ಅಥವಾ

ಒಟ್ಟು 99 ಕಡೆಗಳಲ್ಲಿ , 1 ವಚನಕಾರರು , 99 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚರ ಸ್ಥಾವರವಾದುದುಂಟೆ? ಮಹಾಸಮುದ್ರಕ್ಕೆ ಕೆರೆಯೇರಿಯುಂಟೆ? ಸುಖವ ಮಚ್ಚಿ ಅಖಿಳರೊಳಗಿದ್ದು ಸಕಲ ವಿರಹಿತರಾದ ಪರಿಯಿನ್ನೆಂತೊ? ಅದು ವಿಕಳರ ಮಾತು, ಮೂರಕ್ಷರಕ್ಕೆ ದೂರ, ಪುಣ್ಯಾರಣ್ಯದಹನ ಬ್ಥೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಓಡ ಕುದುರೆಯ ಮೇಲೆ ಮಸಿಯ ಹಲ್ಲಣವ ಹಾಕಿ, ಬಸಲೆಯ ಹಂಬ ಬಾಯಿಗೆ ಕಟ್ಟಿ, ದೆಸೆವರಿವ ಅಸುರಾವುತ ಚೊಲ್ಲೆಹದ ಬಲ್ಲೆಹವ ಹಿಡಿದು, ಮುಗುಳುನಗೆಯವಳಲ್ಲಿ ಏರಿ ತಿವಿದ. ಚೊಲ್ಲೆಹದ ಬಲ್ಲೆಹ ಮುರಿದು, ಓಡಿನ ಕುದುರೆ ಒಡೆದು, ಮಸಿಯ ಹಲ್ಲಣ ನುಗ್ಗುನುಸಿಯಾಗಿ, ಬಸಲೆಯ ಬಾಯಕಟ್ಟು ಹರಿದು, ಅಸುರಾವುತ ಅವಳ ಕಿಸಲೆಯ ರಸಕ್ಕೊಳಗಾದ. ಅದೇತರಿಂದ ಹಾಗಾದನೆಂಬುದ ನೀನರಿ, ಪುಣ್ಯಾರಣ್ಯದಹನ ಬ್ಥೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ತತ್ಕಾಲವನರಿವ ಕುಕ್ಕುಟನ ಬಾಯ ತುತ್ತನಿಕ್ಕಿಸಿಕೊಂಡವನಾರಯ್ಯ? ಆ ತುತ್ತು ಮುತ್ತದವರ ಮುಕ್ತಿಯ ಬಲೆಗೀಡು ಮಾಡುವುದು. ತುತ್ತ ಮುಟ್ಟದೆ ಕುಕ್ಕುಟನ ಕುಲವ ಕರೆ. ಕರೆದಲ್ಲಿ ಬಂದು ನಿಂದುಳುಮೆ, ಅದರಂಗವ ಆರೆಂದರಿ, ಪುಣ್ಯಾರಣ್ಯದಹನ ಬ್ಥೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಮಹಾಮನೆಯ ಮಂಟಪದಲ್ಲಿ ನಾಲ್ಕು ನಡುವಳ ಕಂಬದ ನಡುವಳ ಕಂಬದಲ್ಲಿ ಒಂದು ಒರಲೆ ಮನೆಯ ಮಾಡಿತ್ತು. ಅದಕ್ಕೆ ಎಂಟು ಕಂಬ, ಒಂಬತ್ತು ಬಾಗಿಲು, ಹತ್ತು ಕದ; ಮಿಗಿಲೊಂದು ಮುಚ್ಚುವುದಕ್ಕೆ ಬಾಗಿಲಿಲ್ಲ. ತುಂಬಿ ಅಲ್ಲಿ ಹಾರಿತ್ತು. ಆ ಆತ್ಮನ ನೆಲೆಯನರಿ, ಪುಣ್ಯಾರಣ್ಯದಹನ ಬ್ಥೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಬಾಹ್ಯದ ನೀತಿ ಅಂತರಂಗದ ಅರಿವು ಸರ್ವರಲ್ಲಿ ಕ್ಷಮೆ ಒಳಹೊರಗಾಗುವ ವರ್ತಕ ತ್ರಿವಿಧ ಶುದ್ಧವಾಗಿಯಿಪ್ಪ ಭಕ್ತನ ಜಂಗಮದ ಹೃತ್ಕಮಲವೆ ವಿರಕ್ತವಾಸ. ಇಷ್ಟನರಿದು ಮರೆದವಂಗಲ್ಲದೆ ತೆರಪಿಲ್ಲ; ನಿನ್ನ ನೀನರಿ ಪುಣ್ಯಾರಣ್ಯದಹನ ಬ್ಥೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಕಾಮಧೇನುವಿನ ನಡುವೆ ಒಂದು ಕೋಣ ಕಟ್ಟಿ ಇದ್ದಿತ್ತು. ಕೋಣನ ಗವಲು ತಾಗಿ ಕಾಮಧೇನು ಕೆಡುತ್ತದೆ. ಕೋಣನ ಡೋಣಿಗೆ ತಳ್ಳಿ ಕಾಮಧೇನುವ ಕಾಣದಂತೆ ಮಾಡು. ಅರಿವು ಅಜ್ಞಾನವ ನಿನ್ನ ನೀನರಿ, ಪುಣ್ಯಾರಣ್ಯದಹನ ಬ್ಥೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಕ್ಷಮೆಯಿಲ್ಲದ ಭಕ್ತಿ, ನಯರತಿಯಿಲ್ಲದ ಮಾಟ, ಶ್ರದ್ಥೆಯಿಲ್ಲದ ಕೂಟ, ಶಿವಲಿಂಗಾರ್ಚನೆಯಿಲ್ಲದವನ ಹೃದಯ ನಂದಿಸಿದ ಕಜ್ಜಳದಂತೆ. ಆ ಸಂದೇಹವ ನಿನ್ನ ನೀನರಿ, ಪುಣ್ಯಾರಣ್ಯದಹನ ಬ್ಥೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಎನ್ನಾಕಾರವೆ ನೀನಯ್ಯ ಬಸವಣ್ಣ. ನಿ [ನ್ನಾಕಾರವೆ] ಕೋಲ ಶಾಂತ. ಹಿಡಿದಿರ್ದ ಕರಸ್ಥಲ ಬಸವಣ್ಣನಿಂದ ಉದಯವಾದ ಕಾರಣ ಆ ಬಸವಣ್ಣನ ಶ್ರೀಪಾದಕ್ಕೆ ಅಹೋರಾತ್ರಿಯಲ್ಲಿ ನಮೋ ನಮೋಯೆಂಬೆ. ಪುಣ್ಯಾರಣ್ಯದಹನ ಬ್ಥೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಕೋಣನ ಕಿವಿಯಲ್ಲಿ ಮೂರು ಹಸು ತೆನೆ ತುಂಬಿ ಕರವೊಂದನೆ ಈಯಿತ್ತು. ಕರು ತಾಯಿ ನೆರೆ ನೋಡಿ ಹಾಲಿಗೆ ಒಡೆಯರಿಲ್ಲಾ ಎಂದು ಪ್ರಾಣವ ಬಿಟ್ಟಿತ್ತು. ಕರುವಿನ ಹರಣವರಿ; ಅರಿತಡೆ ನಿನ್ನ ನೀನೆ ಬ್ಥಿನ್ನಭಾವವಿಲ್ಲ. ಪುಣ್ಯಾರಣ್ಯದಹನ ಬ್ಥೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಇದಿರಿಟ್ಟು ಪೂಜಿಸುವಲ್ಲಿ ಷೋಡಶ ಉಪಚರಿಯದಲ್ಲಿ ಭರಿತನಾಗಿ ಇರಬೇಕು. ಅದು ಆರೋಪಿಸಿದಲ್ಲಿ ಭಾವ ಇದಿರಿಡದಲ್ಲಿ ಬೇರೊಂದು ಬಯಕೆಯ ಅರಿತಿರಬೇಕು. ಅರಿವನರಿತೆನೆಂದು ಕುರುಹ ಮರೆದಡೆ ಆ ಮರೆವುದೆ ತನ್ನ ತಿಂಬ ಮಾಯೆ ಎಂದರಿ ಪುಣ್ಯಾರಣ್ಯದಹನ ಬ್ಥೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಕಣ್ಣಿನೊಳಗಣ ಮತ್ಸ ್ಯಕ್ಕೆ ಬಲೆಯ ಬೀಸಿ, ಹದ್ದಿನ ಬಾಯ ಹಾವಿಂಗೆ ಹೇಳಿಗೆಯ ಮಾಡಿ, ಕಾಣಬಾರದ ಬಯಲಿಂಗೆ ಮನೆಯ ಕಟ್ಟಿ ಬಾಳುತ್ತಿದ್ದವನ ನಿನ್ನ ನೀನರಿ, ಪುಣ್ಯಾರಣ್ಯದಹನ ಬ್ಥೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ರಾಜ್ಯ ಹೋದಲ್ಲಿ ರಾಯತನ ಉಂಟೆ? ಪೂಜೆ ಅಡಗಿದಲ್ಲಿ ಪುಣ್ಯದ ಹಂಗುಂಟೆ? ಮಾಟಕೂಟ ನಷ್ಟವಾದಲ್ಲಿ ಮಹಾಮನೆಯ ಎಡೆಯಾಟವುಂಟೆ? ಸಟ್ಟೆಯನೊಪ್ಪಿಸಿದವಂಗೆ ಮತ್ತೆ ಒಪ್ಪದ ಚೀಟುಂಟೆ? ಭಕ್ತನಾಗಿ ಮಾಡಿ ಕಂಡೆ, ಭೃತ್ಯನಾಗಿ ಕಾಯಿದು ಕಂಡೆ ಮತ್ತೆ ನೀ ನೀವೊಪ್ಪಿ ಕೊಟ್ಟಿರಿ. ಎನ್ನಂಗದಲ್ಲಿ ಮತ್ರ್ಯರೂಪನ ರೂಪ ನಿಮಗೆ ಒಪ್ಪಿಸಿದೆಯೆಂಬುದಕ್ಕೆ ಮೊದಲೇ ಬಚ್ಚಬಯಲಾಯಿತ್ತು. ಪುಣ್ಯಾರಣ್ಯದಹನ ಬ್ಥೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಬಾಳೆ ಬಲಿದು ಈಳೆಯ ಮರನಾಯಿತ್ತು. ಆ ಈಳೆಯ ಮರನ ಏರಿ ಈರೇಳು ಲೋಕವ ಕಂಡವನ ಕಂಗಳ ಮಧ್ಯದಲ್ಲಿ ನಿಂದವನ ಆರೆಂದರಿ, ಪುಣ್ಯಾರಣ್ಯದಹನ ಬ್ಥೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಅಕಾಯದ ಕಣ್ಣಿನಲ್ಲಿ ನೋಡಿ ವಿಕಾರವಳಿದು ಸುಖಪಟ್ಟಣವ ಕಂಡೆ. ಆ ಪಟ್ಟಣದರಸಿಂಗೆ ಭಾವ ಕಾಲಿಲ್ಲ. ಪ್ರಧಾನಂಗೆ ಪಾರುಪತ್ಯಕ್ಕೆ ನುಡಿವಡೆ ಬಾಯಿಲ್ಲ. ತಳವಾರ ತಿರುಗುವುದಕ್ಕೆ ಕಣ್ಣಿಲ್ಲ. ಆ ಪಟ್ಟಣದಲ್ಲಿ ಮೂವರಿಗೆ ಕರ್ತನೊಬ್ಬ ಅರಸು. ಆ ಅರಸ ಕಣ್ಣಿನಲ್ಲಿ ಕಾಣಲಿಲ್ಲ, ಎಲ್ಲಿದ್ದಹರೆಂದು ಕೇಳಲಿಲ್ಲ. ಇದ್ದ ಠಾವಿಂಗೆ ಒಬ್ಬರೂ ಹೊದ್ದಲಿಲ್ಲ. ಅರಸಿನ ಆಜ್ಞೆ, ಬಲುಹ, ಓಲಗಕ್ಕೆ ತೆರಪಿಲ್ಲ. ಜೀವಿತಕ್ಕೆ ಅಡಹಿಲ್ಲ, ಎನ್ನ ಬಡತನವ ಇನ್ನಾರಿಗೆ ಹೇಳುವೆ? ಬಂಟರು ಸತ್ತರು, ಅರಸು ನಷ್ಟವಾದ. ಆ ಉಭಯದ ಬೇಧವ ನಾನರಿಯೆ, ನೀ ಹೇಳು. ಪುಣ್ಯಾರಣ್ಯದಹನ ಬ್ಥೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಸಕಲ ವ್ಯಾಪಾರದಲ್ಲಿ ವ್ಯವಹರಣೆಯ ಮಾಡಿ ಬಂದು ನಿಂದ ಧರೆಯ ಮೇಲೆ ಅಯಿದು ರೂಪಾಗಿ ರೂಪಿಂಗೈದು ಕುರುಹಿನ ಭೇದದಲ್ಲಿ ಆರೋಪಿಸಿ ರೂಪು ರೂಪಿನಿಂದ ಅಳಿದು ದೃಷ್ಟವ ದೃಷ್ಟದಿಂದ ಕಾಬಂತೆ ಅರಿವ ಅರಿವಿಂದ ಭಾವವ ಭಾವದಿಂದ ತನ್ನ ತಾ ಕುರುಹಿಟ್ಟುಕೊಂಡು ತತ್ವ ನಿಶ್ಚಯವಾಗಿ ನಿಜವ ನಿನ್ನ ನೀನರಿ, ಪುಣ್ಯಾರಣ್ಯದಹನ ಬ್ಥೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಇನ್ನಷ್ಟು ... -->