ಅಥವಾ

ಒಟ್ಟು 258 ಕಡೆಗಳಲ್ಲಿ , 46 ವಚನಕಾರರು , 194 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಾರಿದ್ಥಿಯ ಹೊಯ್ದು ಬೇರ್ಪಡಿಸಬಹುದೆ ? ಫಲದೊಳಗಣ ಬೀಜ ಬಲಿವುದಕ್ಕೆ ಮೊದಲೆ ತೆಗೆಯಬಹುದೆ ? ಮಹಾಘನವನರಿವುದಕ್ಕೆ ಮೊದಲೆ, ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯನಹ ಪರಿ ಇನ್ನೆಂತೊ ? ಇಕ್ಷುದಂಡ ಬಲಿವುದಕ್ಕೆ ಮೊದಲೆ ತನಿರಸ ಬಹುದೆ ? ನಾನೆಂಬುದಕ್ಕೆ ಸ್ಥಾಣು, ಅಹುದಕ್ಕೆ ಭಾವದ ಬಲಿಕೆ ಇನ್ನಾವುದು, ನಿಃಕಳಂಕ ಮಲ್ಲಿಕಾರ್ಜುನಾ ?
--------------
ಮೋಳಿಗೆ ಮಾರಯ್ಯ
ಬಣ್ಣವಿಲ್ಲದೆ ಚಿನ್ನ ನಾಮಕ್ಕರ್ಹನಾದ ಪರಿ ಇನ್ನೆಂತಯ್ಯಾ. ಹೂವೊಣಗಿ ವಾಸನೆ ಮುಡಿದ ಠಾವಿನಲ್ಲಿ ವಾಸನೆ ನಿಂದುಲ್ಲವೆ? ಅಯ್ಯಾ. ಕ್ರೀಶುದ್ಧವಾದದಲ್ಲಿ ಕಪಿಲಸಿದ್ಧಮಲ್ಲಿಕಾರ್ಜುನಂಗವು ಭಾವಶುದ್ಧವಾಗಿರ್ಪನು.
--------------
ಸಿದ್ಧರಾಮೇಶ್ವರ
ಕೈಯಲ್ಲಿ ಹಿಡಿದು ಕಾಬುದು ಕರ್ಮಪೂಜೆಯಲ್ಲವೆ? ಮನದಲ್ಲಿ ನೆನೆದು ಮಾಡುವುದೆಲ್ಲವು ಕಾಯದ ಕರ್ಮವಲ್ಲವೆ? ಭಾವಶುದ್ಧವನರಿವ ಪರಿ ಇನ್ನಾವುದು? ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಇಬ್ಬರಿಗೊಂದಂಬ ತೊಡುವೆ ಗಡ ಕಾಮಾ. ಅರಿದರಿದು, ಬಿಲುಗಾರನಹೆಯೊ ! ಎಸೆದಿಬ್ಬರು ಒಂ[ದಾ]ಹರು ಗಡ. ಇದು ಹೊಸತು, ಚೋದ್ಯವೀ ಸರಳ ಪರಿ ನೋಡಾ ! ಎನಗೆಯೂ ಉರಿಲಿಂಗದೇವಗೆಯೂ ತೊಟ್ಟೆಸು. ನಾವಿಬ್ಬರೊಂದಾಗೆ ಬಿಲ್ಲಾಳಹೆ, ಎಸೆಯೆಲೋ ಕಾಮಾ.
--------------
ಉರಿಲಿಂಗದೇವ
ಆವಾವ ದ್ರವ್ಯಪದಾರ್ಥಂಗಳನು ಶಿವಲಿಂಗಕ್ಕರ್ಪಿಸಿ ಪ್ರಸಾದವಾದಲ್ಲದೆ ಕೊಳ್ಳೆವೆಂಬ ಪ್ರಸಾದಿಗಳಿರಾ ನೀವು ಅರ್ಪಿಸಿದ ಪರಿಯೆಂತು ? ಪ್ರಸಾದವ ಕೊಂಡ ಪರಿಯೆಂತು ಹೇಳಿರೆ ? ರೂಪಾರ್ಪಿತವಾಯಿತ್ತು ನೇತ್ರದಿಂದ, ಮೃದು, ಕಠಿಣ, ಶೀತೋಷ್ಣಂಗಳು ಅರ್ಪಿತವಾದವು ಸ್ಪರ್ಶನದಿಂದ. ನೇತ್ರ ಹಸ್ತವೆರಡಿಂದ್ರಿಯಂಗಳಿಂದವೂ ರೂಪು ಸ್ಪರ್ಶನವೆಂಬೆರಡೆ ವಿಷಯಂಗಳರ್ಪಿತವಾದವು. ನೀವಾಗಳೇ ಪ್ರಸಾದವಾಯಿತ್ತೆಂದು ಭೋಗಿಸತೊಡಗಿದಿರಿ. ಇಂತು ದ್ರವ್ಯಂಗಳ ರಸವನೂ, ಗಂಧವನೂ, ಶಬ್ದವನೂ, ಶ್ರೋತೃ, ಘ್ರಾಣ, ಜಿಹ್ವೆಗಳಿಂದ ಮೂರು ವಿಷಯಂಗಳನೂ ಅರ್ಪಿಸದ ಮುನ್ನ ಪ್ರಸಾದವಾದ ಪರಿ ಎಂತೊ ? ಅರ್ಪಿತವೆಂದನರ್ಪಿತವ ಕೊಂಬ ಪರಿ ಎಂತೊ ? ಪ್ರಸಾದಿಗಳಾದ ಪರಿ ಎಂತೊ ಶಿವ ಶಿವಾ. ಪಂಚೇಂದ್ರಿಯಂಗಳಿಂದವೂ, ಶಿವಲಿಂಗಪಂಚೇಂದ್ರಿಯ ಮುಖಕ್ಕೆ ಪಂಚವಿಷಯಂಗಳನೂ ಅರ್ಪಿಸಬೇಕು. ಅರ್ಪಿಸಿ ಪ್ರಸಾದವ ಕೊಂಡಡೆ ಪ್ರಸಾದಿ. ಅಲ್ಲದಿರ್ದಡೆ ಅಷ್ಟವಿಧಾರ್ಚನೆ ಷೋಡಶೋಪಚಾರ ಕ್ರಿಯೆ ಅಲ್ಲ. ಪ್ರಸಾದಿಯಲ್ಲ, ಭಕ್ತಿಯ ಪರಿಯೂ ಅಲ್ಲ. ಪೂಜಕರೆಂಬೆನೆ ಪೂಜೆಯ ಒಪ್ಪವಲ್ಲ. ಸಾಧಾರಣ ಪೂಜಕರಪ್ಪರು ಕೇಳಿರಣ್ಣಾ. ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನ ಸಾವಧಾನಾರ್ಪಿತದಲ್ಲಿ ಸ್ವಯವಾಗರಯ್ಯ.
--------------
ಉರಿಲಿಂಗಪೆದ್ದಿ
ಅಂಗದಲ್ಲಿ ಅರ್ಪಿತವಾದ ಸುಖವು ಲಿಂಗದಲ್ಲಿ ಲೀಯವಾಯಿತ್ತೆಂದಡೆ ಅಂಗವ ಲಿಂಗದಲ್ಲಿ ಮತ್ತೆ ನಿಕ್ಷೇಪಿಸಿಹೆನೆಂಬ ಕಾರಣವೇಕಯ್ಯಾ ಶರಣಂಗೆ ಪ್ರಾಣನ ಲಿಂಗದಲ್ಲಿ ಸವೆಸಿ ನಿರವಯವಾಗಬಹುದಲ್ಲದೆ ಕರ್ಮದಿಂದಾದ ಕಾಯವ ಸವೆಸಿ ಸಯವಪ್ಪ ಪರಿ ಎಂತು ಹೇಳಯ್ಯಾ ಕೂಡಲಸಂಗಮದೇವಾ, ನಿಮ್ಮ ಶರಣರು ಕಾಯವಿಡಿದಿರ್ದು ನಿರ್ಮಾಯವಾಗಿರ್ಪುದ ಹೇಳಯ್ಯಾ ನಿಮ್ಮ ಧರ್ಮ.
--------------
ಬಸವಣ್ಣ
ಮನೆಯೊಳಗಣ ಜ್ಯೋತಿ ಮನೆಯ ಮುಟ್ಟದಂತೆ, ಬಸುರೊಳಗಣ ಶಿಶು ಬಸುರ ಮುಟ್ಟದಂತೆ, ಕಕ್ಷೆ, ಕರಸ್ಥಳ, ಅಂಗಸೋಂಕು ಮುಖಸೆಜ್ಜೆ ಕಂಠ ಉತ್ತಮಾಂಗ, ಇವೆಲ್ಲ ಆಯತಂಗಳಲ್ಲದೆ ಪ್ರಾಣಲಿಂಗಸ್ಥಳ ಬೇರೆ. ಇದು ಕಾರಣ ಕೂಡಲಚೆನ್ನಸಂಗಾ ನಿಮ್ಮ ಶರಣನ ಪರಿ ಬೇರೆ.
--------------
ಚನ್ನಬಸವಣ್ಣ
ಅಂಗದಲ್ಲಿ ಲಿಂಗಸಂಗ, ಲಿಂಗದಲ್ಲಿ ಅಂಗಸಂಗವ ಮಾಡಿಹೆನೆಂದಡೆ, ಸಂದು ಭೇದವಳಿವ ಪರಿ ಎಂತು ಹೇಳಾ ಅಂಗದಲ್ಲಿ ಸಂಗವ ಮಾಡಿಹೆನೆಂದಡೆ, ಮುಂದುಗೆಡಿಸಿ ಕಾಡುವನು ಶಿವನು. ಕಾಮವೆಂಬ ಬಯಕೆಯಲ್ಲಿ ಅಳಲಿಸುವ ಬಳಲಿಸುವ ಶಿವನು. ಲಿಂಗದಲ್ಲಿ ಅಂಗವ ತಂದು ನಿಕ್ಷೇಪಿಸಿಹೆನೆಂದಡೆ, ಅಂಗದಿಂದ ಅತ್ತತ್ತಲೋಸರಿಸಿ ಓಡುವನಯ್ಯಾ ಶಿವನು. ಹೆಣ್ಣು ಗಂಡಾದಡೆ ಸಂಗಕ್ಕೆ ಒಲಿವನು ಕೇಳಾ ಶಿವನು. ಕೂಡಲಸಂಗಮದೇವರ ಬೆರಸುವಡೆ, ಬ್ಥಿನ್ನವಿಲ್ಲದೆ ಕಲಿಯಾಗಿರಬೇಕು ಕೇಳಾ ಅವ್ವಾ.
--------------
ಬಸವಣ್ಣ
ಜಗದಗಲದಲ್ಲಿ ಹಬ್ಬಿದ ಬಲೆ, ಯುಗಜುಗಕ್ಕೆ ತೆಗೆಯದು ನೋಡಾ ! [ಅದು] ಬಗೆಯಲ್ಲಿ ಭ್ರಮೆಗೊಳ್ಳದು;_ತನ್ನ ಇರವಿನ ಪರಿ ಇಂತುಟಾಗಿ ! ಜಗದ ಪ್ರಾಣಿಗಳುಲಿದುಲಿದು ಮರಳಿ ಮತ್ತಲ್ಲಿಯೆ ಬೀಳಲು; ಬಲೆಯ ನೇಣು ಬಗ್ಗುರಿಯ ಕೈಯಲಿರಲು,_ ಬಲೆಯ ನೇಣ ಕಣ್ಣಿ ಕಳಚಿ, ಲಿಂಗಕ್ಕೆ ಪ್ರಾಣ ಶರಣೆನ್ನುತ್ತವೆ ನಿಂದು, ಒಡಲುಪಾಧಿಯನರಿಯದೆ ಬೆಳಗಿನಲ್ಲಿ ನಿಂದು, ಬೇಡಿದವರಿಗೆ ಅಣಿಮಾದಿ ಗುಣಂಗಳನಿತ್ತು, ಮನೋಮಧ್ಯದಲ್ಲಿ ನಿಲಿಸಿ ನೆನೆವುತ್ತಿರ್ದು ಸುಖಿಯಾದ; ಪ್ರಾಣನಾಥನ ಕಾಯ ಶೂನ್ಯಲಿಂಗಕ್ಕೆ, ಪ್ರಾಣಶೂನ್ಯಶರಣ. ಗುಹೇಶ್ವರಲಿಂಗವ ಬೆರಸಿ ಬೇರಿಲ್ಲ.
--------------
ಅಲ್ಲಮಪ್ರಭುದೇವರು
ಹಾರುವ ಹಕ್ಕಿಗೆ ಗರಿ ಈರೈದಾದುದ ಕಂಡೆನಯ್ಯ. ಕುಳಿತರೆ ಗೇಣುದ್ಧ, ಎದ್ದರೆ ಮಾರುದ್ದ. ಹಾರುವಲ್ಲಿ ಆರುಗೇಣಾಗಿಪ್ಪುದಯ್ಯ. ಮತ್ತರಿದೆನೆಂದರೆ ಅದೆ ನೋಡಾ. ತನ್ನ ತಿಳಿದರೆ ತಾನು ಅತಿಸೂಕ್ಷ ್ಮ ನೋಡಾ. ತನ್ನ ಪರಿ ವಿಪರೀತ ವಿಸ್ಮಯವಾಗಿದೆ ನೋಡಾ. ಮೂರಾರು ಬಾಗಿಲಲ್ಲಿ ಹಾರಿ ಹಲುಬುವುದಯ್ಯ. ಸರ್ವಬಾಗಿಲಲ್ಲಿ ಪರ್ಬಿ ಪಲ್ಲಯಿಸುವುದು. ಈ ಬಾಗಿಲೆಲ್ಲವು ತನ್ನ ಹಾದಿಯೆಂದರಿಯದು ನೋಡಾ. ತನ್ನ ಹಾದಿಯನರಿದು ಚೆನ್ನಾಗಿ ನಡೆದಾಡಬಲ್ಲರೆ ಮೇಲುಗಿರಿ ಪರ್ವತವ ಓರಂತೆಯ್ದಿ ನಿರ್ವಯಲ ಬೆರಸಿತ್ತೆಂಬೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ನಲ್ಲನ ನೋಟದ ಬೇಟದ ಕೂಟದ ಪರಿಯ ನಾನೇನೆಂದು ಹೇಳುವೆ? ವಿಪರೀತ ಕೆಳದಿ. ಕೂಟದ ಸುಖದಲ್ಲಿ ನೋಟ ಕಂಬೆಳಗಾದಡೆ ಬೇಟ ಬೇರುಂಟೆ? ಹೇಳು ಅವ್ವಾ. ನೋಡಿದ ದೃಷ್ಟಿ ಎವೆಗುಂದದೆ? ಮೋಹದ ಪರಿ ಎಂತುಂಟು? ಹೇಳಾ ಅವ್ವಾ. ನೋಟ ಬೇಟ ಕೂಟ ಸಮಸುಖ ಸಮರತಿಯಾದಡೆ ಕಪಿಲಸಿದ್ಧಮಲ್ಲಿನಾಥಯ್ಯಾ ಬೇರಿಲ್ಲವವ್ವಾ.
--------------
ಸಿದ್ಧರಾಮೇಶ್ವರ
ಗರ ಹೊಡೆದಂತೆ ಬೆರತುಕೊಂಡಿಪ್ಪರು. ಮರನೇರಿ ಬಿದ್ದಂತೆ ಹಮ್ಮದಂಬೋದರು. ಉರಗನ ವಿಷವಾವರಿಸಿದಂತೆ, ನಾಲಗೆ ಹೊರಳದು, ಕಣ್ಗಾಣರು. ನಿಮ್ಮ ಕರುಣವೆ ಕರ ಚೆಲುವು, ಸಕಳೇಶ್ವರಯ್ಯಾ. ಸಿರಿ ಸೋಂಕಿದವನ ಪರಿ ಬೇರೆ ತಂದೆ.
--------------
ಸಕಳೇಶ ಮಾದರಸ
ಕೆರೆಯೊಡೆದ ಬಳಿಕ ತೂಬು ತಡೆಯಬಲ್ಲುದೇ?. ಒಡೆದ ಮಡಕೆಗೆ ಒತ್ತುಮಣ್ಣಕೊಟ್ಟರೆ ನಿಲಬಲ್ಲುದೇ ಅಯ್ಯ?. ಮುತ್ತೊಡೆದರೆ ಹತ್ತಬಲ್ಲುದೇ?. ಸುರಚಾಪ ನಿರ್ಧರವಾಗಬಲ್ಲುದೇ ಅಯ್ಯ?. ಚಿತ್ತವೊಡೆದರೆ ಭಕ್ತಿ ನೆಲೆಗೊಳ್ಳದು. ಭಕ್ತಿ ಬೀಸರವಾದರೆ, ಮುಕ್ತಿಯೆಂಬುದು ಎಂದಿಗೂ ಇಲ್ಲ ಕಾಣಾ. ಇದು ಕಾರಣ, ಚಿತ್ತ ಲಿಂಗವನಪ್ಪಿ ಒಡೆಯದೆ, ಭಕ್ತಿ ಬೀಸರವೊಗದೆ, ನಿಮ್ಮ ಕೂಡಿ, ನಿತ್ಯ ನಿರ್ಮುಕ್ತನಾದೆನು ಕಾಣಾ. ಎಲ್ಲರ ಪರಿಯಲ್ಲ, ಎನ್ನ ಪರಿ ಬೇರೆ ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಸಕಲದಲ್ಲಿ ಸನ್ನಿಹಿತರಲ್ಲದವರು ನಿಷ್ಕಲದಲ್ಲಿ ನಿಜವನೈದುವ ಪರಿ ಎಂತಯ್ಯಾ ಲಿಂಗವ ಹೋಗಾಡಿದೆನೆಂಬ ನಿಂದೆಯ ಪ್ರಮಥರು ನುಡಿವುತ್ತಿರಲು ಲಿಂಗೈಕ್ಯವೆಂತಪ್ಪುದು ಹೇಳಾ ನಿಮ್ಮ ಪ್ರಮಥರು ಮೆಚ್ಚಿ ಅಹುದೆಂದು ಒಡಂಬಟ್ಟು ಎನ್ನ ಮನ ತಾರ್ಕಣೆಯಲ್ಲಿಪ್ಪಂತೆ ನಿಮ್ಮಲ್ಲಿ ಐಕ್ಯವ ಮಾಡಾ ಕೂಡಲಸಂಗಮದೇವಪ್ರಭುವೆ.
--------------
ಬಸವಣ್ಣ
ಲಿಂಗವಂತ ಲಿಂಗಭಕ್ತ ಲಿಂಗಾಚಾರಿಯೆನಿಸಿಕೊಂಡ ಬಳಿಕ, ಲಿಂಗದ ನಚ್ಚು, ಲಿಂಗದ ಮಚ್ಚು, ಲಿಂಗವೇ ಪ್ರಾಣವಾಗಿರಬೇಕಲ್ಲದೆ, ಮತ್ತೆ ತಪ್ಪಿ ನಡೆದು, ತಪ್ಪಿ ನುಡಿದು, ಪರಧನ ಪರಸ್ತ್ರೀಯರ ಸಂಗವ ಮಾಡಿ, ದುರ್ಗುಣ ದುರಾಚಾರದಲ್ಲಿ ನಡೆದು, ಮತ್ತೆ ತಾವು ಲಿಂಗವಂತರೆನಿಸಿಕೊಂಬ ಪರಿಯ ನೋಡಾ. ಇದು ಲಿಂಗದ ನಡೆಯಲ್ಲ, ಲಿಂಗದ ನುಡಿಯಲ್ಲ. ಇದ ನಮ್ಮ ಶಿವಶರಣರು ಮೆಚ್ಚರು. ಲಿಂಗವಂತನ ಪರಿ ಬೇರೆ ಕಾಣಿರೆ. ಲಿಂಗಕ್ಕೆ ಲಿಂಗವೆ ಪ್ರಾಣವಾಗಿರಲು ಬಲ್ಲ. ಲಿಂಗಕ್ಕೆ ಲಿಂಗವೆ ಭೋಗವಾಗಿರಲು ಬಲ್ಲ. ಲಿಂಗಕ್ಕೆ ಲಿಂಗವೆ ಸಂಗವಾಗಿ[ರಲು]ಬಲ್ಲ, ಇಂತಪ್ಪ ಲಿಂಗವಂತನ ಸದಾಚಾರಿಯೆಂಬೆನು. ಇಂತಪ್ಪ ಲಿಂಗವಂತನ ಸರ್ವಾಂಗಲಿಂಗಿಯೆಂಬೆನು. ಇಂತಪ್ಪ ಲಿಂಗವಂತನ ಸರ್ವಕರಣ ನಿರ್ಮುಕ್ತನ ಸರ್ವನಿರ್ವಾಣಿಕಾಯೆಂಬೆನು. ಇಂತಪ್ಪ ಮಹಾಮಹಿಮನ ನಿಲವು ಎಲಗಳೆದ ವೃಕ್ಷದಂತೆ, ಉಲುಹಡಗಿಪ್ಪ ಶರಣನ ಪರಿಯ ನೀವೇ ಬಲ್ಲಿರಲ್ಲದೆ, ಮತ್ತೆ ಉಳಿದಾದ ಅಜ್ಞಾನ ಸಂದೇಹಿಮಾನವರೆತ್ತ ಬಲ್ಲರಯ್ಯಾ. ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ ನಿಮ್ಮ ಲಿಂಗಾವಧಾನಿಯ ಪರಿಯ ನೀವೇ ಬಲ್ಲಿರಲ್ಲದೆ ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಮರುಳಶಂಕರದೇವ
ಇನ್ನಷ್ಟು ... -->