ಚನೆಯ ಮಾಡಿರಯ್ಯಾ ಮನಮುಟ್ಟಿ. ಚರಂಗಾರ್ಚನೆಯಿಂದ ಭಕ್ತನೆನಿಸುವೆ, ಮಾಹೇಶ್ವರನೆನಿಸುವೆ, ಪ್ರಾಣಲಿಂಗಿ, ಶರಣ, ಪ್ರಸಾದಿ, ಐಕ್ಯನೆನಿಸುವೆ, ಜನನ ಮರಣಾದಿಗಳಿಗೆ ದೂರನೆನಿಸುವೆ, ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಕೂಡಿ ಶುದ್ಧಸಿದ್ಧ ಪ್ರಸಿದ್ಧ ಏಕ ಏಕ ಎನಿಸುವೆ.
--------------
ಸಿದ್ಧರಾಮೇಶ್ವರ
ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯನೆಂದು ಹೆಸರಿಟ್ಟುಕೊಂಬಿರಿ. ಆರು ಪರಿಯಲ್ಲಿ ಆರಾದವನರಿಯಿರಿ. ಭಕ್ತನಾದಡೇಕೆ ಭವದ ಬೇರು? ಮಾಹೇಶ್ವರನಾದಡೇಕೆ ಪ್ರಳಯಕ್ಕೊಳಗಿಹ? ಪ್ರಸಾದಿಯಾದಡೇಕೆ ಇಂದ್ರಿಯವೈದ ಅನಿಗ್ರಹಿಯಾಗಿಹ? ಪ್ರಾಣಲಿಂಗಿಯಾದಡೇಕೆ ಉತ್ಪತ್ತಿ ಸ್ಥಿತಿ ಲಯಕೊಳಗಾಗಿಹ? ಶರಣನಾದಡೇಕೆ ಉಪಬೋಧೆಗೊಳಗಾಗಿಹ? ಐಕ್ಯನಾದಡೇಕೆ ಇಹ-ಪರವನರಿದಿಹ? ಇವೆಲ್ಲ ಠಕ್ಕ, ಇವೆಲ್ಲ ಅಭ್ಯಾಸ! ಕಪಿಲಸಿದ್ಧಮಲ್ಲಿಕಾರ್ಜುನಯ್ಯ, ನಿಮ್ಮ ಷಡುಸ್ಥಲವಭೇದ್ಯ!
--------------
ಸಿದ್ಧರಾಮೇಶ್ವರ
ಇನ್ನಷ್ಟು ... -->