ಅಥವಾ

ಒಟ್ಟು 111 ಕಡೆಗಳಲ್ಲಿ , 27 ವಚನಕಾರರು , 83 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರವೆ ಭಾಂಡವಾಗಿ ಜಿಹ್ವೆಯೆ ಕರವಾಗಿ, ಇಂದ್ರಿಯಂಗಳೈ ಮುಖವಾಗಿಪ್ಪ ಪ್ರಸಾದಿಯ ಪರಿಯಿನ್ನೆಂತೋ? ಆನಂದದಲ್ಲಿ ಸಾನಂದವನರ್ಪಿಸಿ ಸಾನಂದದಲ್ಲಿ ನಯವಾಗಿಪ್ಪ ಪ್ರಸಾದಿಯ ಪರಿಯಿನ್ನೆಂತೊ? ತನುತ್ರಯಂಗಳ ಮೀರಿ ಮನತ್ರಯಂಗಳ ದಾಂಟಿಪ್ಪ ಪ್ರಸಾದಿಗೆ ಆವುದ ಸರಿಯೆಂಬೆ? ಬಂದುದನತಿಗಳೆಯೆ, ಬಾರದುದ ಬಯಸೆ. ತನುಮುಖವೆಲ್ಲ ಲಿಂಗಮುಖ, ಸ್ವಾದಿಸುವವೆಲ್ಲ ಲಿಂಗಾರ್ಪಿತ; ಜಾಗ್ರ ಸ್ವಪ್ನ ಸುಷುಪ್ತಿಯಲ್ಲಿ ಲಿಂಗಾರ್ಪಿತವಲ್ಲದೆ ಅನರ್ಪಿತವ ನೋಡ; ತಟ್ಟುವ ಮುಟ್ಟುವ ಭೇದಂಗಳೆಲ್ಲವು ಸರ್ವಾರ್ಪಿತ. ಆತನುರುತರ ಸಮ್ಯಕ್‍ಜ್ಞಾನಿಯಾದ ಕಾರಣ ಪ್ರಸನ್ನತೆಯಾಯಿತ್ತು. ಪ್ರಸನ್ನ ಪ್ರಸಾದತೆಯಲ್ಲಿ ನಿತ್ಯನಪ್ಪಾತ ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ ಉರುತರ ಮಹಾಜ್ಯೋತಿರ್ಮಯನು.
--------------
ಸಿದ್ಧರಾಮೇಶ್ವರ
ಶಿಷ್ಯನ ಪೂರ್ವಾಶ್ರಯವ ಗುರು ಕಳೆದನೆಂಬರು, ಆ ನುಡಿಯ ಕೇಳಲಾಗದು. ಗುರುವಿನ ಪೂರ್ವಾಶ್ರಯವ ಶಿಷ್ಯ ಕಳೆವನಲ್ಲದೆ, ಶಿಷ್ಯನ ಪೂರ್ವಾಶ್ರಯವ ಗುರು ಕಳೆಯಲರಿಯ. ಶರಣನ ಪೂರ್ವಾಶ್ರಯವ ಲಿಂಗ ಕಳೆಯಿತ್ತೆಂಬರು ಆ ನುಡಿಯ ಕೇಳಲಾಗದು, ಲಿಂಗದ ಪೂರ್ವಾಶ್ರಯವ ಶರಣ ಕಳೆವನಲ್ಲದೆ, ಆ ಶರಣನ ಪೂರ್ವಾಶ್ರಯವ ಲಿಂಗವು ಕಳೆಯಲರಿಯದು. ಭಕ್ತನ ಪೂರ್ವಾಶ್ರಯವ ಜಂಗಮ ಕಳೆಯಿತ್ತೆಂಬರು ಆ ನುಡಿಯ ಕೇಳಲಾಗದು, ಜಂಗಮದ ಪೂರ್ವಾಶ್ರಯವ ಭಕ್ತ ಕಳೆವನಲ್ಲದೆ, ಆ ಭಕ್ತನ ಪೂರ್ವಾಶ್ರಯವ ಜಂಗಮ ಕಳೆಯಲರಿಯ. ಪ್ರಸಾದಿಯ ಪೂರ್ವಾಶ್ರಯವ ಪ್ರಸಾದ ಕಳೆಯಿತ್ತೆಂಬರು ಆ ನುಡಿಯ ಕೇಳಲಾಗದು, ಪ್ರಸಾದದ ಪೂರ್ವಾಶ್ರಯವ ಪ್ರಸಾದಿ ಕಳೆವನಲ್ಲದೆ ಆ ಪ್ರಸಾದಿಯ ಪೂರ್ವಾಶ್ರಯವ ಪ್ರಸಾದ ಕಳೆಯಲರಿಯದು. ಆ ಪ್ರಸಾದದ ಪೂರ್ವಾಶ್ರಯವ ಕಳೆಯಲಿಕಾಗಿ ಮಹಾಪ್ರಸಾದಿಯಾದ ಕೂಡಲಚೆನ್ನಸಂಗಾ ನಿಮ್ಮ ಶರಣ.
--------------
ಚನ್ನಬಸವಣ್ಣ
ಸಮಯಾಚಾರವೆಂದು ನೇಮಕ್ಕೆ ಹೊತ್ತು ಮಾಡುತಿರ್ಪ ಸದ್ಭಕ್ತರು, ಎನಗೆ ಹೇಳಿರಯ್ಯಾ, ಅರ್ಥಕೋ, ಪ್ರಾಣಕ್ಕೋ, ಅಪಮಾನಕ್ಕೋ? ಅಂತಲ್ಲದೆ, ಉಂಬ ಓಗರಕ್ಕೋ, ಸಂತತ ಸಮಯೋಚಿತವನರಿವುದಕ್ಕೋ? ಈ ಸಂಚಿತನವರಿಯದೆ ಮುಂಚಿತ್ತಾಗಿ ಉಂಬ, ಅಶನಕ್ಕೆ ಕೈಯ ನೀಡಿ, ತಾ ಹಿಂಚಾಗಿ ಉಂಬ ಪ್ರಸಾದಿಯ ನೋಡಾ. ಆಯತವೆಂದರಿಯದೆ, ಸ್ವಾಯತವೆಂದರಿಯದೆ, ಸನ್ನಹಿತಪ್ರಸಾದವೆಂದರಿಯದೆ, ಹಮ್ಮುಬಿಮ್ಮಿಗೆ ಹೋರುವ ಉನ್ಮತ್ತರನೇನೆಂಬೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಎಲೆ ಮನವೆ ಕೇಳಾ, ಶಿವನು ನಿನಗೆ ಅನಂತಾನಂತಯುಗದಲ್ಲಿ ಶಿವಾನುಭಾವಸ್ಥಿತಿಯ ಕಳುಹಿತ್ತ, ಲೋಕಕ್ಕೆರಡು ಸ್ಥಿತಿಯಲ್ಲಿ ಜನ್ಮಾದಿ ಕಟ್ಟಣೆಯ ಹರಿಯೆಂದು. ಆ ಪ್ರಭಾಮೂರ್ತಿಯಾಗಿ ಗುರುವೆಂಬ ನಾಮವಂ ಧರಿಸಿ, ಮಹಾಲಿಂಗೈಕ್ಯವನು, ಮಹಾಲಿಂಗ ಯೋಗಪ್ರಭಾವವನು, ಅಷ್ಟಾಷಷ್ಟಿತೀರ್ಥಂಗಳನು, ಶಿವನು ಅನಂತಪ್ರಾಣಿಗಳಿಗೆ ಸಾಧನವೆಂದು ಮಾಡಿದನು. ಮಂದರಗಿರಿ ರಜತಗಿರಿ ಮೇರುಗಿರಿ ಹಿಮಗಿರಿ ಮೊದಲಾದ ಅಷ್ಟಕುಲಪರ್ವತಂಗಳನು ಸ್ಥಲಂಗೊಳಿಸಿದನು. ಅನಾದಿಸಂಸಿದ್ಧದಾದಿಲಿಂಗೇಶ್ವರದೇವರ ಸ್ಥಲಂಗೊಳಿಸಿದನು. ಎಲ್ಲಾ ಯಂತ್ರಕ್ಕೆ ಅಮೃತಕಳೆಯನೀಯಲೆಂದು ಕಪಿಲಸಿದ್ಧಮಲ್ಲಿಕಾರ್ಜುನದೇವರ ಸ್ಥಲಂಗೊಳಿಸಿದನು. ಸಿದ್ಧಸಿಂಹಾಸನದ ಮೇಲೆ ನಾಮಕರಣ ರಾಮನಾಥನಾಗಿ ಗುರು ಮತ್ರ್ಯಕ್ಕೆ ಬಂದ ಕಾಣಾ ಮನವೆ. ಆಚಾರ ಗೋಚರವಾಗಬೇಕೆಂದು ಆ ನಿರ್ವಯಲೆಂಬ ಸ್ವಾಮಿ ತಾನೆಯಾಗಿ, ಓಂಕಾರ ಊಧ್ರ್ವರೇತ ಶಿವನಾಗಿ, ಬೆಳಗನುಟ್ಟು ಬಸವಣ್ಣ ಬಂದ ಕಾಣಾ ಮನವೆ. ಎಲ್ಲಾ ಪ್ರಾಣಿಗಳಿಗೆ ಜಿಹ್ವೆಗಳನು ಪವಿತ್ರವ ಮಾಡಲೆಂದು ಶುದ್ಧಸಿದ್ಧಪ್ರಸಿದ್ಧಪ್ರಸಾದವ ತೋರಿಹೆವೆನುತ ಮಹಾಪ್ರಸಾದಿ ಚೆನ್ನಬಸವಣ್ಣ ಬಂದ ಕಾಣಾ ಮನವೆ. ಜ್ಞಾನವಾಹನವಾಗಿ ತನುಮನಧನದ ಮೇಲೆ ನಡೆದು, ಅನಂತಮೂರ್ತಿಗಳ ಪವಿತ್ರವ ಮಾಡಲೆಂದು ಎಲ್ಲಾ ಸಂಬಂಧವನು ಕರಸ್ಥಲದಲ್ಲಿ ಹಿಡಿದುಕೊಂಡು, ಜಂಗಮವಾಗಿ ಪ್ರಭುದೇವರು ಬಂದರು ಕಾಣಾ ಮನವೆ. ಗುರುವೆ ಮಹಾಭಕ್ತನಾಗಿ ಅರ್ಪಿತವ ಮಾಡಿ, ಪ್ರಸಾದಿಯ ಅನುಭಾವದ ಆಭರಣವೆ ಜಂಗಮವಾಗಿ, ಇಂತೀ ಚತುರ್ವಿಧಸ್ಥಲಂಗಳು ಎನ್ನ ಪ್ರಾಣನ ಕೊರಳಲ್ಲಿಹವಾಗಿ, ನಿಮ್ಮ ಅನಿಮಿಷವಾಗಿ ನಾ ನೋಡುತಿರ್ದೆ ಕಾಣಾ, ಕಲಿದೇವಯ್ಯಾ.
--------------
ಮಡಿವಾಳ ಮಾಚಿದೇವ
ಗುರುಪ್ರಸಾದಿಯಾದ ಬಳಿಕ ವಾತ ಪಿತ್ತ ಶ್ಲೇಷ್ಮವೆಂಬ ತ್ರಿದೋಷವಿಲ್ಲದಿರಬೇಕು. ಲಿಂಗಪ್ರಸಾದಿಯಾದ ಬಳಿಕ ಶೀತೋಷ್ಣಾದಿಗಳ ಭಯವಿಲ್ಲದಿರಬೇಕು. ಜಂಗಮಪ್ರಸಾದಿಯಾದ ಬಳಿಕ ಆದ್ಥಿ ವ್ಯಾದ್ಥಿಯಿಲ್ಲದಿರಬೇಕು. ಮಹಾಪ್ರಸಾದಿಯಾದ ಬಳಿಕ ಮರಣವಿಲ್ಲದಿರಬೇಕು. ತಾಪತ್ರಯ ತನುವ ಪೀಡಿಸುವನ್ನಕ್ಕರ ಪ್ರಸಾದಿ ಪ್ರಸಾದಿಯೆಂದೇನೋ ಜಡರುಗಳಿರ? ಕೆಂಡವ ಇರುಹೆ ಮುತ್ತಬಲ್ಲುದೆ? ನೊಣ ಹಾದರೆ ಮದಸೊಕ್ಕಿದಾನೆಯ ಬರಿ ಮುರಿಯಬಲ್ಲುದೆ? ಪ್ರಸಾದಿಯ ಪ್ರಳಯಬಾಧೆಗಳು ಬಾದ್ಥಿಸಬಲ್ಲವೇ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಆಡುವಡೆ ಸದಾಚಾರಿಗಳ ಕೂಡೆ ಆಡುವದು. ನುಡಿವಡೆ ಜಂಗಮಪ್ರೇಮಿಯ ಕೂಡೆ ನುಡಿವುದು. ಮಾತಾಡುವಡೆ ಪ್ರಸಾದಿಯ ಕೂಡೆ ಮಾತನಾಡುವದು. ಭಕ್ತಿಹೀನನ ಕಂಡಡೆ ಮನ ಮುನಿಸ ಮಾಡಿಸಾ ರೇಕಣ್ಣಪ್ರಿಯ ನಾಗಿನಾಥ್ಞಿ.
--------------
ಬಹುರೂಪಿ ಚೌಡಯ್ಯ
ಇನ್ನೊಂದು ಪ್ರಕಾರದ ಷಡ್ಲಿಂಗನ್ಯಾಸಸ್ಥಲವೆಂತೆಂದಡೆ : ಪೃಥ್ವಿಯೇ ಅಂಗವಾದ ಭಕ್ತನ ಸುಚಿತ್ತಹಸ್ತದಲ್ಲಿ ಆಚಾರಲಿಂಗ ನ್ಯಾಸವಾಗಿಹುದು. ಅಪ್ಪುವೆ ಅಂಗವಾದ ಮಹೇಶ್ವರನ ಸುಬುದ್ಧಿಹಸ್ತದಲ್ಲಿ ಗುರುಲಿಂಗ ನ್ಯಾಸವಾಗಿಹುದು. ಅನಲಾಂಗವಾದ ಪ್ರಸಾದಿಯ ನಿರಹಂಕಾರಹಸ್ತದಲ್ಲಿ ಶಿವಲಿಂಗ ನ್ಯಾಸವಾಗಿಹುದು. ವಾಯುವೇ ಅಂಗವಾದ ಪ್ರಾಣಲಿಂಗಿಯ ಸುಮನವೆಂಬ ಹಸ್ತದಲ್ಲಿ ಚರಲಿಂಗ ನ್ಯಾಸವಾಗಿಹುದು. ವ್ಯೋಮಾಂಗವಾದ ಶರಣನ ಸುಜ್ಞಾನಹಸ್ತದಲ್ಲಿ ಪ್ರಸಾದಲಿಂಗ ನ್ಯಾಸವಾಗಿಹುದು. ಆತ್ಮಾಂಗವಾದ ಐಕ್ಯನ ಭಾವಹಸ್ತದಲ್ಲಿ ಮಹಾಲಿಂಗ ನ್ಯಾಸವಾಗಿಹುದು ನೋಡಾ. ಇದಕ್ಕೆ ಈಶ್ವರ್ದೋವಾಚ : ``ಆಚಾರಂ ಚಿತ್ತಹಸ್ತಂ ಚ ಬುದ್ಧಿಹಸ್ತೇ ಗುರುಸ್ತಥಾ | ಶಿವಲಿಂಗಂ ಚ ಅಹಂಕಾರೇ ಚರಲಿಂಗ ಮನೇ ತಥಾ || ಪ್ರಸಾದಂ ಜ್ಞಾನಹಸ್ತೇ ಚ ಭಾವಹಸ್ತೇ ಮಹಸ್ತಥಾ | ಇತಿ ಲಿಂಗಸ್ಥಲಂ ಜ್ಞಾತುಂ ದುರ್ಲಭಂ ಚ ವರಾನನೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಒಳಗೆ ತೊಳೆದು, ಹೊರಗೆ ಮೆರೆದ ಪ್ರಸಾದಿ. ಕಳೆಮೊಳೆಯನೊಂದು ಮಾಡಿದ ಪ್ರಸಾದಿ. ಅಳಿಯ ಬಣ್ಣದ ಮೇಲಿದ ಅಮೃತವನುಂಡ ಪ್ರಸಾದಿ. ಕಳೆಯ ಬೆಳಗಿನ ಸುಳುಹಿನ ಸೂಕ್ಷ್ಮದಲ್ಲಿ ನಿಂದ ಪ್ರಸಾದಿ. ಇಂತಪ್ಪ ಪ್ರಸಾದಿಯ ಒಕ್ಕುಮಿಕ್ಕಿದ ಕೊಂಡ ಕಾರಣದಿಂದ ನಾನೆತ್ತ ಹೋದೆನೆಂದರಿಯೆನಯ್ಯಾ. ಬಸವಪ್ರಿಯ ಕೂಡಲಚೆನ್ನಬಸವಣ್ಣಾ ನೀವೆ ಬಲ್ಲಿರಿ.
--------------
ಹಡಪದ ಅಪ್ಪಣ್ಣ
ಸೂಳೆಯ ತನುಮನದ ಕೊನೆಯಲ್ಲಿ ವಿಟಗಾರನೇ ಪ್ರಾಣಲಿಂಗ; ಶೀಲವಂತನ ತನುಮನದ ಕೊನೆಯಲ್ಲಿ ಭವಿಯೇ ಪ್ರಾಣಲಿಂಗ ; ನಿತ್ಯ ಪ್ರಸಾದಿಯ ತನುಮನದ ಕೊನೆಯಲ್ಲಿ ಬೆಕ್ಕೇ ಪ್ರಾಣಲಿಂಗ ; ಬ್ರಾಹ್ಮಣರ ತನುಮನದ ಕೊನೆಯಲ್ಲಿ ಸೂತಕವೇ ಪ್ರಾಣಲಿಂಗ; ಇಂಥವರಿಗೆಲ್ಲಾ ಇಂತಾಯಿತು! ದೇವರಗುಡಿಯೆಂದು ದೇಗುಲವ ಪೊಕ್ಕು ನಮಸ್ಕಾರವ ಮಾಡುವಂಗೆ ಹೊರಗೆ ಕಳೆದ ಪಾದರಕ್ಷೆಯೆ ಪ್ರಾಣಲಿಂಗ. ಅದು ಎಂತೆಂದಡೆ : ಸೂಳೆಗೆ ವಿಟನ ಹಂಬಲು; ಶೀಲವಂತನಿಗೆ ಭವಿಯ ಹಂಬಲು; ನಿತ್ಯಪ್ರಸಾದಿಗೆ ಬೆಕ್ಕಿನ ಹಂಬಲು ; ಬ್ರಾಹ್ಮಣನಿಗೆ ಸೂತಕದ ಹಂಬಲು ; ಇವರು ಭಕ್ತಿಶೂನ್ಯರು ಕಾಣಿರಯ್ಯಾ ! ಇವಂ ಬಿಟ್ಟು, ಪರಸ್ತ್ರೀಯರ ಮುಟ್ಟದಿರ್ಪುದೇ ಶೀಲ ; ಪರದ್ರವ್ಯ[ವ]ಅಪಹರಿಸದಿರುವುದೇ ಆಚಾರ ; ಪರನಿಂದೆ[ಯ] ಕರ್ಣದಿಂ ಕೇಳದಿರ್ಪುದೇ ನಿತ್ಯಪ್ರಸಾದತ್ವ ; ಪರರಂ ದೂಷಿಸದಿರ್ಪುದೇ ಬ್ರಹ್ಮತ್ವ. ಇಂತಿದರಲ್ಲಿ ನಡೆದು, ದೇವರಿಗೆ ನಮಸ್ಕಾರವ ಮಾಡುವುದೇ ನಮಸ್ಕಾರ. ಹಿಂದಿನ ಪುರಾತನರು ನಡೆದರೆಂಬೋ ಶಾಸ್ತ್ರವಂ ಕೇಳಿ, ಈಗಿನ ಕಿರಾತರು 'ನಾವು ಶೀಲವಂತರು' 'ನಾವು ಆಚಾರವಂತರು', 'ನಾವು ನಿತ್ಯಪ್ರಸಾದಿಗಳು', 'ನಾವು 1[ 'ಪೂಜಸ್ಥರು']1, 'ನಾವು ಬ್ರಾಹ್ಮಣರು', ಎಂದು ತಿರುಗುವ ಮೂಳ ಹೊಲೆಯರ ಮುಖವ ನೋಡಲಾಗದು ಕಾಣೋ ಕೂಡಲಾದಿ ಚನ್ನಸಂಗಮದೇವಾ !
--------------
ಕೂಡಲಸಂಗಮೇಶ್ವರ
ಭಕ್ತ ಮಾಹೇಶ್ವರಸ್ಥಲ ಏಕವಾದಲ್ಲಿ, ಶಿಲೆ ಬಿಂದುವಿನ ಚಂದ್ರನ ಬಿಂಬದಂತೆ ಇದ್ದಿತ್ತು. ಪ್ರಸಾದಿಯ ಪ್ರಾಣಲಿಂಗಿಯ ಸ್ಥಲ ಏಕವಾದಲ್ಲಿ, ಅರಗಿನ ಪುತ್ಥಳಿಯ ಅವಯವಂಗಳ ಉರಿ ಹರಿದು, ಪರಿಹರಿಸಿದಂತೆ ಇದ್ದಿತ್ತು. ಶರಣನ ಐಕ್ಯಸ್ಥಲದ ಭಾವ ಕರ್ಪುರವ ಅಗ್ನಿ ಆಹುತಿಯ ಕೊಂಡಂತೆ ಇದ್ದಿತ್ತು. ಇಂತೀ ಆರು ಮೂರರಲ್ಲಿ ಅಡಗಿನಿಂದ ಕೂಟಸ್ಥಲ. ಲೆಪ್ಪದ ಮೇಗಣ ಚಿತ್ರದ ದೃಕ್ಕಿನ ದೃಶ್ಯದಂತೆ ಇದ್ದಿತ್ತು. ಇಂತೀ ತ್ರಿವಿಧಸ್ಥಲ ಏಕರೂಪವಾದಲ್ಲಿ, ಆಕಾಶದ ವರ್ಣದ ಬಹುರೂಪ ಗಬ್ರ್ಥೀಕರಿಸಿದ ನಿರಾಕಾರದಂತೆ ಇದ್ದಿತ್ತು. ನಾಮವಿಲ್ಲದ ರೂಪು, ಭಾವವಿಲ್ಲದ ಮಾತು, ನೀ ನಾನೆಂಬ ಸ್ಥಲ ಅದೇನು ಹೇಳಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅನ್ಯೋನ್ಯವೆಂಬುದು ತನ್ನತ್ತಲಿಲ್ಲ ಅನ್ಯ ಬಂದಡೆ ಅಯ್ಯನತ್ತಲೆ ಮುಖವ ಬೆರಸುವ ಭೇದ ಅಯ್ಯನ ಮುಖವೆ ಮುಖವಾದನೊ. ಇಂ್ರಯಂಗಳೈದು ಆತನ ಇಂಬಪ್ಪ ಮುಖವಾಗಿ ಬಂದ ಪ್ರಸಾದವ ಕೊಂಬ ಎನ್ನ ಕಪಿಲಸಿದ್ಧಮಲ್ಲಿಕಾರ್ಜುನಯ್ಯನಲ್ಲಿನ ಗುರುಭಕ್ತ ಪ್ರಸಾದಿಯ ಪರಿಯಿಂತು
--------------
ಸಿದ್ಧರಾಮೇಶ್ವರ
ರೂಪನರಿದು ರುಚಿಯನುಂಡು ಅವರ ನಿಹಿತಂಗಳ ಕಂಡು ಮತ್ತೆ ಲಿಂಗಕ್ಕೆ ಅರ್ಪಿಸಿ ಪ್ರಸಾದ ಮುಂತಾಗಿ ಕೊಂಡೆಹೆನೆಂಬ ವರ್ತಕಭಂಡರ ನೋಡಾ. ಕಟ್ಟಿ ಹುಟ್ಟದ ರತ್ನ, ಸುಗುಣ ಅಪ್ಪು ತುಂಬದ ಮುತ್ತು ಕಳೆ ತುಂಬದ ಬೆಳಗು, ಹೊಳಹುದೋರದ ಸೂತ್ರ ಲವಲವಿಕೆಯಿಲ್ಲದ ಚಿತ್ತ, ಇದಿರಗುಣವನರಿಯದ ಆತ್ಮ. ಇಂತಿವು ಫಲಿಸಬಲ್ಲವೆ ? ಕ್ರೀಯನರಿದು ಅರ್ಪಿಸಬೇಕು. ಅರ್ಪಿಸುವಲ್ಲಿ ದೃಷ್ಟಾಂತದ ಸಿದ್ಧಿ ಪ್ರಸಿದ್ಧವಾಗಬೇಕು. ಕಾಣದವಗೆ ತಾ ಕಂಡು ಕುರುಹಿನ ದಿಕ್ಕ ಅರುಹಿ ತೋರುವನ ತೆರನಂತೆ ತಾ ಲಕ್ಷಿಸಿದಲ್ಲಿ, ತಾ ದೃಷ್ಟಿಸಿದಲ್ಲಿ, ತಾ ಮುಟ್ಟಿದಲ್ಲಿ ಅರ್ಪಿತವಾದ ಪ್ರಸಾದಿಯ ಕಟ್ಟು. ದಹನ ಚಂಡಿಕೇಶ್ವರಲಿಂಗವು ತಾನಾದ ಚಿತ್ತದವನ ಮುಟ್ಟು.
--------------
ಪ್ರಸಾದಿ ಲೆಂಕಬಂಕಣ್ಣ
ಚೆನ್ನಸಂಗಾ, ನಿಮ್ಮಲ್ಲಿ ಬಯಸಿ ಬೇಡುವಡೆ, ಬಸವನಂತಪ್ಪ ನಿಧಾನ ದೊರಕಿತ್ತೆನಗೆ. ಚೆನ್ನಸಂಗಾ, ನಿಮ್ಮಲ್ಲಿ ಬಯಸಿ ಬೇಡುವಡೆ, ಬಸವನಂತಪ್ಪ ಪರುಷ ದೊರಕಿತ್ತೆನಗೆ. ಚೆನ್ನಸಂಗಾ ನಿಮ್ಮಲ್ಲಿ ಬಯಸಿ ಬೇಡುವಡೆ ಬಸವನಂತಪ್ಪ ಕಾಮಧೇನು ದೊರೆಯಿತ್ತೆನಗೆ. ಚೆನ್ನಸಂಗಾ, ನಿಮ್ಮಲ್ಲಿ ಬಯಸಿ ಬೇಡುವಡೆ, ಬಸವನಂತಪ್ಪ ಸುರತರು ದೊರಕಿತ್ತೆನಗೆ. ಚೆನ್ನಸಂಗಾ, ನಿಮ್ಮಲ್ಲಿ ಬಯಸಿ ಬೇಡುವಡೆ, ತ್ರಿವಿಧ ತ್ರಿವಿಧ[ದ] ಮೊದಲನೆ ತೋರಿದ ಬಸವಣ್ಣನೆನಗೆ. ಚೆನ್ನಸಂಗಾ, ನಿಮ್ಮಲ್ಲಿ ಬಯಸಿ ಬೇಡುವಡೆ, ಬಸವಣ್ಣನಿಂದ ನೀವಾದಿರಾಗಿ, ಕೂಡಲಚೆನ್ನಸಂಗಯ್ಯನಲ್ಲಿ ಪ್ರಸಾದಿಯ ಪ್ರಸಾದಿಯಾದೆನು.
--------------
ಚನ್ನಬಸವಣ್ಣ
ಆಪ್ಯಾಯನ ಮುಂತಾಗಿ ಕೊಂಬುದು ಪ್ರಸಾದವಲ್ಲ. ಸಯದಾನದೊಳಗಣ ಪ್ರಸಾದ ಆವ ಪರಿಯಲೂ ಅಲ್ಲ. ಮತ್ತೆಯೂ ಪ್ರಸಾದವೆ ಬೇಕು. ಇಂತಪ್ಪ ಪ್ರಸಾದಿಯ ತೋರು ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಬೇಕು ಬೇಡೆನ್ನದ ಪ್ರಸಾದಿಯ ಕಾಯ, ಲಿಂಗಾರ್ಪಿತ, ಆ ಅರ್ಪಿತವೆ ಪ್ರಸಾದ, ಅದೆ ಮತ್ತೆ ಮತ್ತೆ ಅರ್ಪಿತ, ದರ್ಶನದಿಂದಾಯಿತ್ತು, ಸ್ಪರ್ಶನದಿಂದಾಯಿತ್ತು. ಅರ್ಪಿಸಿ, ಸೋಂಕನರ್ಪಿಸಲರಿಯದಿರ್ದಡದು ಭ್ರಾಂತು. ಕೂಡಲಚೆನ್ನಸಂಗನ ಪ್ರಸಾದಿಯ ಪ್ರಸಾದವನತಿಗಳೆದಡೆ ಮುಂದೆ ಅದಕ್ಕೆಂತೊ ?
--------------
ಚನ್ನಬಸವಣ್ಣ
ಇನ್ನಷ್ಟು ... -->